ಮೋಹನ ಹೆಗಡೆಯವರ ಕಾದಂಬರಿ ‘ಉತ್ತರೆ’
‘ಸಾವಣ್ಣ’ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.
ಈ ಕೃತಿಯ ಕುರಿತ ಗಾಯತ್ರಿ ರಾಘವೇಂದ್ರ ಅವರ ಬರಹ ಇಲ್ಲಿದೆ.
-ಗಾಯತ್ರಿ ರಾಘವೇಂದ್ರ
ಎಲ್ಲ ಪುಸ್ತಕಗಳೂ ಓದಿಸಿಕೊಂಡು ಹೋಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ “ಉತ್ತರೆ” ಎಂಬ ಪುಸ್ತಕ ಓದಿಸಿತು. ಎರಡೇ ದಿನದಲ್ಲಿ ಓದಿ ಮುಗಿಸಿದ ಪುಸ್ತಕವಿದು. “ಉಪ್ಪರಿಗೆಯ ಮೇಲಿದ್ದಾಳೆ ಉತ್ತರೆ” ಎನ್ನುವ ಮೊದಲ ಸಾಲುಗಳೇ ಇನ್ನೂ ಓದಬೇಕು ಎನಿಸುವಂತೆ ಮಾಡಿತು. ಮೋಹನ ಭಾಸ್ಕರ ಹೆಗಡೆ ಅವರು ಬರೆದ ಶೈಲಿಯನ್ನು ಹೊಗಳಲು ಪ್ರಾಯಶಃ ಪದಗಳು ಸಾಕಾಗಲಾರವು..
ಕರ್ಣನ ಮಗ ವೃಷಕೇತು ತನ್ನ ಪತ್ನಿಯೊಂದಿಗೆ ಬರುವಾಗ ಉತ್ತರೆಗೆ ತನ್ನ ಸ್ಥಿತಿ ನೆನಪಾದದ್ದು, ಹಾಗೆ ಚಕ್ರವ್ಯೂಹವನ್ನು ವಿವರಿಸಿದ ಬಗೆಯೆಲ್ಲವೂ ಅದ್ಬುತ. ಇದನ್ನೆಲ್ಲ ಓದಿದ ನನಗೆ ಅನಿಸಿದ ಒಂದು ವಿಷಯವೆಂದರೆ, ಇವರ ಕಾದಂಬರಿಯನ್ನಾಧರಿಸಿ ಒಂದು ನಾಟಕವನ್ನು ಸಹ ಮಾಡಬಹುದು ಎಂದು. ಅವರೇ ಸ್ವತಃ ಕಥೆಯನ್ನು ಹೇಳುತ್ತಿದ್ದಂತೆ ಹಾಗೂ ನಾವೆಲ್ಲ ಕುಳಿತು ಅದನ್ನು ಕೇಳಿದಂತೆ ಭಾಸವಾಗುತ್ತದೆ !
ಅಷ್ಟು ಆಪ್ತತೆ ಆ ಪುಸ್ತಕದಲ್ಲಿದೆ. ಬಹಳಷ್ಟು ವಿಷಯಗಳನ್ನು ತಿಳಿದುಕೊಂಡೆ, ಅರಿತುಕೊಂಡೆ. ನಾವು ಭಾರತ ಯುದ್ಧ ಮುಗಿದ ಮೇಲಿನ ಕಥೆಗಳನ್ನು ಕೇಳಿದ್ದು, ಓದಿದ್ದು ಅಪರೂಪ ಅಂತಹ ಒಂದು ವಿರಳ ಕಾದಂಬರಿಯನ್ನು ಓದಿದ ಸಾರ್ಥಕತೆ ನನಗಷ್ಟೇ ಅಲ್ಲದೇ ಓದಿದ ಎಲ್ಲರಲ್ಲೂ ಬಂದಿದೆ, ಬರುತ್ತದೆ ಎಂಬ ಭಾವನೆ ನನ್ನದು.
ಮೋಹನ ಹೆಗಡೆಯವರಿಂದ ಇನ್ನೂ ಹೆಚ್ಚಿನ ಕಾದಂಬರಿಗಳು, ಪಾತ್ರ ಚಿತ್ರಣಗಳನ್ನು ಓದುವ ಸೌಭಾಗ್ಯ ನಮ್ಮದಾಗಲಿ ಎಂದು ಆಶಿಸುತ್ತೇನೆ.
ಹಾಗೆ ಪುಸ್ತಕವನ್ನು ಓದಬೇಕು ಎಂದರೆ ಕೃತಿಯ ಆಸ್ವಾದನೆಗೆ ಬೇಕಾಗಿ ಪ್ರಕಾಶನವೂ ಅತ್ಯಗತ್ಯ. ಮುನ್ನುಡಿ ಬರೆದ ಜೋಗಿ ಅವರ ಹಾಗೂ ಬೆನ್ನುಡಿ ಬರೆದ ಗೋಪಾಲಕೃಷ್ಣ ಕುಂಟಿನಿ ಅವರ ಮಾತುಗಳೂ ಮನನೀಯ. ಜಮೀರ್ ಸಾವಣ್ಣ ಅವರ ಮುಖಪುಟ ವಿನ್ಯಾಸವು ಕೃತಿ ನೋಡಿದ ತಕ್ಷಣ ಸಹಜವಾಗಿ ಕೈಗೆ ಪುಸ್ತಕ ಎತ್ತಿಸಿಕೊಳ್ಳುತ್ತದೆ. ೧೬೮ ಪುಟದ ೨೫೦ ರೂ. ಮೊತ್ತದ ಕಾದಂಬರಿಯನ್ನು ಪ್ರಕಾಶನ ಮಾಡಿದ “ಸಾವಣ್ಣ ಎಂಟರ್ಪ್ರೈಸಸ್” ಅವರಿಗೂ ಇಂಥದೊಂದು ಅಪರೂಪದ ಕೃತಿ ಓದಿಗೆ ಒದಗಿಸಿದ್ದಕ್ಕಾಗಿ ಅಭಿನಂದಗಳು.






0 Comments