ದೃಶ್ಯಂ 2: ಕುತೂಹಲದ ಶೃಂಗ

ಗೊರೂರು ಶಿವೇಶ್

ದೃಶ್ಯ ಕನ್ನಡದಲ್ಲಿ ಆರು ವರ್ಷಗಳ ಹಿಂದೆ ಬಿಡುಗಡೆ ಆಗಿ ಅಪಾರ ಜನಪ್ರಿಯತೆ ಗಳಿಸಿದ ಚಿತ್ರ. ಆ ಕಾಲಕ್ಕೆ ಬಿಡುಗಡೆಯಾಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದಲ್ಲದೆ ಕುತೂಹಲದ ನಿರೂಪಣೆಯಿಂದಾಗಿ ಪ್ರೇಕ್ಷಕರ ಮನಗೆದ್ದ ಹಾಗು ನಟ ರವಿಚಂದ್ರನ್ ಗೆ ಮರುಹುಟ್ಟು ನೀಡಿದ ಚಿತ್ರವು ಹೌದು. ಸರಿಸುಮಾರು ಒಂದು ಸಾವಿರ ಕೋಟಿಯಷ್ಟು ಹಣ ಗಳಿಸಿದ ಬಾಹುಬಲಿ ಬಿಡುಗಡೆಯಾದ ಆಸುಪಾಸಿನಲ್ಲಿ ಈ ಚಿತ್ರದ ಬಿಡುಗಡೆ.

ಆದರೆ ಬಾಹುಬಲಿ ಚಿತ್ರ ಅಪಾರ ವೆಚ್ಚದ ಚಿತ್ರವು ಕೂಡ ಹೌದು. ಅದರ ಎದುರು ತುಂಬಾ ಸಾಧಾರಣ ಬಜೆಟ್ ನ ದೃಶ್ಯಂ ಮೂಲತಃ ಮಲಯಾಳಂ ಭಾಷೆಯ ಚಿತ್ರ. ಮೋಹನ್ ಲಾಲ್ ಮೀನಾ ಪ್ರಮುಖ ಪಾತ್ರದಲ್ಲಿದ್ದ ಈ ಚಿತ್ರ ಮುಂದೆ ಭಾರತದ ಎಲ್ಲ ಪ್ರಮುಖ ಭಾಷೆಗಳಲ್ಲಿ ರಿಮೇಕ್ ಆಯಿತು. ಕನ್ನಡದಲ್ಲಿ ರವಿಚಂದ್ರನ್, ತಮಿಳಿನಲ್ಲಿ ಕಮಲ ಹಾಸನ್, ತೆಲುಗಿನಲ್ಲಿ ವೆಂಕಟೇಶ್ ಹಾಗೂ ಹಿಂದಿಯಲ್ಲಿ ಅಜಯ್ ದೇವಗನ್ ನಾಯಕನಾಗಿ ಅಭಿನಯಿಸಿದ್ದರು.

ಬಿಡುಗಡೆಯಾದ ಎಲ್ಲ ಭಾಷೆಗಳಲ್ಲೂ ಜಯಸಾಧಿಸಿದ ಒಟ್ಟಾರೆ ಚಿತ್ರದ ಗಳಿಕೆ 500 ಕೋಟಿಗೂ ಹೆಚ್ಚು. ಹಾಕಿದ ಬಂಡವಾಳಕ್ಕೆ ಹೋಲಿಸಿದರೆ ಬಂದ ಗಳಿಕೆ ಅಪಾರ. ಎಲ್ಲ ಭಾಷೆಗಳಲ್ಲೂ ಗೆದ್ದ ಚಿತ್ರದ ನಿಜವಾದ ಹೀರೋ ಅದರ ಕಥೆ. 

ಸಸ್ಪೆನ್ಸ್, ಥ್ರಿಲ್ಲರ್, ಸಿನಿಮಾ ಆರಾಧಿಸುವ ಒಂದು ವರ್ಗವಿದೆಯಾದರೂ ಕಮರ್ಷಿಯಲ್ ಎಲಿಮೆಂಟ್ ಹೊಂದಿದ ಸಾಹಸ ಪ್ರಧಾನ ಚಿತ್ರ ಇಲ್ಲವೇ ಕಣ್ಣೀರು ಹರಿಸುವ ಕೌಟುಂಬಿಕ ಚಿತ್ರಗಳ ಪ್ರೀತಿಸುವ ಅತಿ ದೊಡ್ಡ ನೋಡುಗ ಬಳಗವಿದೆ. ಕನ್ನಡದಲ್ಲಿ ಪ್ರೇಮದ ಕಾಣಿಕೆ, ಅಪರಾಧಿ, ಅಪರಿಚಿತ… ಹೀಗೆ ಕೆಲವು ಗೆದ್ದ ಸಸ್ಪೆನ್ಸ್ ಥ್ರಿಲ್ಲರ್ ಚಿತ್ರಗಳನ್ನು ಹೆಸರಿಸಬಹುದು. ಆದರೆ ಮಲಯಾಳಂನಲ್ಲಿ ಇಂತಹ ಚಿತ್ರಗಳಿಗೆ ಅಪಾರ ಬೇಡಿಕೆ. ಜೀತು ಜೋಸೆಫ್ ಇಂತಹ ಚಿತ್ರಗಳಿಗೆ ಪ್ರಸಿದ್ದಿ. ಅವರ ನಿರ್ದೇಶನದ ದೃಶ್ಯಂ ಬಿಡುಗಡೆಯಾಗಿ ಆರು ವರ್ಷಗಳ ನಂತರ ಅದರ ಎರಡನೇ ಭಾಗ ಒಟಿಟಿ ಅಂದರೆ ಅಮೆಜಾನ್ ಪ್ರೈಮ್ ನಲ್ಲಿ ಇದೀಗ ಬಿಡುಗಡೆಯಾಗಿದೆ.

ತನ್ನ ಕುಟುಂಬದ ಮಾನ ಹಾಗೂ ಘನತೆಯ ರಕ್ಷಣೆಗಾಗಿ ಹಿರಿಯ ಪೊಲೀಸ್ ಅಧಿಕಾರಿ ಜೊತೆಗೆ ಇಡೀ ಪೊಲೀಸ್ ವ್ಯವಸ್ಥೆಯನ್ನು ಎದುರು ಹಾಕಿಕೊಳ್ಳುವ ಕೇಬಲ್ ಆಪರೇಟರ್ ಒಬ್ಬನ ಕಥೆ ಅದು. ಕೇಬಲ್ ಲ್ಲಿ ಪ್ರತಿದಿನ ಹಾಕಬೇಕಾದ ಸಿನಿಮಾಗಳನ್ನು ನೋಡಿ ನೋಡಿ ಅದರಲ್ಲಿ ಬರುವ ಅನೇಕ ತಂತ್ರಗಳನ್ನು ಒಗ್ಗೂಡಿಸಿ ಗೆಲುವುಸಾಧಿಸುವ ಸಾಮಾನ್ಯನೊಬ್ಬನ ಕಥೆ ದೃಶ್ಯಂ ಒಂದರದು.

ಚಿತ್ರ ದೊಡ್ಡಮಟ್ಟದಲ್ಲಿ ಗೆದ್ದ ಪರಿಣಾಮ ಅದರ ಎರಡನೇ ಭಾಗ ಚಿತ್ರಿತವಾಗಿ ಕರೋನದ ಕಾರಣದಿಂದಾಗಿ ಥಿಯೇಟರ್ ನ ಜೊತೆಜೊತೆಗೆ ಓಟಿಟಿ ಪ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಯಾಗಿದೆ. ದೃಶ್ಯಂ ಎರಡರ ಕಥೆಯನ್ನು ಸಂಯೋಜಿಸಿರುವ ಚಿತ್ರದ ಕಥೆಗಾರ ಹಾಗೂ ನಿರ್ದೇಶಕ ಜೀತು ಜೋಸೆಫ್ ಚಿತ್ರದ ಘಟನೆಗಳ ಅಂತರವನ್ನು, ಕಾಲಘಟ್ಟವನ್ನು ಆರು ವರ್ಷಗಳ ನಂತರಕ್ಕೆ ಕೊಂಡೊಯ್ದಿದ್ದಾರೆ  

ಚಿತ್ರ ದೃಶ್ಯಂ ಎರಡು ಆರಂಭವಾಗುವುದೇ ಒಂದು ಕುತೂಹಲಕಾರಿ ಘಟನೆಯಿಂದ. ಬಾಮೈದನನ್ನು ಕೊಂದ ಆರೋಪ ಹೊತ್ತಿರುವ ಅಪರಾಧಿ ಒಬ್ಬ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಆಗ ನಿರ್ಮಾಣವಾಗುತ್ತಿದ್ದ ಪೊಲೀಸ್ ಸ್ಟೇಷನ್ ನ ಹಿಂಬದಿಯಲ್ಲಿ ಇದ್ದ ಸಂದರ್ಭ. ಅದೇ ಕಾಲಕ್ಕೆ ನಾಯಕ ಜಾರ್ಜ್ ಕುಟ್ಟಿ ನಿರ್ಮಾಣವಾಗುತ್ತಿದ್ದ ಸ್ಟೇಷನ್ ನಿಂದ ಮಧ್ಯರಾತ್ರಿ ಗುದ್ದಲಿಯೊಂದಿಗೆ ಹೊರಬರುವುದನ್ನು ನೋಡಿದ್ದಾನೆ. ಆದರೆ ಆತ ತನ್ನ ಮನೆಗೆ ತಲುಪುವಷ್ಟರಲ್ಲಿ ಪೊಲೀಸರ ಕೈಗೆ ಸಿಕ್ಕು ಜೈಲುವಾಸವನ್ನು ಅನುಭವಿಸಿ ಈಗ ಹೊರ ಬಂದಿದ್ದಾನೆ.

ಇತ್ತ ಕಥೆಯಲ್ಲಿ ಮಗಳು ಮತ್ತು ಹೆಂಡತಿಯಿಂದ ನಡೆದ ಕೊಲೆಯನ್ನು ಮುಚ್ಚಿಡುವ ಪ್ರಯತ್ನದಲ್ಲಿ ಯಶಸ್ವಿಯಾದ ಜಾರ್ಜ್ ಕೇಬಲ್ ಆಪರೇಟರ್ ನಿಂದ ಸಿನಿಮಾ ಮಂದಿರ ಮಾಲೀಕನಾಗಿ ಬದಲಾಗಿದ್ದಾನೆ ಕೊಂಚ ಮಟ್ಟಿಗೆ ಶ್ರೀಮಂತನೋ ಆಗಿರುವ ಈಗ ಆತ ತನ್ನದೇ ಜೀವನದ ಕಥೆಯನ್ನು ಆಧರಿಸಿ ಒಂದು ಸಿನಿಮಾ ತೆಗೆಯುವ ಪ್ರಯತ್ನದಲ್ಲಿ ಇದ್ದಾನೆ. ಆದರೆ ಇದು ಆತನ ಪತ್ನಿ ರಾಣಿಗೆ ಕೊಂಚವೂ ಇಷ್ಟವಿಲ್ಲ. ಈ ಉಸಾಬರಿಗಳನ್ನು ಬಿಟ್ಟು ನೆಮ್ಮದಿಯ ಜೀವನ ನಡೆಸಬೇಕೆಂದು ಆಕೆಯ ಬಯಕೆ.

ಘಟನೆ ಮನೆಯ ಮೇಲಷ್ಟೇ ಅಲ್ಲದೇ ಇಡೀ ಊರಿನ ಮೇಲೂ ಪರಿಣಾಮವನ್ನು ಬೀರಿದೆ. ಘಟನೆಯ ನಂತರ ಆರು ವರ್ಷ ಬೆಳೆದಿರುವ ಮಕ್ಕಳ‌ಲಿ‌ ಒಬ್ಬಳು ಈಗ ಕಾಲೇಜಿನಲ್ಲಿ ಇದ್ದರೆ, ಘಟನೆಯ ದುಃಸ್ವಪ್ನ ದಿಂದ ಹೊರಬರಲಾಗದ ಮತ್ತೊಬ್ಬ ಮಗಳು ಅದಕ್ಕೆ ಸಂಬಂಧಿಸಿದ ಮನೋವ್ಯಾಧಿಯಿಂದ ಜೊತೆಗೆ ಮೂರ್ಛೆ ರೋಗದಿಂದ ಬಳಲುತ್ತಿದ್ದಾಳೆ. ಇನ್ನೊಂದೆಡೆ ಇಡೀ ಊರಿಗೆ ನಾಯಕ ಶ್ರೀಮಂತನಾಗಿ ಬೆಳೆದ ಪರಿ ಕಣ್ಣುಕುಕ್ಕಿಸಿದೆ. ಅವರೆಲ್ಲರೂ ಬೆನ್ನ ಹಿಂದೆ ವಿಧವಿಧವಾಗಿ ಮಾತನಾಡುತ್ತಿದ್ದಾರೆ‌. ಘಟನೆಯನ್ನು ಕುರಿತು ತಮ್ಮದೇ ಕಪೋಲ ಕಲ್ಪಿತ ಕಥೆಗಳನ್ನು ಹರಿಯ ಬಿಡುತ್ತಿದ್ದಾರೆ.

ಇತ್ತ ಪೊಲೀಸ್ ಇಲಾಖೆಯು ಸುಮ್ಮನಿಲ್ಲ‌. ತನ್ನದೇ ಪ್ರತ್ಯೇಕ ವ್ಯವಸ್ಥೆಯ ಮೂಲಕ ಜಾರ್ಜ್ ಮೇಲೆ ಕಣ್ಣಿಟ್ಟಿದೆ. ಒಂದೆಡೆ ನಾಯಕನ ಐದು ಎಕರೆ ಜಮೀನಿನಲ್ಲಿ ಒಂದು ಎಕರೆ ಕೊಂಡು ಅಲ್ಲಿ ನೆಲೆಸಿರುವ ಕುಟುಂಬವೊಂದು ನಾಯಕಿ ರಾಣಿ ಹಾಗೂ ಅವರ ಕುಟುಂಬದ ವಿಶ್ವಾಸ ಗಳಿಸಿದೆ. ಸಿನಿಮಾ ಕುರಿತ ಚರ್ಚೆಗೆ ಎಂದು ಪದೇಪದೇ ಹೊರಹೋಗುವ ನಾಯಕ, ಈ ಕಾರಣದಿಂದ ಮನೆಯವರ ಜೊತೆಗೆ ಬಂದು ಮಲಗುವ ಮೂಲಕ ನಿಧಾನವಾಗಿ ಘಟನೆಯ ಹಿಂದಿನ ನಿಜವನ್ನು ತಿಳಿಯಲು ಆ ಕುಟುಂಬ ಯತ್ನಿಸುತ್ತಿದೆ.

ಅತ್ತ ಕಾಲೇಜಿನಲ್ಲೂ ಸಹಪಾಠಿಗಳ ಮೂಲಕ ವಿವಿಧ ತಂತ್ರವನ್ನು ಬಳಸಿ ಅನುವಿನ ಮೂಲಕ ನಿಜವನ್ನುತಿಳಿಯಲು ಪ್ರಯತ್ನಿಸುತ್ತಿದೆ. ಕೊನೆಗೂ ಪೊಲೀಸರು ಹೆಣೆದ ಬಲೆಗೆ ಕುಟುಂಬ ಸಿಕ್ಕಿ ಹಾಕಿಕೊಳ್ಳುತ್ತದೆ. ಈಗ ಜಾರ್ಜ್ ಕುಟ್ಟಿ ಬಲೆಯಿಂದ ಹೊರಬರುವನೇ? ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳುವನೇ? ಎಂಬುದೇ ದೃಶ್ಯಂ ಎರಡರ ಕಥಾಹಂದರ. ಸಸ್ಪೆನ್ಸ್, ಥ್ರಿಲ್ಲರ್ ಗಳಲ್ಲಿ ಘಟನೆಗಳ ಮೂಲಕ ಬೆಳೆಯುವ ಅಗಾಥ ಕ್ರಿಸ್ತೀಯ ಮೌಸ್ ಟ್ರ್ಯಾಪ್ ನ ಕಥೆಯ ರೀತಿ ಒಂದಾದರೆ, ಶರ್ಲಾಕ್ ಹೋಂಸ್ ರೀತಿಯ ಸಂಭಾಷಣೆಗಳಲ್ಲಿ ಸಾಗುವ ಪತ್ತೆದಾರಿಕೆ ಮತ್ತೊಂದು ಬಗ್ಗೆ.

ದೃಶ್ಯಂ ಒಂದು ಅಗಾಥ ಕ್ರಿಸ್ತೀಯ ಮೌಸ್ ಟ್ರ್ಯಾಪ್ ನ ರೀತಿಯಲ್ಲಿದ್ದರೆ ದೃಶ್ಯಂ ಭಾಗ-2 ಶರ್ಲಾಕ್ ಹೋಂಸ್ ಮಾದರಿಯದ್ದು. ಆದರೆ ಜಿತು ಜೋಸೆಫ್ ಬಿಗಿ ಕಥೆ ಹಾಗೂ ಚಿತ್ರಕಥೆ ಮತ್ತು ನಿರೂಪಣೆಯಿಂದಾಗಿ ನೋಡುಗನಲ್ಲಿ ಕುತೂಹಲವನ್ನು ಕೊನೆಯವರೆಗೂ ಕಾಯ್ದುಕೊಂಡು ಬರುತ್ತದೆ‌. ಎರಡು ದೃಶ್ಯದ ಘಟನಾವಳಿಗಳನ್ನು ಸಂಯೋಜಿಸಿರುವ ರೀತಿ, ತಾರ್ಕಿಕವಾಗಿ ಮುನ್ನಡೆಸುವ ಪರಿ ಜಿತು  ಜೋಸೆಫ್ ಗೆ ಇಂತಹ ಸಿನಿಮಾಗಳ ಪರಿಣಿತಿಯನ್ನು ಸಾರುತ್ತದೆ. ಮೋಹನ್ ಲಾಲ್ ಮೀನಾ ರವರ ಸಹಜ ಅಭಿನಯ ಚಿತ್ರದ ಹೈಲೈಟ್. 

ದೃಶ್ಯಂ ಒಂದನ್ನು ನೋಡಿ ಮೆಚ್ಚಿ ಅದರ ಮುಂದಿನ ಘಟನಾವಳಿಯನ್ನು ನೋಡಲು ಆಸಕ್ತಿ ಇದ್ದರೆ ಈಗ ದೃಶ್ಯಂ 2 ನಿಮ್ಮ ಕಣ್ಣ ಮುಂದಿದೆ. ಆದರೆ ಚಿತ್ರ ಮಲಯಾಳಂ ಭಾಷೆಯಲ್ಲಿದ್ದು ಇಂಗ್ಲಿಷ್ ಸಬ್ ಟೈಟಲ್ ನಲ್ಲಿ ಅಮೆಜಾನ್ ಪ್ರೈಮ್ ನಲ್ಲಿ ಲಭ್ಯವಿದೆ.

‍ಲೇಖಕರು Avadhi

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: