ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಬಾರದಿರಿ ಕನಸುಗಳೆ ಸುಳಿಯದಿರಿ

ಸರೋಜಿನಿ ಪಡಸಲಗಿ

ಒಪ್ಪವಾಗಿರಿಸಬೇಕಿದೆ !!

ಬಾರದಿರಿ ಕನಸುಗಳೆ ಸುಳಿಯದಿರಿ
ಯೋಚನೆಗಳೆ
ಕಳೆದುಹೋಗಿಹೆ ರಂಗಿನ ನೆನಪುಗಳ
ಸಂತೆಯಲಿ
ಬಾಚಿಕೊಳ್ಳ ಬೇಕಿದೆ ನುಣುಚಿ ಜಾರುವ
ಮೊದಲು
ಒಂದು ಚಣ ಸುಮ್ಮನಿರಿ ಕಾಡದಿರಿ ಎನ್ನ
ಕಾಡದಿರಿ ಎನ್ನ

ಮುಂಬೆಳಗಿನ ಚೆಂಬೆಳಕು ಮುಂಬಾಗಿಲ
ಅಂಗಳದಿ
ಹೊನ್ನೀರಹರಿಸಿ ಪಸರಿಸಿಹ ಹಸಿರಿನ ಹಸೆ
ಕೆಂಪಾಗದಂತೆ
ಚಿಗುರು ಹೂ ಬಳ್ಳಿಗಳ ಮೊಗ್ಗಿನ ಎಸಳು
ಚಿತ್ತಾರದಲಿ
ನೆನಪುಗಳ ನವ ಸಿಂಗಾರ ಮಿರುಗಬೇಕಿದೆ
ಕಾಡದಿರಿ ಎನ್ನ

ಮುಂಜಾವಿನ ಮಂಜಿನ್ಹನಿಯ ಮುತ್ತಿನ
ಕಾಂತಿಯಲಿ
ಅರಳಿದ ಮುಗುಳಿನ ನಸುನಗೆ ಛಾಯೆ
ಮಸೆಸಿ
ಹೊಸ ದಿನದ ಹೊನಲಲಿ ಮಿನುಗೊ ತಾರೆ
ಬೊಟ್ಟನಿಟ್ಟಂತೆ
ನೆನಪುಗಳ ಕುಸುರಿ ನಕ್ಷೆ ಹೆಣೆಯಬೇಕಿದೆ
ಕಾಡದಿರಿ ಎನ್ನ

ಬಾಳ ಪಯಣ ದಾರಿಯಲ್ಲಿ ಅಲುಗಿ
ನಲುಗದಂತೆ
ಮುಚ್ಚಟೆಯ ತೆಕ್ಕೆಯಲಿ ಜೋಕೆಯಲಿ
ಕಾಪಿಟ್ಟ
ನನ್ನೆದೆಯ ವೀಣೆ ಅನುಗಾಲ ಜೀವ ರಾಗ
ಮೀಟುವಂತೆ
ನೆನಪುಗಳ ತಾನ ತಂತಿ ಒಪ್ಪವಾಗಿರಿಸಬೇಕಿದೆ
ಕಾಡದಿರಿ ಎನ್ನ !!

‍ಲೇಖಕರು Admin

26 August, 2026

2 Comments

  1. Shrivatsa Desai

    ಸರೋಜಿನಿಯವರ ಭಿನ್ನ ಶೈಲಿಯ ಈ ಕವಿತೆ ಬಹಳ ಹಿಡಿಸಿತು. ಅಭಿನಂದನೆಗಳು.

    • Saroja Padasalgi

      ಅನೇಕ ಧನ್ಯವಾದಗಳು ಸರ್
      ಅದನ್ನು ಪ್ರಕಟಿಸಿದ ಅವಧಿಗೆ ಧನ್ಯವಾದಗಳು!

      ಸರೋಜಿನಿ ಪಡಸಲಗಿ
      ಬೆಂಗಳೂರು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading