ಪ್ರಮೋದ್ ಮುತಾಲಿಕರ ‘ಕ್ಷಿತಿಜ’…

ರಘುನಾಥ್‌ ಕೃಷ್ಣಾ

ಕನ್ನಡದಲ್ಲಿ ನನಗೆ ತಿಳಿದಂತೆ ಅನುವಾದಕ್ಕೆ ನೂರು ವರ್ಷಗಳ ಇತಿಹಾಸವಿದೆ. ಅದನ್ನು ಮೂರು ಘಟ್ಟಗಳಲ್ಲಿ ಗುರುತಿಸಬಹುದು. ಮೊದಲನೆಯದು ಹಟ್ಟಿಯಂಗಡಿ ನಾರಾಯಣರಾವ್ ಅವರ ಆಂಗ್ಲ ಕವಿತಾವಳಿ( ೧೯೧೮) ಅವರ ಸಮಕಾಲೀನರಾದ ಶ್ರೀ ಯವರು ಮಾಡಿದ ಇಂಗ್ಲೀಷ್ ಗೀತೆಗಳು ಮತ್ತು ಇತರ ಸಮಕಾಲೀನರು ಮಾಡಿದ ಅನುವಾದಗಳು ಈ ಘಟ್ಟದಲ್ಲಿ ಬರುತ್ತವೆ. ಇವು ಬಹುತೇಕ ರೂಪಾಂತರಗಳು. ಇವರಲ್ಲಿ ಶ್ರೀಯವರು ಪಡೆದ ಯಶಸ್ಸು ಈಗ ಹೊಸಗನ್ನಡ ಕಾವ್ಯದ ಮೈಲುಗಲ್ಲಾಗಿದೆ.

ಎರಡನೇ ಘಟ್ಟದಲ್ಲಿ  ಷೇಕ್ಸ್‌ಪಿಯರ್ ಮೊದಲುಗೊಂಡು ಹಲವು ಇಂಗ್ಲಿಷ್ ಕವಿಗಳ ವ್ಯಕ್ತಿನಿಷ್ಠ ಅನುವಾದಗಳು. ಮೂರನೇ ಘಟ್ಟದಲ್ಲಿ ಇಂಗ್ಲಿಷ್ ಅಲ್ಲದೆ ಉಳಿದ ಭಾಷಾ ಕವಿಗಳಾ ನೆರೂಡ, ಯೇಟ್ಸ, ಬ್ರೆಕ್ಟ, ರಿಲ್ಕೆ ಮುಂತಾದ ಕವಿಗಳ ಕಾವ್ಯವನ್ನು ಅನುವಾದ ಮಾಡಿದ್ದಾರೆ. ಪ್ರಸ್ತುತ ಪ್ರಮೋದ ಮುತಾಲಿಕರ ಈ ಅನುವಾದ ಮೇಲಿನ ಎಲ್ಲಾ ಪ್ರಯತ್ನಗಳಿಗಿಂತ ಭಿನ್ನವಾಗಿದೆ. ಅದಕ್ಕೆ ಕಾರಣ ಅವರು ಕೇವಲ ಇಂಗ್ಲಿಷ್ ಭಾಷೆಯ ಕವಿತೆಗಳಿಗೆ ತಮ್ಮ ಅನುವಾದವನ್ನು ಸೀಮಿತಗೊಳಿಸಿಕೊಳ್ಳದೆ ಜಗತ್ತಿನ ಹಲವಾರು ಭಾಷೆಗಳ ಮಹತ್ವದ ಕವಿತೆಗಳನ್ನು ಆರಿಸಿಕೊಂಡು ಅವನ್ನು ಕನ್ನಡದ ಜಾಯಮಾನಕ್ಕೆ ಒಗ್ಗುವಂತೆ ಅನುವಾದ ಮಾಡಿದ್ದಾರೆ.

ಎರಡನೇ ಕಾರಣ ಎಂದರೆ ಮೊದಲ ಬಾರಿಗೆ ಭಾರತೀಯ ಆಂಗ್ಲ ಕವಿಗಳ ಕವಿತೆಗಳ ಅನುವಾದವನ್ನು ಇದು ಒಳಗೊಂಡಿದೆ. ನನಗೆ ತಿಳಿದಂತೆ ಬಹುಶಃ ಇದು ಆ ಬಗೆಯ ಮೊದಲ ಸಂಕಲನ. ಈಗ ಈ ಕವಿತೆಗಳ ವಸ್ತುವಿನ ಮಹತ್ವಕ್ಕೆ ಸಂಬಂಧಿಸಿದಂತೆ, ಇಂದು ಜಗತ್ತನ್ನು ಕಾಡುತ್ತಿರುವ ಪ್ರಧಾನ ಸಮಸ್ಯೆಗಳನ್ನು ಒಳಗೊಂಡಿದೆ. ಈ ಅರ್ಥ ದಲ್ಲಿ ಇದು ನಿಜವಾದ ಜಾಗತಿಕ ಕಾವ್ಯವೆ ಸರಿ.

ಈಗ ಆ ವಸ್ತುಗಳನ್ನು ನಾನು ಐದು ಭಾಗಗಳಲ್ಲಿ ಗುರುತಿಸುತ್ತೇನೆ. ಅವು: ಸಂಕೋಲೆಯೊಳಗಿನ ಸ್ತ್ರೀ, ಯುದ್ಧ, ವಲಸೆ, ನಿರಾಶ್ರಿತರು, ಸಾವು. ಇವು ಏಕಕಾಲದಲ್ಲಿ ಪ್ರಾಚೀನವು ಹೌದು, ಅರ್ವಾಚೀನವು ಹೌದು. ‘ಮಾಯಾ ಏಂಜಲೋ’ ಅವರ ಪ್ರಸಿದ್ಧ ಕವಿತೆ ‘ಪಂಜರದ ಪಕ್ಷಿ’ ಅನುವಾದ ಇಲ್ಲಿದೆ. ‘ಹಾಡುವುದು ಪಂಜರದ ಪಕ್ಷಿ ಹೆದರಿಕೆಯ ನೆರಳಲ್ಲಿ’ ಅದು ಪಂಜರದಲ್ಲಿ ಇದ್ದರೂ ತನ್ನ ಹಾಡನ್ನು ಮಾತ್ರ ನಿಲ್ಲಿಸಿಲ್ಲ. ಅದನ್ನು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಏಕೆಂದರೆ ಅವಳದು ಅದಮನೀಯ ಶಕ್ತಿ.

ಈ ಕವಿತೆಯನ್ನು ನನ್ನ ಶ್ರೀಮತಿ ಮೊದಲುಗೊಂಡು ಹಲವರು ಅನುವಾದ ಮಾಡಿದ್ದಾರೆ. ಅಮೆರಿಕದ ಗೋಡೆಗಳ ಮೇಲೂ ಅವಳ ಕವಿತೆಗಳ ಸಾಲುಗಳನ್ನು ನೋಡಿ ನಾನು ಆಶ್ಚರ್ಯಪಟ್ಟಿದ್ದೆ. ಬಿಳಿಯರ ನಾಡಿನಲ್ಲೂ ಈ ಕಪ್ಪು ಹೆಣ್ಣಿನ ಹಾಡು. ಅವಳ ಇನ್ನೊಂದು ಕವಿತೆಯಲ್ಲಿ ತಾನೆಂದರೆ ಕೇವಲ ಸ್ಥನ, ಪೃಷ್ಠಗಳು ಮಾತ್ರವಲ್ಲದೆ ತಾನು ಹೋಗುವುದನ್ನು (ನಡೆಯುವುದನ್ನು) ನೋಡಿ ಎಂಬ ಮಾತುಗಳು ಇವೆ. ಸ್ತ್ರೀ ಎಂದರೇನೆ ಚಲನಶೀಲ ಶಕ್ತಿ. ಅವಳನ್ನು ಯಾರೂ ಬಹಳ ಕಾಲ ಬಂಧಿಸಿ ಇಡಲಾರರು.

ಹೀಗೆ ಸ್ತ್ರೀ ಶಕ್ತಿಯ (ಸೃಷ್ಟಿ) ಆರಾಧನೆ ಈ ಕಾವ್ಯದ ಮೊದಲ ಭಾಗ. ಎರಡನೇ ಭಾಗ ಅದಕ್ಕೆ ವಿರುದ್ಧವಾದ ವಿನಾಶಕಾರಿಯಾದ ಯುದ್ಧ ಮತ್ತು ಅದು ಉಂಟು ಮಾಡುವ ಅನಾಹುತಗಳ ಕುರಿತು ಇದೆ. ಇದಕ್ಕೆ ಅವರು ಮಾಡಿರುವ ರಾಬರ್ಟ್ ಸದೆಯ ಬ್ಲೆನ್ಹೀಮ್ ಕದನ’ ಕವಿತೆ ನಿದರ್ಶನವಾಗಿದೆ : ‘ಖಡ್ಗ ಮತ್ತು ಬೆಂಕಿ ಮಾಡಿದವು ವಿನಾಶ ದೇಶವನ್ನೆಲ್ಲಾ. ಗರ್ಭಿಣಿಯರು, ಪುಟ್ಟ ಕಂದಮ್ಮಗಳು ಬಿಟ್ಟರು ಜೀವ, ಆದರೂನೋಡು ಇವೆಲ್ಲ ಸಾಮಾನ್ಯ ಮಹಾವಿಜಯದ ಹಿಂದೆ ಮಹಾವಿಜಯದ ಹಿಂದೆ ಇದೆಲ್ಲಾ ಸಾಮಾನ್ಯ’ ಎನ್ನುವ ಮಾತಿನ ಹಿಂದಿನ ವ್ಯಂಗ್ಯ ಅಸದೃಶವಾದುದು.

ನಿರಾಶ್ರಿತರು: ಯುದ್ಧ ಮಾಡುವ ಅನಾಹುತಗಳಲ್ಲಿ ಸಾಲುಸಾಲಾಗಿ ನಿರಾಶ್ರಿತರು ನೀರು, ನೆಲೆಯಿಲ್ಲದೆ ಅಲೆಯ ಬೇಕಾದವರು. ಆಡೆನ್ ನ ಅದೇ ಹೆಸರಿನ ಕವಿತೆಯಲ್ಲಿ ‘ಪಾಸ್‌ಪೋರ್ಟ್‌ ಇರದಿದ್ದರೆ ನೀವು ದಾಖಲೆಗಳ ಪ್ರಕಾರ ಇದ್ದರೂ ಸತ್ತಂತೆ’ ನಿರ್ಜೀವ ದಾಖಲೆಗಳೆ ಮನುಷ್ಯನ ಇರವನ್ನು ಮತ್ತು ಅಳಿವನ್ನು ನಿರ್ಧರಿಸಲು ಇರವ ಏಕೈಕ ಸಾಧನವಾಗಿಬಿಟ್ಟಿರುವ ದುರಂತವನ್ನು ಇದು ಅನನ್ಯವಾಗಿ ಸೆರೆಹಿಡಿಯುತ್ತದೆ.

ವಲಸೆ: ಕೇಕಿ ದಾರುವಾಲಾ ಅವರ ‘ವಲಸೆಗಳು’ ಕವಿತೆ ವಲಸೆ ಉಂಟು ಮಾಡುವ ನೆನಪುಗಳ ನಾಶವನ್ನು ಕುರಿತು ‘ಈಗ ನನ್ನ ಕನಸುಗಳು ಕೇಳುವುವು ನನ್ನಮ್ಮನ ನೆನಪಾದರೂ ಇದೆಯಾ, ಎಂದು. ಏನು ಹೇಳಬೇಕೆಂದು ಗೊತ್ತಾಗುತ್ತಿಲ್ಲ’ ನೆನಪುಗಳ ನಾಶವೆಂದರೆ ನಮ್ಮ ಬೇರುಗಳ ನಾಶವೇ ಸರಿ. ಅವು ನಮ್ಮ ಅಸ್ಮಿತೆಯ ಪ್ರತೀಕ.

ಸಾವು: ಸ್ವಾಭಾವಿಕವಾಗಿ ಬರುವ ಸಾವನ್ನು ಕುರಿತು ಡನ್ ಕವಿಯ ‘ಸಾವೇ ಬಿಮ್ಮದಿರು’ ( death be not proud) ಎಂದು ಅನುವಾದಿಸಿ ಸಾವಿಗೆ ಸವಾಲು ಹಾಕಬಲ್ಲ ಮನುಷ್ಯನ ಚೈತನ್ಯ ಶಕ್ತಿಯನ್ನು ಕೊಂಡಾಡಿದ್ದಾರೆ. ಹೀಗೆ ಪ್ರಮೋದ್ ಮುತಾಲಿಕ ಅವರು ತಮ್ಮ ಜಾಗತಿಕ ಶ್ರೇಷ್ಠ ಕವಿತೆಗಳ ಅನುವಾದದ ಮೂಲಕ ಕನ್ನಡ ಅನುವಾದ ಕಾವ್ಯ ಪರಂಪರೆಯನ್ನು ಸಮರ್ಥವಾಗಿ ವಿಸ್ತರಿಸಿದ್ದಾರೆ.

ಸೃಷ್ಟಿ ಶಕ್ತಿಯ‌ ಮತ್ತೆ ಮತ್ತೆ ಪುಟಿದೇಳುವ ಪ್ರತೀಕವಾದ ಸ್ತ್ರೀ ಶಕ್ತಿಯ ಆರಾಧನೆಯೊಂದಿಗೆ, ಸಾವಿಗೆ ಸವಾಲು ಹಾಕುವ ಕಾವ್ಯದ ನಡುವೆ ಲಾಳಿಯಾಡುವ ಅವರ ಈ ಕಾವ್ಯ ನಿಜವಾಗಿ ಜೀವನ್ಮುಖಿ ಕಾವ್ಯ ಎಂದರೆ ಉತ್ಪ್ರೇಕ್ಷೆ ಖಂಡಿತ ಅಲ್ಲ. ಇಂತಹ ಕಾವ್ಯವನ್ನು ಕನ್ನಡಕ್ಕೆ ಕೊಟ್ಟ ಅವರನ್ನು ಅಭಿನಂದಿಸುತ್ತಾ ನಾನು ನನ್ನ ಹದಿಹರೆಯದಲ್ಲಿ ಪಿ.ಯು.ಸಿ ಯಲ್ಲಿ ಪಠ್ಯವಾಗಿದ್ದ ಕ್ರಿಸ್ಟಿನಾ ರೊಸೆಟ್ಟಿ ಅವರ ‘ಅಪ್ ಹಿಲ್’ ಎನ್ನುವ ಕವಿತೆಯನ್ನು ‘ಶಿಖರಾಗ್ರ’ ಎಂದು ಅನುವಾದ ಮಾಡಿದ್ದನ್ನು, ಅವರು ಅನುವಾದ ಮಾಡಿದ್ದಾರೆ ಎಂಬುದು ನನಗೆ ಸಂತೋಷ ಕೊಡುವ ಸಂಗತಿಯಾಗಿದೆ.

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: