ಹೇಳಿ.. ಬ್ಲೇಡು ಎಸೆದವರು ಯಾರು?

ನಿಖಿಲ್ ಕೋಲ್ಪೆ

ನನ್ನದು ದ.ಕ. ಜಿಲ್ಲೆಯ ಗುಡ್ಡಗಾಡು, ಬಯಲುಗಳ ಬಂಟ್ವಾಳ ತಾಲೂಕು.

ನಾನು ಕೆಲ ಸಮಯದ ಹಿಂದೆ ಒಂದೂವರೆ ಕಿ.ಮೀ. ದೂರದ ಪಂಚಾಯತ್ ಕಡೆಗೆ ಹೋಗುತ್ತಿದ್ದೆ. ಅಲ್ಲಿಗೆ ಹೋಗಲು ಗುಡ್ಡ ಹತ್ತಿಳಿದು ಹೋಗಬೇಕು. ಅಕ್ಕಪಕ್ಕಗಳಲ್ಲಿ ಹೊದೆದಂತಿರುವ ಜಿಗ್ಗುಗಳ ನಡುವೆ ಮರ,ಗಿಡ, ಬಂಡೆಗಳು. ದೂರದಲ್ಲಿ ಚಿಕ್ಕ ಮರವೊಂದರಿಂದ ನೈಟಿಯೊಂದು ಉದ್ದಕ್ಕೆ ನೇತಾಡುತ್ತಿರುವುದನ್ನು ಕಂಡು ಗಾಬರಿಗೊಂಡೆ.

ಆಗ ನನ್ನ ಕಣ್ಣಿನ ಶಸ್ತ್ರಚಿಕಿತ್ಸೆ ಆಗಿರಲಿಲ್ಲವಾದುದರಿಂದ ಸರಿಯಾಗಿ ಕಾಣಿಸುತ್ತಲೂ ಇರಲಿಲ್ಲ! ಯಾರಾದರೂ ನೇಣು ಹಾಕಿಕೊಂಡಿದ್ದಾರೋ ಎಂದು ಅವಸರದಲ್ಲಿ ಹೋಗಿ ನೋಡಿದರೆ ಬರೇ ನೈಟಿ! ಒಳಗೆ ಯಾರೂ ಇರಲಿಲ್ಲ! ಯಾರಪ್ಪ ಇದು ಕಾಡಿನ ನಡುವೆ ನೈಟಿ ಒಣಗಿಸಲು ಹಾಕಿದವರು ಎಂದು ಕೆಲ ದಿನ ಗೊತ್ತಾಗಲಿಲ್ಲ!

ಇದಾದ ಕೆಲದಿನಗಳ ನಂತರ ಇದೇ ದಾರಿಯಲ್ಲಿ ಸ್ವಲ್ಪವೇ ದೂರದಲ್ಲಿ ಪೊದೆಗಳ ನಡುವೆ ಚಿಕ್ಕ ಸಪಾಟು ಜಾಗದಲ್ಲಿ ಒಂದು ಮಾಸಲು ಜರಿಸೀರೆ, ಒಂದು ಕುಪ್ಪಸ ಕಿತ್ತೆಸೆದಂತೆ ಬಿದ್ದಿವೆ! ಸುತ್ತ ಬೇರೇನೂ ಕಾಣುತ್ತಿಲ್ಲ! ಏನಾದರೂ ಅತ್ಯಾಚಾರ….?! ನಮ್ಮೂರಲ್ಲಿ ಅಂತದ್ದು ನನಗೆ ನೆನಪಿರುವ ಕಾಲದಲ್ಲಿ ನಡೆದದ್ದೇ ಇಲ್ಲ. ಒಮ್ಮೆ ಮಾತ್ರ ಗುಸುಗುಸು ಎದ್ದಿತ್ತು. ಅದರೆ ಕಾಡಿನ ನಡುವೆ ಜರಿಸೀರೆ, ಕುಪ್ಪಸ!?

ಕೆಲದಿನಗಳಲ್ಲಿ ವಿಷಯ ಗೊತ್ತಾಯಿತು. ಒಂದು ಕೊರಗ ದಂಪತಿ ಅಲ್ಲಿ ಕಾಡಿನಲ್ಲೇ ತಾತ್ಕಾಲಿಕ ವಾಸವಿದ್ದು ಬುಟ್ಟಿ ಹೆಣೆಯಲು ಬಳ್ಳಿ ಸಂಗ್ರಹಿಸುತ್ತಿತ್ತು. ಅವರಲ್ಲಿ ಮಹಿಳೆ ನನ್ನ ಓರಗೆಯವಳು. ಅವಳ ಕುಟುಂಬ ನಮ್ಮ ಜಮೀನಿನಲ್ಲೇ ವರ್ಷಗಳ ಕಾಲ ತಾತ್ಕಾಲಿಕ ಕೇಲ್ ಅಂದರೆ ಜೋಪಡಿ ಕಟ್ಟಿಕೊಂಡು ವಾಸವಾಗಿತ್ತು ನನ್ನ ಬಾಲ್ಯ ಕಾಲದಲ್ಲಿ.

ಇವೆರಡೂ ಅವಳದ್ದೇ ಕೆಲಸ. ನೈಟಿ ಸರಿ, ಆದರೆ ಸೀರೆ?
ಆಕೆ ಕೆಲವು ಸಲ ಹಳೆ ಸೀರೆ ಕೇಳುತ್ತಾಳೆ. ಯಾರೋ ಮಾಸಿದ ಹಳೆ ಜರಿಸೀರೆ ಕೊಟ್ಟಿದ್ದಾರೆ. ಇವಳು ದಾಕ್ಷಿಣ್ಯಕ್ಕೆ ತೆಗೆದುಕೊಂಡಿದ್ದಾಳೆ. ಅವರಿಗೆ ಇಂತಹ ಜರಿಗಿರಿ ಇಷ್ಟವಿಲ್ಲದ ಕಾರಣ ಕಾಡಿನಲ್ಲಿ ಎಸೆದಿದ್ದಾಳೆ!

ಮುಂದಿನ ನಿಗೂಢತೆ ನೀವೇ ಬಿಡಿಸಬೇಕು! ನಮ್ಮಲ್ಲಿ ಪೇಟೆಗೆ ಹೋಗಲು ಹತ್ತಿರದ ಕಾಲುದಾರಿಯೊಂದಿದೆ. ಒಂದು ತೋಡಿಗೆ ಹಾಕಿರುವ ಕಾಲು ಸೇತುವೆ ದಾಟಿ ಹೋಗಬೇಕು.

ವರ್ಷದ ಬಹುಕಾಲ ಹರಿಯುತ್ತಿದ್ದ ತೋಡು ಈಗ ಮಳೆಗಾಲ ಕಳೆದ ಸ್ವಲ್ಪ ಸಮಯದಲ್ಲೇ ಬತ್ತುತ್ತಿದೆ. ಕೆಲವರು ಸೇತುವೆ ಮೇಲಿಂದ ತ್ಯಾಜ್ಯ ಎಸೆಯಲೂ ಆರಂಭಿಸಿದ್ದಾರೆ. ಮೊನ್ನೆ ನೋಡುತ್ತೇನೆ- ನೂರಾರು ಬ್ಲೇಡುಗಳು ಹರಡಿಬಿದ್ದಿವೆ. ನಮ್ಮಲ್ಲಿ ಅಷ್ಟು ಬ್ಲೇಡು ಇಡುವ ಅಂಗಡಿಯೇ ಇಲ್ಲ. ಎರಡು ಕಿ.ಮೀ. ಸುತ್ತಳತೆಯಲ್ಲಿ ಸೆಲೂನುಗಳೂ ಇಲ್ಲ!

ಈ ಬ್ಲೇಡುಗಳನ್ನು ಎಸೆದವರು ಯಾರು? ಇನ್ನೂ ಹೊಳೆದಿಲ್ಲ! ಚಿತ್ರಗಳನ್ನು ನೋಡಿ, ನಿಮಗೇನಾದರೂ ಹೊಳೆದರೆ ಹೇಳಿ!

‍ಲೇಖಕರು Avadhi GK

February 12, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: