ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಾ ಕಂಡ ‘ಸತ್ಕುಲ ಪ್ರಸೂತರು’ 

ಗುರುಪ್ರಸಾದ್ ಕಾಗಿನೆಲೆ ಅವರ ಕಾದಂಬರಿ ‘ಸತ್ಕುಲ ಪ್ರಸೂತರು’ ‘

ಅಂಕಿತ ಪುಸ್ತಕ’ ಈ ಕೃತಿಯನ್ನು ಪ್ರಕಟಿಸಿದೆ.

ಈ ಕೃತಿಯ ಕುರಿತು ಸಂಯುಕ್ತಾ ಪುಲಿಗಲ್ ಅವರ ಬರಹ ಇಲ್ಲಿದೆ.

-ಸಂಯುಕ್ತಾ ಪುಲಿಗಲ್

ಸಾಮಾಜಿಕವಾಗಿ ಕರೆಯಲ್ಪಡುವ “ಮೇಲ್ಜಾತಿ”ಯಲ್ಲಿ ನಾನು ಹುಟ್ಟಿದ್ದೇನೆ. ನಮ್ಮ ತಾತ-ಮುತ್ತಾತಂದಿರು, ಹಾಗೆಯೇ ನಾನು ಮದುವೆಯಾಗಿ ಬಂದ ಮನೆಯ ತಾತ-ಮುತ್ತಾತಂದಿರೂ ಕಟ್ಟಾ ಸಂಪ್ರದಾಯವಾದಿಗಳು. ಈಗ ನಮ್ಮೊಂದಿಗಿಲ್ಲದ ನನ್ನ ಅಜ್ಜಿ, ಹೆಜ್ಜೆ ಹೆಜ್ಜೆಗೂ ಶಾಸ್ತ್ರವನ್ನು ಪಾಲಿಸುತ್ತಾ, ಅದಕ್ಕಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟವರು. ಮಡಿ, ಮೈಲಿಗೆ, ಮುಟ್ಟು, ತಿಥಿ, ಮಾಸ, ಉಪವಾಸ, ಹಬ್ಬ-ಹರಿದಿನ, ಪಾರಾಯಣ – ಇವೆಲ್ಲವೂ ಅವರ ಜೀವನದ ಉಸಿರಾಗಿದ್ದವು.
 
ನಮ್ಮ ಹಳ್ಳಿಯಲ್ಲಿ “ಇತರೆ” ಜಾತಿಯವರು ಮನೆಗೆ ಬಂದರೆ ನೆಲದ ಮೇಲೆ ಕೂರಿಸಿ, ಪ್ರತ್ಯೇಕ ಲೋಟದಲ್ಲಿ ಕಾಫಿ ನೀಡಿ ಕಳುಹಿಸುತ್ತಿದ್ದ ನಮ್ಮ ಜಮೀನ್ದಾರ ತಾತನನ್ನೂ ನೋಡಿದ್ದೇನೆ. ಅದೇ ತಾತನ ಪ್ರೀತಿ, ಮುಗ್ಧ ನಗು, ಮಾನವೀಯ ಮೌಲ್ಯಗಳು, ಮಿತಿಯ ತೊಳಲಾಟಗಳನ್ನೂ ಕಂಡಿದ್ದೇನೆ. ಜಾತಿ ಮತ್ತು ಅದರ ಶ್ರೇಷ್ಠತೆಯ ವ್ಯಸನವು ಸಂಪ್ರದಾಯವೆಂಬ ಹೆಸರಿನಲ್ಲಿ ಹೇಗೆ ತಲೆಮಾರಿನಿಂದ ತಲೆಮಾರಿಗೆ ಹರಿದುಬರುತ್ತದೆ ಎಂಬುದನ್ನೂ ಕಂಡಿದ್ದೇನೆ. ಜಾತಿ-ಸಂಪ್ರದಾಯಗಳಿಗಾಗಿ ಜೀವನವನ್ನೇ ಮುಡಿಪಾಗಿಡುವವರ ಪ್ರೀತಿ, ಆತ್ಮೀಯತೆ, ಮಾನವೀಯತೆಯ ರುಚಿಯನ್ನೂ ಅನುಭವಿಸಿದ್ದೇನೆ. ಘನ-ಘೋರ ನಂಬಿಕೆ-ಸಿದ್ಧಾಂತಗಳು, ತಾರತಮ್ಯ, ಮೇಲರಿಮೆಗಳ ಚಕ್ರವ್ಯೂಹದಿಂದ ಆಕಸ್ಮಿಕವಾಗಿ ಹೊರಬಂದ ನನ್ನ ತಂದೆ, ಅದರ ಆಚೆಬದಿಯ ಸಮಾಜವನ್ನು ನಮಗೆ ಪರಿಚಯಿಸಿದರು. ಸಮಾಜದ ಅಸಮಾನತೆ, ತಾರತಮ್ಯ ಮತ್ತು ಶೋಷಣೆಯನ್ನು ವೈಚಾರಿಕತೆಯ ಹೊಸ ದುರ್ಬೀನಿನ ಮೂಲಕ ನೋಡಲು ಕಲಿಸಿದರು. – ಇವೆಲ್ಲವೂ ಒಂದು ಕಥೆ. ಸದ್ಯಕ್ಕದು ಒತ್ತಟ್ಟಿಗಿರಲಿ.
 
ಇಂತಹ ಕುಟುಂಬ ಸಂಜಾತಳಾದ ನಾನು, ಒಂದು ಕಡೆ ಅ/ಪ್ರಜ್ಞಾಪೂರ್ವಕವಾಗಿ ಸಂಪ್ರದಾಯಗಳ ಭಾಗವಾಗುತ್ತಾ, ಮತ್ತೊಂದು ಕಡೆ ವೈಚಾರಿಕತೆ ಮತ್ತು ಮಾನವೀಯತೆಯ ಕಡೆಗೆ ತೆರೆದುಕೊಳ್ಳುತ್ತಾ, ನದಿಯ ನಡುವಿನ ನೀರಿನಲ್ಲಿ ಈಜುತ್ತಾ ಎರಡೂ ದಡಗಳನ್ನು ಕಂಡವಳು. ಇಂತಹ ಸ್ಥಿತಿಯಲ್ಲಿ ಎದುರಾಗುವ ಧರ್ಮಸಂಕಟ ಒಂದು ರೀತಿಯ ಯಾತನೆಯೇ!
 
ಬಾಲ್ಯದಿಂದಲೂ ಒಂದು ನಿರ್ದಿಷ್ಟ ಜೀವನಕ್ರಮಕ್ಕೆ ತೆರೆದುಕೊಂಡು, ಅದರೊಂದಿಗೆ ಒಡನಾಡಿ, ಆ ಜನರ ಬದುಕಿನ ಭಾಗವಾಗುತ್ತಾ; ಬೆಳೆಯುತ್ತಿದ್ದಂತೆ ಅದರೊಳಗಿನ ಅಸಮಾನತೆ, ಅರ್ಥಹೀನತೆ ಮತ್ತು ಭಯಾನಕತೆ ಗೋಚರಿಸಲು ಆರಂಭವಾಗುತ್ತದೆ. ಆಗ ಅವನ್ನೆಲ್ಲ ಕಡ್ಡಿ ಮುರಿದಂತೆ ತಿರಸ್ಕರಿಸಬೇಕೆಂಬ ಆಂತರಿಕ ಒತ್ತಡ ಒಂದೆಡೆ; ನನ್ನನ್ನು ಅಪಾರ ಪ್ರೀತಿಯಿಂದ ಪೋಷಿಸಿದ, ಆ ನಂಬಿಕೆಗಳನ್ನೇ ತಮ್ಮ ಬದುಕಿನ ಉಸಿರಾಗಿಸಿಕೊಂಡವರ ಮನಸ್ಸನ್ನು ಅದೇ ಕಡ್ಡಿಯಂತೆ ಮುರಿದುಬಿಡುವೆನೇ ಎಂಬ ಆತಂಕ ಮತ್ತೊಂದೆಡೆ. ಈ ಎರಡರ ನಡುವೆ ಸಿಕ್ಕಿಬಿದ್ದಾಗ ಮನಸ್ಸಿನ ತೊಳಲಾಟಗಳು ಅನೇಕ ಬಾರಿ ಹಾಸ್ಟೈಲ್ (ಪ್ರತಿರೋಧಾತ್ಮಕ) ಪ್ರತಿಕ್ರಿಯೆಗಳಾಗಿ ಹೊರಹೊಮ್ಮುತ್ತವೆ.
 
ನನ್ನ ಕೆನ್ನೆ ತೀಡಿ ಮುದ್ದಾಡಿದ, ನನಗೆ ಜ್ವರ ಬಂದಾಗ ಇಡೀ ರಾತ್ರಿ ಪಾದಗಳನ್ನು ಉಜ್ಜಿ ಬೆಚ್ಚಗಿಟ್ಟ, ಕಷಾಯ ಮಾಡಿ ಕುಡಿಸಿದ ನನ್ನ ಅಜ್ಜಿಯ ಪ್ರೀತಿಯನ್ನು ನನ್ನ ವಿಚಾರಗಳಿಂದ “ಹಿಂಸಿಸಲೇ”? ಅಥವಾ, ಅವರ ಆಳವಾದ ನಂಬಿಕೆಗಳೊಳಗೆ ಶೋಷಣೆ ಮತ್ತು ದಬ್ಬಾಳಿಕೆಯ ಬೇರುಗಳಿವೆ ಎಂದು ತಿಳಿದ ಮೇಲೂ ಅವನ್ನು ಪ್ರಶ್ನಿಸದೆ, ಅವರ ಆಚರಣೆಗಳನ್ನು ತಿರಸ್ಕರಿಸದೆ ಇರಲೇ? ಅವರನ್ನು ನೋಯಿಸಬೇಕೇ? ಅಥವಾ ನನಗೆ ಒಪ್ಪದ ಆಚರಣೆಗಳನ್ನು ಕೇವಲ ಅವರ ಮನಸ್ಸಿಗಾಗಿ ಮುಂದುವರಿಸಬೇಕೇ? – ಈ ಎರಡನ್ನೂ ಮಾಡಿದ್ದೇನೆ. ಇನ್ನೂ ಮಾಡುತ್ತಲೇ ಇದ್ದೇನೆ. – ಕೆಲವೊಮ್ಮೆ ಇತರರನ್ನು ನೋಯಿಸಿದ್ದೇನೆ. ಎಲ್ಲವನ್ನೂ ಧಿಕ್ಕರಿಸಿ, ಪ್ರೀತಿಪಾತ್ರರನ್ನು ನೋಯಿಸಿದ ಅಪರಾಧಪ್ರಜ್ಞೆಯಲ್ಲಿ ನೊಂದಿದ್ದೇನೆ. ಇನ್ನು ಕೆಲವೊಮ್ಮೆ ನನ್ನೊಳದನಿಯನ್ನು ಸುಟ್ಟುಕೊಂಡು, ನನ್ನನ್ನು ನಾನೇ ಧಿಕ್ಕರಿಸಿಕೊಂಡು ಇತರರ ಭಾವನೆಗೆ ಬೆಲೆಕೊಟ್ಟಿದ್ದೇನೆ. ಬದುಕು ಈ ಎರಡರ ನಡುವೆ ತೂಗಾಡುತ್ತಲೇ ಸಾಗುತ್ತಿದೆ. ಇದು ಒಂದು ಸಣ್ಣ ಉದಾಹರಣೆ. ಇಂತಹ ಸಂದಿಗ್ಧತೆಗಳಿಗೆ ಪ್ರತಿದಿನ ಮುಖಾಮುಖಿಯಾಗುವ ನನ್ನಂಥವರ ದನಿಯೇ ಎಂಬಂತೆ ಗುರುಪ್ರಸಾದ್ ಕಾಗಿನೆಲೆ ಅವರ “ಸತ್ಕುಲ ಪ್ರಸೂತರು” ಕಾದಂಬರಿ ನನಗೆ ತಟ್ಟಿತು. ಓದುತ್ತಿದ್ದಾಗ, “ಈ ಕಾದಂಬರಿಯನ್ನು ನಾನ್ಯಾಕೆ ಬರೆಯಲಿಲ್ಲ?” ಎಂಬಷ್ಟರ ಮಟ್ಟಿಗೆ ಅದು ನನ್ನೊಳಗಿನ ಅನುಭವಗಳಿಗೆ ಹತ್ತಿರವಾಗಿ ಕಂಡಿತು.
 
ಈ ಕಾದಂಬರಿಯ ಕಥೆ ಹೀಗೆ ಸಾಗುತ್ತದೆ:
ಅಕ್ಷರಾ ಅಮೆರಿಕದಲ್ಲಿ ಬೆಳೆದ, ಸಂಪ್ರದಾಯಬದ್ಧ ಮಾಧ್ವ ಬ್ರಾಹ್ಮಣ ಕುಟುಂಬದ ತಂತು. ಆಕೆ ಮಾರ್ಮನ್ ಕ್ರಿಶ್ಚಿಯನ್ ಧರ್ಮಕ್ಕೆ ಸೇರಿದ ಅಮೆರಿಕನ್ ಯುವಕ ಕೆವಿನ್ ನನ್ನು ಪ್ರೀತಿಸುತ್ತಾಳೆ. ಇಬ್ಬರೂ ಮದುವೆಯಾಗಲು ನಿರ್ಧರಿಸುತ್ತಾರೆ. – ಈ ನಿರ್ಧಾರವೇ ಕಥೆಯ ಕೇಂದ್ರ ಸಂಘರ್ಷವಾಗುತ್ತದೆ. ಮದುವೆ ಕೇವಲ ಇಬ್ಬರ ನಡುವಿನ ಸಂಬಂಧವಾಗಿರುವುದಿಲ್ಲ; ಅದು ಎರಡು ವಿಭಿನ್ನ ಧಾರ್ಮಿಕ ಮತ್ತು ಸಾಂಸ್ಕೃತಿಕ ಜಗತ್ತುಗಳ ಮುಖಾಮುಖಿಯಾಗುತ್ತದೆ.
 
ಒಂದು ಕಡೆ ವೇದ, ಮಠ, ಕುಲ, ಆಚರಣೆ, ಮಡಿ-ಮೈಲಿಗೆ ಮಹತ್ವ ಕೊಡುವ ಮಾಧ್ವ ಸಂಪ್ರದಾಯ. ಮತ್ತೊಂದು ಕಡೆ ಶಾಶ್ವತ ಕುಟುಂಬ (Eternal Family), ದೇವಾಲಯ ವಿವಾಹ (Temple Marriage), ವಂಶಾವಳಿ ಮತ್ತು ಧಾರ್ಮಿಕ ಬದ್ಧತೆಗೆ ಒತ್ತು ನೀಡುವ ಮಾರ್ಮನ್ ಸಂಪ್ರದಾಯ. ಇಬ್ಬರ ಕುಟುಂಬಗಳೂ ತಮ್ಮ ತಮ್ಮ ನಂಬಿಕೆಗಳನ್ನು ಕಾಪಾಡಲು ಪ್ರಯತ್ನಿಸುತ್ತವೆ. ಮದುವೆಯ ನಂತರ ಮಕ್ಕಳು ಯಾವ ಧರ್ಮದಲ್ಲಿ ಬೆಳೆಯಬೇಕು? ಯಾವ ಸಂಪ್ರದಾಯವನ್ನು ಅನುಸರಿಸಬೇಕು? ಕುಟುಂಬದ ಒಪ್ಪಿಗೆ ಸಿಗುತ್ತದೆಯೇ? ಪ್ರೀತಿ ಎಲ್ಲವನ್ನೂ ಗೆಲ್ಲುತ್ತದೆಯೇ, ಅಥವಾ ವ್ಯಕ್ತಿತ್ವ ಮತ್ತು ಪರಂಪರೆ ಹೆಚ್ಚು ಬಲವಾಗುತ್ತವೆಯೇ? — ಇಂತಹ ಪ್ರಶ್ನೆಗಳು ಕಥೆಯಲ್ಲಿ ಮೊಗ್ಗಿನ ಜಡೆಯಲ್ಲಿನ ಮೊಗ್ಗುಗಳಂತೆ ಪೋಣಿಸಿಕೊಂಡು ಘಮಿಸಿವೆ. ಇಲ್ಲಿ ಬ್ರಾಹ್ಮಣ ಕುಟುಂಬವೂ ತನ್ನನ್ನು “ಸತ್ಕುಲ”ವೆಂದು ಭಾವಿಸುತ್ತದೆ. ಮಾರ್ಮನ್ ಕುಟುಂಬವೂ ತನ್ನ ಧರ್ಮವೇ ಶ್ರೇಷ್ಠ ಎಂದು ನಂಬುತ್ತದೆ. ಎರಡು ಸಮುದಾಯಗಳೂ ತಮ್ಮ ತಮ್ಮ ಸತ್ಯವನ್ನು ಪರಿಪೂರ್ಣ ಸತ್ಯವೆಂದು ಗಾಢವಾಗಿ ನಂಬಿರುವ ಮೌಢ್ಯಕ್ಕೆ, ಹಠಕ್ಕೆ ಕಥಾನಾಯಕ ಅನಂತ ಕೃಷ್ಣ ಸಾಕ್ಷಿಯಾಗಿ ನಿಲ್ಲುತ್ತಾನೆ. ಮಾಧ್ವ ಮತವೇ ಶ್ರೇಷ್ಠ ಎಂದು ಒಂದಷ್ಟರ ಮಟ್ಟಿಗೆ ಒಪ್ಪುವ ಅನಂತ ಕೃಷ್ಣನಿಗೆ ಮಾರ್ಮನ್ ಕುಟುಂಬದ ವಿರೋಧ, ಮೇಲರಿಮೆ ಅಲುಗಾಡಿಸಿಬಿಡುತ್ತದೆ. ಆತನಿಗೆ ತನ್ನ ನಂಬಿಕೆಗಳ ಬುನಾದಿಯ ಒಂದು ಬದಿ ಸದ್ದಿಲ್ಲದೆ ಬಿರುಕು ಬಿಟ್ಟಂತಾಗುತ್ತದೆ. 
ಒಬ್ಬ ಮನುಷ್ಯ, ತಾನೊಬ್ಬ ಇಂಡಿವಿಷುಯಲ್ ಎಂದು ತನ್ನನ್ನು ತಾನು ಗುರ್ತಿಸಿಕೊಳ್ಳುವ ಮುನ್ನವೇ ಆತನಿಗೆ ಅನೇಕ ಉಪಾದಿಗಳಿರುತ್ತವೆ. ಅವೆಲ್ಲವುಗಳಿಂದ ಆ ವ್ಯಕ್ತಿ ಗುರ್ತಿಸಿಕೊಳ್ಳಲ್ಪಡುತ್ತಾನೆ/ಳೆ. ಆ ಉಪಾದಿಗಳು ಅನಗತ್ಯ ಎಂದು ಕೊಡವಿಕೊಂಡರೂ ಅಷ್ಟು ಸುಲಭವಾಗಿ ಅದು ಅವರಿಂದ ಬಿಟ್ಟುಹೋಗಲಾಗದು. “ಮಾಧ್ವಾಸ್ ಬರ್ಡನ್” ಎನ್ನುವಂತಹ ಅಭಿಪ್ರಾಯ ಹೊಂದಿದ್ದ ಸ್ಮಾರ್ಥ ಬ್ರಾಹ್ಮಣರ ಕುಟುಂಬದ ಹೆಣ್ಣುಮಗಳನ್ನು ಪ್ರೀತಿಸಿ, ಮದುವೆಯಾಗಿ ಒಂದು ಹಂತದ ಸಂಪ್ರದಾಯದ ನಿಯಮಗಳನ್ನು ಮುರಿದ ಅನಂತ ಕೃಷ್ಣ, ಆಕೆಯನ್ನು ಅಮೆರಿಕಾಗೆ ಕರೆದೊಯ್ದ ನಂತರ ಹಯಗ್ರೀವ ಮಾಡೆಂದು ನಯವಾಗಿ ಆಗ್ರಹಿಸುವುದು, ಬೇಳೆಹುಳಿಯಿಂದ ಸೆಟಕೊಳ್ಳುವುದು ಒಂದು ಸಣ್ಣ ಹಾಸ್ಯಮಯವಾದ, ತೆಳುವಾದ ಅಂಶವಾದರೂ ಆಳವಾದ ಬೇರುಗಳ ಬುನಾದಿಯನ್ನು ವ್ಯಾಖ್ಯಾನಿಸುತ್ತದೆ.

ಮಗಳು ಮ್ಲೇಚ್ಛನನ್ನು ಮೆಚ್ಚಿದ್ದಾಳೆ ಎಂಬುದನ್ನು ತಿಳಿದೇ (ಇನ್ನೂ ವಿವಾಹವೂ ಆಗಿಲ್ಲ), ಘಟಶ್ರಾದ್ಧಕ್ಕೆ ಒಳಪಡುವ ಅನಂತ ಕೃಷ್ಣನ ಪ್ರತಿಕ್ರಿಯೆ ಏನು ಗೊತ್ತೇ? ಹಠದಿಂದ ತನ್ನ ತಂದೆಗೆ ಶ್ರಾದ್ಧ ಕಾರ್ಯವನ್ನು ಸವಿವರವಾಗಿ, ಧಾರಾಳವಾಗಿ ಮಾಡಿಸುವುದು! ಈ ನಿರ್ಧಾರ ನಮ್ಮನ್ನು ನಡುಗಿಸಿಬಿಡುತ್ತದೆ. ನಾವೆಷ್ಟೇ ತಿರಸ್ಕರಿಸಿದರೂ ನಮ್ಮೊಳಗೆ ಸುಪ್ತವಾಗಿ ಅಡಗಿ ಕುಳಿತ ಜಾತೀಯತೆ, ಮೇಲರಿಮೆಯ ಸ್ಪರ್ಶ ಸೂಕ್ಷ್ಮವಾಗಿ ತಟ್ಟುತ್ತದೆ. ಲೇಖಕರು ಒಂದು ಕಡೆ “ಬ್ರಾಹ್ಮಣ್ಯ ತನ್ನನ್ನು ಬಿಟ್ಟರೂ, ತಾನು ಬ್ರಾಹ್ಮಣ್ಯ ಬಿಡಲಿಲ್ಲ” ಎಂದು ಹೇಳುತ್ತಾರೆ. ಇದು ಅನಂತ ಮೂರ್ತಿಯವರ “ನಾರಣಪ್ಪ ಬ್ರಾಹ್ಮಣ್ಯ ಬಿಟ್ಟರೂ, ಬ್ರಾಹ್ಮಣ್ಯ ನಾರಣಪ್ಪನನ್ನ ಬಿಡಲಿಲ್ಲ” ಎಂಬ ಮಾತಿಗಿಂತ ಸ್ವಲ್ಪ ಭಿನ್ನವಾಗಿ ಕಾಣುತ್ತದೆ. ಆದರೆ ನನ್ನ ಪ್ರಕಾರ, ಕಥೆಯು ಅನಂತ ಮೂರ್ತಿಯವರ ಅದೇ ಮಾತನ್ನೇ ಇನ್ನೂ ಸ್ಪಷ್ಟೀಕರಿಸುತ್ತದೆ. ಅನಂತ ಕೃಷ್ಣನ ಆಳದಲ್ಲಿರುವ ಬ್ರಾಹ್ಮಣ್ಯವೇ ಆತನನ್ನು ಬ್ರಾಹ್ಮಣ್ಯ ಬಿಡದಂತೆ ಮಾಡಿತ್ತು. ಹಾಗಾಗಿ ಆತ ತಾನಿನ್ನೂ ಹೆಚ್ಚು ಬ್ರಾಹ್ಮಣನಾಗಬೇಕು ಎಂದು ಮುಂದಾಗುತ್ತಾನೆ. ಇದು ನಮ್ಮಲ್ಲಿರುವ ವ್ಯಾಲಿಡೇಷನ್ನಿನ ಹಸಿವನ್ನು ತೋರುತ್ತದೆ.
 
ಒಂದು ಕಡೆ ಬಾಲ್ಯ ವಿವಾಹವನ್ನು ತುಚ್ಛವಾಗಿ ಧಿಕ್ಕರಿಸುತ್ತಲೇ, ಅದು ವೈಚಾರಿಕ ಹಿನ್ನೆಲೆಯಲ್ಲಿ ಹೇಗೆ “ಫ್ಯಾಷನಬಲ್” ಆಗಿ ಉಪಯೋಗವಾಗಿದೆ ಎಂಬುದನ್ನೂ ಬಹಳ ಚಮತ್ಕಾರವಾಗಿ ಲೇಖಕರು ತೋರಿದ್ದಾರೆ. ಬಾಲ್ಯ ವಿವಾಹ ತಪ್ಪು, ನಿಜ. ಆದರೆ ಅದನ್ನು ಒಂದು ಚಪ್ಪರಿಸುವ ಕುತೂಹಲದಿಂದ ಕಂಡು ಅದನ್ನು ವೈಭವೀಕರಿಸಲು ಹೊರಟ ಕಥಾನಾಯಕನಿಗೆ, ಬಾಲ್ಯ ವಿವಾಹಿತೆಯೇ ಒಬ್ಬಳು ಬಂದು ಬದಲಾಗಿರುವ ಕಾಲವನ್ನು ತೋರುತ್ತಾಳೆ. ಈ ಮಾತು ಹೇಳಿದಾಗ ಕಾದಂಬರಿ ಎತ್ತಿ ಹಿಡಿಯುವ ಮತ್ತೊಂದು ಮುಖ್ಯ ಅಂಶ ನೆನಪಾಗುತ್ತದೆ. ಅದು ವಲಸಿಗರ ಆಂತರಿಕ ಸಂಘರ್ಷ. ದಶಕಗಳ ಹಿಂದೆ ದೇಶ ಬಿಟ್ಟು ತೊರೆದ ವಲಸಿಗರಿಗೆ ಒಂದು ಹಂತದಲ್ಲಿ ಇಲ್ಲಿನ ಬದುಕು, ಅದರ ಆಗುಹೋಗುಗಳು ಹತ್ತಿರದಿಂದ ಪರಿಚಯವಾಗದೆ, ಅವರು ಆ ಹಿಂದಿನ ಕಾಲದಲ್ಲಿಯೇ ಲಾಕ್ ಆಗಿರುತ್ತಾರೆ. ಒಂದು ಸ್ಟೇಟಸ್ ಕೋ (ಸ್ಥಿರಗೊಂಡ ಸ್ಥಿತಿ) ದಲ್ಲಿ ದೇಶವನ್ನು ಬಿಟ್ಟು ಹೋದವರಿಗೆ ಮತ್ತೆಂದೋ ಮರಳಿದಾಗ ಪಿಚ್ ಎನಿಸುತ್ತದೆ. ತಮ್ಮ ಮನಸ್ಸಿನಲ್ಲಿದ್ದ ಭಾವನೆಗಳಿಗೆ, ಭೌತಿಕತೆ ಅಪರಿಚಿತವಾಗಿಹೋಗಿರುತ್ತದೆ. ಅದೇ ರೀತಿ ವಲಸಿಗರ ವಲಸೆಯಿಂದ ಭಾಷೆ ಬದಲಾಗಬಹುದು, ಆಚರಣೆ ಬದಲಾಗಬಹುದು, ಆದರೆ ಅವರ ಗುರುತು ಅಥವಾ ಉಪಾದಿಗಳು ಅಂತೆಯೇ ಉಳಿದುಬಿಡುತ್ತವೆ. ಹಾಗಾಗಿ ಅಮೇರಿಕಾದಲ್ಲೇ ಬೆಳೆದ ಅಕ್ಷರಾಳಲ್ಲೂ ಜಾತಿಯ ಒಂದು ಪರಿಕಲ್ಪನೆ ಇರುತ್ತದೆ. ನಾನು ಮಾಧ್ವ ಬ್ರಾಹ್ಮಿನ್ ಎಂದು ತಾನೂ ಒಂದು ಕಡೆ ಹೇಳಿಕೊಳ್ಳುತ್ತಾಳೆ. ಆದರೆ ಅವಳ ಗ್ರಹಿಕೆಯ ಮಡಿ, ಜಾತಿ, ಸಂಪ್ರದಾಯಗಳಿಗೂ, ಇಲ್ಲಿನ ಮಧೂ ದೊಡ್ಡಪ್ಪ ಮುಂತಾದವರ ದೈನಂದಿನ ಭಾಗವಾದ ಸಂಪ್ರದಾಯಗಳಿಗೂ ಅಜಗಜಾಂತರ ವ್ಯತ್ಯಾಸವಿರುತ್ತದೆ. ಈ ವಿರೋಧಾಭಾಸವನ್ನು ಲೇಖಕರು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಈ ಎರಡರ ನಡುವಿನ ಇಬ್ಭಾಗವನ್ನು ಕಾಣುತ್ತಿರುವ ಅನಂತ ಕೃಷ್ಣ, ಭಾಗಶಃ ಮೌನವಾಗಿದ್ದು, ಆಂತರಿಕ ಸಂಭಾಷಣೆಯಲ್ಲಿ ತೊಡಗಿಕೊಳ್ಳುತ್ತಾನೆ. ತನ್ನನ್ನು ತಾನು ಪ್ರಶ್ನಿಸಿಕೊಳ್ಳುತ್ತಾನೆ. ಎರಡು ಕೋನಗಳಿಂದಲೂ ಆಲೋಚಿಸುತ್ತಾ, ಎರಡನ್ನೂ ಪ್ರಶ್ನಿಸಿಕೊಳ್ಳುತ್ತಾ ಮುಂದುವರೆಯುತ್ತಾನೆ.
 
ಕಾದಂಬರಿಯಲ್ಲಿ ಎಲ್ಲ ಪಾತ್ರಗಳೂ ತಮ್ಮದೇ ಆದ ಚೌಕಟ್ಟಿನಲ್ಲಿ ಮಾನವೀಯವಾಗಿವೆ. ಯಾವ ಪಾತ್ರವೂ ಸಂಪೂರ್ಣ ಧನಾತ್ಮಕವಾಗಿಲ್ಲ, ಯಾವುದೂ ಸಂಪೂರ್ಣ ಋಣಾತ್ಮಕವಾಗಿಲ್ಲ. ಎಲ್ಲ ಪಾತ್ರಗಳೂ ತಮ್ಮದೇ ಆದ ನಂಬಿಕೆಗಳ ಖೈದಿಗಳು ಎಂಬುದನ್ನು ಪರಿಣಾಮಕಾರಿಯಾಗಿ ಲೇಖಕರು ತೋರಿದ್ದಾರೆ. ಹಾಗಾಗಿ ಓದುಗ ಯಾವ ಪಾತ್ರವನ್ನೂ ದ್ವೇಷಿಸಲು ಸಾಧ್ಯವಿಲ್ಲ. ಕೊನೆಯ ಹಂತದಲ್ಲಿ ಅಕ್ಷರಾ ಹಾಗೂ ಕೆವಿನ್ ಮದುವೆಯ ಸಂದರ್ಭ ಬರುತ್ತದೆ. ಆ ಇಬ್ಬರೂ ಎಲ್ಲ ನಂಬಿಕೆಗಳನ್ನೂ ತೊರೆದು, ಸಂಪೂರ್ಣ ಭಿನ್ನವಾದ ನಾನ್ ಡಿನಾಮಿನೇಷನಲ್, (ಅಂದರೆ ಯಾವುದೇ ಧಾರ್ಮಿಕ ಪಂಥಕ್ಕೆ ಬದ್ಧವಲ್ಲದ) ಮದುವೆಯಾಗಲು ಮುಂದಾಗುತ್ತಾರೆ. ಇದು ಈ ಕಾದಂಬರಿಯ ಮೂಲಕ ನಾನು ಕಲಿತ ಹೊಸ ಮತ್ತು ವಿಶಿಷ್ಟವೆನಿಸಿದ ಪರಿಕಲ್ಪನೆ. ಇದು ಹೊಸ ತಲೆಮಾರಿನ, ಧಾರ್ಮಿಕ ಆಚರಣೆಗಳಿಂದ ದೂರವಿರುವ ಅಕ್ಷರಾ-ಕೆವಿನ್ ರಿಗೆ ಸುಲಭವಾಗುತ್ತದೆ. ಆದರೆ ಹಿಂದಿನ ತಲೆಮಾರಿನ ನಂಟಿನ ಅಂಟು ಸ್ವಲ್ಪ ಹೆಚ್ಚೇ ಲೇಪಗೊಂಡಿರುವ ಅನಂತ ಕೃಷ್ಣ ಹಾಗೂ ನರ್ಮದಾರಿಗೆ ಇದು ಬಹಳ ಕಷ್ಟವಾಗುತ್ತದೆ. ನರ್ಮದಾ ಆ ವೈರುಧ್ಯದ ಮದುವೆಯಲ್ಲಿ ಸಂಪ್ರದಾಯವನ್ನು ಹೇಗಾದರೂ ಮಾಡಿ ನುಸುಳಿಸಲು ಪ್ರಯತ್ನಿಸುತ್ತಾಳೆ. ಅದು ತಮ್ಮ ಭಾವುಕ ಭಾಗ ಎಂಬುದನ್ನೂ ಅಭಿವ್ಯಕ್ತಿಸುತ್ತಾಳೆ. ಎಲ್ಲವನ್ನೂ ಒಪ್ಪುತ್ತಾ ಮೌನ ವಹಿಸುವ ಅನಂತ ಕೃಷ್ಣನಿಗೂ ಆ ಮದುವೆಯ ಸಂದರ್ಭದಲ್ಲಿ ತನಗೇ ಅರಿವಿಲ್ಲದಂತೆ, “ದೀರ್ಘ ಸುಮಂಗಲೀ ಭವ” ಎಂಬ ಆಶೀರ್ವಚನ ಬಾಯಿಗೆ ಬಂದುಬಿಡುತ್ತದೆ.
 
ಲೇಖಕರು ಕಥೆಯ ಆರಂಭದಿಂದ ಅಂತ್ಯದವರೆಗೂ ಹಲವಾರು ಪ್ರಶ್ನೆಗಳನ್ನು ಓದುಗರಲ್ಲಿ ಓಪನ್ ಎಂಡೆಡ್, ಅಂದರೆ ಮುಕ್ತವಾಗಿ ತೆರೆದಿಡುತ್ತಾರೆ. – ಧರ್ಮ ಜನರನ್ನು ಒಂದಾಗಿಸುತ್ತದೆಯೇ ಅಥವಾ ಬೇರ್ಪಡಿಸುತ್ತದೆಯೇ?, ಸಂಪ್ರದಾಯವು ಬದುಕಿಗಾಗಿ ಇದೆಯೇ, ಅಥವಾ ಬದುಕು ಸಂಪ್ರದಾಯಕ್ಕಾಗಿ ಇದೆಯೇ?, ನಮ್ಮ ವ್ಯಕ್ತಿತ್ವ ಜನ್ಮದಿಂದ ಬರುತ್ತದೆಯೇ, ನಮ್ಮ ಆಯ್ಕೆಯಿಂದ ನಿರ್ಮಾಣವಾಗುತ್ತದೆಯೇ? ನಂಬಿಕೆಗಳ ಹಠ ಮುಖ್ಯವೇ ಅಥವಾ ಮನುಷ್ಯತ್ವ ಮುಖ್ಯವೇ? – ಇತ್ಯಾದಿ ಪ್ರಶ್ನೆಗಳ ಮೂಲಕ ನಮ್ಮನ್ನು ಆಲೋಚನೆಯ ನಿಕಷಕ್ಕೆ ಒಡ್ಡುತ್ತಾರೆ.
 
ಕಾದಂಬರಿಯ ಓಘದಲ್ಲಿ ಮೊದಲರ್ಧ ಭಾಗದ ದಟ್ಟತೆ, ಹಿಡಿತ ಎರಡನೆಯ ಭಾಗದಲ್ಲಿ ಸ್ವಲ್ಪ ಕಡಿಮೆಯಾಗಿರಬಹುದು. ಕೊನೆಯ ಹಂತದ ಕೈಮ್ಯಾಕ್ಸ್ ಸ್ವಲ್ಪ ಹೆಚ್ಚೇ ಅಬ್ಬರ ಮಾಡಿರಬಹುದು. ಕಥಾನಾಯಕನ ಒಳಮಾತು ಕೆಲವು ಕಡೆ ಸ್ವಲ್ಪ ಹೆಚ್ಚೇ ಎನಿಸಬಹುದು. ಆದರೆ ಕಾದಂಬರಿಯ ಸಂಪೂರ್ಣ ಓದು ಒಂದು ವಿಶುಯಲ್, ಕಾಗ್ನಿಟಿವ್ ಟ್ರೀಟ್ ಎನ್ನಲು ಎರಡು ಮಾತಿಲ್ಲ. ಲೇಖಕರ ಭಾಷೆಯಂತೂ ಸುಲಿದ ಬಾಳೆ. ಸರಳವಾಗಿ ಕಥೆ ಹೇಳುತ್ತಲೇ ಸಾಕಷ್ಟು ವಿಷಯಗಳ ಬಗ್ಗೆ ಮಾಹಿತಿ ನೀಡುತ್ತಾರೆ, ಕಥೆಯ ಮೂಲಕವೇ ಓದುಗರೊಟ್ಟಿಗೆ ಚರ್ಚಿಸುತ್ತಾರೆ, ಅನೇಕ ಗಂಭೀರವಾದ ಎಳೆಗಳನ್ನು ಸುಲಲಿತವಾಗಿ ನೇಯುತ್ತಲೇ ನಡುನಡುವೆ ನಗಿಸುತ್ತಾರೆ.
 
ಒಂದು ಕಾದಂಬರಿ ನಮ್ಮ ಬದುಕನ್ನು ಕನ್ನಡಿಯಂತೆ ಪ್ರತಿಫಲಿಸಿದಾಗ ಮಾತ್ರ ಅದು ಸಾಹಿತ್ಯವಾಗುತ್ತದೆ. ಸತ್ಕುಲ ಪ್ರಸೂತರು ನನಗೆ ಅಂಥ ಅನುಭವವನ್ನು ಕೊಟ್ಟ ಕಾದಂಬರಿ. ನಾನು ಬದುಕಿದ ವೈರುಧ್ಯಗಳಿಗೆ, ನಾನು ಹೆಸರಿಡಲಾಗದ ಅಂತರ್ದ್ವಂದ್ವಗಳಿಗೆ ಈ ಕಾದಂಬರಿ ಭಾಷೆಯನ್ನು ಕೊಟ್ಟಿದೆ.

ಇಂತಹ ಪುಸ್ತಕವನ್ನು ಕನ್ನಡಕ್ಕೆ ಕೊಟ್ಟಂತಹ ಲೇಖಕರಿಗೆ ವಂದನೆಗಳು ಮತ್ತು ಅಭಿನಂದನೆಗಳು.  
 

‍ಲೇಖಕರು Admin

15 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading