-ಕೇಸರಿ ಹರವೂ
ಇಂದು ಬೆಳಿಗ್ಗೆ ರೈಲಿಳಿದು ಮನೆಗೆ ತಲುಪುತ್ತಿದ್ದಂತೆಯೇ ಪಚ್ಚೆಯ (Prof M D Nanjundaswamy) ಫೋನ್ ಬಂತು. “ನಾನಾ ಪಾಟೇಕರ್ ಇನ್ನಿಲ್ಲ ಎನ್ನುವ ಸುದ್ದಿ ತಿಳೀತಾ?” ಎಂದರು, “ನೀವು ಅವರನ್ನು ಸಂಪರ್ಕಿಸಿದ ವಿಷಯ ಹಂಚಿಕೊಳ್ತೀರಾ?” ಎಂದರು. ಆಗಷ್ಟೇ ಬಂದಿದ್ದ ನಾನು ಸುದ್ದಿ ತಡಕಾಡಿ ಖಾತರಿ ಪಡಿಸಿಕೊಂಡೆ. ಛೇ, ಇಷ್ಟು ಬೇಗ ಅಗಲಿದರಾ? ಎಂದು ಸಂತಾಪವೆನಿಸಿತು. ಹಾಗೆಯೇ ಕೆಲವು ವರ್ಷಗಳ ಹಿಂದೆ ನಾನಾ ಅವರ ಜೊತೆಗಿನ ಫೋನ್ ಸಂಭಾಷಣೆಯ ನೆನಪೂ ಎಳೆಎಳೆಯಾಗಿ ಮರುಕಳಿಸಿತು.
ಎಂಭತ್ತು ಮತ್ತು ತೊಂಭತ್ತರ ದಶಕದಲ್ಲಿ ಕರ್ನಾಟಕದ ರಾಜಕೀಯ ಮತ್ತು ಸಾಮಾಜಿಕ ದಿಕ್ಕನ್ನೇ ಬದಲಿಸಿದ ಹಲವು ಪ್ರಭಾವೀ ಜನಚಳುವಳಿಗಳಲ್ಲಿ ರೈತ ಚಳುವಳಿ ಮತ್ತು ದಲಿತ ಚಳುವಳಿಗಳು ಪ್ರಖರವೆನಿಸಿದವು. 2016 ರಲ್ಲಿ “ರೈತಸಂಘದ ಪುಟ್ಟಣ್ಣಯ್ಯ” ಎನ್ನುವ ಸಾಕ್ಷ್ಯಚಿತ್ರದ ಮೂಲಕ ರೈತಚಳುವಳಿಯನ್ನು ಸ್ಥೂಲವಾಗಿ ದಾಖಲಿಸುವ ಒಂದು ಅವಕಾಶ ನನಗೆ ದೊರೆತಿತ್ತು. ನಂತರ, ಎಂ. ಡಿ. ನಂಜುಂಡಸ್ವಾಮಿಯವರ ಬಯೋಗ್ರಫಿಕಲ್ ಕಥಾಚಿತ್ರ ಒಂದನ್ನು ನಿರ್ಮಿಸಿ, ಆ ಮೂಲಕ ರೈತ ಚಳುವಳಿ ಹಾಗೂ ಅವರ ಮತ್ತು ಹಲವಾರು ರೂವಾರಿಗಳ ವ್ಯಕ್ತಿತ್ವ, ಕಥನಗಳನ್ನು ಹೇಳುವ ಮನಸ್ಸಾಯಿತು.
ದಾಖಲೆಗಳನ್ನು ಕಲೆಹಾಕುವ, ಸಂಶೋಧಿಸುವ ಕೆಲಸಕ್ಕೆ ಶುರು ಹಚ್ಚಿಕೊಂಡೆ. ಮುಜಫರ್ ಅಸ್ಸಾದಿಯವರ ಸಂಶೋಧನಾ ಗ್ರಂಥದ ಜೊತೆಗೆ ಅನೇಕರು ಎಂಡಿಎನ್ ಮತ್ತು ರೈತಸಂಘದ ಬಗ್ಗೆ ಬರೆದ ಹಲವಾರು ಪುಸ್ತಕಗಳು ನೆರವಿಗೆ ಬಂದವು. ಪ್ರೊ. ರವಿವರ್ಮಕುಮಾರ್ ಅವರೊಂದಿಗೆ ನಾಲ್ಕೈದು ದಿನ ಕುಳಿತು ಅವರ ಮತ್ತು ಎಂಡಿಎನ್ ಅವರ ಒಡನಾಟಗಳನ್ನು ಮಾತಾಡಿಸಿ ಧ್ವನಿ ಮುದ್ರಿಸಿಕೊಂಡೆ. ಪ್ರೊ. ಕೆ. ಸಿ. ಬಸವರಾಜು, ಚುಕ್ಕಿ ಮತ್ತು ಪಚ್ಚೆಯೊಂದಿಗೂ ಸುಧೀರ್ಗ ಮಾತು, ಧ್ವನಿಮುದ್ರಣ ಆಯಿತು. ಚಿತ್ರಕತೆಯ ಮೊದಲ ಕರಡು ತಯಾರಾಗುವ ಹೊತ್ತಿಗೆ ಸುಮಾರು ಆರೇಳು ತಿಂಗಳುಗಳೇ ಹಿಡಿದವು.
“ನೀವು ಕೆಲವು ವಿಚಾರಗಳಲ್ಲಿ ಕ್ರಿಟಿಕಲ್ ಆಗಿರುವುದೇನೋ ಸರಿ, ಆದರೆ ಎಂಡಿಎನ್ ಮತ್ತು ರೈತಸಂಘದ ಸಾಧನೆಗಳು ಅದರ ಎದುರು ಮಸುಕಾಗಬಾರದಲ್ಲವೇ?” ಎಂದು ಚುಕ್ಕಿ ಕೇಳಿದರು. “ನಾನು ಅಂದಿನ ಕರ್ನಾಟಕದ ಸಮಷ್ಠಿಯನ್ನು ಮನಸ್ಸಿನಲ್ಲಿ ಇಟ್ಟುಕೊಂಡು ಬರೆಯುತ್ತಿದ್ದೇನೆ. ಆ ಎರಡೂ ಸಮಕಾಲೀನ ಚಳುವಳಿಗಳು ಗ್ರಾಮಮಟ್ಟದಲ್ಲಿ, ಚಿಂತನಶೀಲರ ಬೌದ್ಧಿಕ, ಸಾಂಸ್ಕೃತಿಕ ಮಟ್ಟದಲ್ಲಿ ಒಂದಕ್ಕೊಂದು ತಾಕಲಾಡುತ್ತಲೇ ತಮ್ಮ ನಡುವೆ ಸೈದ್ಧಾಂತಿಕ ವೈರುಧ್ಯವನ್ನೂ, ಜೊತೆಗೆ ಕೊಡುಕೊಳ್ಳುವಿಕೆಯನ್ನು ಬೆಳೆಸಿಕೊಂಡವು. ಒಂದರ ಮೂಲಕ ಮತ್ತೊಂದು ಗಟ್ಟಿತನ ಬೆಳೆಸಿಕೊಂಡವು, ಹಾಗಾಗಿಯೇ, ಅವು ಅಂದಿನ ರಾಜಕೀಯಕ್ಕೆ ದೊಡ್ಡಮಟ್ಟದಲ್ಲಿ ಸೆಡ್ಡು ಹೊಡೆಯಲು ಸಾಧ್ಯವಾಗಿದ್ದು. ಅದು ಚಿತ್ರದಲ್ಲಿ ಬರುವಾಗ ಕೆಲವು ಕಡೆ ಕ್ರಿಟಿಕಲ್ ಎನಿಸಬಹುದು. ಆದರೆ, ಬೇಕೆಂದೇ ಕ್ರಿಟಿಕಲ್ ಆಗಿದೆ ಅನಿಸುತ್ತಾ?” ಎಂದೆ. ಆಕೆ, “ಇಲ್ಲ ಹಾಗನಿಸುತ್ತಿಲ್ಲ, ನನ್ನ ಕಾಳಜಿಯನ್ನು ಹೇಳಿದೆ ಅಷ್ಟೇ” ಎಂದರು. “ಮತ್ತೇಕೆ? ಕ್ರಿಟಿಕಲ್ ಕಣ್ಣು ಇಲ್ಲದಿದ್ದರೆ, ಸಂಘ ಪೂಜೆ, ವ್ಯಕ್ತಿ ಪೂಜೆ ಆಗುವ ಅಪಾಯವಿದೆ. ಸಮಷ್ಠಿದೃಷ್ಠಿಯಿಂದ ಆಬ್ಜೆಕಟಿವ್ ಆಗಿರುವುದು ಒಳ್ಳೆಯದೇ. ಚಿತ್ರದ ಶೆಲ್ಫ್ ಲೈಫ್ ಕೂಡ ಹೆಚ್ಚುತ್ತದೆ” ಎಂದೆ. ಚುಕ್ಕಿಗೂ ಹೌದೆನಿಸಿತು. ಕೊನೆಗೆ ಚುಕ್ಕಿ ಮತ್ತು ಪಚ್ಚೆ ಇಬ್ಬರೂ ನಾನು ಎಂಡಿಎನ್ ಬಗ್ಗೆ ಚಿತ್ರ ಮಾಡಲು ಒಪ್ಪಂದಪತ್ರ ಕೊಟ್ಟರು.
ಆದರೆ ದುಡ್ಡು ಹೂಡುವವರು ಯಾರು ಎಂದು ಯಾರಿಗೂ ಗೊತ್ತಿರಲಿಲ್ಲ. ಪಚ್ಚೆ ದಕ್ಷಿಣ ಭಾರತದ ಒಬ್ಬ ಸೂಪರ್ ಸ್ಟಾರ್ ಹೆಸರನ್ನು ಪ್ರಸ್ತಾಪಿಸಿ, “ಅವರಿಗೆ ನಮ್ಮ ತಂದೆಯವರ ಮೇಲೆ ದೊಡ್ಡ ಗೌರವವಿತ್ತು, ಅವರನ್ನು ಎಂಡಿಎನ್ ಪಾತ್ರಕ್ಕೆ ಕೇಳೋಣ, ಹೂಡಿಕೆಗೆ ಯಾವುದೇ ತೊಂದರೆ ಆಗುವುದಿಲ್ಲ” ಎಂದರು. “ಗೌರವವೇನೋ ಸರಿ, ಅದನ್ನು ನಾನೂ ಗೌರವಿಸುತ್ತೇನೆ, ಆದರೆ ಪ್ರಾಕ್ಟಿಕಲ್ ಆಗಿ ಅದು ಸಾಧ್ಯವೇ? ಯೋಚಿಸಿ” ಎಂದೆ.
“ಆ ಪಾತ್ರವನ್ನು ನಟಿಸಲು ಕೇವಲ ನಟನೆಯಷ್ಟೇ ಅಲ್ಲದೇ, ಇನ್ನಷ್ಟು ಅಂಶಗಳೂ ಇರುವಂತಹ ಒಬ್ಬ ನಟನನ್ನು ನಾವು ಹುಡುಕಬೇಕು” ಎಂದೆ.
ಕೊನೆಗೆ, ಮುಂಬೈನಲ್ಲಿ ಫಿಲ್ಮ್ ಎಡಿಟರ್ ಆಗಿರುವ ನನ್ನೊಬ್ಬ ಗೆಳತಿಯಿಂದ ನಾನಾ ಪಾಟೇಕರ್ ಅವರ ನಂಬರ್ ಪಡೆದು ಅವರನ್ನು ಸಂಪರ್ಕಿಸಿದೆ. ಅಪರಿಚಿತ ನಂಬರ್, ನಾನಾ ಫೋನ್ ತೆಗೆದುಕೊಳ್ಳುತ್ತಾರೋ ಇಲ್ಲವೋ ಎನ್ನುವ ಗುಮಾನಿಯಿತ್ತು. ಆದರೆ, ಅವರು ಫೋನ್ ತೆಗೆದುಕೊಂಡರು. ನನ್ನ ಪರಿಚಯ, ಕರೆಯ ಉದ್ದೇಶ ತಿಳಿಸಿದೆ. ತಾನು ಮಧ್ಯಪ್ರದೇಶದಲ್ಲಿ ಶೂಟ್ ನಲ್ಲಿ ಇರುವುದಾಗಿ, ಸಧ್ಯ ಕಾರಲ್ಲಿ ಪ್ರಯಾಣಿಸುತ್ತಿರುವುದಾಗಿ ತಿಳಿಸಿ, ಯಾವಾಗ ಬೇಕಾದರೂ ನೆಟ್ವರ್ಕ್ ಇಲ್ಲದಾಗಬಹುದು, ಹೇಳೀ ಎಂದರು. ನಮ್ಮಿಬ್ಬರ ನಡುವೆ ಹಿಂದಿ/ಇಂಗ್ಲಿಷ್ ನಲ್ಲಿ ನಡೆದ ಸಂಭಾಷಣೆಯ ಕನ್ನಡದ ಭಾವಾನುವಾದ ಇದು:
ನಾನಾ: ಹಾಂ ಬೋಲಿಯೇ ಸರ್
ನಾನು: ನಮಗೆ ದೇಶದ ರೈತ ಚಳುವಳಿಯ ಒಬ್ಬ ದಿಟ್ಟ ನಾಯಕರಾದ ಪ್ರೊ. ಎಂ. ಡಿ. ನಂಜುಂಡಸ್ವಾಮಿ ಅವರ ಕುರಿತಂತೆ ಒಂದು ಬಯೋಪಿಕ್ ಮಾಡುವ ಉದ್ದೇಶವಿದೆ.
ನಾನಾ: ಪ್ರೊಫೆಸರ್?
ನಾನು: ಪ್ರೊ. ಎಂ. ಡಿ. ನಂಜುಂಡಸ್ವಾಮಿ. ನೀವು ಅವರ ಹೆಸರನ್ನು ಗೂಗಲ್ ಮಾಡಬಹುದು, ಸಾಕಷ್ಟು ಮಾಹಿತಿ ಸಿಗುತ್ತೆ.
ನಾನಾ: ಇಲ್ಲಾ, ನಾನು ನಂಜುಂಡ ಸ್ವಾಮಿ ಅವರ ಹೆಸರನ್ನು ಕೇಳಿದ್ದೇನೆ. ನಮ್ಮಲ್ಲಿ ಶೇತ್ಕರಿ ಸಂಘಟನಾ ಮುಖಂಡ ಶರದ್ ಜೋಶಿ ಇದ್ದ ರೀತಿಯಲ್ಲಿ.
ನಾನು: ಹೌದೌದು. ಆದರೆ, ಅವರಿಬ್ಬರ ವೈಚಾರಿಕತೆಯಲ್ಲಿ ಸಾಕಷ್ಟು ವ್ಯತ್ಯಾಸಗಳಿವೆ.
ನಾನಾ: ವೋ ತೋ ರಹೆಂಗೇ.
ನಾನು: ಎಸ್, ಎಸ್. ನಂಜುಂಡಸ್ವಾಮಿ ಅವರ ಪಾತ್ರಕ್ಕೆ ನೀವು ಹಲವು ರೀತಿಯಲ್ಲಿ ಸೂಕ್ತರಂತೆ ನಮಗನಿಸಿದೆ. ಸುಮ್ಮನೇ ನಿಮ್ಮ ಮತ್ತು ಅವರ ಕೆಲವು ಫೋಟೋಸ್ ಗಮನಿಸಿ.
ನಾನಾ: ಹಹಹ… ಹೌದಾ?
ನಾನು: ಅಷ್ಟೇ ಅಲ್ಲ, ನೀವೂ ಸಹ ಕೆಲವು ಸಾರಿ ರೈತರ ಪರ ದನಿ ಎತ್ತಿದ್ದೀರಿ. ರೈತರ ಸಮಸ್ಯೆಗಳು ನಿಮಗೆ ತಿಳಿದಿವೆ.
ನಾನಾ: ಓಕೆ ಓಕೆ.
ನಾನು: ನಿಮ್ಮ ಅನುಕೂಲ ಸಮಯದಲ್ಲಿ ನಾನು ಮತ್ತು ನಂಜುಂಡಸ್ವಾಮಿ ಅವರ ಮಗ ಬಂದು ಭೇಟಿಯಾಗಿ ಪ್ರಾಜೆಕ್ಟ್ ಬಗ್ಗೆ ಚರ್ಚಿಸಬೇಕೆಂದಿದ್ದೇವೆ. ದಯವಿಟ್ಟು ಒಂದು ಸಮಯ ಕೊಡಿ.
ನಾನಾ: ಯಾವ ಭಾಷೆಯಲ್ಲಿ ಚಿತ್ರ ಮಾಡುತ್ತೀರಿ?
ನಾನು: ಕನ್ನಡ. ಆನಂತರ ಬೇರೇ ಭಾಷೆಗಳಿಗೂ ಡಬ್ ಆಗಬಹುದು.
ನಾನಾ: ನನಗೆ ಕನ್ನಡ ಬರಲ್ಲ. ನಿಮಗೆ ಕಷ್ಟವಲ್ಲವೇ?
ನಾನು: ಆ ಬಗ್ಗೆ ಚಿಂತೆ ಬಿಡಿ. ನಟನಿಗೆ ಭಾಷೆಯೊಂದೇ ಮುಖ ಅಲ್ಲ, ಅಲ್ಲವೇ?
ನಾನಾ: ಠೀಕ್ ಹೈ, ಆದ್ರೆ ಇನ್ನೂ ಹನ್ನೆರಡು ದಿನ ನನಗೆ ಇಲ್ಲಿಯೇ ಶೂಟ್ ಇದೆ. ಆ ನಂತರವೇ ನನಗೆ ಸಮಯ ಸಿಗಲು ಸಾಧ್ಯ.
ನಾನು: ಪರವಾಗಿಲ್ಲ, ನೀವು ಮುಂಬೈಗೆ ಮರಳಿದ ಮೇಲೆಯೇ ಬರುತ್ತೇವೆ. ನಿಮ್ಮ ಈಮೇಲ್ ಅಡ್ರೆಸ್ ಕೊಟ್ರೆ ನಿಮಗೆ ಒಂದು ಸಿನಾಪ್ಸಿಸ್ ಕಳಿಸುತ್ತೇನೆ.
ನಾನಾ: ಠೀಕ್ ಹೈ. (ಎಂದು ಈಮೇಲ್ ಅಡ್ರೆಸ್ ಕೊಟ್ಟರು. viso**at**ar@gmail.com) ನೀವು ಹದಿನೈದು ದಿನ ಬಿಟ್ಟು ಫೋನ್ ಮಾಡ್ತೀರಾ?
ನಾನು: ಖಂಡಿತ. ಥ್ಯಾಂಕ್ ಯೂ.
ನಂತರ ನಾನು ಚಿತ್ರದ ಸಾರಾಂಶವನ್ನು ಅಕ್ಟೋಬರ್ 17, 2019 ರಂದು ಈಮೇಲ್ ಮಾಡಿದೆ. ಅದಕ್ಕೆ ಅವರು ಉತ್ತರಿಸಲಿಲ್ಲ. ಆದರೆ 15 ದಿನ ಕಳೆದು ಫೋನ್ ಮಾಡಿದಾಗ ಅವರು ಮಾತಾಡಿದರು. ಮೊದಲ ಪ್ರಶ್ನೆ ‘ಪ್ರೊಡ್ಯೂಸರ್ ಇದ್ದಾರಾ?”
ನಾನು ಹೇಳಿದೆ: ಒಬ್ಬರನ್ನು ಅಪ್ರೋಚ್ ಆಗಿದ್ದೇವೆ. ನೀವು ಈ ಪಾತ್ರವನ್ನು ಮಾಡುತ್ತೀರಿ ಎಂದಾದರೆ, ಅವರನ್ನು ಒಪ್ಪಿಸುವುದು ಸಲೀಸಾಗುತ್ತೆ.
ನಾನಾ: ಅಚ್ಛಾ…
ನಾನು: ನೀವು ನನ್ನ ಈಮೇಲ್ ನೋಡಲು ಸಮಯವಾಯಿತಾ?
ನಾನಾ: ನೋಡಿದ್ದೇನೆ, ನೋಡಿದ್ದೇನೆ. ಮುಂದಿನ ತಿಂಗಳ ಮೊದಲ ವಾರದಲ್ಲಿ ನೀವು ಬರಲು ಸಾಧ್ಯವಾ?
ನಾನು: ನೀವು ಒಂದು ಡೇಟ್ ಕೊಡಿ, ಖಂಡಿತಾ ಬರುತ್ತೇವೆ.
ನಾನಾ: ಮೊದಲ ವಾರದಲ್ಲಿ ಫೋನ್ ಮಾಡಿ.
ಅ ನಂತರ ಕೊರೋನಾ ಸಂಕಷ್ಟಗಳು, ಲಾಕ್ ಡೌನ್ ಗಳು ಆರಂಭವಾದವು. ಎಲ್ಲವೂ ಸ್ತಬ್ಧವಾದವು. ನಮ್ಮ ಮಾತುಕತೆಗಳೂ…
ಇಂದು ನಾನಾ ಪಾಟೇಕರ್ ಅವರ ನಿಧನ ಅವರು ಎಂಡಿಎನ್ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಾದ ಒಂದು ಸಾಧ್ಯತೆಯನ್ನು ಪೂರ್ತಿಯಾಗಿ ಇಲ್ಲವಾಗಿಸಿಬಿಟ್ಟಿತು.
ಎಲ್ಲಕ್ಕಿಂತ ಹೆಚ್ಚಾಗಿ, ಒಬ್ಬ ವಿಶಿಷ್ಠ ನಟನನ್ನು ಕಳೆದುಕೊಂಡ ದುಃಖವಿದೆ. ತೀವ್ರ ಸಂತಾಪಗಳು.
(ಚಿತ್ರ: ಎಐ ಸೃಜಿತ)






0 Comments