ಪ್ರೊ ಓ ಎಲ್ ನಾಗಭೂಷಣಸ್ವಾಮಿ ‘ಹಾಜಿ ಮುರಾದ್’ – ನಿದ್ರೆಯಿಲ್ಲದೆ ಮೂರು ದಿನ ಕಳೆದು…

ಪ್ರೊ ಓ. ಎಲ್.‌ ನಾಗಭೂಷಣ ಸ್ವಾಮಿಯವರು ಕನ್ನಡದ ಖ್ಯಾತ ವಿಮರ್ಶಕರು ಹಾಗೂ ಅನುವಾದಕರು. ಇಂಗ್ಲೀಷ್‌ ಅಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ. 

ಕುವೆಂಪು ಭಾಷಾ ಭಾರತಿ, ಕೇಂದ್ರ ಸಾಹಿತ್ಯ ಅಕಾಡಮಿ, ಜೆ. ಕೃಷ್ಣಮೂರ್ತಿ ಫೌಂಡೇಶನ್‌ ಹೀಗೆ ವಿವಿಧ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದಾರೆ.

60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ವಿಮರ್ಶೆಯ ಪರಿಭಾಷೆ  ಇವರ ಬಹುಚರ್ಚಿತ ಕೃತಿಗಳಲ್ಲೊಂದು. ನಕ್ಷತ್ರಗಳು, ಏಕಾಂತ ಲೋಕಾಂತ, ನನ್ನ ಹಿಮಾಲಯ, ಇಂದಿನ ಹೆಜ್ಜೆ, ಪ್ರಜ್ಞಾ ಪ್ರವಾಹ ತಂತ್ರ, ನುಡಿಯೊಳಗಾಗಿ ಮುಂತಾದವು ಇವರ ಸ್ವತಂತ್ರ ಕೃತಿಗಳು. ಕನ್ನಡ ಶೈಲಿ ಕೈಪಿಡಿ, ನಮ್ಮ ಕನ್ನಡ ಕಾವ್ಯ, ವಚನ ಸಾವಿರ ಮೊದಲಾದವು ಸಂಪಾದಿತ ಕೃತಿಗಳು. ಜಿಡ್ಡು ಕೃಷ್ಣಮೂರ್ತಿಯವರ ಕೆಲವು ಕೃತಿಗಳು, ಸಿಂಗರ್‌ ಕತೆಗಳು, ಟಾಲ್ಸ್ಟಾಯ್‌ನ ಸಾವು ಮತ್ತು ಇತರ ಕತೆಗಳು, ರಿಲ್ಕ್‌ನ ಯುವಕವಿಗೆ ಬರೆದ ಪತ್ರಗಳು, ಕನ್ನಡಕ್ಕೆ ಬಂದ ಕವಿತೆ, ರುಲ್ಪೊ ಸಮಗ್ರ ಸಾಹಿತ್ಯ ಬೆಂಕಿ ಬಿದ್ದ ಬಯಲು, ಪ್ಲಾಬೊ ನೆರೂಡನ ಆತ್ಮಕತೆ ನೆನಪುಗಳು, ಯುದ್ಧ ಮತ್ತು ಶಾಂತಿ ಹೀಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಚಂದ್ರಶೇಖರ ಕಂಬಾರ, ಜಿ.ಎಸ್‌. ಶಿವರುದ್ರಪ್ಪ ಹೀಗೆ ಕೆಲವರ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಿದ್ದಾರೆ.

ವಿಮರ್ಶೆಯ ಪರಿಭಾಷೆಗಾಗಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ತೀನಂಶ್ರೀ ಬಹುಮಾನ, ಸ ಸ ಮಾಳವಾಡ ಪ್ರಶಸ್ತಿಯನ್ನು ಪಡೆದಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾಂತರ ಬಹುಮಾನವು ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.

ಪ್ರತಿ ಶುಕ್ರವಾರ ಅವಧಿಯಲ್ಲಿ ಪ್ರೊ. ನಾಗಭೂಷಣ ಸ್ವಾಮಿ ಅವರು ಅನುವಾದಿಸಿರುವ ಟಾಲ್‌ಸ್ಟಾಯ್‌ನ ಕೊನೆಯ ಕಾದಂಬರಿ ಹಾಜಿ ಮುರಾದ್‌ ಪ್ರಕಟವಾಗಲಿದೆ.

4

ಹಾಜಿ ಮುರಾದ್‌ನನ್ನು ಸೆರೆಹಿಡಿಯಲು ಶಮೀಲ್ ತನ್ನ ಮುರೀದ್‌ಗಳನ್ನು ಕಳಿಸಿ ಮೂರು ದಿನವಾಗಿತ್ತು. ನಿದ್ರೆ ಇಲ್ಲದೆ ಮೂರು ದಿನ ಕಳೆದಿದ್ದ ಹಾಜಿ ಮುರಾದ್ ಈಗ, ಸಾದೋ ಗುಡ್ ನೈಟ್ ಹೇಳಿ ಶಕ್ಲ್ಯಾದಿಂದ ಹೊರ ನಡೆದ ತಕ್ಷಣ ಬಟ್ಟೆಯನ್ನೂ ಬದಲಿಸದೆ ಮೊಳಕೈಯನ್ನು ಆತಿಥೇಯ ನೀಡಿದ್ದ ಮೆದು ದಿಂಬಿಗೆ ಒತ್ತಿ, ಅಂಗೈಯ ಮೇಲೆ ತಲೆ ಇಟ್ಟು ಮಲಗಿಬಿಟ್ಟ.  

ಗೋಡೆಯಿಂದ ಸ್ವಲ್ಪ ದೂರದಲ್ಲಿ ಎಲ್ದಾರ್ ಅಂಗಾತ ಮಲಗಿದ್ದ. ಎಲ್ದಾರ್ ಸದೃಢ ಯುವಕ. ಹೊಸದಾಗಿ ಕ್ಷೌರ ಮಾಡಿಸಿದ್ದ ಅವನ ತಲೆ ದಿಂಬಿನಿಂದ ಕೆಳಗೆ ಜಾರಿತ್ತು. ಬಿಳಿಯ ಸಿರ್ಕಾಸಿಯನ್ ಕೋಟಿಗೆ ಅಂಟಿಸಿ ಹೊಲಿದಿದ್ದ ತೋಟಾಗಳ ಕಪ್ಪು ಚೀಲವನ್ನು ಹೊತ್ತಿದ್ದ ಎದೆ ಅವನ ತಲೆಗಿಂತ ಎತ್ತರವಾಗಿ ಕಾಣುತಿತ್ತು.  ಎಳೆ ಚಿಗುರುಗೂದಲು ಮೂಡುತಿದ್ದ ಅವನ ಮೇಲ್ತುಟಿ ಹಾಲು ಹೀರುವ ಮಗುವಿನ ತುಟಿಯ ಹಾಗೆ ಉಬ್ಬಿ ಮುಂದೆ ಚಾಚುತ್ತ ಹಿಂದೆ ಸರಿಯುತ್ತ ಇತ್ತು. ಹಾಜಿ ಮುರಾದನ ಹಾಗೆ ಅವನೂ ಪಿಸ್ತೂಲು, ಚೂರಿಗಳನ್ನು ತನ್ನ ಬೆಲ್ಟಿಗೆ ಸಿಕ್ಕಿಸಿಕೊಂಡು ಮಲಗಿದ್ದ. ಮೇಣದ ಬತ್ತಿ ಉರಿದು ಚಿಕ್ಕವಾಗಿದ್ದವು. ಗವಾಕ್ಷದಿಂದ ಇರುಳ ಬೆಳಕು ಮಸುಕಾಗಿ ಕಾಣುತಿತ್ತು. 

ಮಧ್ಯರಾತ್ರಿಯ ಹೊತ್ತಿಗೆ ಕೋಣೆಯ ಬಾಗಿಲು ಕಿರುಗುಟ್ಟಿತು. ಹಾಜಿ ಮುರಾದ್ ತಟ್ಟನೆದ್ದ. ಕೈ ಪಿಸ್ತೂಲು ಹಿಡಿಯಿತು. ಮನೆಯ ಧಣಿ ಸಾದೊ ಮಣ್ಣಿನ ನೆಲದ ಮೇಲೆ ಮೆಲ್ಲಗೆ ಹೆಜ್ಜೆ ಇಡುತ್ತ ಒಳ ಬಂದ.

’ಏನದು?’ ನಿದ್ರೆ ಮಾಡಿರಲೇ ಇಲ್ಲ ಅನ್ನುವ ಹಾಗೆ ಹಾಜಿ ಮುರಾದ್ ಕೇಳಿದ. 

ಸಾದೋ ಅವನೆದುರು ಕೂರುತ್ತಾ, ’ಯೋಚನೆ ಮಾಡಬೇಕಾದ ವಿಚಾರ. ನೀನು ಬಂದದ್ದನ್ನು ಒಬ್ಬ ಹೆಂಗಸು ಚಾವಣಿಯ ಮೇಲಿಂದ ನೋಡಿದಾಳೆ. ಗಂಡನಿಗೆ ಹೇಳಿದಾಳೆ. ಈಗ ಇಡೀ ಔಲ್‌ಗೆ ತಿಳಿದುಹೋಗಿದೆ. ಪಕ್ಕದ ಮನೆಯವಳು ಬಂದು ಈಗ ನನ್ನ ಹೆಂಡತಿಗೆ ಹೇಳಿದಳು. ಊರಿನ ದೊಡ್ಡವರೆಲ್ಲ ಮಸೀದಿಯಲ್ಲಿ ಸೇರಿದಾರೆ. ನಿನ್ನ ಹಿಡಿದಿಟ್ಟುಕೊಳ್ಳಬೇಕು ಅನ್ನುವ ತೀರ್ಮಾನ ಮಾಡಿದಾರೆ.’

’ಹೊರಡಬೇಕು!’ ಅಂದ ಹಾಜಿ ಮುರಾದ್. 

’ಕುದುರೆ ಸಿದ್ಧವಾಗಿವೆ,’ ಅನ್ನುತ್ತ ಸಾದೋ ಆತುರವಾಗಿ ಹೊರಟು ಹೋದ. 

’ಎಲ್ದಾರ್!’ ಹಾಜಿ ಮುರಾದ್ ಪಿಸುದನಿಯಲ್ಲಿ ಕರೆದ. ತನ್ನ ಹೆಸರು, ಅದಕ್ಕಿಂತ ಮಿಗಿಲಾಗಿ ಒಡೆಯನ ದನಿ ಕೇಳಿ ಎಲ್ದಾರ್ ತಟ್ಟನೆದ್ದುನಿಂತ, ತಲೆಯ ಮೇಲಿನ ಟೋಪಿ ಸರಿಮಾಡಿಕೊಂಡ. ಹಾಜಿ ಮುರಾದ್ ಆಯುಧಗಳನ್ನೆತ್ತಿಕೊಂಡ, ಬುರ್ಕಾ ನಿಲುವಂಗಿ ತೊಟ್ಟ. ಎಲ್ದಾರ್ ಕೂಡ ಸಿದ್ಧನಾದ. ಇಬ್ಬರೂ ಸದ್ದು ಮಾಡದೆ ಕೈಸಾಲೆಗೆ ಬಂದರು. ಕಪ್ಪು ಕಣ್ಣಿನ ಹುಡುಗ ಅವರ ಕುದುರೆಗಳನ್ನು ಕರೆದುಕೊಂಡು ಬಂದ. ರಸ್ತೆಯ ಮೇಲೆ ಕುದುರೆ ಗೊರಸಿನ ಸದ್ದು ಕೇಳಿದ ಆಚೆಯ ಮನೆಯವನು ಹೊರಗಿಣುಕಿ ನೋಡಿದ. ಮರದ ಚಪ್ಪಲಿಗಳನ್ನು ಟಪಟಪ ಸದ್ದು ಮಾಡುತ್ತ ಬೆಟ್ಟವೇರಿ ಮಸೀದಿಯತ್ತ ಓಡಿದ. 

ಆಕಾಶದಲ್ಲಿ ಚಂದ್ರನಿರಲಿಲ್ಲ. ನಕ್ಷತ್ರ ಹೊಳೆಯುತಿದ್ದವು. ಶಕ್ಲಾ ಚಾವಣಿಗಳ ಹೊರರೇಖೆ ಕತ್ತಲಿನಲ್ಲೂ ಸ್ಪ?ವಾಗಿ ಕಾಣುತಿದ್ದವು. ಹಳ್ಳಿಗಿಂತ ಸ್ವಲ್ಪ ಎತ್ತರದಲ್ಲಿದ್ದ ಮಸೀದಿಯಿಂದ ಮಾತಿನ ಗುಜುಗುಜು ಸದ್ದು ಅಸ್ಪಷ್ಟವಾಗಿ ಕೇಳುತಿತ್ತು. 

ಹಾಜಿ ಮುರಾದ್ ಬಂದೂಕನ್ನು ಹಿಡಿದು, ರಿಕಾಪಿನ ಮೇಲೆ ಕಾಲಿಟ್ಟು, ಸದ್ದಿಲ್ಲದೆ ಚುರುಕಾಗಿ ಹಾರಿ ಕುದುರೆ ಬೆನ್ನ ಮೇಲಿನ ತಡಿಯ ಮೆತ್ತೆಯ ಮೇಲೆ ಕುಳಿತ. 

’ದೇವರು ಒಳ್ಳೆಯದು ಮಾಡಲಿ!’ ಎಂದು ಆತಿಥೇಯನ್ನು ಹರಸಿ ಬಲಗಾಲಿನಲ್ಲಿ ಕುದುರೆಯ ಪಕ್ಕೆಯನ್ನು ತಿವಿದು, ಚಾವಟಿಯ ಹಿಡಿಯಿಂದ ಹುಡುಗನನ್ನು ಮೆಲ್ಲನೆ ಮುಟ್ಟಿ, ’ಈಗ ಕುದುರೆಯ ಕೈ ಬಿಡು!’ ಅನ್ನುವ ಸೂಚನೆ ನೀಡಿದ. ಏನು ಮಾಡಬೇಕೆನ್ನುವುದು ಗೊತ್ತು ಅನ್ನುವ ಹಾಗೆ ಕುದುರೆ ಚುರುಕಾಗಿ ಹೆಜ್ಜೆ ಹಾಕುತ್ತ ಮುಖ್ಯ ರಸ್ತೆಯತ್ತ ಸಾಗಿತು. ಎಲ್ದಾರ್ ಅವನ ಹಿಂದೆಯೇ ತನ್ನ ಕುದುರೆ ಏರಿ ಬಂದ. ಕುರಿಯ ಚರ್ಮದ ಕೋಟು ತೊಟ್ಟಿದ್ದ ಸಾದೋ ಕೈ ಬೀಸುತ್ತಾ ಅವರ ಹಿಂದೆ ಓಡಿ ಬಂದ. ಓಡುವಾಗ ಕಿರು ದಾರಿಯ ಆ ಪಕ್ಕಕ್ಕೆ ಒಮ್ಮೆ ಈ ಪಕ್ಕಕ್ಕೆ ಒಮ್ಮೆ ದಾಟುತಿದ್ದ. ಹಳ್ಳಿ ಮುಗಿದು ಮುಖ್ಯರಸ್ತೆಗೆ ಸೇರುವ ಎಡೆಯಲ್ಲಿ ಮೊದಲು ಒಂದು ಅದರ ಹಿಂದೆ ಇನ್ನೊಂದು ನೆರಳು ರಸ್ತೆಗೆ ಬಂದವು. 

’ನಿಲ್ಲಿ! ಯಾರದು? ನಿಲ್ಲಿ!’ ಅಂದಿತು ಒಂದು ದನಿ. ಹಲವು ಜನ ರಸ್ತೆಗೆ ಅಡ್ಡವಾಗಿ ನಿಂತಿದ್ದರು. 

ಹಾಜಿ ಮುರಾದ್ ನಿಲ್ಲುವ ಬದಲಾಗಿ ಸೊಂಟದಿಂದ ಪಿಸ್ತೂಲು ತೆಗೆದು ಗುರಿ ಹಿಡಿದ. ಕುದುರೆಯ ವೇಗ ಹೆಚ್ಚಿಸಿ ರಸ್ತೆಗೆ ಅಡ್ಡವಾಗಿ ನಿಂತಿದ್ದ ಜನರ ಗುಂಪಿನತ್ತ ನಾಗಾಲೋಟದಲ್ಲಿ ಸಾಗಿದ. ಜನ ಪಕ್ಕಕ್ಕೆ ಸರಿದು ದಾರಿ ಮಾಡಿಕೊಟ್ಟರು. ಹಾಜಿ ಮುರಾದ್ ಹಿಂದಿರುಗಿ ನೋಡದೆ ಅದೇ ವೇಗದಲ್ಲಿ ಮುಂದೆ ಸಾಗಿದ. ಅವನ ಹಿಂದೆಯೇ ಎಲ್ದಾರ್ ಕುದುರೆಯನ್ನು ಕುಕ್ಕುಲೋಟದಲ್ಲಿ ಓಡಿಸಿಕೊಂಡು ಬಂದ. ಅವರ ಬೆನ್ನ ಹಿಂದಿನಿಂದ ಹಾರಿಸಿದ ಎರಡು ಗುಂಡು ಅವರನ್ನು ತಾಗದೆ ಸಿಳ್ಳೆ ಹಾಕಿಕೊಂಡು ಹಾರಿ ಹೋದವು. ಹಾಜಿ ಮುರಾದ್. ಅದೇ ವೇಗದಲ್ಲಿ ಸುಮಾರು ಮುನ್ನೂರು ಗಜ ಸಾಗಿ, ಒಂದಿಷ್ಟು ಏದುಸಿರು ಬಿಡುತಿದ್ದ ಕುದುರೆಯನ್ನು ನಿಲ್ಲಿಸಿ ಕಿವಿಗೊಟ್ಟು ಸದ್ದು ಆಲಿಸಿದ. 

ಮುಂದೆ ಇದ್ದ ತಗ್ಗಿನಲ್ಲಿ ಜೋರಾಗಿ ಹರಿಯುತಿರುವ ನೀರಿನ ಕಲಕಲ ಸದ್ದು ಕೇಳುತಿತ್ತು. ಬೆನ್ನ ಹಿಂದೆ ಔಲ್‌ನ ಕೋಳಿಗಳು ಒಂದಕ್ಕಿನ್ನೊಂದು ಉತ್ತರವಾಗಿ ಕೂಗಿದ್ದು ಕೇಳಿಸಿತು. ಅವನು ಸಾಗುತಿದ್ದ ದಾರಿಗಿಂತ ಸ್ವಲ್ಪ ಮೇಲಿನ ಭಾಗದಲ್ಲಿ ಬರುತ್ತಿರುವ ಕುದುರೆಗಳ ಗೊರಸಿನ ಸದ್ದು ಹತ್ತಿರವಾಗುತಿದ್ದವು. ಜನರ ದನಿ ಕೇಳಿತು. ಹಾಜಿ ಮುರಾದ್ ಕುದುರೆಯನ್ನು ಮೆಲ್ಲನೆ ತಟ್ಟಿ ಸಮವೇಗದಲ್ಲಿ ಮುಂದೆ ಸಾಗಿದ. 

ಅವನ ಹಿಂದೆ ಇದ್ದವರು ನಾಗಾಲೋಟದಲ್ಲಿ ಬಂದು ಅವನನ್ನು ಹಿಂದಿಕ್ಕಿದರು. ಸುಮಾರು ಇಪ್ಪತ್ತು ಸವಾರರಿದ್ದರು. ಎಲ್ಲರೂ ಅದೇ ಔಲ್ನವರು. ಹಾಜಿ ಮುರಾದ್‍ನನ್ನು ತಡೆಯಬೇಕು ಅಥವಾ ತಡಯಲು ಪ್ರಯತ್ನಪಟ್ಟೆವು ಎಂದು ತೋರಿಸಿಕೊಳ್ಳಬೇಕು, ಒಟ್ಟಿನಲ್ಲಿ ಶಮೀಲನ ಆಜ್ಞೆಯನ್ನು ಪಾಲಿಸಿದೆವು ಎಂದಾಗಬೇಕು ಅನ್ನುವ ತೀರ್ಮಾನ ಮಾಡಿದ್ದರು. ಆ ಸವಾರರು ಕತ್ತಲಿನಲ್ಲೂ ಕಣ್ಣಿಗೆ ಬೀಳುವಷ್ಟು ಹತ್ತಿರಕ್ಕೆ ಬಂದಿದ್ದರು. ಹಾಜಿ ಮುರಾದ್ ಕುದುರೆ ನಿಲ್ಲಿಸಿದ. ಲಗಾಮನ್ನು ಕೈ ಬಿಟ್ಟ. ಎಡಗೈಯಲ್ಲಿ ತನ್ನ ಬಂದೂಕಿನ ಚೀಲದ ಗುಂಡಿಯನ್ನು ಬಿಚ್ಚಿ ಬಲಗೈಯಲ್ಲಿ ಬಂದೂಕು ಹೊರ ತೆಗೆದ. ಎಲ್ದಾರ್ ಕೂಡ ಹಾಗೇ ಮಾಡಿದ. 

’ಏನು ಬೇಕು ನಿಮಗೆ? ನನ್ನ ಹಿಡಿಯಬೇಕಾ? ಬನ್ನಿ, ಹಿಡಿಯಿರಿ!’ ಎಂದು ಜೋರಾಗಿ ಹೇಳುತ್ತ ಬಂದೂಕು ಮೇಲೆತ್ತಿದ. ಔಲ್‌ನ ಜನ ನಿಂತರು. ಕೈಯಲ್ಲಿ ಬಂದೂಕು ಹಾಗೇ ಅವರತ್ತ ಗುರಿ ಹಿಡಿದೇ ಕುದುರೆಯನ್ನು ಕೊರಕಲಿಗೆ ಇಳಿಸಿದ. ಹಳ್ಳಿಯಿಂದ ಬಂದಿದ್ದ ಸವಾರರು ಹಿಂಬಾಲಿಸಿದರಾದರೂ ಅವನ ಹತ್ತಿರಕ್ಕೆ ಹೋಗಲಿಲ್ಲ. ಹಾಜಿ ಮುರಾದ್ ಕೊರಕಲಿನ ಮತ್ತೊಂದು ಬದಿಗೆ ತಲುಪಿದಮೇಲೆ ಇನ್ನೊಂದು ಬದಿಯಲ್ಲಿದ್ದ ಜನ, ‘ನಮ್ಮ ಮಾತು ಕೇಳು!’ ಎಂದು ಅವನಿಗೆ ಕೇಳಿಸುವಷ್ಟು ಗಟ್ಟಿಯಾಗಿ ಕಿರುಚಿ ಹೇಳಿದರು. ಅದಕ್ಕೆ ಉತ್ತರವಾಗಿ ಹಾಜಿ ಮುರಾದ್ ಒಂದು ಗುಂಡು ಹಾರಿಸಿ ಕುದುರೆಯನ್ನು ದೌಡಾಯಿಸಿದ. ಅವನು ಕುದುರೆಯ ಲಗಾಮು ಎಳೆದು ನಿಲ್ಲಿಸಿದಾಗ ಹಿಂಬಾಲಿಸಿ ಬಂದವರ ಸದ್ದಿರಲಿಲ್ಲ, ಔಲ್‌ನ ಕೋಳಿಗಳ ಕೂಗು ಕೇಳಿಸುತಿರಲಿಲ್ಲ, ಕಾಡಿನ ತೊರೆಯ ಮರ್ಮರ ಮಾತ್ರ ಸ್ಪಷ್ಟವಾಗಿ ಕೇಳುತಿತ್ತು. ಆಗೀಗ ಯಾವುದಾದರೂ ಗೂಬೆಯ ಕೂಗಿದ್ದು ಕೇಳುತಿತ್ತು. ಕಪ್ಪು ಗೋಡೆಯಂಥ ಕಾಡು ಕೈಚಾಚಿದರೆ ಸಿಗುವಷ್ಟು ಸಮೀಪದಲ್ಲಿತ್ತು. ಈ ಕಾಡಿನಲ್ಲೇ ಅವನ ಮುರೀದ್‌ಗಳು ಕಾಯುತಿದ್ದರು. ಆ ಜಾಗದ ಸಮೀಪಕ್ಕೆ ಹೋದ ತಕ್ಷಣ ಹಾಜಿ ಮುರಾದ್ ತಡೆದು ನಿಂತ. ದೊಡ್ಡದಾಗಿ ಉಸಿರೆಳೆದುಕೊಂಡು ಸಿಳ್ಳೆ ಹಾಕಿದ. ಮೌನವಾಗಿ ನಿಂತು ಕಾದ. ಮರು ನಿಮಿಷವೇ ಅವನ ಸಿಳ್ಳೆಗೆ ಉತ್ತರವಾಗಿ ಕಾಡಿನೊಳಗಿಂದ ಇನ್ನೊಂದು ಸಿಳ್ಳೆ ಕೇಳಿಸಿತು. ಹಾಜಿ ಮುರಾದ್ ರಸ್ತೆಯನ್ನು ಬಿಟ್ಟು ಕಾಡಿಗೆ ಇಳಿದ. ಸುಮಾರು ನೂರು ಹೆಜ್ಜೆ ಹೋಗುವಷ್ಟರಲ್ಲಿ ಗಿಡದ ಬೊಡ್ಡೆಗಳ ಮಧ್ಯೆ ಸಣ್ಣದಾಗಿ ಬೆಂಕಿ ಹಾಕಿಕೊಂಡು ಸುತ್ತಲೂ ಕೂತಿದ್ದವರ ನೆರಳು ಕಂಡವು. ಕೆಲವರು ಅರ್ಧ ಬೆಳಕಿನಲ್ಲಿ ಅರ್ಧ ಕತ್ತಲಿನಲ್ಲಿ ಇದ್ದರು. ಗಾಯಗೊಂಡಿದ್ದರೂ ಜೀನು ಹೊತಿದ್ದ ಕುದುರೆಯೊಂದಿತ್ತು. ನಾಲ್ಕು ಜನ ಬೆಂಕಿಯ ಹತ್ತಿರ ಕೂತಿದ್ದರು.  

ಅವರಲ್ಲೊಬ್ಬ ಎದ್ದು ಬಂದು ಹಾಜಿ ಮುರಾದ್‌ನ ಕುದುರೆಯ ಲಗಾಮನ್ನೂ ರಿಕಾಪನ್ನೂ ಹಿಡಿದುಕೊಂಡ. ಅವನು ಹಾಜಿ ಮುರಾದ್‌ಗೆ ಸಂಬಂಧದ ವರಸೆಯಲ್ಲಿ ತಮ್ಮನಾಗಬೇಕು. ಹಾಜಿ ಮುರಾದ್‌ನ ಮನೆಯ ವ್ಯವಹಾರಗಳನ್ನು ಅವನ ಪರವಾಗಿ ನೋಡಿಕೊಳ್ಳುತಿದ್ದ. ಅವರ್ ಖಾನೇಫಿ ಅವನ ಹೆಸರು.

ಕುದುರೆಯಿಂದಿಳಿಯುತಿದ್ದ ಹಾಜಿ ಮುರಾದ್, ’ಬೆಂಕಿ ಆರಿಸಿ,’ ಅಂದ.

ಅಲ್ಲಿದ್ದವರು ಬೆಂಕಿಗೆ ಹಾಕಿದ್ದ ಮರದ ತುಂಡುಗಳನ್ನು ಚದುರಿಸಿ, ಉರಿಯುತಿದ್ದ ಕೊಂಬೆಗಳನ್ನು ಕಾಲಲ್ಲಿ ತುಳಿದು ನಂದಿಸಿದರು.

’ಬಾತಾ ಇಲ್ಲಿಗೆ ಬಂದಿದ್ದನಾ?’ ನೆಲದ ಮೇಲೆ ಹಾಸಿದ್ದ ಬುರ್ಕಾದತ್ತ ಹೆಜ್ಜೆ ಹಾಕುತ್ತ ಹಾಜಿ ಮುರಾದ್ ಕೇಳಿದ. 

’ಬಂದಿದ್ದ. ಖಾನ್ ಮಹೋಮ ಜೊತೆಗೆ ಹೋಗಿ ಬಹಳ ಹೊತ್ತಾಯಿತು.’

’ಯಾವ ಕಡೆಗೆ ಹೋದ?’

’ಅತ್ತ ಕಡೆಗೆ,’ ಅನ್ನುತ್ತ ಖಾನೇಫಿಯು ಹಾಜಿ ಮುರಾದ್ ಬಂದಿದ್ದ ದಿಕ್ಕಿನ ವಿರುದ್ಧ ದಿಕ್ಕು ತೋರಿಸಿದ.

’ಸರಿ,’ ಅನ್ನುತ್ತ ಹಾಜಿ ಮುರಾದ್ ಬಂದೂಕು ಲೋಡ್ ಮಾಡುವುದಕ್ಕೆ ಶುರು ಮಾಡಿದ. 

’ನಾವು ಹುಷಾರಾಗಿರಬೇಕು. ನನ್ನ ಬೆನ್ನು ಹತ್ತಿ ಬರುತಿದ್ದಾರೆ,’ ಬೆಂಕಿ ಆರಿಸುತಿದ್ದವನಿಗೆ ಹಾಜಿ ಮುರಾದ್ ಹೇಳಿದ. 

ಅವನೊಬ್ಬ ಚೆಚೆನ್, ಅವನ ಹೆಸರು ಗಮ್ಝಾಲೊ. ಗಮ್ಜಾಲೋ ಬುರ್ಕಾದ ಹತ್ತಿರ ಬರುತ್ತ ಅದರ ಮೇಲಿ ಬಟ್ಟೆಯಲ್ಲಿ ಸುತ್ತಿಟ್ಟಿದ್ದ ಬಂದೂಕು ಎತ್ತಿಕೊಂಡ. ಒಂದೂ ಮಾತಾಡದೆ ಹಾಜಿ ಮುರಾದ್ ಬಂದಿದ್ದ ದಿಕ್ಕಿನತ್ತ ಹೆಜ್ಜೆ ಹಾಕಿದ. 

ಕುದುರೆಯಿಂದಿಳಿದಿದ್ದ ಎಲ್ದಾರ್ ಹಾಜಿ ಮುರಾದ್‌ನ ಕುದುರೆಯನ್ನುಹಿಡಿದುಕೊಂಡ. ತನ್ನ ಕುದುರೆಯನ್ನೂ ಅವನ ಕುದುರೆಯನ್ನೂ ಪಕ್ಕ ಪಕ್ಕದ ಎರಡು ಮರಗಳಿಗೆ ಕಟ್ಟಿದ. ಆಮೇಲೆ ಗಮ್ಝಾಲೋನ ಹಾಗೆಯೇ ಬಂದೂಕು ಹೆಗಲಿಗೇರಿಸಿ ಆ ಬ್ಯಾಣದ ಇನ್ನೊಂದು ದಿಕ್ಕಿಗೆ ಹೋದ. ಬೆಂಕಿಯನ್ನು ಆರಿಸಿದ್ದರು. ಕಾಡು ಈಗ ಮೊದಲಿನಷ್ಟು ಕಪ್ಪಾಗಿ ಕಾಣುತಿರಲಿಲ್ಲ. ಆಕಾಶದಲ್ಲಿ ನಕ್ಷತ್ರಗಳು ಮಸುಕಾಗಿ ಮಿನುಗುತಿದ್ದವು. 

ಹಾಜಿ ಮುರಾದ್ ತಲೆ ಎತ್ತಿ ನೋಡಿ, ಏಳು ಅಕ್ಕತಂಗಿಯರ ನಕ್ಷತ್ರಪುಂಜ ಆಗಲೇ ಮಧ್ಯಾಕಾಶಕ್ಕೆ ಬಂದಿರುವುದನ್ನು ಕಂಡು ಮಧ್ಯ ರಾತ್ರಿ ದಾಟಿ ಬಹಳ ಹೊತ್ತಾಗಿರಬೇಕು ಎಂದು ಊಹೆ ಮಾಡಿದ. ರಾತ್ರಿಯ ಪ್ರಾರ್ಥನೆಯ ಹೊತ್ತು ಮೀರಿ ಹೋಗಿದೆ ಅನ್ನುವುದು ತಿಳಿಯಿತು. ನೀರಿನ ಎವರ್ ಹೂಜಿ ಕೊಡುವಂತೆ ಖಾನೇಫಿಯನ್ನು ಕೇಳಿದ. (ಅವರು ತಮ್ಮ ಸರಂಜಾಮುಗಳ ಜೊತೆಗೆ ನೀರಿನ ಹೂಜಿ ಹೊತ್ತು ಹೋಗುತಿದ್ದರು.) ತನ್ನ ಬರ್ಕಾ ಧರಿಸಿ ನೀರಿನ ಬಳಿಗೆ ಹೋದ. 

ಹಾಜಿ ಮುರಾದನು ಶೂಗಳನ್ನು ಕಳಚಿ, ಕೈ ಕಾಲು ತೊಳೆದುಕೊಂಡು, ಬುರ್ಕಾದ ಮೇಲೆ ಮೊಳಕಾಲೂರಿ ಕುಳಿತ, ಎರಡೂ ಕೈ ಬೆರಳಲ್ಲಿ ಕಿವಿಗಳನ್ನು ಮುಟ್ಟಿ, ಕಣ್ಣು ಮುಚ್ಚಿಕೊಂಡು, ಮೆಕ್ಕಾ ಇರುವ ದಿಕ್ಕಿಗೆ ತಲೆಯನ್ನು ಹೊರಳಿಸಿ ಪ್ರಾರ್ಥನೆ ಹೇಳಿದ

ಪ್ರಾರ್ಥನೆ ಮುಗಿಸಿ, ಕುದುರೆಯ ಜೀನು, ಸಾಮಗ್ರಿಗಳ ಚೀಲ ಇರಿಸಿದಲ್ಲಿಗೆ ಹೋಗಿ, ಬುರ್ಕಾದ ಮೇಲೆ ಕುಳಿತು, ಎರಡೂ ಮೊಳಕಾಲ ಮೇಲೆ ಅಂಗೈಯೂರಿ ಬೊಗಸೆಯಲ್ಲಿ ಮುಖವಿರಿಸಿ ಆಳವಾದ ಯೋಚನೆಯಲ್ಲಿ ಮುಳುಗಿದ.

ಹಾಜಿ ಮುರಾದನಿಗೆ ತನ್ನ ಅದೃಷ್ಟದ ಮೇಲೆ ಅಪಾರ ವಿಶ್ವಾಸವಿತ್ತು. ಯಾವುದೇ ಕೆಲಸವನ್ನು ಕುರಿತು ಯೋಚನೆ ಮಾಡುವ ಹೊತ್ತಿನಲ್ಲೇ ತನಗೆ ಗೆಲುವು ಖಂಡಿತ ಅನ್ನುವ ವಿಶ್ವಾಸ ಅವನಿಗಿರುತಿತ್ತು. ಅದೃಷ್ಟ ಸದಾ ಅವನತ್ತ ಕಿರು ನಗೆ ಬೀರುತಿತ್ತು. ತೀರ ಕೆಲವೇ ಪ್ರಸಂಗಗಳನ್ನು ಬಿಟ್ಟರೆ ಅವನ ಮಿಲಿಟರಿ ಬದುಕಿನ ಅವಧಿಯಲ್ಲಿ ಅವನಂದುಕೊಂಡದ್ದು ನಡೆದದ್ದೇ ಹೆಚ್ಚು. ಈಗಲೂ ಹಾಗೇ ಆಗುತ್ತದೆ ಅನ್ನುವ ಭರವಸೆ ಅವನಿಗಿತ್ತು. ವಾರಾನ್ತಸೋವ್ ಸೈನ್ಯವನ್ನು ನನ್ನ ಸಹಾಯಕ್ಕೆ ಕಳಿಸುತಾನೆ, ನಾನು ಶಮೀಲ್‌ನ ಮೇಲೆ ದಂಡೆತ್ತಿ ಹೋಗುತೇನೆ, ಅವನ ಸೆರೆ ಹಿಡಿಯುತೇನೆ, ಸೇಡು ತೀರಿಸಿಕೊಳ್ಳುತೇನೆ, ರಶಿಯದ ಚಕ್ರವರ್ತಿ ನನಗೆ ಬಹುಮಾನ ಕೊಡುತಾನೆ, ನಾನು ಕೇವಲ ಅವರಿಯಾ ಪ್ರಾಂತವನ್ನಲ್ಲ ಇಡೀ ಚೆಚೆನ್ಯಾವನ್ನು ಆಳುತೇನೆ— ಇಂಥ ಯೋಚನೆ ಮಾಡುತ್ತ ನಿದ್ರೆಗೆ ಜಾರಿದ್ದ. 

ಹಾಜಿ ಮುರಾದ್ನ ಕನಸಿನಲ್ಲಿ ಅವನ ವೀರ ಯೋಧರು ಶಮಿಲ್‌ನ ಮೇಲೇರಿ ಹೋಗುತಿದ್ದರು. ಹಾಡುತ್ತಾ ಕುಣಿಯುತ್ತಾ ’ಹಾಜಿ ಮುರಾದ್‌ಗೆ ಜಯವಾಲಿ!’ ಎಂದು ಕೂಗುತಿದ್ದರು. ಶಮೀಲ್‌ನನ್ನೂ ಅವನ ಹೆಂಡಿರನ್ನೂ ಸೆರೆ ಹಿಡಿದಿದ್ದರು. ಹೆಂಗಸರು ಬಿಕ್ಕಿ ಬಿಕ್ಕಿ ಅಳುತಿದ್ದರು. 

ಎಚ್ಚರವಾಯಿತು. ಲಾ ಇಲಾಹಿ ಅನ್ನುವ ನುಡಿ, ಹಾಜಿ ಮುರಾದನಿಗೆ ಜಯವಾಗಲಿ ಅನ್ನುವ ಘೋಷಣೆ, ಹೆಂಗಸರ ರೋದನ, ನರಿಗಳ ಊಳು ಅವನನ್ನು ಎಬ್ಬಿಸಿದವು. ಹಾಜಿ ಮುರಾದ್ ತಲೆ ಎತ್ತಿ ಆಕಾಶ ನೋಡಿದ. ಮರದ ಕೊಂಬೆಗಳ ನಡುವಿನ ಅವಕಾಶದಲ್ಲಿ ಕಾಣುತಿದ್ದ ಆಕಾಶ ಅಗಲೇ ಪೂರ್ವದ ಬೆಳಕನ್ನು ಪಡೆಯುತಿತ್ತು. ತನ್ನಿಂದ ಸ್ವಲ್ಪ ದೂರದಲ್ಲಿ ಕೂತಿದ್ದ ಮುರೀದ್‌ನನ್ನು ಖಾನ್ ಮಹೋಮನ ಬಗ್ಗೆ ವಿಚಾರಿಸಿದ. ಖಾನ್ ಮಹೋಮ ಇನ್ನೂ ಬಂದಿಲ್ಲವೆಂಬುದನ್ನು ಕೇಳಿ ಹಾಜಿ ಮುರಾದ್ ಮತ್ತೆ ತಲೆ ಬಾಗಿಸಿ ತಟ್ಟನೆ ನಿದ್ರೆಗೆ ಜಾರಿದ. 

ಕೆಲಸವನ್ನು ಯಶಸ್ವಿಯಾಗಿ ಮುಗಿಸಿ ಬಾತಾನೊಡನೆ ಬಾಪಸು ಬಂದಿದ್ದ ಖಾನ್ ಮಹೋಮನ ಖುಷಿಯ ದನಿ ಕೇಳಿ ಎಚ್ಚರಗೊಂಡ. ಖಾನ್ ಮಹೋಮ ಬಂದವನೇ ಹಾಜಿ ಮುರಾದನ ಪಕ್ಕದಲ್ಲಿ ಕುಳಿತ. ಸೈನಿಕರನ್ನು ಹೇಗೆ ಭೇಟಿಯಾದೆ, ಅವರು ಹೇಗೆ ನೇರವಾಗಿ ಪ್ರಿನ್ಸ್‌ನ ಹತ್ತಿರ ಕರಕೊಂಡು ಹೋದರು ಅನ್ನುವುದನ್ನು ಹೇಳಿದ. ಪ್ರಿನ್ಸ್ ಖುಷಿಯಾದ, ಮಾರನೆಯ ಬೆಳಿಗ್ಗೆ ಮಿಚಿಕ್‌ನ ಆಚೆ ಶಾಲಿನ್ ಬ್ಯಾಣದಲ್ಲಿ ರಶಿಯನ್ನರು ಸೌದೆ ಕಡಿಯಲು ಬಂದಾಗ ತಾನು ಹಾಜಿ ಮುರಾದನನ್ನು ಭೇಟಿಯಾಗುವುದಾಗಿ ಮಾತು ಕೊಟ್ಟ ಎಂದು ಹೇಳಿದ. ಬಾತಾ ಜೊತೆಗಾರನ ಮಾತನ್ನು ಆಗಾಗ ತಡೆಯುತ್ತಾ ತಾನು ಗಮನಿಸಿದ ವಿವರಗಳನ್ನು ಹೇಳುತಿದ್ದ. 

ತಾನು ರಶಿಯನ್ನರೊಡನೆ ಸೇರುವುದಾಗಿ ಹೇಳಿ ಕಳುಹಿಸಿದ ಪ್ರಸ್ತಾಪಕ್ಕೆ ವಾರಾನ್ತಸೋವ್ ನಿರ್ದಿಷ್ಟವಾಗಿ ಯಾವ ಉತ್ತರ ಕೊಟ್ಟ ಎಂಬುದನ್ನು ಹಾಜಿ ಮುರಾದ್ ತಿಳಿಯಲು ಬಯಸಿದ. ಹಾಜಿ ಮುರಾದ್‌ನನ್ನು ಅತಿಥಿಯಾಗಿ ಸ್ವಾಗತಿಸುವುದಾಗಿಯೂ ಅವನಿಗೆ ಯಾವ ತೊಂದರೆಯೂ ಆಗುವುದಿಲ್ಲವೆಂದೂ ಪ್ರಿನ್ಸ್ ವಾಗ್ದಾನ ಮಾಡಿದ ಎಂದು ಖಾನ್ ಮಹೋಮ, ಬಾತಾ ಇಬ್ಬರೂ ಹೇಳಿದರು. ಆಮೇಲೆ ಹಾಜಿ ಮುರಾದ್ ರಸ್ತೆಯ ಬಗ್ಗೆ ಕೇಳಿದ. ರಸ್ತೆ ಚೆನ್ನಾಗಿ ಗೊತ್ತಿದೆ, ಹಾಜಿ ಮುರಾದ್‌ನನ್ನು ನೇರವಾಗಿ ಪ್ರಿನ್ಸ್ ಬಳಿಗೆ ಕರೆದುಕೊಂಡು ಹೋಗುತ್ತೇನೆ ಎಂದ ಖಾನ್ ಮಹೋಮ. ಹಾಜಿ ಮುರಾದ್ ದುಡ್ಡು ತೆಗೆದು ಬಾತಾನಿಗೆ ಕೊಡುತ್ತೇನೆಂದು ಹೇಳಿದ್ದ ಮೂರು ರೂಬಲ್‌ಗಳನ್ನು ಕೊಟ್ಟ. ಬಂಗಾರದ ಹಿಡಿಕೆಗಳಿರುವ ತನ್ನ ಆಯುಧಗಳನ್ನೂ ತಲೆಯ ರುಮಾಲನ್ನೂ ಚೀಲದಿಂದ ತೆಗೆಯಬೇಕು, ರಶಿಯನ್ನರ ಬಳಿಗೆ ಹೋಗುವಾಗ ಎಲ್ಲರೂ ಸ್ವಚ್ಛಗೊಂಡು ಸಿದ್ಧರಾಗಬೇಕು ಎಂದು ಸೇವಕರಿಗೆ ಹೇಳಿದ. 

ಅವರು ಆಯುಧಗಳನ್ನು ಬೆಳಗಿ ಕುದುರೆಗಳಿಗೆ ಜೀನು ತೊಡಿಸುತ್ತಿರುವಾಗ ನಕ್ಷತ್ರಗಳು ಮರೆಯಾದವು, ಬೆಳಕಾಯಿತು, ಬೆಳಗಿನ ತಂಗಾಳಿ ಸುಳಿಯಿತು.

ಟಿಪ್ಪಣಿಗಳು

  • ಸಾದೋ-ಹಾಜಿ ಮುರಾದ್ ಉಳಿದುಕೊಂಡಿದ್ದ ಮನೆಯ ಯಜಮಾನ;
  • ಎಲ್ದಾರ್-ಹಾಜಿ ಮುರಾದ್‍ನ ಮುರೀದ್
  • ಸಿರ್ಕಾಸಿಯನ್ ಕೋಟು: ಚಿತ್ರ ನೋಡಿ
  • ಅವರ್ ಖಾನೇಫಿ-ವರಸೆಯಲ್ಲಿ ಹಾಜಿ ಮುರಾದ್‍ನ ತಮ್ಮ
  • ಬಾತಾ-ಎರಡನೆಯ ಅಧ್ಯಾಯದಲ್ಲಿ ಹಾಜಿ ಮುರಾದ್‍ನ ಸಂದೇಶ ಹೊತ್ತು ಹೊರಟಿದ್ದ ವ್ಯಕ್ತಿ
  • ಬುರ್ಖಾ ಕೋಟು-ಚಿತ್ರ ನೋಡಿ
  • ಖಾನ್ ಮಹೋಮ-ಹಾಜಿ ಮುರಾದ್‍ನ ಮುರೀದ್, ಬಾತಾ ಜೊತೆಯಲ್ಲಿ ಸಂದೇಶ ಹೊತ್ತು ರಶಿಯನ್ ಪಾಳೆಯಕ್ಕೆ ಹೋದವನು
  • ಎವರ್ ಹೂಜಿ-ಚಿತ್ರ ನೋಡಿ
  • ಗಮ್ಝಾಲೊ-ಹಾಜಿ ಮುರಾದ್‍ನ ಮುರೀದರಲ್ಲಿ ಒಬ್ಬ
  • ಪ್ರಿನ್ಸ್ ವಾರಾನ್ತಸೋವ್ ರಶಿಯದ ಯಶಸ್ವೀ ಮಿಲಿಟಿ ಕಮಾಂಡರ್. ಅವನು ರಶಿಯದ ಸೇನೆಯ ಮುಖ್ಯಸ್ಥನಾಗಿದ್ದ ಕಮಾಂಡರ್ ವಾರನ್ತಸೋವ್‍ನ ಮಗ. ಹಾಜಿ ಮುರಾದ್‍ ರಶಿಯನ್ನರ ಪಕ್ಷಕ್ಕೆ ಸೇರುವುದಕ್ಕೆ ಸಹಾಯ ಮಾಡಿದವನು. ಅವನು ಹಾಜಿ ಮುರಾದ್‍ನನ್ನು ಗೌರವದಿಂದ ಸ್ವಾಗತಿಸಿ ನಂತರ ತನ್ನ ತಂದೆಯ ಎಸ್ಟೇಟ್‍ಗೆ ಕಳಿಸಿಕೊಡುತ್ತಾನೆ. 

| ಮುಂದುವರೆಯುವುದು |

‍ಲೇಖಕರು Admin

October 28, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: