ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕೆಂಬ ವರ್ಣಮಾಲೆ

-ಕವಿತಾ ವಿರೂಪಾಕ್ಷ

ಬದುಕೆಂಬ ವರ್ಣಮಾಲೆ

ಹೃಸ್ವ ದೀರ್ಘ
ಕೊಂಬು ವಟ್ರಸುಳಿ
ಏತ್ವ ಐತ್ವ ತಪ್ಪಾದಾಗ
ಕೈ ಹಿಡಿದು ತಿದ್ದಿಸಬಹುದು ಮಗು, ಹಾಗೇಯೇ
ಒತ್ತಕ್ಷರಗಳು ತಪ್ಪಾದಾಗಲೂ: ಸರಿಯಾಗುವವರೆಗೂ ಈ ಪ್ರಯತ್ನ ಜಾರಿಯಲ್ಲಿರುತ್ತದೆ.

ಆದರೆ
ಜೀವನ ಹಾಗಲ್ಲವಲ್ಲ
ಪ್ರಯತ್ನ, ಪ್ರಮಾದಗಳು
ಜಾಸ್ತಿಯಾದರೆ
ಬದುಕು ನಮ್ಮನ್ನು ಬಿಟ್ಟು
ಬಹುದೂರ ಓಡಿರುತ್ತದೆ.

ಕೆಲವೊಮ್ಮೆ ಅನುಸ್ವಾರ ವಿಸರ್ಗಗಳಂತೆ
ಯಾರು ಯಾರನ್ನೋ
ಹೊತ್ತು ನಡೆಯಬೇಕಾಗುತ್ತದೆ
ಆಗ ಜವಾಬ್ದಾರಿಗೆ ಬೆನ್ನುಬಾಗಿ
ಅತಿಭಾರಕ್ಕೆ ಅಂಗಾತ ಬೀಳಬಾರದು
ಒತ್ತಕ್ಷರದಂತೆ ಯೋಗ್ಯರನ್ನೂ, ಅನುಸ್ವಾರ ವಿಸರ್ಗದoತೆ
ವಿವೇಕಿಗಳನ್ನೂ ಹೊತ್ತು ತಿರುಗಬೇಕು
ತಪ್ಪಾದ ಯಾವ ಭಾರಕ್ಕೂ
ಬೆಲೆಯಿಲ್ಲ ಇಲ್ಲಿ …

ಸ್ವರಗಳಂತೆ ಸ್ವತಂತ್ರವಾಗಿ ನಡೆವಾಗ ಆತ್ಮವಲೋಕನ
ವ್ಯಂಜನಗಳಂತೆ ಅವಲಂಬಿತವಾದಾಗ ಪ್ರಜ್ಞೆ ಜಾಗ್ರತೆಯಿರಲಿ.

ಜಗದ ವರ್ಣಮಾಲೆಯಲ್ಲಿ
ಸ್ವರ ವ್ಯಂಜನ ಯೋಗವಾಹಗಳಲ್ಲಿ
ಅಲ್ಪಪ್ರಾಣ ಮಹಾಪ್ರಾಣ ಅನುನಾಸಿಕಗಳ ಸ್ಥಾನವೂ
ತುಂಬಾ ಮುಖ್ಯ ಕಡೆಗಣಿಸಬೇಡ.
ಹಾಗೆಯೇ
ಬದುಕಲ್ಲೂ,
ಎಲ್ಲ ಎನ್ನುವ ಎಲ್ಲರೂ ಬೇಕು
ಆದರೆ
ವರ್ಣಮಾಲೆಯಂತೆ ಪ್ರತಿಯೊಂದರ ಉಚ್ಛಾರ ಸ್ಫುಟವಾಗಿರಬೇಕು
ಉಚ್ಚಾರ ಬದಲಾದರೆ
ಪದವೂ ತಪ್ಪು
ಹಾಗೆಯೇ ಈ ಬದುಕೂ…

‍ಲೇಖಕರು Admin

11 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading