ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಮತ್ತೆ ವಸಂತ: ನೆನಪುಗಳ ಮೆರವಣಿಗೆ

-ಕಿರಣ ಭಟ್

ನಾನು ಚಿಕ್ಕವನಾಗಿದ್ದ ಕಾಲದಲ್ಲಿ, ನಮ್ಮೂರ  ಕಡೆ, ಶಾಲಾ ಶಿಕ್ಷಕಿಯರನ್ನು ʼಬಾಯೋರುʼ ಅಂತ ಕರೀತಿದ್ರು. ಮುಂದೆ ಅದು ʼ ಅಕ್ಕೋರುʼ ಆಗಿ, ಕಾನ್ವೆಂಟುಗಳು ಬಂದ ಮೇಲೆ ʼಮಿಸ್‌ʼ ಆಗಿಹೋಗಿದೆ. ಇಂಥ ಕಾಲದಲ್ಲಿ, ಮೂರನೇತ್ತೆ ಕಲಿಯುವಾಗ ʼ ಅನಸೂಯಾಬಾಯಿʼ ಶಾಲೆಗೆ ಬಂದ್ರು. ಚಂದಕ್ಕೆ, ತೆಳ್ಳಗೆ, ಬೆಳ್ಳಗಿದ್ದ ಅವರು ಮೊದಲ ದಿನ ನಮ್ಮ ಕೋಣೆಗೆ ಬಂದಾಗ, ನನ್ನ ʼಆಯಿʼ ನೇ ಕ್ಲಾಸಿಗೆ ಬಂದ್ರೇನೋ ಅಂದ್ಕೊಂಡ್ಬಿಟ್ಟಿದ್ದೆ. ಥೇಟ್‌ ಆಯಿಯ ಹಾಗೇ ಕಾಣ್ತಿದ್ರು.ಆಯಿ ಅಂದ್ರೆ ನಂಗೆ ಸಿಕ್ಕಾಪಟ್ಟೆ ಪ್ರೀತಿ. ಹಾಗಾಗಿ ಆವರನ್ನು ನೋಡಿದ ಆ ಕ್ಷಣದಿಂದ್ಲೇ ಅವರು ನನ್ನ ಫೇವರಿಟ್‌ ಆಗಿಹೋದ್ರು. ಆವರ ಹತ್ರಾನೇ ಹೋಗಿ ಕೂತ್ಕೊಳ್ಳೋದು, ಹಿಂದೆ ಹಿಂದೇನೇ ತಿರುಗೋದು. ಅವರು ಹೇಳಿದ್ದನ್ನ ಚಾಚೂ ತಪ್ಪದೇ ಮಾಡೋದು.. ಹೀಗೆ. ಅವರೂ ಹಾಗೇ ಅದೆಷ್ಟು ಪ್ರೀತಿ ಮಾಡೋರು! ಅವರ ಮನೆಗೂ ಕರ್ಕೊಂಡು ಹೋಗಿ ತಿಂಡಿ ಕೊಡ್ತಿದ್ರು.

ಹೀಗೆ ಬಹುಷಃ ಪ್ರತಿ ಮಗುವಿನ ಬದುಕಲ್ಲೂ, ಮುಖ್ಯವಾಗಿ ಗಂಡುಮಕ್ಕಳ ಬದುಕಲ್ಲಿ ಇಂಥ ʼ ಅನಸೂಯಕ್ಕೋರುʼ ಇದ್ದೇ ಇರ್ತಾರೆ. ಯಾವ ಯಾವ್ದೋ ಸಂದರ್ಭದಲ್ಲಿ ನೆನಪಾಗ್ತಾನೇ ಇರ್ತಾರೆ. ನೋಡುಗರ ಮನದಲ್ಲಿಇಂಥ ನೆನಪುಗಳನ್ನು ಮತ್ತೆ ಕೆದಕಿದ್ದು ʼಬಹುರೂಪಿ ಫೌಂಡೇಶನ್‌ʼ ಸಂಘಟಿಸಿದ  ʼಮತ್ತೆ ವಸಂತʼ ಏಕವ್ಯಕ್ತಿ ಪ್ರದರ್ಶನ. ಕನ್ನಡದ ಸಂದರ್ಭದಲ್ಲಿ ಸಿ. ಆರ್‌. ಸಿಂಹ ಇಂಥ ಪ್ರಕಾರವನ್ನು ತಂದರಾದರೂ ಅದು ಗಮನಾರ್ಹವಾಗಿ ಕಾಣಿಸಿಕೊಂಡಿದ್ದು ನಮ್ಮ ಹೆಣ್ಣುಮಕ್ಕಳು ಅವುಗಳನ್ನು ಗಂಭೀರವಾಗಿ ಪ್ರಯೋಗ ಮಾಡುವದಕ್ಕೆ ಶುರು ಮಾಡಿದ ಮೇಲೆ. ಹೆಣ್ಣಿನ ತುಮುಲಗಳನ್ನು, ಒಳತೋಟಿಗಳನ್ನುರಂಗಭೂಮಿಯ ಮೂಲಕ ಹೇಳುವ ತುಡಿತ ಹೆಚ್ಚದಾಗ ಅದೆಷ್ಟೋ ಪ್ರಯೋಗಗಳು ರಂಗಕ್ಕೆ ಬಂದವು. ಮುಖ್ಯವಾಗಿ ಪೌರಾಣಿಕ ಪಾತ್ರಗಳ ಮೂಲಕ ಸಮಕಾಲೀನ ಹೆಣ್ಣಿನ ಬದುಕಿನ ಬವಣೆ,ಭಾವಗಳನ್ನು ಕಟ್ಟಿಕೊಡುವ ಪ್ರಯತ್ನಗಳಾದವು. ಈಗ ಈ ರಂಗ ಪ್ರಕಾರ  ಇವುಗಳಾಚೆಗೂ ವಿಸ್ತರಿಸುತ್ತ ಸಾಗಿದೆ. ಸಮಕಾಲೀನ ವಸ್ತು ವಿಷಯಗಳೂ, ವ್ಯಕ್ತಿಗಳೂ ಈ ಪ್ರಕಾರದಲ್ಲಿ ರಂಗದ ಮೇಲೆ ಬಂದು ಹೋಗಿದ್ದಾರೆ. ʼಮತ್ತೆ ವಸಂತʼ ಕೂಡ ಇಂಥ ಒಂದು ವಿಭಿನ್ನ ಪ್ರಯತ್ನ.

ವ್ಯಕ್ತಿಯೊಬ್ಬ, ತನ್ನ ಪ್ರೀತಿಯ ʼಟೀಚರ್‌ʼನ್ನು ಗಾಢವಾಗಿ ನೆನಪಿಸಿಕೊಳ್ಳುವ ಕಥನ ಇದು. ಆದರೆ ಇದು ಬರಿಯ ʼಟೀಚರ್‌ʼ ನೆನಪಾಗದೇ, ಅದರಾಚೆಯೂ ವಿಸ್ತರಿಸಿಕೊಳ್ಳುತ್ತ, ಇನ್ನೊಂದು ತಲೆಮಾರಿನ ನಂತರ ಮರೆತೇ ಹೋಗಬಹುದಾದ ಒಂದು ಕಾಲದ ಮಕ್ಕಳ ಬದುಕನ್ನು, ಅದರ ಮಜವನ್ನು ಜೊತೆಗೆ ನೋವುಗಳನ್ನೂ ತೆರೆದಿಡುವ ಕಥನವಾಗಿಬಿಡುತ್ತದೆ. ಅದೇ ಪ್ರದರ್ಶನದ ಹೆಚ್ಚುಗಾರಿಕೆ.

ಅದ್ಭುತವಾದ ಬಾಲ್ಯ, ಮಳೆ, ತಿಂಡಿ ಡಬ್ಬ, ಕೋಡುಬಳೆ, ಪಾಠದ ಮಧ್ಯೆಯೇ ಬರುವ ಮನೆ ಮನೆ ಕಥೆಗಳು, ಮಗುವಿನ ಇಷ್ಟಗಳನ್ನೇ ನೋಡದೆ ತೀರ್ಮಾನ ತೆಗೆದುಕೊಳ್ಳುವ ಗಡುಸಾದ ಅಪ್ಪ, ತಿಳಿ ಹೇಳುವ ಅಮ್ಮ, ಬಗೆ ಬಗೆಯ ಗೆಳೆಯರು… ಹೀಗೆಲ್ಲನೆನಪುಗಳ ಮೆರವಣಿಗೆಯಲ್ಲಿ ಬಂದು ಹೋಗುತ್ತಾರೆ.

ನಾಟಕದ ರಚನೆಯಲ್ಲೂ, ವಿನ್ಯಾಸದಲ್ಲೂ ಸರಳ ರೇಖಾತ್ಮಕ ಕಥನ ಶೈಲಿಯನ್ನು ನೆಚ್ಚಿಕೊಂಡಿದ್ದಾರೆ ಸಂಚಯ ಗಣೇಶ್.‌ ಭಾವನಾತ್ಮಕವಾದ ವಸ್ತುವಾದುದರಿಂದ ಭಾಷೆಯೂ ಹಾಗೇ ಇದೆ. ಆದರೂ ತಿಳಿ ಹಾಸ್ಯದ ಸಂದರ್ಭಗಳು ಬಂದಾಗಲೆಲ್ಲ ʼಪನ್‌ʼ ಗಳೂ ಜೊತೆ ಜೊತೆಯಲ್ಲೇ ಬಂದುಬಿಡುತ್ತವೆ.  ಗಣೇಶ್‌ ರ ಪ್ರಿಯವಾದ ʼಪ್ರಾಸʼ ಗಳೂ ಅಲ್ಲಲ್ಲಿವೆ. ಇಡಿಯ ನಾಟಕ ನಿರೂಪಣಾ ಪ್ರಧಾನವಾಗಿದ್ದರೂ, ಅಲ್ಲಲ್ಲಿ ಕೆಲವು ಘಟನೆಗಳನ್ನು ದೃಶ್ಯಗಳಾಗಿಸುವ ಪ್ರಯತ್ನವೂ ಇದೆ. ನಟ ವಿಜೈ ಭಾರದ್ವಾಜ್‌ ನಾಟಕದುದ್ದಕ್ಕೂ ನಿರೂಪಣೆ ಮಾಡುತ್ತ, ಬೇರೆ ಬೇರೆ ಪಾತ್ರಗಳ ಒಳಹೊಗುತ್ತ,  ಬಾಲ್ಯದಲ್ಲಿ ಬದುಕುವ ಪ್ರಯತ್ನ ಮಾಡುತ್ತಾರೆ.

ಮನೆಯ ಹಜಾರದಲ್ಲೋ, ಅಂಗಳದಲ್ಲೋ ಕೆಲವೇ ಪ್ರೇಕ್ಷಕರ ನಡುವೆಯೋ ಆಡುವಂತೆ ವಿನ್ಯಾಸಗೊಳಿಸಲ್ಪಟ್ಟ ನಾಟಕ ಇದು. ಒಂದು ರೀತಿಯ ʼಅತಿ ಆಪ್ತʼ ನಾಟಕ. ಹಾಗಾಗಿರುವದರಿಂದಲೇ ಧ್ವನಿಯ ಜೊತೆ ಆಟವಾಡುವ ಅವಕಾಶ ಸಾಕಷ್ಟು ಇದೆ. ಇಂಥ ಅವಕಾಶವನ್ನು ಇನ್ನಷ್ಟು ಹೆಚ್ಚಾಗಿ ಬಳಸಿಕೊಳ್ಳಬಹುದಿತ್ತೇನೋ ಎನಿಸದಿರದು. ಒಂದೆರಡು ಬಾರಿ ಬರುವ ಹಾಡುಗಳು ಚಂದವಿವೆ ಬಾಲ್ಯಕ್ಕೂ ಒಯ್ಯುತ್ತವೆ. ಅವುಗಳ ಆಯ್ಕೆಯಲ್ಲಿ ಗಮನ ಹರಿಸಿದರೆ ಅವುಗಳನ್ನು ರೂಪಕವಾಗಿಯೂ ಬಳಸಿಕೊಳ್ಳಬಹುದೇನೋ. ಸಂಗೀತ ಶಕ್ತವಾಗುತ್ತ ಮಾತುಗಾರಿಕೆಗೂ ಇಂಬು ಕೊಡುವಂತಾದರೆ ಚೆನ್ನ. ಸುತ್ತಲೂ ಇಟ್ಟುಕೊಂಡ ಪರಿಕರಗಳನ್ನು ಬರಿಯ ಅಲಂಕಾರಗೊಳಿಸದೇ, ನಾಟಕ ಕಟ್ಟುವಲ್ಲೂ ಬಳಸಬಹುದೇನೋ.

ಇವೆಲ್ಲವನ್ನು ಒಂದು ಬದಿಯಿಟ್ಟು ನೋಡಿದರೆ, ನಾಟಕಕ್ಕೆ ಸಾಕ್ಷಿಯಾದ ಎಲ್ಲರಲ್ಲೂ ಅವರ ಬಾಲ್ಯವನ್ನು, ಪ್ರೀತಿಯ ʼಅಕ್ಕೋರʼ ನ್ನೂ ನೆನಪಿನ ಭಿತ್ತಿಯಿಂದ ಎತ್ತಿ ಹೊರಗೆ ತಂದಿತಲ್ಲ, ಅದೇ ನಾಟಕದ ಗೆಲುವು.

‍ಲೇಖಕರು Admin

16 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading