ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.
ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.
ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.
ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಇದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.
ಅಂಕಣ – 3
ಕೃತಿ –‘ಹೌದೇ? ಇದು ನಾನೇ’
ಲೇಖಕರು – ಕನಕಾಮೂರ್ತಿ
“ಹೌದೇ? ಇದು ನಾನೇ !” ಎಂಬುದು ಶಿಲ್ಪ ಕಲಾವಿದೆ ಕನಕಾ ಮೂರ್ತಿಯವರ ಆತ್ಮಕಥನವಾಗಿದೆ. ಅವರು ತಮ್ಮ ಬದುಕಿನ ಘಟನಾವಳಿಗಳನ್ನು, ತಿಟ್ಟತ್ತಿ ತಿರುಗಿ ನೋಡಿದಂತೆ, ಸಿಂಹಾವಲೋಕನ ಕ್ರಮದಲ್ಲಿ ಬರೆದಿದ್ದಾರೆ. ಅವರ ಬದುಕೆ ಅವರಿಗೆ ಪ್ರಶ್ನಾರ್ಥಕವಾಗಿ ಮತ್ತು ಉದ್ಘಾರವಾಚಕವಾಗಿ ಕಂಡಿದೆ. ತಾನು ಇಷ್ಟೆಲ್ಲ ಸಾಧನೆ ಮಾಡಿರಬಹುದೇ? ಇದು ನನ್ನ ಸಾಧನೆಯೇ! ಎಂದು ಪ್ರಶ್ನಿಸುತ್ತಾರೆ ಮತ್ತು ಬೆರೆಗು ಪಡುತ್ತಾರೆ.
ಶ್ರೀಮತಿ ಕನಕಾಮೂರ್ತಿ ಅವರು ಮೂಲತಃ ಟಿ ನರಸೀಪುರದವರು. ತಂದೆ ದೊಡ್ಡ ಜಮೀನ್ದಾರರು ಮತ್ತು ರೈಸ್ ಮಿಲ್ಲಿನ ಮಾಲೀಕರು. ಸಾಕಷ್ಟು ಅನುಕೂಲ ಇರುವ ಸುಸಂಸ್ಕೃತ ದೊಡ್ಡ ಕುಟುಂಬ ಅವರದಾಗಿತ್ತು. ಇಬ್ಬರು ತಾಯಂದಿರಿಗೆ ಒಟ್ಟು 19 ಜನ ಮಕ್ಕಳು ಎಲ್ಲರಿಗೂ ಸಂಗೀತ ಪಾಠವನ್ನು ಮನೆಯಲ್ಲಿಯೇ ಹೇಳಿಕೊಡುತ್ತಿದ್ದರು. ಕನಕಾ ಅವರ ತಾಯಿಗೆ ಗಮಕ ಕಲೆ ಮತ್ತು ನಟನೆಯಲ್ಲಿ ಅಭಿರುಚಿ ಇತ್ತು. ಪ್ರತಿನಿತ್ಯ ಸಾಯಂಕಾಲ ಕಾಲು ಪೇಟೆ ಬಾರಿಸುತ್ತಾ ಸಂಗೀತವನ್ನು ಅಭ್ಯಾಸ ಮಾಡುತ್ತಿದ್ದರು. ಅಮ್ಮ ಬಿಡಿಸುವ ಚಿತ್ತಾಕರ್ಷಕ ರಂಗೋಲಿ ಕೂಡ ಕನಕಾ ಅವರಿಗೆ ಚಿತ್ರಕಲೆಯಲ್ಲಿ ಅಭಿರುಚಿ ಮೂಡಲು ಪ್ರೇರೇಪಣೆ ನೀಡಿತು ಎನ್ನುವರು. ಅವರ ಊರಿನ ಬಳಿ ಇರುವ ಸೋಮನಾಥಪುರಕ್ಕೆ ಪದೇ ಪದೇ ಭೇಟಿ ನೀಡುವ ಮೂಲಕ ಅಲ್ಲಿನ ಶಿಲ್ಪ ಕಲೆಯು ಅವರನ್ನು ಆಕರ್ಷಿಸಿತು. ಹೀಗೆ ಬಾಲ್ಯದಲ್ಲಿ ಕಲಾಸಕ್ತಿ ಒಡಮೂಡಿತ್ತು. ಶಾಲೆಯಲ್ಲಿ ಎಲ್ಲಾ ಕಾರ್ಯ ಚಟುವಟಿಕೆಗಳಲ್ಲಿ ಅವರು ಮುಂದಾಗಿದ್ದರು. ಹೆಣ್ಣು ಎಂಬ ಕೀಳಿರಿಮೆಯಿಂದ ಹೊರಬರಲು ಅಕ್ಕ ತಂಗಿಯರು ಏನೆಲ್ಲಾ ಪ್ರಯತ್ನಪಡುತ್ತಿದ್ದದ್ದನ್ನು ನೆನಪಿಸಿಕೊಳ್ಳುತ್ತಾರೆ. ಪಿಯುಸಿವರೆಗೆ ಊರಿನಲ್ಲಿ ಓದಿ, ವಿಜ್ಞಾನ ಪದವಿಯನ್ನು ಪಡೆಯಲು ಬೆಂಗಳೂರಿಗೆ ಬಂದರು. ನಂತರ ಅಣ್ಣಂದಿರಿಗೆ ಅಡುಗೆ ಮಾಡುವ ನೆಪದಲ್ಲಿ ಅಲ್ಲಿಯೇ ಉಳಿದು ಎ. ಏನ್. ಸುಬ್ಬರಾವ್ ಅವರ ಕಲಾಮಂದಿರದಲ್ಲಿ ಚಿತ್ರಕಲೆ ಕಲಿತರು , ಜೊತೆಗೆ ಶಿಕ್ಷಕಿಯಾಗಿ ಕೂಡ ಸೇವೆ ಸಲ್ಲಿಸಿದರು. ಅದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ ಖ್ಯಾತಿ ಪಡೆದ ಶಿಲ್ಪ ಕಲಾವಿದ ವಾದಿರಾಜರು ಅವರ ಚಿತ್ರಕಲೆಯನ್ನು ಮೆಚ್ಚಿ ಅವರ ಪ್ರತಿಭೆಯನ್ನು ಗುರುತಿಸಿದರು. ಅಲ್ಲಿಂದ ಪ್ರಾರಂಭವಾಯಿತು ಅವರ ಗುರು ಶಿಷ್ಯ ಸಂಬಂಧ.
ಶಿಲ್ಪಕಲಾ ಕ್ಷೇತ್ರ ಎಂಬುದು ಪುರುಷರಿಗೆ ಮಾತ್ರ ಮೀಸಲಾದದ್ದು, ಮಹಿಳೆಯರಿಗೆ ಪುರುಷ ಕ್ಷೇತ್ರದಲ್ಲಿ ಪ್ರವೇಶವಿರಲಿಲ್ಲ. ಆ ಕಾಲದ ಸಮಾಜ ಅದನ್ನು ಒಪ್ಪುವಂತಿರಲಿಲ್ಲ. ಕಲ್ಲಿನ ಜೊತೆಗಿನ ಒಡನಾಟ ಕೇವಲ ಗಂಡಸರಿಗೆ ಮಾತ್ರ, ಸೌಮ್ಯ ಮತ್ತು ಮೃದು ಸ್ವಭಾವದ ಹೆಣ್ಣಿಗೆ ಅದು ನಿಷಿದ್ಧ ಎಂಬ ಸಂಗತಿ ಆಚರಣೆಯಲ್ಲಿತ್ತು. ಆದರೆ ಕನಕಾರವರು ಅದನ್ನು ಸವಾಲಾಗಿ ಸ್ವೀಕರಿಸಿ ವಾದಿರಾಜರ ಬಳಿ ಶಿಷ್ಯವೃತ್ತಿ ಪಡೆದು ಸರಿ ಸುಮಾರು 25 ರಿಂದ 30 ವರ್ಷಗಳ ಕಾಲ ಅವರ ಬಳಿ ಶಿಲ್ಪ ರಚನಾಶೈಲಿಯನ್ನು ಅಧ್ಯಯನ ಮಾಡಿದರು. ಆದರೆ ಆಪ್ತರು ಸಮಾಜದವರು ಅವರನ್ನು ಟೀಕಿಸಿದ್ದು ಉಂಟು. ಕುಹಕವಾಡಿದ್ದು ಉಂಟು. ಹಾಗೆಂದು ಅವರು ಯಾವುದಕ್ಕೂ ಧೃತಿಗಿಡದೆ ಮದುವೆ ಮಗಳು ಆದರೂ ಕೂಡ ಅಭ್ಯಾಸ ನಿಲ್ಲಿಸಲಿಲ್ಲ. “ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ” ಎನ್ನುವಂತೆ, ಗುರುವಿನ ಮನೆಯ ಕೆಳಗಡೆ ಇದ್ದು ಪ್ರತಿನಿತ್ಯ ಅವರಿಗೆ ಸಹಾಯ ಮಾಡುತ್ತಾ ಶಿಲ್ಪ ಕಲೆಯ ಸೂಕ್ಷ್ಮತೆಯನ್ನು ಅರಿಯ ತೊಡಗಿದರು. ತಾಯಿಯ ಆರೈಕೆ, ಮಗಳ ಜವಾಬ್ದಾರಿ, ಕುಟುಂಬದ ನಿರ್ವಹಣೆ ಈ ಎಲ್ಲದರ ಮಧ್ಯೆ ತಮ್ಮಿಷ್ಟದ ಶಿಲೆಯ ಜೊತೆಗಿನ ಒಡನಾಟ ನಿಲ್ಲಿಸಲಿಲ್ಲ. “ಕಲಿಯುವಾಗ ಯಾವುದಕ್ಕೂ ಗಮನ ಕೊಡಬಾರದು, ಕಲಿತಮೇಲೆ ಯಾರು ಏನು ಅನ್ನುವುದಿಲ್ಲ” ಎಂಬ ಗುರು ವಾದಿರಾಜರ ಮಾತಿನಂತೆ, ಅತ್ಯಂತ ಶ್ರದ್ಧೆಯಿಂದ ಕಲಿಯುತ್ತಾ ಅವರ ನೆಚ್ಚಿನ ಶಿಷ್ಯರಲ್ಲಿ ಇವರು ಒಬ್ಬರಾದರು. ಗುರುಗಳೊಂದಿಗೆ ಅನೇಕ ಕಮ್ಮಟ ಶಿಬಿರಗಳಲ್ಲಿ ಭಾಗವಹಿಸುತ್ತಾ, ಅವರು ಕೊಟ್ಟ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ಪೂರೈಸುತ್ತಿದ್ದರು. ಮುಂದೆ ಕನಕಾ ಅವರು ಇಂಗ್ಲೆಂಡ್ ನಲ್ಲಿ ನಡೆದ ‘ಆರ್ಟ ಇನ್ ಆಕ್ಷನ್’
ಎಂಬ ಕಾರ್ಯಗಾರದಲ್ಲಿ ಭಾರತೀಯ ಪಾರಂಪರಿಕ ಕಲೆಯ ಪ್ರತಿನಿಧಿತ್ವವನ್ನು, ಶ್ರೀ ವಿಜಯ ಹಾಗರಗುಂಡಗಿ ಮತ್ತು ಶ್ರೀ ಡಾಂಬಿಕೇಶ್ವರ ಅವರೊಂದಿಗೆ ಹೊರಟು ನಿಂತಾಗ ಎಲ್ಲರ ಚಿತ್ತ ಅವರಡೆಗೆ ಸೆಳೆಯಿತು. ಆಗ ಕುಹಕವಾಡಿದವರು ಕೂಡ ನಿಬ್ಬೆರಗಾಗಿ ನೋಡಿದರು . ಮುಂದೆ ಅವರು ಹಿಂತಿರುಗಿ ನೋಡುವ ಪ್ರಮೇಯವೇ ಬರಲಿಲ್ಲ. ಶಿಲ್ಪಕಲಾ ಕ್ಷೇತ್ರದಲ್ಲಿ ತಮ್ಮ ಹೆಜ್ಜೆ ಗುರುತುಗಳನ್ನು ಮೂಡಿಸುತ್ತಾ ಮುನ್ನಡೆದರು.
ಅವರಿಗೆ ಹೊಯ್ಸಳ ಶೈಲಿ, ಚಾಲುಕ್ಯರ ಶೈಲಿ ಜೊತೆಗೆ ಭಾವಶಿಲ್ಪಗಳು ಅವರ ಅತ್ಯಂತ ಪ್ರೀತಿಯ ಪ್ರಕಾರಗಳಾಗಿದ್ದವು. ಶಿಲೆ, ಕಂಚು, ಮೇಣ, ಫೈಬರ್ ಗ್ಲಾಸ್ ಹೀಗೆ ಹಲವು ಮಾಧ್ಯಮಗಳಲ್ಲಿ ರಚನೆ ಮಾಡಿದರೂ ಕೂಡ ಅವರಿಗೆ ಇಷ್ಟವಾದ ಮಾಧ್ಯಮವೆಂದರೆ ಶಿಲೆಯೆನ್ನುತ್ತಾರೆ. ಕಲ್ಲು ಎಷ್ಟೇ ಪೆಡಸಾಗಿದ್ದರು ಕೂಡ, ಅವರ ಕೈಯಲ್ಲಿ ಅದು ಮೃದುವಾಗಿ, ಅದರೊಂದಿಗೆ ಸಂವಾದಿಸುತ್ತ, ಮಗುವಿನ ರೀತಿಯಲ್ಲಿ ಎತ್ತಿ ಆಡಿಸುತ್ತಾ, ಕಲ್ಲಿನ ನಾಡಿ ಮಿಡಿತವನ್ನು ಅರಿತು ಅದಕ್ಕೆ ರೂಪ ನೀಡುತ್ತಿದ್ದರು. ಭಾವ ಶಿಲ್ಪ ಮಾಡುವಾಗ ಆ ವ್ಯಕ್ತಿಯ ವ್ಯಕ್ತಿತ್ವ ಅವರ ಬರವಣಿಗೆ,ಸಾಧನೆ ಬಗ್ಗೆ ಏನೆಲ್ಲಾ ಮಾಹಿತಿ ತಿಳಿದು ಶಿಲ್ಪಕ್ಕೆ ಜೀವ ತುಂಬುತ್ತಿದ್ದರು. ಕುವೆಂಪು ರಚಿಸಿದ ಸಾಲುಗಳನ್ನು ಗುನುಗುತ್ತ ಅವರ ಮೂರ್ತಿ ಮಾಡಿದರೆ, ಗಂಗೂಬಾಯಿ ಹಾನಗಲ್ ಅವರ ಆಲಾಪವನ್ನು ಆಲಿಸುತ್ತಾ ಅವರ ಭಾವಶಿಲ್ಪ ರಚಿಸಿದ್ದಾಗಿ ಹೇಳುತ್ತಾರೆ. ಕಲ್ಲಿನ ಜೊತೆಗಿನ ಒಡನಾಟ ತಾಳ್ಮೆ ಸಹನೆಯನ್ನು ಬಯಸುತ್ತದೆ. ಕಾರಣ ಅದಕ್ಕೆ ಹೊರಗಿನಿಂದ ಏನು ಲೇಪನ ಮಾಡಲಿಕ್ಕೆ ಸಾಧ್ಯವಿಲ್ಲ, ಚಾಣದ ಒಂದು ತಪ್ಪು ಏಟಿನಿಂದ ಮೂರ್ತಿ ವಿಕಾರವಾಗುತ್ತದೆ. ಹಾಗಾಗಿ ಅವರ ಕಾಯಕ ಅದು ತಪಸ್ಸು ಮತ್ತು ಧ್ಯಾನವಿದ್ದಂತೆ.ಈ ಎಲ್ಲವನ್ನು ಅರಿತಿದ್ದು ಗುರುವಿನಿಂದ ಎಂದು ಮತ್ತೆ ಮತ್ತೆ ಗುರುವನ್ನು ಪ್ರತಿಯೊಂದು ಹಂತದಲ್ಲೂ ನೆನೆಯುತ್ತಾರೆ.
ಕನಕಾ ಅವರ ಗುರು ವಾದಿರಾಜರು ತೀರಿದ ನಂತರ ಅವರ ಅಪೂರ್ಣ ಕಲಾಕೃತಿಗಳೆಲ್ಲವನ್ನು ಇವರು ಯಾವುದೇ ಫಲಾಪೇಕ್ಷಗಳಿಲ್ಲದೆ ಪೂರ್ಣಗೊಳಿಸಿಕೊಟ್ಟರು. ಇದು ಅಲ್ಲವೇ ಗುರು ಶಿಷ್ಯ ಪರಂಪರೆ .ಗುರು ತೀರಿದ ನಂತರ ಕನಕಾ ಅವರು ಸ್ವತಂತ್ರವಾಗಿ ಕೆಲಸ ಮಾಡತೊಡಗಿದರು. ಅವರಿಗೆ ಇಷ್ಟವಾದ ಭಾವಶಿಲ್ಪಗಳನ್ನು ಹಲವಾರು ಮಾಡಿದರು.ಅನೇಕ ಸಂಘ ಸಂಸ್ಥೆಗಳಲ್ಲಿ ಇಂದು ಕೂಡ ಕಾಣಬಹುದು. ಉದಾ. ಕುವೆಂಪು, ಕಾರಂತ, ಗಂಗೂಬಾಯಿ ಹಾನಗಲ್, ವಿಶ್ವೇಶ್ವರಯ್ಯ ಮಲ್ಲಿಕಾರ್ಜುನ್ ಮನ್ಸೂರ್ ಹೀಗೆ ಹಲವು ಜನ ಸಾಧಕರ ವಿಶಿಷ್ಟ ಶಿಲ್ಪಗಳನ್ನು ಕಾಣಬಹುದು. ಹಲವು ಗಾತ್ರದ, ಅನೇಕ ಎತ್ತರದ ಗಣೇಶನನ್ನು ರಚಿಸಿ ಗೌರವಕ್ಕೆ ಪಾತ್ರರಾದರು. ಅವರ ಈ ತನ್ಮಯತೆಯ ಕಾರ್ಯವನ್ನು ಕಂಡು ಮಗಳು ಸುಮತಿ ಮುನಿಸಿಕೊಂಡದ್ದು ಉಂಟು. ಮಗಳಿಗಿಂತ ನಿನಗೆ ಶಿಲೆಯೇ ಹೆಚ್ಚು ಎಂದು. ಅವಳ ಆಲೋಚನಾ ಕ್ರಮ ಕೂಡ ಸ್ವಲ್ಪ ವಿಭಿನ್ನ. ಸಂಗೀತವನ್ನು ಬಾಲ್ಯದಿಂದಲೂ ಕಲಿತರು ಕೂಡ,ಏನೆಲ್ಲ ಸಂಗೀತ ಕಚೇರಿಯಲ್ಲಿ ತನ್ನ ಪ್ರತಿಭೆ ಪ್ರದರ್ಶಿಸಿದ್ದರು, ಸಂಗೀತ ವ್ಯಾಪಾರಕ್ಕಲ್ಲವೆಂದು ಹೇಳುವಳು. ಅವಳು ಸಮಾಜಮುಖಿಯಾಗಿ ಕಾರ್ಮಿಕರ ಪರವಾಗಿ ಕೆಲಸ ಮಾಡಿದರೆ, ಕನಕಾ ಅವರಿಗೆ ಇಷ್ಟವಾಗುತ್ತಿರಲಿಲ್ಲ. ಮಗಳು ಸಂಗೀತದಲ್ಲಿ ಸಾಧನೆ ಮಾಡಬೇಕೆಂಬ ಅಭಿಲಾಷೆ ಅವರದ್ದಾಗಿತ್ತು. ನಂತರ ಅವರು ತಮ್ಮ ನಿಲುವನ್ನು ಬದಲಾಯಿಸಿಕೊಂಡು ಮುಂದೆ ಮಗಳ ಜೊತೆ ತಾವು ಕೂಡ ಸಮಾಜಮುಖಿಯಾಗಿ ಅವಳೊಂದಿಗೆ ಕೆಲಸ ಮಾಡತೊಡಗಿದರು. ಇಬ್ಬರ ನಡುವೆ ಏನೆಲ್ಲ ವ್ಯತ್ಯಾಸವಿದ್ದರೂ ಕೂಡ ಒಳ್ಳೆಯ ಸ್ನೇಹಿತರಂತೆ ಜೊತೆಯಾಗಿದ್ದರು. ಅವರ ಬಾಳ ಸಂಗಾತಿ ಮೂರ್ತಿಯವರು ಕೂಡ ಕನಕಾ ಅವರ ಎಲ್ಲ ಕಾರ್ಯ ಚಟುವಟಿಕೆಗಳಿಗೆ ಬೆನ್ನೆಲುಬಾಗಿದ್ದರು ಎಂದು ಸ್ಮರಿಸಿಕೊಳ್ಳುತ್ತಾರೆ.
ಕನಕಾಮೂರ್ತಿ ಅವರ ಪ್ರತಿಭೆಯನ್ನು ಅರಸಿ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿದವು. ಅವುಗಳಲ್ಲಿ ಪ್ರಮುಖವಾಗಿ ರಾಜ್ಯೋತ್ಸವ ಪ್ರಶಸ್ತಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಪ್ರಶಸ್ತಿ, ಜಕಣಾಚಾರಿ ಪ್ರಶಸ್ತಿ ಹೀಗೆ ಹತ್ತು ಹಲವು. ಪುರುಷ ಕ್ಷೇತ್ರ ಎಂದು ಗುರುತಿಸಿಕೊಂಡ ವಿಭಾಗದಲ್ಲಿ ಮಹಿಳೆ ಕೂಡ ಸಾಧಿಸಬಹುದು ಎಂದು ತೋರಿಸಿಕೊಟ್ಟರು ಕನಕಾ ಮೂರ್ತಿಯವರು. ಕೃತಿಯುದ್ದಕ್ಕೂ ಹಲವಾರು ಬಾರಿ ಪ್ರಶ್ನಾರ್ಥಕ ಚಿಹ್ನೆ ಬಳಸುತ್ತಾರೆ. ಇದೆಲ್ಲವೂ ನನ್ನಿಂದ ಸಾಧ್ಯವಾಗಿದೆಯೇ, ಇವೆಲ್ಲವೂ ನಾನೇ ರಚಿಸಿರಬಹುದೆ ಎಂಬ ಉದ್ಘಾರ ಪದೇ ಪದೇ ಮಾಡುತ್ತಾರೆ. ತಮ್ಮ ಬದುಕನ್ನು ಬಿಚ್ಚಿಡುತ್ತಾ ಹೋಗುವಾಗ ಅನೇಕ ಚಿತ್ರಪಟಗಳನ್ನು ನೀಡಿದ್ದಾರೆ. ಅವರು ರಚಿಸಿದ ಹಲವು ಕಲಾಕೃತಿಗಳ ಚಿತ್ರವನ್ನು ಕಾಣಬಹುದು. ಆದರೆ ಕೆಲವು ಚಿತ್ರಗಳು ಹಿಂದು ಮುಂದಾಗಿ ಮೂಡಿಬಂದಿವೆ. ಒಟ್ಟಾರೆ ಕನಕಾಮೂರ್ತಿಯವರ ಆತ್ಮ ಚರಿತ್ರೆ ಸಾಧನೆ ಮಾಡುವ ಮಹಿಳೆಯರಿಗೆ ಸ್ಪೂರ್ತಿದಾಯಕ ಕೃತಿಯಾಗಿದೆ. ‘ಆಗದು’ ಎಂಬುದು ಯಾವುದು ಇರುವುದಿಲ್ಲ, ಕಲಿಯಬೇಕೆಂಬ ಮನಸಿದ್ದರೆ ಏನೆಲ್ಲ ಸಾಧ್ಯ ಎಂಬುದಕ್ಕೆ ಅವರ ಬದುಕೆ ಸಾಕ್ಷಿಯಾಗಿದೆ. ನಮ್ಮ ಪಾರಂಪರಿಕ ಕಲೆಯನ್ನು ಗಡಿಯಾಚೆ ಗುರುತಿಸುವಂತೆ ಮಾಡಿದ ಕೆಲವೇ ಕಲಾವಿದರಲ್ಲಿ ಕನಕಾ ಮೂರ್ತಿ ಅವರು ಕೂಡ ಒಬ್ಬರು. ಇಂದು ಅವರು ನಮ್ಮೊಂದಿಗೆ ಇಲ್ಲ, ಆದರೆ ಅವರ ಕಲಾಕೃತಿಗಳ ಮೂಲಕ ಅವರು ಅಜರಾಮರ.






0 Comments