ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪದ್ಮಿನಿ ನಾಗರಾಜು ಕವಿತೆ – ಮದ್ದು ಹಾಕುವವರಿದ್ದಾರೆ…

ಡಾ ಪದ್ಮಿನಿ ನಾಗರಾಜು

ತೆಕ್ಕೆಯಲಿ ಆಲಂಗಿಸಿದವರೆಲ್ಲಾ
ನನ್ನವರೆಂದು ನಂಬದಿರು
ಮುಚ್ಚಿದ ಅಂಗೈಯಲ್ಲಿ
ಮದ್ದಿಹುದೋ ಪ್ರೀತಿಯೋ
ಉಸಿರುಗಟ್ಟುವ ಮುನ್ನ
ಬಿಡುಗಡೆಯ ತವಕ

ಬಿಸಿಲ ಧಗೆಯಲಿ
ತಂಪನೀವ ಹೊಂಗೆ ಮರವ
ನಂಬದಿರು
ತಂಗಾಳಿಯೂ
ಸುಳಿಗಾಳಿಯಾಗಬಹುದು

ಅವರವರ ತಕ್ಕಡಿಯಲಿ
ತೂಗು ಹಾಕಿದವರ
ಮುಖದ ಬಣ್ಣವೆಲ್ಲಾ
ಮಳೆಯೂ ತೊಳೆದಿದೆ
ಮುದಿ ಮುಖ ಹೊತ್ತ
ಶವಗಳ ದಿಟ್ಟಿಸು
ಸತ್ಯ ಯಾವುದೆಂದು

ಮೌನ ಮಾತಾಗಿಸಿ
ಕಂಬಳಿ ಹುಳುವಿನಂತೆ
ಗೂಡು ಸೇರು
ಕಂಬಳಿ ಹುಳು
ಚಿಟ್ಟೆಯಾಗುವ ಅಚ್ಚರಿಗಿಂತ
ಮನುಷ್ಯ ಬದಲಾಗುವ
ಕಾದು ನೋಡು

ಜಾತ್ರೆಯಲಿ
ಕೈಹಿಡಿದವರು
ಕೈಬಿಟ್ಟವರು
ಮುಖವಾಡ ಹೊತ್ತವರು
ಮಾತಿನಲಿ ಜೇನ ಮೆತ್ತಿದವರು
ಎದೆಯಲಿ ಕಿಡಿಯ ಹೊತ್ತಿಸಿದವರು
ಯಾರ ಯಾರ ನೆನೆಯಲಿ
ದೇವರೇ….
ಅವರ ನಗುವಿನ ಮರ್ಮ
ಅರಿಯುವ ಸಹನೆ ಕೊಡು
ಸಂಬಂಧಗಳ ಕಳಚಿ
ಏಕಾಂಗಿ ದಾರಿಯಲಿ
ಸುಮ್ಮನೆ ನಡೆಯಬೇಕಿದೆ
ಕಾಲು ಸವೆಯುವವರೆಗೆ
ಕಸುವ ಕೊಡು

‍ಲೇಖಕರು Admin

16 November, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading