ಕೆ ವಿ ತಿರುಮಲೇಶ್ ಹೇಳಿದ್ದು: ‘ಬದ್ಧತೆ ಎನ್ನುವುದು ಬಂಧನ’

ಎಂ ಎಸ್ ಶ್ರೀರಾಮ್

**

ಎಂ ಎಸ್ ಶ್ರೀರಾಮ್ ಅವರು ಖ್ಯಾತ ಸಾಹಿತಿ ಕೆ ವಿ ತಿರುಮಲೇಶ್ ಅವರ ಸಂದರ್ಶನಗಳ ಸಂಕಲನ ‘ಬದ್ಧತೆ ಎನ್ನುವುದು ಬಂಧನ’

ಕೃತಿಯನ್ನು ಸಂಪಾದಿಸಿದ್ದಾರೆ.

ಬಹುವಚನ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಗೆ ಎಂ ಎಸ್ ಶ್ರೀರಾಮ್ ಅವರು ಬರೆದ ಪ್ರಸ್ತಾವನೆ ಇಲ್ಲಿದೆ.

**

ಎಂಬತ್ತರ ದಶಕದ ಮಧ್ಯ ಕಾಲದಲ್ಲಿ ಬರೆಯಲು ಪ್ರಾರಂಭಿಸಿದ ನನ್ನ ವಾರಗೆಯವರಿಗೆ ಸಿಕ್ಕ ಸಂದರ್ಭ ಭಿನ್ನವಾಗಿತ್ತು. ಒಂದೆಡೆಯಲ್ಲಿ ನವ್ಯ ಸಾಹಿತ್ಯದ ಪ್ರವರ್ತಕರಾದ ಗೋಪಾಲಕೃಷ್ಣ ಅಡಿಗರ ಪ್ರಖರವಾದ ಪ್ರಭಾವ ಕಡಿಮೆಯಾಗುತ್ತಿತ್ತು. ನವ್ಯದಲ್ಲೇ ಪ್ರಾರಂಭಿಸಿ ಬೆಳೆದು ಬಂದ ಲಂಕೇಶ್, ತೇಜಸ್ವಿಯವರಂಥ ಲೇಖಕರು ತುಸು ಭಿನ್ನ ದಾರಿಯನ್ನು ಹಿಡಿದಿದ್ದರು. ಪ್ರಗತಿಪರರ ಗಟ್ಟಿ ದನಿಯಾಗಿ ನಿಂತಿದ್ದ ನಿರಂಜನ ಅವರ ಸಮಗ್ರ ಕೃತಿಗಳ ಪ್ರಕಟಣೆಯ ಪ್ರಕ್ರಿಯೆಯಲ್ಲಿತ್ತು. ಬರಗೂರು ರಾಮಚಂದ್ರಪ್ಪ, ಬೆಸಗರಹಳ್ಳಿ ರಾಮಣ್ಣ ಸಶಕ್ತ ಮತ್ತು ಭಿನ್ನ ದನಿಗಳಾಗಿ ಉದಯಿಸಿದ್ದರು. ಈ ನಡುವೆ ದಲಿತ-ಬಂಡಾಯ ಸಾಹಿತ್ಯ ಮೇಲ್ಮುಖದಲ್ಲಿತ್ತು. ಸಿದ್ದಲಿಂಗಯ್ಯ ಮತ್ತು ದೇವನೂರ ಮಹಾದೇವ ಅತ್ಯಂತ ಪ್ರಭಾವಿ ಲೇಖಕರಾಗಿ ಬರೆಯಲು ತೊಡಗಿದ್ದರು. ಬಂಡಾಯದ ಪ್ರಗತಿಪರತೆಯ ಹಿನ್ನೆಲೆಯಲ್ಲಿ ಬೊಳುವಾರು ಮಹಮದ ಕುಂಞರಂಥಹ ಸಶಕ್ತ ಬರಹಗಾರರು ಪ್ರಬಲ ದನಿಯಾಗಿ ಗುರುತಿಸಲ್ಪಟ್ಟಿದ್ದರು.

ಅದೇ ಸಮಯಕ್ಕೆ ನವ್ಯ -ಪರಂಪರೆಯಲ್ಲಿ ಗುರುತಿಸಲ್ಪಟ್ಟ ಅನಂತಮೂರ್ತಿ, ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ರಾಮಾನುಜನ್, ರಾಮಚಂದ್ರ ಶರ್ಮಾ, ತಿರಮಲೇಶ್, ತಮ್ಮದೇ ರೀತಿಯಲ್ಲಿ ಹೊಸ ಮತ್ತು ಕ್ರಿಯಾಶೀಲ ಸಾಹಿತ್ಯವನ್ನು ಕಟ್ಟುತ್ತಿದ್ದರು. ನವೋದಯದ ಶೈಲಿಯಲ್ಲಿ ಬರೆಯುತ್ತಿದ್ದ ಜಿ.ಎಸ್.ಶಿವರುದ್ರಪ್ರ, ಕೆ.ಎಸ್.ನರಸಿಂಹಸ್ವಾಮಿ, ಅದೇ ಪರಂಪರೆಯಲ್ಲಿ ಮುಂದುವರೆದಿದ್ದ (ಆಗಿನ) ಯುವಪೀಳಿಗೆಯ ಎಚ್.ಎಸ್.ವೆಂಕಟೇಶಮೂರ್ತಿ, ಲಕ್ಷ್ಮಣರಾವ್, ವ್ಯಾಸರಾವ್, ನಿಸಾರ್ ಅಹಮದ್ ತಮ್ಮದೇ ರೀತಿಯ ಪ್ರಯೋಗಗಳನ್ನು ಮುಂದುವರೆಸಿದ್ದರು. ಹೀಗೆ ಆ ಕಾಲದಲ್ಲಿ ಪ್ರಯೋಗದ ದೃಷ್ಟಿಯಿಂದಲೂ, ಹೊಸ ಸಾಹಿತ್ಯದ ನಿರ್ಮಾಣದ ದೃಷ್ಟಿಯಿಂದಲೂ ಅತ್ಯಂತ ಆಸಕ್ತಿಯ – ಉತ್ಸಾಹದ ಕಾಲವಾಗಿತ್ತು.

ಈ ಎಲ್ಲರ ನಡುವೆ ತಮ್ಮ ವಸ್ತುವಿನ ಆಯ್ಕೆ, ಬರವಣಿಗೆಯ ಶೈಲಿ, ರಚನಾತ್ಮಕತೆ, ಪ್ರಯೋಗಗಳಿಂದಾಗಿ ಅಪ್ರತ್ಯಕ್ಷವಾಗಿ ನಮ್ಮೆಲ್ಲರನ್ನೂ ಸೆಳೆದು ಪ್ರಭಾವಿಸಿದ ಲೇಖಕರು ತಿರುಮಲೇಶ್. ಅವರು ಹೈದರಾಬಾದಿನಲ್ಲಿದ್ದರು. ಹೀಗಾಗಿ ಅವರು ಭೌತಿಕವಾಗಿಯೂ ಅಪ್ರತ್ಯಕ್ಷರಾಗೇ ಇದ್ದು ನಮ್ಮ ಮೇಲೆ ಪ್ರಭಾವ ಬೀರುತ್ತಿದ್ದರು. ಕನ್ನಡ ಸಾಹಿತ್ಯದ ಬಳಗ ಪುಟ್ಟದು. ಅದರಲ್ಲೂ ಬೆಂಗಳೂರು ಕೇಂದ್ರಿತ ಸಾಹಿತ್ಯ ಬಳಗದವರು ಒಂದಿಲ್ಲ ಒಂದು
ಕಾರಣಕ್ಕೆ ಎಲ್ಲಾದರೂ ಭೇಟಿಯಾಗುವುದು ಸಹಜವೇ ಇತ್ತು. ರವೀಂದ್ರ ಕಲಾಕ್ಷೇತ್ರದ ಕಟ್ಟೆಯ ಮೇಲೆ ಕೂತು ಸಿ.ಜಿ.ಕೆ, ಶಿವಪ್ರಕಾಶ್, ಕೇಶವ ಮಳಗಿ, ಪ್ರಕಾಶ್ ರೈ, ಬಿ ಸುರೇಶ, ವಿಜಯಮ್ಮ ಇವರೆಲ್ಲರ ಭೇಟಿ ಮಾಡಬಹುದಿತ್ತು. ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಜಿ.ಎಸ್. ಶಿವರುದ್ರಪ್ರನವರು ಅತ್ಯಂತ ಕ್ರಿಯಾಶೀಲರಾಗಿ ಅನಿಕೇತನ ಪತ್ರಿಕೆಯನ್ನು ನಡೆಸುತ್ತಿದ್ದರಲ್ಲದೇ, ಹೊಸ ಪುಸ್ತಕ, ಸಂಕಲನಗಳ ಪ್ರಕಟಣೆಯಿಂದ ಯುವಕರನ್ನು ಒಳಗೊಳ್ಳುವ ಕೆಲಸ ಮಾಡುತ್ತಿದ್ದರು.

ರುಜುವಾತು, ಶೂದ್ರ, ಅಂಕಣ, ಸಂವಾದ, ಸಂಕ್ರಮಣ, ಪರಿಚಯ, ಸಂಚಯ, ಸೃಜನವೇದಿ ಹೀಗೆ ಅನೇಕ ಸಣ್ಣ ಪತ್ರಿಕೆಗಳು ಭಿನ್ನ ಸಮಯದಲ್ಲಿ ಜೀವಂತವಾಗಿದ್ದುವು. ಶ್ರೀನಿವಾಸ ರಾಜು ಕ್ರೈಸ್ಟ್ ಕಾಲೇಜು ಕನ್ನಡ ಸಂಘದ ಮೂಲಕ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ವಾರ್ಷಿಕ ಸ್ಪರ್ಧೆಗಳನ್ನು ಏರ್ಪಡಿಸುತ್ತಿದ್ದುದಲ್ಲದೇ ಎಲ್ಲರೂ ಗೌರವಿಸುವಂತಹ ಪ್ರಕಾಶನ ಕಾರ್ಯವನ್ನು ಮಾಡುತ್ತಿದ್ದರು. ವೈಎನ್ಕೆ ಪ್ರಜಾವಾಣಿಯಿಂದ ನಿವೃತ್ತರಾದರೂ, ಕನ್ನಡಪ್ರಭದತ್ತ ಹೋಗಿ, ಯುವ ಪೀಳಿಗೆಯ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದ್ದರು. ಈ ವಾತಾವರಣದಲ್ಲಿ ನನ್ನ ಮತ್ತು ನನ್ನ ವಾರಗೆಯವರ ಬರವಣಿಗೆ ಬೆಳೆಯುತ್ತಾ ಬಂತು. ಈ ಎಲ್ಲ ಗಡಿಬಿಡಿಯ ನಡುವೆಯೂ ಹಾಜರಿಲ್ಲದೇ ಹಾಜರಿದ್ದವರು ಮೂರು ಜನ. ಶಿಕಾಕೋದಲ್ಲಿದ್ದ ಎ.ಕೆ.ರಾಮಾನುಜನ್, ಮುಂಬೈನ ಯಶವಂತ ಚಿತ್ತಾಲ ಮತ್ತು ಹೈದರಾಬಾದಿನ ತಿರುಮಲೇಶ್. ರಾಮಾನುಜನ್ ಬರೆದದ್ದು ಕಡಿಮೆಯಾದ್ದರಿಂದ ಅವರ ಪ್ರಭಾವ ಮತ್ತು ಚರ್ಚೆ ಒಂದು ರೀತಿಯ ಬೌದ್ಧಿಕ ಮಟ್ಟದಲ್ಲಿ ನಡೆಯುತ್ತಿತ್ತು. ಶಿಕಾಗೋಗೆ ಹೋಗಿ ಬಂದವರ ಕಥೆಗಳು ಸಾಹಿತಿಗಳ ವಲಯದಲ್ಲಿ ಚರ್ಚಿತವಾಗುತ್ತಿತ್ತು.

ಆದರೆ ಚಿತ್ತಾಲ ಮತ್ತು ತಿರುಮಲೇಶರಿಬ್ಬರೂ ವಿಪುಲವಾಗಿ ಬರೆಯುತ್ತಿದ್ದರು. ತಿರುಮಲೇಶ್ ಮೂಲತಃ ಕವಿಯಾದ್ದರಿಂದ, ಮತ್ತು ಜೊತೆ ಜೊತೆಗೇ ನಿರ್ಭಿಡೆಯಿಂದ ಪ್ರಯೋಗಗಳನ್ನು ನಡೆಸುತ್ತಿದ್ದ ಭಾಷಾವಿಜ್ಞಾನಿ – ಬುದ್ಧಿಜೀವಿ – ಮೀಮಾಂಸಕರಾದ್ದರಿಂದ ಅವರು ನಮ್ಮ ಚರ್ಚೆ ಗಳಲ್ಲಿ ನಿರಂತರವಾಗಿರುತ್ತಿದ್ದರು. ಹೀಗಾಗಿ ನಮ್ಮ ಒಂದು ತಲೆಮಾರಿನ ಮೇಲೆ ತಿರುಮಲೇಶ್ ಗಟ್ಟಿಯಾದ ಪ್ರಭಾವವನ್ನು ಬೀರಿದ್ದರು. ಅವರು
ಭಯವಿಲ್ಲದೇ ಪ್ರಯೋಗಗಳನ್ನು ಮಾಡಬಹುದು ಎಂದು ಕಲಿಸಿಕೊಟ್ಟ ದ್ರೋಣಾಚಾರ್ಯ. ಸಾಹಿತ್ಯ ಕೃತಿಗಳಿಂದಾಚೆಗೆ ಸಾಹಿತಿಗಳ ಜೊತೆ ಸಂವಾದ ನಮಗೆ ಕಾಣದ ಕೆಲವು ಆಯಾಮಗಳನ್ನು ತೋರಿಸಿ ಕೊಡುತ್ತವೆ. ಆದರೆ ದೂರದೂರಿನಲ್ಲಿದ್ದದ್ದರಿಂದ ಮನೆಯ ಕರೆಗಂಟೆ ಬಾರಿಸಿ, ಕಾಫಿಯನ್ನು ಧೈರ್ಯದಿಂದ ಕೇಳುವ ಸವಲತ್ತು ಇಲ್ಲದ ಲೇಖಕರನ್ನು ಆಪ್ತರನ್ನಾಗಿ ಮಾಡಿಕೊಳ್ಳುವುದಕ್ಕೆ ಅವರೊಂದಿಗಿನ ಪತ್ರ ವ್ಯವಹಾರ ಪೂರಕವಾಗಿತ್ತು. ಆದರೆ, ಆ ಪತ್ರ ವ್ಯವಹಾರ ಮತ್ತು ನೇರ ಮಾತುಕತೆ ಕೆಲವರಿಗಷ್ಟೇ ದಕ್ಕುವ ಸವಲತ್ತು. ಸಮಸ್ತ ಓದುಗರಿಗೆ ಚಿತ್ತಾಲ ಮತ್ತು ತಿರುಮಲೇಶರಂತಹ ವ್ಯಕ್ತಿಗಳು ದಕ್ಕ ಬೇಕಾದರೆ ಓದುಗರ ಪರವಾಗಿ ಯಾರಾದರೂ ಅವರ ಜೊತೆಗೆ ಮಾತುಕತೆ ನಡೆಸಬೇಕಿತ್ತು.

ಚಿತ್ತಾಲರ ಬಗ್ಗೆ, ಅವರ ಕಥನ ಕಲೆಯ ಬಗ್ಗೆ ಹೇಗೆ ವಿಚಾರ ಮಾಡುತ್ತಿದ್ದರು ಎನ್ನುವುದಕ್ಕೆ ಅವರ ಸಾಹಿತ್ಯ, ಸೃಜನಶೀಲತೆ ಮತ್ತು ನಾನು ಎನ್ನುವ ಪುಸ್ತಕವೇ ಒಂದು ಮೂಲ ಗ್ರಂಥವಾಗಿತ್ತು. ಚಿತ್ತಾಲರೂ ದೂರದಲ್ಲಿದ್ದುದರಿಂದ ಅವರ ಸಂದರ್ಶನಗಳೂ ಆಗಬೇಕಿತ್ತು. ಆದರೆ ಚಿತ್ತಾಲರ ಹೆಚ್ಚಿನ ಸಂದರ್ಶನಗಳು ನಮಗೆ ಕಾಣುವುದಿಲ್ಲ. ಹೀಗಿರುತ್ತ ತಿರುಮಲೇಶರ ಒಂದು ಪ್ರಮುಖ ಸಂದರ್ಶನ ತುಷಾರ ಪತ್ರಿಕೆಗೆಂದು ರಾಜು ಆಡಕಳ್ಳಿ ಮಾಡಿದ್ದರು. ‘ಬದ್ಧತೆ ಎನ್ನುವುದು ಬಂಧನ’ ಎನ್ನುವ ಶಿರ್ಷಿಕೆ ಹೊತ್ತು ಬಂದ ಆ ಸಂದರ್ಶನವನ್ನು ಕಂಡು ನಾವು ಪುಳಕಿತಗೊಂಡಿದ್ದೆವು. ತಿರುಮಲೇಶರ ಬರವಣಿಗೆ ಮತ್ತು ಆಸಕ್ತಿಗಳ ವಿಸ್ತಾರವನ್ನು ಪರಿಗಣಿಸಿದರೆ ಅವರೊಂದಿಗೆ ಮಾತನಾಡಲು ಮುಗಿಯದಷ್ಟು ವಿಚಾರಗಳಿವೆ ಎಂದು ನಮಗೆಲ್ಲರಿಗೂ ತಿಳಿದು ಬರುತ್ತದೆ. ಕೆಲವೇ ಸಂಚಿಕೆಗಳನ್ನು ಹೊರತಂದ ವಸಂತ ಬನ್ನಾಡಿಯವರ ಶಬ್ದಗುಣ ಪತ್ರಿಕೆಗಾಗಿ – ಎರಡು ಕಂತುಗಳಲ್ಲಿ ಜಿ. ರಾಜಶೇಖರ ಮತ್ತು ಕೆ. ಫಣಿರಾಜ್ ವಿಸ್ತೃತ ಸಂದರ್ಶನವನ್ನು ಮಾಡಿದ್ದರು. ತಿರುಮಲೇಶರ ಆಲೋಚನಾ ಸರಣಿ, ಅದು ಬೆಳೆದು ಬಂದುದರ ಹಿನ್ನೆಲೆ, ಸಂಕೀರ್ಣ ವಿಷಯಗಳ ಬಗ್ಗೆ ಅವರು ಆಲೋಚಿಸುತ್ತಿದ್ದ ರೀತಿಯನ್ನು ಈ ಸಂದರ್ಶನ ಬಹಳ ಚೆನ್ನಾಗಿ ಗ್ರಹಿಸಿತ್ತು.

ಓದುಗರಾಗಿ ನಮಗೆ ತಿರುಮಲೇಶರು ಇನ್ನಷ್ಟು ದಕ್ಕಲು ಈ ಸಂದರ್ಶನ ಅನುವು ಮಾಡಿ ಕೊಟ್ಟಿತ್ತು. ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿಯ ಗೌರವ ಪ್ರಶಸ್ತಿ ಬಂದಾಗ ನಾನು ತಿರುಮಲೇಶರ ಒಂದು ಸಂದರ್ಶನವನ್ನು ಮಾಡಿದ್ದೆ. ಇಂಗ್ಲೀಷಿನಲ್ಲಿ ಪ್ರಕಟವಾಗಿದ್ದ ಆ ಸಂದರ್ಶನದ ನಂತರ ನಾನು ತಿರುಮಲೇಶರ ಕ್ಷಮಾಯಾಚನೆಯನ್ನು ಮಾಡಿದೆ. ಕಾರಣವಿಷ್ಟೇ. ಆ ಸಂದರ್ಶನದಲ್ಲಿ ನಾನು ಕೇಳಿದ ಪ್ರಶ್ನೆಗಳು, ತಿರುಮಲೇಶರು ಕೊಟ್ಟ ಉತ್ತರಗಳನ್ನು ಹಿಡಿದು ನನ್ನದೇ ಭಾಷೆಯ ಒಂದು ಲೇಖನವನ್ನು ನಾನು ಬರೆದಿದ್ದೆನಾಗಲೀ ಅದರಲ್ಲಿ ತಿರುಮಲೇಶರ ದನಿಯಿರಲೇ ಇಲ್ಲ. ತಿರುಮಲೇಶರು ಸಂದರ್ಶನ ಪ್ರಶ್ನೋತ್ತರ ಫಾರ‍್ಮಾಟಿನಲ್ಲಿರಲಿ ಎಂದು ಹೇಳಿದ್ದರೂ ಕೇಳದೆ ನನ್ನ ಜಿದ್ದಿಗೆ, ನನ್ನ ಬೈಲೈನಿನ ಸ್ವಾರ್ಥಕ್ಕೆ ಒಂದು ವರದಿ ಎನ್ನುವ ರೀತಿಯಲ್ಲಿ ಅದನ್ನು ಮಾಡಿದ್ದೆ. ಹಲವು ವರ್ಷಗಳ ನಂತರ ಮಿಲನ್ ಕುಂದೆರಾನ ಆರ್ಟ್ ಆಫ್ ದ ನಾವೆಲ್ ಪುಸ್ತಕದಲ್ಲಿ 63 ಪದಗಳು ಎನ್ನುವ ಅಧ್ಯಾಯದಲ್ಲಿ ಸಂದರ್ಶನ ಎನ್ನುವ ಪದದ ವ್ಯಾಖ್ಯೆ ಓದಿದಾಗ ನಾನು ಮಾಡಿದ್ದ ತಪ್ಪಿನ ಅರಿವಾಗಿತ್ತು. ಆಗ ನಾನು ತಿರುಮಲೇಶರ ಕ್ಷಮಾಯಾಚನೆಯನ್ನು ಮಾಡಿದ್ದೆ.

ತಿರುಮಲೇಶರು ಎಂದಿಗೂ ಸಣ್ಣ ವ್ಯಕ್ತಿತ್ವದವರಾಗಿರಲಿಲ್ಲ. ಅವರು ಇದನ್ನು ತಮ್ಮ ಮನಸ್ಸಿನಲ್ಲಿಟ್ಟುಕೊಳ್ಳದೇ ಕ್ಷಮಿಸಿದರು ಅನ್ನಿಸುತ್ತದೆ. ಆ ನಂತರ ಪ್ರಾಯಶ್ಚಿತ್ತ ಎನ್ನುವಂತೆ ಅವರಿಗೆ ಕೇಂದ್ರ ಸಾಹಿತ್ಯ ಅಕಾದಮಿಯ ಪುರಸ್ಕಾರ ಸಂದಾಗ ಮತ್ತೊಮ್ಮೆ ಹೈದರಾಬಾದಿನಲ್ಲಿ ಸುದೀರ್ಘವಾಗಿ ಅವರನ್ನು ಸಂದರ್ಶನ ಮಾಡುವ ಅವಕಾಶ ಒದಗಿಬಂತು. ಈ ಬಾರಿ ಅವರಿಗೆ (ಹಾಗೂ ನನಗೂ) ನ್ಯಾಯ ಮಾಡಿದೆನೆಂದು ಎಣಿಸುತ್ತೇನೆ. ಈ ಸಂದರ್ಶನದಲ್ಲಿ ಅವರ ಬಹುಮುಖಿ ಆಸಕ್ತಿಗಳನ್ನು, ನಿಲುವುಗಳನ್ನು ಇಂಟರಾಗೇಟ್ ಮಾಡುವ ಪ್ರಯತ್ನವಿದೆ. ಹೆಚ್ಚೂ ಕಡಿಮೆ ಇದೇ ಧಾಟಿಯಲ್ಲಿ ತಿರುಮಲೇಶರು ಕೆಲಸ ಮಾಡುತ್ತಿದ್ದ ಇಂಗ್ಲೀಷ್ ಅಂಡ್ ಫಾರಿನ್ ಲ್ಯಾಂಗ್ವೇಜಿಸ್ ಯೂನಿವರ‍್ಸಿಟಿಯ ವಿ.ಬಿ.ತಾರಕೇಶ್ವರ್ ಕೂಡಾ ಅವರ ಸಂದರ್ಶನವನ್ನು ಋತುಮಾನ ಡಿಜಿಟಲ್ ಪತ್ರಿಕೆಗೆ ಮಾಡಿದ್ದರು. ಅದರಲ್ಲಿ ಸಾಹಿತ್ಯ ಅಕಾಡಮಿಯ ಪ್ರಶಸ್ತಿ, ಭಾಷಾಶಾಸ್ತ್ರದ ದೃಷ್ಟಿಯಿಂದ ಕನ್ನಡದ ಪರಿಸ್ಥಿತಿ, ಸಾಹಿತಿಯೊಬ್ಬನ ಮೇಲೆ ವಿವಿಧ ಮೂಲಗಳಿಂದ ಬೀಳುವ ಪ್ರಭಾವಗಳು ಮತ್ತು ಅದನ್ನು ಮೈಗೂಡಿಸಿಕೊಳ್ಳುವ ಪ್ರಕ್ರಿಯೆಯ ಬಗ್ಗೆ ವಿಸ್ತಾರವಾಗಿ ಮಾತುಕತೆಯಾಗಿತ್ತು.

ಈ ಸಂಕಲನಕ್ಕಾಗಿ ಆ ಸಂವಾದವನ್ನು ಪಠ್ಯ ರೂಪಕ್ಕಿಳಿಸಿ, (ಮಿಕ್ಕ ಸಂದರ್ಶನಗಳಲ್ಲಿ ಇರಬಹುದಾದ ವಿಚಾರಗಳ ಪುನರಾವರ್ತನೆಯನ್ನು ತೆಗೆದು) ಸಂಪಾದಿಸಿ ಇಲ್ಲಿ ಸೇರಿಸಿದ್ದೇವೆ. ಹೈದರಾಬಾದಿನ ಗೋನವಾರ ಕಿಶನ್ ರಾವ್ ತಿರುಮಲೇಶರನ್ನು ದೀರ್ಘ ಕಾಲದಿಂದ ಬಲ್ಲವರು. ‘ಅಕ್ಷರ ಲೋಕದ ಅಂಚಿನಲ್ಲಿ’ ಎನ್ನುವ ಆತ್ಮಕಥಾನಕ ಸರಣಿಯನ್ನು ‘ಪರಿಚಯ’ ಪತ್ರಿಕೆಗಾಗಿ ತಿರುಮಲೇಶರ ಕೈಯಲ್ಲಿ ಬರೆಸಿದವರು. ‘ಸಂಗಾತ’ ಪತ್ರಿಕೆಗಾಗಿ ಕಿಶನ್ ರಾವ್ ಕೇಂದ್ರ ಸಾಹಿತ್ಯ ಅಕಾದಮಿ ಪ್ರಶಸ್ತಿ ಬಂದ ಸಂದರ್ಭದಲ್ಲಿ ನಡೆಸಿದ ಸಂದರ್ಶನವನ್ನು ಈ ಸಂಕಲನದಲ್ಲಿ ಸೇರಿಸಿಕೊಂಡಿದ್ದೇವೆ. ಈ ಸಂದರ್ಶನ ತಿರುಮಲೇಶರ ಬಾಲ್ಯದಿಂದ ಹಿಡಿದು ಅವರ ಆಸಕ್ತಿ, ಒಲವು, ಶೈಲಿ, ಭಾಷಾ ಪ್ರೇಮವನ್ನು ಗ್ರಹಿಸಲು ಪ್ರಯತ್ನಿಸುತ್ತದೆ. ಈ ಸಂಕಲನದಲ್ಲಿ ಕಟ್ಟ ಕಡೆಯದಾಗಿ ಇರುವ ಸಂದರ್ಶನ ತಿರುಮಲೇಶರು ಸ್ವತಃ ತಮ್ಮನ್ನೇ ಪ್ರಶ್ನೆಗಳನ್ನು ಕೇಳಿ ಉತ್ತರಿಸಿರುವ ನನಗೆ ನಾನೇ ಎನ್ನುವುದು. ಸಂದರ್ಶಕರು ಕೇಳಿರಲಾರದ, ಆದರೆ ಕೇಳಬಹುದಾಗಿದ್ದ ಪ್ರಶ್ನೆಗಳಿಗೆ ತಿರುಮಲೇಶ್ ಉತ್ತರಿಸಿದ್ದಾರೆ. ಒಂದು ರೀತಿಯಲ್ಲಿ ಇದುವೂ ಅವರ ಪ್ರಯೋಗಾತ್ಮಕ ವ್ಯಕ್ತಿತ್ವದ ಪ್ರತೀಕವೇ ಆಗಿದೆ.

ಈ ಎಲ್ಲಕ್ಕಿಂತ ಮಿಗಿಲಾಗಿ, ಮುಖಾಮುಖಿ ಸಂಕಲನ ಬಂದ ಸಂದರ್ಭದಲ್ಲಿ ತಿರುಮಲೇಶರ ಕವಿತೆಗಳ ಬಗ್ಗೆ ವಿಸ್ತೃತವಾಗಿ ರುಜುವಾತು ಪತ್ರಿಕೆಯಲ್ಲಿ ಒಂದು ದೀರ್ಘ ಲೇಖನವನ್ನು ಬರೆದಿದ್ದ, ಸಾಹಿತ್ಯ ಅಕಾದಮಿಗೆ ತಿರುಮಲೇಶರ ಬಗ್ಗೆ ಒಂದು ಪುಸ್ತಕವನ್ನು ಬರೆದಿದ್ದ ಎಸ್.ಆರ್.ವಿಜಯಶಂಕರ್ ಅವರು ಕರ್ನಾಟಕ ಸಾಹಿತ್ಯ ಅಕಾಡಮಿಗೆಂದು ತಿರುಮಲೇಶರ ದೀರ್ಘ ಸಂದರ್ಶನವನ್ನು ಮಾಡಿದ್ದರು. ಈ ಸಂದರ್ಶನ ಎಂಟು ಭಾಗಗಳಲ್ಲಿ ಯೂಟ್ಯೂಬ್ ಮೇಲೆ ಲಭ್ಯವಿದೆ. ಈ ಸಂಕಲನಕ್ಕೆ ಆ ಸಂವಾದವನ್ನೂ ಸೇರಿಸಿಕೊಳ್ಳಬೇಕೆನ್ನುವ ಬಯಕೆ ನಮಗಿತ್ತು. ಆದರೆ ಅದರ ಗಾತ್ರ, ಆ ಸಂವಾದವನ್ನು ಬರಹರೂಪಕ್ಕಿಳಿಸುವ ಸವಾಲುಗಳು, ಅದರಲ್ಲಿನ ಸುತ್ತಲಿನ ಗದ್ದಲದಿಂದಾಗಿ ಆಡಿಯೋ ಸರಿಯಾಗಿ ಕೈಗೆ ಸಿಗದಿದ್ದ ಕಾರಣವಾಗಿ ಅದನ್ನು ಕೈಬಿಡಬೇಕಾಯಿತು. ಆದರೆ ತಿರುಮಲೇಶರ ಬಗ್ಗೆ ಆಸಕ್ತಿಯಿರುವವರು ಅದನ್ನು ನೋಡಬೇಕೆಂದು ನಾವು ಒತ್ತಾಯಪೂರ್ವಕವಾಗಿ ಪ್ರೋತ್ಸಾಹಿಸುತ್ತೇವೆ.

ಈ ಪ್ರಸ್ತಾವನೆಯ ಅಂತ್ಯದಲ್ಲಿ ಆ ಸಂವಾದಗಳ ವೆಬ್ ಲಿಂಕನ್ನು ಕೊಟ್ಟಿದ್ದೇವೆ. ಹೀಗೊಂದು ಸಂಕಲನ ಮಾಡಬಹುದೆಂದು ಆಲೋಚಿಸಿ, ಅದನ್ನು ಪ್ರಕಟಿಸುವ ಜವಾಬ್ದಾರಿಯನ್ನು ಕೈಗೊಂಡವರು ಗೆಳೆಯರಾದ ವಿವೇಕ ಶಾನಭಾಗ. ಅವರು ತಮ್ಮ ಬಹುವಚನ ಪ್ರಕಾಶನ ಸಂಸ್ಥೆಯಿಂದ ಈ ಪುಸ್ತಕವನ್ನು ಹೊರತರುತ್ತಿರುವುದು ಎಲ್ಲ ರೀತಿಯಿಂದಲೂ ಸಮರ್ಪಕವೆಂದೇ ಹೇಳಬೇಕು. ಈ ಪುಸ್ತಕದ ಆಲೋಚನೆಯನ್ನು ಮೊದಲಿಗೆ ನಾನು ತಿರುಮಲೇಶರ ಪತ್ನಿ ನಿರ್ಮಲಾರೊಂದಿಗೆ ಪ್ರಸ್ತಾಪಿಸಿದೆ. ಅವರು ಹಳೆಯ ಹಸ್ತಪ್ರತಿಗಳನ್ನು ಹುಡುಕಿ ತೆಗೆದು ಅದನ್ನು ನನಗೆ ಕಳುಹಿಸಿದರು. ಹೈದರಾಬಾದಿನ ಗೋನವಾರ ಕಿಶನ್ ರಾವ್ ಅವರ ಸ್ನೇಹ ಸಹಕಾರವನ್ನೂ ನಾನು ಇಲ್ಲಿ ನೆನೆಯಬೇಕು. ಅವರಿಂದಾಗಿ ತಾರಕೇಶ್ವರ್ ಅವರ ಸಂವಾದ ಮತ್ತು ಸ್ವತಃ ಕಿಶನ್ ರಾವ್ ನಡೆಸಿದ ಸಂವಾದವನ್ನು ಸೇರಿಸಲು ಸಾಧ್ಯವಾಯಿತು. ನಿರ್ಮಲಾ ಶಬ್ದಗುಣ ಪತ್ರಿಕೆಯ ಪ್ರತಿಯನ್ನು ಕಳುಹಿಸಿದ್ದಲ್ಲದೇ, ಇಲ್ಲಿರುವ ಪ್ರತಿ ಲೇಖನದ ಕರಡನ್ನು ನೋಡಿ ತಿದ್ದಿಕೊಟ್ಟಿದ್ದಾರೆ. ಆಕೆಯ ತಾಳ್ಮೆ ಮತ್ತು ವಿಶ್ವಾಸಕ್ಕೆ ನಾವು ಸದಾ ಋಣಿಯಾಗಿರುತ್ತೇವೆ.

ಈ ಯೋಜನೆಯ ಬಗ್ಗೆ ಮೊದಲಿನಿಂದಲೂ ಆಸಕ್ತಿ ತೋರಿ ಸಹಾಯ ಮಾಡಿದವರು ಗೆಳೆಯರಾದ ಎನ್.ಎ.ಎಂ.ಇಸ್ಮಾಯಿಲ್. ಕೆಂಡಸಂಪಿಗೆಯಲ್ಲಿನ ತಿರುಮಲೇಶರ ಸಂದರ್ಶನದ ಬಗ್ಗೆ ನನ್ನ ಗಮನವನ್ನು ಸೆಳೆದದ್ದಲ್ಲದೇ, ದೃಶ್ಯ ಮಾಧ್ಯಮದಲ್ಲಿದ್ದ, ಮತ್ತು ಅಚ್ಚಿನ ಪ್ರತಿಯಲ್ಲಿದ್ದ ಲೇಖನಗಳನ್ನು ಮತ್ತೆ ಅಕ್ಷರ ರೂಪಕ್ಕಿಳಿಸಲು ವಹೀದಾ ಅವರ ಪರಿಚಯವನ್ನು ಮಾಡಿಸಿ, ಈ ಕೆಲಸ ಸುಸೂತ್ರವಾಗಿ ಆಗುವಂತೆ ನೋಡಿಕೊಂಡರು. ತಿರುಮಲೇಶರ ಮಕ್ಕಳು – ಪ್ರೀತಿ ಸಂಯುಕ್ತಾ, ಸಿಂಧು ಅವಲೋಕಿತಾ ಮತ್ತು ಅಪೂರ್ವ ಅಪರಿಮಿತಾ – ಮೂರೂ ಜನ ಈ ಬಗ್ಗೆ ಆಸಕ್ತಿಯನ್ನು ತೋರಿದ್ದಲ್ಲದೇ, ಪ್ರೋತ್ಸಾಹದ ಮಾತುಗಳನ್ನೂ ಆಡುತ್ತಿದ್ದರು. ತಿರುಮಲೇಶರ ಸಂಸಾರ ಈ ಪುಸ್ತಕದ ಬಗ್ಗೆ ತೋರಿದ ಆಸಕ್ತಿ, ಉತ್ಸಾಹವಿಲ್ಲದಿದ್ದರೆ ಇದು ಮುಂದುವರೆಯುವುದು ಸಾಧ್ಯವಿರಲಿಲ್ಲ. ಸಂದರ್ಶನಗಳನ್ನು ಮೂಲತಃ ಮಾಡಿದ್ದ ಫಣಿರಾಜ್, ರಾಜು ಆಡಕಳ್ಳಿ, ಕಿಶನ್ ರಾವ್, ತಾರಕೇಶ್ವರ್ ಎಲ್ಲರೂ ಈ ಸಂಕಲನ ರೂಪದಲ್ಲಿ ಪುಸ್ತಕ ಪ್ರಕಟಮಾಡಲು ಅನುಮತಿ ನೀಡಿದ್ದಕ್ಕೆ ಎಲ್ಲರಿಗೂ ಕೃತಜ್ಞತೆಗಳು ಸಲ್ಲುತ್ತವೆ.

ಕನ್ನಡದ ಮುಖ್ಯ ಚಿಂತಕರಾಗಿದ್ದ ಜಿ. ರಾಜಶೇಖರ್ ನಮ್ಮ ನಡುವೆ ಇಲ್ಲ. ಅವರನ್ನು ನೆನಪು ಮಾಡಿಕೊಳ್ಳುತ್ತಲೇ ಅವರು ನಡೆಸಿದ ಸಂವಾದವನ್ನು ಇಲ್ಲಿ ಉಪಯೋಗಿಸಿಕೊಂಡಿದ್ದೇವೆ. ಈ ಸಂದರ್ಶನಗಳನ್ನು ಮೊದಲಿಗೆ ಪ್ರಕಟಿಸಿದ ಶಬ್ದಗುಣದ ವಸಂತ ಬನ್ನಾಡಿ, ತುಷಾರ ಮಾಸಪತ್ರಿಕೆ, ಹಿಂದೂ ಪತ್ರಿಕೆಯಲ್ಲಿದ್ದ ದೀಪಾ ಗಣೇಶ್, ಹಾಗೂ ನೀನಾಸಂ ಮಾತುಕತೆಯಲ್ಲಿ ಪ್ರಕಟಿಸಿದ್ದ ಕೆ.ವಿ.ಅಕ್ಷರ, ಋತುಮಾನದ ಕುಂಟಾಡಿ ನಿತೇಶ್, ಸಂಗಾತ ಪತ್ರಿಕೆಯ ಟಿ.ಎಸ್.ಗೊರವರ, ನಸುಕು ಪತ್ರಿಕೆಯ ವಿಜಯ್ ಶೆಟ್ಟಿ, ಕೆಂಡಸಂಪಿಗೆಯ ಅಬ್ದುಲ್ ರಶೀದ್ ಈ ಎಲ್ಲ ಮಹನೀಯರಿಗೂ ಕೃತಜ್ಞತೆಗಳು. ವಿಜಯಶಂಕರ್ ಅವರ ಅಕಾಡಮಿಯ ಸಂದರ್ಶನ ಈ ವಿಡಿಯೋ ಕೊಂಡಿಗಳಲ್ಲಿ ಸಿಗುತ್ತದೆ:

ಭಾಗ 1 https://www.youtube.com/watch?v=kOJW0VgApQo

ಭಾಗ 2 https://www.youtube.com/watch?v=4uu2O4p8U1I

ಭಾಗ 3 https://www.youtube.com/watch?v=sM9uJUEUdoY

ಭಾಗ 4 https://www.youtube.com/watch?v=_-YtnMq7kQ8

ಭಾಗ 5 https://www.youtube.com/watch?v=MFQkVp7bt8E

ಭಾಗ 6 https://www.youtube.com/watch?v=L9g957fjb3E

ಭಾಗ 7 https://www.youtube.com/watch?v=Iz62b_YGKfA

ಭಾಗ 8 https://www.youtube.com/watch?v=ntrFrOvJxxQ

ಈ ಸಂಕಲನ ತಿರುಮಲೇಶರ ಸಾಹಿತ್ಯವನ್ನು ಇನ್ನಷ್ಟು ಚೆನ್ನಾಗಿ ಅರಿಯಲು ಅನುವು ಮಾಡಿಕೊಡುತ್ತದೆ ಎಂದು ಆಶಿಸುತ್ತಾ.

‍ಲೇಖಕರು Admin MM

February 21, 2024

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: