ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆಸೆಗೊಂದು ಅರ್ಥ: ಜಯಶ್ರೀನಿವಾಸ ರಾವ್ ಅವರ ಕಾವ್ಯಪ್ರಯೋಗಗಳು

ಜಯಶ್ರೀನಿವಾಸ ರಾವ್ ಅವರ ಕವನ ಸಂಕಲನ ‘ಬುಧವಾರದ ಅತಿಥಿ’

ಮಿಂಚುಳ್ಳಿ ಪ್ರಕಾಶನ ಈ ಕೃತಿಯನ್ನು ಪ್ರಕಟಿಸಿದೆ.

ಖ್ಯಾತ ಕವಿ ಹಾಗೂ ಅನುವಾದಕರಾದ ಕಮಲಾಕರ ಕಡವೆ ಅವರು ಬರೆದ ಮುನ್ನುಡಿ ಇಲ್ಲಿದೆ.

-ಕಮಲಾಕರ ಕಡವೆ

ಆಸೆಗೊಂದು ಅರ್ಥ ಬೇಡವಾ? ಎನ್ನುತ್ತದೆ ಜಯಶ್ರೀನಿವಾಸ ರಾವ್ ಅವರ “ಹೀಗೊಂದು ಆಸೆ” ಕವನದ ಕೊನೆಯ ಸಾಲು. ಹೌದು; ಅರ್ಥದ ಆಸೆ ನಮ್ಮ ಪ್ರೇರಕ ಶಕ್ತಿ – ಅದರಲ್ಲೂ ಓದು ಬರಹಗಳ ಸಂದರ್ಭದಲ್ಲಿ ಅನಿವಾರ್ಯ. ಜಾಹೀರಾತು ಇರಬಹುದು, ಉದ್ಗ್ರಂಥ ಇರಬಹುದು, ಸುದ್ದಿಪತ್ರಿಕೆ, ಪತ್ರ, ಸಂದೇಶ, ಪಠ್ಯಪುಸ್ತಕ ಹೀಗೆ ಏನೇ ಬರವಣಿಗೆ ಇದ್ದರೂ ಅರ್ಥವೇ ಮುನ್ನೆಲೆಯಲ್ಲಿ ಇರುತ್ತದೆ. ಬಹುಪಾಲು ಕಾವ್ಯದಲ್ಲಿಯೂ ಅರ್ಥಕ್ಕೇ ಆಚಾರ್ಯಸ್ಥಾನ. ಆದರೂ ಕವಿತೆಯ ಕೆಲವು ಮಾದರಿಗಳು ಮಾತ್ರ ಇದಕ್ಕೆ ಅಪವಾದ. ಅಲ್ಲಿ ಅರ್ಥಕ್ಕೆ ಸ್ಥಾನವಿದ್ದರೂ, ಅದು ಹಿನ್ನೆಲೆಗೆ ಹೋಗುತ್ತದೆ; ಅರ್ಥ ಅಮುಖ್ಯವಾಗಿ, ಭಾವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಕೆಲವೊಮ್ಮೆ, ಈ ಮಾದರಿಯ ಕವಿತೆಯಲ್ಲಿ ಭಾವ, ಚಾತುರ್ಯ, ನಾಟಕೀಯತೆ, ಪ್ರಯೋಗಶೀಲತೆ ಹೀಗೆ ಬೇರೆಬೇರೆ ಅಂಶಗಳು ಮುನ್ನೆಲೆಗೆ ಬಂದು, ಅರ್ಥ ಬ್ಯಾಕ್ ಸೀಟ್ ತೆಗೆದುಕೊಳ್ಳುತ್ತದೆ. ಬೇಂದ್ರೆ ಅಜ್ಜ ಸುಮ್ಮನೆ ಹೇಳಿದ್ದಾ: “ಅರ್ಥವಿಲ್ಲ ಸ್ವಾರ್ಥವಿಲ್ಲ ಬರಿಯ ಭಾವಗೀತಾ” ಎಂದು?

ಇದಕ್ಕೆ ಉದಾಹರಣೆಯಾಗಿ ಏ. ಕೆ. ರಾಮಾನುಜನ್ನರ ಕಾವ್ಯ ನಿರ್ಮಿತಿಯನ್ನು ನೆನಪಿಸಿಕೊಳ್ಳಬಹುದು. ಅಮುಖ್ಯವಲ್ಲದಿದ್ದರೂ, ಅರ್ಥ ಅವರ ಕವನದಲ್ಲಿ ಚಾತುರ್ಯದ ಹಾಗೆ ಒಂದು ಅಂಶ. ಚಾತುರ್ಯದ ಬಗೆಬಗೆಯ ಸಾಧ್ಯತೆಯನ್ನು ಪದ, ಸಾಲು, ಧ್ವನಿ, ಚಿತ್ರ ಈ ಎಲ್ಲ ಸ್ತರದಲ್ಲಿ ಶೋಧಿಸುವ ರಾಮಾನುಜನ್ನರ ಶೈಲಿ ವಿಶಿಷ್ಟ. ಕೆ. ವಿ. ತಿರುಮಲೇಶ್ ಇಂತಹ ಪ್ರಯೋಗಗಳನ್ನು ಮುಂದುವರಿಸಿದರು. ಅವರ “ಅವಧಿ” ಸಂಕಲನದಲ್ಲಿ ವೈವಿಧ್ಯಮಯ ಕಾವ್ಯ ಪ್ರಯೋಗಗಳಿವೆ. ಈ ಪ್ರಯೋಗಗಳು ಭಾಷೆ ಹಾಗೂ ವಿಚಾರಗಳ ಸ್ತರದಲ್ಲಿ ಓದುಗನನ್ನು ಸೆಳೆಯುವುದಷ್ಟೇ ಅಲ್ಲ, ಕ್ರಿಯಾತ್ಮಕ ಭಾಗವಹಿಸುವಿಕೆಯತ್ತ ಆಮಂತ್ರಿಸುತ್ತವೆ. ‘ಹಗುರಾರ್ಥ’ದ ಕಾವ್ಯ ಮಾದರಿ (ಹಾಸ್ಯದ ಮಾದರಿಯಲ್ಲ) ನಮ್ಮಲ್ಲಿ ಅಪರೂಪವೇ ಹೌದು. ಅರ್ಥ ಮುನ್ನೆಲೆಯಲ್ಲಿರುವ ಕಾವ್ಯ ಓದುಗರ ಸಕ್ರಿಯ ಭಾಗವಹಿಸುವಿಕೆಗಾಗಿ ಒತ್ತಾಯಿಸುವುದಿಲ್ಲ. ಕವಿತೆಯ ಓದು ಅರ್ಥವನ್ನು ಹುಡುಕಿ ಪಡೆದುಕೊಳ್ಳುವ ಪ್ರಕ್ರಿಯೆ ಮಾತ್ರವಾಗುತ್ತದೆ. ಅರ್ಥ ಹಿನ್ನೆಲೆಗೆ ಸರಿದಾಗ ಓದುಗನ ಪ್ರತಿಸ್ಪಂದನೆ ಕ್ರಿಯಾತ್ಮಕವಾಗುತ್ತದೆ – ಸಕ್ರಿಯವಾಗಿ ಯೋಚಿಸಲು, ‘ಮಾಡಲು’ ಹಚ್ಚುತ್ತದೆ.

ಜಯಶ್ರೀನಿವಾಸ ರಾವ್ ಅವರ “ಬುಧವಾರದ ಅತಿಥಿ” ಸಂಕಲನದ ಪ್ರತಿಯೊಂದು ಕವನವೂ ಈ ಮಾದರಿಯವು. ಕವಿ ಏನು ಹೇಳುತ್ತಿದ್ದಾರೆ ಎಂದು ಮಾತ್ರ ಯೋಚಿಸುವ ಬದಲು, ಏನೇನು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ ಎಂದು ನಾವು ಯೋಚಿಸುವಂತೆ ಮಾಡುವ ಕವಿತೆಗಳು ನಮಗಿಲ್ಲಿ ಕಾಣುತ್ತವೆ. ಹಾಗೆ ನೋಡಿದರೆ, ಇದೊಂದು ಜನಪ್ರಿಯ ಕಾವ್ಯಮಾದರಿಯಲ್ಲ ಎಂದೇ ಹೇಳಬೇಕು. ಹಾಗಾಗಿ, ಇದು ರಿಸ್ಕಿ ಕೂಡ ಹೌದು – ಯಾಕೆಂದರೆ ಓದುಗರಿಗೆ ಅರ್ಥಗ್ರಹಣೆಯ ಅಭ್ಯಾಸ ಇರುವುದರಿಂದ, ಪ್ರಯೋಗಾತ್ಮಕ ಕವಿತೆಗಳನ್ನು ನಿರ್ಲಕ್ಷಿಸಲೂ ಬಹುದು. ಈ ರಿಸ್ಕನ್ನು ಎದುರಿಸುವ ಧೈರ್ಯ ಮಾಡಿರುವುದು, ಯಾವುದೇ ರಿಯಾಯತಿ ತೋರದೇ ಈ ಮಾರ್ಗದಲ್ಲಿಯೇ ಸಾಗುವ ಹಠ ಹಿಡಿದು ಹೊರಟಿರುವುದು ಜಯಶ್ರೀನಿವಾಸ ರಾವ್ ಅವರ ಕಾವ್ಯಶ್ರಮದ ವಿಶೇಷತೆಯಾಗಿದೆ.

“ಬುಧವಾರದ ಅತಿಥಿ” ಸಂಕಲನದ ಪ್ರತಿಯೊಂದು ಕವನವೂ ಪ್ರಯೋಗಾತ್ಮಕ ಕಾವ್ಯ ಮಾದರಿಯಲ್ಲಿದೆ. ಇಲ್ಲಿನ ಯಾವ ಕವನವೂ ಭಾವಾಭಿವ್ಯಕ್ತಿ, ವಿಚಾರ ಪ್ರಸ್ತುತಿ, ಸಾಮಾಜಿಕ/ರಾಜಕೀಯ ವಿಮರ್ಶೆಗಳಲ್ಲಿ ನೇರವಾಗಿ ತೊಡಗಿಕೊಳ್ಳುವುದಿಲ್ಲ. ಅದು ಅವರ ಕವನಗಳ ಮಹತ್ವವನ್ನೇನೂ ಕಡಿಮೆ ಮಾಡುವುದಿಲ್ಲ. ಅವರ ರಚನಾಕ್ರಮದ ವಿಶಿಷ್ಟತೆ ವಿಷಯದ ಆಯ್ಕೆಯಿಂದಲೇ ಆರಂಭವಾಗುತ್ತದೆ. ಇದನ್ನು ನಾನು ಅಪ್ರತಿಷ್ಠಿತ ವಿಷಯಗಳ ಆಯ್ಕೆ ಎಂದು ಹೆಸರಿಸ ಬಯಸುತ್ತೇನೆ. ಅಂದರೆ, ಜಯಶ್ರೀನಿವಾಸ ರಾವ್ ಎತ್ತಿಕೊಳ್ಳುವ ವಿಷಯಗಳು ಸಾಧಾರಣ ಎಂದಲ್ಲ – ಸಾಧಾರಣತೆ ಕಾವ್ಯವಸ್ತುವಾಗಿ ಶತಕಗಳೇ ಕಳೆದಿವೆ. ದೈನಂದಿನ ಸಾಧಾರಣ ವಸ್ತುಗಳನ್ನು ಅಸಾಧಾರಣತೆಯತ್ತ ಎತ್ತುವ ಪ್ರಯತ್ನ ಮಾಡದೇ ಇರುವುದು ಅವರ ವಿಶೇಷ. ಉದಾಹರಣೆಗೆ, ಅವರು ಬಸವನಹುಳುವಿನ ಕುರಿತಾಗಿ ಮೂರು ಕವನಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಅವರು ಬಸವನಹುಳವನ್ನು ಸಾಂಕೇತಿಕ, ರೂಪಕಾತ್ಮಕ ಸಾಧ್ಯತೆಗಳ ಮೂಲಕ ಯಾವೊಂದು ತಾತ್ವಿಕತೆ, ಕಾಣ್ಕೆ ಒದಗಿಸುವ ವಸ್ತುವಾಗಿ ನೋಡುವುದಿಲ್ಲ. ಇದು ಅವರ ಕಾವ್ಯದಲ್ಲಿರುವ ಹಗುರಾರ್ಥದ ಒಂದು ಮುಖ್ಯ ರೀತಿ.

ವಿವರಗಳನ್ನು ಪೇರಿಸುತ್ತಾ ಹೋಗುವುದು, ಆ ವಿವರಗಳ ಪ್ರಸ್ತುತಿಯಲ್ಲಿ ಅಥವಾ ಪರಸ್ಪರ ಹೋಲಿಕೆಯಲ್ಲಿ, ಅಥವಾ ನಡುವೆಯೋ, ಕೊನೆಯಲ್ಲೋ ಚಾತುರ್ಯವನ್ನು ಒದಗಿಸುವ ಮೂಲಕ ಕವಿತೆಯನ್ನು ಆಕರ್ಷಕವಾಗಿಸುವ ಕ್ರಮವನ್ನು ಜಯಶ್ರೀನಿವಾಸ್ ರಾವ್ ಸಾಮಾನ್ಯವಾಗಿ ಬಳಸುತ್ತಾರೆ. ಅವರ ಕವಿತೆಗಳು ಯಾವುದೇ ಬಗೆಯ ಭಾವತೀವ್ರ ಅಭಿವ್ಯಕ್ತಿಗಳಲ್ಲ; ಹಾಗೆಯೇ ಘನಗಂಭೀರ ಅಭಿಪ್ರಾಯದ ಪ್ರಸ್ತುತಿಯೂ ಅಲ್ಲ; ತೀರಾ ವೈಯಕ್ತಿಕ ಅಭಿವ್ಯಕ್ತಿ ಪ್ರಕಾರವೂ ಅಲ್ಲ. ಒಂದು ಬಗೆಯ ನಿರ್ಭಾವುಕತೆ ಹಾಗೂ ನಿರ್ಗಾಂಭೀರ್ಯ ಈ ಕವಿತೆಗಳ ಸ್ಥಾಯಿ ಸ್ಥಿತಿ. ಹಾಗಾಗಿಯೇ, ಅವರ ಕಾವ್ಯಕ್ಕೆ ಓದುಗರನ್ನು ತಿದ್ದುವ, ಬದಲಾಯಿಸುವ, ಮೂವ್ ಮಾಡುವ – ಇತ್ಯಾದಿ ಉದ್ದೇಶಗಳಿಲ್ಲ. ಬೋಧನೆಯ ಭಾರ ಇಲ್ಲದೇ ಇರುವುದು ಅವರ ಕಾವ್ಯದ ಬಹುಮುಖ್ಯ ಲಕ್ಷಣ ಹಾಗೂ ಗುಣ.

ಜಯಶ್ರೀನಿವಾಸ ರಾವ್ ಅವರ ಕವಿತೆಗಳ ಪ್ರಧಾನ ಕ್ರಮವೆಂದರೆ ತೀವ್ರವಾದ, ಏಕಾಗ್ರವಾದ ಗಮನ. ಈ ಗಮನದ ತೀವ್ರತೆಯಿಂದಾಗಿಯೇ ವಸ್ತುವಿಶಿಷ್ಟತೆ ಇಲ್ಲದೆಯೇ ಅವರು ಕವನ ಬರೆಯಬಲ್ಲರು. ಯಾವುದನ್ನೇ ಆಗಲಿ ಅತ್ಯಂತ ಶ್ರದ್ಧೆಯಿಂದ, ಪ್ರೀತಿಯಿಂದ, ತೀವ್ರತೆಯಿಂದ ಕೈಗೊಂಡರೆ, ಜಗತ್ತೂ ಸಹ ಅದರಲ್ಲಿ ಆಸಕ್ತಿ ತೋರುತ್ತೆ ಎನ್ನುವ ತತ್ವವನ್ನು ಅವರ ಕಾವ್ಯಕ್ರಮ ನಂಬಿದೆ ಅನಿಸುತ್ತದೆ. ತಾವು ಎತ್ತಿಕೊಂಡ ವಸ್ತು – ಅದು ಹುಳವಿರಬಹುದು, ಪಾತ್ರೆ ತೊಳೆಯುವ, ಬಟ್ಟೆ ಒಣಗಿಸುವ, ನಾಯಿ ಓಡಾಡಿಸುವ ದೈನಂದಿನ ಕೆಲಸಗಳಿರಬಹುದು, ಮೆಟ್ಟು, ಓತಿಕೇತ, ಇಟ್ಟಿಗೆ ಮಾರುವಾತ ಹೀಗೆ ಏನೇ ಇರಲಿ – ಕವಿ ತುಂಬಾ ಆಸಕ್ತಿಯಿಂದ, ಜಾಗ್ರತೆಯಿಂದ, ಗಮನಿಸಿ, ದಟ್ಟ ವಿವರಗಳೊಡನೆ ವರ್ಣಿಸುತ್ತಾರೆ. ಇದು ಹೊರಗಿನ ಲೋಕವನ್ನು ಮಾತ್ರವಲ್ಲ, ಭಾಷೆಯ ಒಳಗಿನ ಸೂಕ್ಷ್ಮ ಪ್ರತಿಧ್ವನಿಗಳನ್ನೂ ಆಲಿಸುವಂತಹ ಗಮನ – “ಅನುರಣನ” ಗಮನಿಸಿ. ಇಲ್ಲಿ ಆತುರವಿಲ್ಲ, ಹಠವಿಲ್ಲ, ಸೊಕ್ಕು ಇಲ್ಲ. ಹಾಗಾಗಿಯೇ ಘೋಷಣೆಯ ಬದಲು ತಾಳ್ಮೆ, ಮೌನ, ಸರಳ ಸಹಜತೆಗಳ ಮೂಲಕ ರೂಪಿಸಿದ ನೋಟವಿದೆ. ಅನುಭವವನ್ನು ಅಧೀನಕ್ಕೆ ತರುವುದು ಇದರ ಉದ್ದೇಶವಲ್ಲ; ತೀವ್ರ ಗಮನದ ಮೂಲಕ ಆಯ್ದ ವಸ್ತು–ಅನುಭವದೊಳಗೆ ನೆಲೆಸುವುದು: ಇದೇ ಇವರ ಕಾವ್ಯಧರ್ಮ.

ಜಯಶ್ರೀನಿವಾಸ ರಾವ್ ಅವರ ಈ ಕವಿತೆಗಳಲ್ಲಿ ಆಪ್ತ ಸಂವಾದದ ಧ್ವನಿ ಇದೆ. ಸಹಜ ಸಂಭಾಷಣೆಯ ಧಾಟಿಯಿಂದಾಗಿ ಕವನಗಳು ಒಂದು ಬಗೆಯ ಅನೌಪಚಾರಿಕ, ಸ್ನೇಹಮಯಿ ಸನ್ನಿವೇಶವನ್ನು ಸೃಜಿಸುತ್ತವೆ. ನಿರೂಪಕ, ಪದೇ ಪದೇ ಓದುಗರನ್ನು ಉದ್ದೇಶಿಸುತ್ತಾರೆ; ಕವಿತೆಯ ಚಿಂತನಾ ಕ್ರಮದೊಳಗೆ ಓದುಗರನ್ನು ಆಹ್ವಾನಿಸುತ್ತಾರೆ. ಓದುಗನ ಜೊತೆ ಮಾತ್ರ ಅಲ್ಲ, ಕವಿತೆಯ ವಸ್ತುವಿನ ಜೊತೆಯೂ ಸಂಭಾಷಣೆ ನಡೆಸುತ್ತಾನೆ ನಿರೂಪಕ. ಕೆಲವೊಮ್ಮೆ ಕವಿತೆಗಳಲ್ಲಿ ಸಂಭಾಷಣೆಯೇ ಸರ್ವವೂ ಆಗಿ, ಏನೂ ಘಟಿಸದ ನಿರುದ್ದಿಶ್ಯ ಕ್ರಮ ಇರುತ್ತದೆ. “ಕಂಬಳಿ ಹುಳ” ಕವಿತೆಯಲ್ಲಿ, ಕಂಬಳಿ ಹುಳ ಚಿಟ್ಟೆಯಾಗುವುದ ಕಾಯುತ್ತಾ ಕೂರುತ್ತಾನೆ ನಿರೂಪಕ. “ಬಸವನಹುಳು” ಸರಣಿಯಲ್ಲಿ ನಿರೂಪಕ ನಿರುದ್ದಿಶ್ಯವಾಗಿ ಬಸವನಹುಳುವಿಗಾಗಿ ಕಾಯುತ್ತಾನೆ. ಅದರೊಂದಿಗೆ ಸಂವಾದ ನಡೆಸುತ್ತಾನೆ.

“ಉದುರಾಟ” ಕವನ ಈ ನಿರುದ್ದೇಶದ ಕ್ರಮಕ್ಕೆ ಒಂದು ಉದಾಹರಣೆ. ಅಷ್ಟೇ ಅಲ್ಲ, ಒಂದು ಸ್ತರದಲ್ಲಿ ಈ ಕವಿತೆ ಸರ್ರಿಯಲ್ – ಅತಿವಾಸ್ತವ – ಆಗಿಬಿಡುತ್ತದೆ. “ಭೂಮಿಯ ಮುಷ್ಟಿ” ಎನ್ನುವ ಕವಿತೆಯಲ್ಲೂ ನೆರಳು ನೆಲದಿಂದೆದ್ದು ಬೀಳುತ್ತಿದ್ದ ನಿರೂಪಕನನ್ನು ಸಾವರಿಸುವ ಅತಿವಾಸ್ತವ ಚಿತ್ರಣ ಬರುತ್ತದೆ. “ಅನುರಣನ” ಕವಿತೆ ಆ ಶಬ್ದದ ಕುರಿತಾಗಿಯೇ ಇದೆ. ಹೀಗೆ, ಒಂದು ಶಬ್ದದ ಕುರಿತಾಗಿ ಅಥವಾ ಶೀರ್ಷಿಕೆಯಲ್ಲಿ ಬರುವ ಶಬ್ದವನ್ನೇ ಕವಿತೆಯ ವಸ್ತುವಾಗಿಸುವ ಪ್ರಯೋಗ ಅಪರೂಪದಲ್ಲಿ ಅಪರೂಪ. ಇಲ್ಲಿನ ಹಲವು ಕವನಗಳಲ್ಲಿ ಕವಿತೆ ಒಳಮುಖಿಯಾಗುವುದನ್ನು ಕಾಣುತ್ತೇವೆ – ಅಂದರೆ, ಕವಿತೆಯ ಕುರಿತಾಗಿಯೇ ಕವಿತೆ ನಿರೂಪಣೆ ಮಾಡುವುದು. “ಗೂಬೆಮರ” ಎನ್ನುವ ಬಹಳ ಅಪರೂಪದ ಕವನ ಅದೆಷ್ಟು ಹಗುರ ಧಾಟಿಯಲ್ಲಿ ಕಾವ್ಯರಚನೆಯನ್ನೇ ಧ್ಯಾನಿಸುತ್ತದೆ! ಕಾವ್ಯದ ಕುರಿತಾಗಿಯೇ ಇರುವ ಕವಿತೆಗಳ ಅಪರೂಪದ ಸಾಲಿಗೆ ಇದು ಸೇರುತ್ತದೆ. “ಪಿಕಾಸೋನ ಕಣ್ಣುಗಳು” ಕವನ ಕೂಡ ಸೃಜನಶೀಲತೆಯನ್ನು ಧ್ಯಾನಿಸುವ ಕವನವಾಗಿದೆ. ಕನ್ನಡ ಕಾವ್ಯ ಪ್ರೀತಿಯಿಂದ ಬಹುಕಾಲ ನೆನಪಿಟ್ಟುಕೊಳ್ಳುವ ಕವನಗಳು ಇವು. ಸಂಕಲನದ ಶೀರ್ಷಿಕೆಯ ಕವನವಾದ “ಬುಧವಾರದ ಅತಿಥಿ” ಓತಿಕೇತದ ಓಡಾಟದ ಬಗೆಗೆ ಇದೆ – ಅಷ್ಟೇ. ಬೇರೇನೂ ಆಗುವ ಧಾವಂತ ಅದಕ್ಕಿಲ್ಲ.

ಇರುವುದರಲ್ಲಿ ದಾರಿ ಹುಡುಕಬೇಕು
ಇದೇ ನನ್ನ ಧ್ಯಾನ
ಇದೇ ನನ್ನ Zen (“ಬಟ್ಟೆ ಆರಲು ಹಾಕುವುದು”)

ಬುಧವಾರದ ಅತಿಥಿ ಎಂದಿಗೂ ಬರುವುದನ್ನು ನಿಲ್ಲಿಸುವುದಿಲ್ಲ. ಅದು ಮತ್ತೆ ಬರುತ್ತದೆ—ಹೊಸ ರೂಪದಲ್ಲಿ, ಹೊಸ ಪ್ರಶ್ನೆಗಳೊಂದಿಗೆ. ಈ ಸಂಕಲನವು ಆ ಬರುವಿಕೆಯ ದಾಖಲೆ ಮಾತ್ರವಲ್ಲ; ಅದು ಆ ಬರುವಿಕೆಯನ್ನು ಸ್ವಾಗತಿಸುವ ಮನಸ್ಥಿತಿಯೂ ಆಗಿದೆ. ಬಸವನಹುಳವೂ ಕೂಡ ಮತ್ತೆ ಮತ್ತೆ ಬರುತ್ತದೆ. ಪಾತ್ರೆ ತೊಳೆಯುವುದು, ಬಟ್ಟೆ ಆರಲು ಹಾಕುವುದು, ನಾಯಿ ಓಡಾಡಿಸುವುದು, ಇವೆಲ್ಲವೂ ಮತ್ತೆ ಮತ್ತೆ ಆಗುತ್ತಲಿರುವ ಕ್ರಿಯೆಗಳೇ. ಹಲವು ಕವನಗಳು ಸೂಚಿಸುವಂತೆ ಇವೆಲ್ಲವೂ ಕಾವ್ಯ ವಸ್ತುವಾಗುತ್ತ ಹೋಗುವುದೇ ಧ್ಯಾನಯೋಗ್ಯ ವಿದ್ಯಮಾನ.

‘ಬುಧವಾರದ ಅತಿಥಿ’ ಅಂತಿಮವಾಗಿ ಒಂದು ಆಹ್ವಾನ – ಕೇವಲ ಕವಿಯೊಂದಿಗೆ ಸಂವಾದಕ್ಕೆ ಅಲ್ಲ; ನಮ್ಮೊಳಗಿನ ಮೌನದೊಂದಿಗೆ ಸಂವಾದಕ್ಕೆ. ಕಾವ್ಯವು ಇಲ್ಲಿ ಅಂತಿಮ ಹೇಳಿಕೆಯಲ್ಲ; ಅರ್ಥ ತೃಪ್ತಿಯಲ್ಲ; ಅರ್ಥದ ಆಸೆಯಿಂದ ನಡೆಸುವ ಒಂದು ಪಯಣ — ನಮ್ಮನ್ನು ಬದಲಾಯಿಸುವ, ನಾವು ನೋಡುವುದನ್ನೇ ಬದಲಾಯಿಸುವ ಪಯಣ.

ಬುಧವಾರದ ಅತಿಥಿ ಈಗಾಗಲೇ ಬಾಗಿಲು ತಟ್ಟಿದ್ದಾನೆ. ಅವನನ್ನು ಒಳಗೆ ಬಿಟ್ಟುಕೊಳ್ಳಲು ನೀವು ತಯಾರಾಗಿ.

‍ಲೇಖಕರು Admin

22 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading