ಮುಂಬಯಿ..

ರಜನಿ ತೋಳಾರ್

ಮುಂಬಯಿ

ಎಂದೂ ನಿದ್ರೆಗೆ ಜಾರದ ಹಗಲು…
ಮಬ್ಬಿನಲಿ ಮಶಾಲು ಹಿಡಿದು
ಹಗಲಿಗೆ ಹೆಗಲು ಕೊಟ್ಟು
ನಿರಂತರ ನಿಂತಿರುವುದು ಇಲ್ಲಿ ಕತ್ತಲು!

ಎಂದೂ ಮುಚ್ಚಿರದ ಮನಬಾಗಿಲು…
ಕೋಟಿ ಜೀವಕೋಟಿ ಭಾರ ಹೊತ್ತಿದ್ದರೂ
ಕನಸುಗಾರರ ಸದಾ ಸ್ವಾಗತಿಸುವುದು
ಕೋಟಿ ಹೃದಯಗಳಲ್ಲುಸಿರಿಸುವ ಈ ಹೃದಯವು!

ಎಂದೂ ನಿರಾಶೆ ಮೂಡಿಸದ ಆಕಾಶವು…
ಎತ್ತರವ ಸೋಲಿಸಿದಷ್ಟು ಮತ್ತಷ್ಟು
ಎತ್ತರಕ್ಕೇರು, ಹಾರೆಂದು ಸಮಾನಾವಕಾಶ
ಎತ್ತಿ ತೋರುವ ಒಂದು ಭರವಸೆಯು!

ಎಂದೂ ಒಂಟಿತನ ಕಾಡಬಿಡದ ಬೆಂಬಲವು…
ಚಹಾದ ಟಪ್ರಿಯೋ, ಪುಟ್ಟ ಮನೆಗಳ ಗಲ್ಲಿಯೋ
ಮೌನವ ಹಗುರಾಗಿಸುವ ಆತ್ಮೀಯ ಮನಗಳು
ಬಡ-ಹಸಿವಿಗೆ ಅಕ್ಷಯ ಪಾತ್ರೆ ಹರಳು ವಡಾಪಾವು!

ಎಂದೂ ಮುಗಿಯದ ಕನಸುಗಳ ಜಾತ್ರೆಯು…
ಬಣ್ಣ-ಬಣ್ಣದ ಅನಂತ ಕನಸುಗಳ
ಮೆರುಗಿಗೆ ಬೆರಗಾಗಿ ಹಿಂಬಾಲಿಸುತ
ಬೆರೆತು ನೆಲೆಸಿರುವ ಈ ನಾಡು ಕಿರು-ಭಾರತವು!

ಎಂದೂ ಮರೆಯಾಗದ ಕಾಮನಬಿಲ್ಲು…
ವಿವಿಧತೆಯಲ್ಲಿ ಲೀನವಾಗಿಹ ಏಕತೆಯ ಮುಷ್ಠಿ
ಆಚರಿಸುವ ಹಬ್ಬಗಳ ರಂಗುಗಳು ಸೇರಿ
ವಿಶ್ವ-ದಿಗಂತದಲಿ ಸಂಭ್ರಮಿಸುವ ಅದ್ಭುತವು!

ಎಂದೂ ಎದೆಗುಂದದ ಧೈರ್ಯವು…
ಪ್ರಕೃತಿಯ ಪ್ರಕೋಪವೇ ಇರಲಿ
ಕ್ರೂರಿಗಳ ಕ್ರೌರ್ಯ ದಾಳಿಯೇ ಇರಲಿ
ಘಾಸಿಗೊಳಿಸಲಾಗದಿಲ್ಲಿ ಐಕ್ಯತೆಯ- ಜ್ವಲಂತ ಸಾಕ್ಷಿಯು!


ಮೂರನೇ ಕಣ್ಣು

ಅಷ್ಟೇನು ನಿಷ್ಠುರತೆ?
ಈ ಸಮನೆ ಹಠ ಹಿಡಿದು
ಧೋ ಧೋ.. ಸುರಿಯುತಿರುವೆ

ತಾಳಲಾಗದೆ ಕುಸಿದು ಬಿದ್ದ
ಅಮಾಯಕ ಮರಗಳ ಪಾಲಿಗೆ
ಅಪವಾದ ನಿಂದನೆಗಳ ಜಡಿಮಳೆ
ಮುಂದೊಂದು ಜೀವ ಉಳಿಸಲು
ಇಂದೊಂದರ ಕುತ್ತಿಗೆಗೆ ಕೊಡಲಿ!!

ಕಿತ್ತು ಕೊಂಡೇ ಹೋಗುವುದೇ…
ಕಚ್ಚಾ ಏನು
ಪಕ್ಕಾ ಏನು
ಜೋಪಡಿ ಕೊಠಡಿ ಕಟ್ಟಡಗಳನೆಲ್ಲಾ
ಆವೇಶದ ಪ್ರವಾಹದಲಿ
ಕೊನೆಗೆ
ಪ್ರಾಣಿಯೋ, ಪಕ್ಷಿಯೋ
ಮನುಷ್ಯನನ್ನೋ

ನಾಳಿನಾ ಹಸಿವುಗಳ ನೀಗಿಸಲು
ಇಂದು ಬೆಳೆಯುತ್ತಿರುವ ಬೆಳೆಗಳೆಲ್ಲಾ
ಉಸಿರುಗಟ್ಟಿ
ಮುಳುಗಿ ನಿಂತಿರುವುದು
ಅದೆಷ್ಟೋ ದಿನದಿಂದ..
ಕೊಳೆತು ಹೋಗಿ ಪೈರುಗಳು
ಕೊಚ್ಚಿ ಹೋಗದಿರಲಿ
ಅನ್ನದಾತನ ಕನಸುಗಳು

ನಿನ್ನಾಗಮನಕ್ಕಾಗಿ ಪ್ರಾರ್ಥಿಸುವ
ಜೀವರಾಶಿಗಳೇ
ನಿರ್ಗಮನಕ್ಕಾಗಿ
ಶಪಿಸುವ ಮುಂಚೆಯೇ
ಶಾಂತನಾಗು
ತೊರೆದು ರೌದ್ರುದ್ರೇಕವ…

ಅಲ್ಲಾ,
ನಿನಗೂ ಇಹುದೇ
ಮೂರನೇ ಕಣ್ಣು
ಹಣೆಯಲ್ಲೋ, ಪಾದದಲ್ಲೋ?

ರಜನಿ ತೋಳಾರ್ ಮುಂಬಯಿಯ ಭರವಸೆಯ ಯುವ ಕವಯಿತ್ರಿ. ವೃತ್ತಿಯಲ್ಲಿ ಅವರು CA,CS. ಮಲ್ಟಿನ್ಯಾಷನಲ್ ಕಂಪೆನಿಯಲ್ಲಿ ಉದ್ಯೋಗಿ. ಮುಂಬಯಿ ಪತ್ರಿಕೆಗಳಲ್ಲಿ ಆಗಾಗ ಕವಿತೆ ಕತೆ ಬರೆಯುತ್ತಾರೆ.

‍ಲೇಖಕರು Avadhi

October 11, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: