ಎ ನಾಗಿಣಿ ಅನುವಾದಿತ ಒಂದು ಮದುವೆಯ ಕಥೆ ಭಾಗ 2..

ತೆಲುಗು ಮೂಲ : ಓಲ್ಗಾ
ಕನ್ನಡಕ್ಕೆ : ಎ ನಾಗಿಣಿ

ಬಹಳ ಹೊತ್ತಿನ ತನಕ ಪ್ರಸಾದನಿಗೆ ಅರ್ಥವಾಗಲಿಲ್ಲ. ಹೆಂಡತಿಯ ಹುಚ್ಚುತನಕ್ಕೆ ಅವಳ ಮೇಲೆ ರೇಗಾಡಿದ. ಅವಳು ಇನ್ನಷ್ಟು ರೇಗಿದಳು. ಇಬ್ಬರೂ ಶಾಂತವಾಗಿ ಸಮಸ್ಯೆ ಅರ್ಥವಾಗಲು ಅರ್ಧ ಗಂಟೆ ಬೇಕಾಯಿತು.

ಅಪ್ಪ, ಅಮ್ಮನ ಅರಚಾಟವನ್ನು ದೀಪ್ತಿ ಗಾಬರಿಯಾಗಿ ನೋಡುತ್ತಾ ಇದ್ದರೆ ಪ್ರಶಾಂತ್‌ ಎಂಜಾಯ್‌ ಮಾಡುತ್ತಿದ್ದ.

ವಾದ ಪ್ರತಿವಾದಗಳಾಗಿ ವಿಷಯ ಅರ್ಥವಾದ ನಂತರ ಪ್ರಸಾದ್‌ ಎಗರಾಡಿದ.

ಮಗನಿಗೆ ಇನ್ನೂ ಬುದ್ಧಿ ಬಂದಿಲ್ಲ ಅಂದುಕೊಂಡು, ವಿಪರೀತ ಸಿಟ್ಟು ಮಾಡಿಕೊಂಡ.

ಪಿಯುಸಿ ಆದ ನಂತರ ಮಗನನ್ನು ಎಂ.ಸೆಟ್‌ ಮಾಡಲು ಒಪ್ಪಿಸುವ ಹೊತ್ತಿಗೆ ಹೈರಾಣಾಗಿ ಹೋಗಿದ್ದ.

ಹುಡುಗ ಜಾಣ. ಎಂ.ಸೆಟ್‌ ಬರೆಯದೇ ಕೇಟರಿಂಗ್‌ ಟೆಕ್ನಾಲಜಿ ಕೋರ್ಸಿಗೆ ಸೇರಿ ಪಾಕಶಾಸ್ತ್ರದಲ್ಲಿ ಪ್ರವೀಣನಾಗಿ ನಳ, ಭೀಮ ಆಗುವೆ ಅಂದರೆ ಏನು ಮಾಡುವುದು?

ಹೆದರಿಸಿ, ಬೆದರಿಸಿ, ಮುದ್ದು ಮಾಡಿ ಅವನ ಮನ ಒಲಿಸುವ ಹೊತ್ತಿಗೆ ಸಾಕು ಸಾಕಾಯಿತು.

ʼಹೇಗೋ ಕಂಪ್ಯೂಟರಿನಲ್ಲಿ ಪದವಿ ಪಡೆದು ನಮಗೆ ಆಸರೆ ಆಗುತ್ತೀಯ ಅಂದುಕೊಂಡರೆ ಏನಿದು ಹೊಸ ರಾಗ? ಮತ್ತೆ ಅಡುಗೆ ಹುಚ್ಚು ಹಿಡಿಯಿತಾ ಹೇಗೆ?ʼ

ಮೊನ್ನೆ ಅವನಿಂದಲೇ ಅವನಮ್ಮ ಮೆಣಿಸಿನ ಕಾಯಿ ಬಜ್ಜಿ ಮಾಡಿಸಿದ್ದು ನೆನಪಾಗಿ ನಿರ್ಮಲಾಳನ್ನು ಪ್ರಸಾದು ಕೆಕ್ಕರಿಸಿ ನೋಡಿದ.

ಮಗನ ಕಡೆಗೆ ಎಸೆಯಬೇಕಾದ ನೋಟ ತನ್ನ ಕಡೆಗೆ ಯಾಕೆ ಅನ್ನುವ ಹಾಗೆ ಅವಳು ಮತ್ತಷ್ಟು ಉರಿದು ನೋಡಿದಳು.

ಪ್ರಸಾದನಿಗೆ ಅಸಲಿ ಕರ್ತವ್ಯ ನೆನಪಾಗಿ, ʼಓದೋದು ಬಿಟ್ಟು ಏನಪ್ಪಾ ಮಾಡತೀಯಾ?ʼ ಮೂರು ವರ್ಷ ಓದಿದೆ. ಸಾಕಷ್ಟು ಹಣ ಹಾಳು ಮಾಡಿದ್ದಾಯಿತು. ಈಗ ಮತ್ತೆ ಕ್ಯಾಟರಿಂಗ್‌ ಕೋರ್ಸಿಗೆ ಸೇರುವುದು ನಿನಗೆ ಸರಿ ಅನಿಸುತ್ತದಾ?ʼ

ʼನಾನು ಯಾವ ಕೋರ್ಸಿಗೂ ಸೇರಲ್ಲʼ ಪ್ರಶಾಂತ್‌ ಜಗ್ಗದೆ ಹೇಳಿದ.

ʼಮತ್ತೆ ಹೇಗೆ ಬದುಕೋದು?ʼ ಲಟ ಪಟ ಹಲ್ಲು ಕಡಿದ.

ʼಮದುವೆ ಆಗಿ,ʼ ಸೌಮ್ಯವಾಗಿ, ಶಾಂತವಾಗಿ ಪ್ರಶಾಂತ್‌ ಉತ್ತರ ಕೊಟ್ಟ.

ʼಮದುವೆ! ́ ʼಒಬ್ಬ ನುಸುಳೋಕೆ ಸಂದಿ ಇಲ್ಲ ಸೊಂಟಕ್ಕೆ ನಗಾರಿ ಅಂತಾರಲ್ಲʼ ಹಾಗಾಯ್ತು ನಿನ್ನ ಕತೆ – ನಿನಗೇ ಬದುಕೋಕೆ ನೆಲೆ ಇಲ್ಲ, ನಿನ್ನ ಎಷ್ಟು ದಿನ ಸಾಕಬೇಕು ಅಂತ ನಾವು ಯೋಚನೆ ಮಾಡ್ತಾ ಇದ್ದರೆ ನಿನ್ನ ಹೆಂಡತಿಯನ್ನೂ ಸಾಕಬೇಕಾ?ʼ ಸಿಟ್ಟು, ಲೇವಡಿ ಕಲೆಸಿ ಪ್ರಸಾದು ರೇಗಿದ. 

ʼನನ್ನನ್ನು ನನ್ನ ಹೆಂಡತಿ ಸಾಕುತ್ತಾಳೆ. ನಿಮ್ಮ ಹೊರೆ ಕಡಿಮೆ ಆಗತ್ತೇ ಹೊರತು ಜಾಸ್ತಿ ಆಗಲ್ಲʼ ಪ್ರಶಾಂತ್‌ ಜಗ್ಗಲೇ ಇಲ್ಲ.

ʼನಿನ್ನನ್ನ ಸಾಕುವ ಹೆಂಡತಿ ಯಾರೋ? ಹುಡುಗಿಯನ್ನು ನೋಡಿಕೊಂಡೆಯಾ ಹೇಗೆ?ʼ ನಿರ್ಮಲಾಳಿಗೂ, ಅವನಿಗೂ ಗೊತ್ತಾಗದ ಹಾಗೆ ಮಗ ಯಾವ ಘನಕಾರ್ಯ ಮಾಡಿದನೋ ಎಂದು ಪ್ರಸಾದನಿಗೆ ಭಯವಾಯಿತು.  

ʼಇಬ್ಬರು, ಮೂವರು ಇದ್ದಾರಮ್ಮಾ. ದೊಡ್ಡ ಕೆಲಸದಲ್ಲಿದ್ದಾರೆ. ನಾನು ಕೇಳಿದರೆ ಸಾಕು ಖುಷಿಯಾಗಿ ಒಪ್ಪುತ್ತಾರೆ. ನೀವು ಅವರನ್ನು ನೋಡಿ ಯಾರಾದರೂ ಒಬ್ಬರನ್ನು ಸೆಲೆಕ್ಟ್ ಮಾಡಿ. ಅವರೆಲ್ಲಾ ನಮ್ಮ ಜಾತಿಯವರೇ! ಹೆದರಬೇಡಿ.ʼ

ಪ್ರಸಾದು, ನಿರ್ಮಲಾ ದಂಪತಿಗೆ ಮಗನ ಸಮಸ್ಯೆ ಏನು? ಅದನ್ನು ಹೇಗೆ ಅರ್ಥಮಾಡಿಕೊಳ್ಳುವುದು ತಿಳಿಯಲಿಲ್ಲ. ಕೈಗೆ ಬಂದ ಮಗ ಓದು, ಅಭ್ಯಾಸ ಬಿಟ್ಟು, ಹೀಗೆ ಮದುವೆ ಜಪ ಮಾಡುತ್ತಿದ್ದಾನಲ್ಲಾ?

ʼನಿನಗೆ ಮದುವೆಗೆ ಅಷ್ಟೊಂದು ಅವಸರ ಇದ್ದರೆ ಆಗಪ್ಪಾ..ಒಳ್ಳೆಯ ಸಂಬಂಧವಾದರೆ ನಾವು ಯಾಕೆ ತಡೆಯಬೇಕು? ಇಷ್ಟಕ್ಕೆ ಓದು ಬಿಡುವ ಅಗತ್ಯವಾದರೂ ಏನು? ನಿನ್ನ ಹೆಂಡತಿ ದುಡಿದು ಸಂಪಾದನೆ ಮಾಡುವಾಗ ನೀನು ಏನು ಮಾಡುತ್ತೀ?ʼ

ಅವರಿಬ್ಬರ ತಲೆ ಬಿಸಿಯಾಗಿ ಒತ್ತಡ ತಡೆಯಲಾಗದೇ ಸಂಧಾನದ ಧಾಟಿಗೆ ಬಂದರು. 

ʼಏನು ಮಾಡುತ್ತೀನಾ? ಅಡುಗೆ ಮಾಡತೇನೆ. ಮನೆ ನೋಡಿಕೊಳ್ತೇನೆ. ಅವಳಿಗೆ ಸೇವೆ ಮಾಡ್ತೇನೆ. ಅವಳು ಮಕ್ಕಳನ್ನು ಹೆತ್ತು ಕೊಟ್ಟರೆ ಅವರನ್ನು ಸಾಕ್ತೇನೆʼ.

ತನ್ನ ಭವಿಷ್ಯದ ಯೋಜನೆಯನ್ನು ಯಾವುದೇ ಸಂಕೋಚವಿಲ್ಲದೆ ಪ್ರಶಾಂತ್‌ ಹೇಳಿದ.

ʼಥೂ, ನಾಚಿಕೆ ಆಗೋದಿಲ್ಲವಾ ನಿಂಗೆ?ʼ ಇಬ್ಬರೂ ಒಟ್ಟಿಗೆ ಉಗಿದರು.

ʼನಾಚಿಕೆ ಯಾಕೆ?ʼ

ʼಹೆಂಗಸು ಸಂಪಾದನೆ ಮಾಡಿದರೆ ಕೂತು ತಿನ್ನೋ…ʼ ಮುಂದಿನ ಮಾತು ಬಾಯಲ್ಲಿ ಹೇಳಲಾಗದೇ ಪ್ರಸಾದು ಸುಮ್ಮನಾದ. 

ʼನಾನು ಯಾಕೆ ಕೂತು ತಿನ್ನಲಿ? ಅಮ್ಮ ಕೂತು ತಿನ್ನುತ್ತಿದ್ದಾಳಾ? ನಾಳೆ ದೀಪ್ತಿ ಮದುವೆಯಾದ ಮೇಲೆ ಕೂತು ತಿನ್ನುವಳಾ? ಎಷ್ಟೊಂದು ಕೆಲಸ ಇರುತ್ತೆ ಮನೆಯಲ್ಲಿ!ʼ

ʼಲೋ, ನೀನು ಗಂಡಸು. ಹೆಂಗಸಿನ ಹಾಗೆ..ʼ

ʼಅಪ್ಪʼ ಈಗ ಪ್ರಶಾಂತನಿಗೆ ಬಂದ ಸಿಟ್ಟಿನ ಎದುರು ಅದಕ್ಕೂ ಮುನ್ನ ಇದ್ದ ಅವರ ಸಿಟ್ಟು ಏನೇನೂ ಅಲ್ಲ. ಮೂವರೂ ಆ ಸಿಟ್ಟಿಗೆ ದಂಗಾಗಿ ಸುಮ್ಮನಾದರು.

ʼಅಪ್ಪ. ನಾನು ಸೀರಿಯಸ್‌ ಆಗಿ ಹೇಳ್ತಾ ಇದೀನಿ. ಮನಸಿನಲ್ಲಿ ಒಂದು ಇಟ್ಕೊಂಡು ಮೇಲೊಂದು ಮಾತಾಡಲ್ಲ. ಹೇಳೋದೊಂದು ಮಾಡೋದೊಂದು ಅನ್ನೋ ಜಾಯಮಾನದವನಲ್ಲ. ಹೆಣ್ಣು ಗಂಡು ಸಮಾನರೆಂದು ನಂಬುವವನು. ಇಬ್ಬರೂ ಯಾವ ಕೆಲಸವಾದರೂ ಮಾಡಬಹುದೆಂದು ನಂಬಿದವನು. ಸೋ ಕಾಲ್ದ್‌ ಹೆಂಗಸಿನ ಕೆಲಸ ಮಾಡಲು ನನಗೆ ಯಾವ ಅಡ್ಡಿಯೂ ಇಲ್ಲದಾಗ ನಿಮಗೆ ಆಗಿರುವ ನಷ್ಟವಾದರೂ ಏನು?ʼ ನನಗೆ ಈ ಓದಿನಲ್ಲಿ ಅಷ್ಟೇನೂ ಆಸಕ್ತಿ ಇಲ್ಲ. ನನಗೆ ಇಷ್ಟವಾಗುವ ಕೆಲಸ, ನನ್ನ ಬದುಕು ನನ್ನ ಜವಾಬ್ದಾರಿʼ.

ಪ್ರಸಾದನಿಗೆ ಏನೋ ಹೊಳೆದ ಹಾಗಾಯಿತು. ವಿಷಯ ನಿಧಾನವಾಗಿ ಅರ್ಥವಾಗತೊಡಗಿತು. ಸ್ವಲ್ಪ ಸಮಾಧಾನಗೊಂಡ. ʼಅರ್ಥವಾಯ್ತು. ಇದಾ ಇವನ ಗೋಳು?ʼ

ʼಪ್ರಶಾಂತ್‌, ದೀಪ್ತಿ ಇಬ್ಬರೂ ಬನ್ನಿ ಇಲ್ಲಿ, ಕೂತು ಮಾತಾಡೋಣ.ʼ

ʼಈಗ ಹೇಳೋ, ದೀಪ್ತಿಯ ಮದುವೆಯ ಬಗೆಗೆ ಏನು ನಿನ್ನ ತಕರಾರು?ʼ

ಪ್ರಸಾದನಿಗೆ ಮಗನ ಮನಸಿಗೆ ಇಳಿದು ನೋಡಿಬಿಟ್ಟೆ ಅನ್ನುವ ಹೆಮ್ಮೆ.

ʼಏನ್ರೀ ನೀವು ಮಾತಾಡೋದು? ಈಗ ದೀಪ್ತಿಯ ಮದುವೆಯ ಪ್ರಸ್ತಾಪ ಯಾಕೆ?ʼ ಅವಳ ಮದುವೆಗೆ ಇವನದೇನಿರತ್ತೆ ತಕರಾರು?ʼ

ಮಗ ಏರಿಗೆ ಎಳೆದರೆ ಅಪ್ಪ ನೀರಿಗೆ ಎಳೆಯುತ್ತಾನಲ್ಲಾ! ಅನಿಸಿತು ನಿರ್ಮಲಾಳಿಗೆ.

ʼನಿನಗೆ ಅರ್ಥವಾಗಿಲ್ಲ ಕಣೇ. ಇವನ ನೋವೆಲ್ಲಾ ದೀಪ್ತಿಯ ಮದುವೆಯ ಬಗ್ಗೆ. ಅವನ ಬಗ್ಗೆ ಅಲ್ಲʼ.

ಅಪ್ಪನಿಗೆ ಅರ್ಥವಾಯಿತೆಂದು ಪ್ರಶಾಂತನಿಗೆ ಗೊತ್ತಾಯಿತು.

ದೀಪ್ತಿ ಎಲ್ಲರನ್ನೂ ನೋಡುತ್ತಾ ಕೂತಳು.

ʼಏನೋ ನಿನ್ನ ತಕರಾರು?ʼ ಮತ್ತೊಮ್ಮೆ ಕೇಳಿದ.

ʼಎಲ್ಲವೂʼ

ʼಉದಾಹರಣೆಗೆ ಒಂದು ಹೇಳುʼ 

ʼಒಂದಲ್ಲ. ಇದೆಲ್ಲ ಅನಾಗರಿಕ, ಅಮಾನುಷ. ನಿಜ ಹೇಳಬೇಕಂದ್ರೆ ಹೀಗೆ ಹೇಳುವುದು ಸಾಕಾಗಲಿಕ್ಕಿಲ್ಲ. ಅನಾಗರಿಕರಿಗೂ, ಕಾಡು ಮನುಷ್ಯರಿಗೂ ಇಂಥ ತಲೆಕೆಟ್ಟ ಮದುವೆ ಇರಲಿಕ್ಕಿಲ್ಲ. ಅವನಾರೋ ಅಮೇರಿಕಾದಲ್ಲಿ ಇರುವಾತನಿಗೆ ಸುಂದರ, ವಿಧೇಯ ಭಾರತೀಯ ಸ್ತ್ರೀ ಹೆಂಡತಿಯಾಗಿ ಬೇಕಾದರೆ ಅದಕ್ಕೆ ನಮ್ಮ ದೀಪ್ತಿ ಬಲಿಯಾಗಬೇಕಾ?ʼ 

ಬಲಿ! ನಿರ್ಮಲಾಗೆ ಅರ್ಥವಾಗಲಿಲ್ಲ.

ʼಅಲ್ಲವಾ ಮತ್ತೆ? ಅವನು ಯಾರು? ಹೇಗಿರ್ತಾನೆ? ಅವನ ಸ್ವಭಾವ, ನಡವಳಿಕೆ ಎಂಥದ್ದು? ಅಹಂಕಾರಿಯಾ? ಸಾಧು ವ್ಯಕ್ತಿತ್ವವಾ? ಕೋಪಿಷ್ಠನಾ? ಯಾವುದೂ ಗೊತ್ತಿಲ್ಲ. ಅವನು ನಮ್ಮ ಕಣ್ಣೆದುರಿಗೆ ಬಂದೇ ಇಲ್ಲ. ಅವನೊಬ್ಬ ಗಂಡು ಅನ್ನುವುದು ಮಾತ್ರ ಗೊತ್ತು. ಇದೊಂದರ ಆಧಾರದ ಮೇಲೆ ಎಲ್ಲಾ ಸಿದ್ಧತೆ ಮಾಡ್ತಾ ಇದೀರಿ. ಇಪ್ಪತ್ತು ವರ್ಷ ಜೀವಕ್ಕೆ ಜೀವ ಅನ್ನುವ ಹಾಗೆ ತಂಗಿಯನ್ನು ಸಾಕಿದಿರಿ. ಈ ಇಪ್ಪತ್ತು ವರ್ಷದಲ್ಲಿ ಅವಳದೇ ಅದ ವ್ಯಕ್ತಿತ್ವ ಅವಳಿಗೆ ಬಂದಿದೆ. ಅವಳದೇ ಆದ ಆಸಕ್ತಿ ಅವಳಿಗಿವೆ. ನಿಮ್ಮ ಕಾಳಜಿಯಲ್ಲಿ ಅವಳಿಗೇ ಅಂತ ಒಂದು ಸಂಸ್ಕಾರ ಮೂಡಿದೆ. ಅವನ ಸಂಸ್ಕಾರ ಏನು ಎಂತ ಅನ್ನುವ  ಯೋಚನೆ ಕೂಡಾ ಮಾಡದೇ ಅವಳನ್ನು ಗಂಟು ಹಾಕಲು ಸಿದ್ಧ ಆಗಿದೀರಿ. ಯೋಚಿಸಿದಷ್ಟೂ ನನಗೆ ಜುಗುಪ್ಸೆ ಅಗತಾ ಇದೆ. ಯಾರೋ ಗೊತ್ತೇ ಇಲ್ಲದ ವ್ಯಕ್ತಿಯ ಜೊತೆಗೆ ಮದುವೆ, ಸಂಸಾರ.. ಏನಿದೆಲ್ಲಾ..?ʼ

ʼನಾವೆಲ್ಲಾ ಮಾಡಿಲ್ಲವಾ ಸಂಸಾರ ಹಾಗೆ?ʼ ನಿರ್ಮಲಾ ಅಸಹನೆಯಿಂದ ಹೇಳಿದಳು.

ʼಹಳಸಿದ ಮಾತುಗಳಮ್ಮಾ ಇವೆಲ್ಲಾ… ನಿಮ್ಮ ಕಾಲ ಬೇರೆ. ನೀವು ಕಾಲೇಜಿಗೆ ಹೋಗಿದ್ರಾ? ಚೂಡಿದಾರ್‌, ಜೀನ್ಸ್‌ ಪ್ಯಾಂಟು ಹಾಕಿದ್ರಾ? ರಾತ್ರಿ ಹತ್ತರವರೆಗೂ ಫ್ರೆಂಡ್ಸ್‌ ಜೊತೆ ಸಿಟಿ ಸುತ್ತಿದ್ರಾ?ʼ

ದೀಪ್ತಿ ಮುಖ ಕೆಂಪಗಾಯಿತು. ಪ್ರಶಾಂತನ ಸಿಟ್ಟು ಇಳೀತಿಲ್ಲ.

ʼಅರೇ, ಒಬ್ಬ ಕೆಲಸದವನು ಕೆಲಸಕ್ಕೆ ಸೇರಬೇಕಾದರೆ ಯಜಮಾನನ ಹೊಲ,ಮನೆ, ಎಷ್ಟು ದನ ಇವೆ, ಕೆಲಸದ ಹೊರೆ ಎಷ್ಟಿದೆ ಹೀಗೆಲ್ಲಾ ತಾನೇ ಹೋಗಿ ನೋಡುತ್ತಾನೆ, ತನ್ನ ಸಂಬಳ ತಾನೇ ಖಚಿತವಾಗಿ ನಿಗದಿ ಮಾಡಿಕೊಳ್ಳುತ್ತಾನೆ. ಈಗ ನೀವು ಯೋಚಿಸ್ತಾ ಇರೋ ರೀತಿ ಶುದ್ಧ ಮುಟ್ಥಾಳತನದ್ದು ಅಥವಾ ಜೂಜಾಟ ಆಡ್ತಿದಿರಿ. ನೀವು ಜೂಜು ಆಡಲ್ಲ. ಅವಳ ಕೈಲಿ ಆಡಿಸ್ತಿದಿರಿ. ಓದಿಕೊಂಡ ಹೆಣ್ಣು ಮಕ್ಕಳು ತಮ್ಮ ಬಗೆಗೆ ತಾವು ಯೋಚನೆ ಮಾಡಬಾರದಾ? ಅರ್ಧದಲ್ಲೇ ಓದು ನಿಲ್ಲಿಸಿ ಇಲ್ಲಿ ನಮ್ಮನ್ನೆಲ್ಲಾ ಬಿಟ್ಟು ಅಷ್ಟು ದೂರ ಯಾಕೆ ಹೋಗಬೇಕು? ಅಷ್ಟೊಂದು ಅವಸರ ಯಾಕೆ?ʼ

ʼನಮ್ಮ ಹುಡುಗಿ ನಿನ್ನನ್ನು ನೋಡಿ ಒಪ್ಪಿಕೊಂಡರೆ ಮಾತ್ರ ಮುಂದಿನ ಮಾತು ಅಂತ ನೀವು ಯಾಕೆ ಆ ಹುಡುಗನಿಗೆ ಹೇಳಲಿಲ್ಲ? ನೀನು ಇಲ್ಲಿಗೆ ಬಂದು ನಮ್ಮ ಮಗಳೊಂದಿಗೆ ಒಂದು ತಿಂಗಳು ಸ್ನೇಹದಲಿ ಓಡಾಡು ನಂತರ ನೋಡೋಣ, ಆಗಲಾದರೂ ಓದು ನಿಲ್ಲಿಸುವ ಮಾತೇ ಇಲ್ಲ ಅಂತ ಹೇಳಬೇಕಿತ್ತಲ್ಲವಾ ನೀವು?ʼ ಪ್ರಶಾಂತನಿಗೆ ಒಂದು ಕಡೆ ಮೈ ಬಿಸಿಯಾಗುತ್ತಿದ್ದರೆ ಮತ್ತೊಂದು ಕಡೆ ಬೆವರು ಸುರಿಯುತ್ತಿತ್ತು. 

ʼಹಾಗೆ ಮಾತಾಡಿದರೆ ಬಂಗಾರದಂಥ ಸಂಬಂಧ ಕೈ ಜಾರಿ ಹೋಗುವುದಿಲ್ಲವೇನೋ? ಯಾರೋ ಒಬ್ಬರು ಹಾರಿಸಿಕೊಂಡು ಹೋಗುವುದಿಲ್ಲವೇನೋ? ಈಗಿನ ದಿನಗಳಲ್ಲಿ ಹೆಣ್ಣುಮಕ್ಕಳ ಮದುವೆ ಅಂದರೆ ಸಣ್ಣ ಮಾತೇನೋ?ʼ

ʼಅಮ್ಮಾ, ಮದುವೆ ಹುಡುಗಿಗೆ ಮಾತ್ರ ಅಲ್ಲ, ಹುಡುಗನಿಗೂ ಅಗತ್ಯವೇʼ. ಪ್ರಶಾಂತ್‌ ಗುಡುಗಿದ.

ʼಹಾಗಾದರೆ ಏನೋ ನಿನ್ನ ಉದ್ದೇಶ? ನಿನ್ನ ತಂಗಿಯ ಮದುವೆ ಕೆಡಿಸಿ ನೀನೇ ಅವಳ ಬಾಳು ಹಾಳು ಮಾಡುತ್ತೀಯಾ?ʼ ನಿರ್ಮಲಾ ಅಳತಾ ಇದ್ದಳು.

ʼಮದುವೆ ನಿಲ್ಲಿಸೋದು ನಿಜ. ಆದರೆ ಅವಳ ಬಾಳು ಹಸನು ಮಾಡುವೆʼ

ದುಃಖ, ಸಿಟ್ಟು ತಡೆಯಲಾಗದೇ ನಿರ್ಮಲಾ ಅಲ್ಲಿಂದ ಎದ್ದು ಹೋಗಲು ನಿಂತಾಗ ಪ್ರಸಾದು ಅವಳ ಕೈ ಹಿಡಿದು ಕೂರಿಸಿದ.

ಕೂತು ಸೆರಗಿನಿಂದ ಕಣ್ಣು ಒರೆಸಿಕೊಳ್ಳುತ್ತಾ ʼಮತ್ತೆ ಕಾಲೇಜಿಗೆ ಯಾಕೆ ಹೋಗುವುದಿಲ್ಲ ನೀನು?ʼ ದುಃಖದಿಂದ ಕೂಡಿದ ಗಂಟಲನ್ನು ಸರಿಪಡಿಸಿಕೊಂಡು ಹೇಳಿದಳು. 

ʼಅದೇ ನನಗೆ ಉರಿತಾ ಇರೋದು. ದೀಪ್ತಿ ಇದ್ದಕ್ಕಿದ್ದ ಹಾಗೆ ಓದು ನಿಲ್ಲಿಸಿದಾಗ ಆಗದ ನೋವು ನಾನು ನಿಲ್ಲಿಸಿದ ಮಾತ್ರಕ್ಕೆ ಯಾಕೆ ಆಗಬೇಕು ನಿಮಗೆ? ದೀಪ್ತಿ ಅವಳ ಗಂಡನಿಗೆ ಚಾಕರಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವುದು ನಿಮಗೆ ಇಷ್ಟ ಆದಾಗ ನಾನು ನನ್ನ ಹೆಂಡತಿಗೆ ಚಾಕರಿ ಮಾಡಿ ಹೊಟ್ಟೆ ತುಂಬಿಕೊಂಡರೆ ಏನು ಅಡ್ಡಿ? ನನಗೂ ದೀಪ್ತಿಗೂ ಏನಿದೆ ವ್ಯತ್ಯಾಸ? ವ್ಯತ್ಯಾಸ ಇದ್ದರೆ ಯಾಕೆ ಅವಳು ನಾಚಿಕೆಯಿಂದ ತಲೆ ತಗ್ಗಿಸತಾ ಇಲ್ಲ? ಯಾಕೆ ಕೋಪದಿಂದ ತಿರುಗಿ ಬೀಳುತ್ತಿಲ್ಲ?

ʼಹೆಣ್ಣು, ಗಂಡು ಒಂದೇನಾ?ʼ

ʼಒಂದೇ, ಒಂದೇ. ಒಂದೇʼ

 ಹೆಂಡತಿ ಮಗ ಇಬ್ಬರನ್ನೂ ಪ್ರಸಾದು ತಡೆದ.

ʼನಿನ್ನ ಪಾಯಿಂಟ್‌ ನನಗೆ ಅರ್ಥವಾಯಿತು ಕಣೋ. ಸ್ವಲ್ಪ ಯೋಚಿಸಿದರೆ ಅವಳಿಗೂ ಅರ್ಥವಾಗತ್ತೆ. ಅರ್ಥವಾದರೂ ಅವಳು ಒಪ್ಪುವುದು ಕಷ್ಟ. ಆಗಲಿ. ನಿನ್ನ ಪ್ರಕಾರ ನೋಡಿದರೆ ಇದು ದೀಪ್ತಿಗೆ ಸಂಬಂಧಿಸಿದ ವಿಷಯ. ದೀಪ್ತಿಯನ್ನು ಅವಳಷ್ಟಕ್ಕೆ ಯೋಚಿಸಲು ಬಿಟ್ಟು ಬಿಡೋಣ. ಕಳೆದ ವಾರದಿಂದ ಇದು ಒಳ್ಳೆಯ ಸಂಬಂಧ ಅಂತ ಹೇಳುತ್ತಾ ಬಂದೆವು. ಅವಳೂ ಕನ್ವೀನ್ಸ್‌ ಆಗಿ ಒಪ್ಪಿಕೊಂಡಳು. ಈಗ ನೀನು ಯಾವುದೇ ಸಂಕೋಚ ಇಲ್ಲದೇ ನಿನ್ನ ಅಭಿಪ್ರಾಯ ಹೇಳಿದೆ. ದೀಪ್ತಿಗೆ ಯೋಚನೆ ಮಾಡಲು ಬಿಡೋಣ. ಅವಳ ನಿರ್ಧಾರದ ಪ್ರಕಾರ ಮುಂದುವರೆದರೆ ಮುಗಿಯಿತುʼ

ʼಅವಳಿಗೇನು ಗೊತ್ತು?ʼ

ʼಅವಳಿಗೇನು ಗೊತ್ತು?ʼ ತಾಯಿ, ಮಗ ಇಬ್ಬರ ಬಾಯಿಂದ ಒಂದೇ ಮಾತು, ಒಟ್ಟಿಗೇ ಬಂತು. ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ.

ʼಪ್ರಶಾಂತ್‌, ನೀನು ಕೂಡಾ ಒಮ್ಮೊಮ್ಮೆ ನಮ್ಮಂತೆ ಹಳೆಕಾಲದವರ ತರಹ ಯೋಚನೆ ಮಾಡುತ್ತಿದಿಯಲ್ಲ? ನಿಮ್ಮಮ್ಮನಂತೆ ನೀನೂ ಹೇಳಿದೆ. ದೀಪ್ತಿಗೆ ಇಪ್ಪತ್ತು ತುಂಬಿದೆ. ಡಿಗ್ರಿ ಪಾಸಾಗಿದಾಳೆ. ಜಾಣೆ. ಯೋಚನೆ ಮಾಡಲು ಬಿಡು. ನೀನು ಹೇಳುವುದೂ ಅದೇ ತಾನೇ?ʼ

ʼಅವಳು ಮದುವೆಗೆ ಒಪ್ಪಿದ್ದು ನೋಡಿದರೆ ಅವಳ ನಿರ್ಧಾರ ಅರ್ಥವಾಗುತ್ತಿಲ್ಲವಾ?ʼ. ನಿರ್ಮಲಾಗೆ ಆಸೆ ಚಿಗುರುತ್ತಿತ್ತು.

ಹೌದು ಅನ್ನುವಂತೆ ಪ್ರಶಾಂತ್‌ ತಲೆ ಅಲ್ಲಾಡಿಸಿದ. 

ಪ್ರಸಾದ್‌ ನಿರ್ಮಲಾಳ ಮಾತನ್ನು ತಡೆದು, ʼನಿನ್ನ ಯೋಚನೆಗಳಿಗೆ ನೀನೇ ಬೆಲೆ ಕೊಡದಿದ್ದರೆ ಹೇಗೆ? ದೀಪ್ತಿಗೆ ಈಗ ತಾನೇ ನಿನ್ನ ಅಭಿಪ್ರಾಯ ಗೊತ್ತಾಯಿತು. ಯೋಚನೆ ಮಾಡಲಿ ಬಿಡು. ಅವಳ ನಿರ್ಧಾರ ಬದಲಿಸಿಕೊಳ್ಳುತ್ತಾಳೇನೋ ನೋಡೋಣ.ʼ

ಅಪ್ಪ ಯಾವುದೋ ದೊಡ್ಡ ಯೋಜನೆ ಹಾಕುತ್ತಿದ್ದಾನೆ ಅಂದುಕೊಂಡ ಪ್ರಶಾಂತ್.‌

ನನ್ನ ಎಮ್.ಸೆಟ್‌ ವಿಷಯದಲ್ಲೂ ಹೀಗೇ ಆಯಿತು. ಯಾವುದೋ ಬಲಹೀನತೆಯನ್ನು ಕಂಡು ಹಿಡಿದು ಅದನ್ನು ಬಳಸಿ ನನ್ನನ್ನು ಇಂಜನಿಯರ್‌ ಮಾಡಿದ.

ಈಗ ತಂಗಿಯ ಮದುವೆಯೂ ಮಾಡುತ್ತಾನೆ.

ಆದರೆ, ನನಗೆ ಬೇರೆ ದಾರಿಯೇ ಇಲ್ಲ.

 ತಂಗಿಯ ಬಾಳು ಹಸನಾಗಬೇಕಾದರೆ ಅವಳನ್ನು ಒತ್ತಾಯ ಮಾಡಿಯಾದರೂ ಮದುವೆ ನಿಲ್ಲಿಸಬೇಕೆಂದು ನಾನು ವಾದ ಮಾಡಲಾರೆ.

ಅಪ್ಪ ಸಾಮಾನ್ಯನಲ್ಲ. ಯೂನಿಯನ್ನಿನಲ್ಲಿ ಸಾಕಷ್ಟು ಅನುಭವ ಇದೆ. ನಾನು ಪಟ್ಟ ಕಷ್ಟವೆಲ್ಲಾ ವ್ಯರ್ಥ! ವ್ಯರ್ಥ! ವ್ಯರ್ಥ!

ಸದ್ಯ ಬೀಸೋ ದೊಣ್ಣೆ ತಪ್ಪಿತು ಅನಿಸಿ ನಿರ್ಮಲಾ ಅಡುಗೆ ಕೋಣೆಗೆ ಹೋದಳು.

ಹಾಲು ಉಕ್ಕುತ್ತಿದ್ದಾಗ ಶುಭ ಸೂಚಕ ಅನಿಸಿ ನಾಲ್ಕು ಅಕ್ಕಿ ಕಾಳು ಹಾಕಿ ನಿಟ್ಟುಸಿರು ಬಿಟ್ಟಳು.

ಪ್ರಶಾಂತನಿಗೆ ಮಾತ್ರ ಆತಂಕ ಹೆಚ್ಚಾಯಿತು. ದೀಪ್ತಿಯ ಕಡೆಗೆ ನೋಡಿದ.

ಆ ಹುಡುಗಿ ಮಾತಾಡದೆ ಎದ್ದು ತನ್ನ ಕೋಣೆಗೆ ಹೋದಳು..

ಪ್ರಶಾಂತ್‌ ಅವಳ ಹಿಂದೆ ಹೋದನಾದರೂ, ಆಕೆ ಬಾಗಿಲು ಹಾಕಿಕೊಂಡಳು.

ರಾತ್ರಿ ಊಟದ ಸಮಯದಲ್ಲೂ ಯಾರೂ ಮಾತಾಡಲಿಲ್ಲ. 

ಆ ನಿಶ್ಯಬ್ದವನ್ನು ತಡೆಯಲಾಗದೇ, ʼನಾಳೆ ನಿನ್ನ ಹುಡುಗಿಯರ ಲಿಸ್ಟೂ, ವಿಳಾಸ ಕೊಟ್ಟರೆ ನಾನು ವಿಚಾರ ಮಾಡತೀನಿ ಕಣೋʼ ಪ್ರಸಾದು ಮಗನನ್ನು ರೇಗಿಸಿದ.

ಪ್ರಶಾಂತ್‌ ಕೂಡಾ ಹಿಂದೆ ಮುಂದೆ ನೋಡದೆ, ʼನಾಳೆಯೇ ಫೋನ್‌ ನಂಬರ್‌ ಕೊಡ್ತೀನಿ. ಪೋಸ್ಟಲ್‌ ಅಡ್ರೆಸ್‌ ಬೇಕಾದರೆ ಸಂಜೆಯ ಹೊತ್ತಿಗೆ ಕೊಡತೇನೆʼ ಅಂದ.

ನಿರ್ಮಲಾ ಸಿಟ್ಟು ತಡೆಯಲಾಗದೇ ಮೊಸರಿನ ಬಟ್ಟಲು ಎತ್ತಿ ಹಾಕಿದಳು. ಮೊಸರೆಲ್ಲಾ ನೆಲದ ಪಾಲಾಯಿತು.

ಊಟದ ನಂತರ ಪ್ರಶಾಂತ್‌ ಅದನ್ನೆಲ್ಲಾ ಬಳಿದು ಸ್ವಚ್ಛ ಮಾಡಿದ.

ಪ್ರಶಾಂತ್‌ ಮಧ್ಯರಾತ್ರಿಯವರೆಗೂ ತಲೆ ಬಿಸಿಮಾಡಿಕೊಂಡು ಅತಿ ಕಷ್ಟದಿಂದ ನಿದ್ದೆಗೆ ಜಾರಿದ.

ʼಅಣ್ಣಾ. ಎಂಟುವರೆ ಆಯಿತು. ನಮಗೆ ಸ್ಪೆಷಲ್‌ ಕ್ಲಾಸ್‌ ಇದೆ ಅಂತ ಸುಮಳಿಗೆ ಫೋನು ಮಾಡಿದಾಗ ಗೊತ್ತಾಯಿತು. ನಾನು ಹೋಗತಾ ಇದೀನಿ. ನಿನಗೆ ಜಾಸ್ತಿ ಟೈಮ್‌ ಇಲ್ಲʼ ಪ್ರಶಾಂತನನ್ನು ಎಬ್ಬಿಸುತ್ತಾ ದೀಪ್ತಿ ಹೇಳಿದಳು. 

ಕೈಯ್ಯಲ್ಲಿ ಪುಸ್ತಕ ಹಿಡಿದು ಸರಸ್ವತಿಯ ಹಾಗೆ ನಿಂತಿದ್ದ ತಂಗಿಯನ್ನು ನೋಡಿ ಪ್ರಶಾಂತನ ಮುಖ ಸಾವಿರ  ವ್ಯಾಟಿನ ಬಲ್ಬಾಯಿತು.

ʼಅಮ್ಮಾ ನನ್ನ ಕಾಲೇಜಿಗೆ ಟೈಮ್‌ ಆಯ್ತು. ಬಿಸಿ ನೀರು, ತಿಂಡಿ, ಮಧ್ಯಾನಕ್ಕೆ ಚಪಾತಿ…. ಛಯ್ಯ ಛಯ್ಯ ಛಯ್ಯಾ ಛಯ್ಯಾ…ʼ ಕೂಗುತ್ತಾ, ಹಾಡುತ್ತಾ ಬಚ್ಚಲಿಗೆ ಹೋದ.

ಕಾಲೆಜಿಗೆ ಹೋಗುತ್ತಿದ್ದ ಮಗಳನ್ನು ನೋಡಿ ನಿರ್ಮಲಾ ಕಣ್ಣೀರು ಹಾಕಿದಳು.

ನಗಬೇಕೋ, ಅಳಬೇಕೋ ಗೊತ್ತಾಗದೆ ಪ್ರಸಾದ್ ತಲೆ ಹಿಡಿದು ಕೂತ.

‍ಲೇಖಕರು Admin

November 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: