ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪುಸ್ತಕ ಅಂಕಣ – ಕಣ್ಣೀರು, ಕಾವ್ಯ ಮತ್ತು ಕ್ರಾಂತಿ: ರೂಮಿ ಹರೀಶ್ ಬದುಕಿನ ಪುಟಗಳು

ಡಾ. ಶೈಲಜಾ ಎನ್ ಬಾಗೇವಾಡಿಯವರು ಮೂಲತಃ ಬಸವಣ್ಣನವರ ಜನ್ಮಸ್ಥಳ ಬಾಗೇವಾಡಿಯವರು.

ವಿಜಯಪುರದ ಬಿ.ಎಲ್.ಡಿ.ಈ. ಶಿಕ್ಷಣ ಸಂಸ್ಥೆಯ ಮಹಿಳಾ ಕಾಲೇಜಿನಲ್ಲಿ ಸ್ನಾತಕ, ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಎಸ್.ಎಲ್.ಭೈರಪ್ಪನವರ ಕಾದಂಬರಿಗಳ ವಸ್ತು ವಿನ್ಯಾಸ ಕುರಿತು ಪಿಎಚ್.ಡಿ ಅಧ್ಯಯನ ನಡೆಸಿದ್ದಾರೆ.೧೬ ಕೃತಿಗಳು ಪ್ರಕಟವಾಗಿವೆ.

ಪ್ರಸ್ತುತ ಕಲಬುರಗಿಯ ಸರಕಾರಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ದೀಗ ಅವಧಿಯ ಪುಸ್ತಕ ಅಂಕಣದೊಂದಿಗೆ ಬರುತ್ತಿದ್ದಾರೆ.

ಅಂಕಣ – 11

ಕೃತಿ –ರೂಮಿ ಹರೀಶ್ ಬದುಕಿನ ಪುಟಗಳು – ಜೋನ್ಪುರಿ ಖಯಾಲ್
ಸಂಯೋಜನೆ ಮತ್ತು ನಿರೂಪಣೆ – ದಾದಾಪೀರ್ ಜೈಮನ್
ಪ್ರಕಾಶಕರು – ಶ್ರೀ ಅನ್ನಪೂರ್ಣ ಪ್ರಕಾಶನ
ಬೆಲೆ – 165 ರೂ


ಈ ಕೃತಿಯನ್ನು ಸಂಯೋಜನೆ ಮಾಡಿ ನಿರೂಪಿಸಿದವರು ದಾದಾಪೀರ್ ಜೈಮನ್ ರವರು. ಇದೊಂದು ಆತ್ಮಕತೆಗಳಲ್ಲಿ ಭಿನ್ನ ಪ್ರಯೋಗ. ಇಲ್ಲಿ ಬಳಸಿದ ತಂತ್ರಗಾರಿಕೆ ಯನ್ನು ಗಮನಿಸಿದಾಗ ಗೊತ್ತಾಗುತ್ತದೆ. ಆರಂಭದಲ್ಲಿ ಕೆಲವು ಆಪ್ತ ಪಾತ್ರಗಳ ಪರಿಚಯ,ನಂತರ ಕಾವ್ಯದ ಮೂಲಕ ಅನುಸಂಧಾನ, ಸಂದರ್ಶನ,ಸಂಗೀತ, ಸಮುದಾಯದ ಕೇಸ್ ಗಳ ಬಗ್ಗೆ ವಿವರಣೆ, ಮತ್ತೆ ಕಾವ್ಯ ಮಾತುಕತೆ, ಕೊನೆಗೆ ಮನದಾಳದ ನುಡಿಗಳು ಹೀಗೆ ಒಬ್ಬ ವ್ಯಕ್ತಿಯ ಪರಿಪೂರ್ಣ ಚಿತ್ರಣವನ್ನು ನೀಡಲು ಲೇಖಕ ಬಳಸಿದ ವಿನೂತನ ಮಾದ್ಯಮ. ಹಾಗೆಂದು ರೂಮಿ ಹರೀಶ್ ಅವರನ್ನು ಸಂಪೂರ್ಣವಾಗಿ ಅಕ್ಷರಗಳಲ್ಲಿ ಕಟ್ಟಿಹಾಕಲು ಸಾಧ್ಯವಾಗಿಲ್ಲ ಎಂಬುದು ನನ್ನ ಭಾವ.

ರೂಮಿ ಹರೀಶ್ ಅವರು ಫೆಮಿನಿಸ್ಟ, ಕ್ವಿಯರ್ ಫೆಮಿನಿಸ್ಟ, ಆಕ್ಟಿವಿಸ್ಟ, ಕವಿ, ಕಲಾವಿದ, ಹಾಡುಗಾರ, ಅಂಕಣ ಬರಹಗಾರ ಜೊತೆಗೆ ರಂಗಭೂಮಿ ನಂಟು ಹೀಗೆ ಹತ್ತು ಹಲವು ಮುಖಗಳು. “ಸುಮತಿ” ಯಿಂದ” ರೂಮಿ ಹರೀಶ್” ಆಗುವ ಪಯಣ, ಅವರ ಅಂತರಂಗದ ತೊಳಲಾಟ, ಏನೆಲ್ಲಾ ಹಳವಂಡಗಳು, ಸಮಾಜವನ್ನು ಎದುರಿಸುವ ಹಾಗೂ ನಿಭಾಯಿಸುವ ಒದ್ದಾಟ ಎಲ್ಲವೂ ನಿರೂಪಕ ಸಾದ್ಯಂತವಾಗಿ ಚಿತ್ರಿಸಿದ್ದಾರೆ.

ಹೆಣ್ಣು ಗಂಡಾಗುವ,ಗಂಡು ಹೆಣ್ಣಾಗುವ ಪರಿ ಇಂದು ನಿನ್ನೆಯದಲ್ಲ.ನಮ್ಮ ಪುರಾಣದಲ್ಲಿ ಚಿತ್ರಿಸಿದ ಶಿವಪಾರ್ವತಿ ಪರಿಕಲ್ಪನೆಯನ್ನು ಗಮನಿಸಿದಾಗ ಪ್ರತಿಯೊಂದು ಜೀವಿಯಲ್ಲಿ ಎರಡೂ ಅಂಶಗಳು ಮೇಳೈಸಿರುತ್ತವೆ.ಹಾಗಾಗಿ ಶರಣರು ಹೇಳುವ ಹಾಗೆ ” ನಡುವೆ ಸುಳಿವ ಆತ್ಮ ಹೆಣ್ಣು ಅಲ್ಲ,ಗಂಡು ಅಲ್ಲ”.
ಆದರೆ ನಮ್ಮ ಸಾಮಾಜಿಕ ವ್ಯವಸ್ಥೆ ಗಂಡು ಹೆಣ್ಣಿನ ಗುಣಸ್ವಭಾವಗಳನ್ನು ಹೀಗೆ ಎಂದು ಹೇರಲ್ಪಟ್ಟಿವೆ.ಹಾಗಾಗಿ ತೃತೀಯ ಲಿಂಗಿಗಳ ಬಗ್ಗೆ ನೋಡುವ ದೃಷ್ಟಿಕೋನ ಇಂದಿಗೂ ಭಿನ್ನವಾಗಿದೆ.

ಇತ್ತೀಚಿನ ದಿನಗಳಲ್ಲಿ ಹಲವಾರು ಲಿಂಗತ್ವದ ಅರಿವುಳ್ಳವರು ತಮ್ಮ ಬದುಕನ್ನು ದಾಖಲಿಸಿ ಜನರಲ್ಲಿ ಅವರ ಬಗ್ಗೆ ಅರಿವು ಮೂಡಿಸಿದ್ದಾರೆ. ಅವರಲ್ಲಿ ಅಕ್ಕಯ್ ಪದ್ಮಸಾಲಿ, ಎ.ರೇವತಿ, ಲಿವಿಂಗ್‌ ಸ್ಮೈಲ್ ವಿದ್ಯಾ ..ಹೀಗೆ ಕೆಲವು ಪ್ರಮುಖರು. ಆದರೆ ಇವರೆಲ್ಲ ಗಂಡಿಂದ ಹೆಣ್ಣದ ಪರಿ ಬಗ್ಗೆ ದಾಖಲಿಸಿದರೆ ಇಲ್ಲಿ ಸುಮತಿ- ರೂಮಿ ಆಗುವ ಅಂದರೆ ಹೆಣ್ಣು ಗಂಡಾದ ಬಗ್ಗೆ ಬರೆದ ಮೊದಲ ಆತ್ಮಕಥೆ ಎನ್ನಬಹುದು.

ರೂಮಿ ಅವರ ಬಾಲ್ಯ ಎಲ್ಲರಂತೆ ಸಾಮಾನ್ಯವಾಗಿ ಕಂಡರು ಕೂಡ, ಸಾಮರಸ್ಯ ಇಲ್ಲದ ದಂಪತಿಗಳ ಏಕಮಾತ್ರ ಪುತ್ರಿ.ಮೇಲಾಗಿ ತಾಯಿ ಕನಕಾಮೂರ್ತಿ ಅವರು ದೊಡ್ಡ ಶಿಲ್ಪಕಲಾವಿದರು. ಕಲ್ಲಿಗೆ ರೂಪಕೊಡುವಲ್ಲಿ ಯಶ ಕಂಡು ಹೆಸರು ಮಾಡಿದವರು. ಅಂತರಾಷ್ಟ್ರೀಯ ಕಲಾವಿದರು ಎಂದು ಹೆಸರು ಮಾಡಿದವರು , ಆದರೆ ಮಗಳಿಗೆ ರೂಪ ಕೊಡಲು ಸಾದ್ಯವಾಗದೆ ಹೋದರು ಎಂಬ ಪ್ರಶ್ನೆ ಕಾಡುವುದು.ತಾಯಿ ಮಗಳ ಇಬ್ಬರ ಒಡನಾಟ ಭಿನ್ನ. ತನ್ನ ಸಾಧನೆಗೆ ಮಗಳ ಅಸ್ತಿತ್ವ ಅಡ್ಡಿ ಎಂಬ ಭಾವ,ಹಾಗೆಂದು ಮಗಳನ್ನು ಬಿಟ್ಟುಕೊಡದೆ ಕೊನೆವರೆಗೆ ಸಾತ್ ನೀಡಿದ ಗಟ್ಟಿಗಿತ್ತಿ.ಇನ್ನು ತಂದೆಯ ಪಾತ್ರ ತೆರೆಯ ಹಿಂದೆ ಬರುವ,ಏನೂ ಮಾತಾಡದ ಜೀವ. ಇಂದಿಗೂ ಅವರು ರೂಮಿ ಆಶ್ರಯದಲ್ಲಿ ಇದ್ದಾರೆ.ಇನ್ನು ವಾದಿರಾಜ ಮಾಮ ,ನಾಯಕ್ ಸಂಗೀತ ಗುರುಗಳು ಅವರ ಮೇಲೆ ಪ್ರಭಾವ ಬೀರಿದ ಪ್ರಮುಖ ವ್ಯಕ್ತಿಗಳು. ಸಂಗೀತವನ್ನೇ ಆಶ್ರಯಿಸಲು ಹೇಳಿದ ತಾಯಿ, ಮಗಳ ಆಸಕ್ತಿಯನ್ನು ಕೇಳಲಿಲ್ಲ.ಸಂಗೀತದ ಜೊತೆಗೆ ಪದವಿ ಪೂರೈಸಿದರು. ಆದರೆ ಮುಂದೆ ಲೈಂಗಿಕ ಅಸ್ಮಿತೆ ಗಾಗಿ ಸಾಕಷ್ಟು ಸಂಕಟಗಳಿಗೆ ತಲೆಕೊಡಬೇಕಾಯಿತು.

ಸಮುದಾಯದ ಜೊತೆಗೆ ಗುರುತಿಸಿಕೊಂಡು ಕೆಲಸ ಮಾಡತೊಡಗಿದರು. ಅವರಿಗಾಗಿ ಜೀವನ ಮುಡಿಪಾಗಿಟ್ಟರು. ಸುನಿಲ್ ಅವರು ಸಹಚರರಾಗಿ ಸಾತ್ ನೀಡಿದರೆ,ಫೆಮಿಲಾ, ಕಾಜಲ,ಉಮಾ ಅವರ ಜೊತೆಯಾಗಿ ಟ್ರಾನ್ಸ್ ಜಂಡರ್ ಕುರಿತು ಕೆಲಸ ಮಾಡುತ್ತ, ಅರಿವು ಮೂಡಿಸುತ್ತಾ ಬಂದಿದ್ದಾರೆ. ಬರಹ,ಸಂಗೀತ, ಚಿತ್ರ ಬಿಡಿಸುತ್ತ, ನಿರ್ದೇಶನ ಮಾಡುತ್ತ ಸಮಾಜಮುಖಿಯಾಗಿ ತೊಡಗಿಸಿಕೊಂಡ ರೂಮಿ ಅವರದ್ದು ಹಲವು ಮುಖಗಳು. ಅವರ ಕೃತಿಯ ಶೀರ್ಷಿಕೆಯಲ್ಲಿಯೆ ಅವರನ್ನು ಅರಿಯಬಹುದು. ರೂಮಿ ಎಂಬ ಸೂಫಿ ಕವಿ,ಜೋನ್ಪುರಿ ಎಂಬ ಸಂಗೀತದ ಮಟ್ಟು ಕೂಡಿದ ವ್ಯಕ್ತಿತ್ವ ಅವರದ್ದು.
ಒಟ್ಟಾರೆ ಅವರ ಬದುಕು ಬರಹ ಗಮನಿಸಿದಾಗ ಯಾರಿಗೂ ದಕ್ಕದ ವಿಕ್ಷಿಪ್ತ ಪಾತ್ರ ಅವರದ್ದು. ಅದರಲ್ಲೂ ಅವರ ಬದುಕಿನಲ್ಲಿನ ಕೆಲವು ಪಾತ್ರಗಳ ವಿವರಣೆ, ಸಂಬಂಧಗಳು ನಮ್ಮ ಗ್ರಹಿಕೆಗೆ ದಕ್ಕುವುದಿಲ್ಲ. ಕೃತಿಯಲ್ಲಿ ಬರುವ ಹಲವು ಲಿಂಗ ಸೂಕ್ಷ್ಮ ಪದಗಳು,ಅದರ ವಿವರಣೆ ಓದುಗನಿಗೆ ತಿಳಿಯದೆ ಗಲಿಬಿಲಿ ಆಗುವುದು ಸಹಜ. ಟ್ರಾನ್ಸ್ ಜೆಂಡರ್ ಬಗ್ಗೆ ಏನೆಲ್ಲಾ ಹೇಳಿದ್ದಾರೆ. ಆದರೆ ಅದು ಎಲ್ಲರಿಗೂ ದಕ್ಕುವುದಿಲ್ಲ.

ಇಡೀ ಕೃತಿಯಲ್ಲಿ ಕಾಡುವ ಸಂಗತಿ ಅಂದರೆ ರೂಮಿ ಅವರು ಬರೆದ ಸಾಲುಗಳು “ಕೋವಿಡ್ ಕಾಲದ ತಲ್ಲಣಗಳು” – ‘ಕಣ್ಣೀರಿಗೆ ಕನಸಲ್ಲದೆ ಮತ್ಯಾವುದರ ಹಿತವಿದೆ ಹೇಳಿ’ …….
‘ನನಗೆ ಸಾಯುವ ಭಯವಿಲ್ಲ,
ಅಮ್ಮನ ಸುಟ್ಟಮೇಲೆ
ಅಮ್ಮ ಹೋದಮೇಲೆ
ಅರ್ಥವಾದಂತೆ
ನಿತ್ಯದ ಸಾವೇ ಕಷ್ಟ
ಈಗೀಗ,ನನಗೆ ಸಾವಿನ ಭಯವಿಲ್ಲ’…….
ಹೀಗೆ ಸತ್ವಪೂರ್ಣ, ರಸಘಟ್ಟಿಯಾದಂತ ಸಾಲುಗಳು ಮತ್ತೆ ಮತ್ತೆ ಮೆಲುಕು ಹಾಕುವಂತೆ ಮಾಡುತ್ತವೆ. ಎಲ್ಲರನ್ನೂ, ಎಲ್ಲವನ್ನೂ ಮೀರಿದ ರೂಮಿ ಹರೀಶ್ ರವರ ಖಯಾಲ್ ಗೆ ನಮನಗಳು. ಟ್ರಾನ್ಸ್ ಜೆಂಡರ್ ನಲ್ಲಿಯೇ ವಿಶೇಷ ವ್ಯಕ್ತಿತ್ವ ಉಳ್ಳವರು. ಇವರಿಗೆ ಸಾಹಿತ್ಯ ಅಕಾಡೆಮಿಯಿಂದ ಸಾಹಿತ್ಯ ಶ್ರೀ ಪ್ರಶಸ್ತಿ ಕೂಡ ಲಭಿಸಿದೆ.

‍ಲೇಖಕರು Admin

22 July, 2026

ನಿಮಗೆ ಇವೂ ಇಷ್ಟವಾಗಬಹುದು…

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading