ಪಿ ಶ್ರೀಧರರ್ ನಾಯಕ್ ಅವರ ‘ಮಾರ್ಜಾಲ ಮಹಾಪುರಾಣ೦’
ಪಿ ಶ್ರೀಧರರ್ ನಾಯಕ್ ಅವರ ಈ ಪ್ರಬಂಧಗಳ ಕುರಿತ ಎಚ್.ಎಸ್. ರಾಘವೇಂದ್ರ ರಾವ್ ಅವರ ಬರಹ ಇಲ್ಲಿದೆ.
-ಎಚ್.ಎಸ್. ರಾಘವೇಂದ್ರ ರಾವ್
ಮಿತ್ರರಾದ ಶ್ರೀಧರರ್ ನಾಯಕ್ ಅವರು ವೈಯಕ್ತಿಕವಾಗಿ ಅಲ್ಲದಿದ್ದರೂ ಪತ್ರಿಕೋದ್ಯಮಿಯಾಗಿ ನನಗೆ ಪರಿಚಿತರು. ಈಚಿನ ದಶಕಗಳ ‘ಲೈಮ್ ಲೈಟ್’ಗಾಗಿ ಹಂಬಲಿಸುವ ಅನೇಕ ಪತ್ರಿಕೋದ್ಯಮಿಗಳ ಹಿನ್ನೆಲೆಯಲ್ಲಿ, ವನಸುಮದಂತೆಯೇ ಉಳಿದ ಇವರು ನನಗೆ ಇಷ್ಟವಾದರು. ಈಆ ಬಗೆಯ ವೈಭವೀಕರಣಕ್ಕೆ ಅಗತ್ಯವಾದ ‘ಪಕ್ಷ’-ಪಾತವಾಗಲೀ ರೋಚಕತೆಯಾಗಲೀ ಅವರಿಗೆ ಇರಲಿಲ್ಲ. ಇವರು ವೃತ್ತಿಜೀವನದ ಅವಧಿಯಲ್ಲಿ ಬೇರೆ ಬಗೆಯ ಬರವಣಿಗೆಯಲ್ಲಿ ಇವರುಹೆಚ್ಚಾಗಿ ತೊಡಗಿಕೊಂಡಂತಿಲ್ಲ. ಅದಕ್ಕೆ ಮುಂಚೆ ‘ನಿಗೂಢತೆಯ ಬೆನ್ನೇರಿ ಹೊರಟಾಗ’ ಎಂಬ ಕಿರು ಕಾದಂಬರಿಯನ್ನೂ ಬರೆದಿದ್ದಾರೆ. ‘ಸ್ಪಂದನ’ ಎಂಬ ಲೇಖನ ಸಂಕಲನವೂ ಆಗಲೇ ಬಂದಿತ್ತು. ಕಾಮಿಕ್ ಸರಣಿ, ಛಾಯಾಗ್ರಹಣ, ಚಿತ್ರಕಲೆ ಮುಂತಾದ ವಿಭಿನ್ನ ಕಲೆಗಳಲ್ಲಿ ಅವರು ತೊಡಗಿಸಿಕೊಂಡಿದ್ದಾರೆ.
ಹಾಗೆ ನೋಡಿದರೆ, ಪತ್ರಿಕೋದ್ಯಮವು ನನ್ನ ಮಿತ್ರ ಡಿ.ವಿ. ರಾಜಶೇಖರ್ ಅವರ ಕಾವ್ಯ, ಜಿ.ಎಸ್. ಸದಾಶಿವ ಅವರ ಇನ್ನಷ್ಟು ಕಥೆಗಳು ಮುಂತಾದವನ್ನು ನುಂಗಿಕೊಂಡುದನ್ನು ನಾವು ಬಲ್ಲೆವು. ಪಾಶ್ಚಾತ್ಯ ಸಾಹಿತ್ಯದ ಅತ್ಯುತ್ತಮ ಓದುಗರಾಗಿದ್ದ ವೈ.ಎನ್.ಕೆ.ಯವರ ಪ್ರತಿಭೆಯೂ ನಗೆಬರೆಹಗಳಲ್ಲಿಯೇ ಮಾಸಿಹೋಯಿತು. ಆದರೆ, ಇಂದಿನ ಪರಿಸ್ಥಿತಿ ಭಿನ್ನವಾಗಿದೆ. ಪತ್ರಿಕೋದ್ಯಮಿಗಳಿಗೆ ಬರವಣಿಗೆ, ಬೆಳವಣಿಗೆಗಳ ಅವಕಾಶ ಹೇರಳವಾಗಿದೆ. ತಮ್ಮ ದೈನಂದಿನ ಬರವಣಿಗೆ ಮತ್ತು ಸೃಜನಶೀಲ ಕಥೆ-ಕವಿತೆಗಳ ಅಂತರವನ್ನು ಕಂಡುಕೊಂಡು ಕಾಪಾಡಿಕೊಂಡು ಬರೆದರೆ ಹಲವು ಹೊಸ ಬಾಗಿಲುಗಳು ತೆರೆಯುತ್ತವೆ. ಈ ಕೆಲಸವನ್ನು ಅದ್ಭುತವಾಗಿ ಮಾಡಿದ ಮಾರ್ಕೆಸ್, ಲಂಕೇಶ್ ಮುಂತಾದವರ ಮಾದರಿ ನಮ್ಮೆದುರಿಗಿದೆ. ಶ್ರೀಧರರ್ ಅವರಿಗೆ ಪ್ರಜಾವಾಣಿಯಲ್ಲಿಯೂ ಅಷ್ಟೊಂದು ಮನ್ನಣೆ ದೊರೆತಂತೆ ಕಾಣೆ. ಕಳೆದ ಐವತ್ತು ವರ್ಷಗಳಲ್ಲಿ ಕನ್ನಡ ಪತ್ರಿಕೋದ್ಯಮದ ಒಳಸುಳಿಗಳನ್ನು ಬಲ್ಲವರಿಗೆ ಈ ಅವಜ್ಞೆಯ ಕಾರಣವೂ ಗೊತ್ತಾಗುತ್ತದೆ.
ಅದೇನೇ ಇರಲಿ, ನಿವೃತ್ತಿಯ ನಂತರ ಅವರು ಬರವಣಿಗೆಯ ಕಡೆ ಮನಸ್ಸು ಮಾಡಿದ್ದಾರೆ. ತಾರುಣ್ಯದ ಆಸ್ತಿಯಾದ ಕಲ್ಪನೆಯ ಮೊರೆಹೊಗದೆ, ಆಕೃತಿರೂಪಣದ ಸವಾಲು ಹಾಕುವ ಕಥೆ, ಕವಿತೆ, ಕಾದಂಬರಿಗಳನ್ನು ಅವರು ಆರಿಸಿಕೊಂಡಿಲ್ಲ. ಬದಲಾಗಿ, ವಾಸ್ತವದ ನೆಲದಲ್ಲಿ ನೆನಪುಗಳ ಬೀಜ ಬಿತ್ತುವ, ನಿರ್ದಿಷ್ಟ ರೂಪವನ್ನು ಬಯಸದ ಶಿಥಿಲಬಂಧದ ಪ್ರಬಂಧ, ನಗೆಬರೆಹ ಮುಂತಾದ ಪ್ರಕಾರಗಳಲ್ಲಿ ಬರೆಯುತ್ತಿದ್ದಾರೆ. ತಾನೇ ಹಾಕಿಕೊಂಡಿರುವ ಈ ಲಕ್ಷ್ಮಣರೇಖೆಯನ್ನು ಅವರು ಮೀರಲೆಂದು ನಾವೂ ಅವರೂ ಹಾರೈಸಬಹುದು.
ಶ್ರೀಧರ್ ಅವರು ಪ್ರಕೃತಿ, ಜೀವನ ಮತ್ತು ಜೊತೆ-ಜೀವಿಗಳಿಂದ ಕಲಿತವರು. ಹಾಗೆ ಕಲಿತಿದ್ದನ್ನು ತಮ್ಮ ನೆನಪುಗಳ ಖಜಾನೆಯಲ್ಲಿ ಜೋಪಾನವಾಗಿ ಕಾಪಾಡಿಕೊಂಡವರು. ಅಷ್ಟೇ ಮುಖ್ಯವಾಗಿ, ಅವರು ಪುಸ್ತಕ-ವಿಶ್ವವಿದ್ಯಾಲಯದ ಪದವೀಧರರು. ಬಾಲ್ಯದ ದಿನಗಳ ಓದು ಅವರ ಅನುಭವದ ಸೀಮೆಗಳನ್ನು ವಿಸ್ತರಿಸಿದೆ. ವೃತ್ತಿಜೀವನದ ಅನಿವಾರ್ಯತೆ ಅವರನ್ನು ಕರ್ನಾಟಕದ ಹಲವೆಡೆಗಳಿಗೆ ಕರೆದೊಯ್ದಿದೆ. ಸ್ವಂತ ಜಿಲ್ಲೆಗೇ ಪ್ರವಾಸಿಯಂತೆ ಹೋದೆನೆಂದು ಅವರೇ ಒಂದು ಕಡೆ ಉದ್ಗಾರ ತೆಗೆಯುತ್ತಾರೆ. ಆದರೆ ಇದೆಲ್ಲದರ ಜೊತೆಗೆ ಅವರು ಸ್ವತಂತ್ರವಾಗಿ ಯೋಚನೆ ಮಾಡುವ, ತಮ್ಮದೇ ಆದ ನಿಲುವನ್ನು ತಳೆಯುವ ಶಕ್ತಿಯನ್ನು ಪಡೆದಿದ್ದಾರೆ. ಇಂತಹ ನಿಲುವುಗಳ ಒಟ್ಟಂದವೇ ಜೀವನದರ್ಶನ. ಇವರ ಗಮನಿಕೆಗಳು ಮತ್ತು ತೀರ್ಮಾನಗಳು ಅನೇಕ ಸಲ ನಮಗೂ ಸರಿ ಎನ್ನಿಸುತ್ತವೆ. ‘ಅರ್ಥವಾಗದವರು’ ಎಂಬ ಪ್ರಬಂಧದಲ್ಲಿ ಈ ಮಾತಿಗೆ ಪುರಾವೆಗಳು ಸಿಗುತ್ತವೆ. ಆ ಕಾಲದ ಶಿಕ್ಷಣ ಮತ್ತು ಓದುಗಳಲ್ಲಿ ಸಹಜವಾಗಿ ಹಾಸುಹೊಕ್ಕಾಗಿರುತ್ತಿದ್ದ ಮಾನವತಾವಾದ ಮತ್ತು ಆದರ್ಶವಾದಗಳ ಜೋಡಿ ಅವರ ಮನಸ್ಸನ್ನು ರೂಪಿಸಿವೆ. ಹಾಗೆಂದು ಅವರು ಯಾವುದೇ ರಾಜಕೀಯ ಸಿದ್ಧಾಂತದ ಅಥವಾ ಮಹಾಪುರುಷರ ಅಥವಾ ಧಾರ್ಮಿಕತೆಯ ತೀವ್ರ ಪ್ರಭಾವಕ್ಕೆ ಒಳಗಾದಂತೆಯೂ ಕಾಆಣುವುದಿಲ್ಲ. ಇವೆಲ್ಲದರ ಫಲವಾಗಿ, ನಿರ್ಲಿಪ್ತವೂ ಸೂಕ್ಷ್ಮವೂ ಆದ ನೋಡುವ ಬಗೆಯನ್ನು ಅವರ ಬರೆಹಗಳಲ್ಲಿ ಕಾಣಬಹುದು. ಅದು ಅವರ ವೃತ್ತಿಗೆ ಅಗತ್ಯವಾದ ವಸ್ತುನಿಷ್ಠತೆಯ ಪರಿಣಾಮವೂ ಇರಬಹುದು. ಅವರಲ್ಲಿ ಭಾವನೆಗಳ ಒಳಸೆಲೆ ತೀವ್ರವಾಗಿಯೇ ಇದ್ದರೂ ಅದು ಬೆಕ್ಕುಗಳ ಸಾವನ್ನು ಸಹಿಸಲಾರದಷ್ಟು ಆರ್ದ್ರವಾಗಿದ್ದರೂ ಈ ಪ್ರಬಂಧಗಳಲ್ಲಿ ಭಾವುಕತೆ ಮತ್ತು ಉತ್ಪ್ರೇಕ್ಷೆಗಳ ಸುಳಿವಿಲ್ಲ. ಉದಾಹರಣೆಗೆ, ಬಾಲ್ಯದ ನೆನಪುಗಳನ್ನು ಆನಂದಿಸುತ್ತಲೇ ಅವುಗಳನ್ನು ‘ಬಣ್ಣದ ತಗಡಿನ ತುತ್ತೂರಿ’ಗೆ ಹೋಲಿಸುತ್ತಾ ಅದರ ಅಳಿವಿಗಾಗಿ ಚಿಂತಿಸುವ ಅಗತ್ಯವಿಲ್ಲವೆಂದೇ ಅವರು ಹೇಳುತ್ತಾರೆ. ಅವರಿಗೆ ‘ನೆನಪು’ ಎನ್ನುವುದು ‘ನಾಸ್ಟಾಲ್ಜಿಯಾ’ (ಹಳಹಳಿಕೆ) ಅಲ್ಲ.
ಇಲ್ಲಿನ ಪ್ರಬಂಧಗಳನ್ನು ಬರೆದ ಕಾಲಕ್ಕೂ ಅಲ್ಲಿ ನಿರೂಪಿತವಾದ ಅನುಭವಗಳನ್ನು ಪಡೆದ ಕಾಲಕ್ಕೂ ಇರುವ ಅಂತರವು ಪ್ರಬಂಧದಿಂದ ಪ್ರಬಂಧಕ್ಕೆ ಬದಲಾಗುತ್ತದೆ. ಆ ಅಂತರವೇ ಅನುಭವದ ತೀವ್ರತೆ ಮತ್ತು ನಿರೂಪಣೆಯ ಧಾಟಿಗಳನ್ನು ನಿರ್ಧರಿಸಿದೆ. ಬಾಲ್ಯಾನುಭಗಳನ್ನು ನೆನಪಿನೋವರಿಯಿಂದ ಹೆಕ್ಕಿ ತೆಗೆಯುವಾಗ, ಅವರು ವಯಸ್ಸಿನ ಭಾರವನ್ನು ಕಳೆದುಕೊಂಡು ಬಿಡುಬೀಸಾಗಿ ಬರೆಯುತ್ತಾರೆ. ಮಾವಿನಹಣ್ಣುಗಳ ಲೂಟಿ ಪ್ರಕರಣವನ್ನು ಹೇಳುವಾಗ ಅವರನ್ನು ಅಪರಾಧೀಭಾವ ಕಾಡುವುದಿಲ್ಲ, ಕಾಡಬೇಕಾಗಿಯೂ ಇಲ್ಲ. ಇಂಥ ಬರವಣಿಗೆ ಕುವೆಂಪುರವರ ‘ರಾಮರಾವಣರ ಯುದ್ಧ’ ಎಂಬ ಅದ್ಭುತ ಪ್ರಬಂಧವನ್ನು ನೆನಪಿಗೆ ತರುತ್ತದೆ. ಬೆಕ್ಕುಗಳ ಆಗಮನ-ನಿರ್ಗಮನಗಳನ್ನು ಹೇಳುವಾಗಲೂ ಹಾಗೆಯೇ. ಇದಕ್ಕಿಂತ ಆಳವಾಗಿ ಕಲಕಿರಬಹುದಾದ ಅನುಭವಗಳನ್ನು ‘ಕಥೆ’, ‘ಕವಿತೆ’ಗಳೇ ಬೇಕು. ಪ್ರಬಂಧಗಳು ಆ ಭಾರವನ್ನು ತಾಳಲಾರವು. ಆದರೆ ವಯಸ್ಸಾದ ನಂತರದ ಅನುಭವಗಳನ್ನು ಹೇಳುವಾಗ ಲೋಕವಿಮರ್ಶೆಯ ಆಯಾಮವೊಂದು ಒದಗಿ ಬರುತ್ತದೆ. ಆ ನಿಲುವುಗಳಲ್ಲಿ ತಾನೇ ಬೇರೆ, ಲೋಕವೇ ಬೇರೆ. ಅಲ್ಲಿ ಆತ್ಮವಿಮರ್ಶೆಗಿಂತ ಅನ್ಯವಿಮರ್ಶೆ ಜಾಸ್ತಿ. ಒಂದಿಷ್ಟು ‘ನಾನೆಸರಿತನ’ವೂ ಇರುತ್ತದೆ. ಆದರೆ ಈ ಲೇಖಕರು ಪ್ರಾಣಿಲೋಕದ ಸನ್ನಿಧಿಯಲ್ಲಿ ಮಗುತನಕ್ಕೆ ಮರಳುತ್ತಾರೆ. ವಯಸ್ಸಾದ ನಂತರ ಅಕ್ಕನ ಮನೆಗೆ ಹೋಗಿ ಮಲಗಿರುವಾಗ, ಇವರ ಮೇಲೆ ಮೂರು ಬೆಕ್ಕುಗಳ ರಾಜ್ಯಭಾರ ನಡೆಸುವುದನ್ನು ಇವರು ನಿರಾತಂಕವಾಗಿ ಸಹಿಸುವುದು ಈ ಮಾತಿಗೆ ಸಾಕ್ಷಿ. ಅದು ಸಾಲದೆನ್ನುವಂತೆ ಇವರ ಅಕ್ಕ, ‘ಅವನಿಗೆ ಬೆಕ್ಕುಗಳೆಂದರೆ ಇಷ್ಟ’ ಎಂದು ಸಮಜಾಯಿಷಿ ಹೇಳುತ್ತಾರೆ! ಓದುಗರೊಂದಿಗೆ ಸಹ-ಪಯಣಿಗನಾಗಿ ಅವರ ಅನುಭವಗಳನ್ನು ಉದ್ದೀಪಿಸುವುದು ಪ್ರಬಂಧಗಳ ಒಂದು ಲಕ್ಷಣ. ಆದ್ದರಿಂದಲೇ ನಮ್ಮ ವಯಸ್ಸಿನವರ ಮತ್ತು ಹಿರಿಯರ ಪ್ರಬಂಧಗಳಲ್ಲಿ ನಾವೂ ತಲ್ಲೀನರಾಗುತ್ತೇವೆ. ಕಿರಿಯರ, ಇನ್ನಷ್ಟು ಕಿರಿಯರ ಅನುಭವ ಲೋಕ ನಮಗೆ ಬಹುಮಟ್ಟಿಗೆ ಆಗಂತುಕವಾಗಿರುತ್ತದೆ. (ಈಗಿನ ಹಲವು ಕಿರಿಯರು ಪ್ರಬಂಧಗಳನ್ನು ಬರೆಯುವುದೂ ಇಲ್ಲ, ಓದುವುದೂ ಇಲ್ಲ. ಅವುಗಳಿಗೆ ಬೇಕಾದ ವ್ಯವಧಾನ ಮತ್ತು ಮೆಂಟಲ್ ಸ್ಪೇಸ್ ಅವರಿಗೆ ಸಿಗದಂತಹ ಧಾವಂತದ ಸಮಾಜವನ್ನು ನಾವೇ ಸೃಷ್ಟಿಸಿದ್ದೇವೆ. ಅದರ ಬದಲು ಆತ್ಮಕಥನಗಳು ಮತ್ತು ‘ನೆನಪುಗಳು’ ಇಂದಿನ ಆದ್ಯತೆಗಳಾಗಿವೆ. ಸಾಮುದಾಯಿಕ ಸಂಬಂಧಗಳ ಬಂಧವು ಸಡಿಲವಾದಂತೆ ಪ್ರಸನ್ನವಾದ ಪ್ರಬಂಧರಚನೆ ಕಷ್ಟ.) ಹಾಗೆ ನೋಡಿದಾಗ, ಇಲ್ಲಿನ ಅನುಭವಗಳು ಹಲವರಿಗೆ ಕಳೆದ ಕಾಲದ ತಮ್ಮದೇ ಅನುಭವಗಳ ಮರುಕಳಿಕೆಯಾದರೆ, ಬೇರೆ ಅನೇಕರಿಗೆ ತಾವು ಪಡೆಯಲಾಗದ ಅನುಭವಗಳ ದರ್ಶನ ಮಾಡಿಸುತ್ತವೆ. ಆದರೆ, ಹಲವು ಪೀಳಿಗೆಗಳನ್ನು ಒಟ್ಟಿಗೆ ಕಟ್ಟುವುದು ಭಾವನೆಗಳ ಲೋಕವೇ. ಭಾವನೆಗಳು ಎಲ್ಲ ಕಾಲಕ್ಕೂ ಸಲ್ಲುತ್ತವೆ. ಆದರೆ ಸಮಾಜರಚನೆಯಲ್ಲೇ ಆಗುವ ಬದಲಾವಣೆಗಳು ಸಂಬಂಧಗಳ ಸ್ವರೂಪವನ್ನೂ ಬದಲಿಸುತ್ತವೆ. ಅಂದು ನೂರೆಂಟು ನಂಟರ ನಡುವೆ, ಊರಿನ ಹಲವು ಸಮುದಾಯಗಳ ನಡುವೆ ಇರುತ್ತಿದ್ದ ಸಹಜ ಸಂಬಂಧಗಳನ್ನು ಇಂದು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ. ಹಾಗೆಂದು ಆ ಕಾಲವು ಸ್ವರ್ಣಯುಗವೆಂಬ ಭ್ರಮೆಯು ನನ್ನಲ್ಲಿ ಖಂಡಿತವಾಗಿಯೂ ಇಲ್ಲ. ಆದರೆ, ನೆನಪುಗಳಿಗೆ ವಿದಾಯ ಹೇಳಿದ ಸಮಾಜದಲ್ಲಿ ಪ್ರಬಂಧಪ್ರಕಾರದ ಉಳಿವು ಕಷ್ಟ. ಪಾಶ್ಚಾತ್ಯಸಂದರ್ಭಲ್ಲಿಯೂ ಹೀಗೆಯೇ ಆಗಿದೆ. ಇಲ್ಲಿ ಹೇಳಿರುವ ಮಾತುಗಳು ಅವರ ‘ಭಾವಲೋಕ’ ಸಂಕಲನಕ್ಕೂ ಅನ್ವಯಿಸುತ್ತವೆ.
ಈ ಎರಡನೆಯ ಸಂಕಲನದಲ್ಲಿ ಏಳು ಬರೆಹಗಳಿವೆ. ಅವುಗಳಲ್ಲಿ ಒಂದು, ಸ್ವತಂತ್ರ ಕಲಾವಿದರಾದರೂ ಪತ್ರಿಕೆಗಳಿಗೆ ‘ಇಲ್ಲಸ್ಟ್ರೇಷನ್’’ ಗಳನ್ನು ಮಾಡುವ ಚಂದ್ರನಾಥ ಆಚಾರ್ಯ, ಜಿ.ಕೆ. ಸತ್ಯ ಮುಂತಾದವರನ್ನು ಕುರಿತ ಪರಿಚಯಾತ್ಮಕ ಲೇಖನ. ಇನ್ನೊಂದು ತುಳುನಾಡಿನಲ್ಲಿ, ತೌಳವ ಸಂಸ್ಕೃತಿಗೆ ಸಂಬಂಧಿಸಿದ ಪ್ರದೇಶಗಳಿಗೆ ಮಾಡಿದ ಪ್ರವಾಸಕಥನ. ಇವೆರಡೂ ಬೇರೆ ಬೇರೆ ಕಾರಣಗಳಿಗಾಗಿ ಚೆನ್ನಾಗಿದ್ದರೂ ಪ್ರಬಂಧಗಳ ವ್ಯಾಪ್ತಿಯಲ್ಲಿ ಬರುವುದಿಲ್ಲ. ‘ಮಾರ್ಜಾಲ ಮಹಾಪುರಾಣಂ’ ಮತ್ತು ‘ಬಾಲ್ಯ’ ಪೂರ್ಣ ಪ್ರಮಾಣದ ಪ್ರಬಂಧಗಳು. ಉಳಿದ ಮೂರು ಕೊಂಚ ಚಿಕ್ಕದೆನಿಸಿದರೂ ಪ್ರಬಂಧದ ಹೃದಯವನ್ನು ಹೊಂದಿವೆ. ಗಾತ್ರದ ಬಗ್ಗೆ ಚಿಂತಿಸದೆ ವಿವರವಾಗಿ ಬರೆಯಹೊರಟಾಗ ಪ್ರಬಂಧಕಾರನ ವ್ಯಕ್ತಿತ್ವದ ಹಲವು ನೆಲೆಗಳ ಅನಾವರಣ ಸುಲಭಸಾಧ್ಯ. ‘ಬೆಕ್ಕು ‘, ‘ನಾಯಿ’ಗಳ ಬಗ್ಗೆ ನೂರು ಪ್ರಬಂಧ ಇರಬಹುದು. ಆದರೆ ಅವುಗಳ ಬಗ್ಗೆ ಶ್ರೀಧರ್ ಪ್ರಬಂಧ ಬರೆದಾಗ, ಅವುಗಳ ಕೇಂದ್ರಪಾತ್ರ ಶ್ರೀಧರ್ ಅವರೇ ಹೊರತು ಬೆಕ್ಕು, ನಾಯಿಗಳಲ್ಲ ಅಂಥ ಕಡೆ ಮುಖ್ಯವಾಗುವುದು ಪ್ರಬಂಧಕಾರನ ಶೀಲ ಮತ್ತು ಶೈಲಿ. ಅದು ಮುಖ್ಯವಾದ ಎರಡು ದೀರ್ಘ ಪ್ರಬಂಧಗಳಲ್ಲಿ ಸಾಧ್ಯವಾಗಿದೆ. ಲಹರಿ ಬಂದಂತೆ ಚಲಿಸುವುದರ ಜೊತೆ-ಜೊತೆಗೇ ಹೇಳಬೇಕಾದ ಎಲ್ಲವನ್ನೂ ಹೇಳಲೇ ಬೇಕೆಂಬ ‘ಶಿಸ್ತು’ ಕೂಡ ಈ ಪ್ರಬಂಧವನ್ನು ನಿಯಂತ್ರಿಸಿದೆ. ಬೆಕ್ಕುಗಳ ಬಗ್ಗೆ ಇರುವ ಐತಿಹ್ಯ, ನಂಬಿಕೆ, ಕಥೆ, ಕವಿತೆ, ಅವುಗಳ ಸ್ವಭಾವ, ತನಗಾದ/ಅನ್ಯರ ಅನುಭವಗಳ ಸರಣಿ, ಬೆಕ್ಕುಗಳ ಸಾಂಕೇತಿಕತೆ ಎಲ್ಲವೂ ಎಲ್ಲವೂ ಇಲ್ಲಿ ಬರುತ್ತದೆ. ಹಾಗೆ ಮಾಡಬೇಕೆಂಬ ಹಂಬಲವೇ ಲೇಖಕರಿಗೆ ಕನ್ನಡಿ. ಅವರಿಗೆ ಪಾಂಡಿತ್ಯಪ್ರದರ್ಶನದ ಹಂಬಲವೇನೂ ಇಲ್ಲ. ಆದರೂ ಪ್ರಬಂಧದ ಓದುಗ ಅಷ್ಟೊಂದು ಮಾಹಿತಿಗಳನ್ನು ಬಯಸುವುದಿಲ್ಲ. ನಾವು ಶಾಲೆ-ಕಾಲೇಜುಗಳಲ್ಲಿ ಕಲಿತ ಒಳ್ಳೆಯ ಪ್ರಬಂಧದ ಲಕ್ಷಣಗಳನ್ನು ಲಲಿತ್ರಬಂಧಗಳಿಗೆ ಅನ್ವಯಿಸಬಾರದು. ಕುವಂಪು ಹೇಳಿದಂತೆ “ನೆನಪುಗಳ ಅರಣ್ಯದಲ್ಲಿ ಪೋಲಿಪೋಲಿಯಾಗಿ ತಿರುಗುವುದೇ ಪ್ರಬಂಧ”. ಶ್ರೀಧರ್ ಅವರೂ ಹೀಗೆಯೇ ತಿರುಗುತ್ತಾರೆ. ಆದರೆ ಅವರಲ್ಲಿ ಈ ಪೋಲಿತನ ಕಡಿಮೆ. ಬದಲಾಗಿ ಅರಣ್ಯದ ಗಿಡಮರಗಳ ಮೌಲ್ಯಮಾಪನವನ್ನೂ ಮಾಡುತ್ತಾರೆ. ಆದ್ದರಿಂದಲೇ ಇವು ಕಡಿವಾಣ ಹಾಕಿದ ಕುದುರೆಯಂತೆ ಓಡುತ್ತವೆ. ಇದು ‘ಗ್ರಂಥಋಣ’ವನ್ನೂ ಕೊಟ್ಟಿರುವ ಅತ್ಯಪರೂಪದ ಪರಮ ಪ್ರಾಮಾಣಿಕ ಪ್ರಬಂಧ. ‘ಬಾಲ್ಯ’ ಎನ್ನುವ ಇನ್ನೊಂದು ಪ್ರಬಂಧ ನನ್ನನ್ನು ನನ್ನೊಳಲೋಕಕ್ಕೆ ಕೊಂಡೊಯ್ದಿತು. ನಾನೂ ಅವರಂತೆಯೇ ಪುಸ್ತಕಮರುಳ. ಅಂಗಡಿಯವರು ಸಾಮಾನು ಕಟ್ಟಿಕೊಟ್ಟ ಪೊಟ್ಟಣಗಳ ಅಕ್ಷರಲೋಕ ನನಗೂ ಆಹಾರವಾಗಿದೆ. ಶಿವಮೊಗ್ಗ ಜಿಲ್ಲೆಯ ಮಲೆನಾಡಿನ ಐವತ್ತರ ದಶಕದ ಸಸ್ಯಶ್ಯಾಮಲ ಲೋಕ ಇಂದಿಗೂ ನನ್ನೆದೆಯಲ್ಲಿ ಹಸಿರಾಗಿದೆ. ನಾನು ಅಟ್ಟದ ಮೇಲೆ ಕುಳಿತು ನೂರಾರು ಪುಸ್ತಕಗಳನ್ನು ನುಂಗಿದವನು. ಈ ಪ್ರಬಂಧ ತನ್ನ ಈ ಉದ್ದೀಪಕ ಗುಣದಿಂದಲೇ ನನಗೆ ಇಷ್ಟವಾಯಿತು. ಹಾಗೆಯೇ ಇಲ್ಲಿ ಬರುವ ಹಿರಿಯರ ಚಿತ್ರಣವೂ ಆರ್ದ್ರವಾಗಿದೆ.
ಉಳಿದ ಪ್ರಬಂಧಗಳು ಬೇರೆ ಕಾರಣಗಳಿಂದ ಮುಖ್ಯವೆನಿಸಿದವು. ಇವುಗಳಲ್ಲಿ ಒಬ್ಬ ವಿಮರ್ಶಕ ಮನೆಮಾಡಿದ್ದಾನೆ. ಅವನು ಲೋಕವನ್ನು ಕಾಣುತ್ತಾನೆ, ಅರ್ಥಮಾಡಿಕೊಳ್ಳಲು ಬಯಸುತ್ತೇನೆ. ಇದು ಯಾಕೆ ಹೀಗೆ ಎಂಬ ಅಚ್ಚರಿ, ವಿಷಾದ, ಉಲ್ಲಾಸ ಎಲ್ಲವೂ ಅವನಲ್ಲಿ ಮೂಡುತ್ತವೆ. ಅವನು ಲೋಕದ ಡೊಂಕನ್ನು ತಿದ್ದಲು ಹೊರಟಿಲ್ಲ. ಆದರೆ ತನ್ನ ಭಿನ್ನಮತವನ್ನು ದಾಖಲೆ ಮಾಡುತ್ತಾನೆ. ಅವರಿಗೆ ಅರ್ಥವಾಗದವರು ಬೆಂಗಳೂರು, ಕಲ್ಬುರ್ಗಿ ಮುಂತಾದ ನಗರಗಳ ಪಟ್ಟಣವಾಸಿಗಳೇ ಆಗಿರುವುದು ಕಾಕತಾಳೀಯವಲ್ಲ. ಚಲಿಸದೆ ನಿಂತಿರುವ ಆಟೋಚಾಲಕರು, ‘ಏನಾದರೂ ತಿನ್ನುತಿರು ತಮ್ಮ’ ಎನ್ನುವ ಬಕಾಸರರ ಕೊಳ್ಳುಬಾಕತನ, ‘ಪರ ಊರಿನಲ್ಲಿ ಮಂಗ’ನಾಗುವ ಪೋಲೀಸರು, ತಮ್ಮ ತಮ್ಮ ಮೇಜುಗಳ ಹಿಂದೆ ಕುಳಿತ ಕಾರಕೂನಚಕ್ರವರ್ತಿಗಳು ಇವರೆಲ್ಲರೂ ನಮ್ಮೆಲ್ಲರ ಕೋಪತಾಪಗಳನ್ನು ಸಂಪಾದಿಸಿರುವವರೇ. ಈ ತಿಳಿವಳಿಕೆ ನಮ್ಮೊಳಗೆ ಆತ್ಮವಿಮರ್ಶೆಯ ಕಿಡಿಗಳನ್ನೂ ಉರಿಸಬೇಕು. ನಾವೂ ಬೇರೆಯವರಿಗೆ ‘ಅರ್ಥವಾಗದವರೇ’ ಆಗಿರಬಹುದು. ಇಷ್ಟೆಲ್ಲ ಹೇಳುವ ಅವಕಾಶವನ್ನೂ ನಮಗೆ ಕೊಡುವುದರಿಂದಲೇ ಇದು ಒಳ್ಳೆಯ ಪ್ರಬಂಧ. ಪ್ರಬಂಧವನ್ನು ಮುಗಿಸಿರುವ ಡಿವಿಜಿಯವರ ಮಾತುಗಳು ಸ್ವತಃ ಲೇಖಕರ ತಾತ್ವಿಕತೆಯೂ ಹೌದು. ‘ಕ್ಲೀಷೆ’ ಎಂಬ ಪ್ರಬಂಧದಲ್ಲಿಯೂ ಲೋಕವಿಮರ್ಶೆಯ ಹೊಳಹುಗಳಿವೆ. ಪತ್ರಿಕೋದ್ಯಮ,ದೂರದರ್ಶನ ಮುಂತಾದ ಕ್ಷೇತ್ರಗಳನ್ನೂ ಒಳಗೊಳ್ಳುವ ಬರೆಹ ತನ್ನದೇ ವೃತ್ತಿಯ ಕಟುವಿಮರ್ಶೆ ಮಾಡುತ್ತದೆ. ‘ಓದುವಿಕೆಗಿಂತಲೂ ತಪವು ಇಲ್ಲ’ ಎಂಬ ಆಕರ್ಷಕ ಹೆಸರಿನ ಬರವಣಿಗೆಯು, ಅಂತಹ ಓದು ಕಾಣೆಯಾಗುತ್ತಿದೆಯೇನೋ ಎಂಬ ವಿಷಾದವನ್ನೇ ಸ್ಥಾಯಿಯಾಗಿ ಹೊಂದಿದೆ. ಸಮಕಾಲೀನ ಸಾಹಿತ್ಯಲೋಕದ ಮತ್ತು ಪತ್ರಿಕೋದ್ಯಮದ ಕೊರತೆಗಳನ್ನು ನಿರ್ಭಿಡೆಯಾಗಿ ಹೇಳುತ್ತದೆ. “ಪತ್ರಿಕೆಗಳು ಮತ್ತು ನವಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ವಿಮರ್ಶೆ ಅಥವಾ ಪುಸ್ತಕ ಪರಿಚಯ ಸಾಲಿಗೆ ಸೇರದ ಬಣ್ನನೆಪೂರಿತ ಬರಹ”ಗಳು ಓದುಗನನ್ನು ಗೊಂದಲಗೊಳಿಸಿ, ಪೇಚಿಗೆ ಸಿಕ್ಕಿಸಿ ಮೋಸ ಮಾಡುತ್ತಿವೆ ಎನ್ನುವುದು ನಿಜಕ್ಕೂ ಸತ್ಯಸಮೀಪವಾಗಿದೆ. ‘ಕಥೆ ಮತ್ತು ಕಲಾವಿದರು’ ಮತ್ತು ಕೊನೆಯ ಲೇಖನಗಳು ಲಲಿತಪ್ರಬಂಧಗಳಾಗದಿದ್ದರೂ ಆರೋಗ್ಯಕರವಾದ ‘ಓದು’ಗಳು.
ಇಷ್ಟೆಲ್ಲ ಹೇಳಿದ ಮೇಲೂ ಬರೆಯಲೇ ಬೇಕಾದ ಮಾತೆಂದರೆ, ಸಾಹಿತ್ಯವಾದ ಬರವಣಿಗೆಯು ಬಹಳ ‘ಹೊಟ್ಟೆಕಿಚ್ಚಿನ ಪ್ರೇಯಸಿ’ಯೆಂಬ ಮಾತನ್ನು ಮಿತ್ರರಾದ ಶ್ರೀಧರ್ ನಾಯಕ್ ಅವರಿಗೆ ನೆನಪು ಮಾಡಿಕೊಡುವುದು. ಬರವಣಿಗೆಯು ಹವ್ಯಾಸವಲ್ಲ. ಅದು ವೃತ್ತಿ ಮತ್ತು ಪ್ರವೃತ್ತಿ ಎರಡೂ ಆಗಿ ನಮ್ಮ ವ್ಯಕ್ತಿತ್ವವನ್ನು ಇಡಿಇಡಿಯಾಗಿ ಒಳಗೊಳ್ಳಬೇಕು. ಆಗಲೇ ಕಲೆಗಾರಿಕೆಯು ಕೂಡಿಬರುತ್ತದೆ. ಇದು ಮೊದಲಾಗಲು ವಯಸ್ಸಿನ ಮಿತಿಯಿಲ್ಲ. ಇಂಥದೊಂದು ವ್ಯಸನವು ಅವರಿಗೆ ಸಾಧ್ಯವಾಗಲೆಂಬ ಹಾರೈಕೆಯೊಂದಿಗೆ ಈ ಕೆಲವು ಮಾತುಗಳನ್ನು ಮುಗಿಸುತ್ತಿದ್ದೇನೆ. ನನಗೆ ಈ ಅವಕಾಶ ಕೊಟ್ಟಿದ್ದಕ್ಕೆ ಶ್ರೀಧರ್ ಅವರಿಗೆ ಧನ್ಯವಾದಗಳು.






0 Comments