-ಮಂಸೋರೆ
ಸಿನೆಮಾ ಕೆಲವರಿಗೆ ಇಷ್ಟವಾಗಿರಬಹುದು, ಉಳಿದವರಿಗೆ ಇಷ್ಟವಾಗಿಲ್ಲದೇ ಇರಬಹುದು. ಅಂದಿನ ಕಾಲಕ್ಕೆ ಕನ್ನಡದಲ್ಲಿ ನಿರ್ಮಾಣವಾದ ಮಹತ್ವಾಕಾಂಕ್ಷೆಯ ಸಿನೆಮಾ ಶಂಕರ್ ನಾಗ್ ಅವರ ನಿರ್ದೇಶನದ “ಒಂದು ಮುತ್ತಿನ ಕತೆ “ ಸಿನೆಮಾ. ಅವತ್ತಿಗೆ ಆ ಸಿನೆಮಾ ಕಮರ್ಷಿಯಲಿ ಸೋತಿತ್ತು. ಆದರೆ ನನಗೆ ಆ ಸಿನೆಮಾ ತುಂಬಾ ಇಷ್ಟ. ಹಾಗೇ ಆ ಸಿನೆಮಾ ಇಷ್ಟಪಡುವವರು ಸಾಕಷ್ಟು ಮಂದಿ ಇರಬಹುದು. (ಹಿಂದಿಯ ಮೇರಾ ನಾಮ್ ಜೋಕರ್, ಅಕಿರಾ ಕುರೊಸೊವ ಅವರ ಸೆವೆನ್ ಸಮುರಾಯ್ ಅಂತಹ ಸಿನೆಮಾಗಳೂ ಬಿಡುಗಡೆ ಆದಾಗ ಕಮರ್ಷಿಯಲ್ ಲೆಕ್ಕದಲ್ಲಿ ಸೋತಿತ್ತು) ಟಾಕ್ಸಿಕ್ ಸಿನೆಮಾ ಭವಿಷ್ಯ ನಿರ್ಧಾರ ಆಗೋದಿಕ್ಕೆ ಇನ್ನೂ ಸಮಯ ಇದೆ.
ಟಾಕ್ಸಿಕ್ ಸಿನೆಮಾ ಇಷ್ಟವಾಗದೇ ಇರುವುದಕ್ಕೆ ಹಲವರಿಗೆ ಹಲವು ಕಾರಣಗಳಿರುತ್ತವೆ. ಅದು ಅವರ ವಯಕ್ತಿಕ ನಿಲುವು-ಅಭಿಪ್ರಾಯ. ಅದು ಒಂದು ಬಾರಿ ವ್ಯಕ್ತವಾದರೆ ಸರಿ, ಆದರೆ ಅವರ ವಯಕ್ತಿಕ ಅಭಿಪ್ರಾಯವನ್ನು ಉಳಿದವರು ಒಪ್ಪಲೇಬೇಕೆಂದು ಪದೇ ಪದೇ ಹೇಳುವುದಕ್ಕೆ ಏನೆಂದು ಹೇಳಬೇಕು? ಶಂಕರ್ ನಾಗ್ ಅವರಂತೆ ಹೊಸದೇನೋ ಮಾಡಬೇಕೆನ್ನುವ ಕನಸು, ಮಹತ್ವಾಕಾಂಕ್ಷೆಯ ಹಲವು ಹೋಲಿಕೆಗಳು ಯಶ್ ಅವರಲ್ಲಿಯೂ ಇದೆ. ಕೆಜಿಎಫ್ 2 ರ ದೊಡ್ಡ ಯಶಸ್ಸಿನ ನಂತರ, ಸಾಕಷ್ಟು ದೊಡ್ಡ ನಿರ್ಮಾಪಕರೂ, ನಿರ್ದೇಶಕರು ಇವರೊಂದಿಗೆ ಕೆಲಸ ಮಾಡಲು ಉತ್ಸುಕರಾಗಿದ್ದರೂ ಸಹ, ಇವರು ಬೇರೆ ಹಾದಿಯಲ್ಲಿ ತಮ್ಮನ್ನು, ತಮ್ಮಲ್ಲಿನ ಪ್ರತಿಭೆಯನ್ನು ಒರೆಗೆ ಹಚ್ಚಲು ಮುಂದಾದರು, ತಮಗೆ offer ಇದ್ದ ಅರ್ಧ ಹಣವನ್ನು ಬಂಡವಾಳವಾಗಿ ಹೂಡಿಕೆ ಮಾಡಿ, ಪರೀಕ್ಷೆಯನ್ನು ಎದುರಿಸಲು ಮುಂದಾದರು. ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. Comfort zone ಅಲ್ಲಿ ಹಣ ಮಾಡುವ ಮಾರ್ಗ ಬಿಟ್ಟು, ಎಲ್ಲರಿಗೂ ಸಲ್ಲುವ ಸುಲಭ ಹಾದಿ ಬಿಟ್ಟು, ಹೊಸ ಮಾದರಿಯ ನಿರೂಪಣೆ, ಸೈಕಲಾಜಿಕಲ್ ಶ್ರಮ ಬೇಡುವ ನಟನೆ, ಚಿತ್ರಿಕೆಯ ಜೊತೆಗೆ ಬಣ್ಣಗಳ ಮೆಟಾಫರಿಕ್ ಜೊತೆ, ಹೊಸತೇನೋ ಹುಡುಕುವ ಪ್ರಯತ್ನ ಮಾಡಿದ್ದಾರೆ, ಪ್ರಾಡಕ್ಟ್ ಆಗಿ ಸಿನೆಮಾ ಎಲ್ಲರಿಗೂ ವರ್ಕ್ ಆಗದೇ ಇರಬಹುದು, ಕರ್ನಾಟಕವನ್ನು ಬೇಸ್ ಮಾಡಿಕೊಂಡು ಇಂತಹ ದೊಡ್ಡ ಮಟ್ಟದ ಪ್ರಯತ್ನಕ್ಕೆ ಮುಂದಾಗಿರುವ ಅವರ ಪ್ರಯತ್ನವಂತೂ ಸೋತಿಲ್ಲ. ಖಂಡಿತ ಗೆಲುವಾಗಿದೆ. ಆ ಗೆಲುವಿಗೆ ಸಾಕ್ಷಿಯೇ ಕೆಲವೊಂದು ನಿರ್ದಿಷ್ಟ ಮಾದರಿಯ ಟೀಕೆಗಳು.
ಏಕಾಂಗಿ ಅಂತಹ ಪ್ರಯೋಗಾತ್ಮಕ ಸಿನೆಮಾಗೆ ನೆಲೆಕೊಟ್ಟ ಮಾರುಕಟ್ಟೆ ನಮ್ಮ ಕರ್ನಾಟಕ. ಸುಮಾರು ಹೊಸ ಮಾದರಿಯ ಪ್ರಯತ್ನಗಳು ಇಲ್ಲಿ ಈ ಹಿಂದೆಯೂ ಸೋತಿವೆ. ಆದರೆ ಇಲ್ಲಿನ ಹೆಮ್ಮೆ ಎಂದರೆ ಮತ್ತೊಂದು ಹೊಸ ಹುಚ್ಚು ಸಾಹಸಕ್ಕೆ ಮುಂದಾಗುವ ಧೈರ್ಯ ಉಳಿದ ಚಿತ್ರರಂಗಕ್ಕಿಂತ ಕನ್ನಡ ಚಿತ್ರರಂಗದಲ್ಲಿ ಇನ್ನೂ ಖಾಲಿಯಾಗಿಲ್ಲ ಎಂಬುದನ್ನು ಟಾಕ್ಸಿಕ್ ಮತ್ತೆ ನಿರೂಪಿಸಿದೆ. ಅದೂಸೀಮಿತ ಮಾರುಕಟ್ಟೆ ಎಂಬ ಹಣೆಪಟ್ಟಿ ಇದ್ದೂ ಕೂಡ. ಎಲ್ಲರಿಗೂ ಸಲ್ಲುವ ಸಿನೆಮಾ ‘ ರಾಮಾಯಣ ‘ ಇನ್ನು ಎರಡು ಮೂರು ತಿಂಗಳಲ್ಲಿ ಬರಲಿದೆ. ಅದರ ಮೂಲಕ ಯಶ್ ಅವರು ಮತ್ತೆ ಪ್ರಪಂಚದ ಮೂಲೆ ಮೂಲೆಗೂ ಈಗಿನ ಟೀಕೆಗಳನ್ನು ಮೀರಿ ಪ್ರೇಕ್ಷಕರನ್ನು ತಲುಪುತ್ತಾರೆ. ಮಾಹಿತಿಯ ಪ್ರಕಾರ ಆ ಸಿನೆಮಾದಲ್ಲೂ ಸಂಭಾವನೆಯನ್ನು ಹೂಡಿಕೆ ಮಾಡಿದ್ದಾರೆ ಎಂಬ ಸುದ್ದಿ ಓದಿದ ನೆನಪು. ಅದು ನಿಜವಾಗಿದ್ದರೆ ಅದರಲ್ಲಿ ದೊಡ್ಡ ಮಟ್ಟದ ಲಾಭದ ಹಣವೂ ಅವರಿಗೆ ಬರುತ್ತದೆ.
ಆ ಹಣದ ಜೊತೆಗೆ ಕೆವಿಎನ್ ಅವರಂತಹ ದಿಟ್ಟ, ಧೈರ್ಯವಂತ ನಿರ್ಮಾಪಕರು ಜೊತೆಯಾಗಿ ಮತ್ತೊಂದು ಹೊಸ ಹುಚ್ಚು ಸಾಹಸಕ್ಕೆ ಮುಂದಾದರೆ ಅದು ಕನ್ನಡದಲ್ಲೇ ಆಗಲಿ. ಯಾಕೆಂದರೆ ಇತಿಹಾಸದ ಪುಟಗಳಲ್ಲಿ ದಾಖಲಾಗುವುದು ವಿಶೇಷವಾದ ಪ್ರಯತ್ನಗಳೇ ಹೊರತು, ಅದೇ ಅ ಆ ಇ ಈ ಎಂದು, ಬಂದ ಪುಟ್ಟ ಹೋದ ಪುಟ್ಟ ಎಂಬ ಸಿನೆಮಾಗಳಲ್ಲ ಎಂಬುದು ಸಾರ್ವಕಾಲಿಕ ಸತ್ಯ. ಆ ಸಾಹಸ ದಾಖಲೆಗಳೆಲ್ಲ ಕನ್ನಡ ಚಿತ್ರರಂಗದ ಇತಿಹಾಸದ ಪುಟಗಳಲ್ಲೇ ಇರಬೇಕು ಎನ್ನುವ ದುರಾಸೆ ನನ್ನದು.






0 Comments