ನಿಗೂಢ ಸಾವುಗಳ ಹಾದಿಯಲ್ಲಿ ಪಯಣಿಸುವ ‘ಜಾಕಿ’

ಗೊರೂರು ಶಿವೇಶ್

ಇಡೀ ಕರ್ನಾಟಕದ ಜನತೆಗೆ ದಿಗ್ಬ್ರಮೆ ಮೂಡಿಸಿದ ಪುನೀತ್ ರಾಜಕುಮಾರ್ ಅವರ ವಿದಾಯದ ನೋವು ಕನ್ನಡಿಗರಲ್ಲಿ ಇನ್ನೂ ಹಾಗೆಯೇ ಉಳಿದಿದೆ. ಕರ್ನಾಟಕದ ಜನಜೀವನದ ಮೇಲೆ ಅವರ ಸಾವು ತನ್ನದೆ ಪರಿಣಾಮಗಳನ್ನು ಉಂಟು ಮಾಡಿದೆ. ಒಂದೆಡೆ ಜಿಮ್ಮು ಗಳಿಗೆ ಜನ ಕಡಿಮೆಯಾಗುತ್ತಿದ್ದರೆ ಇನ್ನೊಂದೆಡೆ ಹೃದ್ರೋಗದ ಆಸ್ಪತ್ರೆಗಳಲ್ಲಿಸರದಿ ನಿಲ್ಲು ವವರ ಸಂಖ್ಯೆ ವಿಪರೀತ ಹೆಚ್ಚಿದೆ. ಕಣ್ಣುಗಳನ್ನು ದಾನ ನೀಡುವವರ ಸಂಖ್ಯೆ ಅಚ್ಚರಿ ಮೂಡುವಷ್ಟು ಹೆಚ್ಚಿದೆ.

ಇಂದಿಗೂ ಅನೇಕರು ತಮ್ಮ ನೋವು ಹಾಗೂ ವಿಷಾದವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪತ್ರಿಕೆಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಬಹುತೇಕ ಕನ್ನಡ ಚಾನೆಲ್ಗಳು ಅವರ ಚಿತ್ರಗಳನ್ನು ಮರುಪ್ರಸಾರ ಮಾಡುತ್ತಿವೆ. ಅನೇಕ ಆಸಕ್ತರು ಅವರ ಅಭಿನಯದ ಚಿತ್ರಗಳಲ್ಲಿ ಅತ್ಯುತ್ತಮವಾದ 10- 5 ಚಿತ್ರಗಳ ಪಟ್ಟಿಯನ್ನು ಮಾಡುವುದರ ಜೊತೆಗೆ ತಮ್ಮ ಸ್ನೇಹಿತರ ಫೇಸ್ಬುಕ್ ಕೊಂಡಿಗಳಲ್ಲಿ ಸಮೀಕ್ಷೆಯನ್ನು ಮಾಡಿದ್ದಾರೆ. ಕುತೂಹಲದಿಂದ ಪಟ್ಟಿಗಳ ಕಡೆ ಇಣುಕು ನೋಟವನ್ನು ಹರಿಸಿದಾಗ ಬಹುತೇಕರ ಪಟ್ಟಿಯಲ್ಲಿ ಅವರ ಅಭಿನಯದ ಅಪ್ಪು, ಆಕಾಶ್, ಅರಸು, ಮಿಲನ, ಪೃಥ್ವಿ, ಹುಡುಗರು, ದೊಡ್ಮನೆ ಹುಡುಗ, ಪರಮಾತ್ಮ ರಾಜಕುಮಾರ ಹಾಗೂ ಅವರು ಬಾಲ ನಟನಾಗಿ ಅಭಿನಯಿಸಿದ ಬೆಟ್ಟದ ಹೂವು, ಭಾಗ್ಯವಂತ, ಎರಡು ನಕ್ಷತ್ರಗಳು ಸಿನಿಮಾಗಳನ್ನು ಹೆಸರಿಸಿದ್ದಾರೆ. ಆದರೆ ಪುನೀತ್ ರಾಜಕುಮಾರ್ ಅವರಿಗೆ ಒಂದು ದೊಡ್ಡ ಬ್ರೇಕ್ ನೀಡಿದ ಹತ್ತು ವರ್ಷಗಳ ಹಿಂದೆ ಬಿಡುಗಡೆಯಾಗಿ ದೊಡ್ಡಮಟ್ಟದ ಯಶ ಸಾಧಿಸಿದ ಜಾಕಿ ಚಿತ್ರವನ್ನು ಹೆಸರಿಸಿದವರ ಸಂಖ್ಯೆ ಕಡಿಮೆ ಎಂದೇ ಹೇಳಬಹುದು.

ಚಿತ್ರದ ಎಕ್ಕ ರಾಜ ರಾಣಿ ನನ್ನ ಕೈಯೊಳಗೆ ಹಿಡಿ ಮಣ್ಣು ನಿನ್ನ ಬಾಯೊಳಗೆ, ಶಿವಾ ಅಂಥ ಹೋಗುತ್ತಿದ್ದೆ ರೋಡಿನಲ್ಲಿ, ಸಿಕ್ಕಾಪಟ್ಟೆ ಸಾಲ ಇತ್ತು ಲೈಫಿನಲಿ, ಮಕ್ಕಳಿಗೆ ತುಂಬಾ ಇಷ್ಟವಾಗಿದ್ದರೆ, ಚಿತ್ರದ ಟೈಟಲ್ ಸಾಂಗ್ ಮತ್ತು ಎರಡು ಜಡೆಯನ್ನು ಎಳೆದು ಕೇಳುವೆನು ನೀ ಸ್ವಲ್ಪ ನಗಬಾರದೆ ಯುವಜನಾಂಗದ ಮೆಚ್ಚಿನ ಹಾಡಾಗಿತ್ತು. ಅಂದಿನ ರಾಜಕೀಯ ಸ್ಥಿತ್ಯಂತರಗಳಿಗೆ ಪೂರಕವಾಗಿ ಎಲ್ಲಾ ನ್ಯೂಸ್ ಚಾನೆಲ್ ಗಳು ಎಕ್ಕ ರಾಜ ರಾಣಿ ಹಾಡನ್ನು ಬಳಸಿಕೊಂಡಿದ್ದವು. ಸಾಮಾಜಿಕ ಚಿತ್ರಗಳಿಗೆ, ಫೀಲ್ ಗುಡ್ ಸ್ವಭಾವದ ಯುವಕನ ಪಾತ್ರಗಳಿಗೆ ಸೀಮಿತವಾಗಿದ್ದ ಪುನೀತ್ ರಾಜಕುಮಾರ್ ರವರನ್ನು ಬೇರೆಯದೇ ರೀತಿಯಲ್ಲಿ ತೋರಿಸಿದ ಶ್ರೇಯ ಜಾಕಿ ಚಿತ್ರದ ಕಥೆ ಚಿತ್ರಕಥೆ ಮತ್ತು ಸಂಭಾಷಣೆ ಜೊತೆಗೆ ನಿರ್ದೇಶನ ಮಾಡಿದ ದುನಿಯ ಸೂರಿ ಅವರದ್ದು.

ಜಾಕಿ ಪಕ್ಕಾ ಕಮರ್ಷಿಯಲ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ಅದ್ಭುತ ಯಶಸ್ಸನ್ನು ಗಳಿಸಿತ್ತು .ರೋಡ್ ಮೂವಿ ಎಂದು ಹೆಸರಾದ ಚಿತ್ರದ ಯಶಸ್ಸಿಗೆ ಬೇಕಾದ ಉತ್ತಮ ಛಾಯಾಗ್ರಹಣ, ಸಂಗೀತ, ಪ್ರೇಮ ಕಥೆ, ಹರಿತ ಸಂಭಾಷಣೆ ಬಿಗಿಯಾದ ಚಿತ್ರಕತೆ, ಎಲ್ಲ ನಟರ ಉತ್ತಮ ಅಭಿನಯ ಚಿತ್ರಕ್ಕಿದೆ. ಪುನೀತ್ ರಾಜಕುಮಾರ್ ಅವರ ನಿಧನದ ಸಂದರ್ಭದಲ್ಲಿ ಚಿತ್ರವನ್ನು ಮರು ವೀಕ್ಷಣೆ ಮಾಡುತ್ತಿದ್ದಾಗ ತಕ್ಷಣ ಅಲ್ಲಿ ಅಚ್ಚರಿಯಂತೆ ಕಂಡದ್ದು ಸಾವಿನ ವಿವಿಧ ರೂಪಗಳ ದರ್ಶನ .ಈಗ ಚಿತ್ರದ ಕಥೆಯನ್ನು ನೋಡೋಣ.

ರಿಯಲ್ ಎಸ್ಟೇಟ್ ಫೀಲ್ಡಿಗಿಳಿದು ದೊಡ್ಡ ಮಟ್ಟದಲ್ಲಿ ಹಣ ಮಾಡುವ ಆಸೆ ಹೊತ್ತ ನಾಯಕ ಜಾನಕಿರಾಮನ್ ಉರುಫ್ ಜಾಕಿ. ಆರಂಭದಲ್ಲಿ ಅವನಿಗೆ ಕಡಿಮೆ ಬೆಲೆಯಲ್ಲಿ ಚಿನ್ನ ನೀಡುವ ವ್ಯಕ್ತಿಯೊಂದಿಗೆ ವ್ಯವಹಾರ ಕುದುರಿಸುವ ಸಂದರ್ಭದಲ್ಲಿ ಪೊಲೀಸರ ಪ್ರವೇಶವಾಗುತ್ತದೆ. ಅದು ಅವನನ್ನು ಪೊಲೀಸ್ ಸ್ಟೇಷನ್ ಗೆ ಕರೆದೊಯ್ಯುತ್ತದೆ‌. ಪೊಲೀಸರ ಚಿತ್ರಹಿಂಸೆಗೆ ಚಿನ್ನ ನೀಡಲು ಬಂದ ವ್ಯಕ್ತಿ ಕುಸಿದು ಬೀಳುತ್ತಾನೆ. ಈಗ ಅವನ ಅಂತ್ಯಸಂಸ್ಕಾರ ಮಾಡುವ ಜವಾಬ್ದಾರಿಯನ್ನು ಪೊಲೀಸರು ಜಾಕಿಗೆ ಹೇರುತ್ತಾರೆ. ಮಣ್ಣು ಮುಚ್ಚುವ ಸಮಯಕ್ಕೆ ಉಬ್ಬಸ ರೋಗದ ಆತ ಎದ್ದು ಕೂರುತ್ತಾನೆ.ಅಲ್ಲಿಂದ ಸಾವಿನ ಏರಿಳಿತದ ಹಾದಿ ಆರಂಭವಾಗುತ್ತದೆ

ಅವನು ವಾಸಿಸುವ ಪ್ರದೇಶದ, ಪೂಜಾರಿಯ ಮಗಳು ಯಶೋಧ, ಫೋಟೋ ಸ್ಟುಡಿಯೋ ಮಾಲೀಕ ಪರಂಗಿ ಸೀನನನ್ನು ರೀತಿಸುತ್ತಾಳೆ, ಮದುವೆಯಾಗಲು ಸಹಾಯ ಮಾಡುವಂತೆ ಜಾಕಿಯನ್ನು ಕೇಳುತ್ತಾಳೆ. ಜಾಕಿ ಆರಂಭದಲ್ಲಿ ಸಹಾಯ ಮಾಡಲು ಪ್ರಯತ್ನಿಸುತ್ತಾನೆ, ಆದರೆ ಪೂಜಾರಿ ಅವನನ್ನು ಪ್ರಶ್ನಿಸಿದಾಗ, ವಯಸ್ಸಾದ ಆಕೆಯ ತಂದೆಯ ಭಾವನೆಗಳನ್ನು ಗೌರವಿಸಿ ಸಮಸ್ಯೆಯಿಂದ ಹೊರಬರಲು ಅವನು ನಿರ್ಧರಿಸುತ್ತಾನೆ.

ಎಲ್ಲ ಭರವಸೆಯನ್ನು ಕಳೆದುಕೊಂಡ ಯಶೋಧ ತನ್ನ ಪ್ರಿಯಕರನ ಜೊತೆಗೆ ಅವಳ ಸ್ನೇಹಿತೆ ಅಂಧ ಹುಡುಗಿಯೊಂದಿಗೆ ಓಡಿಹೋಗುತ್ತಾಳೆ. ಈ ಪ್ರಕರಣದಲ್ಲಿ ಜಾಕಿ ಮಧ್ಯವರ್ತಿ ಎಂದು ಪೂಜಾರಿ ಅಭಿಪ್ರಾಯಪಟ್ಟು ಜಾಕಿಯ ತಾಯಿಯ ಬಳಿ ದೂರುತ್ತಾನೆ. ತಾಯಿಯ ಒತ್ತಡಕ್ಕೆ ಸಿಲುಕಿದ ಜಾಕಿಗೆ ಯಶೋಧ ಮತ್ತು ಅಂಧ ಹುಡುಗಿಯನ್ನು ಪತ್ತೆ ಹಚ್ಚುವ ಜವಾಬ್ದಾರಿ ಹೆಗಲೇರುತ್ತದೆ.

ಈ ನಡುವೆ ಜೈಲಿನಿಂದ ಜೈಲಿಗೆ ವರ್ಗಾವಣೆಯಾಗುವ ಸಂದರ್ಭದಲ್ಲಿ ಪರಾರಿಯಾಗಿ ಬರುವ ಸ್ನೇಹಿತ ತುಳಸಿಗೆ ಜಾಕಿ ರಕ್ಷಣೆ ನೀಡುತ್ತಾನೆ. ಆದರೆ ಆ ಸ್ನೇಹಿತನನ್ನು ಹಿಡಿಯುವ ಸಲುವಾಗಿ ಅವನನ್ನು ಅಟ್ಟಿಸಿಕೊಂಡು ಬಂದ ಪಿಸಿಗೆ ಯಶೋದ, ಪರಂಗಿ ಸೀನ ಮತ್ತು ಅವನ ಸ್ನೇಹಿತ ಮಿಠಾಯಿ ರಾಮರಿದ್ದ ಮೆಟಾಡೋರ್ ಗೆ ಡಿಕ್ಕಿ ಹೊಡೆದು ಅಪಘಾತದಲ್ಲಿ ಪಿ ಸಿ ಮರಣ ಹೊಂದಿರುತ್ತಾನೆ.

ಅಪಘಾತವನ್ನು ಕೊಲೆಯೆಂದು ಭಾವಿಸಿದ ಪೊಲೀಸರು ಈಗ ತುಳಸಿಯನ್ನು ಹುಡುಕಿಕೊಂಡು ಬಂದಾಗ ಈ ಪ್ರಕರಣದಲ್ಲಿ ಜಾಕಿಯು ಪಾಲ್ಗೊಂಡಿದ್ದಾನೆ ಎಂದು ಭಾವಿಸಿ, ಎಂಕೌಂಟರ್ ಸ್ಪೆಷಲಿಸ್ಟ್ ಇನ್ಸ್ಪೆಕ್ಟರ್ ತುಳಸಿಗೆ ಗುಂಡುಹೊಡೆದು ಜಾಕಿಗೂ ಗುಂಡು ಹಾಕಲು ಯತ್ನಿಸಿದಾಗ ಆತ ಅಲ್ಲಿಂದ ತಪ್ಪಿಸಿಕೊಳ್ಳುತ್ತಾನೆ. ಆಗ ಪೊಲೀಸರು ಅವನ ಹಿಂದೆ ಬೀಳುತ್ತಾರೆ.

ಕಾಡಿನಲ್ಲಿ ಸಾಗುವಾಗ ನಿಧಿ ಆಸೆಗಾಗಿ ಬಲಿಕೊಡಲು ಕರೆತಂದ ಯುವತಿಯನ್ನುಬಲಿಯಾಗುವ ಕೊನೆಯ ಹಂತದಲ್ಲಿ ಜಾಕಿ ರಕ್ಷಿಸುತ್ತಾನೆ. ಆಕೆಯ ಸೋದರ ಮಾವ ಮತ್ತು ಸಂಬಂಧಿಕರೇ ಬಲಿಯ ಹಿಂದಿನ ರುವಾರಿ ಗಳಾಗಿರುತ್ತಾರೆ. ನಾಯಕಿಯನ್ನು ಜೊತೆಯಲ್ಲಿ ಕರೆದೊಯ್ಯುವಾಗ ಹತ್ತುವ ಲಾರಿಯಲ್ಲಿ ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯೋರ್ವನ ಶವ ಇರುತ್ತದೆ. ಪೊಲೀಸರ ಕಣ್ಣು ತಪ್ಪಿಸಲು ಶವದ ಸಂಬಂಧಿಕನಂತೆ ನಟಿಸಿತ್ತಾನೆ.

ನಗರಕ್ಕೆ ಬಂದರೂ ಅಲ್ಲಿ ಮಲಗಲು ಜಾಗವಿಲ್ಲದೆ ನಿದ್ದೆಗಣ್ಣಿನಲ್ಲಿ ಮಲಗುವುದು ಪೊಲೀಸ್ ಸ್ಟೇಷನ್ ಟೆರೆಸ್ ಮೇಲೆ. ಅಲ್ಲಿ ಜಾಕಿ ಮುಖಾಮುಖಿಯಾಗುವುದು ಕಾನ್ಸ್ಟೇಬಲ್ ಭೀಮಣ್ಣನ ಜೊತೆಗೆ‌. ಭೀಮಣ್ಣ ಜಾಕಿಯನ್ನು ಹೊಂಡದಲ್ಲಿ ಮುಳುಗಿರುವ ಶವವನ್ನು ಎತ್ತಲು ಬಳಸಿಕೊಳ್ಳುತ್ತಾನೆ. ಆದರೆ ಆ ಶವ ಬೇರೆಯಾರದ್ದು ಆಗಿರದೆ ಯಶೋ ದಳ ಜೊತೆ ಬಂದ ಅಂಧ ಯುವತಿಯದೆ ಆಗಿರುತ್ತದೆ. ಶವವನ್ನು ಗುರುತಿಸಿದ್ದೆ ಕಾರಣವಾಗಿ ಆತನೇ ಆರೋಪಿಯ ಪಟ್ಟಕ್ಕೆ ಬಂದು ನಿಲ್ಲುತ್ತಾನೆ.

ಪೋಸ್ಟ್ಮಾರ್ಟಮ್ ರಿಪೋರ್ಟ್ ಬರುವವರೆಗೂ ಪೊಲೀಸ್ ಸ್ಟೇಷನ್ ನಲ್ಲಿ ಉಳಿಯಬೇಕಾದ ಅನಿವಾರ್ಯತೆಗೆ ಸಿಲುಕಿದ ಜಾಕಿ ಅದೇ ರಾತ್ರಿ ಭೀಮಣ್ಣನ ಜೊತೆಗೆ ಕೊಲೆಯಾದ ಮತ್ತೊಂದು ಶವದ ಜೊತೆಗೆ ರಾತ್ರಿ ಕಳೆಯಬೇಕಾದ ಹೆಣ ಕದಿಯಲು ಬಂದ ವರ ನಡುವೆ ಹೋರಾಟ ಮಾಡಬೇಕಾದ ಪ್ರಸಂಗವೂ ಒದಗುತ್ತದೆ. ಆ ಸಂದರ್ಭದ ಹಿನ್ನಲೆ ,ದೃಶ್ಯದ ಚಿತ್ರೀಕರಣ ರೀತಿ, ಭೀತಿ ಹುಟ್ಟಿಸುವಂತಿದ್ದರೂ, ಅದನ್ನು ಹಿನ್ನೆಲೆಗೆ ಸರಿಸುವುದು ಪುನೀತ್ ರಾಜಕುಮಾರ್ ಮತ್ತು ರಂಗಾಯಣ ರಘು ಅವರ ನಡುವಿನ ಚುರುಕಾದ ಸಂಭಾಷಣೆ. ವಿಷಾದದ ಹಿನ್ನೆಲೆಯಲ್ಲಿ ಮೂಡಿಬರುವ ಈ ವಿನೋದ ದಾಟಿಯ ಸಂಭಾಷಣೆ ಚಿತ್ರದ ಹೈಲೈಟ್ ಎನ್ನಬಹುದು. ನಗಿಸುತ್ತಲೇ ಆ ಸಂಭಾಷಣೆಗಳು ಚಿಂತನೆಗೀಡು ಮಾಡುತ್ತವೆ.

ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮಾನವ ಕಳ್ಳಸಾಗಾಣಿಕೆದಾರನಾದ ಮಿಠಾಯಿ ರಾಮ ಅವನ ಪಡೆಯ ಜೊತೆಗೆ ಜಾಕಿಯ ಮುಖಾಮುಖಿ, ಹೋರಾಟದಲ್ಲಿ ಪ್ರಜ್ಞೆ ತಪ್ಪುವ ಜಾಕಿಯನ್ನು ಗುಂಡಿಗೆ ತಳ್ಳಿ ಮುಚ್ಚಿ ಚಪ್ಪಡಿ ಚಪ್ಪಡಿ ಎಳದಿರುತ್ತಾನೆ. ಪವಾಡದಂತೆ ಗುಂಡಿಯಿಂದ ಚಿಮ್ಮಿ ಹಾರಿಬರುವ ಜಾಕಿ ಮಿಠಾಯಿ ರಾಮನ ಪಡೆಯನ್ನು ಮಟ್ಟ ಹಾಕುತ್ತಾನೆ.

ಹೀಗೆ ಸಾವಿನ ಸುತ್ತಲೂ ಗಿರಕಿ ಹೊಡೆಯುವ ಚಿತ್ರಕಥೆ ಸಂಭಾಷಣೆಯಲ್ಲೂ ಅದನ್ನೇ ಬಿಂಬಿಸುತ್ತದೆ. ತುಳಸಿಯ ಜೊತೆಗಿನ ಮಾತುಕತೆಯಲ್ಲಿ ‘ಇನ್ನೇನು ವ್ಯವಹಾರ ಮುಗೀತು ಅನ್ನೋ ಅಷ್ಟರಲ್ಲಿ ಯಾರೋ ಅವನಿಗೆ ಆನೆ ಬಾಲದ ಕೂದಲಲ್ಲಿ ಉಂಗುರ ಮಾಡಿಸಿಕೊಂಡರೆ ಅದೃಷ್ಟ ಖುಲಾಯಿಸುತ್ತದೆ ಅಂತ ಹೇಳಿ, ಇವನು ಕೂದಲು ಕೀಳೋಕೆ ಹೋಗಿ ಒಂದೇ ಏಟಿಗೆ ಕಲಾಸ್’ ಸ್ವಾಭಾವಿಕ ಶೈಲಿಯಲ್ಲಿ ಹೇಳಿದ್ದರೂ ಮನುಷ್ಯ ಹಣದಾಸೆಗಾಗಿ ತೆಗೆದುಕೊಳ್ಳುವ ವಿಚಿತ್ರ ರಿಸ್ಕು ಗಳನ್ನು ವ್ಯಂಗ್ಯವಾಗಿ ಬಿಂಬಿಸುತ್ತದೆ

ಸಿನಿಮಾದಲ್ಲಿ ಪವಾಡಸದೃಶ ರೀತಿಯಲ್ಲಿ ಎದ್ದುಬರುವ ಪುನೀತ್ ಅದಕ್ಕೆ ವಿರುದ್ಧವಾಗಿ ಯಾರೂ ನಿರೀಕ್ಷಿಸದ ರೀತಿಯಲ್ಲಿ ನಿಜ ಜೀವನದಲ್ಲಿ ದೊಡ್ಡದೊಂದು ಶಾಕನ್ನು ನೀಡಿ ವಿರಮಿಸಿದ್ದು ‘ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ’ ಎಂಬುದು ನಿಜವೆಂದು ನಿರೂಪಿಸಿದೆ.

‍ಲೇಖಕರು Admin

November 9, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಜೆ ವಿ ವಿ ಮೂರ್ತಿ

    ಈಗೆಲ್ಲ ಸಮಾಜದಲ್ಲಿ ಮೈಮನಗಳ ಆಂತರಿಕ ಆರೋಗ್ಯಕ್ಕಿಂತ ಮೈಮನಗಳ ಬಾಹ್ಯ ನೋಟಕ್ಕೆ ಹೆಚ್ಚು ಪ್ರಾಧಾನ್ಯತೆ ನೀಡುತ್ತಿರುವುದು ಬಹಳ ವಿಷಾದದ ಸಂಗತಿ!….ಅದರಲ್ಲೂ ಸಮಾಜದ ಜನಪ್ರಿಯ ವ್ಯಕ್ತಿಗಳು ಈ ದಿಕ್ಕಿನಲ್ಲಿ ಸಾಕಷ್ಟು ತಿಳುವಳಿಕೆ ಜವಾಬ್ದಾರಿಗಳನ್ನು ಹೊಂದಬೇಕಿದೆ!….ಈ ಜನಪ್ರಿಯ ವ್ಯಕ್ತಿಯ ಅಕಾಲ ಮರಣದಿಂದ ಎಲ್ಲರೂ ವಿವೇಕಯುತವಾಗಿ ಆಲೋಚಿಸುವ ಸಮಯ ಬಂದಿದೆ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: