ಮಹಾಮನೆ ಅಂಕಣ – ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ…

ಮಲ್ಲಿಕಾರ್ಜುನ ಮಹಾಮನೆ  ಎಂದರೆ ಲವಲವಿಕೆಯ ಬುಗ್ಗೆ. ಸದಾ ಮುಖದಲ್ಲಿ ಮಂದಹಾಸ. ಜೊತೆಯಲ್ಲಿದ್ದವರೊಂದಿಗೆ ಜೋಶ್ ಮಾತು. ಒಟ್ಟಿನಲ್ಲಿ ಅವರ ಜೊತೆ ಇದ್ದರೆ ಬರೀ ‘ಪಾಸಿಟಿವ್ ವೈಬ್ಸ್’. ರಂಗಭೂಮಿಯ ಒಡನಾಡಿ ಮಹಾಮನೆ ಒಳ್ಳೆಯ ಬರಹಗಾರ. ಕವಿ. ಇವರ ಅಂಕಣ ಬರಹಗಳ ಸಂಕಲನ ‘ಬುಡ್ಡಿ ದೀಪದ ಬೆಳಕು’ ಎಲ್ಲರಿಂದಲೂ ಶಹಬಾಷ್ ಗಿರಿ ಪಡೆದಿದೆ.

ಮಲ್ಲಿಕಾರ್ಜುನ ಮಹಾಮನೆ  ತಮ್ಮ ಬದುಕಿನ ಘಟನೆಗಳನ್ನು ನಮ್ಮ ಮುಂದಿಡುತ್ತಿದ್ದಾರೆ.

22

ತುರ್ತು ಸಂದರ್ಭಗಳಲ್ಲಿ ಅಥವಾ ನಮಗೆ ಅಗತ್ಯ ಎಂದಾಗ ಹಣ ಅಷ್ಟು ಬೇಗ ಏನೂ ಸಿಗಲ್ಲ… ಇಂತಹವೇ ಕಾರಣಗಳಿಗೆ ನಿಮಗಾಗೇ ಹಣ ಇಟ್ಟುಕೊಳ್ಳಬೇಕು ಎಂದದ್ದು ನಾನು… ನನ್ನ ಮದುವೆಗೆ ಏನಿಲ್ಲ ಎಂದರೂ ಇಪ್ಪತ್ತರಿಂದ ಮೂವತ್ತು ಸಾವಿರದವರೆಗೂ ಹಣ ಬೇಕಿತ್ತು… ಬರಿಗೈಲಿ ಕೂತಿದ್ದಿನಿ ನಾನು… ಮದುವೆಯ ದಿನ ಹತ್ತಿರರ‍್ತಾ ಇದೆ. ಹಣ ಬೇಕೇಬೇಕು… ಏನ್ಮಾಡೋದು ಯಾರನ್ನ ಕೇಳೋದು… ಯಾರು ಕೊಟ್ಟಾರು ಎಂದು ಯೋಚಿಸುತ್ತಾ ಕುಳಿತಿದ್ದಾಗ ಮಿಂಚಿನಂತೆ ಹೊಳೆದ ಉಪಾಯ.

ನನ್ನ ಶ್ರೀನಿವಾಸನಗರದ ಮನೆಯ ಎದುರು ಮನೆಯ ಚನ್ನಮ್ಮ ಅವರು ಚೀಟಿ ವ್ಯವಹಾರ ಮಾಡುತ್ತಿದ್ದರು. ಅವರು ಸ್ವಾಮ್ಯೋರ ಇಪ್ಪತ್ಸಾವರದೊಂದು ಹೊಸ ಚೀಟಿಯ ಹಾಕಿ… ಅದೇ ಚೀಟಿಗೆ ರೂಪಾಯಿ ಕಟ್ಟಿದ್ದರಾಯಿತು. ನೀವೊಂದು ಹಾಕಿ ತಿಂಗಳಿಗೆ ಐನೂರು ರೂಪಾಯಿ ಕಟ್ಟಿಸಿದಾಯ್ತು ಕಣ… ಬಡ್ಡಿ ದುಡ್ಡು ಅದೇ ಚೀಟಿಗೆ ಹಾಕಿ ಡಬ್ಬಲ್ ಚೀಟಿ ಎತ್ತಿದ್ದರೇ ಇಪ್ಪತ್ತೈದೋ ಇಪ್ಪತ್ತಾರೋ ತಿಂಗಳಿಗೆ ಚೀಟಿ ಮುಗ್ದೋಯ್ತದೆ ಕಣ… ಇದೇ ತಿಂಗಳಿಂದ ಶುರು ಮಾಡ್ತೀವಿ… ನೀನೊಂದು ಚೀಟಿ ಹಾಕಿ ದುಡ್ಡು ಸಮಯಕ್ಕೆ ಬೇಕಾಯ್‌ತದೆ ಕಣ’ ಎಂದು ಹೇಳಿದ್ದು ನೆನಪಾಯಿತು. ಅದೇ ತಿಂಗಳು ಐನೂರರ ಚೀಟಿ ಹಾಕಿ ಮೊದಲ ತಿಂಗಳಲ್ಲಿ ಚೀಟಿ ಕೂಗಿದೆ… ಹನ್ನೆರಡುವರೆ ಸಾವಿರ ರೂಪಾಯಿ ಕೈಗೆ ಬಂತು… ಆಮೇಲೆ ಜಯನಗರದ ಜನತಾ ಕೋ ಆಪರೇಟಿವ್ ಸೊಸೈಟಿ’ಯಲ್ಲಿ ಅದ್ಯಾವಗೋ ಮೆಂಬರ್ ಆಗಿದ್ದೆ. ಅಲ್ಲಿಂದ ಹದಿನೈದು ಸಾವಿರ ರೂಪಾಯಿ ಸಾಲ ತಂದೆ ಕಣ್ರೀ… ಚಾಮರಾಜಪೇಟೆಯ ನನ್ನ ಗೆಳೆಯ ಕಲಾವಿದ ನಂಜಪ್ಪನ ಅತ್ತೆ. ಗೆಳೆಯ ಪ್ರಭುವಿನ ತಾಯಿ ನನ್ನನ್ನು ಅತ್ಯಂತ ಪ್ರೀತ್ಯಾದರಗಳಿಂದ ಕಾಣುತ್ತಿದ್ದ ಅನ್ನದಾತೆ ನಾನು ಅಮ್ಮ’ ಎಂದೇ ಕರೆಯುತ್ತಿದ್ದ ಪುಟ್ಟತಾಯ್ಯಮ್ಮನವರಿಂದ ಕೈಸಾಲ ಎಂದು ಮೂರಸಾವಿರ ತೆಗೆದುಕಂಡೇ… ಹೀಗೆ ಮದುವೆಗೆ ಬೇಕಾಗಬಹುದಾದ ಹಣವನ್ನು ಕೊಡಿಸಿಕೊಂಡೆ ಕಣ್ರೀ…

ನಾನು ಅಮ್ಮ ಭಾವಾಜಿ… ಅಕ್ಕ ಸುಮಂಗಲ ಎಲ್ಲರೂ ಚಿಕ್ಕಪೇಟೆಯ ಕಡೆಗೆ ಹೊರಟೆವು.

ಮದುವೆಯ ಬಟ್ಟೆಗಳು… ರೇಷ್ಮೆ ಸೀರೆಗಳು ಇತರ ದಿನ ಬಳಕೆಯ ಸೀರೆಗಳನ್ನು ತರಲು ಬೆಂಗಳೂರಿನ ಚಿಕ್ಕಪೇಟೆಯ ಮುಖ್ಯರಸ್ತೆಯಿಂದ ಹಿಡಿದು ಗಲ್ಲಿಗಲ್ಲಿಗಳಲ್ಲಿ ಹರಡಿರುವ ಸಾಲು ಸಾಲು ಅಂಗಡಿಗಳನ್ನು ಆಯ್ದು ಮುಂದೆ ಸಾಗುತ್ತಿದ್ದೊ… ಗಿಜಿಗುಡುವ ರಸ್ತೆಗಳ ಮೇಲೆ ಮಂದಗತಿಯಲ್ಲಿ ಹರಿಯುವ ತರತರದ ವಾಹನಗಳು… ಅದರೊಳಗೇ ನುಸುಳಿ ಅಂಗಡಿ ಅಂಗಡಿಗಳನ್ನು ಬದಲಿಸುವ ಜನ-ಇಕ್ಕಟ್ಟಾದ ಕಾಲುದಾರಿಗಳು.. ಆ ಕಾಲುದಾರಿಗಳನ್ನು ಇನ್ನು ಕಿಷ್ಕಿಂಧೆ ಮಾಡುವ ತಳ್ಳುಗಾಡಿ ಅಂಗಡಿಗಳು… ಧೂಳಿದಿಡು ನೆಲೆನಿಂತಿರುವ ದ್ವಿಚಕ್ರ ವಾಹನಗಳು.. ಒಬ್ಬರ ಮೈ ಒಬ್ಬರಿಗೆ ತಾಕಿಸುತ್ತಾ… ಯಾರದೋ ದೇಹದ ಯಾವುದೋ ಅಂಗ ಮತ್ತೊಬ್ಬರ ಯಾವುದೋ ಅಂಗಕ್ಕೆ ಸ್ಪರ್ಶಿಸುತ್ತಾ… ಯಾರು ಯಾರಿಗೋ ಡ್ಯಾಷ್ ಹೊಡೆಯುತ್ತಾ…. ಆಗ ಆ ಗಡಿಬಿಡಿಯಲ್ಲಿಯೂ ಒಬ್ಬರನ್ನೊಬ್ಬರು ದುರುಗುಟ್ಟಿ ನೋಡುತ್ತಾ… ತಮ್ಮ ತಮ್ಮ ಭಾಷೆಗಳಲ್ಲಿ ಗೊಣಗುಡುತ್ತ ಅಥವಾ ಕ್ಷಣಹೊತ್ತು ನಿಂತು ಜೋರುದನಿಯಲ್ಲಿ ಮಾತುಗಳನ್ನು ಎರಚಾಡುತ್ತಾ…. ಯಾವುದು ಬಗೆಹರಿಯದೇ ಲೊಟಕಾಡಿಕೊಂಡೇ ತಮ್ಮ ತಮ್ಮ ದಾರಿಹಿಡಿಯುತ್ತಾರೆ. ಅಪರೂಪಕ್ಕೆ ಸಿಕ್ಕ ನೆಂಟರಿಷ್ಟರನ್ನು ಮೂವತ್ತೆರೆಡು ಹಲ್ಲುಗಳನ್ನೂ ಗಿಂಜಿ ಮಾತಾಡಿಸುತ್ತಾ ತಾವು ತಾವು ತಂದ ಸೀರೆ ಬಟ್ಟೆಗಳನ್ನು ಸಿಕ್ಕ ಆ ತುಸುಗಳಿಗೆಯಲ್ಲೇಷೋ’ ಮಾಡುತ್ತಾ ಸಾಧ್ಯವಾದರೆ ಅಲ್ಲೇ ಮದುವೆಗೆ ಆಹ್ವಾನ ಮಾಡುತ್ತಾ… ತಾವು ಬಟ್ಟೆ ತಂದ ಅಂಗಡಿಯ ಹೆಸರು ವಿಳಾಸ ಹೇಳಿ ಸೀದಾ ಹೋಗಿ ಎಡಕ್ಕೆ ತಿರುಗಿ… ಮುಂದೆ ಹೋಗಿ ಬಲಕ್ಕೆ ತಿರುಗಿ… ಹಿಂದೆ ಬಂದು… ಮತ್ತೇ ನೇರಕ್ಕೆ ಹೋಗ್ತಾ ಇರಿ ನಿಮ್ಮ ಮುಂದೆ ದೊಡ್ದೊಂದು ಬಿಡ್ಲಿಂಗ್ ಸಿಗುತ್ತೆ ಅದರ ಪಕ್ಕದ ಓಣಿಗೆ ಹೋದ್ರೆ ನಿಮ್ಮ ಎಡಗಡೆ ಮತ್ತೊಂದು ಓಣಿ ಸಿಗುತ್ತೆ ಅಣ್ಣಯ್ಯಪ್ಪನ ಗಲ್ಲಿ’ ಅಂತ ಅಲ್ಲೇ ಆ ಅಂಗಡಿ ಇರೋದು… ತುಂಬಾ ಚೆನ್ನಾಗಿವೆ ಸೀರೆಗಳು… ಪ್ಯೂರ್ ರೇಷ್ಮೆ…. ಬೆಲೆನೂ ಕಡಿಮೆ… ಅಂಗಡಿಯವ ಒಳ್ಳೆಯ ಮನ್ಸ… ಮೋಸ ಗೀಸಾ ಮಾಡಲ್ಲ ಅಂತ ಅಂಗಡಿಯ ಕುಲಾಗೋತ್ರಾನೆಲ್ಲ ಆ ಪುಟ್‌ಫಾತ್ ಮೇಲೆ ಬಿಚ್ಚಿಟ್ಟು…ಮರೀಬೇಡಿ… ಮದುವೆ ಬರ‍್ಬೇಕು…. ಮನೆಯವರನ್ನೆಲ್ಲಾ ಕರ‍್ಕೊಂಡು ಬರಬೇಕು’ ಎಂದು ಮಾತಾಡುತ್ತಾ ನಿಲ್ಲುವ ಬಾದಾರಾಯಣ ಸಂಬಂಧದ ನೆಂಟರುಗಳು ಒಂದು ಕಡೆ.

ಇದರ ನಡುವೆ ಟ್ರಾಫಿಕ್ ಜಾಮ್‌ಗಳು… ವಾಹನಗಳ ಯದ್ವಾತದ್ವಾ ಕರ್ಣಕಠೋರ ಹಾರನ್‌ಗಳು… ಟ್ರಾಫಿಕ್ ಜಾಮ್ ನಿವಾರಿಸಲು ಪರದಾಡುವ ಪೊಲೀಸರು… ಅಂಗಡಿಗಳ ಮುಂದೆ ನಿಂತು ಬನ್ನಿ ಬನ್ನಿ…. ಮಾಲ್ ನೋಡಿಮ್ಮ… ಇಷ್ಟವಾದ್ರೆ ತಗೊಳ್ಳಿ… ಎಂದು ಆಹ್ವಾನಿಸುವ ಬಡಪಾಯಿ ಕಸ್ಟಮರ್ಸ್ ಪಿಕ್ಕರ್ಸ್ ಗಳು’ ಎಂಥದೇ ಜನ ಸಂದಣಿಯಲ್ಲಿ ಚಾಯ್ ಚಾಯ್ ಎಂದು ಕೂಗುತ್ತಾ ಬರುವ ಮಲೆಯಾಳಿ ಕಾಕಗಳ ಹುಡುಗರು ಇದರ ನಡುವೆ ಚಪ್ಪಾಳೆ ತಟ್ಟುತ್ತಾ ವಯ್ಯಾರ ಮಾಡಿ ತೇಲಿ ಬರುವ ಹಿಜಡಾಗಳು… ಇದಾವುದೂ ನಮಗೆ ಸಂಬಂಧಿಸಿದಲ್ಲದ್ದು ಎಂದು ಗಲ್ಲಪೆಟ್ಟಿಗೆಯ ಮೇಲೆ ನಿರ್ಲಿಪ್ತವಾಗಿ ಕುಳಿತಿರುವ ಮಾಲೀಕರು… ಇಲ್ಲಾ ಮೂರ‍್ನಾಲ್ಕು ಜನ ಪರ್ವತಾಗಾತ್ರದ ಪೇಟತೊಟ್ಟು ಕುಳಿತ ನರಪೇತಲ ವಯಸ್ಸಾದ ಮಾರ್ವಾಡಿಗಳ ಜೊತೆ ಟೀ ಹೀರುತ್ತಾ ಲೋಕಾಭಿರಾಮವಾಗಿ ಮಾತಾಡುತ್ತಾ ಕುಳಿತಿರುವ ಅಂಗಡಿ ಮಾಲೀಕರು. ‌

ತರತರದ ಜನಗಳು…. ತರತರದ ಅಂಗಡಿಗಳು… ವಿವಿಧ ಭಾಷೆಗಳು…. ಸಣ್ಣ ಸಣ್ಣ ಓಣಿಗಳು… ಗಲ್ಲಿಗಳು… ನಡುನಡುವೆ ದೇವಾಲಯಗಳು… ಮಸೀದಿ… ದರ್ಗಾಗಳು…. ಒಂದೆರಡು ಚರ್ಚ್ ಗಳು… ಅದಾವುದೋ ಯಾವುದೇ ಪೇಟೆಯ ಯಾವುದೂ ಗಲ್ಲಿಯಲ್ಲಿರುವ ಸಿಂಧಿ ಸ್ಕೂಲುಗಳು… ಮುಕುರು ಕನ್ನಡ ಶಾಲೆ… ಹೋಟೆಲ್‌ಗಳು. ಸಂಜೆಯಾಯಿತೆಂದರೆ ದಿನನಿತ್ಯದ ತರಕಾರಿ ತರಲೋ… ಕಚೋರಿ… ತಿನ್ನಲೋ ಜಿನಮಂದಿರಕ್ಕೆ ಹೊಗಲೋ ಮನೆಯಿಂದ ಹೊರಬಂದು ಹರಿದಾಡುವ ಸುಂದರ ಸೇಠಾಣಿಯರು. ತಳ್ಳುಗಾಡಿಗಳಲ್ಲಿ ಉತ್ತರ ಭಾರತದ ತರಕಾರಿಗಳನ್ನು ಮಾರುವ ಕಪ್ಪು ತಮಿಳಿಯರು… ಮಣಭಾರದ ಸರಂಜಾಮುಗಳನ್ನು ಸಾಗಿಸುವ ತಳ್ಳುಗಾಡಿಯ ತಮಿಳಗರು ಹಾಗೂ ಸಾಬರು… ಇಷ್ಟೆಲ್ಲದರ ನಡುವೆ ಜೇಬು ಕತ್ತರಿಸುವ ಪಿಕ್‌ಪ್ಯಾಕೆಟಿಗರು… ಕಣ್ಣಿಗೆ ಮಂಕುಬೂದಿ ಎರೆಚುವ ಕಳ್ಳಸುಳ್ಳ ಬೀದಿಬದಿಯ ಮಾರಾಟಗಾರರು… ಕೂಳು ಅನ್ನಕ್ಕೆ ದೀನರಾಗಿ ಬೇಡುವ ಕಡು ಭಿಕ್ಷುಕರು ಇಂತಹ ಅನೇಕಾನೇಕ ಚಿತ್ರವಿಚಿತ್ರ ವೈಚಿತ್ರಗಳು ಹಲವು ವಹಿವಾಟಿನ ಸಂಗಮ… ಕೋಟಿ ಕೋಟಿ ವ್ಯವಹಾರದ ತಾಣ…. ಓಹೋ ಅದೊಂದು ವಿಸ್ಮಯ ಜಗತ್ತು ಈ ಚಿಕ್ಕಪೇಟೆ. ‌

ಅವಿನ್ಯೂರಸ್ತೆಯ ಇಕ್ಕೆಲಗಳಲ್ಲಿ ಹರಡಿಕೊಂಡಿರುವ ಹಳೆಯ ಬೆಂಗಳೂರಿನ ಚಿಕ್ಕಪೇಟೆ, ಮಾಮೂಲು ಪೇಟೆ, ಬಳೇಪೇಟೆ, ಅಕ್ಕಿಪೇಟೆ, ಅಳ್ಳೆಪೇಟೆ, ಕುಂಬಾರಪೇಟೆ, ಗಾಣಿಗರಪೇಟೆ, ಉಪ್ಪಾರಪೇಟೆ, ಕುಬ್ಬನ್‌ಪೇಟೆ, ರಣಾಸಿಂಗ್‌ಪೇಟೆ ಹೀಗೆ ಹಲವು ಪೇಟೆಗಳು. ಬೆಂಗಳೂರಿನ ಮುಖ್ಯ ವ್ಯಾಪಾರಿ ಕೇಂದ್ರ ಚಿಕ್ಕಪೇಟೆ. ಹೆಸರು ಮಾತ್ರ ಚಿಕ್ಕಪೇಟೆ ಇಲ್ಲಿ ನಡೆಯುವ ವಹಿವಾಟು ಮಾತ್ರ ದೊಡ್ಡದೇ… ಇಂತಹ ಅಗಾಧ ಪೇಟೆಯಲ್ಲಿ ಹೆಜ್ಜೆಗೊಂದರಂತೆ ಸಿಗುವ ಸಿಲ್ಕ್ ಸೆಂಟರ್‌ಗಳು… ಸೀರೆ ಅಂಗಡಿಗಳು… ಜವಳಿ ಅಂಗಡಿಗಳು ನೂರಾರು… ನಾವು ಇಂತಹ ಪೇಟೆಗೆ ಬಂದಿದ್ದೆವು. ನಮ್ಮಂತೆ ಸಾವಿರಾರು ಜನ ನಾನಾ ಕಾರಣಗಳಿಗಾಗಿ ಇಲ್ಲಿ ಬರುತ್ತಾರೆ.

ಮೆಜೆಸ್ಟಿಕ್‌ನಿಂದ ಕಾಟನ್‌ಪೇಟೆಗೆ ಹೋಗುವ ರಸ್ತೆಯ ಮೂಲೆಯಲ್ಲಿರುವ ಬೆಂಗಳೂರಿನ ಒಂದು ಕಾಲದ ಅನೇಕ ಚಳವಳಿಗಳ… ಜಾಥಾಗಳ ತಾಣವಾದ ತುಳಸಿ ತೋಟದ ಮಗ್ಗಲಿನ ಶಾಂತಲಾಸಿಲ್ಕ್‌ ನಿಂದ ಹಿಡಿದು ಚಿಕ್ಕಪೇಟೆಯ ಬೈರಪ್ಪ ಸಿಲ್ಕ್ಸ್ ನವರೆಗೆ ನೂರಾರು ರೇಷ್ಮೆಸೀರೆ ಅಂಗಡಿಗಳು ಪಿ.ವಿ.ಆರ್. ಸಿಲ್ಕ್ಸ್, ಮಹಾವೀರ ವಸ್ತ್ರ ಭಂಡಾರ, ಪ್ರಥಮ್‌ ಸಿಲ್ಕ್ಸ್, ರಿಷಬ್‌ ಸಿಲ್ಕ್ಸ್, ಮೇಘ್ಮಾಯಿ ಸ್ಯಾರೀಸ್ – ಹಿತೇಂದ್ರೆ ಸಿಲ್ಕ್ಸ್, ಪಾರ್ವತಿ ಸಿಲ್ಕ್ಸ್, ಶ್ರೀ ಲಕ್ಷ್ಮಿ ಸಿಲ್ಕ್ಸ್, ಕುಮಾರನ್‌‌ ಸಿಲ್ಕ್ಸ್, ಜೈ ಲಕ್ಷ್ಮಿ ವೆಂಕಟೇಶ್ವರ ಟೆಕ್ಸ್ಟೈಲ್ಸ್ ಮಯಾರಿಕಾ ಸಿರೀಸ್, ಧನಲಕ್ಷ್ಮಿ ಸಿಲ್ಕ್ಸ್ ಅಂಡ್ ಸ್ಯಾರಿಸ್. ಕರ್ನಾಟಕ ಸಿಲ್ಕ್ಸ್ ಎಂಪೋರಿಯ, ಕಂಚಿ ಕೋ ಯೋಗಲಕ್ಷ್ಮಿ ಸಿಲ್ಕ್ಸ್, ಎಂ.ಎಂ. ಸ್ಯಾರಿಸೆಂಟರ್, ಗೋಪಾಲ್ ಸಿಲ್ಕ್ಸ್ ಹೀಗೆ ನೂರೆಂಟು ಅಂಗಡಿಗಳು. ಸಿಲ್ಕ್ಸ್ ಸೆಂಟರ್‌ಗಳು… ಎಂಪೋರಿಯಂಗಳು… ವಿವಿಧ ರಾಜ್ಯಗಳ ಸಿಲ್ಕ್ಸ್ ಸೊಸೈಟಿಗಳ ಸೀರೆ ಮಳಿಗೆಗಳು… ಹೀಗೆ ಸಣ್ಣಪುಟ್ಟ ಅಂಗಡಿಗಳಿಂದ ಹಿಡಿದು ಎಂಪೋರಿಯಂಗಳವರೆಗೆ ಸೀರೆ… ವಸ್ತ್ರ…. ಬಟ್ಟೆ ಬರೆಗಳ ಅಂಗಡಿಗಳ ಜಾಲ ಚಿಕ್ಕಪೇಟೆಯಲ್ಲಿ ಹಬ್ಬಿದೆ.

ಬೆಂಗಳೂರನ್ನು ನಿರ್ಮಾಣ ಮಾಡಿದ ಕೆಂಪೇಗೌಡರ ಕನಸು ಹಾಗಿತ್ತು… ಮೊದಮೊದಲು ಸ್ಥಳೀಯ ಕುಶಲಕರ್ಮಿಗಳು ಹಾಗೂ ಸ್ಥಳೀಯ ಭಾಷಿಕರು ಇಲ್ಲೆಲ್ಲೇ ವ್ಯಾಪಾರ ಸಾಪಾರ ಮಾಡಿ ಬಾಳಿ ಬದುಕಿದರು… ಆದರೆ ಈಗ ಅಲ್ಲಿಯ ಚಿತ್ರಣವೇ ಬದಲಾಗಿದೆ… ಎಲ್ಲವೂ ಎಲ್ಲಾ ವಹಿವಾಟುಗಳೂ ವಲಸಿಗರ ಕೈಯಲಿವೆ… ಮಾರವಾಡಿಗಳು… ಕೆಲ ಸಿಂಧಿಗಳು ಉತ್ತರ ಭಾರತೀಯರು ಈ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ. ಮೊದಲಿದ್ದ ಸಣ್ಣ ಪುಟ್ಟ ಅಂಗಡಿಗಳು ಮಾಯವಾಗಿ ದೊಡ್ಡ ದೊಡ್ಡ ಶಾಂಪ್‌ಗಳು ತಲೆ ಎತ್ತಿದ್ದಾವೆ. ಈಗ ಅದೂ ಮಾಯವಾಗಿ ವ್ಯಾಪಾರ ಮಳಿಗೆಗಳ ಸಂಪೂರ್ಣ ರೂಪರೇಷೆಯೇ ಬದಲಾವಣೆಗೊಂಡಿದೆ… ಸುಸಜ್ಜಿತ… ಹವಾನಿಯಂತ್ರಿತ ಆಧುನಿಕ ಶಿಲ್ಪ ವಿನ್ಯಾಸದ…. ಜಗಮಗಿಸುವ ಬೃಹತ್ ಮಾಲ್‌ಗಳು ಗ್ರಾಹಕರನ್ನು ಅದರಲ್ಲೂ ಯುವ ಜನತೆಯನ್ನು ಆಕರ್ಷಿಸುತ್ತಿವೆ… ಸಣ್ಣಪುಟ್ಟ ವ್ಯಾಪಾರಿಗಳು ಹೂಡುತ್ತಿದ್ದ ಹತ್ತು ಲಕ್ಷ… ಇಪ್ಪತ್ತು ಲಕ್ಷದ ಬಂಡಾವಾಳಗಳು ಕಿಲುಬು ಕಾಸಿಗೆ ಬೆಲೆಯಿಲ್ಲದೆ ಅಂತಹ ಅಂಗಡಿಗಳನ್ನು ಕೇಳುವವರಿಲ್ಲದೆ… ಬಹುಕೋಟಿ ಬಂಡವಾಳದ ವ್ಯವಹಾರದ ಮಾಲ್‌ಗಳು ತಲೆ ಎತ್ತಿವೆ… ಈಗ ಅದನ್ನೂ ಬದಿಗೊತ್ತಿ ಆನ್‌ಲೈನ್ ವ್ಯಾಪಾರ ವ್ಯವಸ್ಥೆ ದಾಪು ಹೆಜ್ಜೆಗಳನ್ನು ಹಾಕಿದೆ… ಮುಂದಿನ ವ್ಯಾಪಾರದ ಚಿತ್ರ‍್ತಣ ಹೇಗಿರುತ್ತದೋ ಆ ದೇವರೆ ಬಲ್ಲ ಕಣ್ರಪ್ಪ…

ನಾವು ಕೆಲವು ಅಂಗಡಿಗಳನ್ನು ಎಡತಾಕಿ… ಸೀರೆಗಳನ್ನು ನೋಡಿ ಸಮಾಧಾನವಾಗದೆ… ವ್ಯವಹಾರ ಕುದುರದೇಭೈರಪ್ಪ ಸಿಲ್ಕ್ಸ್ ಅಂಡ್ ಸ್ಯಾರಿಸ್’ಗೆ ಬಂದೆವು… ಬೆಂಗಳೂರು ಹುಟ್ಟಿದಾಗಲೆ ಭೈರಪ್ಪ ಕುಲಜರು… ಈ ಅಂಗಡಿ ಪ್ರಾರಂಭಿಸಿದರೋ ಏನೋ… ಅಂಗಡಿ ಒಳ ಹೋಗುತ್ತಿದ್ದಂತೆಯೇ ಪ್ರಶಾಂತ ವಾತಾವರಣ… ಗಜಿಬಿಜಿ ಇಲ್ಲದ ಮನಕ್ಕೆ ಮುದ ನೀಡುವ ಸೀರೆಗಳ ತಾಣ ಅನ್ನಿಸಿತು ನಮಗೆ… ನಗುಮೊಗದ ಸ್ವಾಗತ ನಮ್ಮನ್ನು ಅಲ್ಲಿ ಕೂರುವಂತೆ ಮಾಡಿತು… ಮದುಮೆಲ್ಲಗೆ ಮಾತನಾಡುವ ಹುಡುಗರು ತರತರದ ಸೀರೆಗಳನ್ನು ಒಂದಾದ ನಂತರ ಒಂದರಂತೆ ನಮ್ಮ ಮುಂದೆ ತೋರುತ್ತಲೇ ಹೋದರು.

ಅಮ್ಮನೂ ಅಕ್ಕನೂ ಬಹಳ ತಾಳ್ಮೆಯಿಂದ ಕುಳಿತು ಅಳೆದೂ ಸುರಿದೂ ಬಣ್ಣ… ತೂಕ… ಎಳೆ… ನೇಯ್ಗೆ… ಒಡಲು… ಸೆರಗು…. ಬುಟ್ಟಾ… ಕುಚ್ಚು… ಕಲೆಗಾರಿಕೆ… ಜೊತೆಗೆ ಬೆಲೆ ಎಲ್ಲಾವನ್ನು ಅವಲೋಕಿಸಿ… ಕೀಲಿಸಿ… ಲೆಕ್ಕಾಚಾರ ಹಾಕಿ ನನ್ನನ್ನು ಆಗಾಗ ಆ ಸೀರೆಗಳ ಲೋಕದಲ್ಲಿ ಮುಳುಗಿಸಿ… ಒಂದೂ… ಒಂದೂವರೆ ಗಂಟೆಗಳು ಕುಳಿತು ಹುಡುಗಿಗೆ ಅಂತ ಸೀರೆ… ಅಜ್ಜಿ ಇಂತ ಸೀರೆ… ಹುಡುಗಿ ಅಮ್ಮನಿಗೆ ಈ ಸೀರೆ ಆಗುತ್ತಾ… ತಮಗೆ ಎಂಥಾ ಸೀರೆ… ಅಕ್ಕಂದಿರಿಗೆ ಆ ಸೀರೆಗಳು ಸಾಕಲ್ವ ಎನ್ನುತ್ತ ಅಂತೂ ಕೊನೆಗೆ ಒಂದಷ್ಟು ಸೀರೆಗಳನ್ನು ಆಯ್ಕೆ ಮಾಡಿದರು. ಅಷ್ಟೊತ್ತಿಗೆ ಅಂಗಡಿಯವ ಎರಡು ಬಾರಿ ಕಾಫಿ ತರಿಸಿದ್ದರು. ಬೇಡ ಬೇಡ ಎನ್ನುತ್ತಲೇ ನಾವು ಕಾಫಿ ಕುಡಿದೋ… ಭಾವಾಜಿಯವರು ಐದಾರು ಬಾರಿ ಸಿಗರೇಟು ಸೇದಿಯಾಗಿತ್ತು… ಪ್ರತಿಬಾರಿ ಸಿಗರೇಟು ಸೇದಿ ಬಂದಾಗಲೂ `ಸೆಲೆಕ್ಷನ್’ ಆಯ್ತಾ… ಸೆಲೆಕ್ಷನ್ ಆಯ್ತಾ’ ಎಂದು ಕೇಳುತ್ತಲೇ ಇದ್ದರು. ಅವರು ಹಾಗೆ ಕೇಳಿದಾಗಲೆಲ್ಲ ನನ್ನಕ್ಕ, ನೀವು ಇನ್ನೊಂದು ಸಿಗರೇಟ್ ಸೇದ್ಕೊಂಡು ಬರೋಗಿ… ನಿಮಗೆ ಇದೆಲ್ಲಾ ತಿಳಿಯಲ್ಲಾ ಅಂತ ಹೇಳ್ತಾನೇ ಇದ್ಲು… ನಾನು ಕಲಾವಿದರ… ಬರಹಗಾರ ಎಂದು ತಿಳಿದ ಅಂಗಡಿ ಮಾಲೀಕ…. ಭೈರಪ್ಪನವರ ಕುಡಿ… ಆ ಯುವಕ ನನಗೆ ಶುಭಾಶಯ ಹೇಳಿ ನನಗೆ ಚಂದದೊಂದು ಪೆನ್ ಗಿಫ್ಟ್ ಕೊಡುತ್ತಾ ಆಗಾಗ ಬರ‍್ತಾಯಿರಿ ಸಾರ್ ಎಂದು ಹೇಳಿದ.

ನಾನೂ ಒಂದು ನನ್ನ ಮೆಳ್ಳಗಣ್ಣಿಗೆ ಎಂದು ಸೀರೆ ಸೆಲೆಕ್ಟ್ ಮಾಡಿ ಅಮ್ಮನಿಗೆ ಅಕ್ಕನಿಗೆ ತೋರಿ ಅದನ್ನೂ ಪ್ಯಾಕ್ ಮಾಡಿಸಿದೆ.
ಪಾರೋತಿಗೆ ಪರಮೇಶನೂ ಕೊಟ್ಟಂತ ಸೀರೆ
ಕಡಲ ಬಣ್ಣದ ಒಡಳುಳ್ಳ ಸೀರೆ
ಕನಕಾಂಬರಿ ಕಲರಿನ ಸೆರಗುಳ್ಳ ಸೀರೆ
ನವಿಲು ಬುಟ್ಟಾದ ಜರತಾರಿ ಸೀರೆ
ಚಿತ್ತಾರದ ರೇಷುಮೆ ಪತ್ತಾಲದ ಸಿರಿ ಸೀರೆ
ಪಾರೋತಿಗೆ ಪರಮೇಶನು ತಂದು ಕೊಟ್ಟಾನೊ ಸೀರೆ
ಮುಂಚಿತವಾಗಿಯೇ ಸೀರೆಗೆ ತಕ್ಕ ಮ್ಯಾಚಿಂಗ್‌ಬ್ಲೌಸ್ ಹೋಲಿಸಿಕೊಳ್ಳಲೆಂದು ನೆಪ ಮಾಡಿ ನಾನು ಮಾರನೇ ದಿನ ಸಂಜೆ ಆ ಸೀರೆಯನ್ನು ಕೊಡಲೆಂದು ಅವಳ ಮನೆಗೆ ಹೋದೆ…
ಮೆಳ್ಳಗಣ್ಣಿ ಮನೆಯಲ್ಲಿದ್ದಳು…
ನನ್ನ ಕಂಡು ನಸು ನಾಚಿದಳು.
ತುಸು ತುಟಿ ತೆರೆದು ನಗೆ ಸೂಸಿದಳು…
ಕಪ್ಪು ಮೋಡದೊಳಗಿನ ಬೆಳ್‌ಮುಗಿಲಿನಂತೆ ಅವಳ ಗುಂಗುರು ಜಡೆಗೆ ಮುಡಿದಿದ್ದ ಮಲ್ಲಿಗೆ ಅವಳ ನಗೆಯಂತೆಯೇ ಬೆಳದಿಂಗಳು ಚೆಲ್ಲಿತ್ತು… ಮುಂಗುರು ಲಾಸ್ಯವಾಡುತ್ತಿತ್ತು.

| ಇನ್ನು ಮುಂದಿನ ವಾರಕ್ಕೆ |

‍ಲೇಖಕರು Admin

November 6, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: