-ಸಾಮಂತ್ರಿ ಜ್ಯೋತಿ
ಅಸ್ತಿತ್ವ
ಅವತ್ತು
ಬದುಕಿನ ಆಶಯದ ರೆಕ್ಕೆಗಾಗಿ
ಮನೆಯಡವಿಟ್ಟು ನೀನು
ಲೋನಿನ ಪೇಪರಿಗೆ ಹೆಬ್ಬೆಟ್ಟು ಒತ್ತಿದ್ದೆ..
ಸಂಕ್ರಾ೦ತಿಯ ಎತ್ತುಗಳ ಬಣ್ಣಕ್ಕೆ ರಜೆಮಾಡಿ
ಆ ದುಡ್ಡಲ್ಲಿ ಸ್ಟೆತೋಸ್ಕೋಪೊಂದು ತಂದು
ಟ್ರ೦ಕಲ್ಲಿ ಅಡಗಿಸಿಟ್ಟು ಆಗಾಗ ನೋಡಿ ನಗುತಿದ್ದೆ..
ನಾವೂ
ಹಗಲು-ರಾತ್ರಿಗಳ ತೂಗದೇನೆ
ಬೆನ್ನುಮೂಳೆಯ ಗೋಡೆಗೆಕಟ್ಟಿ
ಕಣ್ಣೆವೆಯಿಕ್ಕದೆ ಭವಿತದ ಕನಸಿದ್ದೆವು..
ಆಟ-ಸ್ನೇಹ-ಸಂಬ೦ಧಗಳನೆಲ್ಲ ಬದಿಗಿಟ್ಟು
ಸಾಧನೆಯ ಊರಿಗೋಗಲು,
ಆಸೆಯ ಊರುಗೋಲಿಡಿದು ತಯಾರಾಗಿದ್ದೆವು
ನಮಗೆ
ಕಷ್ಟಪಟ್ಟರೆ,
ಚಂದ ಓದಿದರೆ ಬಾಳುವೆ
ಬಂಗಾರವೆ೦ದು ಸುಳ್ಳು ಹೇಳಲಾಗಿತ್ತು..
ಸತ್ಯ-ಪ್ರಾಮಾಣಿಕತೆ-ನ್ಯಾಯ-ನೀತಿ
ಎಂಬ ಆರ‍್ಶಗಳು ಸದಾ ನಮ್ಮನ್ನ
ಕಾಯುತ್ತವೆಯೆಂದು ಸುಳ್ಳುಹೇಳಲಾಗಿತ್ತು
ದೇಶವೆಂದರೆ ಅಲ್ಲಿನ ಜನ,
ಮಣ್ಣು-ಗಾಳಿ-ಗಿಡ-ಮರ-ನದಿ-ತೊರೆ
ದೇಶಪ್ರೇಮವೆಂದರೆ ಅದನೆಲ್ಲ
ಜೋಪಾನ ಮಾಡುವುದೆಂದು ಸುಳ್ಳು ಹೇಳಲಾಗಿತ್ತು
ಎಲ್ಲದಕಿಂತ ಹೆಚ್ಚಾಗಿ; ಮಾತು ಮಾತಿಗೆ
ಮಕ್ಕಳೆಂದರೆ ದೇವರು
ರ‍್ಕಾರಿ ಕೆಲಸ ದೇವರದೆಂದು ಸುಳ್ಳು ಹೇಳಲಾಗಿತ್ತು
ಈಗ
ನಾನೂ ಅಲ್ಲಿಗೆ ಹೋಗಿದ್ದೆನಪ್ಪ
ಲಾಠಿಗಳಲ್ಲಿ.. ಕಣ್ಣೀರು ತರಿಸೋ ರಸಾಯನದಲ್ಲಿ..
ಗುಂಡಿನಲ್ಲಿ.. ಸಮವಸ್ತ್ರದೊಳಗಿನ ಗುಂಡಿಗೆಗಳಲ್ಲಿ..
ದೊಡ್ಡವರ ಸಣ್ಣತನಗಳಲ್ಲಿ
ನನಗೆ
ನಮ್ಮೆದೆಯಲ್ಲಿ ನೆಟ್ಟಿದ್ದ
ಶಾಲೆಯಂಗಳದ ಹೂವಿನ
ಒಣಗಿದ ದಳವೂ ಕಾಣಲಿಲ್ಲ ಅಪ್ಪ
ನ್ಯಾಯ ಕೇಳುವ ನಮ್ಮನ್ನ
ದೇಶದ್ರೋಹಿಗಳೆನ್ನುವ
ಈ ಪ್ರಬುದ್ಧ ಸಮಾಜದಲ್ಲಿ
ನಾವು ಕಲಿತಂತೆ ಬದುಕುವುದು
ಬಹುಶಃ ಸಾಧ್ಯವಿರಲಿಲ್ಲ ಅಪ್ಪ..
ನಿನಗೂ ಅನಿಸಬಹುದು
ನಿನ್ನ ಹೆಗಲುಣಿಸಿದ ಮಮತೆಯ ಕೂಸಿಗೆ
ಇಂಥದೆ ವ್ಯವಸ್ಥೆಯ ಭಾಗವಾಗುವ
ತಾಕತ್ತಿರಲಿಲ್ಲವೆಂದು..
ನಂಗೊತ್ತು,
ನಾನಿದ್ದಿದ್ದರೆ
ನೀನು ಖಂಡಿತ ರಕ್ತಬಸಿದು
ಮತ್ತೊಂದಿಷ್ಟು ದಿವಸ
ಹುಸಿಖುಷಿಗಳಲೆ ಬದುಕುತಿದ್ದೆ..
ಸಾವಿಗೆ ಸಮರ‍್ಥನೆಗಳಿಲ್ಲ ಅಪ್ಪ
ನಮ್ಮಂಥವರ ಅಸ್ತಿತ್ವಕ್ಕೆ ಇಲ್ಲಿ ರ‍್ಯಾದೆಯೂ..






0 Comments