ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾ ಇಲ್ಲಿ ಸಂಭವಿಸು..

ನಳಿನಾ ಪ್ರಸಾದ್

ಬಾ ಇಲ್ಲಿ ಸಂಭವಿಸು
ನನ್ನೊಳಗಣ ದೃಷ್ಟಿ ನನಗೆ ಎಟುಕುವ ವರೆಗು
ನಿನ್ನ ಸೃಷ್ಟಿ ಸೋಜಿಗವು ಮನವ ಆವರಿಸುವವರೆಗೂ..
ಹಗಲಿಗೆ ಹೆಗಲಾಗಿ
ಇರುಳಿಗೆ ಕರುಳಾಗಿ
ಬದುಕಿಗೆ ಪ್ರಾಣವಾಗಿ
ಬಾ ಇಲ್ಲಿ ಸಂಭವಿಸು

ಶಿಥಿಲವಾಗಿಹ ಸ್ಮೃತಿಯ
ಶೃತಿಯು ಸೇರುವವರೆಗೂ
ನಂಬುಗೆಯು ಕಂಭದಿಂದೊಡೆವ ವರೆಗೂ
ಭಾವ ಭಕುತಿಯಾಗಿ ಹೆಪ್ಪಗಟ್ಟುವವರೆಗೂ
ಬಾ ಇಲ್ಲಿ ಸಂಭವಿಸು…

ಸಿಡಿಲಬ್ಬರದ ಮಾತು, ಗುಡುಗಿನಬ್ಬರದ ಸೊಕ್ಕು
ಜೀವದ ಬಿಕ್ಕುಗಳು ಮೆತ್ತನಾಗುವವರೆಗೂ
ಬಾ ಇಲ್ಲಿ ಸಂಭವಿಸು

ದೊಡ್ಡಸ್ತಿಕೆಯ ಸಣ್ಣ ತನಗಳು ಗಂಟು ಬಿಚ್ಚುವವರೆಗು
ಆರೋಪದ ಪ್ರವಾಹಗಳು ಕುದಿದುಕ್ಕಿ ಶಾಂತವಾಗುವ ವರೆಗೂ
ಧ್ಯಾನದ ಚೌಕಟ್ಟಿನಲ್ಲಿ ಅನಂತನಾದ ನಿನ್ನ ಪಡಿಮೂಡುವವರೆಗೂ
ಧನ್ಯತೆಯ ಬಟ್ಟಲಿನ ಹಾಲು ಕೆನೆಗಟ್ಟಿ ಉಕ್ಕುವವರೆಗೂ
ಬಾ ಇಲ್ಲಿ ಸಂಭವಿಸು

ಬಳಲಿದೀ ಬಾಳಿನಲಿ
ಪ್ರೀತಿ ಕರುಣೆಯ ನಿತ್ಯ ಅನುಸಂಧಾನವಾಗುವವರೆಗೂ
ಶುಭ್ರ ಪಾರಿಜಾತದೊಲವು ಬೃಂದಾವನ ಮುಟ್ಟುವವರೆಗೂ
ಹಸಿರ ಬಸಿರಿನ ಉಸಿರು ತೃಪ್ತಿ ತುಳಸಿ ಬಳಸುವವರೆಗೂ

ಮತ್ತೊಮ್ಮೆ ಮಗದೊಮ್ಮೆ
ಬಾ ಇಲ್ಲಿ ಸಂಭವಿಸು
ದೇವಕಿಯಾಗಿ
ಯಮುನೆಯಾಗಿ
ಯಶೋದೆಯಾಗಿ
ಗೋಪಿಯಾಗಿ
ಕೊಳಲಾಗಿ
ಖಗನಾಗಿ
ಮೃಗನಾಗಿ
ಸಖನಾಗಿ
ಪ್ರಿಯನಾಗಿ
ಬಾ ಇಲ್ಲಿ ಸಂಭವಿಸು

ನಳಿನಾ ಪ್ರಸಾದ್ ಅವರು ಕಾರ್ಘರ್ ಕರ್ನಾಟಕ ಸಂಘದ ಅಧ್ಯಕ್ಷರು. ಮುಂಬೈ ವಿಶ್ವವಿದ್ಯಾಲಯದ ಕನ್ನಡ ಎಂಎ. ಯಲ್ಲಿ ಪ್ರಥಮ ಸ್ಥಾನ ಪಡೆದು ವರದರಾಜ ಆದ್ಯ ಚಿನ್ನದ ಪದಕ ಪಡೆದಿರುತ್ತಾರೆ. ಖ್ಯಾತ ರಂಗತಜ್ನೆ. ಕವನ,ಲೇಖನಗಳನ್ನು ಬರೆಯುತ್ತಾರೆ.

‍ಲೇಖಕರು Avadhi

11 October, 2020

1 Comment

  1. Shyamala Madhav

    ಆಹಾ! ನಳಿನಾ! ಏನು ಚಂದ! ಬರದಿರುವನೇ ಅವನು?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading