ಪೂರ್ಣಿಮಾ ಮಾಳಗಿಮನಿ ಓದಿದ ‘ಸಾವು’

ಪೂರ್ಣಿಮಾ ಮಾಳಗಿಮನಿ

ನಾನು ನಾಸ್ತಿಕಳು. ನಾನು ಮಾಡಿದ ಪಾಪ ಪುಣ್ಯಗಳ ಲೆಕ್ಕ ಕೊಟ್ಟು ಸ್ವರ್ಗಕ್ಕೆ ಹೋಗ್ತಿನೋ ನರಕಕ್ಕೋ ಎನ್ನುವ ಆತಂಕವೇ ಇಲ್ಲ, ಎಂದ ಮೇಲೆ ಪುನರ್ಜನ್ಮದಲ್ಲಿ ಸೊಳ್ಳೆಯಾಗಿಯೋ ತಿಗಣೆಯಾಗಿಯೋ ಹುಟ್ಟಿದರೆ ಏನು ಮಾಡುವುದು ಎಂದೂ ಯೋಚಿಸಿಲ್ಲ. ಸತ್ತ ಮೇಲೆ ಎಲ್ಲಿ ಹೋಗ್ತೀನಿ, ಏನಾಗುತ್ತೆ ಎಂದೆಲ್ಲ ತಲೆ ಕೆಡಿಸಿಕೊಂಡಿಲ್ಲ. ಹಾಗೇ ಹಸ್ತರೇಖೆಗಳನ್ನು ತೋರಿಸಿ ನನಗೆ ಮದುವೆಯಾಗುತ್ತದೋ, ಮಕ್ಕಳೆಷ್ಟು, ವೈವಾಹಿಕ ಜೀವನ ಚೆನ್ನಾಗಿರುತ್ತಾ, ವಿದೇಶಕ್ಕೆ ಹೋಗ್ತೀನಾ, ಶನಿ ಕಾಟ ಯಾವಾಗಿನಿಂದ ಶುರುವಾಗುತ್ತೆ ಎಂದೆಲ್ಲಾ ಭವಿಷ್ಯ ತಿಳಿದುಕೊಳ್ಳುವಲ್ಲಿಯೂ ಆಸಕ್ತಿಯಿರಲಿಲ್ಲ. ಆದರೂ ಸ್ನೇಹಿತರ ಬಲವಂತಕ್ಕೆ ಒಮ್ಮೆ ಹಸ್ತ ನೋಡಿ ಅದೇನು ಹೇಳ್ತಿರೋ ಹೇಳಿಕೊಂಡು ಸಾಯಿರಿ ಅಂತ ಒಬ್ಬ ಪಾಮಿಸ್ಟ್ ಗೆ ಕೈ ತೋರಿಸಿದ್ದೆ. ಆತ, ‘ನಿನ್ನ ಹೆಸರೇ ಪೂರ್ಣಿಮಾ, ನೀನು ಹಿಡಿದ ಕೆಲಸವನ್ನು ಪೂರ್ಣ ಮಾಡಿಯೇ ತೀರುತ್ತೀಯ, ಆದರೆ… ‘ ಎಂದು ನಿಲ್ಲಿಸಿದಾಗ ಒಂದು ಕ್ಷಣ ದಿಗಿಲಾಯಿತು. ಆದರೆ ಏನು ಎನ್ನುವಂತೆ ಅವರನ್ನೇ ನೋಡಿದಾಗ, ‘ನಿನ್ನ ಆಯುಷ್ಯ ರೇಖೆ ಮಾತ್ರ … ಅಂದ್ರೆ ಅಕಾಲ … ‘ ಎಂದು ಏನೇನೋ ಹೇಳಿದಾಗ ಒಟ್ಟಿನಲ್ಲಿ ನಾನು ಬೇಗ ಸಾಯ್ತಿನಿ ಅಂತ ಗೊತ್ತಾಯಿತು. ಬೇರೆ ಯಾವುದನ್ನೂ ನಂಬದ ಇಂಥ ನನಗೂ ಈ ಸಾವಿನ ಬಗ್ಗೆ ದಶಕಗಳ ಹಿಂದೆ ಜ್ಯೋತಿಷಿ ಹೇಳಿಬಿಟ್ಟ ಆ ಒಂದು ಮಾತು ಮಾತ್ರ ಈಗಲೂ ನೆನಪಿದೆ. ಅದರಲ್ಲೂ ಸರ್ಕಾರಿ ನೌಕರಳಾಗಿ ಏರ್ ಇಂಡಿಯಾ ಫ್ಲೈಟ್ ನಲ್ಲೇ ಪ್ರಯಾಣ ಮಾಡಬೇಕಾದ ಅಗತ್ಯ ಬಿದ್ದಾಗಲಂತೂ ಲ್ಯಾಂಡ್ ಆದಾಗೆಲ್ಲಾ ಲೈಸೆನ್ಸ್ ರಿನ್ಯೂ ಆದಷ್ಟು ಸಮಾಧಾನವಾಗಿ ಆ ಜ್ಯೋತಿಷಿಯ ಮಾತು ಸುಳ್ಳು ಎನಿಸಿ ನಿಟ್ಟುಸಿರಿಟ್ಟಿದ್ದಿದೆ.

ಸಾವು ಎನ್ನುವುದು ಒಂದು ಔಟ್ ಆಫ್ ಸಿಲಬಸ್ ವಿಷಯ, ಅದರ ಕುರಿತು ಮಾತನಾಡುವುದೇ ಸಲ್ಲ, ಅಪ್ರಸ್ತುತ, ಯಾವಾಗಲೂ ಶುಭ ನುಡಿಯಬೇಕು, ನಮ್ಮ ಸಾವಿನ ಬಗ್ಗೆ ತಿಳಿದುಕೊಂಡು ಆಗಬೇಕಾಗಿರುವುದು ಏನೂ ಇಲ್ಲ ಎಂದೆಲ್ಲಾ ಹೇಳುತ್ತಾ ನನ್ನಂತೆಯೇ ಹಲವರು ಇದರ ಕುರಿತು ಅನಾಸಕ್ತರಾಗಿರುತ್ತಾರೆ ಎಂದುಕೊಂಡಿದ್ದೆ. ಆದರೆ ಜೋಗಿ ಸರ್ ಇತ್ತೀಚಿಗಷ್ಟೇ ಬರೆದ, ಈ #ಸಾವು ಎನ್ನುವ ಪುಸ್ತಕದ ಬಿಡುಗಡೆಗೆ ಕಿಕ್ಕಿರಿದು ಸೇರಿದ್ದ ಜನರನ್ನು ನೋಡಿದಾಗ, ಅದೇ ದಿನ ಎಲ್ಲಾ ಪ್ರತಿಗಳು ಸೋಲ್ಡ್ ಔಟ್ ಆಗಿ ಮರುದಿನವೇ ಎರಡನೇ ಮುದ್ರಣಕ್ಕೆ ಹೋಗಿದ್ದು ತಿಳಿದು ಅಚ್ಚರಿಯಾಯಿತು. ಅಲ್ಲದೆ ನಮ್ಮನ್ನು ಕಾಡುವ ಸಂಗತಿ ಸಾವಿನ ಕುರಿತು ಜೀವನದಲ್ಲಿ ಒಂದಲ್ಲ ಒಂದು ದಿನ ನಾವೆಲ್ಲಾ ಯೋಚಿಸಲು ಆರಂಭಿಸುತ್ತೇವೆ ಎನ್ನುವುದನ್ನು ಒಪ್ಪಿಕೊಳ್ಳಲೇ ಬೇಕಾಯಿತು. ಅಂತೂ ಕುತೂಹಲ ತಾಳಲಾರದೆ ನಾನೂ ಸಾವು ಮನೆಗೆ ಬರಿಸಿಕೊಂಡು ಮರುದಿನವೇ ಓದಿದೆ. ಮೊದಲ ಬಾರಿ ಒಂದು ನಾನ್ ಫಿಕ್ಷನ್ ಪುಸ್ತಕವನ್ನು ಒಂದೂ ಪುಟ ಬಿಡದೆ, ಇಷ್ಟ ಪಟ್ಟುಕೊಂಡು ಓದಿದ ಖುಷಿ ನನಗೆ.

ಒಟ್ಟು ಆರು ಭಾಗಗಳಲ್ಲಿರುವ, ಇನ್ನೂರ ಮೂವತ್ತಾರು ಪುಟಗಳ ಈ ಪುಸ್ತಕವನ್ನು ಯಾವ ಅಧ್ಯಾಯದಿಂದಲಾದರೂ ಶುರು ಮಾಡಿ ಓದಬಹುದಾದರೂ ಮೊದಲಿನಿಂದ ಓದಿದರೆ ಒಂದು ಫ್ಲೋ ಸಿಗುತ್ತದೆ. ಈ ಸಾವು ಹುಟ್ಟುತ್ತಲೇ ಬಹಳ ಗದ್ದಲ ಎಬ್ಬಿಸಿತ್ತು. ಏಕೆಂದರೆ ಇದು ಜೋಗಿ ಅವರ ಎಪ್ಪತ್ತೈದನೇ ಪುಸ್ತಕವೂ, ಸಾವಣ್ಣ ಪ್ರಕಾಶನದ ನೂರೈವತ್ತನೇ ಪುಸ್ತಕವೂ ಆಗಿದೆ. ತಮ್ಮ ಪ್ರತಿ ಪುಸ್ತಕವನ್ನೂ ಪ್ರೀತಿ, ಶ್ರದ್ಧೆಗಳಿಂದ ಪ್ರಕಟ ಮಾಡುವ Jameel Sawanna ಅವರು ಈ ಪುಸ್ತಕದ ಪ್ರತಿ ಹಂತದಲ್ಲಿಯೂ ವಿಶೇಷ ಕಾಳಜಿ ತೆಗೆದುಕೊಂಡು ಅದ್ಭುತ ಗುಣಮಟ್ಟದ, ವಿಭಿನ್ನ ವಿನ್ಯಾಸದ ಪುಸ್ತಕವನ್ನಾಗಿಸಿದ್ದಾರೆ. ವಿ ಎಂ ಮಂಜುನಾಥ್ ಅವರ ಸರಳವಾಗಿದ್ದುಕೊಂಡೇ ಪರಿಣಾಮಕಾರಿಯಾದ ಮುಖಪುಟ ಇಷ್ಟವಾಯಿತು. ದೀಪಾವಳಿಗೆ ಒಂದು ವಾರ ಮುನ್ನ ಬಿಡುಗಡೆಯಾದ ಈ ಪುಸ್ತಕ ಇದರ ಲೇಖಕ ಮತ್ತು ಪ್ರಕಾಶಕ ಇಬ್ಬರ ಮೆಚ್ಚಿನ ಕಪ್ಪು ಬಣ್ಣವನ್ನೇ ಹೊದ್ದುಕೊಂಡು ಬಂದು ಸಾವಿನ ಹಲವು ಆಯಾಮಗಳ ಬಗ್ಗೆ ಬೆಳಕು ಚೆಲ್ಲಿದೆ.

ಎಲ್ಲರ ಸಾವಿಗಿಂತ ಪ್ರೇಮಿಯ ಸಾವು ಭರಿಸಲಾಗದ ಒಂದು ಖಾಲಿತನವನ್ನು ಹುಟ್ಟಿಸಿಬಿಡುತ್ತದೆ ಎನ್ನುತ್ತಾರೆ. ಹಾಗೆ ಕಾಡಿದ ಸಾವಿನ ಕುರಿತ ಸಾಹಿತ್ಯಗಳಲ್ಲಿ ಅಮೇರಿಕಾದ ಪಾಪ್ ಸಿಂಗರ್ ಬಿಲ್ಲಿ ಐಲಿಶ್ ನ ಈ ಹಾಡು ನನಗೆ ಬಹಳ ಇಷ್ಟ.
Our love is six feet under
I can’t help but wonder
If our grave was watered by the rain
Would roses bloom?
Could roses bloom
Again?

ಸಲ್ಮಾನ್ ರಶ್ದಿ ಹೇಳುವಂತೆ We all owe death a life!

ಜೋಗಿಯವರು ಸಾವು ಎಂದರೇನು ಎನ್ನುವ ಒಂದು ಪ್ರಶ್ನೆಯನ್ನು ಸಾಹಿತ್ಯ, ಚರಿತ್ರೆ ಮತ್ತು ಗರುಡ ಪುರಾಣ ಮತ್ತು ಇತರ ಪೌರಾಣಿಕ ನೆಲೆಗಳಲ್ಲಿ ಸಿಗುವ ಪುರಾವೆಗಳನ್ನು, ಉತ್ತರಗಳನ್ನು, ಗ್ರಹಿಸಿ, ಅವಲೋಕಿಸಿ, ಜಾಗತಿಕವಾಗಿ ವಿವಿಧ ದೇಶಗಳಲ್ಲಿರುವ ವಿಭಿನ್ನ ಸಂಸ್ಕೃತಿ, ನಾಗರಿಕತೆಯ ಹಿನ್ನೆಲೆಯಲ್ಲಿ ಸಾವನ್ನು ಕುರಿತು ಇರುವ ಆಚರಣೆಗಳು, ವಿಚಾರಗಳನ್ನು ಪರಿಷ್ಕರಿಸಿ, ತಮ್ಮ ಅಂತರಂಗದ ಪುಟಗಳಿಂದ, ಹಳೆಯ ನೆನಪುಗಳ ಗುಚ್ಛದಿಂದ ಹಲವು ಆಯಾಮಗಳನ್ನು ಒದಗಿಸಿ, ಚರ್ಚಿಸಿ, ಉತ್ತರಿಸುವ ಒಂದು ಸಾಹಸ ಮಾಡಿದ್ದಾರೆ. ರೌರವ ನರಕದ ವರ್ಣನೆ ಮತ್ತು ಹಲವು ಪೌರಾಣಿಕ ಕಥೆಗಳ ಉಲ್ಲೇಖಗಳನ್ನು ಓದಿದಾಗ ಬಾಲ್ಯದ ನೆನಪಾಯಿತು. ಪಾಪ ಮಾಡಿದವರನ್ನು ನಿಜಕ್ಕೂ ಕುದಿಯುವ ಎಣ್ಣೆಯಲ್ಲಿ ಹಾಕಿ ಹಪ್ಪಳದಂತೆ ಕರಿದು ಸೆಟೆದುಕೊಂಡು ಹೋಗುವಂತೆ ಮಾಡುತ್ತಾರೆ ಯಮಧೂತರು ಎಂದು ನಂಬಿದ್ದ ಆ ದಿನಗಳಲ್ಲಿ ಅಮ್ಮ ಪಕೋಡ ಮಾಡುವಾಗ ಬಾಣಲಿ ಮುಂದೆ ನಿಲ್ಲಲೂ ಭಯವಾಗುತ್ತಿತ್ತು. ಈ ಕಥೆಗಳಲ್ಲಿ ನಂಬಿಕೆಗಿಂತ ಮಿಗಿಲಾಗಿ ಉದಾತ್ತ ವಿಚಾರಗಳನ್ನು, ಮೌಲ್ಯಗಳನ್ನೂ, ಪಾಪಪ್ರಜ್ಞೆಯನ್ನೂ ಹುಟ್ಟಿಸುವುದು, ಸಾವಿನ ಅನಿವಾರ್ಯ ಮತ್ತು ಅಪರಿಹಾರ್ಯ ಗುಣವನ್ನು ಹೇಳುವುದೇ ಇವುಗಳ ಮುಖ್ಯ ಉದ್ದೇಶವಾಗಿತ್ತು ಎನ್ನುವುದು ಅರ್ಥವಾಗುತ್ತದೆ. ಇವು ವಯಸ್ಸಾದ ಮೇಲೆ ಸಾವಿಗೆ ಹೆದರಿ ಕುಳಿತಾಗ, ರಿಗ್ರೆಟ್ ಇಲ್ಲದೆ ಬದುಕುವುದಕ್ಕೆ ಬಹಳ ಮುಖ್ಯ ತಯಾರಿಯೂ ಹೌದು.

ಈ ಪುಸ್ತಕದ ತುಂಬಾ ಆಹಾ ಅನ್ನಿಸುವ ಬಹಳಷ್ಟು ಸಾಲುಗಳಿವೆ. ಅಷ್ಟೇ ಅಲ್ಲದೆ ಪ್ರಸಿದ್ಧ ಸಾಹಿತಿಗಳ ಸಾಂದರ್ಭಿಕವಾದ ಕೊಟೇಶನ್ ಗಳಿವೆ. ಅವುಗಳಲ್ಲಿ ನನಗೆ ಬಹಳ ಇಷ್ಟವಾದ ಕೆಲವು ಸಾಲುಗಳು ಎಂದರೆ,

ಸಾವು ಕೊಟ್ಟ ಸಾಲ ಬದುಕು

ಸಾವಿಗೂ ಒಂದು ಘನತೆ ಗೌರವವಿದೆ

ಪ್ರತಿಮೆ ಅಥವಾ ಇಮೇಜ್ ಅನ್ನು ಭಗ್ನಗೊಳಿಸುವವನೇ ಲೇಖಕ

ಎಂಥ ಸಾಧನೆ ಮಾಡಿದವನನ್ನೂ ಸಾವು ಸವರಿ ಹಾಕಿಬಿಡುತ್ತದೆ.

ಹೋಗಬಾರದ ಸ್ಥಳಕ್ಕೆ ಹೋಗುವುದರಿಂದ ತಿನ್ನಬಾರದ ಆಹಾರವನ್ನು ತಿನ್ನುವುದರಿಂದ ಮನುಷ್ಯನ ಆಯಸ್ಸು ಕ್ಷೀಣಿಸುತ್ತದೆ

ಹಾಗೇ ಚರಮಗೀತೆ ಕಾನ್ಸೆಪ್ಟ್ ನಲ್ಲಿ
The fall of leaves
Has left some autumn
On the lower branches ಎನ್ನುವ ಶೋಜನ್ ಪದ್ಯ ಬಹಳ ಕಾಡುತ್ತದೆ.
ಒಮ್ಮೆ ಸಿಗೋಣ ಬಾಕಿ ಮೊಕ್ತ – ಈ ಇಡೀ ಅಧ್ಯಾಯ, ಜೋಗಿಯವರ ಬಾಲ್ಯದ ದಿನಗಳ ಕಾಡಜ್ಜನ ನೆನಪುಗಳು ಬಹಳ ಇಷ್ಟವಾಯ್ತು.

As a reader I felt this should be the approach to write a non fiction book.

ಕ್ರಮೇಣ ನಮ್ಮ ಸುತ್ತಲಿನವರಿಗೆ, ಮಕ್ಕಳಿಗೆ, ಜಗತ್ತಿಗೆ ನಾವು ಹೇಗೆ ಅಪ್ರಸ್ತುತರಾಗುತ್ತಾ ಹೋಗುತ್ತೇವೆ. ನಮ್ಮ ಸಾವನ್ನು ಸ್ವೀಕರಿಸುವುದು ನಮಗೆ ಆಯ್ಕೆಯಲ್ಲ. ಆದರೆ ಯಾವಾಗ ಬಂದರೂ ಅಪ್ರಿಯವೇ ಆಗುವ ನಮಗೆ ಹತ್ತಿರದವರ ಸಾವನ್ನು ಬಂದಂತೆ ಸ್ವೀಕರಿಸಿ ಮುಂದೆ ನಡೆಯುವುದು ಈ ಪುಸ್ತಕದ ಕೆಲವು ವಿಚಾರಗಳನ್ನು ಗ್ರಹಿಸಿದಾಗ ಸಾಧ್ಯವಾಗಬಹುದು. ಬದುಕಿದ್ದಾಗಲೇ ಓದಿಬಿಡಬೇಕಾದ ಈ ಪುಸ್ತಕ ನಮ್ಮ ಬದುಕು ‘ಎಂಥ ಸಾವು ಮಾರ್ರೆ’ ಎಂದು ಉದ್ಗರಿಸುವಂತೆ ಮಾಡುವುದು ಮಾತ್ರ ಖಂಡಿತ!.

ಸಾವಿಗಾಗಿ ಅಂದರೆ … ನಿಮ್ಮ ಪ್ರತಿಗಾಗಿ ಎಲ್ಲೂ ಹುಡುಕಿಕೊಂಡು ಹೋಗೋದು ಬೇಡ. ಮನೆಯಲ್ಲೇ ಕುಳಿತು ಕನ್ನಡ ಲೋಕ ದವರನ್ನು (8660404034) ಸಂಪರ್ಕಿಸಿ.

‍ಲೇಖಕರು Admin

October 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: