ಪ್ರಿಯ ಜೋಗಿ ಸರ್..

ವಿಕಾಸ್ ನೇಗಿಲೋಣಿ

**

ಪ್ರಿಯ ಜೋಗಿ ಸರ್,

ಕಳೆದುಕೊಂಡ ಅಪ್ಪನನ್ನು ಮಗ ಹುಡುಕುವ ಈ ನಿಮ್ಮ ಹೊಸ ಕಾದಂಬರಿ, ನಮ್ಮ ತಲೆಮಾರಿಗೆ ಹೆಚ್ಚು ಹತ್ತಿರವಾಗುವ, ನಮ್ಮನ್ನೂ ಈ ಕಾದಂಬರಿಯ ಮುಖ್ಯಪಾತ್ರ ಅನಿರುದ್ಧ್ ಸ್ಥಾನದಲ್ಲಿ ಒಂದಲ್ಲಾ ಒಂದು ಸಂದರ್ಭದಲ್ಲಿ ನಿಲ್ಲಿಸುವ, ನಮ್ಮೊಡನೇ ಇದ್ದವರನ್ನು ನಾವು ಹುಡುಕುವಂತೆ ಪ್ರೇರೇಪಿಸುವ ಕಾದಂಬರಿ.

ಈ ಕಾದಂಬರಿ ಓದುತ್ತಾ ನಾನು ಬೆರಗಿನಿಂದ, ಹೆದರಿಕೆಯಿಂದ, ಪಾಪಪ್ರಜ್ಞೆಯಿಂದ, ದಿಗಿಲಿನಿಂದ ಪೂರ್ತಿ ಮುಳುಗಿ ಹೋದೆ. ಫೋನ್ ಸ್ವಿಚ್ಡ್ ಆಫ್ ಆದರೆ ಅಂಗವೈಕಲ್ಯ ಅನುಭವಿಸುವ ಪುಟ್ಟ ಕ್ಷಣದಿಂದ ಹಿಡಿದು, ಷರ್ಮಿಳಾ ಪೂಸಿದ ಸುಗಂಧ, ಅವಳು ತಂದಿಟ್ಟ ಫಿಲ್ಟರ್ ಕಾಫಿ. ಘಮಕ್ಕೆ ಮತ್ತೇರುವತನಕ, ಮಹಾನಗರದ ಕ್ರೌರ್ಯ ಅಥವಾ ಹೋರಾಟಕ್ಕೆ ವೃತ್ತಿಯಂಗಿ ತೊಡಿಸಿದರೆ ಮೂಡುವ ಪೊಲೀಸ್, ಬೇಹುಗಾರ, ಜರ್ನಲಿಸ್ಟ್, ಕಾರ್ಪೋರೇಟರ್ ಪತ್ರಗಳವರೆಗೆ- ಎಲ್ಲವೂ ಒಂದಕ್ಕೊಂದು ನೆಯ್ದುಕೊಂಡು ಬೆಸೆದುಕೊಂಡು ಬೆಳೆದಿವೆ.

ಹಾಗಾಗಿ ನನಗೆ ಬೆಂಗಳೂರು ಸರಣಿ ಕಾದಂಬರಿ ಓದುವಾಗ ಸಿಕ್ಕ ಬೆಂಗಳೂರು ಈ ಕಾದಂಬರಿಯಲ್ಲೂ ಸಿಕ್ಕಿತು, ಅದರೊಳಗೆ ನನಗೆ ನಾನೇ ಮುಖಾಮುಖಿಯಾದಂತೆ ಬೆಚ್ಚಿದೆ, ಈ ಕಾದಂಬರಿಯಲ್ಲೊಂದು ಸೊಗಸಾದ ಇಮೇಜು ಇದೆಯಲ್ಲ;

ಅನಿರುದ್ಧ ಎದ್ದುನಿಂತ. ಎದುರಿಗೇ ಇದ್ದ ನಿಲುವುಗನ್ನಡಿಯಲ್ಲಿ ಅಪ್ಪ ಕಾಣಿಸಿದಂತಾಯಿತು.

ಅನಿರುದ್ಧ ತನ್ನನ್ನೊಮ್ಮೆ ನೋಡಿಕೊಂಡ. ತಾನು ಯಾವಾಗ ಪ್ಯಾಂಟ್ ಬಿಚ್ಚಿ ಅಪ್ಪ ಉಡುತ್ತಿದ್ದ ಪಂಚೆ ಉಟ್ಟುಕೊಂಡೆ, ಯಾವಾಗ ಅಪ್ಪನ ಜುಬ್ಬಾ ತೊಟ್ಟುಕೊಂಡು ಮಲಗಿದೆ ಅನ್ನುವುದು ನೆನಪಾಗಲಿಲ್ಲ. ಅಪ್ಪನ ದಿರಿಸಿನಲ್ಲಿ ಥೇಟ್ ಅಪ್ಪನಂತೆಯೇ ಕಾಣುತ್ತಿದ್ದೇನೆ ಅಂತ ಅನಿರುದ್ಧನಿಗೆ ಅನ್ನಿಸಿ, ತನಗೂ ವಯಸ್ಸಾಗುತ್ತಿದೆ ಎನ್ನುವುದು ಖಾತ್ರಿಯಾಯಿತು.

ಅಲ್ಲಿ ಅನಿರುದ್ಧ ಹೇಗೆ ಅವನ ತಂದೆಯದೇ ಮೂರ್ತರೂಪವಾಗಿ ಕನ್ನಡಿಯಲ್ಲಿ ಮೂಡಿದನೋ, ನನ್ನಪ್ಪನೂ ನಾನೇ ಆಗಿ ಎಲ್ಲೋ ಆ ಕನ್ನಡಿಯಲ್ಲಿ ಮೂಡಿದೆ, ಅನ್ನಿಸಿತು!

*

ನಾನು ಇತ್ತೀಚೆಗೆ ವೆಬ್ ಸೀರೀಸ್, ಥ್ರಿಲ್ಲರ್ ಕ್ರೈಂ ಸಿನಿಮಾಗಳನ್ನು ಹೆಚ್ಚು ನೋಡುತ್ತಿದ್ದೇನೋ ಅಥವಾ ನೀವು ಅಂಥದ್ದನ್ನು ಹೆಚ್ಚೆಚ್ಚು ಬರೆಯುತ್ತಿದ್ದೀರೋ, ಗೊತ್ತಿಲ್ಲ. ಆದರೆ ಕಳೆದ ಕೆಲವು ಕಾದಂಬರಿಗಳು ನನಗೆ ಕಣ್ರೆಪ್ಪೆ ಮುಚ್ಚಲೂ ಬಿಡದಷ್ಟು ತೀವ್ರವಾಗಿ, ಒಂದು ಕ್ರೈಮ್ ಸರಣಿ ಅಥವಾ ಥ್ರಿಲ್ಲರ್ ಸಿನಿಮಾದಂತೆ ಆವರಿಸಿಕೊಂಡಿವೆ. ಅದಕ್ಕೆ ಕಾರಣ, ನೀವು ಓದುಗರ ನಾಡಿಯನ್ನು ಅರಿತವರಂತೆ ಮೊದಲ ನಾಲ್ಕೈದು ಪುಟದಲ್ಲಿ, ಕೆಳಕ್ಕಿಡಲಾರದ ಒಂದು ತಹತಹವನ್ನು ಓದುಗರಲ್ಲಿ ಸೃಷ್ಟಿ ಮಾಡಿಬಿಡುತ್ತೀರಿ.

ಮೂವತ್ತು ಸೆಕೆಂಡುಗಳ ರೀಲ್ಸ್ ಮಾಡುವವನೇ ‘Watch till end’ ಅಂತ ಆಮಿಷ ಒಡ್ಡಬೇಕಾದ ಇವತ್ತಿನ ಅನಿವಾರ್ಯ ಕಾಲದಲ್ಲಿ ನೀವು ಕೊಂಚ ದೊಡ್ಡದೆನ್ನುವ ಕಾದಂಬರಿಯನ್ನೂ ಕೊನೆವರೆಗೂ ಓದಲೇಬೇಕೆಂಬ ಅನಿವಾರ್ಯವನ್ನು ಸೃಷ್ಟಿಸುತ್ತೀರಿ. ಈ ಕಾಲದ ಯಂಗ್ ಅಡಲ್ಡ್ ಫಿಕ್ಷನ್ ಗೆ ಇದಕ್ಕಿಂತ ಒಳ್ಳೆಯ ಮಾದರಿ, ನಿಮಗಿಂತ ಒಳ್ಳೆಯ ಲೇಖಕರು ಬೇರೆ ಇರದು ಅಂತಲೇ ಅನ್ನಿಸುತ್ತದೆ.

ಮತ್ತೆ ಮತ್ತೆ ಓದುವುದಕ್ಕೆ ಪ್ರೇರೇಪಿಸಿದ ಈ ಕಾದಂಬರಿಯ ಕೆಲ ಸಾಲುಗಳು:

-ಅನಿವಾರ್ಯವಾಗದ ಯಾವುದನ್ನೂ ಈ ಪ್ರಕೃತಿ ಉಳಿಸಿಕೊಳ್ಳುವುದಿಲ್ಲ

-ಕದಡಿದ ನೀರು ಮಾತ್ರ ರಹಸ್ಯಗಳನ್ನು ಹಿಡಿದಿಟ್ಟುಕೊಳ್ಳಬಲ್ಲದು.ತಿಳಿಯಾದ ನೀರಿಗೆ ಆ ಭಾಗ್ಯವಿಲ್ಲ.

– ಇಲ್ಲಿ ತನ್ನವರ ವಿರುದ್ಧವೇ ಪಿತೂರಿ ಮಾಡುತ್ತಾರೆ. ಯಾರು ಹತ್ತಿರದಲ್ಲಿರುತ್ತಾರೋ ಅವರಿಗೆ ಬಲವಾಗಿ ಹೊಡೆಯುವುದಕ್ಕೆ ಸಾಧ್ಯ

– ಆಗಾಗ ಏನೋ ಒಂದು ನೋವು ಆಗ್ತಾ ಇರಬೇಕು. ಇಲ್ಲದೇ ಹೋದ್ರೆ ಗಮ್ಮತ್ತೇ ಇರಲ್ಲ.

-ಅತ್ಯಂತ ಪವರ್‌ಫುಲ್ ಮನುಷ್ಯ ಕೂಡ ಅತ್ಯಂತ ದುರ್ಬಲನಾಗುವ ಅಪಾಯದಿಂದ ತಪ್ಪಿಸಿಕೊಳ್ಳಲಾರ.

‘ಒಂದು ಒಳ್ಳೆಯ ಸಾಲನ್ನು ಬರೆಯೋದು ಒಳ್ಳೆಯ ಕೃತಿಯ ಲಕ್ಷಣ ಅಲ್ಲ, ಸರ್ವೇಸಾಮಾನ್ಯ ಮಾತುಗಳು ಒಟ್ಟಾಗಿ ಕಾದಂಬರಿಯ ಆಶಯವನ್ನು ಧ್ವನಿಸಬೇಕು’ ಅನ್ನುವ ಅರ್ಥದ ಮಾತನ್ನು ಯಾವತ್ತೋ ವಿವೇಕ್ ಶಾನುಭಾಗ್ ಅವರು ಹೇಳಿದ್ದ ನೆನಪು. ಆದರೆ ನಿಮ್ಮ ಕೃತಿಯ ವಿಷಯದಲ್ಲಿ ಆ ಎಲ್ಲಾ ಒಳ್ಳೆಯ ಸಾಲುಗಳೂ, ಒಟ್ಟು ಸಂದರ್ಭದ ಅನುಭವವಾಗಿಯೇ ಹುಟ್ಟಿ ಬಂದಂತೆ, ಸಹಜ ಹೂವಂತೆ ಅರಳಿವೆ.

ಈ ಕಾದಂಬರಿ ಓದುತ್ತಾ ಏಕಕಾಲಕ್ಕೆ ಒಂದು ಥ್ರಿಲ್ಲರ್ ರೇಡ್ ಹಾಗೂ ಭಾವುಕ ಜರ್ನಿಯನ್ನು ಅನುಭವಿಸಿದ್ದೇನೆ. ಹೇಳಲಿಕ್ಕೆ ಹೋದರೆ ತುಂಬಾ ಇದೆ, ಆದರೆ ಅದು ಓದಿದಾಗಷ್ಟೇ ಓದಿದವನಿಗಷ್ಟೇ ದಕ್ಕುವಂಥ ಅನುಭವ, ಆ ಅನುಭವ ಎಲ್ಲರದೂ ಆಗಲಿ ಅಂತ ಬಯಸುತ್ತಿದ್ದೇನೆ.

ಈ ಓದಿನ ಸಂಭ್ರಮದ ನೆಪದಲ್ಲಿ ಜಡವಾಗಿದ್ದ ನನ್ನನ್ನು ಜೀವಂತಗೊಳಿಸಿದ್ದಕ್ಕೆ ಥ್ಯಾಂಕ್ಸ್ ಸರ್!

‍ಲೇಖಕರು avadhi

February 22, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: