ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬದುಕನ್ನೇ ಬದಲಾಯಿಸಿದ ಯೂನಿವರ್ಸಿಟಿ 

-ಲಾವಣ್ಯ ಎಸ್

ಅಂದು ಸುಮಾರು 3 ಗಂಟೆ  ಆಗಿತ್ತು,ಕಂಪ್ಯೂಟರ್ ನೆಟ್ವರ್ಕ್ಸ್ ಕ್ಲಾಸ್ ಮುಗಿಸಿಕೊಂಡು ನಾನು ಮತ್ತು ನನ್ನ ಸ್ನೇಹಿತರೆಲ್ಲ ಊಟ ಮಾಡಲೆಂದು ಹೊರಟೆವು, ಸ್ಟೂಡೆಂಟ್ ಸೆಂಟರ್ ಹತ್ತಿರ ಹೊಸದಾಗಿ ರೆಸ್ಟೋರಂಟ್ ಶುರುವಾಗಿದೆ ಹೋಗೋಣ ಎಂದು ಗೆಳೆಯರ ಗುಂಪಿನ ಸೀನಿಯರ್ ಹೇಳಿದ, ಸರಿ ಎಂದು ಹೊರಟೆವು, ಒಂದು ಪಿಜ್ಜಾ ಅಂಗಡಿ, ಒಂದು ಟ್ಯಾಕೋ ಅಂಗಡಿ ಹಾಗು ಒಂದು ಮ್ಯಾಕ್ ಡೊನಾಲ್ಡ್ ರೆಸ್ಟೋರೆಂಟ್ ಗಳಿದ್ದವು.

ಪಿಜ್ಜಾ ರೆಸ್ಟೋರೆಂಟ್ ನಲ್ಲಿ ಸಣ್ಣ ಸಣ್ಣ ಪರ್ಸನಲ್ ಪಿಜ್ಜಾ ಗಳನ್ನ ಇಟ್ಟಿದ್ದರು,  ನಮ್ಮ ಕಾಲೇಜು ಕ್ಯಾಂಪಸ್ ನಲ್ಲಿ ಸಸ್ಯಾಹಾರಿ ಊಟಗಳೇ ಅಪರೂಪ, ಸಿಕ್ಕಿದ್ದನ್ನೇ ಪ್ರಸಾದ ಎಂದುಕೊಂಡು ತಿನ್ನಬೇಕು. ಅದಾಗಲೇ ಸಿಕ್ಕಾಪಟ್ಟೆ ಹಸಿವಾಗಿತ್ತು, ಚೀಸ್ ಪಿಜ್ಜಾ ನೋಡಿ ಅದಾಗಲೇ ಬಾಯಲ್ಲಿ ನೀರು ಬಂದಿತ್ತು. ಸುಮಾರು 6-7 ಜನ ನಮ್ಮ ಮುಂದೆ ಸಾಲಿನಲ್ಲಿ ನಿಂತಿದ್ದರು. ಕಾದು ಕಾದು ಕೊನೆಗೂ ನಮ್ಮ ಸರದಿ ಬಂದಿತು, ನಿಮಗೇನು ಬೇಕು ಎಂದು ಅಲ್ಲಿ ಕೆಲಸ ಮಾಡುವವಳು ಕೇಳಿದಳು, ಆಕೆಯೂ ನಮ್ಮ ರೀತಿ ವಿದ್ಯಾರ್ಥಿಯೇ ಆದರೆ ತರಗತಿ ಇಲ್ಲದಿರುವ ಸಮಯದಲ್ಲಿ ಬೇರೆ ಬೇರೆ ರೆಸ್ಟೋರೆಂಟ್, ಅಂಗಡಿಗಳಲ್ಲಿ ವಿದ್ಯಾರ್ಥಿಗಳು ಕೆಲಸ ಮಾಡುತ್ತಾರೆ.  ನಮ್ಮ ಸೀನಿಯರ್ ನಮ್ಮ ಮುಂದೆ ನಿಂತಿದ್ದ, ಆತ ಕೇಳಿದ, ” ಒಂದು ಪರ್ಸನಲ್ ಸೈಜ್ ಪಿಜ್ಜಾ ಗೆ ಎಷ್ಟು?”, ಎಂದು.  “ಒಂದು ಪಿಜ್ಜಾ ಐದು ಡಾಲರ್” ಎಂದು ಆಕೆ ಹೇಳಿದಳು.  ನಮ್ಮ ಸೀನಿಯರ್ ಗೆ ಆಶ್ಚರ್ಯವೇ ಆಯಿತು ಅವನ ಹಿಂದೆಯೇ ನಿಂತಿದ್ದ ನಮಗೆಲ್ಲ ಹೇಳಿದ, “ನಡೀರಿ, ನಡೀರಿ ಇಲ್ಲಿ ತುಂಬಾ ದುಬಾರಿ, ಒಂದು ಊಟಕ್ಕೆ ಐದು ಡಾಲರ್ ಕೊಟ್ಟರೆ ನಮ್ಮ ಸೆಮೆಸ್ಟರ್ ಮುಗಿಯುವಷ್ಟರಲ್ಲಿ ಪಾಪರ್ ಆಗುತ್ತೇವೆ, ನಡೀರಿ ನಾವೆಲ್ಲಾ ಕೇಸಾಡಿಯಾ ತಿನ್ನೋಣ” ಅಂತ ಕರೆದುಕೊಂಡು ಬಂದ .  

ಪಿಜ್ಜಾ ಹೋಟೆಲಿನ ಹುಡುಗಿ ನಾವೆಲ್ಲಾ ಒಟ್ಟಿಗೆ ವಾಪಸ್ ಹೋರಾಡುವುದನ್ನು ನೋಡಿ “ವಾಟ್ ಹ್ಯಾಪಂಡ್ ?,  ವಾಟ್ಸ್ ರಾಂಗ್ ” ಅಂತ ಕೇಳಿದಳು. ಏನಿಲ್ಲ ಏನಿಲ್ಲ ಅನ್ನುತ್ತಾ ನಾವೆಲ್ಲಾ ನಮ್ಮ ಸೀನಿಯರ್ ಜೊತೆಗೆ ಹೊರಟೆವು. 

ನಮಗೆ ಆಗ  ಕೇಸಾಡಿಯಾ ಅಂದರೆ ಏನೆಂದು ಕೂಡ ಗೊತ್ತಿಲ್ಲ, ಹೆಸರೇನೋ ಚೆನ್ನಾಗಿದೆಯಲ್ಲ ,ಅದೂ ಬರೀ ಒಂದು ಡಾಲರ್ ಗೆ ಸಿಗುತ್ತಲ್ಲ ಅಂತ ಸುಮ್ಮನೆ ಅವನ ಹಿಂದೆ ಹೊರಟೆವು, ಟ್ಯಾಕೋ ಬೆಲ್ ಮುಂದೆ ಬಂದು ನಿಂತೆವು , ಮತ್ತೆ ಅಲ್ಲಿ 10-12 ಜನರ ಉದ್ದದ ಕ್ಯೂ, ಸರಿ ಇನ್ನೇನೂ ಮಾಡಲು ತೋಚದೆ ನಮ್ಮ ಸರದಿಗಾಗಿ ಕಾಯುತ್ತಾ ನಿಂತೆವು, ಕಾದು  ಕಾದು  ಕೊನೆಗೂ  ಕೇಸಾಡಿಯಾ ಸಿಕ್ಕಿತು, ಅಂತಹ ವಿಶೇಷವೇನಲ್ಲ ಒಂದು ಚಪಾತಿಗೆ ಮಧ್ಯದಲ್ಲಿ ಚೆನ್ನಾಗಿ ಚೀಸ್ ಹಾಕಿ ಟೋಸ್ಟ್ ಮಾಡಿರುತ್ತಾರೆ, ಅದನ್ನು ಟೊಮೇಟೊ ಕೆಚಪ್ ಮತ್ತು ಹಾಟ್ ಸಾಸ್ ಜತೆಗೆ ತಿನ್ನಬೇಕು. ಚೆನ್ನಾಗಿ ಹಸಿವಾಗಿ,  ಹೊಟ್ಟೆ ಕಾದ ಹೆಂಚಿನಂತೆ ಆಗಿತ್ತು , ಐದೇ ನಿಮಿಷದಲ್ಲಿ ಖಾಲಿ ಮಾಡಿ ಒಬ್ಬರ ಮುಖ ಒಬ್ಬರು ನೋಡುತ್ತಾ ಕೂತೆವು.  ನಮ್ಮಲ್ಲಿ ಒಬ್ಬ ಗೆಳತಿ ಫೌಂಟನ್ ಡ್ರಿಂಕ್ ಅಂತ ಒಂದು ಕೋಕಾ ಕೋಲಾ ತೆಗೆದುಕೊಂಡಿದ್ದಳು. ಅಮೆರಿಕಾದಲ್ಲಿ ಒಮ್ಮೆ ಫೌಂಟನ್ ಡ್ರಿಂಕ್ ಲೋಟ ತೆಗೆದುಕೊಂಡರೆ ನಾವು ಎಷ್ಟು ಬಾರಿಯಾದರೂ ಕೂಲ್ ಡ್ರಿಂಕ್ಸ್ ರೀಫಿಲ್ ತಗೆದುಕೊಳ್ಳಬಹುದು ಅಂತ ನಮಗೆ ಅಂದೇ ಗೊತ್ತಾಗಿದ್ದು.  ನಮ್ಮ ಗೆಳತಿ 3-4 ಸಲ ಕೋಕಾಕೋಲಾ ತುಂಬಿಸಿ ಕೊಂಡು ಬಂದಳು , ನಾವೆಲ್ಲಾ ಅದನ್ನೇ ಕುಡಿದು ಹೊಟ್ಟೆ ತುಂಬಿತು ಎಂದು ಕೊಂಡು ಬಸ್ ಸ್ಟಾಪ್ ಕಡೆಗೆ ಹೊರಟೆವು. 

ಹೀಗೆ ಮೊದಮೊದಲು ೫ ಡಾಲರ್ ಎಂದರೆ ದುಬಾರಿ ಎಂದು ತಿಳಿಯುತ್ತಿದ್ದ ನಮಗೆ ಇನ್ನೆರಡು ವರ್ಷ ಚೆನ್ನಾಗಿ ಓದಿ ಕೆಲಸ ಗಿಟ್ಟಿಸಿಕೊಂಡರೆ ಕೈ ತುಂಬಾ ಸಂಬಳ ಸಿಗುತ್ತದೆ ಎಂಬುದು ಕೂಡ ತಿಳಿದಿತ್ತು.   

ನಾವೆಲ್ಲಾ ಒಂದು ತಿಂಗಳ ಹಿಂದಷ್ಟೇ ಕಾಲೇಜು ಸೇರಿಕೊಂಡಿದ್ದರಿಂದ ಎಲ್ಲವೂ ಹೊಸತು ಅನ್ನಿಸುತ್ತಿತ್ತು. ಭಾರತದಲ್ಲಿ ಅಮ್ಮ ಮಾಡಿಕೊಟ್ಟ ಅಡುಗೆ ಊಟ ಮಾಡಿ ಮಾಡಿ ಚೆನ್ನಾಗಿ ಕೊಬ್ಬಿದ ಕುರಿಗಳಂತೆ ಇದ್ದ ನಮಗೆ ಈಗ ಊಟದ ಸಮಯವಾದರೆ ಸಾಕು  ಮನೆಯ ನೆನಪಾಗುತ್ತಿತ್ತು.  ಇನ್ನು ನಾವು ಕಾಲೇಜಿಗೆ ಸೇರಿದ ಮೊದಲ ದಿನವನ್ನು ನೆನಪಿಸಿಕೊಂಡರೆ ಭಯವೇ ಆಗುತ್ತದೆ.

ತಿಂಗಳ ಹಿಂದೆಯಷ್ಟೇ ಯೂನಿವರ್ಸಿಟಿ  ಆಫ್ ಹ್ಯೂಸ್ಟನ್ ನ ಓರಿಯೆಂಟೇಷನ್ ಡೇ ನಡೆದಿತ್ತು. ಯೂನಿವರ್ಸಿಟಿ ಯ ಮೊದಲನೇ ದಿನ, ಕಾಲೇಜಿನ ಅತ್ಯಂತ ದೊಡ್ಡ ಕಾನ್ಫರೆನ್ಸ್ ರೂಮ್ ನಲ್ಲಿ ನಡೆದಿತ್ತು, ಎಲ್ಲಿ ನೋಡಿದರೂ ವಿದ್ಯಾರ್ಥಿಗಳು , ಪೂರ್ತಿ ಆಡಿಟೋರಿಯಂ ನಲ್ಲಿ ಗಿಜಿ ಗಿಜಿ ಸದ್ದು , ನಾನು ಬೆಂಗಳೂರಿನಲ್ಲಿ ಯೂನಿವೆರ್ಸಿಟಿಗಳಲ್ಲಿ ಓದಿದ್ದೇನೆ ಆದರೆ ಇಷ್ಟು ದೊಡ್ಡ ಯೂನಿವರ್ಸಿಟಿಯಲ್ಲಿ ಮೊದಲನೇ ಬಾರಿ, ಎಲ್ಲರೂ ಅಪರಿಚಿತರೇ , ಯಾರೂ ಗೊತ್ತಿಲ್ಲ, ಪ್ರಪಂಚದ ಎಲ್ಲಾ ಕಡೆಯಿಂದ ಜನರು ಬಂದಿದ್ದರು, ಚೈನೀಸ್ ವಿದ್ಯಾರ್ಥಿಗಳು, ಆಫ್ರಿಕನ್ ಅಮೆರಿಕನ್ನರು , ಅಮೆರಿಕನ್ನರು, ಬಾಂಗ್ಲಾ ದೇಶದವರು, ಸೌದಿ ಅರೇಬಿಯಾದವರು, ಭಾರತದವರೂ ತುಂಬಾ  ಜನರಿದ್ದರು. ಎಲ್ಲರದೂ ಬೇರೆ ಬೇರೆ ವೇಷಗಳು, ಯಾರನ್ನು ಮಾತನಾಡಿಸುವುದು, ಯಾರು ನಮ್ಮ ಡಿಪಾರ್ಟ್ಮೆಂಟ್ಸ್ ನವರು ಏನೂ ತಿಳಿಯಲಿಲ್ಲ, ಚಿನ್ನಾರಿ ಮುತ್ತ ಸಿನಿಮಾದ “ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮವ್ರು “ಹಾಡು ನೆನೆಪಿಗೆ ಬಂತು.  ಸ್ವಲ್ಪ ಹೆದರಿಕೊಂಡೇ ನನ್ನ ಬ್ರಾಂಚಿನ ಹೆಸರನ್ನು ಹುಡುಕಿಕೊಂಡು ಹೊರಟೆ. ಕೊನೆಗೂ ಹೆಚ್ಚಾಗಿ ಭಾರತೀಯರೇ ಇದ್ದ “ಕಂಪ್ಯೂಟರ್ ಸೈನ್ಸ್ ಡಿಪಾರ್ಟ್ಮೆಂಟ್ ಸ್ಟೂಡೆಂಟ್ಸ್ ” ಎಂಬ ಬೋರ್ಡ್ ಕಾಣಿಸಿತು.  

ವೇದಿಕೆ ಮೇಲೆ ಎಲ್ಲ ಡೆಪಾರ್ಟ್ಮೆಂಟಿನ  ಪ್ರೊಫೆಸರ್ ಗಳು ಸಾಲಾಗಿ ಕೂತಿದ್ದರು. ಅದರಲ್ಲಿ ಒಬ್ಬರು ಭಾಷಣ ಮಾಡುವಾಗ ಹೇಳಿದರು ” ನೀವು ಇವತ್ತು ಇಲ್ಲಿ ಇರುವುದು ನಿಮ್ಮ ಪರಿಶ್ರಮದಿಂದ, ಯು ಡಿಸರ್ವ್ ಇಟ್ ! , ಈ ಗೆಲುವು ಸಂಪೂರ್ಣ ನಿಮ್ಮದೇ , ಬೇರೆಯವರು ಸಹಾಯ ಮಾಡಿರಬಹುದು ಆದರೆ ನೀವು ಪಟ್ಟ ಪರಿಶ್ರಮ ನಿಮ್ಮನ್ನು ಇಲ್ಲಿಗೆ ಕರೆತಂದಿದೆ, ಬೇರೆಯವರು ಹೇಳಬಹುದು ನಿಮ್ಮ ಲಕ್ ಇಂದ ಅಥವಾ ಇನ್ಯಾವುದೂ ಕಾರಣದಿಂದ ಅಂತ, ಆದರೆ ನಿಮಗೆ ಮಾತ್ರ ಗೊತ್ತು ನೀವು ಎಷ್ಟು ಕಷ್ಟ ಪಟ್ಟು ಇಲ್ಲಿ ಬಂದಿದ್ದೀರಾ,  ಇದು ನಿಮ್ಮ ಬದುಕು ! ನೀವೆ ಇದನ್ನು ರೂಪಿಸಿಕೊಳ್ಳಬೇಕು ” ಎಂದು ಹೇಳಿದ್ದು ಇನ್ನೂ ನೆನೆಪಲ್ಲಿದೆ. 

ಈ ಮಾತು ಕೇಳಿ ಅಪರಿಚಿತರ ನಡುವೆ ಹೆದರಿಕೊಂಡಿದ್ದ ನನಗೆ ಸ್ವಲ್ಪ ಧೈರ್ಯ ಬಂದಂತೆ ಆಯಿತು. 

ಒಂದು ಒಳ್ಳೆಯ ವಿಷಯವೆಂದರೆ ಕಂಪ್ಯೂಟರ್ ಸೈನ್ಸ್ ಡಿಪಾರ್ಟ್ಮೆಂಟ್ ನಲ್ಲಿ ಸುಮಾರು 80 ಪ್ರತಿಶತ ಭಾರತೀಯರೇ, ಬಹುಪಾಲು ಪ್ರಾಧ್ಯಾಪಕರೂ ಕೂಡ ಭಾರತೀಯರೇ. ನನಗೆ ತರಗತಿಯಲ್ಲಿ ಪಾಠ ಕೇಳುವಾಗ ನಾನು ಭಾರತದಲ್ಲೇ ಇದ್ದೇನೆ ಎಂದು ಅನ್ನಿಸುತ್ತಿತ್ತು. ಆದರೆ ನಾವು ಕಲಿಯುತ್ತಿದ್ದ ತಂತ್ರಜ್ಞಾನದ ವಿಷಯಗಳು ತುಂಬಾ ಮುಂದುವರೆದ ವಿಷಯಗಳಾಗಿದ್ದವು. 2017 ರಲ್ಲೇ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹಾಗೂ ಮಷೀನ್ ಲರ್ನಿಂಗ್ , ವಿಶುಯಲ್ ಇಮೇಜ್ ಪ್ರೊಸೆಸಿಂಗ್ ನಂತಹ ವಿಷಯಗಳನ್ನು ಕಲಿತಿದ್ದೆವು. ಪ್ರತಿ ಅಸೈನ್ಮೆಂಟ್, ಪ್ರತಿಪ್ರಾಜೆಕ್ಟ್ ಗಳನ್ನು ಮುಗಿಸುವುದು  ದೊಡ್ಡ ಸವಾಲಾಗಿತ್ತು.

ಹಲವಾರು ಬಾರಿ,  ನನಗೆ ಇದೆಲ್ಲಾ ಬೇಕಾ?, ಆರಾಮಾಗಿ  ಕಾಲೇಜು ಬಿಟ್ಟು ಮನೆಯಲ್ಲೀ ಇರೋಣ ಎಂದು ಎನ್ನಿಸಿ, ಅಡ್ಮಿಶನ್ ಡಿಪಾರ್ಟ್ಮೆಂಟ್ ಗೆ ಫೋನ್ ಮಾಡಿ ಹಲವಾರು ಬಾರಿ ಹೀಗೆ ಕೇಳಿದ್ದೆ, “ನಾನು ಇವಾಗ ಕಾಲೇಜು ಬಿಟ್ಟರೆ ನನ್ನ ಫೀಸ್ ವಾಪಸ್ ಕೊಡುತ್ತೀರಾ?” ಎಂದು. 

ಪ್ರತಿಬಾರಿ ಹೇಗೂ ಇದೊಂದು ಸೆಮೆಸ್ಟರ್ ಮುಗಿಸೋಣ ಆಮೇಲೆ ಯೋಚಿಸೋಣ ಎಂದು ಒಂದೊಂದು ಪರೀಕ್ಷೆಯನ್ನು ಅಗ್ನಿ ಪರೀಕ್ಷೆಯಂತೆ ಮುಗಿಸುತ್ತಾ ಬಂದೆ. 

ಇನ್ನೊಂದು ವಿಷಯವೆಂದರೆ ಭಾರತದಲ್ಲಿ ಕಾಲೇಜಿನಲ್ಲಿ ಸಹಪಾಠಿಗಳೆಲ್ಲಾ ಹೆಚ್ಚು ಕಮ್ಮಿ ನಮ್ಮದೇ ವಯಸ್ಸಿವನವರಾಗಿರುತ್ತಾರೆ, ಆದರೆ ಇಲ್ಲಿ ಹಾಗೇನಿಲ್ಲ , ನಮ್ಮ ಕ್ಲಾಸ್ ನಲ್ಲಿ ಒಬ್ಬರು ೬೫ ವರ್ಷದ ಯುವಕರು ಇದ್ದರು, ಎಲ್ಲರಿಗಿಂತಲೂ ಸ್ಪೂರ್ತಿ ಯಿಂದ ಬರುತ್ತಿದ್ದರು. ಅವರು ತಮ್ಮ ಕೆಲಸ ದಿಂದ ನಿವೃತ್ತರಾಗಿ , ಮಕ್ಕಳು ಮರಿಯನ್ನೆಲ್ಲಾ ಒಂದು ದಡದಾಟಿಸಿ, ನಂತರ ಯೂನಿವರ್ಸಿಟಿ ಗೆ ಸೇರಿದ್ದರು. ಆಶ್ಚರ್ಯ ವೆಂದರೆ ಅವರೂ ತಾವು ದೊಡ್ಡವರು , ನೀವು ಚಿಕ್ಕವರು ಎಂದು ಯಾವತ್ತೂ ತಿಳಿಯುತ್ತಿರಲಿಲ್ಲ,  ಅಮೇರಿಕಾದಲ್ಲಿ “ಏಜ್ ಐಸ್ ಜಸ್ಟ್ ಆ ನಂಬರ್ “,( ವಯಸ್ಸು ಕೇವಲ ಒಂದು ಸಂಖ್ಯೆ )  ಎಂಬ ಒಂದು ಸಂಸ್ಕೃತಿ ಇದೆ, ವಯಸ್ಸಾಯಿತೆಂದು ಯಾರೂ ಮನೆಯಲ್ಲಿ ಕೂರುವುದಿಲ್ಲ . ಎಲ್ಲರೂ ತಮಗೇನು ಮಾಡಬೇಕು ಅನ್ನಿಸುತ್ತದೋ ಅದನ್ನು ಮಾಡುತ್ತಾರೆ. ನನ್ನ ಸಹಪಾಠಿಯೊಬ್ಬರೂ ಒಮ್ಮೆ ಪ್ರಾಜೆಕ್ಟ್ ಮೀಟಿಂಗ್ ನ ಸಮಯದಲ್ಲಿ ” ನನ್ನ ಮಗಳಿಗೆ ಮಗುವಾಗುತ್ತಿದೆ, ಇವತ್ತು ಬೇಬಿ ಶವರ್ ಇದೆ” ಎಂದು ಹೇಳಿದಾಗ ಆಶ್ಚರ್ಯ ವಾಗಿತ್ತು. 

ದೊಡ್ಡ ದೊಡ್ಡ ಲೈಬ್ರರಿಗಳು , ಪ್ಲೇ ಗ್ರೌಂಡ್ ಗಳು, ವರ್ಷಕ್ಕೊಮ್ಮೆ ನಡೆಯುತ್ತಿದ್ದ ಕಾಲೇಜು ಫೆಸ್ಟ್ ಗಳು ಇವೆಲ್ಲಾ ಹೊಸ ಅನುಭವ. ಕಾಲೇಜಿನಲ್ಲಿಯೇ ಬೌಲಿಂಗ್ ಹಾಗು ಕಾರ್ ವಿಡಿಯೋ ಗೇಮ್ಸ್ ಹೀಗೆ ಬೇರೆ ಬೇರೆ ಮನೋರಂಜನೆಗಳೂ ಇದ್ದವು, ಕ್ರಿಸ್ಮಸ್ ಸಮಯದಲ್ಲಿ , ಥ್ಯಾಂಕ್ಸ್ ಗಿವಿಂಗ್ ಸಮಯದಲ್ಲಿ ಬೇರೆ ಬೇರೆ ಡಿಪಾರ್ಟ್ಮೆಂಟ್ ನವರು ನಡೆಸುವ ಸೆಲೆಬ್ರೆಷನ್ಸ್ ನೋಡಲು ತುಂಬಾ ಚೆನ್ನಾಗಿತ್ತು. 

 ಪ್ರಪಂಚದ ಎಲ್ಲಾ ಭಾಗದಿಂದ ಬಂದ ಜನರನ್ನು ನಾವು ಒಂದೇ ಕ್ಯಾಂಪಸ್ ನಲ್ಲಿ ಭೇಟಿಯಾಗುತ್ತಿದ್ದೆವು. ಎಷ್ಟೊಂದು ಹೊಸ ಸಂಸ್ಕೃತಿ , ಹೊಸ ವಿಷಯಗಳನ್ನು ತಿಳಿದೆವು.  ಹಿಂದೆಲ್ಲಾ, ಇವರು ಹೀಗೆ, ಆ ಜನರು ಹಾಗೆ, ಹೀಗೆಲ್ಲ ಬೇರೆ ಬೇರೆ ರೀತಿಯ ತಪ್ಪು ಕಲ್ಪನೆಗಳಿದ್ದವು. ಆದರೆ ನಾವು ಒಬ್ಬರನ್ನು ಭೇಟಿಮಾಡಿ ಮಾತನಾಡಿಸಿದಾಗಲೇ ತಿಳಿಯುವುದು ನಾವೆಲ್ಲರೂ ಒಂದೇ ರೀತಿಯ ಮನುಷ್ಯರು. ಎಲ್ಲರಲ್ಲೂ ಬೇರೆಯವರಿಗೆ ಸಹಾಯ ಮಾಡುವ ಮನಸ್ಥಿತಿ ಇರುತ್ತದೆ, ಎಲ್ಲರಿಗೂ ತಾನು ಚೆನ್ನಾಗಿ ಓದಿ ಬರೆದು ಕೆಲಸ ಪಡೆದುಕೊಳ್ಳಬೇಕು ಎಂಬ ಹಂಬಲವಿರುತ್ತದೆ.  ತಮ್ಮ ತಮ್ಮ ಕುಟುಂಬಕ್ಕಾಗಿ ಏನಾದರೂ ಮಾಡಬೇಕೆನ್ನುವ ಆಸೆ ಇರುತ್ತದೆ. ಪ್ರಪಂಚಕ್ಕೆ ತಾವು ಏನೆಂಬುದನ್ನು ತೋರಿಸಬೇಕು, ಜನರು ತಮ್ಮ ಮೇಲೆ ಇಟ್ಟಿರುವ ನಿರೀಕ್ಷೆಗಳನ್ನು ಸಾಧಿಸಬೇಕು ಎಂಬ ಹಠವಿರುತ್ತದೆ , ನಾವೆಲ್ಲಾ ನೋಡಲು ಬೇರೆ ಬೇರೆ ರೀತಿ ಯಾಗಿ ಕಾಣಿಸಬಹುದು ಆದರೆ ಬಹುತೇಕ ಕಾಲೇಜಿಗೆ ಬರುವ ವಿದ್ಯಾರ್ಥಿಗಳಿಗೆಲ್ಲ ಒಂದೇ ರೀತಿ ಮನಸ್ಥಿತಿ ಇರುತ್ತದೆ ಎಂಬುದು ನನ್ನ ಅನಿಸಿಕೆ, 

ವಾರಕ್ಕೆ ಒಂದು ಅಸೈನ್ಮೆಂಟ್ , ತಿಂಗಳಿಗೆ ಒಂದು ಪರೀಕ್ಷೆ, ಆರು ತಿಂಗಳಿಗೆ ಒಂದು ಸೆಮಿಸ್ಟರ್. ಫಾಲ್, ಸ್ಪ್ರಿಂಗ್,  ಸಮ್ಮರ್ ಹೀಗೆ ಉಸಿರು ಬಿಗಿ ಹಿಡಿದಂತೆ ಒಂದೇ ಸಮನೆ ಪರಿಶ್ರಮ ಪಟ್ಟು ಕೊನೆಗೂ ನಾವೆಲ್ಲ ಗ್ರ್ಯಾಜುಯೆಟ್ ಆದೆವು.  ನಮ್ಮ ಎಲ್ಲಾ ಆಸೆ ಆಕಾಂಕ್ಷೆಗಳಿಗೆ ಬೆನ್ನೆಲುಬಾಗಿ ನನ್ನ ಬಾಳ ಸಂಗಾತಿ ನಿಂತಿದ್ದರಿಂದ ನನ್ನ ದಾರಿ ಸ್ವಲ್ಪ ಸುಗಮವಾಯಿತು. 

 ಎರಡು ವರ್ಷದ ಹಿಂದೆ ಐದು ಡಾಲರ್ ಗೆ ಹಿಂದೆ ಮುಂದೆ ಯೋಚಿಸುತ್ತಿದ್ದ ನಮಗೆ, ಗಂಟೆಗೆ ಐವತ್ತು ಡಾಲರ್ ಸಿಗುವ ಕೆಲಸವನ್ನು ಗಿಟ್ಟಿಸಿಕೊಂಡಮೇಲೆ ಪ್ರಪಂಚವನ್ನೇ ಗೆದ್ದಂತಹ ಅನುಭವ! 

ದಿನಕ್ಕೆ ಹತ್ತು ಬಾರಿ  ಆಫರ್ ಲೆಟರ್ ನೋಡಿ ನೋಡಿ, ತಿಂಗಳಿಗೆ ಇಷ್ಟಾದರೆ , ವರ್ಷಕ್ಕೆ ಎಷ್ಟು ಸಂಬಳ ಸಿಗಬಹುದು, ಎಂದೆಲ್ಲಾ ಯೋಚಿಸಿ ಕೊಂಡು ಸಂತೋಷಪಡುತ್ತಿದ್ದೆ. ಅಂತೂ ಇಂತೂ  ಯೂನಿವರ್ಸಿಟಿ ಆಫ್ ಹ್ಯೂಸ್ಟನ್  ಎಂಬ ವಿದ್ಯಾಲಯವು ನನ್ನ ಬದುಕನ್ನು ಬದಲಾಯಿಸಿತ್ತು.  

‍ಲೇಖಕರು Admin

4 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading