–ತುರುವನೂರು ಮಂಜುನಾಥ
ಜೀವದ ಬೀಜ
ಬಹಳಷ್ಟು ದಿನ ಬರೆಯಲಿಲ್ಲ
ಎದೆಯೊಳಗಿನ ಅಕ್ಷರಗಳು
ರೂಪಗೊಳ್ಳಲಿಲ್ಲ,ಪದಗಳು
ಹೊರಡಲಿಲ್ಲ,ಯಾಕೆಂದರೆ
ಭಾವಗಳೆ ಇಲ್ಲದ ಮನಸ್ಸಲ್ಲಿ
ಎಂಥಾ ಕವನ ಹುಟ್ಟೀತು..?
ಬರೆಯಬೇಕಂಬ ಹಠಕ್ಕೆ ಬಿದ್ದಾಗ
ಬದುಕಿನ ಬವಣೆಗಳ ಕಾಟದಲ್ಲಿ
ಮೆದುಳಲ್ಲಿ ಇಲ್ಲದ ಜೀವತ್ವದ
ಜಿಗುಟು ಒಗಟಾಗಿ ನಿಂತಿತು
ಬದುಕು ಕಟ್ಟಿಕೊಳ್ಳಲಾರದವ
ಎಂಥಾ ಕವಿತೆ ಬರದಾನು ? ಎಂದು;
ಹೀಗೆ…ಜೀವತ್ವದ ಭಾವಗಳ
ಅನುಭಾವಗಳ ಅನನ್ಯತೆ
ಎದೆಯೊಳಗೆ ಮೀಟಿದ ನಾದ
ಮಿದುಳೊಳಗೆ ಗುನುಗಾಡಿ ಒದ್ದಾಡಿದಾಗ ಬಂದ ಕವನ
ಬದುಕಿಗೇನಾದರೂ ಆಸರೆಯಾಯಿತೆ?
ಒಣ ಭೂಮಿಯ ಬಯಲೊಳಗೆ
ಅನ್ನದಾತ ಅನುಗಾಲವೂ ಮಳೆಗಾಗಿ ಪರಿತಪಿಸುವಾಗ..ಮಳೆ ಬೀಳಲು ಕವನ ಆಸರೆಯಾಗಬಲ್ಲದೆ?
ಬೀದಿ ಬದಿಯಲ್ಲಿ ಜೋಪಡಿ ಕಟ್ಟಿ
ಬದುಕು ರೂಪಿಸಿಕೊಂಡು ಅನ್ನಕ್ಕಾಗಿ ಬಡಿದಾಡುವ ಜೀವಗಳಿಗೇನಾದರೂ ಕವನ
ಒಪ್ಪತ್ತಿನ ಅನ್ನ ನೀಡಬಹುದೇ?
ಉರಿ ಬಿಸಲಲಿ ಹೊಲಿಯುವ
ಚಮ್ಮಾರನ ಕೈನಲ್ಲಿ ಸಿದ್ದವಾದ ಚಪ್ಪಲಿ ಶ್ರೀಮಂತನ ಕಾಲುಗಳ ರಕ್ಷಣೆಗಾಸರೆಯಾದಂತೆ ಚಮ್ಮಾರನ ಬಿಸಲ ಬೇಗೆಯನು ಕವನ ತಣಿಸ ಬಹುದೇ?
ಬದುಕೆ ಹೀಗೆ ಅಲ್ಲವೆ!?
ಇದ್ದವರ ಮೆರೆದಾಟ,ಇಲ್ಲದವರ ತಿರುಪೆಯಾಟ!
ಬವಣೆಗೆ ಬಾರದ
ಈ ಅಕ್ಷರ-ಈ ಭಾವಗಳು
ಬೇಸಿಗೆ ಯಾದವೇ…?
ಮಳೆಯಾದವೇ….?
ಆದರೂ
ಬಿಡದೀ ಕಾಯಕ
ಒಂದಿಷ್ಟು ಪದಗಳಕಟ್ಟಿ
ಜೀವ ತುಂಬಿವೆ
ಜೀವದ ಎದೆಯು
ಉಸಿರಾಡಲು
ಆಸರೆಯಾಗಲು






0 Comments