ಬದುಕಿನ ಪಯಣ ಮುಗಿಸಿ ಹೊರಟರು ‘ಕರ್ನಾಟಕವೊಂದೇ’ ಮತ್ತು ವೆಂಕಟಸುಬ್ಬಯ್ಯ…

ವಸಂತ ಶೆಟ್ಟಿ

ವೆಂಕಟಸುಬ್ಬಯ್ಯನವರು ಬದುಕಿನ ಪಯಣ ಮುಗಿಸಿ ಇಂದು ಹೊರಟರು. ಐದಾರು ವರ್ಷದ ಕೆಳಗೆ ‘ಕರ್ನಾಟಕವೊಂದೇ’ ಅನ್ನುವ ನನ್ನದೊಂದು ಚಿಕ್ಕ ಪುಸ್ತಕ ಕೊಡಲು ಅವರ ಮನೆಗೆ ಹೋಗಿದ್ದೆ. ಅವರ ಮಗ ಅರುಣ ಅವರನ್ನು ಕಂಡು ಕಾಯುತ್ತಿದ್ದೆ. ವೆಂಕಟಸುಬ್ಬಯ್ಯನವರು ಸ್ವಲ್ಪ ಆಯಾಸ ಎಂದು ಮಲಗಿದ್ದರು. ಪುಸ್ತಕದ ವಿಷಯ ಏನು ಅಂತ ಅರುಣ ಅವರು ಕೇಳಿದಾಗ, ಇದು ಕರ್ನಾಟಕವನ್ನು ಒಡೆದು ಮೂರ್ನಾಲ್ಕು ಪುಟ್ಟ ರಾಜ್ಯಗಳನ್ನು ಮಾಡಬೇಕು ಅನ್ನುವ ವಾದದ ತೊಂದರೆಗಳ ಕುರಿತು ಒಂದು ಚಿಕ್ಕ ಪುಸ್ತಕ ಅಂತ ಅದರ ಪರಿಚಯ ನೀಡಿದೆ.

ಆಗ ಅವರು ತಂದೆಯವರಿಗೆ ಈ ವಿಷಯದ ಪುಸ್ತಕ ಖಂಡಿತ ಓದುವ ಆಸಕ್ತಿಯಿರುತ್ತೆ. ಅವರ ಕರ್ನಾಟಕ ಏಕೀಕರಣದ ಚಳವಳಿ ನಡೆಯುವ ಹೊತ್ತಲ್ಲಿ ನಿಜಾಮನ ಆಳ್ವಿಕೆಯಲ್ಲಿ ಕನ್ನಡಕ್ಕೊಂದು ಲಿಪಿಯಿದೆ ಅಂತಲೂ ಗೊತ್ತಿರದ ಕನ್ನಡ ಭಾಷಿಕ ಪ್ರದೇಶಗಳಲ್ಲಿ ನಡೆದಾಡಿ ಕನ್ನಡ ಅಕ್ಷರಮಾಲೆಯ ಚಿತ್ರಗಳನ್ನು ಕೊಟ್ಟು ಕನ್ನಡ ಬರಹ ಕಲಿಯುವತ್ತ ಅಲ್ಲಿನ ಜನರಿಗೆ ಅರಿವು ಮೂಡಿಸಲು ಮಾಡಿದ ಪ್ರಯತ್ನಗಳ ಬಗ್ಗೆ ತಿಳಿಸಿದರು.

ಜೊತೆಯಲ್ಲೇ ಕರ್ನಾಟಕ ಏಕೀಕರಣವಾದರೆ ಲಿಂಗಾಯತರ ಎಣಿಕೆ ಹೆಚ್ಚಿ ಒಕ್ಕಲಿಗರಿಗೆ ಅಧಿಕಾರ ಸಿಗಲ್ಲ ಅನ್ನುವ ಅನಿಸಿಕೆಯಿಂದ ಏಕೀಕರಣವನ್ನು ಹಳೆ ಮೈಸೂರು ಭಾಗದಲ್ಲಿ ವಿರೋಧಿಸುತ್ತಿದ್ದ ಹೊತ್ತಲ್ಲಿ ಜಿ.ವಿ ಅವರಿಗೆ ಆತ್ಮೀಯರಾಗಿದ್ದ ಕೆಂಗಲ್ ಹನುಮಂತಯ್ಯನವರನ್ನು ಪದೇ ಪದೇ ಮಾತಾಡಿಸಿ ಕನ್ನಡಿಗರೆಲ್ಲ ಒಂದು ಆಡಳಿತದ ಅಡಿ ಬರಲು ನೂರಾರು ವರ್ಷಗಳ ಮೇಲೆ ಒಂದು ಅವಕಾಶ ಒದಗಿ ಬರುತ್ತಿರುವಾಗ ಅದನ್ನು ತಪ್ಪಿಸುವ ಯಾವ ಕೆಲಸವೂ ಆಗಬಾರದು.

ನಮ್ಮೊಳಗಿನ ಭಿನ್ನಾಭಿಪ್ರಾಯಗಳನ್ನು ನಾವು ಮುಂದೆ ಬಗೆಹರಿಸಿಕೊಳ್ಳೊಣ, ಆದರೆ ತಕ್ಷಣಕ್ಕೆ ಕರ್ನಾಟಕ ಏಕೀಕರಣಕ್ಕೆ ಎಲ್ಲ ರೀತಿಯಿಂದಲೂ ಕೈ ಜೋಡಿಸೋಣ ಎಂದು ಅವರ ಮನವೊಲಿಸಿದ ವಿವರ ತಿಳಿಸಿದರು. ಅದನ್ನೆಲ್ಲ ಕೇಳಿ ಥ್ರಿಲ್ ಆಗಿದ್ದೆ. ಮಲಗಿರುವ ಹಿರಿಯರನ್ನು ನಿದ್ದೆಯಿಂದ ಎಬ್ಬಿಸುವುದು ಬೇಡ ಅಂತ ಪುಸ್ತಕ ಅವರ ಕೈಗಿತ್ತು ಹೊರಟೆ. ಸಂಜೆ 4 ಗಂಟೆಗೆಲ್ಲ ಜಿ.ವಿ ಅವರೇ ಕರೆ ಮಾಡಿ ಪುಸ್ತಕ ನೋಡಿದೆ, ಓದಿದೆ, ಹಿರಿಯರೆಲ್ಲ ಸೇರಿ ಕಟ್ಟಿದ ಕನ್ನಡ ದೇಶ ಒಡೆಯಬಾರದು ಅನ್ನುವ ಕುರಿತು ಈ ಹೊತ್ತಿಗೆ ಒಳ್ಳೆಯ ಪುಸ್ತಕ ಬರೆದಿದ್ದೀರಿ.

ಓದಿ ಸಂತಸ ತಡೆಯಲಾರದೇ ನಿಮಗೆ ಕರೆ ಮಾಡಿದೆ ಅಂತ ಹತ್ತು ನಿಮಿಷ ಮಾತನಾಡಿದರು. ಅವರ ಅನುಭವದ ಅರ್ಧದಷ್ಟು ವಯಸ್ಸಾಗಿರದ ಕಿರಿಯನೊಬ್ಬನ ಜೊತೆ ಬಹುವಚನದಲ್ಲೇ ಮಾತನಾಡಿಸುವಷ್ಟು ವಿನಯವಿದ್ದ ಹಿರಿಯರ ಮಾತುಗಳನ್ನು ಕೇಳಿ ಮಾತೇ ಹೊರಡದಂತಾಗಿದ್ದೆ. ಅವರು ಇನ್ನಿಲ್ಲ ಅನ್ನುವ ಸುದ್ದಿ ಓದಿದಾಗ ಈ ನೆನಪು ಇಂದು ಸುಳಿದು ಹೋಯಿತು.

ಹೋಗಿ ಬನ್ನಿ ಹಿರಿಯರೇ..

‍ಲೇಖಕರು Avadhi

April 19, 2021

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: