ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವಳೇ ಸದಾ ಕಾಲ ‘ಅಪೂರ್ಣ’

– ದರ್ಶನ್ ಕುಮಾರ್ (ಭಾವುಕ)

ತನ್ನನ್ನೇ ಕತ್ತರಿಸಿ ಕತ್ತರಿಸಿ
ಅವನ ಅಳತೆಯ ಫ್ರೇಮಿಗೆ
ಫಿಟ್ ಆಗಲು ಒದ್ದಾಡುತ್ತಿದ್ದಳು ಅವಳು.
ಅವನು ಬಲು ‘ಪರಿಪೂರ್ಣ’.

ತಪ್ಪಿಯೂ ಅವನ ಶರ್ಟಿನ ಗುಂಡಿಗಳು
ಮೇಲೆ-ಕೆಳಗಾದದ್ದಿಲ್ಲ.
ಅವನ ಪ್ರೀತಿಯೂ ಹಾಗೇ;
ಚೆನ್ನಾಗಿ ಇಸ್ತ್ರಿ ಮಾಡಿದ,
ಒಂದೂ ಮಡಿಕೆಯಿಲ್ಲದ
ಟೈಲರ್-ಮೇಡ್ ಒಣ ಪ್ರೀತಿ.

ಅವಳಿಗೆ ಆಗಾಗ ಅನ್ನಿಸುವುದುಂಟು;
ಯಾವನೋ ಪಕ್ಕಾ ಕುಡುಕನನ್ನೋ,
ಬೀದಿಯ ಭಿಕಾರಿಯನ್ನೋ
ನೆತ್ತಿಗೇರಿಸಿಕೊಳ್ಳಬೇಕಿತ್ತು!

ಕನಿಷ್ಠ,
ಅವನು ಮಾಡಿದ ವಾಂತಿಯನ್ನಾದರೂ ತೊಳೆಯುತ್ತಾ,
ನೆಲಕ್ಕೆ ಅಪ್ಪಳಿಸಿ ಒಡೆದ ಬಾಟಲಿಯ
ಚೂರುಗಳನ್ನು ಗುಡಿಸುತ್ತಾ..
‘ನಾನಿಲ್ಲದಿದ್ದರೆ ಇವನ ಗತಿಯೇನು’ ಎಂಬ
ರಾರಾಜಿಸುವ ಅಹಂಕಾರದಲ್ಲಾದರೂ
ಬದುಕಬಹುದಿತ್ತಲ್ಲ!
ಆದರೆ ಈ ಪರಿಪೂರ್ಣ ಗಂಡಸಿನೆದುರು
ಅವಳೇ ಸದಾ ಕಾಲ ‘ಅಪೂರ್ಣ’.

ಅವನು ತಪ್ಪು ಮಾಡುವುದೇ ಇಲ್ಲ,
ಹಾಗಾಗಿ ಅವನನ್ನು ‘ಕ್ಷಮಿಸಿ’
ದೊಡ್ಡವಳಾಗುವ ಅಧಿಕಾರವೂ
ಅವಳಿಗಿಲ್ಲ.
ಅವನ ಲೆಕ್ಕಾಚಾರದ ಬದುಕಿನಲ್ಲಿ
ಅವಳ ಕಣ್ಣೀರು ಮತ್ತು ಭಾವನೆಗಳೂ ಕೂಡ
ದಶಮಾಂಶಗಳ ಲೆಕ್ಕಕ್ಕೆ ಸಿಗುವ
‘ಸೈಡ್ ಎಫೆಕ್ಟ್’ಗಳಷ್ಟೇ.

ಒಮ್ಮೆ ಅವಳು,
ತನ್ನದೇ ಜೀವ ಹಿಂಡಿ,
ಕಡೆದು ಅವನಿಗೊಂದು
ಭಕ್ತಿಯಿಂದ ಮೂರ್ತಿ ಮಾಡಿದಳು.

ಅವನು ಒಮ್ಮೆ ಮೇಲಿಂದ ಕೆಳಕ್ಕೆ ಕಣ್ಣಾಡಿಸಿ-
“ಇದರ ಬಣ್ಣ ತುಸು ಡಾರ್ಕ್ ಆಯ್ತು,
ಬಟ್ ಇಟ್ಸ್ ಓಕೆ, ನೀನು ಯಾವತ್ತೂ
ಪರ್ಫೆಕ್ಟ್ ಅಲ್ವಲ್ಲ” ಎಂದುಬಿಟ್ಟ.

ಆ ಕ್ಷಣ ಸಿಡಿದೆದ್ದ ಅವಳು,
ಅವನ ಮುಖಕ್ಕೊಮ್ಮೆ ಉಗುಳಿ
ಬಾಗಿಲು ಬಡಿದು ಹೊರನಡೆಯಬೇಕಿತ್ತು…

ಬದಲಿಗೆ,
ತನ್ನದೇ ನರಗಳನ್ನು ಕತ್ತರಿಸಿ
ಇನ್ನಷ್ಟು ‘ಬ್ರೈಟ್’ ಆದ ರಕ್ತ
ಬರುತ್ತದೆಯೇನೋ ಎಂದು
ಪರೀಕ್ಷಿಸುವ ಹುಚ್ಚಿಗೆ ಬಿದ್ದಳು.

ಕೊನೆಯಲ್ಲಿ ಉಸಿರು ಬಿಡುವಾಗಲೂ
ಅವಳಿಗೆ,
ತನ್ನ ಹೆಣದ ಭಂಗಿ
ಅವನ ಅಚ್ಚುಕಟ್ಟಾದ ಡ್ರಾಯಿಂಗ್ ರೂಮಿಗೆ
ಮ್ಯಾಚ್ ಆಗುತ್ತದೋ ಇಲ್ಲವೋ
ಎಂಬುದೇ ದೊಡ್ಡ ಚಿಂತೆಯಾಗಿತ್ತು

‍ಲೇಖಕರು Admin

1 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading