‘ಜೈ ಭೀಮ್’ ಅಂಥ ಸಿನಿಮಾಗಳು ನಮಗೆ ಅತ್ಯಗತ್ಯ…

ಚರಿತಾ ಮೈಸೂರು

ದಲಿತರ/ಶೋಷಿತರ ಬದುಕನ್ನು ಸಿನಿಮಾದಂಥ ಜನಪ್ರಿಯ ಮತ್ತು ಶಕ್ತ ಮಾಧ್ಯಮದ ಮೂಲಕ ಜನರಿಗೆ ತಲುಪಿಸೋದು ಅತ್ಯಂತ ಮುಖ್ಯ ವಿಷಯ. ಅಂಥ ಪ್ರಯತ್ನ ತಮಿಳು ಸಿನಿಮಾಗಳಲ್ಲಿ ‘ಜೈ ಭೀಮ್’ ಸಿನಿಮಾದ ಮೂಲಕ ಮತ್ತೊಂದು ಮಜಲು ತಲುಪಿದೆ.

ನನಗೆ ವೈಯಕ್ತಿಕವಾಗಿ ತಮಿಳಿನ ‘ಪರಿಯೇರುಮ್ ಪೆರುಮಾಳ್’ ನಂತರ ಹೆಚ್ಚು ಇಷ್ಟವಾದದ್ದು ‘ಜೈ ಭೀಮ್’. ತಂತ್ರಜ್ಞಾನ, ದೃಶ್ಯ ಭಾಷೆ, ವಿಷಯದ ಆಯ್ಕೆ, ನಿರೂಪಣೆ, ‘ಕೆಂಪು’ ಮತ್ತು ‘ನೀಲಿ’ಯನ್ನು ಒಗ್ಗೂಡಿಸಿರುವ ವಿಧಾನ, ಶೋಷಿತ, ಅಲೆಮಾರಿ ಸಮುದಾಯವೊಂದರ ಬದುಕನ್ನು ಚಿತ್ರಿಸಿರುವ ರೀತಿ, ಪೊಲೀಸ್ ಮತ್ತು ಕೋರ್ಟ್ ವ್ಯವಸ್ಥೆಯೊಳಗಿನ ಭ್ರಷ್ಟಾಚಾರವನ್ನು ಎತ್ತಿ ತೋರುವ ರೀತಿ, ನ್ಯಾಯಾಂಗ ವ್ಯವಸ್ಥೆ ನಿಜಕ್ಕೂ ಶೋಷಿತರ ಪರವಾಗಿ ನಿಲ್ಲಬೇಕಿರೋದು ಹೀಗೆ ಎಂಬುದನ್ನು ಮನದಟ್ಟು ಮಾಡಿಸಿಕೊಡುವ ರೀತಿ.. ಎಲ್ಲವೂ ಮಾಗಿದಂತಿದೆ, ಮನಮುಟ್ಟುವಂತಿದೆ. ‘ಅಸುರನ್’ ಮತ್ತು ‘ಕರ್ಣನ್’ಗಿಂತಲೂ ‘ಜೈ ಭೀಮ್’ ಹೆಚ್ಚು ಪರಿಣಾಮಕಾರಿಯಾದ ಸಿನಿಮಾ ಎಂಬುದು ನನ್ನ ಅನಿಸಿಕೆ.

ತಮಿಳಿನ ಅಸುರನ್, ಕರ್ಣನ್, ಪರಿಯೇರುಮ್ ಪೆರುಮಾಳ್, ಜೈ ಭೀಮ್, ಮರಾಠಿಯ ಫಂಡ್ರಿ, ಸೈರಾಟ್, ಹಿಂದಿಯ ಆರ್ಟಿಕಲ್ 15…ಇವೆಲ್ಲವೂ ದಲಿತರ/ಶೋಷಿತರ ಬದುಕನ್ನು, ಜಾತಿಗ್ರಸ್ತ ಮತ್ತು ಭ್ರಷ್ಟ ಸಾಮಾಜಿಕ, ರಾಜಕೀಯ ವ್ಯವಸ್ಥೆಯನ್ನು ನಿರೂಪಿಸುವ ಸಿನಿಮಾಗಳು ಎಂಬ ಕಾರಣಕ್ಕೆ ಪ್ರಮುಖ ಸಿನಿಮಾಗಳು.

ಇಂಥ ಸಿನಿಮಾಗಳು ಬಂದಾಗೆಲ್ಲ, ಇಂಥ ಸಿನಿಮಾಗಳನ್ನು ಆಯಾ ಜಾತಿಯ/ಸಮುದಾಯದ ನಿರ್ದೇಶಕರೇ ಮಾಡಬೇಕು, ಹಾಗಾದರೆ ಮಾತ್ರ ಅದು ನಂಬಲು ಯೋಗ್ಯ, ಇತರೆ ಮೇಲ್ಜಾತಿಯ ನಿರ್ದೇಶಕರು ಇಂಥ ಸಿನಿಮಾಗಳನ್ನು ಮಾಡೋದರ ಹಿಂದೆ ಬೇರೆ ಬೇರೆ ಹಿಡನ್ ಅಜೆಂಡಾಗಳಿರ್ತವೆ, ಅವರು ಇದನ್ನು ಬಂಡವಾಳ ಮಾಡ್ಕೊಂಡು ದುಡ್ಡು ಗಳಿಸ್ತಾರೆ ಹೊರತು ನಿಜವಾದ ಕಾಳಜಿ ಅವರಲ್ಲಿ ಇರೋದಿಲ್ಲ… ಇತ್ಯಾದಿ ಅರ್ಥದ ವಾದಗಳನ್ನು ಕೆಲವರು ಮಾಡ್ತಿರ್ತಾರೆ. ಈಗ ‘ಜೈ ಭೀಮ್’ ಕುರಿತಂತೆ, ಇದು ಅಸ್ಪೃಶ್ಯರ ಬಗೆಗಿನ ಸಿನಿಮಾ ಅಲ್ಲದ್ದರಿಂದ ಅಂಥಾ ಮುಖ್ಯವಾದದ್ದಲ್ಲ ಎಂಬರ್ಥದ ವಾದಗಳೂ ನಡೆದಿವೆ!

ಟೀಕೆ, ವಿಮರ್ಶೆಗಳು ಬೇಕು ಹೌದು. ಆದರೆ ಇಂಥದ್ದೊಂದು ಪ್ರಯತ್ನವನ್ನೇ ನೆಗೇಟ್ ಮಾಡುವ ವಾದಗಳಿಂದ ಹೆಚ್ಚು ಪ್ರಯೋಜನ ಇಲ್ಲ. ಅದರಿಂದ ಇಂಥ ಅಪರೂಪದ ಪ್ರಯತ್ನಗಳಿಗೆ ಹಿನ್ನೆಡೆಯಾಗಬಹುದಷ್ಟೆ. ದಲಿತರ/ಶೋಷಿತರ ಬದುಕನ್ನು ಬಿಂಬಿಸುವ, ಅದರಲ್ಲೂ ಸಿನಿಮಾ ಮಾಧ್ಯಮದಲ್ಲಿ ತರುವ ಪ್ರಯತ್ನಗಳೇ ಇಲ್ಲದಿರುವಾಗ ಕಗ್ಗತ್ತಲಲ್ಲಿ ಎಲ್ಲೋ ಸಣ್ಣ ಬೆಳಕಿಂಡಿಯಂತೆ ಕಾಣುವ ಇಂಥ ಪ್ರಯತ್ನಗಳನ್ನು, ಪ್ರಯೋಗಗಳನ್ನು ನಾವು ಮನಸಾರೆ ಸ್ವಾಗತಿಸಬೇಕು. ಅದು ಯಾವುದೇ ಜಾತಿಯ, ಹಿನ್ನೆಲೆಯ ನಿರ್ದೇಶಕ ಮಾಡಿದ್ದಾದರೂ ಸರಿಯೇ. ಶೋಷಿತರ ಪರವಾದ ಇಂಥ ಸಿನಿಮಾಗಳು ನಮಗೆ ಅತ್ಯಗತ್ಯವಾಗಿ ಬೇಕು, ಹೆಚ್ಚಿನ ಸಂಖ್ಯೆಯಲ್ಲಿ ಬೇಕು.

‘ಜೈ ಭೀಮ್’ ಈ ಹಿನ್ನೆಲೆಯಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ಸಿನಿಮಾ. ನನಗೆ ಎಲ್ಲೋ ಒಂದೆರಡು ಕಡೆ ಕೆಲವು ಸಮಸ್ಯೆಗಳು ಕಂಡವಾದರೂ ಅವು ಅತ್ಯಂತ ನಿಕೃಷ್ಟ ಎನ್ನಬಹುದಾದ, ನಿರ್ಲಕ್ಷಿಸಬಹುದಾದ ಸಮಸ್ಯೆಗಳು. ಒಟ್ಟಾರೆಯಾಗಿ ಶೋಷಣೆಯ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲ ಸಮರ್ಥವಾದ ಸಿನಿಮ ಇದು. ಇಂಥದ್ದರ ಬಗ್ಗೆಯೂ ಕೂದಲು ಸೀಳುವ ತರ್ಕ ಮಾಡಿಕೊಂಡು ಕೂರೋದು ನಿಜಕ್ಕೂ ಅನಗತ್ಯ ಮತ್ತು ದುರದೃಷ್ಟಕರ.

ತಮಿಳು ಫಿಲ್ಮ್ ಇಂಡಸ್ಟ್ರಿಯಲ್ಲಿ ಇಂಥ ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಪ್ರೌಢಿಮೆ ಸಾಧಿಸುವತ್ತ ಸಾಗುತ್ತಿವೆ. ಕನ್ನಡದಲ್ಲಿ ಇಂಥ ಪ್ರಯೋಗಗಳು ಇನ್ನೂ ಸರಿಯಾಗಿ ಕಾಣಿಸದಷ್ಟು ಸಣ್ಣ ಪ್ರಮಾಣದಲ್ಲಷ್ಟೇ ಇವೆ. ಜಾತಿಗ್ರಸ್ತ ಅನಿಷ್ಟ ವ್ಯವಸ್ಥೆಯನ್ನು ನೇರವಾಗಿ ಅಡ್ರೆಸ್ ಮಾಡುವ ಛಾತಿ ಕೂಡ ನಮ್ಮಲ್ಲಿನ್ನೂ ಗಟ್ಟಿಗೊಂಡಿಲ್ಲ. ಹೀಗಿರುವಾಗ ಇತರೆ ಭಾಷೆಗಳ ಇಂಥ ಸಿನಿಮಾಗಳಿಂದ ನಾವು ಕಲಿಯಬೇಕಿರೋದೇನು ಎಂಬುದು ನಮಗೆ ಮುಖ್ಯವಾಗಬೇಕು. ಕೂದಲು ಸೀಳುವ, ತೌಡು ಕುಟ್ಟುವ ವಾದಗಳಿಂದ ಒಂದಷ್ಟು ಬಾಯ್ಚಪಲ ತೀರಬಹುದಷ್ಟೇ ಹೊರತು ಹೆಚ್ಚು ಪ್ರಯೋಜನ ಇಲ್ಲ.

‍ಲೇಖಕರು Admin

November 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: