ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು

ಸಿ ಎಂ ಮುನಿಯಪ್ಪ ಹಸಾಳ ಅವರ ‘ಕಾಲಡಿಯ ಕಣ್ಣು’

‘ಮುಂಗೋಳಿ ಪ್ರಕಾಶನ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತ ಸತೀಶ್ ಜಿ ಟಿ ಅವರ ಬರಹ ಇಲ್ಲಿದೆ.

-ಸತೀಶ್ ಜಿ ಟಿ

ಈಗಷ್ಟೇ ಆಕೃತಿ ಗುರು ಅವರು ಫೇಸಬುಕ್ ನಲ್ಲಿ ಹಂಚಿಕೊಂಡಿದ್ದ ವಿಡಿಯೋ ನೋಡಿದೆ. ಅವರು ಹೆಸರಿಸಿದ “ಕಾಲಡಿಯ ಕಣ್ಣು” ಪುಸ್ತಕವನ್ನು ಇತ್ತೀಚೆಗಷ್ಟೇ ಓದಿದೆ. ಒಂದೆರಡು ಮಾತು ನಾನೂ ಬರೆಯಬೇಕು ಎನಿಸಿತು.

ಮನೆಯಲ್ಲಿ ಈ ಪುಸ್ತಕ ನನ್ನ ಕೈಗೆ ಬಂದಾಗ, ಮೊದಲು ಗಾತ್ರ ನೋಡಿ ಬೆಚ್ಚಿದೆ. 720 ಪುಟಗಳು. ಹೆಚ್ಚು ಕಮ್ಮಿ ಇದೇ ಗಾತ್ರದ ಹಲವು ಪುಸ್ತಕಗಳನ್ನು ಓದಲು ಆರಂಭಿಸಿ, ನಾನಾ ಕಾರಣಗಳಿಂದ ನಡುವಿನಲ್ಲೇ ಕೈ ಚೆಲ್ಲಿದ ಅನೇಕ ಉದಾಹರಣೆ ಇರುವಾಗ, ಇದೂ ಹಾಗೆಯೇ ಆಗುತ್ತದೆಯೇನೋ ಎಂಬ ಅನುಮಾನ ಇತ್ತು. ಆದರೆ ಹಾಗಾಗಲಿಲ್ಲ. ಒಮ್ಮೆ ಓದಲು ಶುರು ಹಚ್ಚಿದ ಮೇಲೆ Unputdownable ಅಂತಾರಲ್ಲ…ಹಾಗಾಯ್ತು.

ಇದು ಕರ್ನಾಟಕದ ಕತೆ. ಜನಚಳವಳಿಗಳ ಕತೆ. ಮುಖ್ಯವಾಗಿ ದಲಿತ ಸಂಘರ್ಷ ಸಮಿತಿ ಎಂಬ “ವಿಶ್ವವಿದ್ಯಾನಿಲಯದ” ಕತೆ. ಅಲ್ಲಿರುವ ಪ್ರೊಫೆಸರ್ ಗಳು, ಮಾರ್ಗದರ್ಶಕರು, ವಿದ್ಯಾರ್ಥಿಗಳ ಕತೆ. ಮುನಿಯಪ್ಪನವರು ವರ್ಷ, ತಿಂಗಳು, ದಿನಾಂಕ ಸಮೇತ ಘಟನೆಗಳನ್ನು ಕಟ್ಟಿ ಕೊಡುತ್ತಾರೆ. ಪುಟಗಳನ್ನು ತೆರೆದಂತೆ ಅಲ್ಲಲ್ಲಿ ತುಣುಕಾಗಿ ಕೇಳಿದ, ಓದಿದ, ನೂರಾರು ಘಟನೆಗಳು ವಿವರವಾಗಿ ತೆರೆದುಕೊಳ್ಳುತ್ತವೆ.

ಆರಂಭದ ಪುಟಗಳಲ್ಲಿ ನಿರೂಪಿತವಾಗಿರುವ ಎನ್. ರಾಚಯ್ಯನವರ ವ್ಯಕ್ತಿತ್ವ ಮನಸೆಳೆಯುತ್ತದೆ. ಕೆಲವು ಸಂದರ್ಭಗಳನ್ನು ಅವರು ನಿರ್ವಹಿಸಿದ ರೀತಿ ಅಪರೂಪದ್ದು. ಜನಪ್ರಿಯ ಮಾದರಿಯ ಚಿತ್ರವೊಂದರ ಹೀರೋ ತರಹ ಅವರು ಕಾಣುತ್ತಾರೆ. ಇನ್ನೂ ಮುಂದೆ ಹೋಗಿ ಹೇಳುವುದಾದರೆ, ಇಲ್ಲಿ ಇಂತಹ ಹಲವು ಹೀರೋಗಳಿದ್ದಾರೆ. ನಮ್ಮ ಕಾಲಕ್ಕೆ ಮುಗಿಯಲಾರದ ನೂರಾರು ಎಪಿಸೋಡ್ ಗಳ ವೆಬ್ ಸೀರೀಸ್ ಗೆ ಆಗುವಷ್ಟು ಸರಕನ್ನು ತುಂಬಿಕೊಂಡಿದೆ ಈ ಪುಸ್ತಕ.

ನಾವು ಇತ್ತೀಚೆಗೆ ದೆಹಲಿ ಹಾಗೂ ದೇಶದ ಅಲ್ಲಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಹೋರಾಡಿದ್ದನ್ನು ನೋಡಿದ್ದೇವೆ. ಈ ಹೋರಾಟದ ಬಗ್ಗೆ ದೇಶಾದ್ಯಂತ ಸಾಕಷ್ಟು ಚರ್ಚೆ, ವಿಶ್ಲೇಷಣೆ ಆಗಿವೆ. ಅದೇ ರೀತಿ ದಲಿತ ಸಂಘರ್ಷ ಸಮಿತಿಯ ಹೋರಾಟಗಳ ಜೊತೆಯಾದವರೂ ನೂರಾರು ವಿದ್ಯಾರ್ಥಿಗಳು.

ಊಟ ಬಿಟ್ಟು, ಪೊಲೀಸರ ಲಾಟಿ ಏಟಿಗೆ ಮೈಯೊಡ್ಡಿ ನ್ಯಾಯಕ್ಕಾಗಿ ಹೋರಾಡಿದವರು ಕಾಲೇಜು ಹುಡುಗರು. ಅಷ್ಟೇ ಅಲ್ಲ, ಕ್ರೂರ ಜಮೀನ್ದಾರರ, ಶೋಷಕ ಸಮುದಾಯದ ದಬ್ಬಾಳಿಕೆಗೆ ಗುರಿಯಾಗಿದ್ದೂ ಇದೇ ವಿದ್ಯಾರ್ಥಿಗಳು. 1970-80 ರ ದಶಕಗಳಲ್ಲಿ ಅತ್ಯುತ್ಸಾಹದಿಂದ ಹೋರಾಟಗಳಲ್ಲಿ ಭಾಗವಹಿಸಿ ಕರ್ನಾಟಕದ ಚರಿತ್ರೆಯನ್ನೆ ಬರೆದವರು ಈಗಲೂ ನಮ್ಮ ಮಧ್ಯೆ ಇದ್ದಾರೆ. ಅವರ ಶ್ರಮ, ಬೆವರು, ಬಲಿದಾನಗಳನ್ನೆಲ್ಲಾ ದಾಖಲಿಸುವ ಮಹತ್ವದ ಕೃತಿ ಈ ‘ಕಾಲಡಿಯ ಕಣ್ಣು’.

ಕೋಲಾರ ಜಿಲ್ಲೆಯ ಅತ್ಯಾಚಾರ-ಕೊಲೆ ಪ್ರಕರಣದ ವಿರುದ್ಧ ದಸಂಸ ಪಾದಯಾತ್ರೆ ಮಾಡಿಕೊಂಡು ವಿಧಾನಸೌಧಕ್ಕೆ ಬಂದರೆ, ಪೊಲೀಸರು ಹೋರಾಟಗಾರರನ್ನು ಹಿಡಿದು ಬಡಿದರು. ಅಲ್ಲಿ ಪೊಲೀಸರ ದೌರ್ಜನ್ಯ ಅನುಭವಿಸಿದವರಲ್ಲಿ ಆ ಪ್ರಕರಣದಲ್ಲಿ ನೊಂದ ಮಹಿಳೆಯೂ ಸೇರಿದ್ದರು. ನಮ್ಮ ವ್ಯವಸ್ಥೆ ಎಷ್ಟು ಕ್ರೂರವಾಗಿ ಅವರನ್ನು ನಡೆಸಿಕೊಂಡಿತ್ತು ಎನ್ನುವುದನ್ನು ನಾವು ಮರೆಯಬಾರದು.

ಇದೇ ರೀತಿ, ಈ ಕೃತಿಯಲ್ಲಿ ಸವಿವರವಾಗಿ ನಿರೂಪಿತವಾದ ಇನ್ನೊಂದು ಪ್ರಕರಣ ಚಂದ್ರಗುತ್ತಿ ಬೆತ್ತಲೆ ಸೇವೆ ವಿರುದ್ಧ ಹೋರಾಟದ್ದು. ದಸಂಸ ನಾಯಕರು, ಇತರೆ ಪ್ರಗತಿಪರರು ಎಲ್ಲಾ ತೀವ್ರ ಹಿಂಸೆ ಅನುಭವಿಸಿದ ಘಟನೆ ಇದು. ಅಮಾನವೀಯ ಆಚರಣೆಯ ಪರ ಇದ್ದ ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಬೆತ್ತಲೆ ಮಾಡಿ ದಂಡಿಸಿದ್ದರು. ಅದರ ವಿವರಗಳನ್ನು ಓದುವಾಗ ಬೆತ್ತಲೆ ಸೇವೆ ಯಾವುದೇ ಕಾರಣಕ್ಕೂ ನಿಲ್ಲಬಾರದು ಎಂಬ ಹಟತೊಟ್ಟಿದ್ದ ಪಟ್ಟಭದ್ರರ ಬಗ್ಗೆ ಆಕ್ರೋಷ ಹುಟ್ಟುತ್ತದೆ. ಯಾರು ಅವರೆಲ್ಲಾ ಎಂದು ತಿಳಿಯ ಬಯಸುವವರು ಪುಸ್ತಕವನ್ನು ಒಮ್ಮೆ ತಪ್ಪದೇ ಓದಲಿ.

ಹಾಗೆಯೇ, ದಬ್ಬಾಳಿಕೆಯ ಪರಮಾವಧಿಯನ್ನು ಚಿತ್ರಿಸುವ ಒಂದು ಘಟನೆ 1987 ರ ಆಗಸ್ಟ್ 3 ರಂದು (ನೆನ್ನೆಗೆ 39 ವರ್ಷಗಳ ಹಿಂದೆ) ಬೆಳಗಾವಿಯ ಬೆಂಡಿಗೇರಿಯಲ್ಲಿ ನಡೆಯುತ್ತದೆ. ಮನುಷ್ಯ ಅದೆಷ್ಟು ಕ್ರೂರಿ, ನೀಚ, ನಿರ್ಲಜ್ಜ, ಮತಿಹೀನ..ಎನ್ನುವುದಕ್ಕೆ ಈ ಘಟನೆ ಒಂದು ಉದಾಹರಣೆ. ಅದರ ಬಗ್ಗೆ ಈ ಮೊದಲು ಬಿ.ಟಿ.ಜಾಹ್ನವಿಯವರು ತಮ್ಮ ತಂದೆ ಡಾ.ತಿಪ್ಪೇಸ್ವಾಮಿಯವರ ನೆನಪಿನಲ್ಲಿ ಹೊರತಂದ ‘ಮುಟ್ಟಿಸಿಕೊಂಡವರು’ ಪುಸ್ತಕದಲ್ಲಿ ಓದಿದ್ದೆ.

ದಸಂಸ ಕತೆಯ ಜೊತೆಗೆ ಮುನಿಯಪ್ಪರ ಕತೆಯೂ ಹೌದು. ಅವರ ನಿರೂಪಣೆ ಪುಸ್ತಕದ ಯಶಸ್ಸಿಗೆ ಕಾರಣ. ಅವರು ಎಂತಹದೇ ಸಂಕಷ್ಟದ, ನೋವಿನ ಸಂಗತಿಯನ್ನು ನಿರೂಪಿಸುವಾಗಲೂ ಓದುಗರಿಂದ ಸಿಂಪತಿ ಬಯಸುವ ದನಿಯ ಮೊರೆ ಹೋಗುವುದಿಲ್ಲ. ದಸಂಸ ಕಾರ್ಯಗಾರಗಳ ಮಾಹಿತಿಯನ್ನು ವಿವರವಾಗಿ ನೀಡುತ್ತಾರೆ. ಓದುವಾಗ, ನಾವೇ ದಶಕಗಳ ಹಿಂದೆ ನಡೆದ ಕಾರ್ಯಗಾರದಲ್ಲಿ ಭಾಗವಹಿಸಿದ ಅನುಭವ ಆಗುತ್ತದೆ. ಆಗಾಗ ನಿರೂಪಣೆಯಲ್ಲಿ ಸುತ್ತಲಿನ ಗಿಡ, ಮರ, ಹಕ್ಕಿಗಳನ್ನೂ ಸೇರಿಸಿಕೊಳ್ಳುತ್ತಾರೆ. ಹಾಗಾಗಿ ಬರಹ ತುಂಬಾ ಆಪ್ತವಾಗಿದೆ.

ಅವರು ಅದೊಂದು ದಿನ ಯಾವುದೋ ಪ್ರತಿಭಟನೆಯ ಸಭೆಗೆ ಹೋಗಿರುತ್ತಾರೆ. ಪತ್ನಿ ಕೆಲಸಕ್ಕೆ ಹೋಗಿರುತ್ತಾರೆ. ಅನಿವಾರ್ಯವಾಗಿ ಮಗು ಮನೆಯ ಅಂಗಳದಲ್ಲಿಯೇ ಇರಬೇಕಾಗುತ್ತದೆ. ಮಧ್ಯಾಹ್ನ ಎಷ್ಟೋ ಹೊತ್ತಿಗೆ ಮುನಿಯಪ್ಪ ಮನೆಗೆ ಬಂದಾಗ, ಮಗು ಆಟ ಆಡಿ ಅಲ್ಲಿಯೇ ಮಲಗಿರುತ್ತೆ. ಅದನ್ನು ಕಂಡ ಮುನಿಯಪ್ಪನವರಿಗೆ ಕಣ್ಣೀರು. ಇಂತಹ ಅನೇಕ ದೃಶ್ಯಗಳು ಕೃತಿಯ ಉದ್ದಕ್ಕೂ ಇವೆ.

ದಸಂಸ ತನ್ನ ಹೋರಾಟಗಳ ಮೂಲಕ ನೂರಾರು ಜನರ ಬದುಕನ್ನು ಹಸನುಗೊಳಿಸಿದೆ. ಅವರು ಅನ್ನ, ಅಕ್ಷರ, ಭೂಮಿ ಪಡೆದಿದ್ದಾರೆ. ಅದೆಲ್ಲದರ ಜೊತೆಗೆ ಬಹುದೊಡ್ಡ ಸಮುದಾಯವನ್ನು ಎಚ್ಚರಿಸಿದೆ. ನೊಂದವರಿಗೆ ಅವರ ಹಕ್ಕುಗಳನ್ನು ಪರಿಚಯಿಸುವುದಷ್ಟೇ ಅಲ್ಲ, ಶೋಷಕ ಗುಂಪುಗಳಿಗೆ ಸಹಬಾಳ್ವೆಯ ಪಾಠ ಮಾಡಿದೆ. ಕರ್ನಾಟಕದ ಚರಿತ್ರೆ ತಿಳಿಯ ಬಯಸುವವರಿಗೆ ಇದೊಂದು ಪ್ರಮುಖ ಹೊತ್ತಗೆ.

‍ಲೇಖಕರು Admin

11 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading