ರಾಧಿಕಾ ವಿಟ್ಲ ಹರಡಿದ ನೆನಪು- ಅಪ್ಪನ ಕಾಲ್ಮುಟ್ಟಿ ನಮಸ್ಕರಿಸಿದ್ದರು ಪುನೀತ್…

ರಾಧಿಕಾ ವಿಟ್ಲ

ಮೊನ್ನೆ ಅ.29ಕ್ಕೆ ಉತ್ತರಾಖಂಡದ ಅದ್ಯಾವುದೋ ಬೆಟ್ಟ ಹತ್ತಿ ಒಂದು ಚಂದದ ಸೂರ್ಯೋದಯ ನೋಡಿದ ಖುಷಿಯಲ್ಲಿ ತಡವಾಗಿ ತಿಂಡಿ ತಿಂದು ಸಿಗ್ನಲ್ಲೇ ಸಿಗದ ಮತ್ತೊಂದು ಜಾಗಕ್ಕೆ ಹೊರಡುವ ತರಾತುರಿಯಲ್ಲಿದ್ದಾಗ ಹೀಗೊಂದು ಸುದ್ದಿ ಕೇಳಿ ನಂಬಲಾಗದಂತೆ ನಿಂತಿದ್ದೆ. ಸುದ್ದಿ ಹೌದು ಎಂದು ಗೊತ್ತಾಗಿ ಅರ್ಧ ಗಂಟೆಯಲ್ಲಿ ಸಿಗ್ನಲ್ ಹೋಗಿ ಈ ಲೋಕದ ಕನೆಕ್ಷನ್ ತಪ್ಪಿ ಹೋಗಿತ್ತು. ಹೋಗುವಾಗ ದಾರಿಯುದ್ದಕ್ಕೂ ಕಾಣುತ್ತಿದ್ದ ಗಡ್ವಾಲ್ ಹಿಮಾಲಯ ಶ್ರೇಣಿ ನೋಡ್ತಾ ಇದ್ದಾಗ, ಪುನೀತ್ ಅವರೇ ಹೇಳ್ತಾ ಇದ್ದ ಮಾತು ನೆನಪಿಗೆ ಬರ್ತಾ ಇತ್ತು. ‘ಹಿಮಾಲಯ ಚಾರಣ ಮಾಡ್ಬೇಕು, ಅದೊಂದು ಇನ್ನೂ ಆಗೇ ಇಲ್ಲ!’

ಬೆಂಗ್ಳೂರಲ್ಲಿ ಏನು ನಡೀತಿದೆ ಅನ್ನೋದು ಕೂಡ ಗೊತ್ತಾಗದೆ, ಮೊದಲ ಬಾರಿ ಸಿಗ್ನಲ್ ಇಲ್ಲದ ಜಗತ್ತಲ್ಲಿ ಏನೋ ಕಳೆದುಕೊಂಡಂತೆ ಆಗ್ತಾ ಇತ್ತು. ಮತ್ತೆ ಸಿಗ್ನಲ್ಲಿಗೆ ಬಂದಾಗ ಇಹಲೋಕದಲ್ಲಿ ಎಲ್ಲವೂ ಮುಗಿದು ಹೋಗಿತ್ತು. ಕೋಟ್ಯಧಿಪತಿಗೆ ಕೆಲಸ ಮಾಡಿದ ಎಲ್ಲರಿಗೂ ಹೀಗೆ ಆಗಿದ್ದರೆ ಅದು ಸಹಜ ಕೂಡ.

ಪುನೀತ್ ಅಂದ ತಕ್ಷಣ ನನಗೆ ನೆನಪಿಗೆ ಬರೋದು ಈ ಒಂದು ಘಟನೆ. ಅದು 2013 ಜುಲೈ. ಕೋಟ್ಯಧಿಪತಿ 2ನೇ ಸೀಜನ್ ಕೊನೆಯ ಹಂತಕ್ಕೆ ಬಂದಿತ್ತು. ಪುನೀತ್ ಅವರು ಬಾಲನಟನಾಗಿ ಅಭಿನಯಿಸಿದ ಒಂದು ನಾಲ್ಕೈದು ಸಿನಿಮಾ ಬಿಟ್ಟರೆ, ಸಿನಿಮಾಗಳನ್ನೆಲ್ಲ ನೋಡದ, ಅಷ್ಟಾಗಿ ಸಿನಿಮಾ ಆಸಕ್ತಿ ಇಲ್ಲದ ನನ್ನ ಅಪ್ಪ, ಆ ದಿನ ನಮ್ಮ ಕೋಟ್ಯಧಿಪತಿ ಸೆಟ್ಟಿಗೆ ಬಂದಿದ್ದರು. ನಾನು ಕೆಲಸ ಮಾಡುತ್ತಿದ್ದೇನೆ ಎಂಬ ಕಾರಣಕ್ಕೆ ಕಾರ್ಯಕ್ರಮ ನೋಡಲು ಶುರು ಮಾಡಿದ್ದ ಅಪ್ಪ, ನಿಧಾನವಾಗಿ ಪುನೀತ್ ಅವರ ಆನ್ ಸ್ಕ್ರೀನ್ ವಿನಯತೆ, ಸರಳತೆಗೆ ಮಾರು ಹೋಗಿದ್ದರು. ಅವರು ಬಂದ ಆ ದಿನ ನಟ ಜಗ್ಗೇಶ್ ಅವರ ಎಪಿಸೋಡ್ ಶೂಟ್ ಇತ್ತು.

ಚೆನ್ನೈಗೆ ನನ್ನ ನೋಡಲೆಂದು ಬಂದಿದ್ದವರನ್ನು ಶೂಟಿಂಗ್ ನೋಡಿ ಎಂದು ಕರೆದಿದ್ದೆ. ಅಪ್ಪ ಮತ್ತು ಅಮ್ಮ ಇಬ್ಬರೂ ಶೂಟಿಂಗ್ ನೋಡಿದ ಮೇಲೆ ಕೊನೆಯಲ್ಲಿ ಪುನೀತ್ ಅವರಿಗೆ ಪರಿಚಯಿಸಿದ್ದೆ. ಹಿಂಜರಿಕೆಯಿಂದಲೇ ಮಾತಾಡಿಸಿದ ಅಪ್ಪನನ್ನು ಪುನೀತ್ ಅವರು ಕಾಲ್ಮುಟ್ಟಿ ನಮಸ್ಕರಿಸಿದ್ದು, ಅಪ್ಪನಿಗಂತೂ ಬಹಳ ಆಶ್ಚರ್ಯವಾಗಿಬಿಟ್ಟಿತ್ತು. ರಾಜ್ಕುಮಾರ್ ಅವರ ಮಗನೂ ಅವರ ಹಾಗೆ, ಇಷ್ಟೊಂದು ವಿನಯವಂತರಾಗಿರೋದು ಕಂಡು ಅಪ್ಪನ ಕಣ್ಣು ಮಂಜಾಗಿತ್ತು. ಇದಾದ ಮೇಲೆ, ಫೋಟೋನೂ ತೆಗೀಬೇಕಲ್ಲ ಜೊತೆಗೆ ಅಂತ, ಹತ್ತಿರ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದರು ಪುನೀತ್.

ನೋಡಿ, ಎಂಥಾ ವಿಚಿತ್ರ ಅಂದರೆ, ಇದೇ ಫೋಟೋ ಅಪ್ಪನ ಕೊನೆಯ ಫೋಟೋ ಆಗಿಬಿಡುತ್ತದೆ ಅಂತ ನಮಗೇನು ಗೊತ್ತಿತ್ತು! ಇದಾಗಿ, ಅಪ್ಪ ಚೆನ್ನೈಯಿಂದ ಹಿಂತಿರುಗಿ ಎರಡು ವಾರವಷ್ಟೇ ಆಗಿತ್ತು. ಕೋಟ್ಯಧಿಪತಿಯ ಕೊನೆಯ ಎಪಿಸೋಡು ಶೂಟ್ ಮುಗಿಸಿ ನಾಲ್ಕು ದಿನವಷ್ಟೇ ಕಳೆದಿತ್ತು. ಆಗ ನನಗೆ ಏಳು ತಿಂಗಳು. ಆಗಷ್ಟೇ 60 ವರ್ಷಕ್ಕೆ ಕಾಲಿಟ್ಟಿದ್ದ ಚುರುಕಾಗಿ ಓಡಾಡಿಕೊಂಡಿದ್ದ, ಯಾವುದೇ ಆರೋಗ್ಯ ತೊಂದರೆಗಳಿಲ್ಲದ ಇನ್ನೂ ಅದೇ 25ರ ತುಂಟತನ ತೋರಿಸ್ತಾ ಇದ್ದ ಅಪ್ಪ ಯಾವುದೇ ಸುಳಿವು ಕೂಡ ಕೊಡದೆ ರಪ್ಪನೆ ಹಿಂಗೆ, ಯಥಾವತ್ ಪುನೀತ್ ರೀತಿಯಲ್ಲೇ ಎದ್ದು ನಡೆದುಬಿಟ್ಟಿದ್ದರು. ಕೊನೇ ಪಕ್ಷ ಅವರಿಗೆ 60 ಆದರೂ ಆಗಿತ್ತು…

ಹೊಟ್ಟೆಯೊಳಗೆ ಏಳು ತಿಂಗಳ ಮಗುವನ್ನು ಹೊತ್ತುಕೊಂಡು, ಇನ್ನು ಅಪ್ಪನಿಲ್ಲವೆಂಬ ವಿಚಾರವನ್ನು ಜೀರ್ಣಿಸಿಕೊಳ್ಳಲು ಕಷ್ಟಪಡುತ್ತಿದ್ದಾಗ, ಒಂದು ಅಚ್ಚರಿ ನಡೆಯಿತು. ನಮ್ಮ ಕೋಟ್ಯಧಿಪತಿ ತಂಡದವರ ಮೂಲಕವಾಗಿ ಅಪ್ಪ ಗತಿಸಿ ಹೋದ ಈ ಸುದ್ದಿ ತಿಳಿದ ಪುನೀತ್ ಅವರು, ನನ್ನ ನಂಬರ್ ಕೇಳಿ ಪಡೆದು ನನ್ನ ಜೊತೆ ಮಾತಾಡಿ ಸಾಂತ್ವನ ಹೇಳಿದ್ದು, ದೊಡ್ಡ ಮನೆಯ ಹುಡುಗನ ದೊಡ್ಡತನವಲ್ಲದೆ ಇನ್ನೇನು!

ಆಗ ಪುನೀತ್ ಅವರು ಹೇಳಿದ ಒಂದು ಮಾತು ಈಗಲೂ ನೆನಪಿದೆ. ‘ಅಷ್ಟು ಆರೋಗ್ಯವಾಗಿದ್ದ ಅಪ್ಪ ಹೋದ್ರು ಅಂತ ನಂಬಕ್ಕೆ ಆಗಲ್ಲ, ಅವ್ರು ಎಲ್ಲಿಗೂ ಹೋಗಿಲ್ಲ, ನಿಮ್ಮ ಜೊತೆಗೇ ಇರ್ತಾರೆ. ಯಾರಿಗ್ಗೊತ್ತು, ನಿಮ್ಮ ಹೊಟ್ಟೆಯಲ್ಲಿ ಹುಟ್ಟಿ ಬರೋದೆ ವಿಧಿಯಾಟ ಇದೆಯೇನೋ ಅಂತ ಸಮಾಧಾನ ಮಾಡ್ಕೊಳ್ಳಿ.. ತಪ್ಪಿಸೋಕೆ ನಾವ್ಯಾರು ಅಲ್ವಾ..?’ ಆಗ ನನ್ನ ಬಳಿ ಇದಕ್ಕೆ ಉತ್ತರ ಇರಲಿಲ್ಲ. ಸುಮ್ಮನಿದ್ದೆ. ನಿಮ್ಮ ಜೊತೆಗೆ ತೆಗೆದ ಫೋಟೋ ಅವರ ಕೊನೇ ಫೋಟೋ’ ಎಂದೆ. ಅಷ್ಟೇ, ಹೆಚ್ಚು ಮಾತಾಡಿರಲಿಲ್ಲ. ಮಗ ಹುಟ್ಟಿದ್ದು ಗೊತ್ತಾದಾಗಲೂ ಅಷ್ಟೇ, ಅಪ್ಪನೇ ಇದಾರೆ ನಿಮ್ಮ ಜೊತೆ ಅಂದಿದ್ದರು!

ಹೀಗೆ ಬರೆಯೋದು ತುಂಬ ಕಷ್ಟದ ಕೆಲಸ. ಹೃದಯಕ್ಕೆ ತುಂಬ ಹತ್ತಿರವಾದ ವಿಚಾರಗಳನ್ನು ಹೇಳುವುದು ಒಂಥರಾ ಸಂಕಟ. ಮುಖ್ಯವಾಗಿ, ಮನುಷ್ಯ ಸಂಬಂಧಗಳ ವಿಚಾರ ಬಂದಾಗ. ಹೇಳಲು ಹೋಗಿ ಎಲ್ಲಿ ಅದು ಕೃತಕತೆಯ ಹಾದಿ ಹಿಡಿದು ಬಿಡುತ್ತದೆಯೇನೋ ಎಂಬ ವಿಚಿತ್ರ ತಳಮಳ. ಇಲ್ಲೂ ನನಗೆ ಆಗುತ್ತಿರುವುದು ಅದೇ.

ದಿನ ಬೆಳಗಾದರೆ, ಯಾರದೋ ಮನೆಯಲ್ಲಿ ಏನಾದರೆ ನಮಗೇನು ಎಂಬಂತೆ ವರ್ತಿಸುವುದು ಕಾಣುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಇಸಂಗಳ ಅಹಂನಲ್ಲಿ ಯಾರಿಗೇನಾದರೆ ನಮಗೇನು ಎಂಬಂತೆ ಮಾನವೀಯತೆಯಿಲ್ಲದೆ ಮೆರೆಯುವುದು ನೋಡುತ್ತೇವೆ. ಸುಮ್ಮನೆ ಸುರಿದು ಬಿಡುವ ripಗಳ ನಡುವೆ, ಸೆಲೆಬ್ರಿಟಿಯಾಗಿದ್ದುಕೊಂಡು ಸಾಮಾನ್ಯರ ಜೊತೆಗಿದ್ದ ಪುನೀತ್ ಅವರ ಈ ನಡೆ ಎಷ್ಟು ಅನುಕರಣೀಯ ಅನ್ನಿಸಿದ್ದರಿಂದ ಈ ಸಂದರ್ಭದಲ್ಲಿ ಹೇಳಬೇಕು ಅನಿಸಿತು.

ಹಾಗೆ ನೋಡಿದರೆ ಕೋಟ್ಯಧಿಪತಿಗೆ ಕೆಲಸ ಮಾಡಲು ಶುರು ಮಾಡುವವರೆಗೆ ಪುನೀತ್ ಅವರ ಬಗ್ಗೆ ನನಗೆ ಹೆಚ್ಚು ಗೊತ್ತಿರಲಿಲ್ಲ. ನೋಡಿದ್ದು ಕೂಡ ಬಾಲನಟನಾಗಿ ಅಭಿನಯಿಸಿದ ಒಂದಿಷ್ಟು ಚಿತ್ರಗಳು, ಜೊತೆಗೆ ಮಿಲನ, ಪೃಥ್ವಿ. ಅಷ್ಟೇ. ಆದರೆ, ಕೆಲಸ ಮಾಡ್ತಾ ಮಾಡ್ತಾ, ಒಬ್ಬ ಮನುಷ್ಯ ಎಷ್ಟು ಎತ್ತರಕ್ಕೇರಿದರೂ ಸಹೃದಯಿಯಾಗಿ ಎಲ್ಲರೊಡನೆ ಹೇಗೆ ಬೆರೆಯಬೇಕು ಎಂಬುದಕ್ಕೆ ಮಾದರಿಯಾಗಿ ಕಂಡಿದ್ದು ಪುನೀತ್. ಒಂದು ಸಣ್ಣ ಹೊಗಳಿಕೆಗೂ ಸಂಕೋಚದ ಮುದ್ದೆ ಆಗ್ತಾ ಇದ್ದ ಅವರ ಪ್ರಾಮಾಣಿಕ/ಪಾರದರ್ಶಕ ಮುಖಭಾವ ಸಾಕು, ಅವರ ವ್ಯಕ್ತಿತ್ವ ಎಷ್ಟು ಸರಳವಾಗಿತ್ತು ಎಂಬುದನ್ನು ಹೇಳಲು.

ಶೂಟಿಂಗ್ ಸಂದರ್ಭದಲ್ಲಿ, ಅಲ್ಲಿ ಕೆಲಸ ಮಾಡುವ ಯಾರದೇ ಹುಟ್ಟುಹಬ್ಬ ಬಂದರೂ ಕೇಕ್ ತರಿಸಿ ಅಲ್ಲೇ ಆಚರಿಸುವ ಏರ್ಪಾಡು ಮಾಡುತ್ತಿದ್ದ ಅವರ ಪ್ರೀತಿ, ಹಣದ ಅಗತ್ಯವಿದ್ದ ಸ್ಪರ್ಧಿ ದುಡ್ಡು ಗೆಲ್ಲಲಾಗದೆ ಇದ್ದಾಗ ನಿಜಕ್ಕೂ ಅವರು ಬೇಸರ ಪಡುತ್ತಿದ್ದ ರೀತಿ, ಪ್ರತಿ ಸೀಜನ್ ಕೊನೆಯಲ್ಲಿ ಎಲ್ಲರನ್ನೂ ಕರೆದು ಅವರು ಕೊಡುತ್ತಿದ್ದ ಪಾರ್ಟಿ… ಒಂದೇ ಎರಡೇ.. ಬರೆದಷ್ಟೂ ಮುಗಿಯದು. ಇನ್ನು ಸ್ಪರ್ಧಿಗಳ ಕಷ್ಟಕ್ಕೆ ಹೆಗಲು ಕೊಟ್ಟು ಸಹಾಯ ಮಾಡಿದ್ದು, ಅಭಿಮಾನಕ್ಕೆ ಸ್ಥಳದಲ್ಲೇ ಉಡುಗೊರೆ ನೀಡಿದ್ದು ಎಲ್ಲವನ್ನೂ ಬರೆಯುತ್ತಾ ಹೋದರೆ ಅದೊಂದು ಬೇರೆಯೇ ಅಧ್ಯಾಯ.

ಪ್ರತಿ ಸಾರಿಯೂ ಮಾತಿಗೆ ಸಿಕ್ಕಾಗ, ಬೆಂಗ್ಳೂರಿಗೆ ಬಂದಾಗ ಬನ್ನಿ ಎಂದು ಹೇಳಲು ಅವರು ಮರೆಯುತ್ತಿರಲಿಲ್ಲ. ಹೀಗಾಗಿ, content teamನ ನಾವೊಂದು ಮೂರು ಮಂದಿ ಮುಂದಿನ ಸಲ ನಾ ಬೆಂಗ್ಳೂರ್ ಬಂದಾಗ ಹೋಗಿ ಅವರನ್ನು ಭೇಟಿ ಮಾಡೋಣ ಅಂತ ಮಾತಾಡ್ಕೊಂಡಿದ್ದೆವು. ಅಷ್ಟರಲ್ಲಿ ಲೋಕಕ್ಕೆ ಕೊರೋನ ಕಾಲಿಟ್ಟು ನಮ್ಮ ಯೋಜನೆಗಳನ್ನು ತಲೆಕೆಳಗು ಮಾಡಿತ್ತು. ಕೊನೆಗೂ ಭೇಟಿ ಸಾಧ್ಯವಾಗಲೇ ಇಲ್ಲ…
ಯಾರಿಗೆ ಯಾವಾಗ ಏನು ಬೇಕಾದರೂ ಆಗಬಹುದು ಅಂತ ಅಪ್ಪ ಹೋದಾಗಲೇ ಅನ್ನಿಸಿತ್ತು. ಈಗ ಮತ್ತೆ ಆ ನಂಬಿಕೆಯೇ ಬಲವಾಗಿದೆ.

ಇರುವಷ್ಟು ದಿನ ಖುಷಿಯಿಂದ, ಖುಷಿ ಕೊಡುವ ಕೆಲಸ ಮಾಡಿಕೊಂಡು, ಖುಷಿ ಹಂಚಿಕೊಂಡು ಇರಬೇಕು ಅಷ್ಟೇ. ಪುನೀತ್ ರ ಹಾಗೆ!
(ಎರಡು ವರ್ಷ ಎರಡು ಸೀಜನ್ನಿನ ಅಷ್ಟೂ ಎಪಿಸೋಡುಗಳ ಶೂಟಿಂಗ್ ಸಂದರ್ಭ ಹೀಗೆ ಕೂರ್ತಾ ಇದ್ದ ಕೆಲಸದ ನೆನಪು, ಆಗ ನಡೆಯುತ್ತಿದ್ದ ಮಾತುಕತೆ ಎಂದಿಗೂ ಮಾಸದು. ಅದಕ್ಕಾಗಿ ಈ ಫೋಟೋದೊಂದಿಗೆ.)

‍ಲೇಖಕರು Admin

November 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: