
-ಮಂಜುಳ ಕಿರುಗಾವಲು
ಬಟ್ಟೆಗಳಾಯಿತು ತುಂಡ… ನಾಚಿಕೆ ಎಲ್ಲಿಂದ ಬರುತ್ತೆ’ ಕಳೆದ ತಿಂಗಳು ಪೂರ ಈ ಸಾಲನ್ನು ಇಟ್ಕೊಂಡು ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ನಲ್ಲಿ ಟ್ರೋಲ್ಗಳನ್ನು ಬಹಳಷ್ಟು ನೋಡ್ತಾ ಈ ಬಗ್ಗೆ ಬರಿಬೇಕು ಅಂದ್ಕೋತಾ ಇದ್ದೆ. ಆದ್ರೆ ಆಗಿರಲಿಲ್ಲ. ಇವತ್ಯಾಕೋ ಬರೆಯಲೇಬೇಕು ಅನ್ನಿಸ್ತು. ಹಾಗಾಗಿ ಬರ್ದೆ.
ಅಲ್ಲ ಎಲ್ಲರೂ ಹೆಣ್ಣಿನ ಬಟ್ಟೆ ಸುತ್ತಲೇ ಯಾಕೆ ಗಿರ್ಕಿ ಹೊಡ್ತೀರೋ ಅರ್ಥ ಆಗಲಿಲ್ಲ. ಒಬ್ಬ ಗಂಡಸು ತುಂಡು ಉಡುಗೆ ಹಾಕೋದನ್ನ ನೋಡಿ ಮಾತಾಡ್ತಾನೆ ಅಂದ್ರೆ ಅವನ ಚಪ್ಲ ತೀರಿಸ್ಕೋತಾನೆ ಅಂದ್ಕೋಬಹುದು. ಎಲ್ಲರು ಅಲ್ಲದಿದ್ದರು ಬಹುಪಾಲು ಗಂಡಸರು ಹೆಣ್ಣುಗಳನ್ನು ನೋಡುವ ರೀತಿಯೇ ಹಾಗಿರುತ್ತೆ. ಯಾಕೆಂದರೆ ಅವರ ದೃಷ್ಠಿಯಲ್ಲಿ ಹೆಣ್ಣಿನ ದೇಹ ‘sexual object’ ಅಷ್ಟೇ. ಅವರಿಗೆ ನಾವು ಬಟ್ಟೆ ತೊಟ್ಟರು ಒಂದೇ ತೊಡದಿದ್ದರೂ ಒಂದೇ. ನೋಡೋ ಕಣ್ಣುಗಳಿಗೆ ನಾವು ಮೈ ಪೂರ ಮುಚ್ಚಿದ್ರು ಬೆತ್ತಲಾಗಿಯೇ ಕಾಣಿಸ್ತೀವಿ. ಹಾಗಾಗಿ ನಾವು ಮೈ ಪೂರ ಮುಚ್ಚಿಕೊಳ್ಳೋದರಿಂದಾಗಲಿ. ತುಂಡು ಬಟ್ಟೆಯಾಗಲಿ ಹಾಕೊಳ್ಳೋದರಿಂದ ಏನೂ ವ್ಯತ್ಯಾಸ ಅನ್ಸಲ್ಲ ಅನ್ಸುತ್ತೆ.
ಇನ್ನು ಹೆಣ್ಣುಗಳೇ ಹೆಣ್ಣುಗಳ ಬಟ್ಟೆ ಧರಿಸುವಿಕೆಯ ಬಗ್ಗೆ ಮಾತಾಡ್ತಾರೆ ಅಂದಾಗ ಗಂಭೀರವಾಗಿ ಯೋಚಿಸಬೇಕಾಗುತ್ತೆ.
ಆಕೆ ಏನ್ ಹೇಳ್ತಾಳೆ ಮತ್ತೊಮ್ಮೆ ಕೇಳಿ ‘ಕಪಡೆ ಹೋ ಗಯೆ ಛೋಟೆ ಶರ್ಮ್ ಕಹಾ ಸೆ ಆಯೆ’ ( ಬಟ್ಟೆಯಾಯಿತು ಗಿಡ್ಡ ನಾಚಿಕೆ ಎಲ್ಲಿಂದ ಬರಬೇಕು).
ಒಬ್ಬ ಹೆಣ್ಣಾಗಿ ಆಕೆ ಯಾಕೆ ಈ ದಿಸೆಯಲ್ಲಿ ಯೋಚಿಸ್ತಾಳೆ ಅಂದ್ರೆ ಆಕೆ ಮೇಲೆ ಸಮಾಜ, ಸಾಮಾಜಿಕ ವ್ಯವಸ್ಥೆ, ಸುತ್ತಮುತ್ತಲಿನ ಪರಿಸರ ಆಕೆಯ ಮೇಲೆ ಯಾವ ರೀತಿಯ ಪ್ರಭಾವ ಬೀರಿರಬಹುದು ಅಂತ ನಾವು ಯೋಚಿಸಬೇಕಾಗುತ್ತೆ.
ಹೆಣ್ಣಿನ ಮೇಲೆ ಲೈಂಗಿಕ ಶೋಷಣೆಯಾದ್ರೆ, ರೇಪಾದ್ರೆ, ಯಾರಾದರೂ ರೇಗಿಸಿದ್ರೆ, ಚೂಡಾಯಿಸಿದ್ರೆ ಎಲ್ಲದಕ್ಕೂ ಅವಳು ಹಾಕೋ ಬಟ್ಟೆಯೇ ಕಾರಣ. ಹೆಣ್ಣು ಹಾಕೋ ಬಟ್ಟೆಯಲ್ಲಿ ಮಾನ ಮರ್ಯಾದೆ ಇದೆ ಅಂತ ಹೇಳಿದ್ದು ಯಾರು. ಹಾಗೊಂದು ವೇಳೆ ಆಕೆ ಹಾಗೆ ಹೇಳ್ತಾ ಇದ್ದಾಳೆ ಅಂದ್ರೆ ಅದು ಆಕೆ ಮಾತಾಗಿರಲು ಹೇಗೆ ಸಾಧ್ಯ.
ಇದೆಲ್ಲವನ್ನು ಮೊದಲು ಮನೆಯೊಳಗಿನ ಮತ್ತು ಹೊರಗಿನ ಪರಿಸರ ತುಂಬುತ್ತೆ. ನಾವೆಲ್ಲ ಚಿಕ್ಕವರಿದ್ದಾಗ ಅಂಗಾತ ಮಲಗ್ಬೇಡ, ಮಂಡಿ ಮೇಲೆ ಮಡಚಿ ಮಲಗ್ಬೇಡ. ಲಂಗ ಕಾಲು ತನಕ ಎಳ್ಕೋ… ಮಗ್ಗುಲಾಗಿ ಮಲಗು ಹಾಗೆ ಹೀಗೆ ಅಂತ ಹೇಳೋದೆಲ್ಲ ಹೆಣ್ಣುಗಳಿಗೆ ಮಾತ್ರ. ಗಂಡುಗಳಿಗೆ ಹೇಗಾದ್ರು ಮಲಗಲಿ, ಹೇಗಾದ್ರು ಇರಲಿ ಕೇಳೋರಿಲ್ಲ. ಷರತ್ತು, ನಿಯಮಗಳೇನಿದ್ದರು ಹೆಣ್ಣುಗಳಿಗೆ ಮಾತ್ರ. ಹಾಗೆ ಮನೆಯವರ, ಮನೆತನದ ಜೊತೆ ಅಪ್ಪ, ಅಣ್ಣ, ತಮ್ಮಂದಿರ ಮರ್ಯಾದೆಯ ಗುತ್ತಿಗೆ ತಗೊಂಡಿರೋದು ನಾವು ಹೆಣ್ಣುಗಳೇ ಕಣ್ರೀ…
ಅಲ್ನೋಡು ಅದೆಷ್ಟು ಟ್ರಾನ್ಸ್ಪರೆಂಟಾಗಿ ಬ್ಲೌಸ್ ಹಾಕಿದ್ದಾಳೆ ಬ್ರಾ ಮತ್ತು ಸ್ಟ್ರಾಪ್ ಕಾಣಿಸ್ತಿದೆ. (ಹೆಣ್ಣುಗಳು ಬ್ರಾ ಹಾಕೋದು ಯಾರಿಗೂ ತಿಳಿಯದಿರುವ ರಹಸ್ಯವೇನು ಅಲ್ಲ ಅಲ್ವಾ). ಹೇ ಅವಳು ಹಾಗೆ ಯಾವಾಗಲೂ ಸೊಂಟ ಕಾಣಿಸೋ ತರನೇ ಸೀರೆ ಉಡ್ತಾಳೆ. ಇನ್ನು ಸ್ಲಿವ್ಲೆಸ್ ಬ್ಲೌಸ್ ಹಾಕಿದ್ರೆ ನೋಡು ತೋಳುಗಳು ಕಾಣಿಸ್ಲಿ ಅಂತ. ಮಂಡಿ ಕಾಣಿಸುವಂತೆ, ತೊಡೆ ಕಾಣಿಸುವಂತೆ ಬಟ್ಟೆ ಹಾಕೊಂಡಿದ್ದಾಳೆ.
ಅಷ್ಟಕ್ಕೂ ನಮ್ಮ ನೈತಿಕತೆ ಇರೋದು ನಮ್ಮ ವಿಚಾರಗಳಲ್ಲಾ ಅಥವಾ ನಾವು ತೊಡುವ ಬಟ್ಟೆಗಳಲ್ಲಾ..? ನಮ್ಮ ಬಟ್ಟೆಗಳಲ್ಲಿ ನಮ್ಮ ಮಾನ ಮರ್ಯಾದೆ ಯಾವಾಗ ಬಂದು ಸೇರ್ಕೋತು ಗೊತ್ತಿಲ್ಲ.
ನಾವೆಲ್ಲಾ ಒಂದು ರೀತಿ ವ್ಯವಸ್ಥೆಯ ಬಲಿಪಶುಗಳು ಅಷ್ಟೇ.
ಮೌನವಾಗಿ ಎಲ್ಲವನ್ನು ಸಹಿಸ್ಕೊಂಡು ಹೋದ್ರೆ ನಾವು ಮಾನವಂತ್ರು, ಸಂಸ್ಕಾರವಂತ್ರು. ಯಾವಾಗ ಎಲ್ಲವನ್ನು ಪ್ರಶ್ನಿಸಿ ವಿರೋಧಿಸಿ ನಮ್ಮಿಚ್ಚೆಯಂತೆ ಬದುಕಿದ್ರೆ ಮಾನಗೆಟ್ಟವರು, ಸಂಸ್ಕಾರ ಇಲ್ಲದವರು. ಧ್ವನಿ ಏರಿಸಿ ಮಾತಾಡಿದ್ರೆ ಜೋರು, ಗಯ್ಯಾಳಿ ಅಷ್ಟೇ. ಇದೆಲ್ಲಾ ಪಿತೃಪ್ರಧಾನ ವ್ಯವಸ್ಥೆಯ ಪಿತೂರಿಗಳು. ಹೆಣ್ಣುಗಳ ವಿರುದ್ಧ ಹೆಣ್ಣುಗಳನ್ನೇ ಅಸ್ತ್ರವಾಗಿಸುವ ತಂತ್ರಗಾರಿಕೆಗಳು. ಹೆಣ್ಣುಗಳನ್ನು ಹಿಡಿತದಲ್ಲಿ ಇಟ್ಟುಕೊಳ್ಳುವ ಹುನ್ನಾರ.
ವ್ಯವಸ್ಥೆ ಬದಲಾಗ್ತಿದೆ. ಜನರ ಜೀವನ ಶೈಲಿ ಬದಲಾಗ್ತಿದೆ. ಹೆಣ್ಣು ಮಕ್ಕಳು ವಿದ್ಯಾವಂತರಾಗ್ತಾ ಇದ್ದಾರೆ. ಯಾವುದು ಸರಿ ಯಾವುದು ತಪ್ಪು. ಯಾವುದು ನಮಗೆ ಒಳಿತು, ಯಾವುದು ಕೆಡುಕು. ಯಾವುದು ನಿಯಂತ್ರಿಸುತ್ತೆ, ಯಾವುದು ಸ್ವಾತಂತ್ರ್ಯ ಎಲ್ಲವೂ ತಿಳಿದಿದೆ. ನಾವು ತೊಡುವ ಬಟ್ಟೆಯಲ್ಲಿ ನಮ್ಮ ಮಾನ, ಮರ್ಯಾದೆ, ಸಂಸ್ಕಾರ ಯಾವುದು ಇಲ್ಲ. ಸೋ ಆರಾಮಾಗಿ ನಮ್ಮಿಷ್ಟದ ಬಟ್ಟೆ ಹಾಕೊಂಡು ಆರಾಮಾಗಿರೋಣ…






0 Comments