ಕಾನೂನು ಲೋಕದ ಗಂಭೀರ ವಾತಾವರಣವನ್ನು ಹಾಸ್ಯ ಮತ್ತು ವ್ಯಂಗ್ಯ ಶೈಲಿಯಲ್ಲಿ ಸಾಮಾನ್ಯರಿಗೂ ತಲುಪಿಸುವಲ್ಲಿ ಮುಂಬೈನ ಖ್ಯಾತ ವಕೀಲ ರಾಜು ಜೆ಼ಡ್. ಮೊರೆ. ‘ದಿ ಲೀಫ್‌ಲೆಟ್’ ವೆಬ್‌ಸೈಟ್‌ನ ಜನಪ್ರಿಯ ಅಂಕಣಗಳು ಹಾಗೂ ‘ದಿ ಲಾಕ್‌ಡೌನ್ ಲಾಯರ್’, ‘ಫನ್ ಇನ್ ಲಾ’ ಪುಸ್ತಕಗಳ ಮೂಲಕ ಇವರು ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ನ್ಯಾಯಾಂಗ ನಿಂದನೆಗೆ ಒಳಗಾಗದಂತೆ, ವ್ಯವಸ್ಥೆಯ ಲೋಪದೋಷಗಳನ್ನು ಲಘು ಹಾಸ್ಯದಲ್ಲಿ ವಿಮರ್ಶಿಸುವ ಇವರ ಚುರುಕಾದ ಬರವಣಿಗೆ ಕಾನೂನು ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಗಮನ ಸೆಳೆದಿದೆ.
ಕೋರ್ಟಿನ ಗಂಭೀರ ವಾದ-ಪ್ರತಿವಾದಗಳ ನಡುವೆಯೂ ಅಕ್ಷರಗಳನ್ನೇ ಆತ್ಮಬಲವಾಗಿಸಿಕೊಂಡಿರುವ ಅಪರೂಪದ ಪ್ರತಿಭೆ ಪೃಥ್ವಿ ಸೂರಿ. ಚಿಕ್ಕಮಗಳೂರು ಜಿಲ್ಲೆಯ ಕಡೂರಿನಲ್ಲಿ ಬೆಳೆದು, ಹಾಸನದಲ್ಲಿ ಕಾನೂನು ಪದವಿ ಪಡೆದ ಇವರು, ‘ಜನಮಿತ್ರ’ ಪತ್ರಿಕೆಯ ಮೂಲಕ ಅಕ್ಷರ ಫ಼್ಲೋಕಕ್ಕೆ ಕಾಲಿಟ್ಟರು. ಪ್ರಸ್ತುತ ಬೆಂಗಳೂರಿನ ಉಚ್ಚ ನ್ಯಾಯಾಲಯದ ವಕೀಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಬಾಂಬೆ ಉಚ್ಚ ನ್ಯಾಯಾಲಯದ ವಕೀಲರು, ರಾಜು ಜೆ಼ಡ್. ಮೋರೆ ಅವರ ಇಂಗ್ಲಿಷ್ ನ Fun In Law ಘನ ನ್ಯಾಯಾಲಯದ ಲಘು ಹಾಸ್ಯ ಬರಹಗಳು
ಇನ್ನು ಮುಂದೆ ಕನ್ನಡಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಪೃಥ್ವಿ ಸೂರಿ ಅವರಿಂದ ಅಂಕಣವಾಗಿ ಬರಲಿದೆ.
ಮೂಲ – ರಾಜು ಜೆ಼ಡ್. ಮೊರೆ
ಕನ್ನಡಕ್ಕೆ – ಪೃಥ್ವಿ ಸೂರಿ
ಅಂಕಣ – 2
ನಾವು ಜೂನಿಯರ್ ಆಗಿದ್ದ ದಿನಗಳಲ್ಲಿ ಅದೇ ನ್ಯಾಯಾಧೀಶರು ನಮಗೆ ಹೇಳಿದ ಮತ್ತೊಂದು ಕತೆ ಇಲ್ಲಿದೆ. ಈ ಕತೆಯಲ್ಲಿ ಬರುವ ಸನ್ನಿವೇಷದಲ್ಲಿಯೂ ಕೂಡ ನೀರು ಮತ್ತು ಶೌಚಾಲಯಗಳ ಸೌಲಭ್ಯಗಳಿಲ್ಲದ ಊರಿನ ಒಂದು ಘಟನೆ. ಇದು ಮೊದಲ ನೇಮಕಾತಿಯಾದ ಊರಿನಲ್ಲಿಯೇ ನಡೆದ ಮತ್ತೊಂದು ಸ್ವಾರಸ್ಯಕರ ಸಂಗತಿ. ಅರವತ್ತರ ದಶಕದಲ್ಲಿ ಮುನ್ಸಿಫ್ (ಜೂನಿಯರ್ ಡಿವಿಷನ್) ನ್ಯಾಯಾಲಯಕ್ಕೆ ನಿಯೋಜನೆಗೊಂಡ ನ್ಯಾಯಾಂಗ ಅಧಿಕಾರಿಗಳು ಹೇಗೆ ಯಾವುದೇ ಅಂಜಿಕೆ, ಭಯವಿಲ್ಲದೆ ಅಥವಾ ಪಕ್ಷಪಾತವಿಲ್ಲದ ನ್ಯಾಯವನ್ನು ನೀಡುವ ಉದಾತ್ತ ಹೊಣೆಗಾರಿಕೆಯನ್ನು ನಿರ್ವಹಿಸಬೇಕಾದ ಕಷ್ಟ-ಸುಖಗಳ ಸಾಕ್ಷಿಪ್ರಜ್ಞೆಯನ್ನು ಹೇಳುತ್ತಿದೆ.
ಸಾಕ್ಷಿಪ್ರಜ್ಞೆಯ ಕತೆಯೊಂದು ಇಲ್ಲಿದೆ.
ಬೆಳಗ್ಗೆ ಬೇಗನೇ ಎದ್ದು ನ್ಯಾಯಾಧೀಶರು ತಮ್ಮ ನಿತ್ಯಕರ್ಮಗಳನ್ನು ಪೂರೈಸಲು ಕಬ್ಬಿನ ಗದ್ದೆಗಳ ರಕ್ಷಣೆಗೆಂದು ನಿರ್ಮಿಸಿದ್ದ ಏರಿಯ ಬದುಗಳ ಹತ್ತಿರ ಹೋಗಬೇಕಾಗಿತ್ತು. ಅವರು ಪ್ರತಿನಿತ್ಯ ತಮ್ಮ ನಿರ್ದಿಷ್ಟ ಸ್ಥಳಕ್ಕೆ ಹೋಗುತ್ತಿದ್ದರು. ಊರಿನ ಇತರೆ ಜನರು ತಮ್ಮ ನಿತ್ಯಕರ್ಮಗಳಿಗೆ ಅವಲಂಬಿಸಿದ ಜಾಗವು ನ್ಯಾಯಾಧೀಶರು ಆಯ್ಕೆ ಮಾಡಿಕೊಂಡ ಜಾಗಕ್ಕಿಂತ ಕೆಲ ಅಂತರಗಳ ದೂರದಲ್ಲಿರುತ್ತಿದ್ದವು. ಸಾಮಾನ್ಯವಾಗಿ ಅದು ನ್ಯಾಯಾಧೀಶರ ಸ್ಥಾನದ ಮೇಲೆ ತೋರುತ್ತಿದ್ದ ಗೌರವವೂ ಆಗಿತ್ತು. ಸ್ನಾನಕ್ಕಾಗಿ ಬಾವಿಯ ನೀರನ್ನು ಬಳಸುತ್ತಿದ್ದರು. ಚಳಿಗಾಲದ ಸಮಯದಲ್ಲಿ ಸಹಾಯಕ ಹಂಡೆ ಒಲೆಯಲ್ಲಿ ನೀರನ್ನು ಕಾಯಿಸಿ ಕೊಡುವುದು ವಾಡಿಕೆಯಾಗಿತ್ತು.
ಹೀಗಿರುವ ಸಂದರ್ಭದಲ್ಲಿ, ಇಬ್ಬರು ಸಹೋದರರಿಗೆ ಅವರ ತಂದೆಯಿಂದ ಪಿತ್ರಾರ್ಜಿತವಾಗಿ ಬಂದಿದ್ದ ಕೃಷಿ ಭೂಮಿಯ ಆಸ್ತಿ ವಿಭಾಗದ ಪ್ರಕರಣವೊಂದನ್ನು ನಮ್ಮ ನ್ಯಾಯಾಧೀಶರು ವಿಚಾರಣೆ ನಡೆಸುತ್ತಿದ್ದರು. ಎರಡೂ ಕಡೆಯವರು ಸ್ಥಳೀಯ ವಕೀಲರನ್ನು ನೇಮಿಸಿಕೊಂಡಿದ್ದರು. ಆದರೆ, ಪ್ರತಿ ವಿಚಾರಣೆಯ ದಿನವೂ ಕಕ್ಷಿಗಾರರಿಬ್ಬರು ವೈಯಕ್ತಿಕವಾಗಿ ಹಾಜರಿರುವುದನ್ನು ಮರೆಯುತ್ತಿರಲಿಲ್ಲ. ನ್ಯಾಯಾಧೀಶರಿಗೆ ದಾಯಾದಿಗಳಾಗಿ ಬದಲಾದ ಸಹೋದರರಿಬ್ಬರ ಮುಖ ಪರಿಚಯವಾಗಿತ್ತು.
ಕಾಲ ಕಳೆದಂತೆ, ಪ್ರಕರಣದ ವಿಚಾರಣೆ ಮುಗಿದು ತೀರ್ಪು ಪ್ರಕಟಿಸುವ ದಿನ ಬಂದಿತು. ನ್ಯಾಯಾಧೀಶರು ವಾದಿ (plaintiff) ಸಹೋದರನ ವಾದಗಳಲ್ಲಿನ ನಿಖರತೆಯನ್ನು ಎತ್ತಿಹಿಡಿದು ಪ್ರತಿವಾದಿ (defendant) ಸಹೋದರನ ವಿರುದ್ಧ ತೀರ್ಪನ್ನು ನೀಡಿದರು. ಮರುದಿನ ಬೆಳಗ್ಗೆ ಎಂದಿನಂತೆ ನ್ಯಾಯಾಧೀಶರು ತಮ್ಮ ನಿತ್ಯಕರ್ಮ ಮುಗಿಸಲು ಕಬ್ಬಿನ ಗದ್ದೆಯಲ್ಲಿನ ತಮ್ಮ ನಿಗದಿತ ಸ್ಥಳಕ್ಕೆ ಬಂದು ಕುಳಿತಿದ್ದಾಗ ಸಣ್ಣ ಕಲ್ಲೊಂದು ಅವರ ಬೆನ್ನಿನ ಹುರಿಗೆ ಬಡಿದಂತಾಯಿತು.
ಕೆಲ ಸಮಯದ ನಂತರ ಮತ್ತೊಂದು ಕಲ್ಲು ತಗುಲಿದಂತಾಯಿತು. ಅದೂ ದೊಡ್ಡದೇನು ಆಗಿರಲಿಲ್ಲ, ಕೇವಲ ಒಂದು ಜಲ್ಲಿಕಲ್ಲು ಆಗಿತ್ತು. ಆದರೆ, ಅದರ ಪ್ರಕರತೆ ಮತ್ತು ನಿಖರತೆ ಅತ್ಯಂತ ಸ್ಪಷ್ಟವಾಗಿತ್ತು.
ಇದ್ದಕ್ಕಿದ್ದಂತೆ ಬಿದ್ದ, ಕಲ್ಲು ಬೀಸಿದ ದಿಕ್ಕಿನ ಅಭಿಮುಖವಾಗಿ ನೋಡಿದರೆ ಅಲ್ಲಿ ಯಾರೂ ಕಾಣಿಸಲಿಲ್ಲ. ಮುಂಜಾನೆಯ ಹೊತ್ತಾದ್ದರಿಂದ, ಕಲ್ಲು ಎಸೆದವನು ಮಂಜಿನ ಮರೆಯಲ್ಲಿ ಅಡಗಿ ಕುಳಿತಿದ್ದು ಇವರಿಗೆ ಕಾಣದಾಗಿತ್ತು.
ನ್ಯಾಯಾಧೀಶರು ಬೇಗ ತಮ್ಮ ಕೆಲಸ ಮುಗಿಸಿದರು. ಚೊಂಬಿನಲ್ಲಿದ್ದ ನೀರಿನಿಂದ ಸ್ವಚ್ಛಗೊಳಿಸಿಕೊಂಡು, ಪೈಜಾಮವನ್ನು ಮೇಲೆ ಎಳೆದುಕೊಂಡರು. ಪುನಃ ನಿತ್ಯಕರ್ಮಕ್ಕೆ ಕುಳಿತಿರುವಂತೆಯೇ ಕುಳಿತು ನಟಿಸಿದರು. ಈ ಬಾರಿ ಕಲ್ಲು ಬಿದ್ದ ಕೂಡಲೇ ಎದ್ದು ನಿಂತು ಕಲ್ಲೆಸೆದವನನ್ನು ಬೆನ್ನೆಟ್ಟಿ ಹಿಡಿಯ ಬೇಕೆನ್ನುವ ಕಾರ್ಯಾಚರಣೆಗೆ ಸಿದ್ಧರಾಗಿದ್ದರು.
ಅವರು ಊಹಿಸಿದಂತೆಯೇ, ಕೆಲವು ನಿಮಿಷಗಳ ಅಂತರದಲ್ಲಿ ಇನ್ನೊಂದು ಕಲ್ಲು ಗಾಳಿಯನ್ನು ತೂರಿಬಂತು. ಕಾರ್ಯಾಚರಣೆಗೆ ಸಕಲ ಸಿದ್ಧರಾಗಿದ್ದ ನ್ಯಾಯಾಧೀಶರು ಕಲ್ಲಿನಿಂದ ತಪ್ಪಿಸಿಕೊಂಡು, ತಮ್ಮ ಚೊಂಬನ್ನು ಹಿಡಿದು ಕಲ್ಲೆಸೆದವನನ್ನು ಹಿಡಿಯಲು ಓಡಿದರು.
ಇರುಳನ್ನು ಹಗಲು ಇನ್ನಿಲ್ಲದಂತೆ ಆಕ್ರಮಿಸಿಕೊಂಡು ಬೆಳಕನ್ನು ಎಲ್ಲೆಡೆ ಹರಿಸುತ್ತಿತ್ತು. ನ್ಯಾಯಾಧೀಶರು ಕಲ್ಲು ಎಸೆದವನನ್ನು ನೋಡಿದರು. ಆದರೆ, ಅವನಿಗೆ ಅದು ಚಿರಪರಿಚಿತವಾದ ಗದ್ದೆಯಾದ್ದರಿಂದ ಓಡಿಹೋಗಿ ತಪ್ಪಿಸಿಕೊಳ್ಳಬಹುದಾದ ಎಲ್ಲಾ ಮಾರ್ಗವೂ ಗೊತ್ತಿದ್ದರಿಂದ ಅವನನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಈ ಎಲ್ಲಾ ಹಿನ್ನಡೆಗಳ ಮಧ್ಯೆಯೂ ನ್ಯಾಯಾಧೀಶರು ಅವನನ್ನು ಅತ್ಯಂತ ನಿಖರವಾಗಿ ಗುರುತಿಸಿದ್ದರು. ಆತ ಬೇರೆ ಇನ್ಯಾರೂ ಆಗಿರಲಿಲ್ಲ, ಹಿಂದಿನ ದಿನವಷ್ಟೆ ತೀರ್ಪನ್ನು ಪ್ರಕಟಿಸಿದ ಪ್ರಕರಣದ ಪ್ರತಿವಾದಿ ಸಹೋದರನಾಗಿದ್ದನು.
ಹೀಗೆ ಕಲ್ಲು ಎಸೆಯುವ ಕೃತ್ಯವು ನ್ಯಾಯಾಂಗ ನಿಂದನೆಯಾಗುತ್ತದೆಯೋ, ಇಲ್ಲವೋ ಎನ್ನುವ ಯೋಚನೆಯಲ್ಲಿ ನ್ಯಾಯಾಧೀಶರು ಚಿಂತಾಕ್ರಾಂತರಾಗಿದ್ದರು. ವಾಸ್ತವವಾಗಿ ಕಲ್ಲು ಅವರ ಹಿಂಭಾಗಕ್ಕೆ ಬಿದ್ದಿದ್ದರಿಂದ ಅದನ್ನು ನ್ಯಾಯಾಲಯದ ಎದುರಿನ ನಿಂದನೆ ಎಂದು ಪರಿಗಣಿಸುವುದಾದರೂ ಹೇಗೆ? ಅಥವಾ ಇದು ಸಾಮಾನ್ಯವಾಗಿ ಐಪಿಸಿ ಪ್ರಕರಣಕ್ಕೆ ಸಂಬಂಧಿಸಿದ್ದೇ? ಎನ್ನುವುದೇ ಗೊಂದಲವಾಯಿತು.
ಅದಾಗಿಯೂ, ನ್ಯಾಯಾಧೀಶರಿಗೆ ಎಫ್.ಐ.ಆರ್. ದಾಖಲಿಸಲು ಮುಜುಗರವಾದ ವಿಚಾರವೇನೆಂದರೆ, ಪೋಲಿಸರು ಸ್ಟೇಷನ್ ಡೈರಿಯಲ್ಲಿ ಪ್ರಕರಣವನ್ನು ದಾಖಲಿಸುವಾಗ ತಮ್ಮ ಬೆಳಗಿನ ದಿನಚರಿಯ ವಿವರಗಳನ್ನು ಹೇಳುವುದಾದರೂ ಹೇಗೆ ಎನ್ನುವ ಅಸಾಧ್ಯತೆಯನ್ನು ನೆನಪಿಸಿಕೊಂಡೆ ಈ ಪ್ರಕ್ರಿಯೆಯಿಂದ ದೂರ ಉಳಿದರು.
ಕೆಲವು ವಿಷಯಗಳನ್ನು ಸಾಮಾನ್ಯವಾಗಿ ಆಫ್-ದಿ-ರೆಕಾರ್ಡ್ ಆಗಿಡುವುದೇ ಉತ್ತಮವೆಂದುಕೊಂಡರು. ಇದಕ್ಕೆ ಪರಿಹಾರ ಬೇಕೆ ಬೇಕು ಎನ್ನುವ ವಿಚಾರವನ್ನು ಅರಿತು, ತಮ್ಮ ನ್ಯಾಯಾಲಯದ ನಿಪುಣ ಸಹಾಯಕನಿಗೆ ತಿಳಿಸಿ ಅವನ ಸಲಹೆಯನ್ನು ಪಡೆಯುವುದೇ ಔಚಿತ್ಯವೆಂದುಕೊಂಡರು.
ಸಹಾಯಕ: “ಸರ್, ಆ ಇಬ್ಬರೂ ಸಹೋದರರು ನನಗೆ ಚಿರಪರಿಚಿತರು. ನಿಮ್ಮ ಮೇಲೆ ಕಲ್ಲು ಎಸೆದವನ ಜತೆಯಲ್ಲಿ ಮಾತನಾಡಿ, ಇದರಿಂದ ಆಗಬಹುದಾದ ಕಠಿಣ ಪರಿಣಾಮದ ಬಗ್ಗೆ ನಾನು ಎಚ್ಚರಿಕೆ ನೀಡಿ ಪುನರಾವರ್ತನೆಯಾಗದಂತೆ ನೋಡಿಕೊಳ್ಳುತ್ತೇನೆ.”
ನ್ಯಾಯಾಧೀಶರು ಕೂಡ ಈ ಪ್ರಾಯೋಗಿಕ ಕ್ರಮದ ಬಗ್ಗೆ ಅಭಿನಂದಿಸಿದರು. ಅಂದು ಸಂಜೆಯೇ ಕೋರ್ಟ್ ಕಲಾಪ ಮುಗಿಯುತ್ತಿದ್ದಂತೆ, ಸಹಾಯಕನು ಆ ಪ್ರತಿವಾದಿ ಸಹೋದರನನ್ನು ಭೇಟಿಯಾದನು. ಮಾತುಕತೆಯ ನಂತರ, ಅವನು ನ್ಯಾಯಾಧೀಶರ ವಸತಿಗೃಹಕ್ಕೆ ಬಂದು ಅತ್ಯಂತ ಮುಜುಗರದಿಂದ ಹೀಗೆ ಹೇಳಿದನು: “ಸರ್, ನಾನು ಕೃತ್ಯ ಎಸಗಿದವನ ಜತೆಯಲ್ಲಿ ಮಾತನಾಡಿದೆ… ಆದರೆ, ಅವನು ತನ್ನ ಕೃತ್ಯದ ಬಗ್ಗೆ ಸಮರ್ಥನೆಯನ್ನು ಕೊಟ್ಟುಕೊಂಡಿದ್ದಲದೇ, ತನ್ನದೇನೂ ತಪ್ಪಿಲ್ಲವೆಂದು ಹೇಳುತ್ತಿದ್ದಾನೆ. ತಾವೇ ಅವನನ್ನು ಅವಮಾನಿತನಂತೆ ಮಾಡಿದ್ದೂ ಎಂದು ಮುಂದುವರೆದು ಹೇಳಿದನು!”
ನ್ಯಾಯಾಧೀಶರು: “ಅವನನ್ನು ನಾನು ಹೇಗೆ ಅವಮಾನಿಸಿದೆ?”
ಸಹಾಯಕ: “ಸರ್, ಅವನು ಹೇಳುವ ಪ್ರಕಾರ, ಆ ಪ್ರಕರಣದಲ್ಲಿ ವಾದಿ ಸಹೋದರನ ಪರವಾಗಿ ನೀವು ತೀರ್ಪು ನೀಡಿದ ನಂತರ, ಈ ಪ್ರತಿವಾದಿಯ ಗದ್ದೆಗೆ ಬಂದು ಸಂತೋಷವಾಗಿ ಮಲವಿಸರ್ಜನೆ ಮಾಡಲು ನಿಮಗೇನು ಹಕ್ಕಿದೆ? ನಾಳೆಯಿಂದ ನೀವು ಬೇರೆ ಯಾವುದಾದರು ಜಾಗಕ್ಕೆ ಹೋಗಬೇಕೆಂದೂ ಮತ್ತು ತನ್ನ ಸಹೋದರನ ಗದ್ದೆಯನ್ನೂ ನನಗೆ ತೋರಿಸಿ ’ಜಡ್ಜ್ ಸಾಹೇಬರು ಬೇಕಾದರೆ ಗೆದ್ದವನ ಜಮೀನಿನಲ್ಲಿ ತಮ್ಮ ದಿನ ನಿತ್ಯದ ಕರ್ಮಾದಿಗಳನ್ನು ಮುಗಿಸಲಿ!’ ಎಂದು ಹೇಳಿದನು.”
ತಮ್ಮ ಸುರಕ್ಷತೆಯ ದೃಷ್ಟಿಯಿಂದ, ನ್ಯಾಯಾಧೀಶರು ಮರುದಿನದಿಂದಲೇ ತಮ್ಮ ಬೆಳಗಿನ ಶೌಚದ ಕಾರ್ಯಕ್ಕಾಗಿ ತಮ್ಮ ನಿಗದಿತ ಸ್ಥಳವನ್ನು ಬದಲಾಯಿಸದೇ ಬೇರೆ ಮಾರ್ಗವಿರಲಿಲ್ಲ.
ಬಹುಶಃ ಅವರ ಬೆನ್ನಿಗೆ ಬಿದ್ದ ಆ ಕಲ್ಲುಗಳು ನ್ಯಾಯಾಂಗ ನಿಂದನೆಯಾಗಿರಲಿಲ್ಲ. ಅದರ ಪರ್ಯಾಯವಾಗಿ ಸೋತ ಕಕ್ಷಿದಾರನ ’ಪ್ರತಿಭಟನಾ ಅರ್ಜಿ’ (ಪ್ರೊಟೆಸ್ಟ್ ಪಿಟೀಷನ್) ಎಂಬ ಗಮನಾರ್ಹ ಸತ್ಯವನ್ನು ಅವರು ಅರಿತುಕೊಂಡಿದ್ದರು.






0 Comments