ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಈ ಜಗವೇ ಸುಳ್ಳಲ್ಲವೇ…

-ಸೌಮ್ಯ ದಯಾನಂದ

ಯಾರಿಗೆ ಹೇಳಬೇಕಿತ್ತು..?

ರಾತ್ರಿ ಬಿದ್ದ ಕನಸಿನ ಪಸೆಯು
ಪುಡಿಗೂದಲಲ್ಲಿ ಸಿಕ್ಕಿಕೊಂಡು
ಆಗಾಗ ನನ್ನನ್ನು ಛೇಡಿಸುತ್ತಿದ್ದರೆ
ಯಾರು ಸಮಾಧಾನ ಹೇಳಬೇಕಿತ್ತು
ನೀನು ಮುಂಗುರುಳ ಸವರದಿದ್ದರೆ..

ನಾನು ಬರೆಯುವ
ಎಲ್ಲಾ ಅಕ್ಷರಗಳ ತಿರುವಿನಲ್ಲಿ ನಿಂತು
ನೀನು ದಾರಿಮುಳ್ಳ ತೆಗೆಯದಿದ್ದರೆ
ಹೇಗೆ ತಾನೇ ಸೇರಬೇಕಿತ್ತು
ಪ್ರೀತಿಯ ಪದವನ್ನು
ನಾನು ಯಾರಿಗೆ ಹೇಳಬೇಕಿತ್ತು
ನೀನು ಸಿಗದೇ ಹೋಗಿದ್ದರೆ ಅದನ್ನು…

ಹಿಡಿದ ಹಣತೆಯ ಎಣ್ಣೆ ತೀರಿ
ಮಬ್ಬುಗತ್ತಲಲಿ ನಾ ಎಡವಿದಾಗ
ಹೇಗೆ ತಲುಪಬಹುದಿತ್ತು
ಹೂಗಳ ಊರನ್ನು
ಕಣ್ಣಬೆಳಕಾಗಿ ನೀನಿರದಿದ್ದರೆ
ಈ ಹೆರಳಾದರೂ ಏಕಿರಬೇಕಿತ್ತು
ಅಲ್ಲಿ ನೀ ಮಲ್ಲಿಗೆ ಮುಡಿಸದಿದ್ದರೆ..

ಒಬ್ಬರು ಪುಸ್ತಕದ ಬೆನ್ನು
ಇನ್ನೊಬ್ಬರು ವೀಣೆಯ ನಾಡಿ
ಹಿಡಿದು ಹೋಗಿಬಿಟ್ಟರೆ
ಎದೆಯಲ್ಲಿ ತುಂಬಿಟ್ಟುಕೊಂಡ
ರಾಶಿ ಕವಿತೆಗಳನ್ನು
ಯಾರ ಮುಂದೆ ಹರವಬೇಕಿತ್ತು ನಾನು
ನಿನ್ನ ನಗುವಲ್ಲಿ ಪ್ರೀತಿ ಜಿನುಗದೇ
ಹೋಗಿದ್ದರೆ…

ಕೈತುಂಬಾ ಕೆಲಸವಿದ್ದರೂ
ನೀನು ಸಿಗುವ ಆ ಕ್ಷಣವನ್ನು
ನೆನೆ ನೆನೆದು ಹುರುಪುಗೊಳ್ಳುತ್ತೇನೆಂದರೆ
ಅದು ಹೇಗೆ ತಾನೇ ಸಾಧ್ಯವಿತ್ತು ಹೇಳು
ನನ್ನ ಉಸಿರಲ್ಲಿ ನೀನಿರದಿದ್ದರೆ
ನೀನು ನನ್ನವನಾಗದಿದ್ದರೆ…

ನಾನು ಯಾರು, ಅರಿವಿಲ್ಲ
ನೀನು ಯಾರು, ಗೊತ್ತಿಲ್ಲ
ನಾವು ಏನು, ಹೇಳಲು ಪದವಿಲ್ಲ
ನೀನಿಲ್ಲದೇ ಇಲ್ಲಿ ನನಗೇನೂ ಇಲ್ಲ
ನನ್ನಲ್ಲಿ ನೀನೇ ಇಲ್ಲ ಎಂದರೆ
ಈ ಜಗವೇ ಸುಳ್ಳಲ್ಲವೇ…

‍ಲೇಖಕರು Admin

24 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading