ನೆಹರೂ ಅಲ್ಲದಿರುತ್ತಿದ್ದರೆ…!

 

ಆಫ್ ಸ್ಟಂಪಿನಿಂದ ಹೊರ ಹೋಗುತ್ತಿರುವ ಚೆಂಡನ್ನು ಕೆಣಕಲು ಹೋದರೆ ಸ್ಲಿಪ್ಪಿನಲ್ಲಿ ಬಾಯಿ ಕಳೆದು ನಿಂತಿರುವವರ ಗಂಟಲಿಗೆ ತುತ್ತಾಗಬೇಕು ಎಂಬುದು ಕ್ರಿಕೆಟ್ಟಿನಲ್ಲಿ ಬೇಸಿಕ್.

ಪಾರ್ಲಿಮೆಂಟಿನೊಳಗೆ ಟೆಲಿವಿಷನ್ ಕ್ಯಾಮರಾ ಹೊಕ್ಕ ಬಳಿಕ ಕಂಡಕಂಡದ್ದಕ್ಕೆಲ್ಲ ಸಿಕ್ಸರ್ ಹೊಡೆದು ನೋಡುಗರ ಚಪ್ಪಾಳೆ ಗಿಟ್ಟಿಸಿಕೊಳ್ಳುವ ತವಕದಲ್ಲಿರುವ ರಾಜಕಾರಣಿಗಳೆಲ್ಲ ಈ ಬೇಸಿಕ್ಕನ್ನು ಸಕಾಲದಲ್ಲಿ  ಅರ್ಥ ಮಾಡಿಕೊಳ್ಳದಿದ್ದರೆ, ಅವರ ಪೆವಿಲಿಯನ್ ಯಾತ್ರೆ ಸನ್ನಿಹಿತವಾಗಿದೆ ಎಂದೇ ಅರ್ಥ!

ಮೊನ್ನೆ ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಎರಡೂ ಸದನಗಳನ್ನು ಉದ್ದೇಶಿಸಿ ಮಾಡಿದ, ಸರ್ಕಾರದ ಮುಂದಿನ ಸಾಲಿನ ನೀತಿಗಳನ್ನು ಪ್ರಕಟಿಸುವ  ಭಾಷಣದ ಮೇಲೆ ವಂದನಾ ನಿರ್ಣಯಕ್ಕಾಗಿ ನಡೆದ ಚರ್ಚೆಗೆ ಕೊನೆಯಲ್ಲಿ ಉತ್ತರಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಮಾತುಗಳು ಮತ್ತದರ ಗುಣಮಟ್ಟ ಹಲವು ಚರ್ಚೆಗಳನ್ನು ಹುಟ್ಟುಹಾಕಿದೆ.

‘ಪಾರ್ಲಿಮೆಂಟ್ ಇನ್ ಇಂಡಿಯಾ’ ಪುಸ್ತಕದಲ್ಲಿ ಡಬ್ಲೂ.ಎಚ್. ಮೋರಿಸ್ ಜೋನ್ಸ್  “ಸಂಸದೀಯ ಪ್ರಜಾಸತ್ತೆಯೊಂದು ಕೆಲಸ ಮಾಡುವ ವಿಧಾನವು ಎರಡು ರಾಜಕೀಯ ಪಕ್ಷಗಳ ಅಧಿಕಾರದ ಸಂತುಲನದ ಮೇಲೆ ನಾವು ಊಹಿಸಿದ್ದಕ್ಕಿಂತ ಅಥವಾ ಬಯಸಿದ್ದಕ್ಕಿಂತ ಹೆಚ್ಚೇ ಅವಲಂಬಿಸಿರುತ್ತದೆ” ಎನ್ನುತ್ತಾರೆ.

“ನೆಹರೂ ಅವರು ತನ್ನ ಸರಕಾರಕ್ಕೆ ದೊಡ್ಡ ಬಹುಮತ ಇದ್ದರೂ ಪ್ರಾಮಾಣಿಕ ಸಂಸದೀಯ ಪಟುವಿನಂತೆ ವರ್ತಿಸಿ, ಸೂಕ್ಷ್ಮಗಳನ್ನು ಅರಿತು ಕಾರ್ಯ ನಿರ್ವಹಿಸುತ್ತಾರೆ ಮತ್ತು ಪ್ರತಿಪಕ್ಷಗಳ ಜೊತೆ ಚರ್ಚಿಸಿ ನಂಬಿಕೆಯ ವಾತಾವರಣ ಸ್ರಷ್ಟಿಸಿಕೊಳ್ಳುತ್ತಾರೆ. ಅವರಿಗೆ ಸಂಸತ್ತು ಕೇವಲ ನೈತಿಕ ಸಂಸ್ಥೆ ಮಾತ್ರವಾಗಿರಲಿಲ್ಲ, ಬದಲಾಗಿ ಭಾರತದ ಆಧುನಿಕತೆಯ ಲಾಂಛನವೂ ಆಗಿತ್ತು.” ಎಂದು ಮೋರಿಸ್ ಜೋನ್ಸ್ ಗುರುತಿಸುತ್ತಾರೆ.

ನೆಹರೂ ಕಾಲದ ಸಂಸತ್ತಿನ ಹಾಜರಾತಿ, ಚರ್ಚೆಗಳ ಗುಣಮಟ್ಟಇವನ್ನೆಲ್ಲ ಗಮನಲ್ಲಿರಿಸಿಕೊಂಡ ಮೋರಿಸ್ ಜೋನ್ಸ್ ಅವರು ಭಾರತದ ಪಾರ್ಲಿಮೆಂಟ್ ಯಶಸ್ವಿಯಾಗಿ ಕೆಲಸ ನಿರ್ವಹಿಸಲು ಹಾದಿ ತೆರೆದುಕೊಡುವಲ್ಲಿ ನೆಹರೂ ಅವರ ಪಾತ್ರ ದೊಡ್ಡದಿತ್ತು ಎಂದು ವಾದಿಸುತ್ತಾ “ Perhaps India without Nehru’s leadership might not so firmly have acquired this political system, might not have been able so quickly to let it take clear shape” ಎನ್ನುತ್ತಾರೆ.

ಮೊನ್ನೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು “ನೆಹರೂ ದೇಶದ ಪ್ರಥಮ ಪ್ರಧಾನಿ ಆಗಿರದಿರುತ್ತಿದ್ದರೆ…” ಎಂಬ ವಾದವನ್ನು ಮಂಡಿಸಿದಾಗ ಗಾಂಧೀಜಿ, ಆ ಹಂತದಲ್ಲಿ ಎಲ್ಲ ಒತ್ತಡಗಳ ಹೊರತಾಗಿಯೂ ಎಷ್ಟು ಸಮರ್ಪಕವಾದ ನಿರ್ಧಾರ ತೆಗೆದುಕೊಂಡರು ಎಂದು ಅನ್ನಿಸಿತು. ಅದಕ್ಕಾಗಿಯೇ ಅಲ್ಲವೇ ಗಾಂಧಿಯನ್ನು ವಿಷನರಿ ಅನ್ನುವುದು.

ಸಂಸತ್ತಿನಲ್ಲಿ ರಾಷ್ಟ್ರಪತಿಗಳು ಮಂಡಿಸಿದ ಮುಂದಿನ ವರ್ಷದ ನೀತಿ ನಿರ್ಧಾರಗಳ ಬಗ್ಗೆಯಾಗಲೀ, ಪ್ರತಿಪಕ್ಷಗಳು ಎತ್ತಿದ ಆಕ್ಷೇಪಗಳ ಬಗ್ಗೆಯಾಗಲೀ ಮಾತನಾಡದೇ ಪಕ್ಕಾ ಚುನಾವಣಾ ಭಾಷಣ ಮಾಡಿದ ಪ್ರಧಾನ ಮಂತ್ರಿ ಮೋದಿಯವರು ಕಾಂಗ್ರೆಸ್ಸಿನ ಕಪಾಟುಗಳಲ್ಲಿರುವ ಖಾಯಂ ಅಸ್ತಿಪಂಜರಗಳನ್ನು ಮತ್ತೆ ಮತ್ತೆ ಬೊಟ್ಟುಮಾಡಿದರು ಮತ್ತು ಆ ಪ್ರಯತ್ನದಲ್ಲಿ ತನಗೂ ಒಂದಿಷ್ಟು ಘಾಟು ಅಂಟಿಸಿಕೊಂಡರು.

ಮೇಲ್ಮನೆಯಲ್ಲಂತೂ ಸಂಸದೆ ರೇಣುಕಾ ಚೌಧರಿಯವರ ನಗೆ, ಮತ್ತು ಆ ನಗೆಯ ಮೇಲೆ ಸಭಾಧ್ಯಕ್ಷರಾದ ಉಪರಾಷ್ಟ್ರಪತಿಗಳು ಮತ್ತು ಪ್ರಧಾನಮಂತ್ರಿಗಳಿಬ್ಬರೂ ನಡೆಸಿದ ಪೌರುಷದ ದಾಳಿಯ ಘಟನೆ ಸಂಸತ್ತಿನ ಘನತೆಯನ್ನು ಇನ್ನಷ್ಟು ತಗ್ಗಿಸಿತು.

ದುರಂತವೆಂದರೆ, ಸಂಸತ್ತಿನ ಹೊರಗೂ ಇದು ಸಂಸತ್ತಿನ ಗುಣಮಟ್ಟದ ಕುರಿತ ಚರ್ಚೆ ಆಗದೇ, ಶೂರ್ಪನಖಿಯ ಚರ್ಚೆಯಾಗಿ ಉಳಿದದ್ದು. ಹೀಗೆ ಸಾರ್ವಜನಿಕರೂ ಕೂಡ ವಾಸ್ತವಗಳಿಂದ ದೂರ ಉಳಿದು, ತಮ್ಮ ತಮ್ಮ ಅನುಕೂಲಗಳಿಗೆ ತಕ್ಕಂತೆ ಸಂಸತ್ತಿನೊಳಗಿನ ಘಟನೆಯನ್ನು ನೋಡುವುದೇ ಸಂಸದೀಯ ರಾಜಕೀಯ ಕಳಪೆ ಆಗುತ್ತಿರುವುದಕ್ಕೆ ಬಹುಮುಖ್ಯ ಕಾರಣ.

ಸಂಸದೀಯ ಕಲಾಪಗಳು ದಿನ ಕಳೆದಂತೆ ಏಕೆ ಕಳಪೆ ಆಗುತ್ತಿವೆ ಎಂಬುದಕ್ಕೆ ಪ್ರೊ| ಅಫ್ರೋಜ್ ಆಲಂ ಈ ಕೆಳಗಿನ ಕೆಲವು ಪ್ರಮುಖ ಕಾರಣಗಳನ್ನು ಗುರುತಿಸುತ್ತಾರೆ:

೧. ಸಂಸದೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವ ಬದಲು ವೈಯಕ್ತಿಕ ಲಾಭ ಗಳಿಕೆಯತ್ತಲೇ ಸಂಸತ್ ಸದಸ್ಯರ ಗಮನ ಹೊರಳಿರುವುದು.

೨. ಸಂಸತ್ತಿನಲ್ಲಿ ಪ್ರವೇಶಕ್ಕೆ ಹಣ ಮತ್ತು ತೋಳ್ಬಲ ಮುಖ್ಯವಾಗುತ್ತಾ ಬಂದಿದೆ ಮತ್ತು ಸಂಸತ್ತಿನಲ್ಲಿ ಪ್ರವೇಶಿಸಿದ ಬಳಿಕವೂ  ಶಾಸನಗಳನ್ನು/ನೀತಿಗಳನ್ನು ರೂಪಿಸುವಲ್ಲಿ ಸಂಖ್ಯಾಬಲವೇ ಬೇರೆಲ್ಲಕ್ಕಿಂತ ಮುಖ್ಯವಾಗಿ ನಿಂತಿದೆ.

೩. ಡಿಜಿಟಲೈಸೇಷನ್ ಮತ್ತು ಟೆಲಿವಿಷನ್ ಕ್ಯಾಮರಾಗಳ ಪ್ರವೇಶದಿಂದಾಗಿ ಸಂಸತ್ತಿನ ಸದಸ್ಯರಿಗೆ ಕಾಣಿಸಿಕೊಳ್ಳುವುದೇ ಮುಖ್ಯ ಆಗತೊಡಗಿದೆ. ಶಾಸನಾತ್ಮಕ ಚರ್ಚೆಗಳ ಆಳದ ಬಗ್ಗೆ ಅವರಿಗೆ ಆಸಕ್ತಿ ಇಲ್ಲ.

೪. ಬಹುಪಕ್ಷ ವ್ಯವಸ್ಥೆಯಲ್ಲಿ ರಾಷ್ಟ್ರೀಯ ಮತ್ತು ರಾಜಕೀಯ ಆದ್ಯತೆಯ ಚರ್ಚೆಗಳು ಹಿಂದೆ ಸರಿದು, ಕ್ಷುಲ್ಲಕ ಚರ್ಚೆಗಳು ಮುನ್ನೆಲೆಗೆ ಬರತೊಡಗಿವೆ.

೫. ಕೊಯಲಿಷನ್ ರಾಜಕೀಯದ ಕಾರಣದಿಂದಾಗಿ ಸಂಸತ್ತಿನ ಪ್ರಾತಿನಿಧಿಕ-ಚರ್ಚಾಧರಿತ ವ್ಯವಸ್ಥೆಯ ಗುಣ ಹದಗೆಟ್ಟಿದೆ.

೬. ಒಳಮನೆಯ- ವಂಶಪಾರಂಪರ್ಯದ ರಾಜಕಾರಣಗಳು ಮುನ್ನೆಲೆಗೆ ಬಂದು, ಜವಾಬುದಾರಿ, ಡೀಸೆನ್ಸಿ ಮತ್ತು ಡೆಕೋರಂ, ಡಿಬೇಟ್- ಇವೆಲ್ಲ ಹಿನ್ನೆಲೆಗೆ ಸರಿದಿವೆ.

೭. ರಾಜಕಾರಣಿಗಳ ಕಥೆಯೇ ಇಷ್ಟು ಎಂಬ ಸಾರ್ವಜನಿಕ ನಿರಾಸಕ್ತಿಯ ಲಾಭವನ್ನು ರಾಜಕಾರಣಿಗಳು ತಮ್ಮ “ಲಾಭ” ಎಂದು ಪರಿಗಣಿಸಿರುವುದರಿಂದ ಸಂಸತ್ತಿನ ಒಳಗೆ-ಹೊರಗೆ ಅವರ ಅಶಿಸ್ತು ಮತ್ತು ಕಾನೂನು ಮೀರುವ ವರ್ತನೆಗಳು ಹೆಚ್ಚುತ್ತಿವೆ.

ಆದ್ಯತೆ ಬದಲಾಗಲಿ:

ಇಂತಹದೊಂದು ಕೆಡುಕಿನ ಸ್ಥಿತಿ ಬದಲಾಗಬೇಕಿದ್ದರೆ ಆಗಬೇಕಾಗಿರುವ ಮಹತ್ವದ ಬದಲಾವಣೆಗಳನ್ನೂ ಪ್ರೊ| ಆಲಂ ಹೀಗೆ ಪಟ್ಟಿ ಮಾಡುತ್ತಾರೆ:

* ಜನ ಮತ್ತು ಜನಪ್ರತಿನಿಧಿಗಳ ನಡುವೆ ಪಾರದರ್ಶಕತೆ ಹೆಚ್ಚಬೇಕಿದೆ.

* ಸಂಸತ್ತಿನ ನೈತಿಕತೆ, ಹಕ್ಕು ಮತ್ತು ಗುಣಮಟ್ಟಗಳನ್ನು ಗಮನದಲ್ಲಿರಿಸಿಕೊಂಡು ಸಂಸತ್ ಸದಸ್ಯರಿಗೆ ಕಾಲಕಾಲಕ್ಕೆ ಕಡ್ಡಾಯ ತರಬೇತಿ, ಕಾರ್ಯಾಗಾರಗಳು ಗಂಭೀರವಾಗಿ ನಡೆಯಬೇಕು ಮತ್ತು ಅವರ ಕ್ರಿಮಿನಲ್ ದಾಖಲೆಗಳು, ಶೈಕ್ಷಣಿಕ ಅರ್ಹತೆಗಳ ಬಗ್ಗೆ ಹೊಸ ನೋಟ ಅಗತ್ಯವಿದೆ.

* ರಾಜಕೀಯ ಪಕ್ಷಗಳು ಟಿಕೇಟು ಹಂಚುವಾಗ ಎಚ್ಚರ ವಹಿಸಿ, ಜನವಿರೋಧಿಗಳನ್ನು ದೂರ ಇಡಬೇಕು ಮತ್ತು ತಾನು ಸ್ವತಃ ಮಾಹಿತಿ ಹಕ್ಕಿನ ಅಡಿ ಪರಿಗಣಿತವಾಗಿ ಅಕೌಂಟಬಲ್ ಅನ್ನಿಸಿಕೊಳ್ಳಬೇಕು.

* ನಿರೀಕ್ಷೆಯಂತೆ ಕೆಲಸ ಮಾಡದ ಜನಪ್ರತಿನಿಧಿಯನ್ನು ಹಿಂದೆ ಕರೆಸಿಕೊಳ್ಳುವ ಹಕ್ಕು ಪ್ರಜೆಯ ಕೈಯಲ್ಲಿರಬೇಕು. (ನೋಟಾ ಈ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ)

* ರಾಷ್ಟ್ರೀಯ ಮಹತ್ವದ ಸಂಗತಿಗಳು ಕೇವಲ ಸಂಸತ್ತಿಗೆ ಸೀಮಿತವಾಗದೇ ಜನಮತಕ್ಕೂ ಪರಿಗಣಿತವಾಗುವುದು (ರೆಫರೆಂಡಂ) ಕಡ್ಡಾಯ ಆಗಬೇಕು

* ಸಂಸತ್ತಿನ ಕಲಾಪಗಳಲ್ಲಿ ಅಶಿಸ್ತು, ಗೈರುಹಾಜರಿಗಳಿಗೆ ದಂಡನೆ ಇರಬೇಕು ಮತ್ತು ಸಂಸತ್ತಿನ ಹೊರಗೂ ಅವರ ಚಟುವಟಿಕೆಗಳು ನೀತಿ ಸಂಹಿತೆಗಳಿಗೆ ಒಳಪಟ್ಟಿರಬೇಕು. ಸಂಸದರ ವಾರ್ಷಿಕ ರಿಪೋರ್ಟ್ ಕಾರ್ಡ್ ಅವರ ಕ್ಷೇತ್ರದ ಮತದಾರರ ಕೈಗೆ ಸಿಗಬೇಕು.

* ಜನಪ್ರತಿನಿಧಿಗಳ ಆದಾಯ ಮತ್ತು ಸಂಪತ್ತಿನ ಬಗ್ಗೆ ಸಾಂಸ್ಥಿಕವಾದ ನಿಗಾ ಮತ್ತು ಆಡಿಟ್ ಪ್ರತೀ ವರ್ಷ ಶಾಸನಾತ್ಮಕವಾಗಿ ನಡೆಯುವಂತಾಗಬೇಕು.

‍ಲೇಖಕರು Avadhi GK

February 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

  1. Wilfred Dsouza

    ಸಂಸದೀಯ ಪಟುಗಳ ಬದಲಿಗೆ ಬೀದಿ ಭಾಷಣ ವೀರರು ಸಂಸತ್ತಿಗೆ ಪ್ರವೇಶ ಪಡೆಯುತ್ತಿದ್ದಾರೆ. ವಿವೇಚನೆ ಇಲ್ಲದ ಪ್ರಜೆಗಳು ಈ ವಿಪರ್ಯಾಸದ ಹಿಂದಿರುವ ಪ್ರಮುಖ ಕಾರಣಕರ್ತರು. ದುರ್ಬಲ ಪ್ರಜೆ\ಮತದಾರ ಜಾಪ್ರಭುತ್ವದ ದೌರ್ಬಲ್ಯ.

    ಪ್ರತಿಕ್ರಿಯೆ
  2. Kiran

    It is perfectly alright if a ChamPa does a completely political speech in Kannada Sahitya Sammelana, but a political leader shouldn’t talk politics in parliament, is that what the author thinks??
    Anyone with a very basic common sense will know how disastrous was it for a just born India to get Nehru as its first PM and how Gandhi colluded with it sidelining leaders like Patel and Bose

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: