ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾಲ್ಯದ ನೆನಪಿನ ಅಂಗಳದಲ್ಲಿ…

-ನಂದಿನಿ ಹೆದ್ದುರ್ಗ

ನಾನು ಅಣ್ಣ ಬಹುಶಃ 5ನೇ ಕ್ಲಾಸಿರಬೇಕು ಆಗ.  ತಮ್ಮ ಮೂರನೇ ಕ್ಲಾಸಿನಲ್ಲಿದ್ದ. 

ಪುನುಗು ಬೆಕ್ಕಿನ ಪಾಠ ಆಗಿತ್ತು ಆ ದಿನ ನಮಗೆ. 

‘ಪುನುಗು ಬೆಕ್ಕು ತನ್ನ ಪ್ರಜನನಾಂಗದಿಂದ ಒಂದು ಸುಗಂಧಿತ ದ್ರವ್ಯವನ್ನು ಹೊರಸುಸುತ್ತದೆ’ ಅಂತ ಆ ಪಾಠದಲ್ಲಿನ ಒಂದು ವಾಕ್ಯ.  ಪ್ರಜನನಾಂಗ ಅಂದರೆ ಅದರ ಮಲದ್ವಾರ ಅಂತಲೇ ತಿಳಿದಿದ್ದ ನಾನು ಮತ್ತು ಅಣ್ಣ ಪುನುಗು ಬೆಕ್ಕು ಹಿಕ್ಕೆ ಹಾಕಿದಾಗೆಲ್ಲ ಪುನುಗು ಹೊರ ಬಂದು ಸುತ್ತೆಲ್ಲ ಗಮ್ ಎನ್ನಬಹುದು ಅಂತ  ಶಾಲೆಯಿಂದ ಬರ್ತಾ ಚರ್ಚೆ ನಡೆಸಿದ್ವಿ. ಶನಿವಾರದ ಅರ್ಧ ದಿನದ ಕ್ಲಾಸು ಮುಗಿದಾಗಲೂ ಅದೆ ಚರ್ಚೆ. ಭಾನುವಾರವೂ ಇದರ ಕುರಿತು ಮುಂದುವರಿದ ದೊಡ್ಡ ಮಟ್ಟದ ಚರ್ಚೆಯನ್ನು ನಡೆಸ್ತಾ ತೋಟದಲ್ಲಿ ಆಟ ಆಡ್ತಿದ್ವಿ.

ದಾರಿ ಮಧ್ಯದಲ್ಲಿ ಸ್ವಲ್ಪ ಭಾಗ ಮಣ್ಣಿನೊಳಗೆ ಅಡಗಿದ್ದ ಗುಂಡಗಿನ ಕೆಂಪು ಕಲ್ಲನ್ನು ಕಷ್ಟಪಟ್ಟು ಚೂಪುಕಡ್ಡಿಯಿಂದ ಅಗೆದು ಅಗೆದು ಆಚೆಗೆ ತೆಗೆದು ಅದನ್ನು ಶಿವಲಿಂಗ ಅಂತ ನಡುರಸ್ತೆಯಲ್ಲಿ ಕೂರಿಸಿ ಅಲ್ಲೇ ಇದ್ದ ಕನಕಾಂಬರ ಹೂಗಳನ್ನು ಕಾಫಿ ಎಲೆಯನ್ನು ಕಿತ್ತು ಅದರ ಮೇಲಿಟ್ಟು ಶಿವಪೂಜೆ ಆಟ ಆಡ್ತಾ,  ಇನ್ನಾವುದೆಲ್ಲ ಘಮ್ ಅನ್ನುತ್ತೆ ಅಂತ ಯೋಚಿಸ್ತಾ , ತೋಟದಲ್ಲಿ ಒಂದೇ ಒಂದಿದ್ದ ನೀಲಗಿರಿ ಮರದ ಚಿಗುರು ಪುನುಗು ಬೆಕ್ಕಿಗಿಂತಲೂ ಪರಿಮಳ ಚೆಲ್ಲುತ್ತೆ ಅಂತ ಚರ್ಚೆ ನಡೀತಾ ಇತ್ತು.

ಅಪ್ಪಾಜಿ ಅದೇ ರೋಡಲ್ಲಿ ಆ ಕಡೆಯಿಂದ ಬಂದರು. ಆಗಷ್ಟೇ ನಡೆದಿದ್ದ ಘನವಾದ ಚರ್ಚೆಗೆ ಅಪ್ಪನ ಬಳಿ ಉತ್ತರ ಸಿಕ್ಕುತ್ತದೆ ಅಂತ ‘’ಅಪ್ಪಾಜಿ ..ಈ ಪುನುಗು ಬೆಕ್ಕು ಅಂದರೆ ಹೆಂಗಿರುತ್ತೆ” ಅಂತ ಕೇಳಿದೆ. 

ಆಗ ತೋಟದಲ್ಲಿ ಹನಕಲು ಕೆಲಸ ನಡೆಯುತ್ತಿತ್ತು.  ಹನಕಲು ಅಂದರೆ ಕಾಫಿ ಗಿಡದ ತಳದಲ್ಲಿ ಕೊಯ್ಲಿನಲ್ಲಿ ಉದುರಿದ್ದ ಹಣ್ಣು ,ಹಕ್ಕಿ ಮಂಗ ಕಬ್ಬೆಕ್ಕು ತಿಂದು ಉದುರಿಸಿದ ಬೇಳೆಗಳನ್ನು ಆಯುವುದು.

ಪ್ರಶ್ನೆ ಕೇಳಿದ  ನಮ್ಮ ಕಡೆಗೆ ಒಮ್ಮೆ ತಿರುಗಿ ನೋಡಿದ ಅಪ್ಪಾಜಿ ದೂರದಲ್ಲಿ ಕೆಲಸ ಮಾಡ್ತಿದ ಹೆಣ್ಣಾಳಿಗೆ ‘ಕಬ್ಬೆಕಿನ ಹಿಕ್ಕೆ ,ಹಕ್ಕಿ ತಿಂದು ಉದ್ರಿಸಿರ ಬ್ಯಾಳೆ ಒಂದೇ ಒಂದು ಬಿಡಬಾರದು ಅಚ್ಕಟಾಗಿ ಆಯ್ಕಳಿ.” ಅಂತ ಕೂಗು ಹೊಡೆದ್ರು.

ಕಬ್ಬೆಕ್ಕಿನ ಹಿಕ್ಕೆ ಗೊತ್ತೇ ಗೊತ್ತು ನಮಗೆ. ಕಾಫಿ ಹಣ್ಣಿನ ಬೇಳೆಗಳೇ ಇರುವ ಬೆಕ್ಕಿನ ಕಕ್ಕದ ದೊಡ್ಡ ಸುರುಳಿ ಅದು. ಅಂತಹ ನಾಲ್ಕೈದು ಹಿಕ್ಕೆ ಸಿಕ್ಕಿದ್ರೆ ಅದೇ ಅರ್ಧ ಸೇರು ಹನಕಲು  ಆಗ್ತಿತ್ತು.

“ಕರ್ರಗಿರುತ್ತೆ …!! ಮೋಟು ಕಾಲು,  ಇಷ್ಟು ಉದ್ದ ಇಷ್ಟು ಗತ್ತ ಬಾಲ, ಕಣ್ಣು ಮಾತ್ರ ಮಿಣಿಮಿಣಿಮಿಣಿ ಅಂತ ಹೊಳಿತಾ ಇರ್ತವೆ’

ಅಪ್ಪ ಏನನ್ನಾದರೂ ಹೇಳಲಿಕ್ಕೆ ಶುರು ಮಾಡಿದ್ರೆ ಆಟೋಮ್ಯಾಟಿಕ್ ಆಗಿ ಅದಕ್ಕೆ ಕಥೆಯ ಸ್ವರೂಪ ಬಂದುಬಿಡುತ್ತೆ.

“ಕತ್ತಲ ಹೊತ್ತಿನಲ್ಲಿ ಬಂದು, ತೋಟದಲ್ಲಿ ಹಣ್ಣಾಗಿದ್ದ ಗಿಡದ ಮೇಲೆ ಕೂತು ಆಗೋ ಅಷ್ಟು ತಿಂದು ಅಲ್ಲೇ ಹೇತು…”

ಅಪ್ಪಾಜಿ ಕಥೆ 10 ನಿಮಿಷ ಆದ್ರೂ ಮುಗಿಲಿಲ್ಲ. ‘ಸೇಮ್ ಕಬ್ಬಕ್ಕಿನ ಹಂಗೇ ಪುನುಗು  ಬೆಕ್ಕು ಇರುತ್ತೆ’ ಅಂದವರು ಎಂದಿನಂತೆ ಮುಂದಿನ ತಮ್ಮ ಕೊನೆಯ ವಾಕ್ಯವನ್ನು ಸೇರಿಸಿದ್ರು. ‘ಬಾಳಾ ಬಾಳಾ ಅದೃಷ್ಟ ಇರೋವ್ರಿಗೆ ಮಾತ್ರ ಅದು ಕಾಣಿಸಿಕೊಳ್ಳದು. ನಾನು ನಾಕೈದ್ಸಲ ನೋಡಿದ್ದೀನಿ. ಒಂದು ದಪ ಅಂತೂ ಎಷ್ಟು ಹತ್ತಿರಕ್ಕೆ  ಬಂತು ಅಂದರೆ ನಂಗೂ ಅದ್ಕೂ ಹತ್ಹತ್ತೇ ಹೆಜ್ಜೆ.. !!’

ಹತ್ತು ಹೆಜ್ಜೆ ಹತ್ತಿರಕ್ಕೆ ಕಬ್ಬೆಕ್ಕು  ಎಂದೂ ಸುಳಿಯುವುದಿಲ್ಲ ಅಂತ ಈಗ ಗೊತ್ತಿದೆ..ಆಗ ಮಾತ್ರ ನಮ್ಮಪ್ಪಜಿ ಎಷ್ಟು ಅದೃಷ್ಟವಂತರು ಅಂತಲೂ ಕಬ್ಬೆಕ್ಕೇ ಹತ್ರ ಬಂದು ಹೋಗಿದೆ ಅಂತಲೂ ಅನ್ನಿಸಿ ‘ನಾವೂ ನೋಡ್ಬೆಕಲಾ ಅಪ್ಪಜಿ’ ಅಂದ್ವಿ ನಾನು ಮತ್ತು ಅಣ್ಣ.

ಅಷ್ಟರಲ್ಲಿ ಅಪ್ಪಾಜಿ ನಾವು ಪೂಜಿಸಿದ ಲಿಂಗ ನೋಡಿ ಭಗವಂತಾ ಕಾಪಾಡೊ ಶಿವನೇ ಅಂತಂದು ‘ಜಯತು ಜಯ ವಿಠಲ… ನಿನ್ನ ನಾಮವು ಶಾಂತಿಧಾಮವು ಪುಣ್ಯದ ಧಾಮ…ಜಯತುಜಯ ವಿಠಲಆಆಅ…’’ಅಂತ ಎರಡು ಸಾಲು ಹಾಡು ಹೇಳ್ತಾ ಕೈಮುಗಿತಿದ್ರು.

ಅಷ್ಟರೊಳಗೆ ನಮ್ಮ ಮನೆಯಲ್ಲಿದ್ದ ಗುಳ್ಳೆ ನರಿ ( ಅದು ನಾಯಿ, ನೋಡಲು ನರಿಯ ಹಾಗೆ ಕಾಣಿಸ್ತಿದ್ದಿದ್ರಿಂದ ಅದರ ಹೆಸರೇ ಗುಳ್ಳೆ ನರಿ) ಮೇಲಕ್ಕೆ ನೋಡ್ತಾ ಜೋರಾಗಿ ಬೊಗಳ್ತಾ ಒಂದೇ ಸಮನೆ ಆಚೀಚೆಗೆ ಓಡಾಡ್ತಿದೆ.  ಅದರ ಮೊಲೆಗೆ ಜೋತು ಬಿದ್ದಿದ್ದ ಅದರ ಐದಾರು ಮರಿಗಳು ಅವ್ವನನ್ನೇ ಅನುಸರಿಸುತ್ತ ತಾವೂ ಮೇಲೆ ನೋಡುತ್ತಾ ಸಣ್ಣ ಸ್ವರದಲ್ಲಿ ಬೊಗಳ್ತಿದ್ದಾವೆ. ಅಪ್ಪಾಜಿ ಕೈಮುಗಿದವರು ‘ಯಾಕ ಗುಳ್ಳೆ ನರಿ’ ಅಂದು ಅನುಮಾನದಲ್ಲಿ ಹಾವುಗೀವು ಏನಾದರೂ ಮರ ಹತ್ತುತಿದ್ಯಾ ಅಂತ ಮೇಲಕ್ಕೆ  ನೋಡಿದರು. ಏನೂ ಕಾಣಿಸದೇ ಮತ್ತೆ ನಾಯಿಯನ್ನೇ ನೋಡುತ್ತಾ  ಹತ್ತು ಹೆಜ್ಜೆ ಮುಂದಕ್ಕೆ ಹೋಗಿ ಕೈ ಕಣ್ಣಿಗೆ ಅಡ್ಡ ಇಟ್ಟು ಮತ್ತೆ ಮೇಲಕ್ಕೆ ನೋಡಿದ್ರು. ಅದು ಬಲು ದೊಡ್ಡ ಗೋಣಿ ಮರ. ಗೋಣಿಮರದಲ್ಲಿ ಸಾಧಾರಣವಾಗಿ ವರ್ಷದ ಆರು ತಿಂಗಳೂ ಮೈ ಭರ್ತಿ ಗೋಣಿ ಹಣ್ಣು .  ಅದರ ಹಣ್ಣು ಬಾವಲಿಗಳಿಗೆ ಬಹಳ ಪ್ರೀತಿ. ಸಂಜೆ ಆರರ ಸುಮಾರಿಗೆ ಸಾವಿರಾರು ಬಾವಲಿಗಳು ಪ್ರತಿದಿನವೂ ಮರಕ್ಕೆ ಜೋತು ಬೀಳ್ತಿದ್ವು. ಲೀಟರುಗಟ್ಟಲೆ ಮೂತ್ರ ಹಿಕ್ಕೆಯಿಂದ ಆ ಮರದ ಸುತ್ತೆಲ್ಲ ಒಂಥರ ಘಾಟು ವಾಸನೆ.

ಅದು ಹಗಲು ಆಗಿದ್ದರಿಂದ ಬಾವಲಿಗಳು ಇರಲಿಲ್ಲವಾದರೂ ಅಪ್ಪನಿಗೆ ಏನೋ ಅನುಮಾನವಾಗಿ ಮತ್ತೆ ಹತ್ತಾರು ಹೆಜ್ಜೆ ಆಚೀಚೆ ಓಡಾಡಿ ಮೇಲಕ್ಕೆ ನೋಡಿದರು. ಗುಳ್ಳೆ ನರಿ ವಿಪರೀತ ಬೊಗಳುತಿತ್ತು.. ಅದರ ಮರಿಗಳು ಸಣ್ಣ ಧ್ವನಿಯಲ್ಲಿ ಬೊಗಳುತ್ತ ಅದರ ಅಮ್ಮನ ಕೆಚ್ಚಲು ಹುಡುಕುತ್ತಿದ್ವು.

ಬೆರಗಿನಿಂದಲೂ ಪ್ರಶ್ನಾರ್ಥಕವಾಗಿಯೂ ಗೋಣಿ ಮರದ  ತುದಿಯನ್ನು ನೋಡುತ್ತಿದ್ದ ಅಪ್ಪಾಜಿಯ ಕಾಲು ಕಾಲಿಗೆ ಸಿಕ್ಕಿ ‘ತಥ್…ಇದ್ರ್ ಅವ್ವನ್’ ಅಂತ ಬೈಸಿಕೊಳ್ಳುತ್ತಾ ಕುಯ್ಗುಟ್ಟುತ್ತಿದ್ದವು.

ಅಪ್ಪಾಜಿ ಮದ್ಯಾಹ್ನದ ಬಿಸಿಲು ತಡೆಯಲು ಕೈಯನ್ನು ಅಡ್ಡವಾಗಿ ಹಿಡಿದವರು ‘ಬಾರವಾ ಇಲ್ಲಿ ನಂದಿನಿ, ನಂದೀಶಾ..ಬಾ ಇಲ್ಲಿ.. ಧರಣಿನೂ ಕರ್ಕಬಾ ಮೆತ್ತುಗೆ’ ಅಂದರು. 

ಅರವತ್ತು ಎಪ್ಪತ್ತು ಅಡಿ ಎತ್ತರದಲ್ಲಿ ತೋಟದ ರೋಡಿಗೆ ಅಡ್ಡಲಾಗಿ ಬೆಳೆದಿದ್ದ ಗೋಣಿ ಮರದ ತುದಿಗೆ ನಾವು ಮಾತಾಡುವುದು ಕೇಳುತ್ತದೇನೊ ಎನ್ನುವ ಹುಸಿ ಆತಂಕ ಅವರ ಧ್ವನಿಯಲ್ಲಿತ್ತು.

‘ಅಪ್ಪಾಜಿ ಏನು ಮಾಡಿದ್ರು ನಮಗೆ ಚಂದ’ 

ಅಪ್ಪಾಜಿ ಹೇಳಿದಂತೇ ಸದ್ದು ಮಾಡದೆ ಕಳ್ಳ ಹೆಜ್ಜೆ ಇಡುತ್ತಾ ಅಪ್ಪಾಜಿ ಬಳಿಗೆ ಹೋದೆ.. ಅಣ್ಣನೂ ಧರಣಿಯು ಅದಕ್ಕಿಂತಲೂ ಮೆತ್ತಗೆ ಹಿಂಬಾಲಿಸಿದ್ರು. “ಅಗಳಾ.. ಅಲ್ಲಿ ನೋಡವಾ.. ಎಡಗಡೆ ಕೊಂಬೆ ,ಅದೇ ದಪ್ಪದು ಕಂಕಲಾ ಗತ್ತ ಈತಲ್ಲಾ..ಆ ಕೊಂಬೆ ಪಕ್ಕದು ಬಲಗಡೆ ಕೊಂಬೆ. ಅದರ ಮ್ಯಾಲ ನೋಡು ಕರ್ರುಗೆ… ಕಾಣ್ತಾ ಈತಾ, ಇಡೀ ಸಂಸಾರವೆ ಇರಬೇಕು..ಕಾಪಿಹಣ್ಣು ಇನ್ನೆಲ್ಲಿ ಗಿಡದ ಮ್ಯಾಲ ಉಳಿತಾವೆ !!? ’ ಅಪ್ಪನ ಧ್ವನಿಯಲ್ಲಿ ಗೊತ್ತಿಲ್ಲದ ಆತಂಕವೂ , ಚಂದದ ವಿಸ್ಮಯವೂ ಕಾಣಿಸಿತು. ಅಪ್ಪನ ಎಡಗಡೆಯ ಕೊಂಬೆ ಎನ್ನುವ ಪದ ಕೇಳಿದ  ತಕ್ಷಣ ಎಂದಿನ ನನ್ನ ಕನ್ಫ್ಯೂಸಿಂಗ್ ಮೈಂಡು ಎಡಬಲ ಯಾವುದು ಅಂತ ನಿರ್ಧಾರ ಮಾಡಲು ಊಟ ಮಾಡುವ ಅಭಿನಯಕ್ಕೆ ತೊಡಗಿತು. ಹಾಗೆ ತೊಡಗಿದ ತಕ್ಷಣ ಎಡಗಡೆ ಯಾವುದು ಅಂತ ಗೊತ್ತಾಗಿ ಅದರ ಪಕ್ಕದ ಕೊಂಬೆ ನೋಡಿ ‘’ಹು ಅಪ್ಪಜಿ…ಕೊತ್ತಿಮರಿ ಅಲ್ವಾ ಅದು!?’’ ಅಂದೆ.

‘ಯೇಏಏ ಕೊತ್ತಿಮರಿ ಅಲ್ಲಾ ಕಣೆ ಹೆಡ್ಡಿ. ಅದೆಂತದೊ ಬ್ಯಾರೆದು..’ ಅಂದ ಅಣ್ಣ. ಯಾವಾಗಲೂ ಹೀರೋ ಥರ ಅವನ ನಡವಳಿಕೆ.

ಎರಡನೆ ಕ್ಲಾಸು  ಓದ್ತಿರುವ ತಮ್ಮ ‘ಅಕ್ಕಾ..ನಂಗೂ  ತೋರ್ಸೆ’’ ಅಂತ ಕಿವಿಯ ಹತ್ರ ಬಂದು ಆಕಾಶ ನೋಡ್ತಾ ಹೇಳ್ದಾ.

“ಅಲ್ನೋಡು ಧರಣಿ..ಕರ್ರುಗೆ..ನೋಡು ನೋಡು..ಈ ಕಡೆಗೆ ತಿರುಗ್ತು ಈಗ.. ಯಪ್ಪಾ…ಮಿಣಿಮಿಣಿಮಿಣಿ ಅಂತಿದ್ದಾವೆ ಕಣ್ಣು’’ ಕಬ್ಬೆಕ್ಕು ನೋಡಿದ ಖುಷಿಯಲ್ಲಿ ತಮ್ಮನಿಗೆ ಮಾತೇ ಹೊರಡ್ತಿಲ್ಲ. ‘ಅಮ್ಮನೂ ಇರ್ಬೇಕಿತ್ತು’ ಅಂದರು ಅಪ್ಪಾಜಿ.

ಅಲ್ಲೇ ಎಪ್ಪತ್ತು ಎಂಬತ್ತು ಅಡಿ ಎತ್ತರದಲ್ಲಿ ಕೂತಿದ್ದ ಕಬ್ಬೆಕು ನಾವು ನೋಡುತ್ತಿದ್ದಂತೇ ಮೆಲ್ಲಗೆ ತನ್ನ ಜಾಗದಿಂದ ಎದ್ದು ಅದನ್ನೇ ನೋಡುತ್ತಿರುವ ನಮ್ಮ ಕಣ್ಣು ಹೊಂದಿಕೊಳ್ಳುವಷ್ಟರಲ್ಲಿ ಛಂಗನೇ ಅದಕ್ಕೂ ಎತ್ತರದ ಕೊಂಬೆಗೆ ಜಿಗಿದು ಎಲ್ಲಿ ಎಲ್ಲಿ ಅಂತ ನೋಡುವಷ್ಟರೊಳಗೆ  ಮಾಯವಾಗಿ ಹೋಯಿತು.

ನಾನು ಅಣ್ಣ ಧರಣಿ ಜಗತ್ತಿನ ಅತಿ ದೊಡ್ಡ ವಿಸ್ಮಯವನ್ನು ನೋಡಿದ ಖುಷಿಯಲ್ಲಿ ತೇಲುತ್ತಿದ್ದೆವು. ಅಪ್ಪಾಜಿಯು ಹಾಗೆ.

ಕಬ್ಬೆಕು ಕಾಣಿಸಿಕೊಳ್ಳುವುದು ತೀರಾ ತೀರಾ ಅಪರೂಪವಂತೆ.

‘’ಮಕ್ಳು ಇಷ್ಟೊಂದು ಚೆನ್ನಾಗಿ ಪೂಜೆ ಮಾಡಿದ್ರು ,ಹೂವಿಟ್ರು ಅಂತ ಈಶ್ವರ ಖುಷಿಯಾಗಿ ನೀವು ಏನು ನೋಡಬೇಕು ಅಂತ ಅನ್ಕೊಂಡಿದ್ರೋ ಅದನ್ನೇ ಪ್ರತ್ಯಕ್ಷ ಮಾಡಿದ ನೋಡಿ” ಅಂದರು ಅಪ್ಪಾಜಿ . ‘ಇದು ಪುನುಗು ಬೆಕ್ಕಾ ಅಪ್ಪಜಿ” ಅಂದೆ.  

‘ಕಾಪಿ ಹಣ್ಣು ತಿನ್ನೋ ಕಬ್ಬೆಕು ಇದು, ಪುನುಗು ಬೆಕ್ಕೂ ತೇಟೂ ಇದರಂಗೇ ಇರುತ್ತೆ.  ಆದ್ರೆ ಅದು ಸಣ್ಣ ಮರದಲ್ಲಿ ಓಡಾಡೋದು’’ ಅಂದ್ರು ಅಪ್ಪಾಜಿ. ಅಪ್ಪಾಜಿಗೆ ಎಷ್ಟೆಲ್ಲಾ ಗೊತ್ತಿದೆ ಅಂತ ನಾವು ಮೂರು ಮಕ್ಕಳು ಮನಸಲ್ಲೇ ಅಂದುಕೊಂಡು, ನಾವು ಬಾರಿ ಬಾರಿ ಅದೃಷ್ಟವಂತರಾಗಿದ್ದಕ್ಕೇ ನಮಗೂ ಕಬ್ಬೆಕ್ಕು ನೋಡಲಿಕ್ಕೆ ಸಿಕ್ತು ಅಂತ ಮಾತಾಡಿಕೊಳ್ತಾ ಶಿವಪೂಜೆ ಆಟ ಮುಂದುವರಿಸಿದ್ವಿ.

….

‍ಲೇಖಕರು Admin

24 September, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading