ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 7
ಕೃತಿ – ಕಾಯಗುಡ್ಡ
ಲೇಖಕರು – ನಾಗಣ್ಣ ಕಿಲಾರಿ
ಪ್ರಕಾಶಕರು – ಕಾವ್ಯ ಮನೆ ಪ್ರಕಾಶನ
“ಕಾಯಗುಡ್ಡ” ನಾಗಣ್ಣ ಕಿಲಾರಿಯವರ ಚೊಚ್ಚಲು ಕಾದಂಬರಿ ಯಾಗಿದೆ. ಕಾವ್ಯ ಕ್ಷೇತ್ರದಲ್ಲಿ ಕೃಷಿ ಮಾಡಿ, ಹಲವು ಕವನ ಸಂಕಲನಗಳನ್ನು ಬರೆದು ಭರವಸೆ ಮೂಡಿಸಿದ್ದರು. ಅದರಲ್ಲೂ ಅವರ “ತಪಸ್ಸಿಗಿಳಿದ ಮಳೆ” ಕವನ ಸಂಕಲನ ಕಾವ್ಯಾಸಕ್ತರಿಗೆ ಖುಷಿ ಕೊಟ್ಟ ಕೃತಿಯಾಗಿದೆ. ಕಿಲಾರಿಯವರ ಮೊದಲ ಪ್ರಯತ್ನ ಕಾಯಗುಡ್ಡ ಕಾದಂಬರಿಯ ವಸ್ತು ಮನುಷ್ಯ ಮತ್ತು ಪ್ರಕೃತಿಯ ನಡುವಿನ ಅನುಸಂಧಾನವಾಗಿದೆ.ಈ ಜಗದೊಳಗೆ ಎಲ್ಲವೂ ಮುಖ್ಯ ಎಂಬಂತೆ, ಸೂಕ್ಷ್ಮಗ್ರಾಹಿಯಾಗಿ ಕಾಡಿನ ಪರಿಸರವನ್ನು ಒಬ್ಬ ಬಾಲಕನ ಮೂಲಕ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗುತ್ತಾರೆ.
ಮಂಜು ಅಥವಾ ಮಂಜುನಾಥ ಎಂಬ ಬಾಲಕ ಬೆಟ್ಟಗುಡ್ಡಗಳಲ್ಲಿ ಅಲೆಯುತ್ತ, ಕಾಡಿನ ಪರಿಸರದಲ್ಲಿ ಮುಕ್ತವಾಗಿ, ಮನಸೋ ಇಚ್ಛೆ ಅಜ್ಜನೊಂದಿಗೆ ತಿರುಗುತ್ತ, ಅಲ್ಲಿನ ಹಣ್ಣು ಕಾಯಿ, ಗಿಡಮರಗಳು, ಹಳ್ಳಕೊಳ್ಳಗಳು, ಅನೇಕ ಜೀವ ಜಂತುಗಳನ್ನು ನೈಜವಾಗಿ ಕಂಡು ಅರಿಯುವ ಹಂಬಲ ಆತನದು. ಅದುವೇ ಅವನಿಗೆ ಪಠ್ಯ ಮತ್ತು ಅರಿವು ವಿಸ್ತರಿಸುವ ತಾಣ ಕೂಡ ಆಗಿತ್ತು. ಆದರೆ ಅವರ ತಂದೆ ತಾಯಿಯ ಬಯಕೆ ಭಿನ್ನವಿತ್ತು. ಮಗ ಶಾಲೆಗೆ ಹೋಗಿ ಅಕ್ಷರ ಕಲಿತು ಉದ್ಯೋಗ ಮಾಡಲಿ, ಕಾಡು ಮೇಡು ಸುತ್ತುತ್ತ ಕುರಿದೊಡ್ಡೆಯಲ್ಲಿ ಬದುಕುವ ಕಾಡು ಜೀವನ ಅವರಿಗೆ ಸಹ್ಯವಿರಲಿಲ್ಲ. ಮಂಜು ಮಾತ್ರ ಆಕಾಶವೆಂಬ ಚಾವಣಿಯ ಕೆಳಗೆ ಮಲಗಿ, ನಕ್ಷತ್ರಗಳನ್ನು ಎಣಿಸುತ್ತಾ ಅಜ್ಜನ ಅನುಭವದ ಕಥನಗಳನ್ನು ಕೇಳುತ್ತಾ ಜೊತೆಗೆ ನಾಯಿಯನ್ನು ಕರೆದುಕೊಂಡು ಮಲಗುವ ಸುಖ ಮತ್ತೆಲ್ಲೂ ಇಲ್ಲ ಎಂಬ ಭಾವ ಆ ಮುಗ್ಧ ಬಾಲಕನದು. ಅವನ ಪಾಲಿಗೆ ಶಾಲೆ ಎಂಬುದು ಜೈಲು, ಶಿಕ್ಷಕರು ಯಮನ ಸ್ವರೂಪಿಗಳಾಗಿ ಕಾಣುತ್ತಿದ್ದರು. ನಾಲ್ಕು ಗೋಡೆಗಳ ಮಧ್ಯೆ ಕುಳಿತು ಉಸಿರುಗಟ್ಟಿಸುವ ವಾತಾವರಣದಲ್ಲಿ, ಕುಳಿತು ಕಲಿಯುವ ತಾಳ್ಮೆ ಇರಲಿಲ್ಲ. ಹಾಗಾಗಿ ಅನೇಕ ಕುಂಟ ನೆಪಗಳನ್ನು ಮಾಡಿ ಶಾಲೆಯನ್ನು ಬಿಟ್ಟು ಕಾಡಿನೆಡೆ ಮುಖ ಮಾಡುತ್ತಿದ್ದ. ಹಟ್ಟಿಯಲ್ಲಿ ಮಲಗುವುದು, ದನಗಳನ್ನು ಅಟ್ಟಿಸಿಕೊಂಡು ಗುಡ್ಡಕ್ಕೆ ಹೋಗುವುದು ಆತನಿಗೆ ಎಲ್ಲಿಲ್ಲದ ಖುಷಿ ಕೊಡುವ ಕಾಯಕ. ಅಪ್ಪನ ಭಯದಿಂದ ಅಮ್ಮನ ಅತೀ ಪ್ರೀತಿ ಮತ್ತು ಅವಳು ಕೊಡಿಸುವ ವಸ್ತುವಿನ ಆಸೆಯ ಮೇಲಿಂದ ಆಗಾಗ ಶಾಲೆಯ ಕಡೆ ಮುಖ ಮಾಡುತ್ತಿದ್ದ.
ಇಡೀ ಕಾದಂಬರಿ ಉದ್ದಕ್ಕೂ ಕಾಡಿನ ನೈಜ ಚಿತ್ರಣ ನೀಡಿದ್ದು , ಅದರಲ್ಲೂ ಅಲ್ಲಿ ಸಿಗುವ ಹಾವು, ಕತ್ತೆ ಕಿರುಬ, ಹುಲಿ, ಚಿರತೆ ಮತ್ತು ವಿವಿಧ ರೀತಿಯ ನಾಡಿನಲ್ಲಿ ಸಿಗದೇ ಇರುವ ಹಣ್ಣುಗಳು, ಆ ಊರಲ್ಲಿ ನಡೆಯುವ ಹಬ್ಬ ಜಾತ್ರೆ, ಆಚರಣೆಗಳು ಜೊತೆಗೆ ಆಹಾರ ಪದ್ಧತಿ, ಅದನ್ನು ಸೇವಿಸುವ ವಿಧಾನ ಎಲ್ಲವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೋಗಿದ್ದಾರೆ. ಅಜ್ಜ ಮೊಮ್ಮಗನ ಅವಿನಾಭಾವ ಸಂಬಂಧ, ಆತ ಹೇಳುವ ರೋಚಕ ಕಥೆಗಳು, ಆತನ ಜೀವನ ಅನುಭವದ ಮುಂದೆ ಶಾಲೆ ಅವನಿಗೆ ನಗಣ್ಯವಾಗಿತ್ತು. ಮಂಜು ಶಾಲೆ ಬಿಟ್ಟು ಕಾಡುಮೆಡುಗಳಲ್ಲಿ ಅಲೆಯುವಾಗ ದಿನಕ್ಕೊಂದು ಗಾಯ ದಿನಕ್ಕೊಂದು ಅನಾಹುತ ಮಾಡಿಕೊಂಡು ಆಸ್ಪತ್ರೆಯ ಅಲೆದಾಟ ಕೃತಿಯ ಅಂತ್ಯದವರೆಗೂ ಕಾಣಸಿಗುತ್ತದೆ.
ಕಾದಂಬರಿಯಲ್ಲಿ ಸಂಬಂಧಗಳ ಸೂಕ್ಷ್ಮತೆಯನ್ನು ಕಟ್ಟಿಕೊಟ್ಟಿದ್ದಾರೆ. ಕೊನೆವರೆಗೂ ಜೊತೆಗಿರಬೇಕಾದವರೆ ಮೋಸ ಮಾಡುವುದು, ನಂಬಿಕೆ ಇಲ್ಲದವರು ಸಾತ್ ನೀಡುವುದು ಇಂತಹ ವಿಪರ್ಯಾಸವನ್ನು ಸೂಕ್ಷ್ಮವಾಗಿ ಹೇಳಿದ್ದಾರೆ. ಮಂಜುವಿಗೆ ತಂದೆಯ ಬಗ್ಗೆ ಅತಿಯಾದ ಭಯ ಮಾತ್ರ, ಅಲ್ಲಿ ಯಾವುದೇ ಭಾವಗಳಿಗೆ ಅವಕಾಶವಿರಲಿಲ್ಲ. ತಾಯಿಯ ಪ್ರೀತಿ, ಕಕ್ಕುಲಾತಿ ಜೊತೆಗೆ ಅಜ್ಜನ ಪ್ರೀತಿಯ ಬೆಚ್ಚಗಿನ ಅನುಭೂತಿಗಳ ನಡುವೆ ಯಾವುದು ಸರಿ ಯಾವುದು ತಪ್ಪು ಯಾವುದನ್ನು ಅನುಸರಿಸಬೇಕೆಂಬ ಹಳವಂಡದಲ್ಲಿ ಕಾದಂಬರಿ ಕೊನೆಗೊಳ್ಳುವುದು. ಶಾಲೆ ಮತ್ತು ಕಾಡು ಎರಡು ವಿರುದ್ಧ ದಿಕ್ಕುಗಳಾಗಿ ಆತನಿಗೆ ಕಾಡುತ್ತವೆ.
ಕಾದಂಬರಿಯ ವಿಶೇಷತೆ ಇರುವುದು ಕಥಾವಸ್ತುವಿಗಿಂತ ನಿರೂಪಣಾ ಶೈಲಿಯಲ್ಲಿ ಹೊಸತನ ಕಾಣಬಹುದು. ಕಲ್ಯಾಣ ಕರ್ನಾಟಕದ ಭಾಷೆ ಅದರಲ್ಲೂ ಯಾದಗಿರಿ ಸೀಮೆಯ ಆಡುನುಡಿಯ ಬಳಕೆಯಿಂದ ಬರವಣಿಗೆಯಲ್ಲಿ ಭಿನ್ನತೆ ಕಾಣಬಹುದು. ಕೆಲವು ಕಣ್ಮರೆಯಾಗುತ್ತಿರುವ ಪದಗಳನ್ನು ಹೆಕ್ಕಿ ಇಲ್ಲಿ ಪೋಣಿಸಿದ್ದಾರೆ ಉದಾ. ತತ್ರಾಣಿ, ಒಣಗಿ, ಹೊರಸು ಹೀಗೆ ಪಟ್ಟಿ ಬೆಳೆಯುತ್ತದೆ. ಹಾಗೆಂದು ಇಂಗ್ಲಿಷ್ ಪದಗಳಿಗೇನು ಕೊರತೆ ಮಾಡಿಲ್ಲ. ವಾಮಿಟ್, ಕನ್ಫರ್ಮ್ ಹೀಗೆ ಇವುಗಳ ಬಳಕೆಯಿಂದ ತುಪ್ಪದಲ್ಲಿ ಎಣ್ಣೆ ಬೆರೆಸಿದಂತಾಗಿದೆ. ಮುದ್ರಣ ದೋಷಗಳು ಸಾಕಷ್ಟು ಆಗಿದ್ದು, ಕೆಲವು ಸಾಲುಗಳ ಅರ್ಥ ಆಭಾಸವಾಗಿವೆ. “ವಾಸನಿ ಬಿದ್ದಿತ್ತು ” ಅದು ವಾಸನೆ ಹಬ್ಬಿತ್ತು ಎಂದಾಗ ಬೇಕಿತ್ತು. ಇನ್ನು ಯಾದಗಿರಿ ಸೀಮೆಯಲ್ಲಿ ‘ಹ’ಕಾರ ‘ಅ’ ಕಾರದಲ್ಲಿ ವ್ಯತ್ಯಾಸವಿಲ್ಲ. ಉದಾ. ಹುಸುಕು( ಉಸುಕು), ಇಡಿದು( ಹಿಡಿದು ), ಹಗಸಿ( ಅಗಸಿ ), ಇಟ್ಟು( ಹಿಟ್ಟು) ಹೀಗೆ ಆಡು ಭಾಷೆ ಮತ್ತು ಶಿಷ್ಟ ಭಾಷೆಗಳ ಕಲಸು ಮೇಲೋಗರ ಕಾಣಬಹುದು. ಜಗ್ಗನೆ ಎಂಬ ಪದ ಜಗ್ಗಿಬಾರಿ ಬಳಸಿದ್ದಾರೆ. ಒಟ್ಟಾರೆ ಭಾಷೆಯ ದುಡಿತ ಇನ್ನಷ್ಟು ಹದವಾಗಬೇಕಿತ್ತು. ಕಣ್ತಪ್ಪಿನಿಂದ ಆದ ಕೆಲವು ಮುದ್ರಣ ದೋಷಗಳನ್ನು ಗಮನಿಸಬೇಕಿತ್ತು.
109 ಪುಟಗಳ ಈ ಕಾದಂಬರಿಯು ಕೇವಲ ಕುರಿ ಕಾಯುವ ಗುಡ್ಡದ ಕಥೆಯಲ್ಲ ಬದಲಾಗಿ ಸಕಲ ಜೀವರಾಶಿಗಳನ್ನು ಪೊರೆಯುವ ಕಾಯಗುಡ್ಡ ಇದಾಗಿದೆ.ಇಡೀ ಕಾದಂಬರಿಯು ಬಾಲಕನ ನೆನಪಿನ ಮೆರವಣಿಗೆ ಹೊರಟಂತಿದೆ. ಮಂಜು ಎಂಬ ಪಾತ್ರದ ಮೂಲಕ ಕಾದಂಬರಿಕಾರನು ತನ್ನ ಬಾಲ್ಯದ ಅನುಭವವನ್ನೆ ಕಥನವಾಗಿಸಿದ್ದಾನೆ ಎಂಬ ಭಾವ ಮೂಡುವುದು. ಕಿಲಾರಿಯವರು ಈ ಮೊದಲು ಕಾವ್ಯದ ಮೂಲಕ ಗುರುತಿಸಿಕೊಂಡಿದ್ದು, ಕಾದಂಬರಿ ಕ್ಷೇತ್ರದಲ್ಲಿ ಮೊದಲ ಅಡಿ ಇಟ್ಟಿದ್ದಾರೆ. ಹಾಗಾಗಿ ಕಾವ್ಯಮಯವಾದ ಅವರ ಬರವಣಿಗೆ ಶೈಲಿಯಿಂದ ನಿರೂಪಣೆ ಸೊಗಸಾಗಿದ್ದು, ವಸ್ತುವಿನ ಹಂದರದ ದೃಷ್ಟಿಯಿಂದ ಇನ್ನಷ್ಟು ಮಾಗಬೇಕು. ಒಟ್ಟಾರೆ ಬದುಕಿನಲ್ಲಿ ಯಾವುದು ಅಮುಖ್ಯವಲ್ಲ ಎಲ್ಲವೂ ಮುಖ್ಯ ಎಂಬ ತಾತ್ಪರ್ಯ ಸಾರುತ್ತದೆ. ಕಾದಂಬರಿ ಓದುತ್ತ ಪ್ರಕೃತಿಯ ಮಧ್ಯೆ ಕಳೆದು ಹೋಗುವ ಭಾವ ಮೂಡದೆ ಇರದು. ಕಾಯಗುಡ್ಡ ಎಲ್ಲರನ್ನೂ ಕಾಯುವ ಗುಣ ಹೊಂದಿದೆ.






0 Comments