ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – 7
ಮೂರ್ನಾಲ್ಕು ದಶಕಗಳ ಹಿಂದೆ ಅರ್ಥಿಕವಾಗಿ ಶಕ್ತರಿದ್ದ ಕಕ್ಷಿದಾರರು ತಮ್ಮ ಕೇಸಿನ ವಾದಕ್ಕಾಗಿ ಬೇರೆ ಊರಿನ ವಕೀಲರನ್ನು ಕರೆಸುವುದು ಒಂದು ಫ್ಯಾಷನ್ ಆಗಿತ್ತು.
ಈ ಅಭ್ಯಾಸದ ಭಾಗವಾಗಿ ಜಿಲ್ಲಾ ನ್ಯಾಯಾಲಯದ ವಕೀಲರನ್ನು ವಿಚಾರಣಾ ನ್ಯಾಯಾಲಕ್ಕೆ, ಹೈಕೋರ್ಟಿನ ಹಿರಿಯ ವಕೀಲರನ್ನು ಜಿಲ್ಲಾ ನ್ಯಾಯಾಲಯಗಳಿಗೆ ಮತ್ತು ಸುಪ್ರಿಂ ಕೋರ್ಟಿನ ಪದಾಂಕಿತ ಹಿರಿಯ ವಕೀಲರನ್ನು ಬೇರೆ ಬೇರೆ ಹೈಕೋರ್ಟುಗಳಿಗೆ ಆಹ್ವಾನಿಸುತ್ತಿದ್ದರು. ಈ ಪದ್ಧತಿ ಈಗಲೂ ಜಾರಿಯಲ್ಲಿದೆ. ಆದರೆ, ಈ ಮೊದಲಿನಷ್ಟು ವ್ಯಾಪಕವಾಗಿಲ್ಲ.
ಆ ಕಾಲದಲ್ಲಿ ಭಾರತದ ಎಲ್ಲಾ ಕಡೆಗಳಲ್ಲಿ ‘ಗೆಸ್ಟ್ ಅಪಿಯರೆನ್ಸ್’ಗೆ ಬಾಂಬೆಯ ವಕೀಲರಿಗೆ ಅತ್ಯಂತ ಬೇಡಿಕೆ ಇದ್ದ ಸಮಯ. ಸೀನಿಯರ್ ಎಂದು ಡೆಸಿಗ್ನೇಟ್ ಆಗದ ವಕೀಲರಿಗೂ ಸಹ ಬೇರೆ ರಾಜ್ಯಗಳ ಟ್ರಿಬ್ಯುನಲ್ ಮತ್ತು ನ್ಯಾಯಾಲಯಕ್ಕೆ ಹಾಜರಾಗಲು ಬಹಳ ಬೇಡಿಕೆಯನ್ನು ಹೊಂದಿದ್ದರು.
ಇದು ಅಂತದ್ದೇ ಬಾಂಬೆ ವಕೀಲರೊಬ್ಬರ ಕತೆ. ಅವರು ಪಾರ್ಸಿ ಸಮುದಾಯದವರಾಗಿದ್ದರು. ಬಾಂಬೆಯ ಮಟ್ಟಿಗೆ ಸಾಧಾರಣ ಎನ್ನಬಹುದಾದ ಸಿವಿಲ್ ಪ್ರಾಕ್ಟೀಸ್ ಇತ್ತು. ಹೆಚ್ಚಾಗಿ ಪದಾಂಕಿತ ಹಿರಿಯ ವಕೀಲರಿಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದರು. ತಮ್ಮ ವೃತ್ತಿಯನ್ನು ವಿಸ್ತರಿಸುವ ಉದ್ದೇಶದಿಂದ ಬಾಂಬೆ ಹೈಕೋರ್ಟಿನಲ್ಲೂ ವಕಾಲತ್ತನ್ನು ಮಾಡುತ್ತಿದ್ದರು. ಇದರ ಹೊರತಾಗಿ ಹೊರರಾಜ್ಯಗಳ ಬೇಡಿಕೆಯನ್ನೂ ಪೂರೈಸುತ್ತಿದ್ದರು.
ಅವರಲ್ಲಿ ಎರಡು ಪ್ರಮುಖ ಅಂಶಗಳಿದ್ದವು. ಎತ್ತರವಾಗಿ ಸ್ಫುರದ್ರೂಪಿಯಾಗಿಯೂ, ಪ್ರಭಾವಶಾಲಿ ವ್ಯಕ್ತಿತ್ವ ಮತ್ತು ಇಂಗ್ಲಿಷ್ ಭಾಷೆಯ ಮೇಲೆ ಅಪಾರವಾದ ಹಿಡಿತ. ಈ ಎರಡೇ ಗುಣಗಳು ಸಾಕಿತ್ತು ಆ ಕಾಲದ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರನ್ನು ಮೆಚ್ಚಿಸಲು.
ಹೀಗಿರುವಾಗ, ದೆಹಲಿಯ ಒಬ್ಬ ಜೂನಿಯರ್ ವಕೀಲರು ತಿಸ್ ಹಜಾರಿ ನ್ಯಾಯಾಲಯದಲ್ಲಿ ನಿಗಧಿಯಾಗಿದ್ದ ಪ್ರಕರಣವೊಂದಕ್ಕೆ ಈ ಬಾಂಬೆ ವಕೀಲರನ್ನು ನೇಮಿಸಿಕೊಳ್ಳಲು ನಿರ್ಧರಿಸಿದರು. ಕಕ್ಷಿದಾರನಿಗೂ ‘ಬಂಬೈ ಕಾ ವಕೀಲ್’ ಬೇಕಿದ್ದರು. ಒಳ್ಳೆಯ ಪರ್ಸನಾಲಿಟಿ ಮತ್ತು ನಿರರ್ಗಳ ಇಂಗ್ಲಿಷ್ ಇರುವ ಈ ಎರಡನೇ ಸ್ಥಾನದ ಪಾರ್ಸಿ ವಕೀಲರು, ಪಂಜಾಬಿ ಬ್ರಿಫಿಂಗ್ ವಕೀಲರಿಗೂ ಮತ್ತು ಅವರ ಆನ್ ರೆಕಾರ್ಡ್ ವಕೀಲರಿಗೂ ಇದು ಉತ್ತಮ ಆಯ್ಕೆಯಾಗಿ ಕಂಡಿತು.
ಬಾಂಬೆ ವಕೀಲರನ್ನು ಹಿಂದಿನ ದಿನವೇ ವಿಮಾನದಲ್ಲಿ ಕರೆಸಿ, ಒಳ್ಳೆ ಹೋಟೆಲೊಂದರಲ್ಲಿ ರೂಂ ಬುಕ್ ಮಾಡಿ ಉಳಿಸಿದರು. ಕೇಸಿನ ಪೂರ್ತಿ ಬ್ರೀಫ್ ಅನ್ನು ಚೆನ್ನಾಗಿ ಅರ್ಥೈಸಿಕೊಂಡು, ತಮ್ಮ ಮಾತು, ಹಾವ-ಭಾವ ಮತ್ತು ನಡವಳಿಕೆಯಲ್ಲಿ ಕಕ್ಷಿದಾರರನ್ನು ಅಪಾರವಾಗಿ ಮೆಚ್ಚಿಸಿದರು. ಆದರೆ, ಆನ್ ರೆಕಾರ್ಡ್ ವಕೀಲರು, ಜೂನಿಯರ್ ವಕೀಲರು ಮತ್ತು ಬಾಂಬೆಯಿಂದ ಕರೆಸಿಕೊಂಡಿದ್ದ ಸೀನಿಯರ್ ವಕೀಲರು ಏನೇನು ಮಾತನಾಡಿಕೊಳ್ಳುತ್ತಿದ್ದಾರೆ ಎಂಬುದು ಕಕ್ಷಿದಾರನಿಗೆ ಒಂದೂ ಅರ್ಥವಾಗಲಿಲ್ಲ. ಚರ್ಚೆಯೆಲ್ಲ ಮುಗಿದ ಮೇಲೆ, ಸೀನಿಯರ್ ವಕೀಲರು ತಾವು ನಾಳೆ ಯಾವ ಜಡ್ಜ್ ಮುಂದೆ ವಾದಿಸಬೇಕು ಎನ್ನುವ ವಿಷಯವನ್ನು ಕೇಳಿದರು.
ಅವರೊಬ್ಬ ಮಹಿಳಾ ನ್ಯಾಯಾಧೀಶರು, ಅನಗತ್ಯ ಮಾತುಗಳನ್ನು ಸಹಿಸುವುದಿಲ್ಲ. ಕಟ್ಟುನಿಟ್ಟಿನ ನ್ಯಾಯಾಧೀಶರು. ಕಾನೂನನ್ನು ಚೆನ್ನಾಗಿ ಅರ್ಥೈಸಿಕೊಂಡಿದ್ದಾರೆ ಎಂದೂ ಬಾರ್‌ನಲ್ಲಿ ಅವರಿಗೆ ಒಳ್ಳೆ ಗೌರವವಿದೆ ಎಂದೂ ಬ್ರಿಫೀಂಗ್ ವಕೀಲರು ತಿಳಿಸಿದರು.
“ಅವರು ನಿಮ್ಮಂತೆಯೇ ಪಂಜಾಬಿನವರೇ?” ಎಂದು ಸೀನಿಯರ್ ವಕೀಲರು ಕೇಳಿದರು.
“ಹೌದು ಸರ್, ಅವರೂ ಪಂಜಾಬಿನವರೇ. ಆದರೆ, ಪಕ್ಕಾ ಸರ್ದಾರ್ನಿ” ಎಂದರು.
ವಕೀಲರು ತಲೆಯಾಡಿಸಿ “ಆಗಲಿ, ನಾಳೆ ಹೇಗಾಗುತ್ತದೆಯೋ ನೋಡೋಣ” ಎಂದರು.
ಹೋಟೆಲ್ ರೂಮಿನಲ್ಲಿ ಮಲಗುವ ಮುನ್ನ ಪಾರ್ಸಿ ವಕೀಲರು, ತಿಸ್ ಹಜಾರಿ ಜಿಲ್ಲಾ ನ್ಯಾಯಾಲಯದ ಆ ಸರ್ದಾರ್ನಿ ನ್ಯಾಯಾಧೀಶರನ್ನು ಇಂಪ್ರೆಸ್ ಮಾಡುವುದು ಹೇಗೆ ಎಂದು ಯೋಚಿಸತೊಡಗಿದರು.
‘ಯುವರ್ ಆನರ್’ ಎಂದು ಕರೆಯುವುದು ಸೂಕ್ತವೇ? ಆದರೆ, ಅದು ಬಹಳ ಸಾಮಾನ್ಯವಾಯಿತು. ತಾವು ಪ್ರತಿಷ್ಠಿತ ಬಾಂಬೆ ಹೈಕೋರ್ಟಿನಿಂದ ವಿಶೇಷವಾಗಿ ಕರೆಸಲ್ಪಟ್ಟ ವಕೀಲರು ಎಂಬುದನ್ನು ತೋರಿಸಲು ಏನಾದರೂ ಮಾಡಬೇಕು ಎಂದುಕೊಂಡರು.
ಆ ವೇಳೆಗೆ, ಬಾಂಬೆ ಹೈಕೋರ್ಟಿನಲ್ಲಿದ್ದ ಏಕೈಕ ಮಹಿಳಾ ನ್ಯಾಯಮೂರ್ತಿಯನ್ನು ಹಿರಿಯ ವಕೀಲರು ಸಂಬೋಧಿಸುತ್ತಿದ್ದಂತೆಯೇ ಇವರನ್ನೂ ಸಂಬೋಧಿಸಲು ನಿರ್ಧರಿಸಿದರು. ಈ ಜಿಲ್ಲಾ ನ್ಯಾಯಾಧೀಶರಿಗೆ ಉನ್ನತ ಸ್ಥಾನ ಕೊಡುವಂತೆ “ಮೈ ಲೇಡಿ!” ಎಂದು ಕರೆಯುವ ಮೂಲಕ ಅವರಿಗೆ ಹೈಕೋರ್ಟ್ ಮಟ್ಟದ ಗೌರವ ನೀಡಲು ತೀರ್ಮಾನಿಸಿ, ನೆಮ್ಮದಿಯಿಂದ ನಿದ್ರಿಸಿದರು.
ಆ ಹೆಚ್ವುವರಿ ಜಿಲ್ಲಾ ನ್ಯಾಯಾಧೀಶರು ಸಂಪ್ರದಾಯಸ್ಥ ಸರ್ದಾರ್ನಿಯಾಗಿದ್ದರು. ತಮ್ಮ ಸಂಪ್ರದಾಯದಂತೆ ತಲೆಗೆ ಸ್ಕಾರ್ಫ್ ಧರಿಸಿ ಕುಳಿತುಕೊಳ್ಳುತ್ತಿದ್ದರು.
ಪ್ರಕರಣದ ವಿಚಾರಣೆ ಆರಂಭವಾದಾಗ ಬಾಂಬೆಯ ಪಾರ್ಸಿ ಸೀನಿಯರ್ ವಕೀಲರು ತಮ್ಮ ಇಂಗ್ಲಿಷ್ ಶೈಲಿಯ ಗಂಭೀರ ಧ್ವನಿಯಲ್ಲಿ “ಮೈ ಲೇಡಿ” ಎಂದು ಸಂಬೋಧಿಸಿ ವಾದ ಪ್ರಾರಂಭಿಸಿದರು. ನ್ಯಾಯಾಧೀಶರು ಅದನ್ನು ಕೇಳಿ ದಂಗಾದರು. ಆದರೆ, ಅವರ ಮುಜುಗರವನ್ನು ಗಮನಿಸದ ವಕೀಲರು ತಾವು ಮಂಡಿಸುತ್ತಿರುವ ಅಂಶವು ಬ್ರಿಟಿಷ್ ಕಾಮನ್ ಲಾ ಅಡಿಯಲ್ಲಿ ಹೇಗೆ ವಿಕಸನಗೊಂಡಿದೆ ಎಂದು ಮಾತು ಮುಂದುವರೆಸಿದರು.
ಆ ನ್ಯಾಯಾಧೀಶರು ಸಂಪ್ರದಾಯಸ್ಥ ಹಿನ್ನೆಲೆಯಿಂದ ಬಂದವರು. ಪ್ರತಿ ವಾಕ್ಯದ ನಂತರ ಈ ಪಾರ್ಸಿ ವಕೀಲರು “ಮೈ ಲೇಡಿ” ಎನ್ನುತ್ತಿದ್ದಂತೆ, ಅವರ ಅಸಮಾಧಾನ ಹೆಚ್ಚಾಗುತ್ತಿರುವುದನ್ನು ಆನ್ ರೆಕಾರ್ಡ್ ವಕೀಲರು ಮತ್ತು ಜೂನಿಯರ್ ವಕೀಲರು ಇಬ್ಬರೂ ಗಮನಿಸಿದರು.
ಅದೃಷ್ಟವಶಾತ್, ಊಟದ ವಿರಾಮದ ಕಾರಣವಾಗಿ ಸ್ಫೋಟಗೊಳಲಿದ್ದ ಆವೇಶ ತಿಳಿಯಾಯಿತು. ವಿರಾಮದ ಸಮಯದಲ್ಲಿ ಮಹಿಳಾ ನ್ಯಾಯಾಧೀಶರು ಜೂನಿಯರ್ ವಕೀಲರನ್ನು ತಮ್ಮ ಚೇಂಬರ್ ಗೆ ಕರೆಸಿ ಕೋಪದಿಂದ “ಇಲ್ಲಿಗೆ ಯಾವ ಇಂಗ್ಲೀಷರ ಮಗನನ್ನು ಹಿಡಿದು ತಂದಿದ್ದೀರಿ” ಎಂದು ಗದರಿದರು.
ಈ ಫಾರಿನ್ ವಕೀಲರು ಯಾರೆಂದೂ, ಯಾಕೆ ಪ್ರತಿ ಸಲ “ಮೈ ಲೇಡಿ” ಎಂದು ಕರೆಯುತ್ತಿದ್ದಾರೆಂದೂ ಅವರು ಕೇಳಿದರು. “ಆ ಮರ್ಯಾದೆ ಇಲ್ಲದವನಿಗೆ ನ್ಯಾಯಾಧೀಶರನ್ನು ಹೇಗೆ ಸಂಬೋಧಿಸಬೇಕೆಂದೂ ಗೊತ್ತಿಲ್ಲವೇ?” ಎಂದು ಗುಡುಗಿದರು.
ಇನ್ನೊಮ್ಮೆ ಆತ ತಮ್ಮನ್ನು “ಮೈ ಲೇಡಿ” ಎಂದು ಕರೆದರೆ, ನ್ಯಾಯಾಂಗ ನಿಂದನೆಯ ಅಡಿಯಲ್ಲಿ ಕ್ರಮ ಜರುಗಿಸುವುದಾಗಿ ಆ “ಇಂಗ್ಲಿಷರ ಮಗನಿಗೆ” ತಿಳಿಸುವಂತೆ ಜೂನಿಯರ್ ವಕೀಲರಿಗೆ ಎಚ್ಚರಿಕೆ ನೀಡಿದರು.
ಹೆದರಿದ ಜೂನಿಯರ್ ವಕೀಲರು ಓಡೋಡಿ ಹೋಟೆಲ್ ನಲ್ಲಿ ಊಟ ಮಾಡುತ್ತಿದ್ದ ಸೀನಿಯರ್ ವಕೀಲರಿಗೆ ಈ ಬೆದರಿಕೆಯ ಮಾತುಗಳನ್ನು ತಿಳಿಸಿದರು.
ಅಭ್ಯಾಸಬಲದಿಂದ ಬಾಯಿತಪ್ಪಿ “ಮೈ ಲೇಡಿ “ ಎಂದು ಬಂದುಬಿಟ್ಟರೆ ಕಂಟೆಂಪ್ಟ್ ಆಗಬಹುದೆಂಬ ಗಾಬರಿಯಿಂದ ಹೆದರಿದ ಪಾರ್ಸಿ ವಕೀಲರು, ಆ ಸರ್ದಾರ್ನಿ ವಕೀಲರ ಕೆಂಗಣ್ಣಿಗೆ ಗುರಿಯಾಗುವ ಬದಲು ತಕ್ಷಣವೇ ಲಗೇಜ್ ಪ್ಯಾಕ್ ಮಾಡಿ ಬಾಂಬೆಗೆ ಓಡಿಹೋಗುವುದು ಲೇಸು ಎಂದು ನಿರ್ಧರಿಸಿದರು.
ಆ ಸಮಯದಲ್ಲಿ ಈ ಪಾರ್ಸಿ ವಕೀಲರನ್ನು ಬಾಂಬೆ ಹೈಕೋರ್ಟಿನ ನ್ಯಾಯಾಧೀಶರಾಗಿ ಎಲಿವೇಟ್ ಆಗುವ ಗಾಳಿ ಸುದ್ದಿಯೂ ಹೆಚ್ಚಿತ್ತು. ಅದಕ್ಕಾಗಿಯೇ ಅವರಿಗೆ ಕೇಸ್ ಗಳೂ ಹೆಚ್ಚಾಗಿದ್ದವೂ.
ಆದ್ದರಿಂದಲೇ ಯಾವುದೇ ಕಾರಣಕ್ಕೂ ನ್ಯಾಯಾಂಗ ನಿಂದನೆಯ ನೋಟಿಸ್ ಪಡೆಯುವ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧರಿರಲಿಲ್ಲ. ‘ಪಲಾಯನಂ ಶ್ರೇಯಃ’ ಎಂದು ಭಾವಿಸಿದ ಅವರು ತಕ್ಷಣ ವಿಮಾನ ನಿಲ್ದಾಣಕ್ಕೆ ಓಡಿ, ಮುಂದಿನ ವಿಮಾನ ಹಿಡಿದು ಬಾಂಬೆಗೆ ಹೊರಟುಬಿಟ್ಟರು. ಅಷ್ಟೇ ಅಲ್ಲ ಮತ್ತೆಂದೂ ಆ ನ್ಯಾಯಾಧೀಶರ ಮುಂದೆ ಹಾಜರಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದರು!
ಅವರಿಗೆ ಆ ಅಗತ್ಯವೂ ಬೀಳಲಿಲ್ಲ. ವದಂತಿಗಳು ನಿಜವಾದವು. ಅವರು ಬಾಂಬೆ ಹೈಕೋರ್ಟಿನ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡರು. ಕಾಲಕ್ರಮೇಣ ಆ ಸರ್ದಾರ್ನಿ ಮಹಿಳಾ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರಾಗಿಯೇ ನಿವೃತ್ತರಾದರು.
ಅವರ ಕೋಪದಿಂದ ತಪ್ಪಿಸಿಕೊಂಡು ಬಂದಿದ್ದ ಆ ಪಾರ್ಸಿ ಹಿರಿಯ ವಕೀಲರು, ಭಾರತ ಮುಖ್ಯ ನ್ಯಾಯಮೂರ್ತಿಯಾಗಿ ನಿವೃತ್ತರಾದರು.






0 Comments