ಡಾ. ಸತ್ಯಮಂಗಲ ಮಹಾದೇವ ಅವರು ಕಾವ್ಯ, ವಿಮರ್ಶೆ ಹಾಗೂ ಸಂಶೋಧನಾ ಕ್ಷೇತ್ರಗಳಲ್ಲಿ ಸಕ್ರಿಯರಾಗಿದ್ದು 12ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.
ಇವರ ಪ್ರಸಿದ್ಧ ಕವನ ಸಂಕಲನಗಳಾದ ‘ಯಾರ ಹಂಗಿಲ್ಲ ಬೀಸುವ ಗಾಳಿಗೆ’ ಮತ್ತು ‘ಪಂಚವರ್ಣದ ಹಂಸ’ ಕೃತಿಗಳಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸೇರಿದಂತೆ ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ.
ಕೇಂದ್ರ ಸಾಹಿತ್ಯ ಅಕಾಡೆಮಿಯ ರಾಷ್ಟ್ರೀಯ ಯುವ ಬರಹಗಾರರ ಸಮ್ಮೇಳನಗಳಲ್ಲಿ ಕನ್ನಡದ ಹಿರಿಮೆಯನ್ನು ಪಸರಿಸಿರುವ ಇವರ ಕವಿತೆಗಳು ವಿವಿಧ ವಿಶ್ವವಿದ್ಯಾಲಯಗಳ ಪದವಿ ತರಗತಿಗಳಿಗೆ ಪಠ್ಯವಾಗಿವೆ.
ಶಿಕ್ಷಕ ಪ್ರಶಸ್ತಿ ವಿಜೇತರಾದ ಇವರು ಬೆಂಗಳೂರು ನಗರ ವಿಶ್ವವಿದ್ಯಾಲಯದ ವಿವಿಧ ಶೈಕ್ಷಣಿಕ ಸಮಿತಿಗಳ ಸದಸ್ಯರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ತುಮಕೂರು ಜಿಲ್ಲೆಯವರಾಗಿದ್ದು, ಪ್ರಸ್ತುತ ಬೆಂಗಳೂರಿನ ಶೇಷಾದ್ರಿಪುರಂ ಸಂಜೆ ಪದವಿ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇನ್ನು ಮುಂದೆ ಅವಧಿಯಲ್ಲಿ ಕವಿತೆಗಳನ್ನು ಕುರಿತ ಹೊಸ ಹೊಳಗಿನ’ಬೆಳಕಿನ ಜಾಡು’ ಅಂಕಣದೊಂದಿಗೆ ಕಾಣಿಸಿಕೊಳ್ಳುತ್ತಿದ್ದಾರೆ.
ಅಂಕಣ – 1
ಕನ್ನಡ ಕಾವ್ಯವು ತನ್ನ ರತ್ನಗರ್ಭದಲ್ಲಿ ಬೆಲೆಕಟ್ಟಲಾಗದ ಜೀವಪ್ರೇಮದ ಬೆಳಕಿನ ಬೀಜಗಳನ್ನು ಹುದುಗಿಸಿಕೊಂಡಿದೆ. ನಿರಂತರ ಅಧ್ಯಯನ, ಶೋಧಕ ಬುದ್ಧಿ, ವಿಚಾರಪರತೆಯ ಕೃಷಿ ಮನೋಭಾವವಿರುವ ಸಹೃದಯನಿಗೆ, ಬೆಳಕಿನ ಬೀಜಗಳು ಮಳೆಗಾಗಿ ಕಾದ ಮಣ್ಣಿನಲ್ಲಿ ಅಡಗಿ, ಕಾಲದ ಕಾವು ಪಡೆದು ಮಳೆ ಬಂದಾಗ ತಮ್ಮೊಳಗಿನ ಜೀವ ಶಕ್ತಿಯನ್ನು ಪ್ರಕಟಿಸುವಂತೆ, ಓದುಗನ ಸ್ಮೃತಿಗೆ ತಮ್ಮ ಒಡಲಿನ ಬೆಳಕನ್ನು ದಾಟಿಸುತ್ತವೆ. ಕನ್ನಡ ಸಾಹಿತ್ಯದ ರತ್ನ ಗರ್ಭದಲ್ಲಿ ಅಡಗಿರುವ ಇಂತಹ ಬೆಳಕಿನ ಬೀಜದಂತಹಾ ಕಾವ್ಯಗಳು ಅನುಭಾವ ಕಾವ್ಯ ಎಂದೇ ಹೆಸರು ಪಡೆದಿವೆ.
ಮೊದಲ ಓದಿಗೆ ದಕ್ಕದಿರುವ ಅನುಭಾವ ಕಾವ್ಯ ಬೌದ್ಧಿಕ ಕಸರತ್ತಿಗೆ ಅದು ತನ್ನ ಅರ್ಥವನ್ನು ದಾಟಿಸುವುದಿಲ್ಲ. ಬದಲಿಗೆ ಕಾವ್ಯದ ಹಿನ್ನೆಲೆ, ಅದರ ಒಳ ಅರ್ಥಗಳ ಹಿನ್ನೆಲೆಯನ್ನು ಶೋಧಿಸುವ ತಾಳ್ಮೆಯನ್ನು ಹೊಂದಿದ ಸಾಧಕನಿಗೆ, ಅದು ವಿಪರೀತದ ಬೇಸಿಗೆಯಲ್ಲಿ ಒಂದು ಕ್ಷಣ ತಂಗಾಳಿ ಬೀಸಿದಾಗ ಆಗುವ ಅನುಭವವನ್ನು ತಂದುಕೊಡುತ್ತದೆ. ಇಂತಹ ವಿಶಿಷ್ಟತೆ ಕಂಡು ಬರುವುದು ‘ಹಲಸಂಗಿ ನಾಡಿನಲ್ಲಿ ನೆಲೆನಿಂತ ನನ್ನ ಚೆನ್ನನಿಗೆ ಎಣೆಯ ಗೆಣೆೆಯರಾರಿಹರು’ ಎಂದು ಪ್ರಶಂಸೆ ಪಡೆದು ‘ಪಡೆದಪ್ಪನಾಗು’ ಎಂದು ವರಕವಿ ಬೇಂದ್ರೆಯವರಿಂದ ಹಾರೈಸಿಕೊಂಡ “ಹಲಸಂಗಿ ಚೆನ್ನಮಲ್ಲಪ್ಪ ಗಲಗಲಿ” ಮಧುರಚೆನ್ನರ ಕಾವ್ಯದಲ್ಲಿ.
“ಅಣ್ಣಯ್ಯನಿಗೆ” ಎನ್ನುವ ಕವಿತೆ ಮಧುರಚೆನ್ನರು ಬೇಂದ್ರೆಯವರನ್ನು ಕುರಿತು ಬರೆದದ್ದು. ಕಾವ್ಯ ಎಂದಾಗ ನಾನು, ಅದು ಜೀವದ ಬೆಸುಗೆ ಎಂದು ಯಾವಾಗಲೂ ಹೇಳುತ್ತೇನೆ. ಏಕೆಂದರೆ ಬೇಂದ್ರೆ ಮತ್ತು ಮಧುರಚೆನ್ನರ ಬಾಂಧವ್ಯ ಹೇಗಿತ್ತು ಎನ್ನುವುದನ್ನು ಈ ಕವಿತೆ ನಮಗೆ ಕಟ್ಟಿ ಕೊಡುತ್ತದೆ. ಇಲ್ಲಿ ಬೇಂದ್ರೆಯವರ ವ್ಯಕ್ತಿತ್ವದ ಅನಾವರಣವಾಗುತ್ತದೆ. ಅಣ್ಣತಮ್ಮಂದಿರಂತೆ ಬದುಕಿದ ಇಬ್ಬರು ಅನುಭಾವಿ ಕವಿತ್ವ ಜೀವಗಳ ಬದುಕಿನ ಜೀವಸ್ಪುರಣ ಕಾವ್ಯ ಕನ್ನಡ ನಾಡಿಗೆ ಮಾದರಿಯಾಗಿದೆ.
ಮಾತು ಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ
ಅರ್ಥವಿಲ್ಲದ ಆ ‘ಅದಲ್ಲ’ ಅರ್ಥಕೆ ನಾನು
ಬೆರಗುಬಟ್ಟೆನು ನಿನ್ನ ನೇರಿ ನೇತಿಯ ಹೋಲ್ವ
ಅರುವಿನಾ ಆಳವರಿದು
ಈ ಕವಿತೆಯ ಮಹತ್ವವಿರುವುದೇ ಸಂವಾದದ ರೂಪಕದಂತೆ ಕಾಣುವ ಈ ಸಾಲುಗಳಲ್ಲಿ
೨೦೧೭ ರಲ್ಲಿ ಸಂಶೋಧನೆಯ ಕಾರಣಕ್ಕೆ ಕೀರ್ತಿಶೇಷರಾದ ಡಾ.ಜಿ.ಕೃಷ್ಣಪ್ಪನವರು ನನ್ನನ್ನು ಮಧುರಚೆನ್ನರ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕ್ಕಿನ ಹಲಸಂಗಿಗೆ ಕರೆದು ಕೊಂಡು ಹೋಗಿದ್ದರು ಅಲ್ಲಿ ಮಧುರಚೆನ್ನರು ವಾಸವಿದ್ದ ಮನೆ, ಅವರ ಗ್ರಂಥಭ೦ಡಾರ ಅವರು ಧ್ಯಾನ ಮಾಡುತ್ತಿದ್ದ ಜಾಗ, ಅವರ ಮಹಾಸಮಾಧಿ ದರ್ಶನ ಮಾಡಿಸಿದರು. ನಮ್ಮ ಜೊತೆಗೆ ಅಂದು ಕೀರ್ತಿಶೇಷ ಡಾ.ಪುರುಷೋತ್ತಮ ಗಲಗಲಿ (ಮಧುರಚೆನ್ನರ ಮೊದಲ ಮಗ) ಇದ್ದರು. ನಾನು ಬೇಂದ್ರೆ ಮತ್ತು ಮಧುರಚೆನ್ನರ ಬಾಂಧವ್ಯದ ಕುರಿತು ಪ್ರಶ್ನೆ ಕೇಳಿದಾಗ ಮೇಲ್ಕಂಡ ಕವಿತೆಯ ಸಾಲುಗಳನ್ನು ಉಲ್ಲೇಖಿಸಿ “ಸೊಲ್ಲಾಪುರದಲ್ಲಿ ಬೇಂದ್ರೆಯವರು ಇದ್ದಾಗ ಮಧುರಚೆನ್ನರು ಆರೋಗ್ಯಪರೀಕ್ಷೆಗೆ ಸೊಲ್ಲಾಪುರದ ಆಸ್ಪತ್ರೆಗೆ ಹೋಗುತ್ತಿದ್ದರು ನಂತರ ಬೇಂದ್ರೆಯವರ ಮನೆಯಲ್ಲಿ ವಾಸ್ಥವ್ಯ ಹೂಡುತ್ತಿದ್ದರು ಆಗ ರಾತ್ರಿ ಹಗಲೆನ್ನದೆ ಅವರ ಚರ್ಚೆ, ಮುಂದುವರೆಯುತ್ತಿತ್ತು. ಆಧ್ಯಾತ್ಮಿಕ ವಿಚಾರಗಳ ಸಂವಾದಕ್ಕೆ ಕಾಲದ ಹಂಗು ಇರುತ್ತಿರಲಿಲ್ಲ” ಎಂದರು.
“ಮಾತು ಮಾತಿಗೆ ಬಿಡದೆ ನಡುವೆ ನುಸುಳುವ ನಿನ್ನ, ಅರ್ಥವಿಲ್ಲದ ಆ ‘ಅದಲ್ಲ’ ಅರ್ಥಕೆ ನಾನು ಬೆರಗುಬಟ್ಟೆನು ನಿನ್ನ ನೇರಿ ನೇತಿಯ ಹೋಲ್ವ, ಅರುವಿನಾ ಆಳವರಿದು” (ನೇರಿ -ಶ್ರದ್ಧೆ, ನೇತಿ-ಶೂನ್ಯ) ಹೀಗೆ ಕಾವ್ಯ ಹುಟ್ಟುವ ಸಮಯವಿದೆಯಲ್ಲ ಅದು ಎರಡು ಜೀವಗಳ ಸಂವಾದದಲ್ಲಿ ಹದವುಳ್ಳ ತರ್ಕವನ್ನು ಹೂಡುವ ಬೇಂದ್ರೆಯ ವರ ‘ಅಮೃತಕ್ಕೆ ಹಾರುವ ಗರುಡ’ನ ಗುಣ. ಸೋಜಿಗದಂತೆ ಬೇಂದ್ರೆಯವರ ಮಾತಿಗೆ ಎದುರು ಮಾತನಾಡದೆ ಮಧುರತೆಯಲ್ಲಿಯೇ ಅದನ್ನು ಅದಲ್ಲ ಎನ್ನುವ ಸೌಮ್ಯವಾದ ಮಧುರಚೆನ್ನರ ವಾದ ಇಲ್ಲಿ ವರ್ತಮಾನದಲ್ಲಿ ಇಂದು ಸಾಹಿತ್ಯವನ್ನು ಓದಿಯೂ ಅಲ್ಲಿ ಎಡಬಲಗಳ ರಾಜಕಾರಣಮಾಡುವ ಬದ್ಧದ್ವೇಶಿಗಳಂತೆ ಬದುಕುವ ಇಂದಿನವರಿಗೆ ಮತ್ತು ರಾಜಕಾರಣದ ಭಾಷೆಯನ್ನೇ ಮೈಗೂಡಿಸಿಕೊಂಡ ಅನೇಕ ಯುವಕರಿಗೆ ಬೇಂದ್ರೆ ಮತ್ತು ಮಧುರಚೆನ್ನರ ಈ ನಡೆ ಮಾರ್ಗವಾಗಬಲ್ಲದು. ಆದರ್ಶವೆಂದರೆ ಅದು ಭೂತದ ಬಾಯಲ್ಲ ಅದು ಭಿನ್ನತೆಯಲ್ಲಿಯು ಕಾಯ್ದುಕೊಂಡು ಹೋಗಬಹುದಾದ ಒಂದು ವಿನಯ. ವಿಚಾರ, ವಿಮರ್ಶೆ ಎಂಬುದನ್ನು ಬೇಂದ್ರೆ ಮತ್ತು ಮಧುರಚೆನ್ನರ ಈ ಸಂವಾದದಲ್ಲಿ ನಮಗೆ ಕಂಡು ಬರುತ್ತದೆ.
ನೀ ಕಿಚ್ಚು ನಾ ಕೆಂಡ ಬೆನ್ನು ಬೆನ್ನಲಿ ಬೆಸೆದ
ಏಕತೇಜದ ಎರಡು ಹಿರಿಕಿರಿಯ ಪಿಂಡಗಳ
ಬೆಳಗಿಸುವ ಜ್ಯೋತಿ ಶ್ರೀ ಅರವಿಂದ ಯೋಗಿಗಳ
ಹೃದಯಸ್ಥ ವಿಶ್ವಭಾನು
ಈ ಸಾಲುಗಳನ್ನು ಗಮನಿಸಿ ಅಲ್ಲಿ ಬೇಂದ್ರೆಯವರನ್ನು ಕಿಚ್ಚು ಎಂದು ಸಂಭೋಧಿಸುವುದರ ಅರ್ಥ ಬೇಂದ್ರೆಯವರ ಕಾವ್ಯದ ನೋಟ ಮತ್ತು ಅವರ ಆಲೋಚನಾ ಸಾಮರ್ಥ್ಯ, ಭಾಷಾ ಬಳಕೆ, ಬಡತನದಲ್ಲಿ ಬೆಂದರೂ. ಆರದೆ ಉಳಿದ ಅವರ ಆತ್ಮಸಂಯಮ, ಅವರು ಹೊಂದಿದ್ದ ವೇದ, ಉಪನಿಷತ್ ಮತ್ತು ಪೌರಾತ್ಯ ಚಿಂತನೆಗಳ ಕುರಿತು ಅವರಿಗಿದ್ದ ಆಳವಾದ ಅರಿವು. ಜೊತೆಗೆ ಅದನ್ನು ಅವರು ಮ೦ಡಿಸುವ ರೀತಿ, ಬೇಂದ್ರೆಯವರನ್ನು ಕಿಚ್ಚು ಎನ್ನಲು ಕಾರಣವಾಗಿರಬಹುದು. ಜೊತೆಯಲ್ಲಿ ಮಧುರಚೆನ್ನರು ತಮ್ಮನ್ನು ಕೆಂಡ ಎಂದು ಕರೆದುಕೊಂಡಿದ್ದಾರೆ ಮಧುರಚೆನ್ನರ ಪಾಶ್ಚಾತ್ಯ ಚಿಂತನೆಗಳ ಅರಿವಿನ ಜೊತೆಗೆ ಹೇಳುವುದನ್ನೇ ಸೌಮ್ಯವಾಗಿ ಹೇಳುತ್ತಲೇ ತನ್ನ ಶ್ರದ್ಧೆಯನ್ನು ಬಿಡದ ಅವರ ಜೀವನ ಶೈಲಿ ಇಲ್ಲಿ ನಮಗೆ ಬದುಕಿನ ವಿವಿದ ರೂಪಗಳ ಅರ್ಥಗಳನ್ನು ದಾಟಿಸುತ್ತದೆ.
“ ನನ್ನ ನಿನ್ನಯ ಸಖ್ಯ ಮೊಳೆತೊಂದು ತಪವಿಂದು
ಮುಂದೆ ಬಹುಕಾಲದಲ್ಲಿ ಬಿಡಲಿರುವ ಹೂ ಕಾಯಿ ಭವಿತವ್ಯ ಗರ್ಭಗತವು”
ಮಧುರಚೆನ್ನರ ಈ ಮಾತುಗಳಲ್ಲಿ ಗೆಳೆತನದ ಬಾಂಧವ್ಯದಿ೦ದ ಅಣ್ಣತಮ್ಮಂದಿರ೦ತೆ ಬಾಳಿದ ಈರ್ವರು ಕನ್ನಡ ಕವಿಗಳ ಸಂವಾದ, ಚರ್ಚೆ, ವಿಚಾರ ವಿಮರ್ಶೆ, ಭಾರತದ ಇಂದಿನ ಸಾಮಾಜಿಕ ರೋಗಗಳಿಗೆ ಔಷಧವಾಗಬಲ್ಲದು. ವಿಚಾರದಲ್ಲಿ ಭಿನ್ನತೆಯಿದ್ದರೂ ಪ್ರಸ್ಪರರನ್ನು ಗೌರವಿಸಿ ಅಣ್ಣತಮ್ಮಂದಿರ೦ತೆ ಬಾಳುವ ಭಾರತದ ಆತ್ಮದ ಗೀತೆಯನ್ನು ಅಣ್ಣಯ್ಯ ಪದ್ಯ ನಮಗೆ ಕಟ್ಟಿ ಕೊಡುತ್ತದೆ. ಕಾವ್ಯ ಹೀಗೆ “ಕೂಡು ಕಟ್ಟುವ” ಕ್ರಿಯೆಯನ್ನು ಕಲಿಸಬೇಕಲ್ಲವೇ.






0 Comments