-ಕೆ.ಮಹಾಂತೇಶ್
1975ರ ನಂತರದ ಕರ್ನಾಟಕದ ಸಾಂಸ್ಕೃತಿಕ ಇತಿಹಾಸವನ್ನು ದಾಖಲಿಸುವುದಾದರೆ ಅದರಲ್ಲಿ ‘ಸಮುದಾಯ’ ಹೊರತಾಗಿ ಬರೆಯಲು ಸಾಧ್ಯವೇ ಇಲ್ಲ. ಸಮುದಾಯ ಕೇವಲ ರಂಗತಂಡವಲ್ಲ, ಅದು ಜನಪರ ಸಾಂಸ್ಕೃತಿಕ ಚಳವಳಿಯಾಗಿದೆ. ಅಂತಹ ಕರ್ನಾಟಕದ ಸಾಂಸ್ಕೃತಿಕ ಚಳವಳಿಯಾಗಿರುವ-“ಸಮುದಾಯ” ಸಾಂಸ್ಕೃತಿಕ ಸಂಘಟನೆಯು ಇದೀಗ-50 ನೇ ವರ್ಷವನ್ನು ಪೂರೈಸುತ್ತಿರುವುದು ಹೆಮ್ಮೆಯ ಸಂಗತಿ.
ಕರ್ನಾಟಕದ ಉದ್ದಗಲಕ್ಕೂ ಜಾತಾಗಳು, ಬೀದಿನಾಟಕಗಳ ಮೂಲಕ ಮನೆಮಾತಾದ ಈ ಸಾಂಸ್ಕೃತಿಕ ಆಂದೋಲನಕ್ಕೆ ‘ಸಮುದಾಯ’ ಎಂಬ ಹೆಸರನ್ನು ನೀಡಿದ್ದು ಸಾಂಸ್ಕೃತಿಕ ವಿಮರ್ಶಕ ಕಿ.ರಂ ನಾಗರಾಜ್. ಪ್ರಧಾನಿ ಇಂದಿರಾ ಗಾಂಧಿಯವರು ಘೋಷಿಸಿದ ತುರ್ತುಪರಿಸ್ಥಿತಿಗೆ ಪ್ರತಿರೋಧವಾಗಿ 1975ರಲ್ಲಿ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾದ ಪದವೀಧರರಾದ ಪ್ರಸನ್ನ ಅವರ ನೇತೃತ್ವದಲ್ಲಿ ಯುವ ರಂಗಾಸಕ್ತರ ಗುಂಪೊಂದು ಬೆಂಗಳೂರಿನಲ್ಲಿ ಸಮುದಾಯ ತಂಡವನ್ನು ಪ್ರಾರಂಭಿಸಿತು.”ಕಲೆ ಕಲೆಗಾಗಿ ಅಲ್ಲ, ಬದುಕಿಗಾಗಿ ಕಲೆ”. ಇದರ ಧ್ಯೇಯವಾಕ್ಯವಾಗಿತ್ತು – ಬರ್ಟೋಲ್ಟ್ ಬ್ರೆಕ್ಟ್ ತತ್ತ್ವಶಾಸ್ತ್ರದಿಂದ ಪ್ರೇರಿತಗೊಂಡು ಮತ್ತು ಬಾದಲ್ ಸರ್ಕಾರ್ ಅವರ ಮೂರನೇ ರಂಗಭೂಮಿಯಿಂದ ಜನಪ್ರಿಯಗೊಳಿಸಲ್ಪಟ್ಟ ಸಮುದಾಯ, ರಂಗಭೂಮಿಯನ್ನು ಸಂಪ್ರಾದಾಯಕ ಸಭಾಂಗಣಗಳಿಂದ ಹೊರಗೆ ಬೀದಿಗಳಿಗೆ, ಹಳ್ಳಿಗಳಿಗೆ ಮತ್ತು ಕಾರ್ಖಾನೆಗಳಿಗೆ ಕೊಂಡೊಯ್ಯಲು ನಿರ್ಧರಿಸಿತು. ಆದ್ದರಿಂದಲೇ ಅದೊಂದು ಜನರ ನಡುವಿನಿಂದಲೇ ಜನರಿಗಾಗಿಯೇ ರೂಪುಗೊಂಡ ಸಾಂಸ್ಕೃತಿಕ ಸಂಘಟನೆಯಾಯಿತು. 1970ರ ದಶಕದಲ್ಲಿ, ರಂಗಭೂಮಿಯನ್ನು ಕೇವಲ ಮನೋರಂಜನೆಯಾಗಿ ಮಾತ್ರ ನೋಡಲಾಗುತ್ತಿತ್ತು. ಸಮುದಾಯ ಆ ನಿರೂಪಣೆಯನ್ನು ಬದಲಾಯಿಸಿತು.
ಇದು ಇಂಡಿಯನ್ ಫೀಪಲ್ಸ್ ಥೀಯೇಟರ್ (IPTA) ಮತ್ತು ಕೇರಳ ಪೀಪಲ್ಸ್ ಆರ್ಟ್ ಮೂವಮೆಂಟ್ ಮಾದರಿಯಲ್ಲಿ ರೂಪುಗೊಂಡಿತು. ಕಲೆ ಹಾಗೂ ರಂಗಭೂಮಿ ಹಾಗೂ ಸಂಸ್ಕೃತಿಯನ್ನು ಜನಮುಖಿಯಾಗಿ ರೂಪಿಸುವುದು ಇದರ ಉದ್ದೇಶವಾಗಿತ್ತು. ಪ್ರಸನ್ನ, ಕೆ. ಮರುಳುಸಿದ್ದಪ್ಪ, ಡಿ.ಆರ್. ನಾಗರಾಜ, ಕ.ವೆಂ. ರಾಜಗೋಪಾಲ್, ಕೆ.ವಿ. ನಾರಾಯಣ, ಸಿ. ವೀರಣ್ಣ, ಕ.ನಂ. ನಾಗರಾಜ, ಶೂದ್ರ ಶ್ರೀನಿವಾಸ್, ನಿಸಾರ್ ಅಹಮ್ಮದ್, ವಿಜಯಮ್ಮ ಮತ್ತು ಇತರೆ ಸಮಾನ ಮನಸ್ಕರು ಇದನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.ಇದರ ಮೊದಲ ನಿರ್ಮಾಣವೆಂದರೆ ಕೆ.ವಿ. ನಾರಾಯಣ್ ಬರೆದ ಮತ್ತು ಪ್ರಸನ್ನ ನಿರ್ದೇಶಿಸಿದ ‘ಹುತ್ತವ ಬಡಿದರೆ” – ಈ ನಾಟಕವು ಅರಮನೆ ರಾಜಕಾರಣದ ಪುನರ್ವ್ಯಾಖ್ಯಾನವಾಗಿತ್ತು, ಇದರಲ್ಲಿ ಇಬ್ಬರು ಅರಮನೆಯ ಕಾವಲುಗಾರರು ರಾಜರುಗಳು ಬದಲಾದರೂ, ಸಮಾಜ ಬದಲಾಗುವುದಿಲ್ಲ ಎಂಬ ಅಂಶವನ್ನು ಪ್ರೇಕ್ಷಕರಿಗೆ ನೀಡುತ್ತಾರೆ. ನಂತರ ತಾಯಿ, ಗೆಲಿಲಿಯೋ, ಕತ್ತಲೆದಾರಿದೂರ, ಕುರಿ, ಮ್ಯಾಕ್‌ಬತ್, ಕುಬಿ ಮತ್ತು ಇಯಾಲ್, ಅಲ್ಲೆ ಕುಂತವರೇ ಮುಂತಾದ ಯಶಸ್ವಿ ಹಾಗೂ ವಿಭಿನ್ನ ಪ್ರದರ್ಶನಗಳ ಮೂಲಕ ಸಮುದಾಯ ರಾಜ್ಯದ್ಯಾಂತ ಮನೆ ಮಾತಾಯಿತು. ಇತ್ತೀಚಿನ ವರ್ಷಗಳಲ್ಲಿ ಸಮುದಾಯ ನಿರ್ಮಿಸಿದ ಡಾ.ಕೆ.ವೈ. ನಾರಾಯಣಸ್ವಾಮಿ ಅವರ ಪಂಪ ಭಾರತ (ನಿ: ಪ್ರಮೋದ್ ಶಿಗ್ಗಾಂವ್) ಗಿರೀಶ್ ಕಾರ್ನಾಡರ ತುಘಲಕ್ (ನಿ:ಡಾ.ಶ್ಯಾಮ್‌ಕುಟ್ಟಿ) ಹಾಗೂ ತೇಜಸ್ವಿಯವರ ಜುಗಾರಿ ಕ್ರಾಸ್ (ನಿ: ನಟರಾಜ್ ಹೊನ್ನಾವಳಿ) – 100ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಕಂಡವು.
ಜನರ ಬಳಿಗೆ ಜಾಥಾಗಳು: ರಂಗಭೂಮಿಯನ್ನು ಜನರ ಬಳಿಗೆ ಕೊಂಡೊಯ್ದಿದ್ದು ಸಮುದಾಯದ ಅತಿದೊಡ್ಡ ಕೊಡುಗೆಯಾಗಿದೆ. ಸಮುದಾಯ ಜಾಥಾ ಪಟ್ಟಣದಿಂದ ಹಳ್ಳಿ ಹಳ್ಳಿಗೆ ಹೋಗುತ್ತಾ ಬೀದಿ ನಾಟಕಗಳನ್ನು ಪ್ರದರ್ಶಿಸುವ ಒಂದು ತಂಡ. “ಪ್ರಸನ್ನರವರ ಯೋಜನೆ ಜಾಥಾ ಕಾರ್ಯಕ್ರಮವನ್ನು ನಗರದ ಯುವಕರು ಮೊದಲ ಬಾರಿಗೆ ಕರ್ನಾಟಕದ ಗ್ರಾಮೀಣ ಭಾಗಗಳೆಲ್ಲಾ ಪ್ರಯಾಣಿಸಿ, ಸ್ಥಳೀಯರ ಜೊತೆ ಉಳಿದುಕೊಂಡು, ಬರ, ರೈತರ ಬವಣೆಗಳು, ದಲಿತರು ಹಾಗೂ ಮಹಿಳೆಯರ ಕೊಲೆ ಮತ್ತು ದೌರ್ಜನ್ಯಗಳು, ನೀರಿನ ಕೊರತೆ, ಬೆಲೆ ಏರಿಕೆ ಮತ್ತು ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳು, ಜಾತಿ ತಾರತಮ್ಯ, ಮೌಢ್ಯತೆ ಮತ್ತು ಕಂಧಚಾರಗಳು ಹಾಗೂ ತುರ್ತುಪರಿಸ್ಥಿತಿಯ ಸಮಯದಲ್ಲಿ ಪ್ರಜಾಪ್ರಭುತ್ವದ ದಮನ ಇತ್ಯಾದಿ ವಿಷಯಗಳನ್ನೆತ್ತಿಕೊಂಡು ಬೆಂಗಳೂರಿನ ಕೆಳ ಮಧ್ಯಮ ವರ್ಗದವರ ಬಡಾವಣೆಗಳಲ್ಲಿ ಸಾರ್ವಜನಿಕ ಉದ್ಯಮಗಳ ಗೇಟ್‌ಗಳ ಮುಂದೆ ಕಾರ್ಮಿಕರು ವಾಸಿಸುವ ಬಡಾವಣೆಗಳಲ್ಲಿನ ಜನರ ನಡುವೆ ಹಾಗೂ ಕರಾವಳಿಯ ಮಂಗಳೂರು, ಕುಂದಾಪುರ, ಬಿಸಿಲನಾಡು ಗುಲಬರ್ಗಾ, ಬಿಜಾಪುರ, ಮಲೆನಾಡಿನ ಚಿಕ್ಕಮಗಳೂರು, ಬಯಲುಸೀಮೆಯ ದಾವಣಗೆರೆ ಹರಿಹರ ಹೀಗೆ ನಾಡಿನಾದ್ಯಂತ ಸಮುದಾಯ ಕಲಾವಿದರು ಬೀದಿ ನಾಟಕಗಳನ್ನು ಪರಿಣಾಮಕಾರಿಯಾಗಿ ಪ್ರದರ್ಶಿಸಿದರು.”ಬೀದಿ ನಾಟಕಗಳ ನಂತರ, ಸಮುದಾಯವು ಪ್ರಬಲವಾದ ಪ್ರಾಸೀನಿಯಮ್ ನಾಟಕಗಳತ್ತ ಸಾಗಿತು, ಅದು ಆಧುನಿಕ ಕನ್ನಡ ರಂಗಭೂಮಿಯನ್ನು ರೂಪಿಸಿತು: ಬಿ.ವಿ. ಕಾರಂತರು ನಟರಂಗ ತಂಡಕ್ಕೆ ಚೇಗುವೇರಾ (ಚೇ ಪಾತ್ರದಲ್ಲಿ ಸಿ.ಆರ್.ಸಿಂಹ, ಮತ್ತು ಸಮುದಾಯ ತಂಡ ಪ್ರಸನ್ನರವರ ನಿರ್ದೇಶನದಲ್ಲಿ “ತಾಯಿ” (ತಾಯಿ ಪಾತ್ರದಲ್ಲಿ ಬಿ.ಜಯಶ್ರಿ) ನಿರ್ದೇಶಿಸಿದಾಗ ಅವರನ್ನು ಕಮ್ಯುನಿಸ್ಟರು ಎಂದು ಕರೆಯಲಾಯಿತು. ಆದರೆ ಅವರುಗಳು ಅಂತಹ ಟೀಕೆಯನ್ನು ಪ್ರಗತಿಪರ ಕಲೆಯ ಬಿರುದೆಂದು ಹೆಮ್ಮೆಯಿಂದ ಸ್ವೀಕರಿಸಿದರು.
ಸಮುದಾಯ ದಾವಣಗೆರೆ ಘಟಕ ರೂಪಿಸಿ ಪ್ರದರ್ಶಸಿದ “ನೂರು ಅಡಿಗಳ ಬಣ್ಣದ ನಡೆ; ಅಣು ಸಮರಕೆ ಜನತೆಯ ತಡೆ” ಎನ್ನುವ ಅಪರೂಪದ ಕಲಾಕೃತಿಯನ್ನು ನಿರ್ಮಿಸಿದವರು ಪ್ರೊ: ಟಿ.ಬಿ.ಸೊಲಬಕ್ಕನವರ್ ಹಾಗೂ ಕರಿರಾಜು. ಭೂಮಿಯ ಉಗಮ, ಮಂಗನಿಂದ ಮಾನವನ ಬೆಳವಣಿಗೆ, ಕುಟುಂಬ, ಆಸ್ತಿ ಬೆಳವಣಿಗೆ, ಗುಲಾಮಗಿರಿ, ಉಳಿಗಾಮಾನ್ಯ ವ್ಯವಸ್ಥೆ ನಂತರ ಕೈಗಾರಿಕಾ ಕ್ರಾಂತಿ, ಬಂಡವಾಳಶಾಹಿ ಬೆಳವಣಿಗೆ ಹಂತಗಳು ಮತ್ತು ಸಾಮ್ರಾಜ್ಯಶಾಹಿ ಯುದ್ದಗಳು ಮತ್ತು ವಿಶ್ವಶಾಂತಿ ಅವಶ್ಕಕತೆ ಹೀಗೆ ಅನಾವರಣಗೊಳಿಸುತ್ತಾ ಸಾಗುತ್ತದೆ 120 ಅಡಿಗಳ ಆ ಬಣ್ಣದ ನಡಿಗೆ. ಇದು ಸಮುದಾಯದ ಹೆಮ್ಮೆ ಕಲಾಕೃತಿಯಾಗಿದೆ.
ರಂಗಭೂಮಿಯಾಚೆ – ಒಂದು ಸಾಂಸ್ಕೃತಿಕ ವೇದಿಕೆ: ಸಮುದಾಯ ಎಂದಿಗೂ ಕೇವಲ ರಂಗಭೂಮಿಯಾಗಿರಲಿಲ್ಲ. “ರಂಗಭೂಮಿಯೊಂದಿಗೆ, ಸಿನಿಮಾವನ್ನು ಸೇರಿಸಿಕೊಳ್ಳುವ ಮತ್ತು ಪ್ರಗತಿಪರ ಸಾಹಿತ್ಯವನ್ನು ಪ್ರಸಾರ ಮಾಡುವ ಕಲ್ಪನೆಯನ್ನು ಅದು ಸಾಕಾರಗೊಳಿಸಿತು. ಸಮುದಾಯದ ಈ ಪ್ರಯತ್ನಗಳು ವೈಜ್ಞಾನಿಕ ಮನೋಭಾವವನ್ನು ಬೆಳೆಸಲು, ಶೋಷಣೆಯ ವಿರುದ್ಧದ ಹೋರಾಟಗಳನ್ನು ಬೆಂಬಲಿಸಲು ಮತ್ತು ರಾಷ್ಟೀಯ ಸಾರ್ವಭೌಮತೆ, ಸಮಗ್ರತೆ, ಪ್ರಜಾಪ್ರಭುತ್ವ ಮತ್ತು ವಿಶ್ವಶಾಂತಿಯನ್ನು ಎತ್ತಿಹಿಡಿಯಲು ಶ್ರಮಿಸಿದವು.”ಕರ್ನಾಟಕದ ಉದ್ದಗಲಕ್ಕೂ ಕಲಾವಿದರು, ಶಿಕ್ಷಣ ತಜ್ಞರು ಮತ್ತು ಸಾಹಿತ್ಯಿಕ ವ್ಯಕ್ತಿಗಳಿಗೆ ಒಂದು ವೇದಿಕೆಯಾಯಿತು ಸಮುದಾಯ ಸಮುದಾಯದ ರಂಗ ಗೀತೆಗಳು, ಅವು ಕಾರ್ಮಿಕರ, ರೈತರ ಮತ್ತು ದಲಿತ ಚಳವಳಿಗಳ ಹೋರಾಟದ ಗೀತೆಗಳಾದವು. ಬಂಡಾಯ ಸಾಹಿತ್ಯ ಚಳವಳಿ ದಲಿತ, ರೈತ ಮತ್ತು ಕಾರ್ಮಿಕ ವರ್ಗದ ಚಳವಳಿಗಳು ಒಡಮೂಡಲು ಸಮುದಾಯ ನೀಡಿದ ಕೊಡುಗೆ ಅಪಾರ. ಆರಂಭದಿಂದ ಇಲ್ಲಿಯವರೆಗೆ ಸಮುದಾಯ “ಪ್ರಗತಿಪರ ಚಳವಳಿಗಳಲ್ಲಿ, ವಿಶೇಷವಾಗಿ ರೈತ, ಕಾರ್ಮಿಕ, ದಲಿತ, ಮಹಿಳಾ ಹೋರಾಟಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ತನ್ನ ಸೈದ್ದಾಂತಿಕ ಬದ್ದತೆಯನ್ನು ಕಾಪಿಟ್ಟುಕೊಂಡು ಬಂದಿದೆ.ಪ್ರಸನ್ನ, ಗಂಗಾಧರಸ್ವಾಮಿ, ಸಿಜಿಕೆ, ಅಗ್ರಹಾರ ಕೃಷ್ಣಮೂರ್ತಿ, ಸಿ.ಕೆ. ಗುಂಡಣ್ಣ, ಎಂ.ಜಿ ವೆಂಕಟೇಶ್, ಸುರೇಂದ್ರ ರಾವ್, ಮಾಲತಿ, ಲಕ್ಷ್ಮೀ ಚಂದ್ರಶೇಖರ್, ವಿಮಲಾ ಕೆ.ಎ., ಸಿ. ಬಸವಲಿಂಗಯ್ಯ, ಜನಾರ್ಧನ(ಜನ್ನಿ) ಲಿಂಗದೇವರು ಹಳೆಮನೆ, ಶಶಿಧರ್ ಭಾರಿಗಟ್, ಬೋಳುವಾರು, ಜೆ.ಸಿ. ಶಶಿಧರ್, ಲೋಕನಾಥ, ಬಿ. ಜಯಶ್ರೀ, ಮುಖ್ಯಮಂತ್ರಿ ಚಂದ್ರು ಅವರಂತಹ ಮೊದಲಾದ ವ್ಯಕ್ತಿಗಳು ಬೆಂಗಳೂರಿನಲ್ಲಿ ಹಾಗೂ ಕರಾವಳಿ ಕರ್ನಾಟಕದಲ್ಲಿ ವಾಸುದೇವ್ ಉಚ್ಛಿಲ್, ಕಾರಂತರು, ಹೈದರ್‌ಬಾದ್ ಕರ್ನಾಟಕ ಭಾಗದಲ್ಲಿ ಆರ್.ಕೆ. ಹುಡುಗಿ, ಶ್ರೀಕಾಂತ್ ಕಕ್ಕೇರಿ, ಮುಂಬೈ ಕರ್ನಾಟಕ ಭಾಗದಲ್ಲಿ ಸಿ.ಆರ್. ಭಟ್, ಬಿ.ಈ. ಈಳಿಗೇರಾ ಕೋಲಾರ ಅಚ್ಯೂತ್ ಹೀಗೆ ಅಸಂಖ್ಯಾತ ಕಾರ್ಯಕರ್ತರು ಈ ಚಳವಳಿಯನ್ನು ಆರಂಭದಿಂದ ಮುನ್ನಡೆಸಿದವರಲ್ಲಿ ಪ್ರಮುಖರು.
2025ರಲ್ಲಿ, ಸಮುದಾಯವು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ತನ್ನ ಸುವರ್ಣ ಮಹೋತ್ಸವವನ್ನು ಜನಪ್ರಿಯ ರಂಗ ಗೀತೆಗಳು ಮತ್ತು ನಾಟಕಗಳನ್ನು ಒಳಗೊಂಡ ಮೂರು ದಿನಗಳ ಉತ್ಸವದೊಂದಿಗೆ ಆಚರಿಸಿತು. ತುರ್ತುಪರಿಸ್ಥಿತಿಯಲ್ಲಿನ ಒಂದು ಸಣ್ಣ ಸೆಲೆಯಾಗಿ ಹರಿದ ಝರಿಯೊಂದು ಕರ್ನಾಟಕದಾದ್ಯಂತ 25ಕ್ಕೂ ಹೆಚ್ಚು ಘಟಕಗಳವರೆಗೆ ತನ್ನ ನೆಲೆಯನ್ನು ವಿಸ್ತರಿಸಿಕೊಂಡ- ಅದರ 50 ವರ್ಷಗಳ ಪ್ರಯಾಣವು ಒಂದು ರೋಮಾಂಚನಕಾರಿಯಾದುದ್ದು. ಇಂತಹ ಸಮುದಾಯ ತನ್ನ 50 ನೇ ವರ್ಷದ ಸಮಾರೋಪವನ್ನು ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿರುವ ಧಾರವಾಡದಲ್ಲಿ ಇದೇ ಆಗಸ್ಟ್ 28-30 ರವರಗೆ ಮನುಷ್ಯತ್ವದೆಡೆಗೆ ಸಮುದಾಯದ ನಡಿಗೆ ಎನ್ನುವ ಸಮಕಾಲೀನ ಸವಾಲಿಗೆ ಪ್ರತಿರೋಧದ ಹೆಜ್ಜೆಯಾಗಿ ಆಚರಿಸುತ್ತಿದೆ. ಸಮುದಾಯವು ಸಾಂಸ್ಕೃತಿಯು ತಟಸ್ಥವಲ್ಲ ಅದು ಪ್ರಭುತ್ವವನ್ನು ಅದರ ನೀತಿಗಳನ್ನು ಸದಾ ಪ್ರಶ್ನಿಸುತ್ತಲೇ ಇರುವ ಜನರ ಅಭಿವ್ಯಕ್ತಿಯಾಗಿದೆ. ಅಂದು “ಭಾರತದಾದ್ಯಂತ ಘೋಷಿಸಿದ ತುರ್ತುಪರಿಸ್ಥಿತಿ”ಯ ಸಮಯದಲ್ಲಿ, ಪ್ರತಿಭಟನೆಯಾಗಿ ರೂಪುಗೊಂಡ ಕಲೆಯ ಅದರ ಮಾದರಿಯು ಇಂದಿನ ಅಘೋಷಿತ ತುರ್ತು ಪರಿಸ್ಥಿತಿಯ ಸಂಧರ್ಭದಲ್ಲಿ ಎಂದಿಗಿಂತಲೂ ಹೆಚ್ಚು ಪ್ರಸ್ತುತವಾಗಿದೆ ಎನ್ನುವುದನ್ನು ಮತ್ತೆ ಸಾಬೀತುಪಡಿಸಲು ಹೊರಟಿದೆ.ಐವತ್ತು ವರ್ಷಗಳ ಸಮುದಾಯವು ಕಲೆಯು ಜನರಿಗೆ ಸೇರಿದ್ದು, ಕೇವಲ ಗಣ್ಯರಿಗಲ್ಲ. ರಂಗಭೂಮಿಯು ಬದಲಾವಣೆಯ ಸಾಧನವಾಗಬಲ್ಲದು, ಕೇವಲ ಮನೋರಂಜನೆಯಲ್ಲ. ಹಂಚಿಕೊಂಡ ಹಾಡುಗಳು, ನಾಟಕಗಳು ಮತ್ತು ಹೋರಾಟಗಳ ಮೂಲಕ ಒಂದು ಸಮುದಾಯವನ್ನು ನಿರ್ಮಿಸಬಹುದು. ಎನ್ನುವ ಪ್ರಮುಖ ಮೂರು ಪಾಠಗಳನ್ನು ಕಲಿಸಿತು.ಈ ಹಿನ್ನಲೆಯಿಂದ ನೋಡಿದಾಗ ಸಮುದಾಯವು ರಂಗಭೂಮಿಯ ಇತಿಹಾಸದಲ್ಲಿ ಕೇವಲ ಒಂದು ಅಧ್ಯಾಯವಲ್ಲ – ಅದು ಕರ್ನಾಟಕದ ಸಾಂಸ್ಕೃತಿಕ ಪ್ರಜಾಪ್ರಭುತ್ವದ ಆತ್ಮಸಾಕ್ಷಿಯಾಗಿದೆ.






0 Comments