ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜೊತೆ ನಡೆದ ದಿನಗಳು

-ರುಕ್ಮಿಣಿ ನಾಗಣ್ಣವರ

ನೆರಳಾಚೆ

ಜೊತೆ ನಡೆದ ದಿನಗಳು
ಎಲೆಯಾಗಿ ಕಳಚಿ ಸಾಯಲಿಲ್ಲ
ಮಣ್ಣಿನೊಳಗೆ ಬೆರೆತು
ಬೇರಿನ ತುದಿಯಲ್ಲಿ ಜೀವತಳೆದವು
ಒಡೆದ ನೋವಿನ ಹನಿಗಳು
ಹೊಸ ಚಿಗುರಿಗೆ ರಸವಾದವು

ಉತ್ತರ ಸಿಗದ ಸಣ್ಣ ಪ್ರಶ್ನೆಗಳು
ಗೂಡಿನಲ್ಲಿ ಅಡಗಿ ಕೂರಲಿಲ್ಲ
ಆಕಾಶದ ವಿಸ್ತಾರ ನಂಬಿ
ಹೊಸ ದಿಗಂತಕ್ಕೆ ರೆಕ್ಕೆ ಬಿಚ್ಚಿದವು

ಒಬ್ಬರಿಗೊಬ್ಬರು
ಗಾಯವೂ, ಮದ್ದೂ ಆಗಿದ್ದ ಕ್ಷಣಗಳು
ಆ ನೋವಿನ ಮಣ್ಣಲ್ಲೇ
ಒಂದು ಸಣ್ಣ ಸಸಿಯಾಗಿ
ಮೌನದಲ್ಲೇ ಮರವಾಗುತ್ತಿದೆ

ಈಗ
ನೆನಪಿನ ನೆರಳಲ್ಲಿ ನಿಲ್ಲುವುದಿಲ್ಲ
ನೆರಳನ್ನು ದಾಟಿದ ಮೇಲೆ
ಎದುರಾದ ಬೆಳಕಿನಲ್ಲಿ
ಸ್ವಂತ ಹೆಜ್ಜೆಗಳು ಗುರುತಾಗುತ್ತಿವೆ

ನೆರಳು
ಇನ್ನೂ ಎಲ್ಲೋ ಇರಬಹುದು
ಆದರೆ ದಾರಿ
ಅದನ್ನು ಹುಡುಕುತ್ತಿಲ್ಲ

ದಾರಿ ಮುಂದಿದೆ
ಒಳಗೆ ಉಳಿದಿದ್ದ
ಒಂದು ಅಪರಿಚಿತ ಮುಖ
ತನ್ನದೇ ಮುಖವಾಗುತ್ತಿದೆ

‍ಲೇಖಕರು Admin

26 August, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading