ದೊಡ್ಡ ಹೆಣ !

ಶರಣಗೌಡ ಬಿ ಪಾಟೀಲ ತಿಳಗೂಳ

ಬೆಳಕು ಹರಿಯುವದರೊಳಗ ಬಾಳಾಸಾಬನ ಸಾವಿನ ಸುದ್ದಿ  ಕಿವಿಗೆ ಬಿದ್ದಾಗ ಗಾಬರಿಯಾಯಿತು. ಗುಡ್ಡದಂಥಾ ಮನುಷ್ಯ ಊರಿನ ಕಳಸದಂತಿದ್ದ  ಅವನಿಲ್ಲದೆ ಊರೇ ಬಡವಾದಂತೆ ಅಂತ ಅನೇಕ ಯೋಚನೆ ಮೂಡಿದವು. ಅವನ ಜೊತೆ  ಸುದೀರ್ಘ ಒಡನಾಡಿದವರಂತೂ ತೀವ್ರ  ಬೇಸರವಾಗಿ ಆತ ಮಾಡಿದ ಸಹಾಯ ಸಹಕಾರ ಮೆಲುಕು ಹಾಕಿ ಕಣ್ಣಂಚಿನಲ್ಲಿ ನೀರು ತುಂಬಿಕೊಂಡರು. ಹೊಲದ  ಕಡೆ ಹೋಗುವವರು ಬೇರೆ ಕಡೆ ವ್ಯಾಪಾರ ಉದ್ಯೋಗಕ್ಕೆ ಹೋಗುವವರು ಅವತ್ತು  ಪೂರ್ಣ ವಿರಾಮ ಹಾಕಿ ಊರಲ್ಲೇ ಉಳಿದರು, ಹೆಂಗಸರು ಒಲೆ ಹೊತ್ತಿಸಿ ಅಡುಗೆ ಮಾಡದೆ ಆಮೇಲೆ ಮಾಡಿ ತಿಂದರಾಯಿತು ಬಾಳಾಸಾಬನ ಹೆಸರಿನ ಮೇಲೆ ಒಂದು ದಿನ ಉಪವಾಸ ಇದ್ದರೆ ಏನೂ ಲುಕ್ಸಾನ ಆಗೋದಿಲ್ಲ ಅಂತ ಅವಸರದಿಂದ ಆತನ  ಮನೆ ಕಡೆ ಹೆಜ್ಜೆ ಹಾಕಿದರು.

ಆತನದು ದೊಡ್ಡ ಕುಟುಂಬ. ಹೆಂಡತಿ ತೀರಿ ಹೋಗಿ ಸುಮಾರು ವರ್ಷಗಳೇ ಕಳೆದು ಹೋಗಿದ್ದವು. ಇಬ್ಬರು ಮಕ್ಕಳು, ಸೊಸೆಯಂದಿರು, ಮೊಮ್ಮಕ್ಕಳು ಎಲ್ಲರೂ ಇದ್ದಾರೆ. ಆದರೆ  ಸದ್ಯ ಇವನ ಕೊನೆಯ ಕಾಲದಲ್ಲಿ ಅವರೆಲ್ಲ ಇವನ ಪಾಲಿಗೆ ಇದ್ದೂ ಇಲ್ಲದಂತಾಗಿದ್ದಾರೆ. ಅನಿವಾರ್ಯವಾಗಿ ಹಳೆ ಮನೆಯಲ್ಲಿ ಹಾಗೋ ಹೀಗೂ  ವೃದ್ಧಾಪ್ಯ ಕಳೆದು ನೋವಿನಲ್ಲೇ ಸಾವನ್ನಪ್ಪಿದ. ಮಕ್ಕಳು ಹತ್ತಿರವೂ ಸುಳಿಯಲಿಲ್ಲ. ಅಕ್ಕ ಪಕ್ಕದ ಮನೆಯವರೇ ಇವನ ಸಾವಿನ ಸುದ್ದಿ ಬೀಗರು ನೆಂಟರಿಗೆ ತಿಳಿಸಿ ಕರ್ತವ್ಯ ಮೆರೆದರು.

ಬಾಳಾಸಾಬನಿಗೆ ಮಣ್ಣು ಹಾಕಲು ಬಹಳ  ಜನ ಬರ್ತಾರೆ  ಅಂತ ಹೋಟೆಲು, ಕಿರಾಣಿ ಅಂಗಡಿಯವರು ಒಂದೆರಡು ತಾಸು ಮೋದಲೇ ಬಾಗಿಲು  ತೆರೆದು ಕಸ ಗುಡಿಸಿ, ನೀರು ಸಿಂಪಡಿಸಿ ವ್ಯಾಪಾರ ಶುರು ಮಾಡಿದರು. ಬಹಳ ದಿನದಿಂದ ಊರಾಗ ಯಾರೂ ಸತ್ತಿರಲಿಲ್ಲ. ಅದರಾಗ ಎರಡು ವರ್ಷ ಕೊರೋನಾ ಕಾಲದಾಗ ಗಿರಾಕಿ ಇಲ್ಲದೇ ಇವರು ಸುಮ್ಮನೆ ನೊಣ ಹೊಡಕಂತ ಕುಂತಂಗಾಗಿತ್ತು. ಬಾಳಾಸಾಬನದ  ದೊಡ್ಡ ಹೆಣದಿಂದಾದರೂ ಭರ್ಜರಿ ವ್ಯಾಪಾರ ಆಗ್ತಾದ, ಗಲ್ಲಾ ಪೆಟ್ಟಿಗೆ ಭರ್ತಿಯಾಗ್ತಾದ ಅಂತ ಯೋಚಿಸಿ ಕನಸು ಕಂಡರು.

ಅಗಸಿ ಹತ್ತಿರ ಇರುವ  ಹನುಮವ್ವನ ಹೋಟಲ ಎಲ್ಲ ಹೋಟಲಿಗಿಂತಲೂ ಒಂದು ಕೈ ಮೇಲು ಅಂತ ಹೇಳಬಹುದು. ಯಾಕಂದ್ರ ಚಹಾ ಛೊಲೊ ಮಾಡ್ತಾಳೆ. ರೊಕ್ಕ ಕೊಟ್ಟು ಕುಡಿದಿದ್ದಕ್ಕೂ ಸಾರ್ಥಕ  ಅಂತ ಇವಳ ಹೋಟಲದಾಗೆ ಬಹಳ ಜನ ಚಹಾ ಕುಡಿದು ತೃಪ್ತಿ ಪಡುತಿದ್ದರು. ಮುಂಜಾನೆ  ಸಾವಿನ ಸುದ್ದಿ  ಗೊತ್ತಾಗುತ್ತಲೇ  ಹನುಮವ್ವ ಎಲ್ಲರಿಗಿಂತ ಮೊದಲು  ಆತನ  ಮನೆಗೆ ಹೋಗಿ ಕಣ್ತುಂಬಾ ನೀರು ತಂದು ಆತ ಮಾಡಿದ ಸಹಾಯ ಸಹಕಾರ  ನೆನಪಿಸಿಕೊಂಡು  ನೋವು  ಹೊರಹಾಕಿ ವಾಪಸಾದಳು. ಮಗ ಮಂಜು ಇವಳು ಬರುವದರೊಳಗೇ  ಹೋಟೆಲ ತೆರೆದು  ಕಸಗುಡಿಸಿ, ನೀರು ಸಿಂಪಡಿಸಿ, ಟೇಬಲ್ ಒರೆಸಿ,  ಊದಕಡ್ಡಿ ಹಚ್ಚಿ ಘಮ ಘಮ ವಾಸನೆ ಹರಡುತ್ತಾ ಕುಳಿತುಕೊಂಡಿದ್ದ. ಇವಳು  ಸ್ಟೋ ಚಾಲೂ ಮಾಡಿ ದೊಡ್ಡ ಬೋಗೊಣಿಯಲ್ಲಿ  ಕಳಕಳ ಚಹಾ ಕಾಯಿಸಿ ಕೇಟಲಿ ಮೇಲಕ್ಕೆತ್ತರಿಸಿ ಬಂದವರಿಗೆಲ್ಲ  ಚಹಾ  ಕೊಟ್ಟಾಗ ಅವರು  ಚಹಾ ಗುಟುಕಿಸಿ ಬಾಯಿ ಚಪ್ಪರಿಸುತ್ತಾ ಕುಡಿಯತೊಡಗಿದರು.

ಅಂಥಾ  ಕೊರೋನಾ ಗಾಳ್ಯಾಗ ಬಾಳಾಸಾಬಗ  ಸಾವು ಬರಲಿಲ್ಲ ಈಗ ಬಂತು ನೋಡ್ರಿ .  ಸಾವು ಯಾವಾಗ ಬೇಕೋ  ಆವಾಗ ಬರೋದಲ್ಲ. ಸಾವಿನ  ರಹಸ್ಯ ಆ ಮ್ಯಾಲಿನವನಿಗೆ ಬಿಟ್ಟು ಯಾರಿಗೂ ಗೊತ್ತಿಲ್ಲ  ಅಂತ ಮೀಸೆ ಮಲ್ಲಣ್ಣ  ಚಹಾ ಗುಟುಕಿಸಿ ಅಭಿಪ್ರಾಯ ಹೊರ ಹಾಕಿದಾಗ, “ಆ  ಕೊರೋನಾ ಕಾಲ ಈಗ್ಯಾಕ  ನೆನಪ ಮಾಡಕೋತಿ ಮಾರಾಯ.  ಅದು ಮುಗಿದು ಹೋಗ್ಯಾದ ಅದರ ಹೆಸರ ಕೇಳಿದರ ಇನ್ನೂ  ಮೈ ಜುಮ್ ಅಂತಾದ.  ನಮಗೇನಾದರು ಅದರ ಗಾಳಿ ಬಡಿದಿದ್ದರ ಇಷ್ಟೋತನಕ  ಶಿವನ ಪಾದಾ ಸೇರಿ ಬಿಡಡ್ತಿದ್ದವಿ” ಅಂತ ಸಿದ್ಲಿಂಗ  ತನ್ನದೇ ಧಾಟಿಯಲ್ಲಿ ಹೇಳಿ ಖಾಲಿ ಕಪ್ಪು ಟೇಬಲ ಮೇಲಿಟ್ಟ.

ನಮ್ಮ ಆಯಸ್ಸು ಇನ್ನೂ ಗಟ್ಟಿಯದ ಅದಕ್ಕೆ ಬದುಕೀವಿ ಇಲ್ಲಂದ್ರ ಹನುಮವ್ವನ ಹೋಟಲಿಗಿ ಚಹಾ  ಕುಡುಯಲು ಎಲ್ಲಿ ಬರ್ತಿದ್ದೇವು ಅಂತ ಗುಂಡಣ್ಣ ನಿಟ್ಟುಸಿರು ಬಿಟ್ಟ.  ಅದರ ಗಾಳಿ ಬಡಿದರ ಈ  ಹನುಮವ್ವಾದರು ಎಲ್ಲಿ ಇರುತಿದ್ದಳು ಅಂತ ಚಂದ್ರಣ್ಣ ಹಾಸ್ಯ ಮಾಡಿದ. ಕೊರೊನಾ ರೋಗ  ಯಾರಿಗೂ ಸುಖಾ ಮಾಡಲಿಲ್ಲ ಬಡವರು, ಶ್ರೀಮಂತರು, ದೊಡ್ಡವರು, ಸಣ್ಣವರು, ಹೆಂಗಸರು, ಗಂಡಸರು ಅಂತ ಯಾವದೂ ನೋಡದೆ  ಎಲ್ಲರಿಗೂ ಲುಕ್ಸಾನ ಮಾಡಿ  ಹೋಯಿತು ಅಂತ ವಾಸ್ತವ ಹೇಳಿದಾಗ, “ನಮ್ಮೂರೇ ಛೊಲೊ.  ಅದರಿಂದ ಯಾರೂ   ಜೀವಾ ಕಳಕೊಂಡಿಲ್ಲ. ಅದೇ ಪುಣ್ಯ”  ಅಂತ ಮುದುಕಪ್ಪ ನೆನಪಿಸಿದ.  ಇವರ ಮಾತು ಕೇಳಿಸಿಕೊಂಡ ಬೇರೆ ಊರ ಜನ ಮಾತು ಆರಂಭಿಸಿ   ನಮ್ಮ ಊರಾಗ  ಈ ಕೊರೊನಾದ ಆರ್ಭಟ ಹೇಳತೀರದು  ಮೂರ್ನಾಲ್ಕು ಜನ ಸಣ್ಣ ವಯಸ್ಸಿನವರೇ ಜೀವ ಕಳಕೊಂಡರು ಅಂತ ವಾಸ್ತವ ಬಿಚ್ಚಿಟ್ಟರು. ಅವರ ಮಾತು ಎಲ್ಲರಿಗೂ  ಕ್ಛಣ ಕಾಲ  ಗಾಬರಿ ತರಿಸಿತು. 

“ಮಣ್ಣು ಕೊಡಲು ಬಂದವರಿಗೆ ಇವತ್ತು  ನಿಮ್ಮ  ಹೋಟಲಿನ್ಯಾಗೇ  ಚಹಾ, ನಾಷ್ಟಾದ ವ್ಯವಸ್ಥಾ ಆಗಲಿ ಯಾರ ಕಡೆಯಿಂದಲು ರೊಕ್ಕ ತೊಗೋಬ್ಯಾಡ ಆಮ್ಯಾಲ  ಲೆಕ್ಕ ಮಾಡಿ  ಎಲ್ಲಾ ಬಾಕಿ ಚುಕ್ತಾ ಮಾಡ್ತೀವಿ” ಅಂತ  ಕೆಲ  ಪ್ರಮುಖರು ಮುದ್ದಾಮ ಹನುಮವ್ವಳ ಹೋಟಲಿಗೆ ಬಂದು ಹೇಳಿದಾಗ ಇವಳು  ಧೂಸರಾ ಮಾತಾಡದೆ ಆದರಾಯಿತು ಅಂತ  ತಲೆಯಾಡಿಸಿದಳು. ಹನುಮವ್ವಳ ಗಂಡ ಫಕೀರಣ್ಣ  ಅವತ್ತು ಊರ ತುಂಬಾ   ತಿರುಗಾಡಿ  ದಿನದಕ್ಕಿಂತಲೂ ಹೆಚ್ಚಿನ ಹಾಲು ಸಂಗ್ರಹ ಮಾಡಿ  ಸಕ್ಕರೆ, ಚಹಾಪುಡಿ, ಮಂಡಳ್ಳ ಅವಲಕ್ಕಿ, ರವಾ ಏನೇನು ಬೇಕೋ ಎಲ್ಲವೂ ತಂದು ಸಜ್ಜುಗೊಳಿಸಿದ್ದ.  ಮಣ್ಣು ಕೊಡಲು ಬಂದವರಿಗೆ  ಹನುಮವ್ವಳ ಹೋಟಲಿಗೆ ಹೋಗಿ  ನಾಷ್ಟಾ ಚಹಾ ಮಾಡಿ ಬರುವಂತೆ ಅನೇಕರು ದಾರಿ ತೋರಿಸಿದರು.  ಹೊತ್ತು ಏರಿದಂತೆ ಹೋಟಲಿಗೆ ಬರುವವರ ಸಂಖ್ಯೆ  ಜನ ಜಾಸ್ತಿ ಆಯಿತು. ಫಕೀರಣ್ಣ  ಖಾಲಿ  ಕಪ್ಪು,  ಪ್ಲೇಟು ತೆಗೆದು ನೀರಿನ ಬುಟ್ಟಿಗೆ ಹಾಕಿ  ಹೆಗಲ ಮ್ಯಾಲಿನ ಟವೆಲಿನಿಂದ ಕೈ ಒರೆಸಿಕೊಳ್ಳುತ್ತಾ  “ಬಾಳಾಸಾಬ ಬಹಳ ಛೊಲೊ ಮನುಷ್ಯ ಇದ್ದ  ದಿನಾ ಒಂದೆರಡು ಬಾರಿಯಾದರು ನಮ್ಮ ಹೋಟಲಿಗೆ ಬಂದು ಚಹಾ ಕುಡಿದೇ  ಹೋಗುತಿದ್ದ  ಏನಾದರೂ  ರೊಕ್ಕ ರುಪಾಯಿ  ಬೇಕಾದ್ರೆ   ನಾಚಿಕೆ ಪಡದೇ ಕೇಳು   ಅಂತ  ಹೇಳಿ ದೊಡ್ಡತನ ತೋರಿಸುತಿದ್ದ ಇವತ್ತು ಅಂತಹ ಮನುಷ್ಯನ ಕಳಕೊಂಡಂಗಾಯಿತು” ಅಂತ ಎಲ್ಲರ ಮುಂದೆ   ನೋವು ಹೊರ ಹಾಕಿದ.

“ಬಾಳಾಸಾಬನ ಗುಣಾನೇ ಅಂಥಾದು ಆತ ಬಡ ಬಗ್ಗರಿಗೆ ಯಾವಾಗಲೂ ಸಹಾಯ ಮಾಡುವವನು ಅದಕ್ಕೆ ಅವನಿಗೆ  ದೊಡ್ಡ  ಮನುಷ್ಯ ಅನ್ನೋದು.  ಆದರೆ ಅವನಂಗ ಒಬ್ಬ ಮಗಾನೂ ಇಲ್ಲವಲ್ಲ  ಅನ್ನುವ ಬೇಸರ ನನಗೆ” ಅಂತ ಶಿವಮೂರ್ತೆಪ್ಪ ಹೇಳಿದಾಗ, “ ಯಾವ ಮಗಾನೂ ಅವನ ಕಿರುಬೆರಳಿಗೆ ಸಮ ಇಲ್ಲ  ಅಪ್ಪ ಗಳಿಸಿದ ಆಸ್ತಿಗೆ ಆಸೆ ಪಟ್ಟು ನನಗೆ ಹೆಚ್ಚು ನಿನಗೆ ಹೆಚ್ಚು ಅಂತ ಪರಸ್ಪರ ಕಚ್ಚಾಡಿ ಹಾದಿರಂಪ ಬೀದಿರಂಪ ಮಾಡಿದ್ದು ಗೊತ್ತೇ ಇದೆ ಅವರೆಲ್ಲ ತಕರಾರು  ಮಾಡೇ  ಪಾಲು ತೊಗೊಂಡು  ಬ್ಯಾರೇ ಮನೀ ಮಾಡಿದರು. ಆತನಿಗೆ  ಮಾತ್ರ  ಹಳೆ ಮನೆ  ಬಿಟ್ಟರು. ಅವನ  ಊಟ ತಿಂಡಿ ಬಗ್ಗೆ  ಒಂದಿನಾನೂ  ವಿಚಾರಿಸಲಿಲ್ಲ. ನಾವೇ ಆತನ ಸ್ಥಿತಿ ನೋಡಿ  ಆಗಾಗ ಊಟ ತಿಂಡಿ ಕೊಡತೀವಿ”  ಅಂತ ರುದ್ರಣ್ಣ ವಾಸ್ತವ ಹೇಳಿದ. ಮಕ್ಕಳು  ದೊಡ್ಡ  ಮನೆತನದ ಮರ್ಯಾದೆ ಹಾಳುಮಾಡಿಬಿಟ್ಟರು. ಅವನಿಗೆ ವಯಸ್ಸಾಗಿದೆ. ನಮ್ಮ ಪಾಲಿಗೆ  ಇರಲಿ ಅಂತ ಒಬ್ಬರೂ  ಹೇಳಲಿಲ್ಲ. ಇದು ಮಕ್ಕಳು  ಮಾಡಿದ  ದೊಡ್ಡ ಅಪರಾಧ ಅದೇ ಚಿಂತೆ ಬಾಳಾಸಾಬನಿಗೆ ಕೊನೆ ತನಕ ಕಾಡಿತು ಅಂತ ದ್ಯಾವಪ್ಪ ಕೂಡ ದನಿಗೂಡಿಸಿದ.

“ಇಷ್ಟೆಲ್ಲಾ ಆಸ್ತಿ ಪಾಸ್ತಿ ಮಾಡಿ  ತಪ್ಪು ಮಾಡಿದೆ ಅಂತ ಬಾಳಾಸಾಬ ಎಷ್ಟೋ ಸಾರಿ ನನ್ನ ಮುಂದೆ ನೊಂದು ಕಣ್ಣೀರು ಹಾಕಿದ್ದ . ಮಕ್ಕಳು ಚಲೊ ಹುಟ್ಟಬೇಕಾದರು ಪುಣ್ಯ ಮಾಡಿರಬೇಕು ಇಂತಹ ಮಕ್ಕಳು ಹುಟ್ಟಿದರ ಮುಗೀತು ಕೊನೆಯ ಕಾಲದಲ್ಲಿ ಯಾರಿಗೂ ನೆಮ್ಮದಿ ಸಿಗೋದಿಲ್ಲ” ಅಂತ  ಗಳಂಗಪ್ಪ  ಮಾತು ಮುಂದುವರೆಸಿದಾಗ, “ಎಪ್ಪತ್ತು ಎಕರೆ ಹೊಲ ಇದ್ದರೂ ಅವನಿಗೆ ಒಪ್ಪತ್ತಿನ ಕೂಳಿಗೂ ಗತಿಯಿಲ್ಲದಂಗಾಗಿತ್ತು. ಮಕ್ಕಳು ಅವನ ಜೊತೆ ಸರಿಯಾಗಿ ನಡೆದುಕೊಳ್ಳಲಿಲ್ಲ” ಅಂತ ರುದ್ರಣ್ಣ ಹಳಹಳಿಸಿದ. “ಅವರು ಮಕ್ಕಳಲ್ಲ ಮಕ್ಕಳ ರೂಪದಾಗಿನ ಶತ್ರುಗಳು ನಡೀರಿ. ಅವರ  ಮ್ಯಾಲ ಬರೋಸಾ ಮಾಡಿ ಕುಂತರ ಮುಗೀತು ಅವನ  ಹೆಣಾ ಮನ್ಯಾಗೇ ಕೂಡತಾದ. ಇದು ಉರ ಮರ್ಯಾದೆ ಪ್ರಶ್ನೆ, ನಾವೇ ಎಲ್ಲರು ಹೋಗಿ ಮುಂದಿನ ವ್ಯವಸ್ಥಾ ಮಾಡೋಣ. ದೂರದಿಂದ ಜನ ಬಂದಿದ್ದಾರೆ ಅವರು ಮಣ್ಣು ಕೊಟ್ಟು ವಾಪಸ್ ಹೋಗಬೇಕಾದರೆ ತಡ ಆಗ್ತದ”  ಅಂತ ಮಾತಾಡಿಕೊಂಡು ಎಲ್ಲರೂ ಆತನ ಮನೆ ಕಡೆ ಹೆಜ್ಜೆ ಹಾಕಿದರು.

ಆತನ  ಹೆಣಕ್ಕೆ ಮಾಡಬೇಕಾದ ಶೃಂಗಾರ ಮಾಡಿ ಪಡಸಾಲೆಯಲ್ಲಿ ಕೂಡಿಸಿದರು. ಅಂತಿಮ ದರ್ಶನ ಪಡಯಲು  ಬರುವವರ ಸಂಖ್ಯೆಯೂ  ಹೆಚ್ಚಾಯಿತು. ಬೀಗರು, ನೆಂಟರು ತಂದ  ದೊಡ್ಡ ದೊಡ್ಡ ಹೂವಿನ ಹಾರ ಆತನ ಕೊರಳು ಭಾರವಾಗಿಸಿದವು. ಹೂವಿನಲ್ಲೇ ಆತ  ಮುಳುಗಿ ಹೋದ. “ಇವತ್ತು ಬಾಳಾಸಾಬನ ಜಾತ್ರೆ ಇದೆ ಊರಾಗ ಬರೀ  ಕಾರು ಜೀಪು ಸದ್ದು ಮಾಡ್ತಿವೆ  ಇಷ್ಟೊಂದು ವಹಾನ ಬಂದಿದ್ದು ನಾವು  ನೋಡೇ ಇಲ್ಲ” ಅಂತ ಅನೇಕರು  ಆಶ್ಚರ್ಯ ಹೊರ ಹಾಕಿದರು.  ಸಮಯ ಸಾಯಂಕಾಲ ಐದು ಗಂಟೆಯಾಗುತ್ತಲೇ  ಆತನ ಹೆಣವನ್ನು ಮೆರವಣಿಗೆ ಮೂಲಕ  ಊರನ  ಪ್ರಮುಖ ಬೀದಿಯಲ್ಲಿ ಸಾಗಿಸಿ  ಊರ ಸಮೀಪದ  ಹೊಲದಲ್ಲಿ ಅಂತ್ಯ ಕ್ರಿಯೆ ನೆರವೇರಿಸಿ ಹಿಡಿ ಮಣ್ಣು ಹಾಕಿ ಜನ ಭಾರವಾದ ಮನಸ್ಸಿನಿಂದ  ವಾಪಾಸ್ಸಾದರು.

ಮರುದಿನ ನಡು ಊರ ಕಟ್ಟೆಗೆ ಜನ ಸಭೆ ಸೇರಿ ಬಾಳಾಸಾಬನ ಮಣ್ಣು ಖರ್ಚಿನ ಲೆಕ್ಕ ಮಾಡಿದರು. ಬಂದವರಿಗೆಲ್ಲ ಮಾಡಿದ ಚಹಾ ನಾಷ್ಟಾದ ಖರ್ಚು ಆತನ ಮಕ್ಕಳ ಕಡೆಯಿಂದ ವಸೂಲಿ ಮಾಡುವಂತೆ ಹನುಮವ್ವಳಿಗೂ ಸೂಚಿಸಲಾಯಿತು. ಅವಳು ತಲೆಯಾಡಿಸಿ ಸೀದಾ ಮಕ್ಕಳ ಹತ್ತಿರ ಬಂದು “ನಿನ್ನೆ ಮಣ್ಣು ಕೊಡಲು ಬಂದವರಿಗೆ ನಮ್ಮ ಹೋಟಲಿನಲ್ಲೇ ಚಹಾ ನಾಷ್ಟಾದ ವ್ಯವಸ್ಥೆ ಮಾಡಿದ್ದೆ. ಎಲ್ಲ ಲೆಕ್ಕ ಮಗನ ಕಡೆಯಿಂದ  ಬರೆಸಿಟ್ಟಿದ್ದೆ” ಅಂತ ಕಾಗದ ಕೊಡಲು ಮುಂದಾದಳು. ಬಾಳಾಸಾಬನ ಮಗ ಆ  ಕಾಗದ ನೋಡದೇ ಮುಖ ಕೆಂಪು ಮಾಡಿಕೊಂಡು “ನಾನ್ಯಾಕೆ ಕೊಡಲಿ? ಯಾರು ಹೇಳಿದ್ದಾರೋ ಅವರ ಹತ್ತಿರ ಹೋಗಿ ವಸೂಲಿ ಮಾಡು” ಅಂತ ಗದರಿಸಿದ. ಇನ್ನೊಬ್ಬ ಮಗನ ಹತ್ತಿರ ಹೋಗಿ ಕೇಳಿದಾಗ “ನಾವೇನು ದಾಸೋಹ ನಡೆಸಲು ಹೇಳಿದ್ದೇವಾ?” ಅಂತ ತಕರಾರು ಶುರು ಮಾಡಿದ. ಅವರ ಮಾತು ಕೇಳಿ ಹನುಮವ್ವಳ ತಲೆಯ ಮೇಲೆ ಆಕಾಶವೇ ಬಿದ್ದಂತಾಯಿತು. ಕ್ಛಣ ಕಾಲ ಯೋಚಿಸುತ್ತಾ ನಿಂತಳು. ವಿಷಯ ಜನರಿಗೆ ಗೊತ್ತಾಗುತಿದ್ದಂತೆ ಅವರೆಲ್ಲ  ಜಮಾಯಿಸಿ ಯಾವ ಬಾಕಿ ಉಳಿಸಿಕೊಂಡರೂ ಹೆಣದ ಬಾಕಿ ಉಳಿಸಿಕೊಳ್ಳಬಾರದು ಅಂತ ತಿಳುವಳಿಕೆ ಹೇಳಲು ಮುಂದಾದರು. ಆದರೂ ಅವರು ಯಾರ ಮಾತಿಗೂ ಬೆಲೆ ಕೊಡದೇ ತಮ್ಮ  ಮೊಂಡುತನ ಮುಂದುವರೆಸಿದಾಗ, “ಸಂಬಂಧ ಗೊತ್ತಿಲ್ಲದ ಇಂತಹ ಮಕ್ಕಳಿಗೆ  ಬುದ್ಧಿ ಹೇಳುವದರಲ್ಲಿ ಯಾವ ಪ್ರಯೋಜನವೂ ಇಲ್ಲ, ಧನ ಪಿಶಾಚಿಗಳು, ಇವರ ಕಡೆಯಿಂದ ಹಣ ಪಡೆದರೆ  ದೊಡ್ಡ ಹೆಣಕ್ಕೆ ಅವಮಾನ ಮಾಡಿದಂತೆ. ಬಾಳಾಸಾಬ ನನಗೂ ತಂದೆ ಸಮಾನ ದುಡಿದು ತಿನ್ನುವವರು ಎಂದೂ ಬಡವರಾಗೋದಿಲ್ಲ” ಅಂತ ಹನುಮವ್ವ ಕಂಠ ಬಿಗಿದುಕೊಂಡು ಹೇಳಿದಳು. ಇವಳ  ಮಾತು ಎಲ್ಲರಿಗೂ ಯೋಚಿಸುವಂತೆ ಮಾಡಿತು.  ಆದರೆ  ದೊಡ್ಡ ಹೆಣದ ಸಣ್ಣ ಮನಸ್ಸಿನ  ಸಂತಾನಗಳಿಗೆ ಅರ್ಥವೇ ಆಗಲಿಲ್ಲ.  ನಾವೂ ಇವರಿಗೆ  ಹೆಣದ ಖರ್ಚು ಕೇಳೋದು ಬೇಡ ನಾವೇ ಎಲ್ಲರು ಚಂದಾ ಪಟ್ಟಿ ಹಾಕಿ ಬಾಳಾಸಾಬನ ಋಣ ತೀರಿಸೋಣ ಅಂತ ಜನ  ಪರಸ್ಪರ ಮಾತಾಡಿಕೊಂಡರು . ಹನುಮವ್ವ  ಭಾರವಾದ ಮನಸ್ಸಿನಿಂದ ಹೋಟೆಲ ಕಡೆ ಹೆಜ್ಜೆ  ಹಾಕಿದಳು. ಎಲ್ಲರೂ ಅವಳ ಕಡೆ  ದೃಷ್ಟಿ ಹಾಯಿಸಿ  ನಿಟ್ಟುಸಿರು ಬಿಟ್ಟರು!!

‍ಲೇಖಕರು Admin

November 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: