-ಜೀವನ್. ಕೆ
ಲೆಕ್ಕ ತಪ್ಪಿದ ಪ್ರೀತಿ
ಅವಳನ್ನು
ಮನಪೂರ್ವಕವಾಗಿ ಪ್ರೀತಿಸಿದೆ
ಪ್ರತಿ ಮುಂಜಾನೆಯ ಭಾವಗಳಲ್ಲಿ
ಅವಳನ್ನೇ ಕಲ್ಪಿಸಿ ಪೂಜಿಸಿದೆ
ನನ್ನ ಸಮಯದ ಬಹುಪಾಲನ್ನು
ಅವಳ ಧೇನಿಸುವುದಕ್ಕೇ ಮೀಸಲಿಟ್ಟೆ
ಅಂದು ಓದಬೇಕಾದ
ಡಿಗ್ರಿಯ ಪುಸ್ತಕಗಳ ನಡುವೆ
ಅವಳ ಪ್ರೀತಿಯ ಲೆಕ್ಕ ಹಾಕುತ್ತಿದ್ದೆ
ಅವಳೇನೋ ತರಗತಿಯ ಮೆಟ್ಟಿಲೇರಿ
ಉತ್ತಮ ಶ್ರೇಣಿಯಲ್ಲಿ ಗೆದ್ದು ನಿಂತಳು
ನಾನು ಮಾತ್ರ
ಅತ್ತ ಡಿಗ್ರಿಯನ್ನೂ ಪಾಸ್ ಆಗಲಿಲ್ಲ
ಇತ್ತ ಪ್ರೀತಿಯ ಪರೀಕ್ಷೆಯಲ್ಲೂ ತೇರ್ಗಡೆಯಾಗಲಿಲ್ಲ
ಒಂದು ಸಂಜೆ ಅವಳು ಬಂದಾಗ
ಕಣ್ಣಲ್ಲಿ ನಿರ್ಲಿಪ್ತತೆಯ ಬೆಂಕಿ ಇತ್ತು
ನಿನ್ನ ಪ್ರೀತಿ ಗೊತ್ತಿದೆ ಇಷ್ಟವೂ ಹೌದು
ಆದರೆ ನಿನ್ನ ಬಾಗಿಲಿಗೆ ಬರಲು ಭಯ
ನೀನು ನನಗೆ ಬರಿ ಒಳ್ಳೆಯ ಗೆಳೆಯ ಅಷ್ಟೇ
ಅಷ್ಟೇ ಸರಳವಾಗಿ ಮುಗಿಸಿಬಿಟ್ಟಳು
ಇದೆಲ್ಲ ಬಿಟ್ಟು ಓದು
ನನ್ನ ದಾರಿ ಮುಗಿಯಿತು ನಾ ಹೊರಟೆ ಆಲ್ ದಿ ಬೆಸ್ಟ್
ಅವಳ ಹೆಜ್ಜೆಗಳು ದೂರವಾದವು
ಅವಳ ಜೊತೆ ನನ್ನಷ್ಟು ದಿನದ ಭ್ರಮೆಯೂ ತೀರಿತು
ಅವಳಿಗಾಗಿ ಮೀಸಲಿಟ್ಟ ದಿನಗಳು
ಅವಳ ಕೆಲಸಗಳಲ್ಲೇ ಕಳೆದುಹೋದ ಸಮಯ
ಪ್ರೀತಿ ಎಂದು ನಂಬಿದ್ದ ಆ ಎಲ್ಲ ಮುಗ್ಧ ಕ್ಷಣಗಳು
ಒಮ್ಮೆಲೇ ಎದುರು ನಿಂತು
ನನ್ನನ್ನೇ ಗಟ್ಟಿಯಾಗಿ ಕೇಳಿದವು
ನಿನ್ನ ಬದುಕನ್ನು ನೀನು ಎಲ್ಲಿ ಬಿಟ್ಟು ಬಂದೆ
ಕಣ್ಣಿನಲ್ಲಿ ಮೌನದ ಹರಿವು
ಮನಸ್ಸಿನಲ್ಲಿ ಆಳದ ಗೋರುಗೆರೆ
ಆಗ ಅರಿವಾಯಿತು
ತನ್ನನ್ನೇ ಮರೆತು ಬೇರೊಬ್ಬರ ನೆರಳಲ್ಲಿ ಬದುಕಿದರೆ
ತನ್ನ ಅಸ್ತಿತ್ವದ ಬೆಲೆಯನ್ನೇ
ತಾನೇ ಕಳೆದುಕೊಳ್ಳಬೇಕಾಗುತ್ತದೆಯೆಂದು
ಎಷ್ಟು ಮುಗ್ಧನಾಗಿದ್ದೆ ನಾನು
ನನ್ನ ಸಮಯ ಪರಿಶ್ರಮ
ತಲೆಯೊಳಗಿನ ನೂರಾರು ಕನಸುಗಳನ್ನೆಲ್ಲ
ಪ್ರೀತಿಯೆಂಬ ಮಾಯೆಗೆ ಒಪ್ಪಿಸಿ
ಅವಳ ಪಾದದ ಬಳಿ ಚೆಲ್ಲಿದ್ದೆ
ಈಗ ಭಾವನೆಗಳು
ಚೂರಾದ ಮಡಕೆಯ ಚೂರುಗಳು
ಕನಸುಗಳ ಕಂಗಳ ಮೇಲೆ
ದಟ್ಟೈಸಿದ ಕತ್ತಲೆ
ಮೊದಲ ಪ್ರೀತಿಯ ಹೆಸರಲ್ಲಿ ಸುರಿದ ಶ್ರಮವೆಲ್ಲ
ಕೊನೆಗೆ ಮಣ್ಣಲ್ಲಿ ಮಣ್ಣಾಯಿತು
ಅವಳಿಗಾಗಿ ಬರಿದುಮಾಡಿದ ವರ್ಷಗಳು
ಮತ್ತೆಂದೂ ಹಿಂದಿರುಗಿ ಬರಲಿಲ್ಲ
ತನ್ನನ್ನೇ ಕಳೆದುಕೊಂಡ ನಾನು
ಬರಿಗೈಯಲ್ಲಿ ಮೌನವಾಗಿ ಮನೆಯೊಳಗೆ ಸೇರಿದೆ
ಹೊರಗೆ
ಕತ್ತಲಾಗುತ್ತಿತ್ತು
ಒಳಗೂ






0 Comments