ರಾತ್ರಿ ಪಾಳಿ

ಅಮಿತಾ ಭಾಗವತ್

ಅವನ ಮತ್ತು ಇವನ ನಡುವೆ
ವಿನಿಮಯ ಪ್ರತಿ ಮುಂಜಾನೆ
ಒಂದು ಮುಗುಳ್ನಗೆ
ಇವನು ರಾತ್ರಿ ಪಾಳಿ ಮುಗಿಸಿ
ಫ್ಯಾಕ್ಟರಿಗೆ ವಿದಾಯ ಕೋರಿ
ರೈಲಿನಲ್ಲಿ ಮರಳಿದಾಗ
ಅವನು ಹೊರಟಿರುತ್ತಾನೆ
ಇವನಿಗೆ ಮಲಗಲು ಜಾಗವನ್ನು
ತೆರಮಾಡಿ ಮೆಲ್ಲಗೆ

ತಲೆಯ ಮೇಲೆ ಗಿರಿಗಿರಿ ತಿರುಗುವ ಫ್ಯಾನ್
ಇಲ್ಲಿ ಯಾವಾಗಲೂ ಕರೆಂಟ್ ಹೋಗುವದಿಲ್ಲ
ಒಳಗೆ ಪುಟ್ಟ ಮೋರಿ ಹೊರಗೆ ನೀರಿನ ಡ್ರಮ್
ಬೀದಿಯ ನಳ ಬೇಸಿಗೆಯಲ್ಲಿಯೂ ಬತ್ತುವದಿಲ್ಲ
ಮುನ್ನೂರು ರೂಪಾಯಿ ಸಂಬಳಕ್ಕೆ ನೀರು
ತುಂಬಿಡುವ ಹುಡುಗನಿಗೂ ಬೇಕಿಲ್ಲಾ ರಜಾ

ಕಿರು ಜಾಗದಲ್ಲಿ ಇವನು ಮಲಗಿರುವಾಗ
ಅವನು ರೈಲಿನಲ್ಲಿ ತನ್ನ ಪೊಟ್ಟಣ ಬಿಚ್ಚುತ್ತಾನೆ
ಕಿವಿಯಲಿ ತೂಗಾಡುವ ಲೋಲಕ್ಕು ಕೇವಲ
ಹತ್ತು ರೂಪಾಯಿಗೆ, ನೋಡಿರೀ ಕೊಂಡುಕೊಳ್ಳಿ
ಮತ್ತೆ ಹೇರ್ ಕ್ಲಿಪ್ ನೊಳಗಿನ ನವಿಲುಗಳು
ಗರಿ ಬಿಚ್ಚಲು ಕಾಯುತ್ತಿರುತ್ತವೆ
ರೇಷ್ಮೆ , ಗುಂಗುರು , ಹಾರುವ, ಬೀಳುವ
ಲಲನೆಯರ ಕೂದಲಿನೊಳಗೆ
ಅವನ ಕಾಲಿಗೆ ದಣಿವಿಲ್ಲ

ಮಹಾಮಾರಿಯ ಅಟ್ಟಹಾಸದ ಸದ್ದಿಗೆ
ರೈಲಿನ ಹಳಿಗಳು ಬೆದರಿ ಮಲಗಿದವು
ಅವನು ಸಿಕ್ಕಿದ ಟ್ರಕ್ಕಿನ ಹಿಂಭಾಗದಲ್ಲಿ ಕುಳಿತು
ಊರಿಗೆ ತೆರಳಿದ, ಅವನೊಂದಿಗೆ ಇನ್ನಿತರರು
ಅಲ್ಲಿ ಮುಕ್ತ ಬಾನು, ಮಡದಿ ಒತ್ತಿ ಕೊಡುವ
ಬಿಸಿರೊಟ್ಟಿ , ಇವನಿಲ್ಲಿ ಒಂಟಿ
ಅಂದುಕೊಂಡಿದ್ದ

ಮುರುಟಿದ ಕೋಣೆಯ ಹೊರಗಿನ ಚಹಾದಂಗಡಿ
ಊಟದ ಮನೆ ಮುಚ್ಚಿದೆ
ಜೊತೆಯಲಿ ಮುಚ್ಚಿದೆ ದೇವರಗುಡಿ
ಇವನೇ ಗ್ಯಾಸ್ ಹೊತ್ತಿಸಿದ
ಅಡಿಗೆ ಪರಿಮಳಕ್ಕೆ ಗೆಳೆಯರು ಬಂದರು ಓಡಿ
ಇದೀಗ ರಾತ್ರಿಯಾದೊಡನೆ ಗುಲಾಬಿ
ಛತ್ರಿ ಅರಳುವದು, ಅದರಡಿ ಟೇಬಲ್
ಮೇಲೆ ಚಂದಿರನಂತೆ ನಗುವ ಗೋಲಾಕಾರದ ದೀಪ
ಬಾಯಿ ಚಪ್ಪರಿಸುವವರ ಮುಖದಿಂದ
ಕೆಳಗಿಳಿದಿದೆ ಬಟ್ಟೆಯ ಮಾಸ್ಕ್
ಬಟಾಟಾ ವಡಾ , ಪಾವಭಾಜಿ ರುಚಿಗೆ ಕಾಲಡಿಗಿನ
ಫುಟ್ಪಾತ್ ಸಾಕ್ಷಿ, ಈಗಲೂ ಚಾಲು ಇದೆ ಇವನ
ರಾತ್ರಿ ಪಾಳಿ

ಅವನು ಅಲ್ಲಿ ಅರ್ಧ ಕಟ್ಟಿದ ಮನೆಯ ಟೆರೇಸಿನ
ಮೇಲೆ ಮಲಗಿ ನಕ್ಷತ್ರಗಳನ್ನು ಎಣಿಸುತ್ತಿದ್ದಾನೆ
ಮಗಳ ಮದುವೆಗೆ ಹಣ ಕೂಡಿಸಲಿಕ್ಕಿದೆ
ಮುಂಬೈ ಕೈ ಬೀಸಿ ಕರೆಯುತ್ತಿದೆ

ಶ್ರೀಮತಿ ಅಮಿತಾ ಭಾಗವತ್ ಅವರು ವೃತ್ತಿಯಲ್ಲಿ ನ್ಯಾಯವಾದಿಗಳು. ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತರು. ಕಳೆದ ೧೨ ವರ್ಷಗಳಿಂದ ‘ಹವ್ಯಕ ಸಂದೇಶ’ ಎನ್ನುವ ಮಾಸ ಪತ್ರಿಕೆಯ ಸಂಪಾದಕರಾದ ಇವರು ಅನೇಕ ಸಾಹಿತ್ಯಿಕ , ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು
ಆಯೋಜಿಸುವದರಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ‘ಕುಮುದಾಳ ಭಾನುವಾರ’ ಇವರ ಪ್ರಕಟಿತ ಕವನ ಸಂಕಲನ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. ಲಲಿತಾ ಸಿದ್ಧಬಸವಯ್ಯ

    ಮುಂಬಯಿಯ ಸಾಮಾನ್ಯರ ನಿತ್ಯವನ್ನು‌ ಕರೋನಾ ಹೊಸಕಿದ ಬಗೆಯನ್ನು ಬಹಳ ‌ಸಮರ್ಥವಾಗಿ ಕಟ್ಟಿದೆ ಈ ಕವನ. ಮತ್ತೆ ಓದಬೇಕೆನಿಸುವ ಕವನ

    ಪ್ರತಿಕ್ರಿಯೆ
  2. Ahalya Ballal

    ಜೀವಂತ ಅನುಭವದ ಕವನ. ತುಂಬ ಇಷ್ಟವಾಯ್ತು ಅಮಿತಾ. ಮುಂಬಯಿವಾಸಿಗಳ ಜಾನ್ ಕಾಣಿಸ್ತಿದೆ ಇಲ್ಲಿ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: