-ಲಲಿತಾ.ಕೆ.ಹೊಸಪ್ಯಾಟಿ
ಕವಿತೆ ನೆತ್ತರು ಹರಿಸುವುದಿಲ್ಲ
ಹೃದಯದಲಿ ರಕ್ತ ಹೆಪ್ಪುಗಟ್ಟಿ ಸಿ
ಉಸಿರು ನಿಲ್ಲಿಸುವುದಿಲ್ಲ
ಬಸಿರು ಬಸಿದು
ಕನಸು ಕನವರಿಕೆಗೆ ತೊರೆ ಹನಿಸುತ್ತದೆ
ಕವಿತೆ ಕಿಚ್ಚಿಗೆ ಹೆದ್ದಾರಿಯಾಗುವುದಿಲ್ಲ
ಪಾದ ಸುಟ್ಟವರ ಹೆಗಲೇರಿ
ಸವಾರಿ ಮಾಡುವುದಿಲ್ಲ
ಒಡಲ ಉರಿಗೆ ಮರುಗಿ, ಬಸಿವ ಬಕ್ಕೆಳಿಗೆ
ಮುಲಾಮು ಸವರುತ್ತದೆ
ಕವಿತೆ ಬಿದ್ದವರ ತುಳಿಯುವುದಿಲ್ಲ
ನೋವಿನಲ್ಲಿ ನಲುಗಿ ನೊಗ ಹೊತ್ತವರ
ಎದೆಗೆ ಒದೆಯುವುದಿಲ್ಲ
ಬಳಿ ಕರೆದು ಬುಸುಗುಡುವ ಹಸಿವಿಗೆ
ತುತ್ತು ಉಣಿಸುತ್ತದೆ
ಕವಿತೆ ಜಾಲಿ ಮುಳ್ಳಾಗಿ ಚುಚ್ಚುವುದಿಲ್ಲ
ಕೇದಗಿ ಬನದಲಿ ಹಾಡುವ ಕೋಗಿಲೆ
ಕೊರಳಿಗೆ ತಿವಿಯುವುದಿಲ್ಲ
ಅರಸುವ ಕರುಳ ಬಳಸಿ ಹಾಡಿಗೆ
ಧ್ವನಿಯಾಗಿ ಓಗೊಡುತ್ತದೆ
ಕವಿತೆ ಚೌಕಟ್ಟಿನಲಿ ಗೋಡೆಗೆ ತೂಗುವುದಿಲ್ಲ
ಸೂರು ಹಾರ ಪತ್ರ ಪ್ರಶಸ್ತಿ ಪ್ರಶಂಸೆಗೆ
ಕಾಡಿ ಬೇಡುವುದಿಲ್ಲ
ದಕ್ಕದ ಪದಗಳಿಗಾಗಿ ಅಡ್ಡದಿಡ್ಡಿ ಗೀಚಿದರೆ
ಒಳಗಿನ ಕವಿತೆ ಸಾಯುತ್ತದೆ.






0 Comments