ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 10
ಕೃತಿ –’ಮಾತಂಗಿ ದೀವಟಿಗೆ’
ಲೇಖಕರು – ಪ್ರೊ ಸಮತಾ ಬಿ. ದೇಶಮಾನೆ
ಪ್ರಕಾಶಕರು – ಶ್ರೀ ಅನ್ನಪೂರ್ಣ ಪ್ರಕಾಶನ
ಬೆಲೆ – 350 ರೂ
ಆತ್ಮಕಥನಗಳು ಸಾಧಕರ ಬದುಕನ್ನು ಬಿಚ್ಚಿಡುತ್ತಾ ಜೊತೆ ಜೊತೆಯಲಿ ಆ ಕಾಲದ ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ರಾಜಕೀಯದ ಸಮಗ್ರ ಚರಿತ್ರೆಯನ್ನು ಕಟ್ಟಿಕೊಡುತ್ತವೆ. ಹಾಗಾಗಿ ಆತ್ಮಚರಿತ್ರೆ ವೈಯಕ್ತಿಕವೂ ಹೌದು ಜೊತೆಗೆ ಸಾರ್ವತ್ರಿಕವೂ ಹೌದು. ಆತ್ಮಕಥೆ ಸಾಹಿತ್ಯ ಪ್ರಕಾರವು ವಿದೇಶಿಯರಿಂದ ನಮ್ಮವರಿಗೆ ಪರಿಚಿತವಾದರೂ ಕೂಡ, ನಂತರ ಕಾಲಘಟ್ಟದಲ್ಲಿ ಹಲವಾರು ಸಾಧಕರು ತಮ್ಮ ಬದುಕನ್ನು ಕಟ್ಟಿಕೊಡುವ ಪ್ರಯತ್ನ ಅತ್ಯಂತ ಬದ್ಧತೆಯಿಂದ ಮಾಡಿದ್ದಾರೆ. ಹಾಗಾಗಿ ಕನ್ನಡದಲ್ಲಿ ಇಂದು ನೂರಾರು ಮಹತ್ವದ ಆತ್ಮ ಚರಿತ್ರೆಗಳು ರಚನೆಯಾಗಿವೆ. ಅವುಗಳಲ್ಲಿ ದಲಿತ ಆತ್ಮ ಚರಿತ್ರೆಗಳು ಕೂಡ ತಮ್ಮದೇ ಸ್ಥಾನವನ್ನು ಪಡೆದುಕೊಂಡಿವೆ. ಕಾರಣ ದಮನಿತರ, ಶೋಷಿತರ ಜೀವನ ಕ್ರಮ ಎಲ್ಲರಿಗಿಂತ ಭಿನ್ನ. ಅವರ ಚರಿತ್ರೆಗಳಲ್ಲಿ ಕೇವಲ ಬಡತನ ಹಸಿವು ದಾರಿದ್ರ್ಯ ಮಾತ್ರವಿರದೇ, ಅವಮಾನ, ಹತಾಶೆ, ಜಿಗುಪ್ಸೆ ಎಲ್ಲವೂ ಇದ್ದು ಅದೆಲ್ಲವನ್ನು ಮೀರುವ ಪ್ರಯತ್ನವನ್ನೇ ಅವರಲ್ಲಿ ಕಾಣುತ್ತೇವೆ.
ಮರಾಠಿಯಲ್ಲಿ ದಲಿತ ಲೇಖಕರ ಆತ್ಮಕಥೆಗಳು ಹೆಚ್ಚಾಗಿ ರಚನೆಗೊಂಡಿದ್ದು, ಅವರಿಂದ ಪ್ರೇರಿತವಾಗಿ ಕನ್ನಡದಲ್ಲೂ ಕೂಡ ಅನೇಕ ದಲಿತ ಸಾಹಿತಿಗಳು ತಮ್ಮ ಬದುಕನ್ನು ಅಕ್ಷರ ರೂಪದಲ್ಲಿ ಕಟ್ಟಿಕೊಟ್ಟಿದ್ದಾರೆ. ಕನ್ನಡದಲ್ಲಿ ಮೊದಲ ಬಾರಿಗೆ ದಲಿತ ಮಹಿಳಾ ಆತ್ಮಕಥೆಯನ್ನು ಪ್ರೊಫೆಸರ್ ಸಮತಾ ಬಿ. ದೇಶಮಾನೆ ಅವರು ಬರೆದಿದ್ದು, ಅದು ಕೇವಲ ಅವರ ವೈಯಕ್ತಿಕ ಬದುಕಿನ ಘಟನೆಗಳು ಅಷ್ಟೇ ಅಲ್ಲ, ಅದು ಇಡೀ ದೇಶಮಾನೆ ಕುಟುಂಬದ ಒಟ್ಟು ಬದುಕನ್ನು ಬಿಂಬಿಸುತ್ತದೆ. ಸಮತಾ ಅವರು ತಮ್ಮ ಹಿರಿದಾದ ಕುಟುಂಬ, ಅದನ್ನು ನಿರ್ವಹಿಸುವಲ್ಲಿ ತಂದೆ-ತಾಯಿಗಳ ಪಾತ್ರ, ಜೊತೆಯಲ್ಲಿ ಆ ಕಾಲದ ಸಮಾಜ,ಶಿಕ್ಷಣ ಪದ್ದತಿ ಕಲ್ಬುರ್ಗಿಯ ಸಾಂಸ್ಕೃತಿಕ ಚಿತ್ರಣವನ್ನು ಅತ್ಯಂತ ವಾಸ್ತವ ನೆಲೆಗಟ್ಟಿನಲ್ಲಿ ಚಿತ್ರಿಸಿದ್ದಾರೆ. ಬಾಲ್ಯದ ಬಡತನ, ಅಪ್ಪ ಎಂ. ಎಸ್. ಕೆ. ಮಿಲ್ ನಲ್ಲಿ ಕೆಲಸ ಮಾಡುತ್ತಾ ಕಮ್ಯುನಿಸ್ಟ್ ಸಿದ್ದಾಂತ ರೂಡಿಸಿಕೊಂಡಿದ್ದು, ಅಮ್ಮ ತರಕಾರಿ ಮಾರಿ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತದ್ದು, ಅಕ್ಕ ವಿಜಯಲಕ್ಷ್ಮಿ ದೇಶಮಾನೆ ವೈದ್ಯರಾಗುವಲ್ಲಿ ಪಟ್ಟ ಪರದಾಟ ಎಲ್ಲವನ್ನೂ ಸಾದ್ಯಾಂತವಾಗಿ, ಎಲ್ಲೂ ಉತ್ಪ್ರೇಕ್ಷೆ ಇಲ್ಲದೆ ಪ್ರಾಮಾಣಿಕವಾಗಿ ಬರೆದಿದ್ದಾರೆ.
ಸಮತಾ ದೇಶಮಾನೆ ಅವರದ್ದು ಎಂಟು ಮಕ್ಕಳ ದೊಡ್ಡ ಕುಟುಂಬ. ಅವರ ಅಪ್ಪ-ಅಮ್ಮ ಮಕ್ಕಳ ಅಭ್ಯುದಯವೇ ತಮ್ಮ ಗುರಿ ಎಂಬಂತೆ, ತಾವು ಅರೆ ಹೊಟ್ಟೆ ಉಂಡು ಮಕ್ಕಳನ್ನು ಪೋಷಿಸಿ ಬೆಳೆಸಿದ್ದು ಜೊತೆಗೆ ಶಿಕ್ಷಣದ ಮಹತ್ವವನ್ನು ಅರಿತು ಅದನ್ನು ಎಲ್ಲಾ ಮಕ್ಕಳಿಗೆ ಧಕ್ಕಿಸುವಲ್ಲಿ ಹಗಲಿರುಳು ಶ್ರಮಿಸಿದ್ದು ಸೋಜಿಗದ ಸಂಗತಿಯೇ ಸರಿ. ಎಂಟು ಮಕ್ಕಳು ಉನ್ನತ ಶಿಕ್ಷಣ ಪಡೆದು ಅವರಲ್ಲಿ ಆರು ಜನ ಪಿಎಚ್ಡಿ ಪೂರೈಸಿ ಗೋಲ್ಡನ್ ಬುಕ್ ಆಫ್ ವಲ್ಡ ರೆಕಾರ್ಡ್ ನಲ್ಲಿ ದಾಖಲಾದದ್ದು ಬೆರಗು ಮೂಡಿಸುವಂತಿದೆ. ಕಲಬುರ್ಗಿಯ ಕಡುಬಡತನದ ಕುಟುಂಬದ ಕುಡಿಗಳು ರಾಷ್ಟ್ರಕ್ಕೆ ಮಾದರಿಯಾಗಿ, ಅದರಲ್ಲೂ ಡಾ.ವಿಜಯಲಕ್ಷ್ಮಿ ಅವರು ಪದ್ಮಶ್ರೀ ಪ್ರಶಸ್ತಿ ಪಡೆಯುವವರೆಗಿನ ಪಯಣ ಸಾಮಾನ್ಯವಾದುದ್ದಲ್ಲ.
ಸಮತಾ ಅವರು ಕಲಬುರ್ಗಿ ಯಿಂದ ಬೆಂಗಳೂರು ವಿಶ್ವವಿದ್ಯಾಲಯದ ಸಮಾಜಶಾಸ್ತ್ರದ ಅಧ್ಯಾಪಕಿಯಾಗಿ ಬೆಳೆದು ಬಂದ ತಮ್ಮ ಬದುಕಿನ ಹಿನ್ನೋಟವನ್ನು ಹೇಳುತ್ತಾ, ಜೊತೆಗೆ ಇಡೀ ಕುಟುಂಬದ ಸಂಘರ್ಷಮಯ, ಸಂಕಟದ ಕಥೆಯನ್ನು ನೈಜವಾಗಿ ಹೇಳಿದ್ದಾರೆ. ತಾವು ಬಾಲ್ಯದಲ್ಲಿ ತರಕಾರಿ ಮಾರಿದ್ದು,ಕಟ್ಟಿಗೆ ತಂದು ಹಾಕಿದ್ದು, ಶೇಂಗಾ ಒಡೆದಿದ್ದು, ಹೀಗೆ ಇತರೆ ಕೂಲಿ ಕೆಲಸ ಮಾಡಿದ್ದು ಎಲ್ಲವನ್ನು ಯಾವುದೇ ಮುಚ್ಚು ಮರೆ ಇಲ್ಲದೆ, ಮುಜುಗರವಿಲ್ಲದೆ ಬಿಚ್ಚಿಟ್ಟಿದ್ದಾರೆ. ಬಾಲ್ಯದಲ್ಲಿ ಅವರು ಮಾಡಿರುವ ತುಂಟಾಟ, ಸರಿ-ತಪ್ಪು ಅರಿಯದೆ ಮಾಡಿರುವಂತಹ ಕೆಲಸಗಳು, ಓದುವಾಗ ತಮಾಷೆ ಅನ್ನಿಸಿದರು, ಹಸಿವು ನೀಗಿಸಿಕೊಳ್ಳಲು ಮಾಡಿದ ಹೆಣೆಗಾಟವನ್ನು ಕಂಡಾಗ ಕಣ್ಣಂಚಿನಲ್ಲಿ ಕಂಬನಿ ಮೂಡದೆ ಇರದು.
ಅವರ ಕುಟುಂಬದ ಕೇಂದ್ರಬಿಂದು ಎಂದರೆ ಅಕ್ಕ ವಿಜಯಲಕ್ಷ್ಮಿಯವರು. ಅವರು ಹುಬ್ಬಳ್ಳಿಯಲ್ಲಿ ಎಂ.ಬಿ.ಬಿ.ಎಸ್ ಓದಲು ಹೋಗಿದ್ದು ಅದಕ್ಕಾಗಿ ಅವರ ತಾಯಿ ತಾಳಿಯನ್ನೇ ತೆಗೆದುಕೊಟ್ಟು ಶುಲ್ಕ ಭರಸಿದ್ದು , ತಂದೆಗೆ ಮಗಳು ಸರ್ಜನ್ ಆಗಲೇಬೇಕೆಂಬ ಹಂಬಲ ಈ ಎಲ್ಲ ಸಂಗತಿಗಳು ಅಚ್ಚರಿ ಎನ್ನಿಸುತ್ತದೆ, ಹಾಗಯೇ ತಂದೆ ತಾಯಿಗಳ ಬಗ್ಗೆ ಮೆಚ್ಚುಗೆ ಮೂಡುತ್ತದೆ. ಹುಬ್ಬಳ್ಳಿಯ ಕಿಮ್ಸ ನಲ್ಲಿ ಅಕ್ಕ ಓದುವಾಗ ಎಪ್ರಾನ್ ಇಲ್ಲದೆ ಪರಿತಪಿಸಿದ್ದು, ಪುಸ್ತಕ ಖರೀದಿಗಾಗಿ ಪರದಾಟ, ಅವರಿಗೆ ಆರ್ಥಿಕ ಸಂಕಷ್ಟ ಎಷ್ಟೆಂದರೆ ಹಲ್ಲುಜ್ಜಲು ಪೇಸ್ಟ್ ಇಲ್ಲದೆ ಇದ್ದಲಿಯಿಂದ ಹಲ್ಲುಜ್ಜಿದ್ದು, ಬಸ್ ಪಯಣಕ್ಕೂ ಒದ್ದಾಟ ಇಂತಹ ಸಮಸ್ಯೆಗಳ ಮಧ್ಯೆ ಎಂ.ಬಿ.ಬಿ.ಎಸ್, ಎಂ.ಎಸ್ ಪೂರೈಸಿ ಕಿದ್ವಾಯಿಯ ಮೊದಲ ಮಹಿಳಾ ನಿರ್ದೇಶಕರಾಗಿದ್ದು ಸಾಧನೆ ಅಲ್ಲದೆ ಮತ್ತೇನು ಅನ್ನಲು ಸಾದ್ಯ. ಲೇಖಕಿ ಹೇಳುವಂತೆ ‘ಮುತ್ತುರತ್ನಗಳೆಲ್ಲ ಹುಟ್ಟುವುದು ಗುಡಿಸಲಿನಲ್ಲಿ, ಅಂದದ ಅರಮನೆಯಲ್ಲಲ್ಲ” ಎಂಬ ಮಾತು ಸತ್ಯ ಎನಿಸುತ್ತದೆ.
ಸಮತಾ ಅವರ ಅಣ್ಣ ಅಜಯ್ ಘೋಷ್ ಕೂಡ ಸಾಧಕನೆ. “ನಾನ್ಸೆನ್ಸ್” ಎಂದು ಬೈಸಿಕೊಂಡದ್ದಕ್ಕಾಗಿ ಇಂಗ್ಲಿಷ್ ಕಲಿತು ಮುಂದೆ ಖ್ಯಾತ ವಕೀಲರಾಗುತ್ತಾರೆ. ತಂಗಿಯರ ಸಾಧನೆಗೆ ಸಾತ್ ನೀಡುತ್ತಾರೆ. ಅಕ್ಕ ಯುಗಾಂತರಿಯು ಕುಟುಂಬಕ್ಕೆ ನೀಡಿದ ಸಾಥ್ ಕುರಿತು ಕೃತಿಯುದ್ದಕ್ಕೂ ನೆನೆಯುತ್ತಾರೆ. ಅವರೊಂದಿಗೆ ಸಮಾಜ ನಡೆದುಕೊಳ್ಳುವ ರೀತಿಯನ್ನು ಕೂಡ ಯಾವುದೇ ರಾಗ ದ್ವೇಷಗಳಿಲ್ಲದೆ ಅತ್ಯಂತ ನಿರ್ಭಾವುಕರಾಗಿ ಹೇಳುತ್ತಾರೆ. ಜೊತೆಗೆ ತಮಗೆ ಕಲಿಸಿದ ಶಿಕ್ಷಕರು, ಸಹಾಯ ಹಸ್ತ ಚಾಚಿದವರನ್ನು ಕುರಿತು ಅತ್ಯಂತ ಭಕ್ತಿ ಗೌರವದಿಂದ ನೆನೆಯುತ್ತಾರೆ.
ಕಲ್ಬುರ್ಗಿಯ 50 ವರ್ಷದ ಹಿಂದಿನ ಚಿತ್ರಣವನ್ನು, ಬಾಪೂಜಿನಗರದ ತಮ್ಮ ಸುತ್ತಲಿನ ತಳ ಸಮುದಾಯದ ಬದುಕನ್ನು, ಈ ಭಾಗದ ತರಕಾರಿ ಮತ್ತು ಹಣ್ಣುಗಳ ಪಟ್ಟಿಯನ್ನು, ಸಾಮಾಜಿಕ ಮತ್ತು ಸಾಂಸ್ಕೃತಿಕ ಚಿತ್ರಣವನ್ನು ಸಾಧ್ಯಂತವಾಗಿ ಹೇಳಿದ್ದಾರೆ.
ಸಮತಾ ಕವಿಯಿತ್ರಿ, ಸಂಶೋಧಕಿ, ಸಂಘಟಕಿ ಸಮಾಜಶಾಸ್ತ್ರಜ್ಞೆ ಮೇಲಾಗಿ ಸಹೃದಯಿಯಾಗಿ ಬೆಳೆದು ಬಂದ ಬಗೆಯನ್ನು ವಾಸ್ತವವಾಗಿ ಹೇಳಿದ್ದಾರೆ.ಬಾಲ್ಯದಲ್ಲಿ 90 ಪೈಸೆ ಕೊಟ್ಟು ಚಲನಚಿತ್ರ ನೋಡಿದ ಅನುಭವ ನಂತರ 1200 ಕೊಟ್ಟು ಬೆಂಗಳೂರಿನ ಮಲ್ಟಿಪ್ಲೆಕ್ಸ್ ನಲ್ಲಿ ಚಲನಚಿತ್ರ ನೋಡಿದ್ದನ್ನು ತೌಲನಿಕವಾಗಿ ನೆನಪಿಸಿಕೊಳ್ಳುವರು. ತಮ್ಮ ಮೊದಲ ವಿದೇಶ ಪಯಣ, ಅದರ ಸಿದ್ಧತೆ ಬಗ್ಗೆ ಮಾರ್ನಿಕವಾಗಿ ಹೇಳಿದ್ದಾರೆ.
ತಂದೆ ಬಾಬುರಾವ್ ಸ್ವಾತಂತ್ರ್ಯ ಹೋರಾಟಗಾರರಾಗಿ, ಕಮ್ಯುನಿಸ್ಟ್ ಸಿದ್ಧಾಂತವನ್ನು ಒಪ್ಪಿಕೊಂಡ ಅವರು ಶಿಕ್ಷಣದಿಂದ ಮಾತ್ರ ಬದುಕು ಬದಲಿಸಬಹುದು ಎಂದು ಅರಿತವರು. ಆದರೆ ಅನಕ್ಷರಸ್ಥ ತಾಯಿ ರತ್ನಮ್ಮ ಕೂಡ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕೆಂಬ ಪ್ರಯತ್ನದಲ್ಲಿ ಒಂದು ಹೆಜ್ಜೆ ಮುಂದಾಗಿಯೇ ಕಾಣುತ್ತಾರೆ. ಅದಕ್ಕಾಗಿ ಜೀವನಪೂರ್ತಿ ತರಕಾರಿ ಹಣ್ಣು ಮಾರುತ್ತಾ ಸಂಘರ್ಷಮಯ ಬದುಕನ್ನು ಸಾಧಿಸಿದ ಗಟ್ಟಿಗಿತ್ತಿ.
ಸಮತಾ ಅವರು ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗಿ ಏನೆಲ್ಲಾ ಸಾಧನೆ ಮಾಡಿದರು ಕೂಡ, ಎಷ್ಟೋ ಆಧುನಿಕ ಸಂಗತಿಗಳನ್ನು ಅರಿಯದೆ ಅವರಲ್ಲಿರುವ ಮುಗ್ಧತೆ ಯನ್ನು ಹಾಗೆಯೇ ಬಿಚ್ಚಿಟ್ಟಿದ್ದಾರೆ. ಉದಾಹರಣೆಗೆ ಎಳೆನೀರು ಕಾಯಿ ಎಂದು ಹಣ್ಣಿಗೆ ಹಾಕಿದ ಪ್ರಸಂಗ, ಮೊದಲ ಬಾರಿ ಬ್ಯೂಟಿ ಪಾರ್ಲರ್ ಗೆ ಹೋಗಿದ್ದು, ಡೖ ಮಾಡಿಕೊಂಡ ವಿಧಾನ ಎಲ್ಲವನ್ನು ಹಾಸ್ಯಮಯವಾಗಿ ಬಿಂದಾಸ್ ಆಗಿ ಬರೆದಿದ್ದಾರೆ. ಅವರ ಬದುಕಿನಲ್ಲಿ ಅನೇಕ ಆದರ್ಶ ಸಂದರ್ಭಗಳನ್ನು ಕಾಣುತ್ತೇವೆ. ಮದುವೆ ನಾಮಕರಣ ಎಲ್ಲವೂ ಭಿನ್ನವಾಗಿದ್ದು, ಸಾಂಪ್ರದಾಯಿಕ ಆಚರಣೆ ಇಲ್ಲದೆ ಎಲ್ಲವೂ ಸರಳವಾಗಿ ಮಾಡಿಕೊಂಡಿದ್ದು ವಿಶೇಷ ಎನಿಸುತ್ತದೆ. ಅವರ ಸಹೋದರ ಸಹೋದರಿಯರ ಹೆಸರು ಕೂಡ ಅರ್ಥಪೂರ್ಣವಾಗಿವೆ. ವಿಜಯಲಕ್ಷ್ಮಿ, ಅಜಯ್ ಘೋಶ್,ಯುಗಾಂತ್ರಿ, ಸಮತಾ, ಜಾಗೃತಿ, ನಾಗರತ್ನ ಇಂದುಮತಿ ಮತ್ತು ಜಯಶ್ರೀ ಎಲ್ಲರೂ ಹೆಸರಿಗೆ ತಕ್ಕ ಹಾಗೆ ಸಾಧನೆಗೈದಿದ್ದಾರೆ. ಕೃತಿಯಲ್ಲಿ ಅನೇಕ ಸಾಧಕರ ನುಡಿಮುತ್ತುಗಳನ್ನು ದಾಖಲಿಸಿದ್ದಾರೆ ಮತ್ತು ಪುಸ್ತಕದಲ್ಲಿ ರೇಖಾಚಿತ್ರಗಳು, ಮುಖಪುಟ ವಿನ್ಯಾಸ ಅಂದವಾಗಿ ಮೂಡಿಬಂದಿವೆ.ಈ ಆತ್ಮ ಚರಿತ್ರೆ ಚಲನಚಿತ್ರವಾಗಿ ತೆರೆ ಕಂಡಿದೆ. ಹಲವು ಭಾಷೆಗಳಿಗೆ ಅನುವಾದ ಕೂಡ ಆಗಿದೆ. ರಂಗಪ್ರಯೋಗಕ್ಕೂ ಸಿದ್ಧಗೊಂಡಿದೆ. ಪದವಿ ಪಠ್ಯಕ್ಕೂ ಆತ್ಮ ಚರಿತ್ರೆಯ ಕೆಲವು ಭಾಗಗಳನ್ನು ಅಳವಡಿಸಲಾಗಿದೆ.
ಲೇಖಕಿ ಆತ್ಮಕಥನವನ್ನು ತಾವು ಅನುಭಸಿದ ಸಂಗತಿಗಳನ್ನು ತಮ್ಮದೇ ಲಹರಿಯಲ್ಲಿ ದಾಖಲಿಸಿದ್ದಾರೆ. “ಆನು ಒಲಿದಂತೆ ಹಾಡುವೆ” ಎಂಬಂತಿದೆ ಅವರ ಬರವಣಿಗೆ. ಕಲಬುರ್ಗಿಯ ಕನ್ನಡದ ಬಳಕೆಯಿಂದ ಕೃತಿ ಇನ್ನಷ್ಟು ಗಟ್ಟಿಗೊಂಡಿದೆ. ಸ್ಲಂನಿಂದ ಸಮಾಜಶಾಸ್ತ್ರಜ್ಞೆ ಆಗುವವರೆಗಿನ ಸಮತಾ ಅವರ ಏಳು ಬೀಳುವಿನ ಪಯಣ ಸಾಮಾನ್ಯವಾದುದಲ್ಲ. ಇದು ಮಾತಂಗಿ ದೀವಟಿಗೆ ಯಲ್ಲ, ಇದೊಂದು ಜ್ಞಾನದ ದೀವಟಿಗೆ ಹಿಡಿದ ಎಂಟು ಮಕ್ಕಳ ಸಾಹಸಗಾಥೆಯಾಗಿದೆ. ಲೋಕಕ್ಕೆ ಮಾದರಿಯಾಗಿದೆ. ಕಲಬುರಗಿಯ ಕಂಪನ್ನು ನಾಡಿನ ಆಚೆ ಪಸರಿಸಿದ ದೇಶಮಾನೆ ಕುಟುಂಬಕ್ಕೆ ಎಲ್ಲ ರೀತಿಯ ಮಾನ್ಯತೆ ಲಭಿಸಿದೆ, ಮುಂದೆಯೂ ಲಭಿಸುತ್ತದೆ






0 Comments