ಸುಧಾ ಆಡುಕಳ ಬರೆದ ಮಿನಿಕಥೆಗಳು

ಸುಧಾ ಆಡುಕಳ

ಅತಿಥಿ

ಆಚೆಯಿಂದ ಅವನ ಫೋನ್. ‘ನಾಳೆ ನಿಮ್ಮ ಮನೆಗೆ ಬರಲೇನು?’

ಅವಳೆಂದಳು, ‘ಬನ್ನಿ ಪರವಾಗಿಲ್ಲ. ಆದರೆ ಇವರು, ಮಕ್ಕಳು ಯಾರೂ ಮನೆಯಲ್ಲಿರುವುದಿಲ್ಲ.’

ಅವನೆಂದ, ‘ಇಲ್ಲ, ಹಾಗಾದರೆಇನ್ನೊಮ್ಮೆ ಬರುವೆ.’

ಅವಳು ನಕ್ಕಳು, ‘ಬನ್ನಿ, ಅದಕ್ಕೇನಂತೆ?’

ಅವನು ವಿಚಾರಿಸಿದ, ‘ನಿಮಗೇನೂ ತೊಂದರೆಯಿಲ್ಲವೆ?

ಅವಳು ನಕ್ಕಳು, ‘ನೀವು ಮಾಡಿದರೆ ಇದೆ ಅಷ್ಟೆ.’

ಏಕಾಂತ

ಅವನು ಅವಳಿಗೆ ಎಷ್ಟೊಂದು ಹೆದರುತ್ತಾನೆ. ಒಂದು ಕ್ಷಣವೂ ಅವಳೊಂದಿಗೆ ಒಂಟಿಯಾಗಿರಲಾರ. ಅವಳಿಗಿಲ್ಲ ಆ ಭಯ!

ಅವನು ಶೂರನೂ, ಧೀರನೂ ಆಗಿದ್ದನು ಎಂಬ ಪುರುಷರ ಇತಿಹಾಸವನ್ನುಓದುವಾಗಲೆಲ್ಲ ಅವಳು ಬಿದ್ದೂ ಬಿದ್ದೂ ನಗುತ್ತಾಳೆ.

ಪಾರಿವಾಳ ಮತ್ತು ಮಗು

ಮನೆಯ ಮಾಡಿನಲ್ಲಿ ಪಾರಿವಾಳವೊಂದು ಮರಿ ಹಾಕಿ ಹಕ್ಕಿಗಳ ಕಿಚಿಪಿಚಿ ತುಂಬಿತ್ತು. ಅವಳು ಮಗುವಿಗೆ ಊಟ ಮಾಡಿಸುವಾಗಲೆಲ್ಲ ಪಾರಿವಾಳದ ಕಥೆ ಹೇಳುತ್ತಿದ್ದಳು. ಈಗ ಪಾರಿವಾಳದಮ್ಮ ಮಗುವಿಗೆ ತುತ್ತು ತಿನ್ನಿಸುತ್ತಿದ್ದಾಳೆ. ಮರಿ ಪಾರಿವಾಳ ಗುಳುಂ ಎಂದು ನುಂಗುತ್ತಿದೆ. ಕಥೆ ಕೇಳುವ ಮಗು ತಾನೂ ಸಲೀಸಾಗಿ ಊಟವನ್ನು ಮುಗಿಸುತ್ತಿತ್ತು. ಕೇವಲ ಅರ್ಧ ಗಂಟೆಯ ಊಟದ ವಿರಾಮದಲ್ಲಿ ಓಡಿ ಬಂದು ಮಗುವಿಗೆ ತುತ್ತು ತಿನ್ನಿಸಿ ಹೋಗಬೇಕಾದ ಅನಿವಾರ್ಯತೆ ಆಕೆಯದು.

ಒಂದು ದಿನ ಊಟ ಮಾಡಿಸುವಾಗ ಇದ್ದಕ್ಕಿದ್ದಂತೆ ಮಗು ಹೇಳಿತು, ‘ಅಮ್ಮಾ, ನನ್ನನ್ನೂ ಪಾರಿವಾಳದಮ್ಮನಿಗೆ ಕೊಟ್ಟುಬಿಡು.’ ಅವಳು ಅವಾಕ್ಕಾಗಿ ಕೇಳಿದಳು, ‘ಯಾಕೋ ಪುಟ್ಟಾ?’ ಮಗು ನಿರಾಳವಾಗಿ ಹೇಳಿತು, ‘ಪಾರಿವಾಳದಮ್ಮ ಇಡೀ ದಿನ ಮರಿಯೊಂದಿಗೇಇರತ್ತೆ. ಗೂಂಗೂಂಅಂತಾ ಮುದ್ದು ಮಾಡತ್ತೆ. ನಿನ್ನ ಹಾಗೆ ಊಟವಾದ ಕೂಡಲೇ ಓಡಿಹೋಗಲ್ಲ.’ ಅವಳು ಭುಜಗಳಿಂದಲೇ ಕಣ್ಣೊರೆಸಿಕೊಂಡಳು.

ದಿಗಿಲು

ಅವಳು ಎಲ್ಲರನ್ನೂ ತನ್ನವರೆಂಬಂತೆ ಪ್ರೀತಿಸುತ್ತಿದ್ದಳು. ಒಂದು ದಿನ ಆಕಸ್ಮಿಕವಾಗಿ ಜಾರಿಬಿದ್ದಳು. ಅವರೆಲ್ಲ, ‘ನೋಡಿ ನಡೆಯಬಾರದಿತ್ತೆ?’ ಎಂದು ಅಣಕಿಸಿದರು. ಅವಳಿಗಾಗ ಎಲ್ಲಿಲ್ಲದ ದಿಗಿಲು!

ಪ್ರೀತಿ

ಅವಳು ಅವನ ಒಂದು ಸಂದೇಶಕ್ಕಾಗಿ ಹಗಲಿರುಳು ಕಾಯುತ್ತಿದ್ದಳು. ತನಗೆಂದೇ ಬರೆಯುವ ಅವನ ಸಾಲುಗಳನ್ನು ನಿಧಾನವಾಗಿ ಆಸ್ವಾದಿಸುತ್ತಿದ್ದಳು. ಒಮ್ಮೆ ಅವನ ಮೊಬೈಲ್ ಅವಳ ಕೈಗೆ ಸಿಕ್ಕಿತು. ಇವಳಿಗೆ ಬರುತ್ತಿದ್ದ ಸಂದೇಶ ಅವನ ಎಲ್ಲಾ ಗೆಳತಿಯರಿಗೂ ಹೋಗಿತ್ತು. ಅವನ ಸಂದೇಶಗಳೀಗ ಅವಳನ್ನು ಚುಚ್ಚುತ್ತವೆ.

ಭಯ

ಅವಳಿಗೆ ಮೊದಲಿನಿಂದಲೂ ಗುಡುಗು ಮಿಂಚು ಎಂದರೆ ತೀರ ಭಯ. ಗುಡುಗು ಪ್ರಾರಂಭವಾದರೆ ಸಾಕು, ಎರಡೂ ಕಿವಿಯಲ್ಲಿ ಹತ್ತಿಯಿಟ್ಟು ಮೈತುಂಬಾ ಹೊಚ್ಚಿಕೊಂಡು ಕಣ್ಮುಚ್ಚಿ ಮಲಗಿಬಿಡುತ್ತಿದ್ದಳು. ಒಮ್ಮೆ ಅವನು ಆರ್ಭಟಿಸಿದ ನೋಡಿ, ಈಗವಳು ಮಿಂಚನ್ನು ಮೋಜಾಗಿ ನೋಡಬಲ್ಲಳು.

ಜ್ಞಾನೋದಯ

ಮಗ ಏನನ್ನಾದರೂ ಕೇಳಿದಾಗಲೆಲ್ಲ ಅವಳು ಹೇಳುತ್ತಿದ್ದಳು, ‘ಯಾರ‍್ಯಾರಿಗೋ ಏನೇನನ್ನೋ ಕೊಡುತ್ತೇನೆ. ನಿನಗೆ ಇಲ್ಲವೆನ್ನುವೆನೆ?’ ಒಮ್ಮೆ ಅವನು ತಿರುಗಿ ಉತ್ತರಿಸಿದ, ‘ಒಂದೋ ಯಾರ‍್ಯಾರಿಗೋ ಕೊಡುವುದನ್ನು ನಿಲ್ಲಿಸು, ಇಲ್ಲವಾದರೆ ಹಾಗೆ ಹೇಳುವುದನ್ನು…’ ಅವಳಿಗೆ ಜ್ಞಾನೋದಯವಾಯಿತು.

‍ಲೇಖಕರು Avadhi

March 28, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Sarojini Padasalgi

    ಸುಧಾ, ಎದೆಯಾಳವನ್ನು ಹೊಕ್ಕು ಜಾಲಾಡುತ್ತಿದ್ದೀರಿ ಎಂಬ ಅನಿಸಿಕೆ ಅರಿಯದಂತೆ ನನ್ನೆದೆಯಾಳದಲ್ಲಿ ಒಂದು ಚಣ ಮಿಂಚಿ ಮರೆಯಾಯ್ತು. ಸಶಕ್ತ ಶಬ್ದ ಜಗವನ್ನೇ ತೋರಬಲ್ಲದು . ಅಲ್ವಾ? ತುಂಬ ಇಷ್ಟವಾಯಿತು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: