ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ?

-ಫರ್ಹಾನಾಜ್ ಮಸ್ಕಿ

ಅಪ್ಪ

ಎಲ್ಲಿಗೆ ಹೊರಟು ಹೋಗಿರುವೆ
ಅಪ್ಪ ಒಮ್ಮೆ ಎದೆಗಪ್ಪಿಕೊಳ್ಳದೇ???

ಕಡಲ ಆಳದಲಿ ಅವಿತಿಟ್ಟ
ಅಮೂಲ್ಯ ಮುತ್ತಿನಂತೆ ಪೊರೆದು,
ಅಲೆಗಳ ಅಬ್ಬರದ ಅಡಿಯಲಿ,
ಅಪ್ಪ, ಪಥ ತೋರದೇ ಪಯಣಿಸಿದ್ದೇಕೆ !!??

ಬಿರುಗಾಳಿಯ ಬಾಯಿಗೆ ರೆಕ್ಕೆ ಬಿಚ್ಚಿ
ಗರುಡನಂತೆ ರಕ್ಷಿಸಿದ ಕವಚಗಳೇಕೆ ಕಳಚಿವೆ?
ಬರಗಾಲದ ಭುವಿಗೂ ಬ್ರಹ್ಮಪುತ್ರನಾಗಿ ಹರಿದು
ಅಗಲಿ, ಬಿರುಕು ಬಿಟ್ಟ ಹೊಲದಂತೆ ಎಲ್ಲಿಗೆ ಹೊರಟೆ?

ಮೊದಲುಸಿರಿಗೆ ಜೋಗುಳ ಹಾಡಿ
ಮೊದಲ ಹೆಜ್ಜೆಗೆ ಆಸರೆಯಾಗಿ
ಮಧ್ಯದ ಪಯಣದಲಿ ಮಧ್ಯವರ್ತಿಯಾಗದೇ
ಅಪ್ಪ, ಅಂತ್ಯದ ದಡದಲಿ ಕಾಯಲಿಲ್ಲವೇಕೆ !!?

ಕಾರುಣ್ಯ ಗೀತೆಯ ಕರುಳಿಗೂ ಕರಗದ
ಕ್ರೋಧ ಕ್ರೌರ್ಯ ಮೆರೆಯುವ ಜಗದಲಿ
ಯಾರಿಗೂ ಕಾಣದೇ ಕವಲುದಾರಿ ಹಿಡಿದು
ಅಪ್ಪ , ಕಣ್ಮೆಯಾಗಿರುವುದೇಕೆ ??

ಸಮೃದ್ಧಿಯ ಸರ್ವಜ್ಞನಂತಿದ್ದು
ನಿಶೆಯಲಿ ಲೂಟಿಯಾದಂತೆ ಎಲ್ಲಿಗೆ ಹೋದೆ?
ನಿತ್ಯ ದ್ಯುತಿಯ ದೇವರು ಪ್ರತ್ಯಕ್ಷವಾದರೂ
ನೀನಿಲ್ಲದೇ, ನಾ ಅಮಾವಾಸ್ಯೆಯಂತಾದೆ!!

ಅಪ್ಪ ನೀನಿಲ್ಲದ ಬದುಕು
ವಿಧಿ ಕಸಿದುಕೊಂಡ ನಿಧಿಯಂತೆ
ದೈವವಿಲ್ಲದ ಗರ್ಭ ಗುಡಿಯಂತೆ
ನೀ ಅಗಲಿದ ಮನೆಯೂ ಅವಶೇಷದಂತೆ!!

ಮೌನದಾಚೆಯ ಮಾತುಗಳಲ್ಲಿ ಮರೆಯಾಗಿದ್ದೇಕೆ?
ಮತ್ತೇ ಮತ್ತೇ ಬಾಳು ಸಾಗಿಸುವುದಾದರೂ ಹೇಗೆ?
ನೀ ನಡೆಸಿದ ಹಾದಿಯಲ್ಲಾ ಒಂಟಿಯಾಗಿದೆ,
ಅಪ್ಪ ನೀನಿಲ್ಲದೇ ಬಾಳು ಭಾರದ ಬೆಟ್ಟವಾಲ್ಗಿದೆ!!!

‍ಲೇಖಕರು Admin

21 June, 2026

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading