-ಡಾ. ರವಿಶಂಕರ್ ಎ.ಕೆ
ಇದು ಜಗತ್ತಿಗೆ ಅರ್ಥವಾಗದ ಸತ್ಯ
ಜಗತ್ತಿಗೆ ಅರ್ಥವಾಗದ
ಸತ್ಯವೊಂದಿದೆ
ಅದು ಸದಾ ಎಲ್ಲರಿಗೂ
ಕಾಣುತ್ತಲೇ ಇರುತ್ತದೆ.
ಆಸ್ಪತ್ರೆ, ನಿಲ್ದಾಣ, ಜನಜಂಗುಳಿಯ
ನಡುವೆ ಹಸಿವಿನಿಂದ ಹಂಬಲಿಸುತ್ತದೆ,
ಬೀದಿಗಳಲ್ಲಿ ಅಲೆಯುತ್ತದೆ
ಕರುಣೆಯ ಕೂಳುಂಡು
ಎಲ್ಲೋ ಮಲಗಿ ಎಲ್ಲೋ ಏಳುವ
ಅರ್ಥವೇ ಇಲ್ಲದ ಕಾಯ.
ಕವಿತೆಗಳು ಬರೆದು ಕನವರಿಸಿದರೂ
ಕಣ್ಣು ತೆರೆಯುವುದೇ ಇಲ್ಲ
ಏಕೆಂದರೆ, ಆ ಹಸಿವು ನಮಗಿಲ್ಲ
ಒಂದೇ ಭೂಮಿ, ಆಕಾಶ, ನೀರು
ಎಲ್ಲವೂ ಒಂದೇ ಆಗಿರುವಾಗ
ಇಲ್ಲಿ ಬೀದಿ ಬೀದಿಯಲ್ಲೂ
ಕೈ ಚಾಚಿ ಅಲೆಯುವ
ಹಸಿವಿನಂಬಲದ ಸತ್ಯಕ್ಕೆ
ಯಾರು ಸಾಕ್ಷಿ !
ತಿಂದುಂಡು ಬಿಸಾಡುವ
ಶ್ರೀಮಂತರನಷ್ಟೇ ಬೆರುಳುಮಾಡುವೆವು
ನಾವೂ ಅವರೆದುರು ಸಮಾನರೇನು?
ಅವಕಾಶಗಳ ಅಕ್ಷಯ ರೆಕ್ಕೆಗಳ ಕಟ್ಟಿ
ಸ್ವಾರ್ಥಗಳ ಸಂಶಯದಲ್ಲೇ
ಬೇಯುವ, ನಿತ್ಯ ಸಾಯುವ
ನಮ್ಮ ಕಥೆಗಳಲ್ಲೂ ಅವರಿಲ್ಲ ಬಿಡಿ
ಜಗತ್ತಿಗೆ ಅರ್ಥವಾಗದ
ಸತ್ಯವೊಂದಿದೆ
ಅದು ಸದಾ ಎಲ್ಲರಿಗೂ
ಕಾಣುತ್ತಲೇ ಇರುತ್ತದೆ.






0 Comments